ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು?

Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಇಂದೆದ್ದ ತೆರೆ ನಾಳೆ ಬೀಳುವುದು; ಮರುವಗಲು।
ಮುಂದೆ ತಾನೇಳುವುದು ಬೇರೆ ಗಾತ್ರದಲಿ।।
ಇಂದು ನಾಳೆಗಳನೆಲ್ಲವ ಕೂಡಿ ನೋಡಿದೊಡೆ।
ಮುಂದಹುದು ಬೆರಗೊಂದೆ - ಮಂಕುತಿಮ್ಮ।।

ವಿಶ್ವದೆಲ್ಲೆಡೆ ಇಂದು ಮಹಿಳೆಯರ ಮೇಲಿನ ದೌರ್ಜನ್ಯಗಳು ತಾರಕಕ್ಕೇರಿರುವ ಸಂದರ್ಭದಲ್ಲಿ ನವೆಂಬರ್ 25ರಂದು ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಯ ಅಂತರರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕೆಂದು ವಿಶ್ವಸಂಸ್ಥೆ ಕರೆ ನೀಡಿದೆ. ಇದರ ಬೆನ್ನಲ್ಲೇ ಅನೇಕ ಕಾರ್ಯಕ್ರಮಗಳು, ಚರ್ಚಾಗೋಷ್ಠಿಗಳು, ಬಹಿರಂಗ ಪ್ರತಿಭಟನೆಗಳು, ಸಭೆಗಳು, ಭಾರತವೂ ಸೇರಿದಂತೆ ವಿಶ್ವದಾದ್ಯಂತ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗಮನಿಸುವುದೇ ಆದರೆ, ಈ ಹಿಂದೆಯೂ ವಿಶ್ವಸಂಸ್ಥೆ ಇಂತಹ ಹಲವಾರು ಯೋಜನೆಗಳಿಗೆ ಅನುವು ಮಾಡಿ ಕೊಟ್ಟಿದೆ. 1975ರಲ್ಲಿ ‘ಅಂತರರಾಷ್ಟ್ರೀಯ ಮಹಿಳಾ ವರ್ಷ ’ ಎಂದು, 1979ರಲ್ಲೇ CEDAW (Convention on Elimination of All Forms Discrimination Against Women ) ಎನ್ನುವ ಒಪ್ಪಂದ ಜಾರಿಯಾಗಿದ್ದು, 189ರಾಷ್ಟ್ರಗಳು ಇದಕ್ಕೆ ಸಹಿ ಹಾಕಿದವು, ನಂತರ 1975ರಿಂದ 1985ರವರೆಗೆ ‘ಅಂತರರಾಷ್ಟ್ರೀಯ ಮಹಿಳಾ ದಶಕ’ವೆಂದೂ ಘೋಷಿಸುವುದರ ಮೂಲಕ ಮಹಿಳಾ ಸಮಾನತೆಯ ಕುರಿತು ಚಿಂತನೆಗಳನ್ನು ಬಿಂಬಿಸಿತು. 1985ರಲ್ಲಿ ನಡೆದ ಬೀಜಿಂಗ್ ಸಮ್ಮೇಳನ ‘ಮಹಿಳಾ ಹಕ್ಕುಗಳು ಮಾನವ ಹಕ್ಕುಗಳು’ ಎಂಬ ಘೋಷವಾಕ್ಯವನ್ನು ಪ್ರತಿಪಾದಿಸಿತು. 2016ರ ಮಹಿಳಾ ದಿನದ ಘೋಷಣೆಯು ಸ್ತ್ರೀಸಮಾನತೆಯ ವಿಷಯವನ್ನಾಧರಿಸಿತು. ವಿಶ್ವಸಂಸ್ಥೆಯ ಈ ನಿರ್ಧಾರವು ಮೆಚ್ಚತ್ತಕ್ಕದ್ದೇ; ಆದರೂ ದಶಕಗಳಿಂದ ಮಹಿಳಾಪರ ಘೋಷವಾಕ್ಯಗಳು ಕೇಳಿ ಬರುತ್ತಿದ್ದರೂ ಶೋಷಣೆಯ ಕರಾಳ ಮುಖವನ್ನು ಇಂದೂ ಎಲ್ಲೆಡೆ ನೋಡಿತ್ತಿದ್ದೇವೆ.

ಇಂದು ವಿಶ್ವದಾದ್ಯಂತ ಶ್ರೀಮಂತ, ಬಡ, ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳೆನ್ನದೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹಿಂದಿಗಿಂತಲೂ ಹೆಚ್ಚಾಗಿವೆ. ಅಮೆರಿಕ, ಲ್ಯಾಟಿನ್ ಅಮೆರಿಕ, ಆಸ್ಟ್ರೇಲಿಯಾ, ಬ್ರೆಜಿಲ್, ಅರ್ಜೆಂಟೀನಾ ಮೊದಲಾದ ರಾಷ್ಟ್ರಗಳಲ್ಲಿ ಸ್ತ್ರೀಶೋಷಣೆ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ವರದಿ ಮಾಡುತ್ತದೆ. ಪೆರುವಿನಲ್ಲಿ ಮಹಿಳೆಯರು, ‘ನಾವು ನಮ್ಮನ್ನಾಗಿ ಬಾಳಲು ಬಿಡಿ’ ಎಂದು ಹೋರಾವನ್ನು ಆರಂಭಿಸಿದ್ದಾರೆ.

ಭಾರತದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಡಿಸೆಂಬರ್ 16ರ ಕರಾಳ ರಾತ್ರಿಯ ನಿರ್ಭಯಾ ಪ್ರಕರಣ ನಡೆದು ನಾಲ್ಕು ವರ್ಷಗಳೇ ಕಳೆಯುತ್ತಿವೆ. ದೇಶಾದ್ಯಂತ ಹೋರಾಟದ ಬಾಗಿಲುಗಳನ್ನು ತೆರೆಸಿತು ಈ ಪ್ರಕರಣ. ಅಪರಾಧಿಗಳಿಗೆ ಗಲ್ಲುಶಿಕ್ಷೆಯ ಪ್ರಕಟಣೆಯಾದರೂ ಇನ್ನೂ ಶಿಕ್ಷೆ ಜಾರಿಯಾಗಿಲ್ಲ. ಜೊತೆಗೆ ಬಾಲಪರಾಧಿ ಎಂದು ಒಬ್ಬನನ್ನು ಬಿಡುಗಡೆಯೂ ಮಾಡಲಾಗಿದೆ. ಜಾಗತೀಕರಣದ ಅಬ್ಬರದಲ್ಲಿ ಯುವಕರು ಸಾಮಾಜಿಕ ಜವಾಬ್ದಾರಿಯನ್ನು ಹೊರಲು ಸಿದ್ಧರಿಲ್ಲ ಎನ್ನುವ ಆರೋಪ ಕೇಳಿಬರುತ್ತಿದ್ದ ಕಾಲಘಟ್ಟದಲ್ಲಿ ದೇಶಾದ್ಯಂತ ಯುವಕರು, ವಿದ್ಯಾರ್ಥಿಗಳು ಬೀದಿಗಿಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಷ್ಟೇ ಅಲ್ಲದೇ, ಹೊಸ ಕಾನೂನಿಗೂ ಈ ಹೋರಾಟ ನಾಂದಿ ಹಾಡಿತು.

ಈ ಸಂಬಂಧ ರಚನೆಯಾದ ಜಸ್ಟೀಸ್ ವರ್ಮಾ ಸಮಿತಿಯು ಅನೇಕ ಶಿಫಾರಸ್ಸುಗಳನ್ನು ನೀಡಿತು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯ ಜೊತೆಗೆ ಪ್ರಕರಣಗಳ ಶೀಘ್ರ ಇತ್ಯರ್ಥವಾಗಬೇಕೆಂದು ಅದು ತಿಳಿಸಿತು. ಆದರೆ ಆದದ್ದೇನು? ದೌರ್ಜನ್ಯಗಳು ನಿಲ್ಲಲಿಲ್ಲ. ಅಂಥದ್ದೇ ಮತ್ತೊಂದು ಪ್ರಕರಣ ಜಿಶಾ ಎಂಬ ಹೆಣ್ಣು ಮಗಳನ್ನು ಬಲಿ ತೆಗೆದುಕೊಂಡಿತು. ಇದು ಅಲ್ಲಿಗೆ ನಿಂತಿಲ್ಲ. ಪ್ರತಿನಿತ್ಯ ದೇಶಾದ್ಯಂತ ಇಂತಹ ಅನೇಕ ಘಟನೆಗಳು ನಡೆಯುತ್ತಲೇ ಇವೆ. ಮುಗ್ಧ ಕಂದಮ್ಮಗಳು ಬಲಿಪಶುಗಳಾಗುತ್ತಿದ್ದಾರೆಂದು ಪತ್ರಿಕೆಗಳಲ್ಲಿ ವರದಿಗಳು ಪ್ರಕಟಣೆಯಾಗುತ್ತಲೇ ಇವೆ.

ರಾಷ್ಟ್ರೀಯ ಅಪರಾಧ ದಳದ ದಾಖಲೆಗಳ ಪ್ರಕಾರವೇ 2012ರಿಂದೀಚೆಗೆ ದೌರ್ಜನ್ಯ ಪ್ರಕರಣಗಳು ಶೇ.6ಕ್ಕೆ ಏರಿಕೆಯಾಗಿವೆ. ಹಾಗೆಯೇ ಇದೇ ವರದಿಯ ಪ್ರಕಾರ ದೇಶದಲ್ಲಿ ಪ್ರತಿ ಮೂರು ನಿಮಿಷಕ್ಕೊಮ್ಮೆ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರತಿ ಇಪ್ಪತ್ತು ನಿಮಿಷಗಳಿಗೊಮ್ಮೆ ವರದಕ್ಷಿಣೆ ಸಾವಿಗೆ ಒಬ್ಬ ಹೆಣ್ಣುಮಗಳು ಬಲಿಯಾಗುತ್ತಿದ್ದಾಳೆ. ಆದರೆ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಮಾಣ ಮಾತ್ರ ಶೇ. 2ರಷ್ಟೂ ದಾಟಿಲ್ಲ. ಹೆಣ್ಣುಮಕ್ಕಳು ವಾಸಿಸಲು ಭಾರತ ಸುರಕ್ಷಿತವಾದ ಸ್ಥಳವಲ್ಲ ಎನ್ನುವ ಆರೋಪವೂ ಕೇಳಿಬರುತ್ತಿವೆ. ಇದು ನಮ್ಮ ಸಮಾಜದ  ವಸ್ತುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ವಿಶ್ವಸಂಸ್ಥೆಯೇ ಹೇಳಿರುವಂತೆ ವಿಶ್ವದಾದ್ಯಂತ ಮಹಿಳೆಯರ ಮೇಲಾಗುವ ದೌರ್ಜನ್ಯ ಪ್ರಕರಣಗಳಲ್ಲಿ ಶೇ. 98ರಷ್ಟು ಪ್ರಕರಣಗಳಲ್ಲಿ ಯಾವುದೇ ಶಿಕ್ಷೆಯಾಗುವುದಿಲ್ಲ.

ಮಗು ಬೇಡವೆಂದು ತ್ಯಜಿಸುವ, ಹತ್ಯೆಗೈಯುವ ಪ್ರಕರಣಗಳು ಜೀವಂತವಾಗಿರುವುದರಿಂದಲೇ ಗಂಡು-ಹೆಣ್ಣಿನ ನಡುವಿನ ಅನುಪಾತವೂ ಗಣನೀಯವಾಗಿ ಕಡಿಮೆಯಾಗುತ್ತಿದೆ. 0–6 ವರ್ಷಗಳ ಮಕ್ಕಳಲ್ಲಿ ಈ ಅನುಪಾತವು 914ಕ್ಕೆ ಇಳಿದಿದೆ; 6–14 ವರ್ಷದವರೆಗಿನ ಅನುಪಾತವು 947ಕ್ಕೆ ಇಳಿದಿದೆ. ಇದು ನಗರ–ಗ್ರಾಮಾಂತರ ಪ್ರದೇಶ ಎನ್ನುವ ಭೇದವಿಲ್ಲದೇ ಎಲ್ಲೆಡೆಯೂ ಅವ್ಯಾಹತವಾಗಿ ನಡೆಯುತ್ತಿದೆ. ದೆಹಲಿ, ಹರಿಯಾಣ, ಪಂಜಾಬ್, ಚಂದೀಗಢಗಳಲ್ಲಿ ಇದರ ತೀವ್ರತೆಯ ಪರಿಣಾಮದಿಂದಾಗಿ ಹೆಣ್ಣುಮಕ್ಕಳೇ ಮದುವೆಗೆ ಸಿಗದಂತಾಗಿದೆ. ಇನ್ನು ಕರ್ನಾಟಕದಲ್ಲಿಯೂ ಇಂಥದೇ ಸ್ಥಿತಿಯಿದ್ದು,  2011ರ ಜನಗಣತಿಯ ಪ್ರಕಾರ ಅನುಪಾತವು  968 ಇದೆ; ಅತಿ ಕಡಿಮೆ ಅನುಪಾತವು ಬೆಂಗಳೂರಿನಲ್ಲಿ (908) ಕಂಡು ಬಂದಿದೆ.

ಹಾಗೆಯೇ ಆಶ್ಚರ್ಯವೆಂದರೆ, ಉಡುಪಿ (1092), ಕೊಡಗು (1019), ದಕ್ಷಿಣ ಕನ್ನಡ (1018), ಹಾಗೂ ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ (1005) ಕಂಡು ಬಂದಿದೆ. ಹಾಗೆಂದ ಮಾತ್ರಕ್ಕೆ ಅಲ್ಲಿ ಹೆಣ್ಣುಮಕ್ಕಳು ಸುರಕ್ಷಿತರೆಂದು ಭಾವಿಸಬೇಕಿಲ್ಲ.

ಇನ್ನೊಂದು ಆಘಾತಕಾರಿ ಬೆಳವಣಿಗೆ ಎಂದರೆ 2015ರಲ್ಲಿ ಸುಮಾರು 36,651 ಅತ್ಯಾಚಾರದ ಪ್ರಕರಣಗಳು ವರದಿಯಾಗಿವೆ. ಹಸುಳೆಯಿಂದ ಹಿಡಿದು 60 ವರ್ಷದ ವೃದ್ಧರ ಮೇಲೂ ಇದು ನಡೆದಿದ್ದು ವರದಿಯಾಗಿದೆ. ಇವು ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣಗಳಾದರೆ, ವರದಿಯಾಗದೇ ಉಳಿದವೆಷ್ಟೋ!  ಹೆಣ್ಣು ಹೆತ್ತವರು ಮತ್ತು ಸ್ವತಃ ಸಂತ್ರಸ್ಥರು ಎಷ್ಟೋ ವೇಳೆ ಸಮಾಜದ ಕಟ್ಟುಪಾಡಿಗೆ ಹೆದರಿ ಪೊಲೀಸ್ ಠಾಣೆಯ ಮೆಟ್ಟಿಲ್ಲನ್ನೇ ಏರುವುದಿಲ್ಲ ಎಂದು ಖ್ಯಾತ ಲೇಖಕಿ, ಬರಹಗಾರ್ತಿ, ಹೋರಾಟಗಾರ್ತಿಯೂ ಆಗಿರುವ ಅನಿತಾ ನಾಯರ್ ಹೇಳುತ್ತಾರೆ.

ಹೀಗಾದಾಗ ಮೃಗೀಯ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ. ಪಿತೃಪ್ರಧಾನ ಮೌಲ್ಯಗಳು, ಎಷ್ಟು ಆಳಾವಾಗಿ ಬೇರೂರಿವೆ ಎಂದರೆ ಸಮಾಜ ಯಾವತ್ತೂ ಹೆಣ್ಣನ್ನು ತನ್ನ ಅಧೀನದಲ್ಲೇ ಇರುವಂತೆ ಬಯಸುತ್ತದೆ. ಅದಕ್ಕೆ ಪುಷ್ಟಿ ನೀಡುವಂತೆ ದಕ್ಷಿಣ ಆಫ್ರಿಕಾದ ರಾಷ್ಟ್ರವೊಂದು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅತ್ಯಾಚಾರವನ್ನು ಕಾನೂನುಬದ್ಧಗೊಳಿಸಲು ಹೊರಟಿದೆ. ಅಲ್ಲಿಯ ಸಂಸತ್ತಿನಲ್ಲಿ ಇದೇ ತಿಂಗಳು ಮಸೂದೆ ಮಂಡನೆಯಾಗಲಿದ್ದು ಅದನ್ನು ಬಹುತೇಕ ಒಪ್ಪಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಈ ಕಾನೂನಿನ ಪ್ರಕಾರ ಅತ್ಯಾಚಾರವೆಸಗಿದವನೊಂದಿಗೆ ಅಧಿಕೃತವಾಗಿ ವಿವಾಹವನ್ನು ಮಾಡಿಕೊಳ್ಳಬಹುದು. ರಕ್ಷಣೆ ಮಾಡಬೇಕಾದ ಕಾನೂನೇ ಭಕ್ಷಕನಂತಾಗಿರುವುದು ದುರದೃಷ್ಟಕರ. ಇಂಥ ವರದಿಗಳ ನಡುವೆಯೇ, ಬಾಂಗ್ಲಾದೇಶದಲ್ಲಿ ಪುರುಷರು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ಹಾಗೂ ಪಿತೃಪ್ರಧಾನ ಸಂಸ್ಕೃತಿಯನ್ನು ವಿರೋಧಿಸಲು ಮುಂದಾಗಿದ್ದಾರೆ ಎನ್ನುವುದು ಆಶಾದಾಯಕ ವಿಚಾರವಾಗಿದೆ.

ವಾಸ್ತವ ಸ್ಥಿತಿಗತಿ
ಒಂದು ಸ್ವಾಸ್ಥ್ಯಸಮಾಜ ನಿರ್ಮಾಣವಾಗಬೇಕಾದರೆ ಅಲ್ಲಿ ಎಲ್ಲರ ಭಾಗವಹಿಸುವಿಕೆ ಅತ್ಯಂತ ಅವಶ್ಯಕ; ಸ್ತ್ರೀ–ಪುರುಷರಿಬ್ಬರೂ ಸಮನಾಗಿ ಬಾಳುವಂಥ ವಾತಾವರಣ ನಿರ್ಮಾಣವಾಗಬೇಕಿದೆ. ಕಾನೂನು ರಚಿಸುವ ಸಂಸತ್ತು, ಚುನಾಯಿತ ಪ್ರತಿನಿಧಿಗಳು, ಶಿಕ್ಷಕರು, ವಕೀಲರು, ವೈದ್ಯರು ಇಂಥದೊಂದು ಸಮಾಜನಿರ್ಮಾಣ ಕಾರ್ಯದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಕಾನೂನು ರೂಪಿಸುವ ಮಂದಿಯೇ ಭಿನ್ನ ನಿಲುವನ್ನು ತೆಳೆದರೆ ಹೇಗಿದ್ದೀತು? ಸಂಸತ್ತು/ವಿಧಾನಸಭೆಗಳಲ್ಲಿ ಕುಳಿತು ಅಶ್ಲೀಲದೃಶ್ಯಗಳನ್ನು ವೀಕ್ಷಿಸುವ ಮಂದಿಗೇನು ಕಡಿಮೆಯಾಗಿಲ್ಲ. ಪಶ್ಚಿಮ ಬಂಗಾಳದ ಚುನಾಯಿತ ಪ್ರತಿನಿಧಿ ಅನಿಸುರ್ ರೆಹಮಾನ್ (ಸಿ.ಪಿ.ಐ.ಸಿ.ಎಂ.) ‘ಸರ್ಕಾರವು ಅತ್ಯಾಚಾರಕ್ಕೊಳಗಾದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರಧನ ನೀಡುತ್ತದೆಂದು ಕೇಳಿದ್ದೇವೆ. ಅದರಲ್ಲಿ ನಿಮ್ಮ ಫೀ ಎಷ್ಟು? ಒಂದು ವೇಳೆ ನೀವೇನಾದರೂ ಅತ್ಯಾಚಾರಕ್ಕೆ ಒಳಗಾದರೆ ಎಷ್ಟು ಹಣ ಪಡೆಯುವಿರಿ?’ ಎಂದು ಉದ್ದಟತನದಿಂದ ಮಾತನಾಡಿರುವುದನ್ನು ಗಮನಿಸಿದರೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ಬಗ್ಗೆ ಇಂಥವರಿಗಿರುವ ಕಾಳಜಿ ಎಷ್ಟು ಎಂಬುದು ವ್ಯಕ್ತವಾಗುತ್ತದೆ.

ಹಾಗೆಯೇ  ‘ಕೇವಲ 5–6 ಜನರು ಮಾತ್ರ ಅಪರಾಧಿಗಳಾಗಿರವುದಿಲ್ಲ, ಸಂತ್ರಸ್ತೆಯೂ ಅಷ್ಟೇ ಪ್ರಮುಖ ಕಾರಣಳು, ಅವಳೇನಾದರೂ ಅಪರಾಧಿಗಳಲ್ಲಿ ಅಣ್ಣಾ ನನ್ನನ್ನು ಕಾಪಾಡು ಎಂದು ಬೇಡಿಕೊಂಡಿದ್ದರೆ, ಅವರು ಹಾಗೆ ವರ್ತಿಸುತ್ತಿರಲಿಲ್ಲ’ (ಜಸ್ಟೀಸ್ ವರ್ಮಾ ಸಮಿತಿಯಲ್ಲಿ ದಾಖಲಾದ ವಿಷಯ) ಎಂದು ಅತ್ಯಾಚಾರಕ್ಕೊಳಗಾದವಳನ್ನೇ ದೂಷಿಸುವಂಥ ಅಸಾರಾಮ್ ಬಾಪುರವರ ಮಾತುಗಳು ಯಾವ ಮನೋಧರ್ಮದ ಸಂಕೇತವೆಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಹಾಗಾಗಿಯೇ ಇಂತಹ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಯಾವುದೇ ಹೆಣ್ಣು ತನ್ನ ಆತ್ಮಗೌರವಕ್ಕೆ ಧಕ್ಕೆ ಬರುವಂತಹ ಪ್ರಸಂಗ ಬಂದಾಗ ಹಾಗೆ ಸುಮ್ಮನಿರುವಳೇ? ಅತ್ಯಾಚಾರಗಳಲ್ಲದೇ ಆಸಿಡ್ ದಾಳಿಗಳು, ಮರ್ಯಾದೆ ಹತ್ಯೆಗಳು, ವರದಕ್ಷಿಣೆ ಸಾವುಗಳು ನಿರಂತರವಾಗಿ ನಡೆಯುತ್ತಲೇ ಇವೆ.

ಇದು ಒಂದೆಡೆಯಾದರೆ, ಇನ್ನೊಂದೆಡೆ, ಹೆಣ್ಣುಮಕ್ಕಳು ಕಾನೂನನ್ನು ದುರ್ಬಳಕೆ ಮಾಡಿಕೊಂಡು ಪುರುಷರನ್ನು ಶೋಷಿಸುತ್ತಿದ್ದಾರೆಂದು ಪುರುಷ ಸಂಘಟನೆಗಳು ಹುಟ್ಟಿಕೊಂಡಿರುವುದೂ ನಮ್ಮ ಈ ವ್ಯವಸ್ಥೆಯ ಕೈಗನ್ನಡಿಯಾಗಿದೆ. ಇದಕ್ಕಾಗಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಲ್ಲಿರುವ 489 ಎ, ಬಿ, ಸೆಕ್ಷನ್‌ಗಳನ್ನು ಅಮಾನ್ಯಗೊಳಿಸಬೇಕೆಂದು, ಅದಕ್ಕಾಗಿ ತಿದ್ದುಪಡಿಯಾಗಬೇಕೆಂದು ಕೆಲವು ತಿಂಗಳ ಹಿಂದೆಯಷ್ಟೇ ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ. ಒಂದು ವೇಳೆ ಹಾಗೇನಾದರೂ ಆದಲ್ಲಿ ಅದು ಮಹಿಳಾ ಹಕ್ಕುಗಳನ್ನು ಇನ್ನಷ್ಟು ಕಸಿದಂತೆ. ಸಾವಿರ ಸಾವಿರ ಪ್ರಕರಣಗಳಲ್ಲಿ ಎಲ್ಲೋ ಒಂದೆರಡು ಪ್ರಕರಣಗಳಲ್ಲಿ ದುರ್ಬಳಕೆಯಾಗಿದೆ ಎಂದು ಕಂಡು ಬಂದರೂ ಇಡೀ ಕಾನೂನನ್ನೇ ತಿದ್ದುಪಡಿ ಮಾಡಿ ಉಳಿದ  ಶೇ. 95ರಷ್ಟು ಜನರು ಅದರಿಂದ ವಂಚಿತರಾಗುವಂತೆ ಮಾಡುವುದು ಎಷ್ಟು ಸರಿ? ಹಲವಾರು ವರ್ಷಗಳಿಂದ ಮಹಿಳಾ ಹೋರಾಟದ ಫಲವಾಗಿ ಬಂದಂತಹ ಕಾನೂನುಗಳು ನಿಷ್ಪ್ರಯೋಜಕವಾದರೆ ಮಹಿಳಾಪರ ಹೋರಾಟಕ್ಕೆ ಜಯವನ್ನು ಪಡೆದೂ ಪಡೆಯದಂತಾಗುವುದು.

ಮಾಡಬೇಕಿರುವುದೇನು?
ಪರಿಸ್ಥಿತಿ ಹೀಗಿರುವಾಗ, ಮಹಿಳಾ ಹಕ್ಕುಗಳನ್ನು ಸಂರಕ್ಷಿಸುವುದರ ಜೊತೆಗೆ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ, ಸ್ತ್ರೀಸಂವೇದನೆಯ ವಿಷಯಗಳು ಹೆಚ್ಚು ಹೆಚ್ಚು ಚರ್ಚೆಗೆ ಬರಬೇಕು. ಶಾಲಾ-ಕಾಲೇಜುಗಳಿಂದಲೇ ಇದರ ಆರಂಭವಾಗಬೇಕಿದೆ. ನಮ್ಮ ಪಠ್ಯಕ್ರಮದಲ್ಲೂ ಬದಲಾವಣೆ ಅಗತ್ಯ. ಇಂತಹ ಒಂದು ಪ್ರಯತ್ನವನ್ನು ಆಂಧ್ರದ ಒಂದು ಇಂಜಿನಿಯರಿಂಗ್ ಕಾಲೇಜಿನಲ್ಲಿ ತಂದು, ಯಶಸ್ವಿಯೂ ಆಗಿದೆ. ಸ್ತ್ರೀಯರ ವಿಷಯಗಳನ್ನು ಸ್ತ್ರೀಯರು ಮಾತ್ರ ಚರ್ಚಿಸಬೇಕೆನ್ನುವ ಮನೋಭಾವನೆಯಲ್ಲಿ ಬದಲಾವಣೆ ಬರಬೇಕಿದೆ. ಇದೊಂದು ಸಾಮಾಜಿಕ ಸಮಸ್ಯೆಯಾಗಿರುವುದರಿಂದ ಎಲ್ಲರೂ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಕಾನೂನುಗಳು ಸಮರ್ಪಕವಾಗಿ ಜಾರಿಯಾಗಬೇಕು ಹಾಗೂ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು. ಮಹಿಳಾ ಸಂಘಟನೆಗಳ ದನಿ ಇನ್ನಷ್ಟು ಹೆಚ್ಚಾಗಬೇಕಿದೆ.

ಮಹಿಳೆಯ ಹಕ್ಕು ಪುರುಷ ವಿರೋಧಿಯಲ್ಲ
ಮಹಿಳಾ ಹಕ್ಕುಗಳಿಗಾಗಿ ಹೋರಾಟವೆಂದರೇ ಅದು ಪುರುಷವಿರೋಧಿಯಲ್ಲ, ಬದಲಿಗೆ ಕೇವಲ ಪುರುಷಪ್ರಧಾನ ಧೋರಣೆಗಳ ವಿರುದ್ಧ. ಅದು ಯಾರಲ್ಲೇ ಇರಲಿ, ಅದನ್ನು ವಿರೋಧಿಸಬೇಕಾಗುತ್ತದೆ. ಹಾಗಾಗಿ, ಮಹಿಳಾ ಸಮಸ್ಯೆಗಳು ಅವರಿಂದಲೇ ಬಗೆಹರಿಯಬೇಕಾದರೂ ಅಲ್ಲಿ ಪುರುಷರ ಪಾತ್ರವನ್ನು ಕಡೆಗಣಿಸಲು ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ, ಇಂದು ವಿಶ್ವದಾದ್ಯಂತ ಗಮನಿಸುವುದೇ ಆದರೇ ಇಂದು ಹೆಣ್ಣುಮಕ್ಕಳನ್ನು ಧರ್ಮದ ಹೆಸರಿನಲ್ಲಿ, ಜಾತಿಯ ಆಧಾರದಲ್ಲಿ, ಸಂಪ್ರದಾಯಗಳ ಕಟ್ಟಪಾಡುಗಳ ಹೆಸರಿನಲ್ಲಿ ನಿರಂತರ ನಿಯಂತ್ರಣಗಳನ್ನು ತರುವ ಪ್ರಯತ್ನಗಳು ನಡೆಯುತ್ತಿವೆ. ಆಕೆಯ ಉಡುಗೆ-ತೊಡುಗೆಯ ಮೇಲೆ ನಿಯಂತ್ರಣ ಸಾಧಿಸಬೇಕೆಂಬ ಮನಃಸ್ಥಿತಿ ಹೆಚ್ಚಾಗುತ್ತಿದೆ. ಸದಾಕಾಲವೂ ಆಕೆಯನ್ನು ತಮ್ಮ ಹತೋಟಿಯಲ್ಲಿ ಇಡಬೇಕೆಂಬ ವಾತಾವರಣವೂ ನಿರ್ಮಾಣವಾಗುತ್ತಿದ್ದು, ಇದನ್ನು ಸ್ತ್ರೀಯರೂ ಬೆಂಬಲಿಸುತ್ತಿರುವುದು ದುರದೃಷ್ಟಕರ. ಇಂತಹ ಮನಃಸ್ಥಿತಿಗಳಿಂದ ಹೊರಬರದೇ ಕೇವಲ ಸಾಂಕೇತಿಕವಾಗಿ ಅನುಕಂಪ ಸೂಚಿಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ. ಆದ್ದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಿಲ್ಲಬೇಕೆಂದರೇ ಪುರುಷಪ್ರಧಾನ ಧೋರಣೆಗಳಿಂದ ಮುಕ್ತವಾಗಿರುವ ವಾತಾವರಣ ಸೃಷ್ಟಿಯಾಗಬೇಕಾಗುತ್ತದೆ. ಆಗ ಇಂತಹ ಆಚರಣೆಗಳಿಗೆ ಹೆಚ್ಚು ಮಹತ್ವ ಬರುತ್ತದೆ.

ಆರೆಂಜ್ ಡೇ
ಮಹಿಳೆಯವ ಮೇಲಿನ ದೌರ್ಜನ್ಯಗಳ ವಿರುದ್ಧ ಸಮರ ಸಾರಿರುವ ವಿಶ್ವಸಂಸ್ಥೆಯು ಪ್ರತಿ ತಿಂಗಳ 25ರಂದು ‘ಆರೆಂಜ್ ಡೇ’ ಅನ್ನು ಆಚರಿಸಬೇಕೆಂದು ಕರೆ ನೀಡಿದೆ. ಆರೆಂಜ್, ದೌರ್ಜನ್ಯ ಮುಕ್ತತೆಯನ್ನು ಸೂಚಿಸುತ್ತದೆಯಾದ್ದರಿಂದ ನವೆಂಬರ್ 25ರಿಂದ ಡಿಸೆಂಬರ್ 10ರ ವರೆಗೆ (16 ದಿನಗಳು) ‘ಆರೆಂಜ್ ಡೇ ಸಪ್ತಾಹ’ ಆರಂಭವಾಗಿದ್ದು, ಮುಂದಿನ ಪೀಳಿಗೆಯು ದೌರ್ಜನ್ಯ ಮುಕ್ತವಾಗಿರಬೇಕೆಂದು ಬಯಸುವುದರ ಜೊತೆಗೆ ಸುಸ್ಥಿರ ಅಭಿವೃದ್ಧಿಗೆ ನಾಂದಿಯಾಗಬಹುದೆಂದು  ಬಯಸುತ್ತದೆ. ಹಾಗೆಯೇ ಪ್ರತಿ ತಿಂಗಳು 25ರಂದು ‘ದೌರ್ಜನ್ಯ ವಿರೋಧಿ ದಿನ’ವನ್ನಾಗಿ ಆಚರಿಸಬೇಕೆಂದು ವಿಶ್ವಸಂಸ್ಥೆ ಕರೆ ನೀಡಿದೆ.

ಲಿಂಗತ್ವದ ಶಿಕ್ಷಣವನ್ನು ಕಡ್ಡಾಯಗೊಳಿಸಿದ ಮೊದಲ ರಾಜ್ಯ  ತೆಲಂಗಾಣ
ಪದವಿ ಮಟ್ಟದಲ್ಲಿ ಲಿಂಗತ್ವ ಶಿಕ್ಷಣವನ್ನು ಕಡ್ಡಾಯಗೊಳಿಸಿದ ಪ್ರಥಮ ರಾಜ್ಯ ತೆಲಂಗಾಣ ‘ಸಮಾನತೆಯ ಜಗತ್ತಿನ ಕಡೆಗೆ’ (Towards a world of equals) ಎಂಬ ಪಠ್ಯಪುಸ್ತಕವನ್ನು ಹೊರತಂದಿದ್ದು. ಜವಹರ್‌ಲಾಲ್ ತಾಂತ್ರಿಕ ವಿಶ್ವವಿದ್ಯಾನಿಲಯದ ಎಲ್ಲ ಇಂಜಿಯರಿಂಗ್ ಕಾಲೇಜುಗಳಲ್ಲಿ ಮೊದಲು ಇದನ್ನು ಅಳವಡಿಸಲಾಗಿದೆ.

ಮಹಿಳೆಯರ ಮೇಲಿನ ದೌರ್ಜನ್ಯಗಳಿಗಷ್ಟೇ ಈ ಪಠ್ಯ ಸೀಮಿತವಾಗಿರದೆ, ಅದರಾಚೆಗಿನ ಸೂಕ್ಷ್ಮ ಸಂಬಂಧಗಳ ವಿಚಾರಗಳ ಬಗ್ಗೆ ರಾಜಕೀಯ, ಆರ್ಥಿಕತೆ ಎಲ್ಲವನ್ನು ಚರ್ಚಿಸುತ್ತದೆ. ಜೊತೆಗೆ ಅತಿ ಸೂಕ್ಷ್ಮ ವಿಷಯಗಳಾದ ಸ್ತ್ರೀ ಕೇಂದ್ರೀಕೃತ ಇತಿಹಾಸ ಮತ್ತು ಸ್ತ್ರೀ ಪುರುಷರ ನಡುವಿನ ಸಂಬಂಧಗಳನ್ನು ಚರ್ಚಿಸುತ್ತದೆ.

ಭಾರತದಲ್ಲಿ ದೌರ್ಜನ್ಯಗಳನ್ನು ತಡೆಯಲು ಇರುವ ಕೆಲವು ಕಾನೂನುಗಳು
* ವರದಕ್ಷಿಣೆ ವಿರೋಧಿ ಕಾಯ್ದೆ 1961
* ಸ್ತ್ರೀಭ್ರೂಣಹತ್ಯೆ ವಿರುದ್ಧದ ಕಾನೂನು  1994
* ಅತ್ಯಾಚಾರದ ವಿರುದ್ಧದ ಕಾನೂನು
* ಕೌಟುಂಬಿಕ ಕ್ರೌರ್ಯದ ವಿರುದ್ಧದ ಕಾನೂನು  2005
*l ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ

ತಡೆಗಟ್ಟುವ ಕಾನೂನು  2013
* ಪೋಸ್ಕೊ (POCSO ) ಕಾಯ್ದೆ 2013
( ಲೇಖಕಿ ತುಮಕೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT