ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಬಗೆಹರಿದರೆ ನಿಜಕ್ಕೂ ‘ಸಿರಿ’ಧಾನ್ಯ!

Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಹತ್ತು ವರ್ಷಗಳ ಹಿಂದಿನ ಮಾತಿದು. ಬರೀ ಐಟಿ ಮೇಳ, ಬಿಟಿ ಮೇಳ, ಕೃಷಿ ಮೇಳ ಎಂಬ ಪದಗಳನ್ನು ಕೇಳಿದವರಿಗೆ ‘ಸಿರಿಧಾನ್ಯ ಮೇಳ’ ಪರಿಕಲ್ಪನೆಯೇ ಸೋಜಿಗ ಮೂಡಿಸಿತ್ತು. ಆಧುನಿಕ ಕೃಷಿ ವಿಜ್ಞಾನದಿಂದ ತೃಣಧಾನ್ಯ, ಕಿರುಧಾನ್ಯ (ಇಂಗ್ಲಿಷಿನಲ್ಲಿ Coarse grain) ಎಂದೆಲ್ಲ ಮೂದಲಿಸಿಕೊಂಡಿದ್ದ ಸಣ್ಣಕಾಳುಗಳಿಗೆ ಮೇಳದಲ್ಲಿ ಕಾಣಿಸಿಕೊಳ್ಳುವ ಅದೃಷ್ಟವೇ ಎಂದು ನಕ್ಕವರೂ ಇದ್ದರು.

ಕೃಷಿಕರ ಸಂಘಟನೆಗಳು, ಕೃಷಿ ಕಾರ್ಯಕರ್ತರ ಸತತ ಶ್ರಮದಿಂದ ಸಿರಿಧಾನ್ಯಗಳು ಅಂತೂ ಇಂತೂ ‘ಜನಪ್ರಿಯ ಆಹಾರಧಾನ್ಯ’ ಎಂಬ ಹಣೆಪಟ್ಟಿ ಕಟ್ಟಿಕೊಂಡವು. ಜೋಳ ಹಾಗೂ ರಾಗಿಯಷ್ಟೆ ಸಿರಿಧಾನ್ಯ ಎಂದು ಭಾವಿಸಿದ್ದ ಸರ್ಕಾರಗಳೂ ತಮ್ಮ ಮನೋಭಾವ ಬದಲಾಯಿಸಿಕೊಂಡವು. ‘ಸಿರಿಧಾನ್ಯಗಳು 21ನೇ ಶತಮಾನದ ಸ್ಮಾರ್ಟ್ ಫುಡ್’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಮೊನ್ನೆಯಷ್ಟೇ ಸಿರಿಧಾನ್ಯ ಮೇಳದಲ್ಲಿ ಹೊಗಳಿದ್ದಾರೆ.

ಸಚಿವರ ಮಾತಿನಲ್ಲಿ ಖಂಡಿತ ಉತ್ಪ್ರೇಕ್ಷೆ ಇಲ್ಲ. ಸಮತೋಲಿತ ಪೋಷಕಾಂಶಗಳು ಹಾಗೂ ಹವಾಮಾನ ವೈಪರೀತ್ಯದಲ್ಲೂ ತಕ್ಕಮಟ್ಟಿಗೆ ಇಳುವರಿ ಕೊಡುವ ಸಿರಿಧಾನ್ಯಗಳು ಭವಿಷ್ಯದ ಆಹಾರ ಬೆಳೆ ಎಂಬ ಮಾತಿಗೆ ಈಗ ಮೂರು ದಶಕಗಳೇ ತುಂಬಿವೆ. ಕನ್ನಡದವರೇ ಆದ ಪಿ.ವಿ.ಸತೀಶ್ ಅವರು ತೆಲಂಗಾಣದ ಜಹೀರಾಬಾದ್ ಬಳಿ ‘ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿ’ (ಡಿಡಿಎಸ್) ಮೂಲಕ ಸಿರಿಧಾನ್ಯ ಪ್ರಚಲಿತಕ್ಕೆ ತರಲು ಶ್ರಮಿಸಿದ್ದರು. ಡಿಡಿಎಸ್ ಸಹಯೋಗದೊಂದಿಗೆ ಕರ್ನಾಟಕದಲ್ಲಿ ಸಹಜ ಸಮೃದ್ಧ ಹಾಗೂ ಇತರ ರೈತ ಬಳಗಗಳು ಸೇರಿಕೊಂಡು ಹಲವು ಕಾರ್ಯಕ್ರಮ ರೂಪಿಸಿದವು. ಅವುಗಳ ಪೈಕಿ ‘ಸಿರಿಧಾನ್ಯ ಮೇಳ’ ಹೆಚ್ಚು ಜನಪ್ರಿಯತೆ ಪಡೆಯಿತು. ಮೊದಮೊದಲಿಗೆ ಸರ್ಕಾರ ಅಥವಾ ಸಂಶೋಧನಾ ವ್ಯವಸ್ಥೆ ಈ ಬಗ್ಗೆ ಉಪೇಕ್ಷೆ ಮಾಡಿದ್ದೇ ಹೆಚ್ಚು. ಆದರೀಗ ಖುದ್ದು ಸರ್ಕಾರವೇ ಮೇಳ ಆಯೋಜಿಸುವಂಥ ಸ್ಥಿತಿ ಉಂಟಾಗಿದೆ!

ತಿಂಗಳಿಗೆ ಮೂರ್ನಾಲ್ಕರಂತೆ ಏರ್ಪಡಿಸಲಾಗುತ್ತಿರುವ ಮೇಳಗಳಲ್ಲಿ ಖುದ್ದಾಗಿ ಹಾಜರಿರುವ ಕೃಷಿ ಸಚಿವರು ಪದೇ ಪದೇ ಸಿರಿಧಾನ್ಯಗಳನ್ನು ಕೊಂಡಾಡಿದ್ದಾರೆ; ಅವುಗಳ ಪ್ರಯೋಜನಗಳನ್ನು ಪಟ್ಟಿ ಮಾಡಿದ್ದಾರೆ ಹಾಗೂ ಆರೋಗ್ಯಕ್ಕಾಗಿ ಸಿರಿಧಾನ್ಯ ಬಳಸಿ ಎಂದು ಕರೆ ನೀಡಿದ್ದಾರೆ. ಆದರೆ ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ಮಾರುಕಟ್ಟೆಯತ್ತ ಗಮನ ಹರಿಸದೇ ಹೋದರೆ ಅವರ ಕರೆ, ಸಲಹೆಗಳು ಬರೀ ಸವಕಲು ಮಾತುಗಳಾಗಿ ಉಳಿದುಬಿಡುವ ಸಾಧ್ಯತೆಯಿದೆ.

ಕೆಲವು ಸಾವಯವ ಮಳಿಗೆಗಳಲ್ಲಿ ಸಿರಿಧಾನ್ಯಗಳ ದರ ಕೇಳಿದವರು ಬೆಚ್ಚಿ ಬೀಳುವಂತಾಗಿದೆ. ಜನರಲ್ಲಿ ಹೆಚ್ಚುತ್ತಿರುವ ಆರೋಗ್ಯ ಪ್ರಜ್ಞೆಯನ್ನು ದುರುಪಯೋಗ ಮಾಡಿಕೊಳ್ಳುವ ಅವಕಾಶ ಇದು ಎನ್ನುವವರೂ ಇದ್ದಾರೆ. ಅದರ ಹೊರತಾಗಿ ಇನ್ನೊಂದು ಆಯಾಮವನ್ನು ಗಮನಿಸಬೇಕಿದೆ. ಏಕಬೆಳೆ ವಿಧಾನದಲ್ಲಿ ಹೆಚ್ಚೂಕಡಿಮೆ ಮರೆತೇ ಹೋದ ಸಿರಿಧಾನ್ಯಗಳನ್ನು ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ. ಬೆಳೆದರೆ ಸಂಸ್ಕರಣೆಯೇ ಬಹು ದೊಡ್ಡ ಸವಾಲು. ಹಾಗೂ ಹೀಗೂ ಸಂಸ್ಕರಣೆ ಮಾಡಿದರೆ ಮಾರುಕಟ್ಟೆ ಎಲ್ಲಿದೆ? ಯಾರೋ ಖರೀದಿಸಿ ಇನ್ನಾರಿಗೋ ಮಾರುತ್ತಾರೆ. ಅದು ಎರಡು- ಮೂರು ಪಟ್ಟು ಬೆಲೆಯೊಂದಿಗೆ ಮಳಿಗೆಗಳ ಹೈಟೆಕ್ ಕಪಾಟುಗಳಲ್ಲಿ ಕೂರುತ್ತದೆ. ರೈತನಿಗೆ ಸಿಕ್ಕಿದ್ದೇನು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ಅಷ್ಟಕ್ಕೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಸಿರಿಧಾನ್ಯಗಳ ಜನಪ್ರಿಯತೆಯನ್ನು ಕರ್ನಾಟಕ ಈವರೆಗೆ ಬಳಸಿಕೊಂಡಿದ್ದೇ ಕಡಿಮೆ. ಸರ್ಕಾರದ ಭಾಷೆಯಲ್ಲಿ ಸಿರಿಧಾನ್ಯವೆಂದರೆ ರಾಗಿ ಹಾಗೂ ಜೋಳ. ಹೆಚ್ಚೆಂದರೆ ಸಜ್ಜೆ ಮಾತ್ರ. ಕೊರಲು, ಬರಗು, ನವಣೆ, ಊದಲು, ಹಾರಕ, ಸಾಮೆ ಅದರ ಕಣ್ಣಿಗೆ ಬೀಳುವುದೇ ಇಲ್ಲ. ಇವುಗಳ ಬಿತ್ತನೆಗೆ ಬೀಜಗಳು ಎಲ್ಲಿವೆ ಎಂಬ ಪ್ರಶ್ನೆಗೆ ಕೃಷಿ ಅಧಿಕಾರಿ ಅಥವಾ ಬೀಜ ನಿಗಮದಲ್ಲಿ ಉತ್ತರವೂ ಸಿಕ್ಕುವುದಿಲ್ಲ.

ಕೆಲವು ಕೃಷಿಪರ ಸಂಘಟನೆಗಳ ಮನವೊಲಿಕೆಯಿಂದ ಸಿರಿಧಾನ್ಯ ಬಿತ್ತನೆ ಮಾಡುವವರ ಸಂಖ್ಯೆಯಲ್ಲಿ ಕ್ರಮೇಣ ಹೆಚ್ಚಳವಾಗಿದೆ. ಹಾಗೆಂದು ಅದರಿಂದ ಸಂತಸಪಡುವ ಹಾಗಿಲ್ಲ. ಏಕೆಂದರೆ, ಕೊಯ್ಲಿನ ಬಳಿಕ ಸಿರಿಧಾನ್ಯ ಸಂಸ್ಕರಣೆ ಮತ್ತೊಂದು ಹೊರೆಯಂತಾಗಿ ಪರಿಣಮಿಸುತ್ತಿದೆ. ಲಕ್ಷಾಂತರ ವೆಚ್ಚದ ಯಂತ್ರಗಳಿಗೆ ಸುಲಭವಾಗಿ ಸಬ್ಸಿಡಿ ಕೊಡುವ ಸರ್ಕಾರಗಳು, ಸಿರಿಧಾನ್ಯ ಸಂಸ್ಕರಣೆ ಯಂತ್ರಕ್ಕೆ ಮಾತ್ರ ಉದಾಸೀನ ಮಾಡುತ್ತಿವೆ.

ವೈಯಕ್ತಿಕ ಮಟ್ಟದಲ್ಲಿ ಇಲ್ಲದೇ ಹೋದರೂ, ಆಸಕ್ತ ರೈತ ಗುಂಪುಗಳಿಗೆ ಯಂತ್ರ ನೀಡಿದರೂ ಸಾಕು. ಹಾಗೆಂದು ಲಕ್ಷಗಟ್ಟಲೆ ವೆಚ್ಚದ ಯಂತ್ರಗಳು ಹೆಚ್ಚೆಚ್ಚು ನಿರ್ವಹಣೆಯನ್ನು ಬಯಸುತ್ತವೆ. ಅದರ ಬದಲಿಗೆ ಸರಳ ತಂತ್ರಜ್ಞಾನದ ಯಂತ್ರಗಳ ಖರೀದಿಗೆ ಅವಕಾಶ ಕಲ್ಪಿಸಬೇಕು. ಕೊಯ್ಲೋತ್ತರ ತಂತ್ರಜ್ಞಾನದ ಹೆಸರಿನಲ್ಲಿ ದುಬಾರಿ ಬೆಲೆಯ ಯಂತ್ರಗಳನ್ನು ರೈತರಿಗೆ ಗಂಟು ಹಾಕಿ, ನೆಮ್ಮದಿಯಿಂದ ನಿದ್ರೆ ಮಾಡುತ್ತಿರುವ ಸಂಶೋಧಕರನ್ನು ಸರಳ ಯಂತ್ರ ವಿನ್ಯಾಸ ಮಾಡುವ ಕೆಲಸಕ್ಕೆ ಹಚ್ಚಬೇಕು. ಇಲ್ಲದೇ ಹೋದರೆ, ಟನ್‌ಗಟ್ಟಲೆ ಸಿರಿಧಾನ್ಯಗಳನ್ನು ತಮಿಳುನಾಡು ಅಥವಾ ಆಂಧ್ರಕ್ಕೆ ಕಳಿಸಿ, ಸಂಸ್ಕರಿಸುವುದರಿಂದ ಉತ್ಪನ್ನದ ಬೆಲೆ ಇನ್ನಷ್ಟು ಮತ್ತಷ್ಟು ಹೆಚ್ಚುತ್ತಾ ಹೋಗುತ್ತದೆ (ಸಿರಿಧಾನ್ಯಗಳ ಬೆಲೆ ದುಬಾರಿ ಆಗಲು ಇದೂ ಒಂದು ಮುಖ್ಯ ಕಾರಣ).

ಅದು ಹೇಗೋ ಏನೋ, ನೂರೆಂಟು ಕಾಯಿಲೆಗಳಿಗೆ ಸಿರಿಧಾನ್ಯ ಸೇವನೆಯೇ ರಾಮಬಾಣ ಎಂಬ ಮಾತು ಜನರಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಸಿರಿಧಾನ್ಯ ಸೇವನೆಯಿಂದ ರೋಗ ನಿಯಂತ್ರಣ ಮಾಡಿಕೊಂಡವರು ಸಹ ಇದ್ದಾರೆ. ಆದರೆ ಗಟ್ಟಿಯಾದ ವೈಜ್ಞಾನಿಕ ನೆಲೆಗಟ್ಟು ಇಲ್ಲದೇ ಹೋದರೆ ಅದೊಂದು ಬರೀ ನಂಬಿಕೆಯಾಗಿ ಉಳಿದುಬಿಡುವ ಆಪಾಯವಿದೆ. ಸಿರಿಧಾನ್ಯಗಳು ನಿಜಕ್ಕೂ ಶ್ರೇಷ್ಠ ಆಹಾರ.

ಅವುಗಳಲ್ಲಿನ ಪೋಷಕಾಂಶಗಳನ್ನು ಹೈದರಾಬಾದಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಲೆಕ್ಕಾಚಾರ ಮಾಡಿದೆ. ಆದರೆ ಅದು ಓಬಿರಾಯನ ಕಾಲದ್ದು! ಕನ್ನಡ ನಾಡಿನ ವೈವಿಧ್ಯಮಯ ಸಿರಿಧಾನ್ಯಗಳ (ಅಪಾರ ಸಂಖ್ಯೆಯ ತಳಿಗಳನ್ನೂ ಸೇರಿಸಿ) ಪೋಷಕಾಂಶ ವಿಶ್ಲೇಷಣೆ ಈವರೆಗೆ ಸಮಗ್ರವಾಗಿ ನಡೆದಿಲ್ಲ. ಅದು ಕರಾರುವಾಕ್ಕಾಗಿ ಸಿಕ್ಕರೆ, ಸಿರಿಧಾನ್ಯಕ್ಕೂ ರೋಗ ನಿವಾರಣೆ ವಾದಕ್ಕೂ ಒಂದು ಲೆಕ್ಕ ಸಿಕ್ಕೀತು!

ಆಂಧ್ರಪ್ರದೇಶ ಸರ್ಕಾರ ಸಿರಿಧಾನ್ಯ ಜನಪ್ರಿಯಗೊಳಿಸಲು ನಡೆಸಿರುವ ಪ್ರಯತ್ನ ಗಮನಿಸಿದರೆ ಅಚ್ಚರಿಯಾಗುತ್ತದೆ. ಮೌಲ್ಯವರ್ಧಿತ ಉತ್ಪನ್ನಗಳ ಜತೆಗೆ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೂ ಸಿರಿಧಾನ್ಯ ಬಳಸುವ ಯೋಜನೆ ಅಲ್ಲಿದೆ. ಸಿರಿಧಾನ್ಯ ಬೆಳೆಗಾರರ ಒಕ್ಕೂಟ ಸ್ಥಾಪಿಸಿ, ಮಾರುಕಟ್ಟೆ ಜಾಲ ಹೆಣೆಯಲಾಗಿದೆ. ಸಿರಿಧಾನ್ಯ ಉತ್ಪನ್ನದ ಮಾರಾಟಕ್ಕಾಗಿಯೇ ಒಂದು ಬ್ರ್ಯಾಂಡ್ ಕೂಡ ರೂಪಿಸಲಾಗಿದೆ.

ತಾನು ಮಾತ್ರ ಮಾಡಬಹುದಾದ ಇಂಥ ಹಲವು ಕಾರ್ಯಕ್ರಮಗಳು ಸರ್ಕಾರದ ಎದುರು ಸಾಲುಗಟ್ಟಿ ನಿಂತಿವೆ. ಅಧಿಕ ನೀರು ಹಾಗೂ ಒಳಸುರಿ ಬಯಸುವ ವಾಣಿಜ್ಯ ಬೆಳೆಗಿಂತ ಸಿರಿಧಾನ್ಯಗಳೇ ವಾಸಿ ಎಂದು ರೈತರು ಅವುಗಳತ್ತ ವಾಲುತ್ತಿದ್ದಾರೆ. ಅವರಲ್ಲಿ ಇನ್ನಷ್ಟು ಆತ್ಮವಿಶ್ವಾಸ ತುಂಬಲು ರಾಜ್ಯ ಸರ್ಕಾರ ಮುಂದಾಗಬೇಕು. ಎಲ್ಲಕ್ಕಿಂತ ಮಿಗಿಲಾಗಿ ಕಳೆದ ವರ್ಷ ತಾವೇ ಸ್ವತಃ ಘೋಷಿಸಿದ್ದ ‘ಒಂದು ಎಕರೆ ಸಿರಿಧಾನ್ಯ ಬೆಳೆಯುವವರಿಗೆ 5,000 ರೂಪಾಯಿ ಪ್ರೋತ್ಸಾಹಧನ’ ಯೋಜನೆ ಇನ್ನೂ ಯಾಕೆ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದನ್ನು ಸಚಿವ ಕೃಷ್ಣ ಬೈರೇಗೌಡರು ತಿಳಿದುಕೊಂಡು, ಆ ಮಾತನ್ನು ಉಳಿಸಿಕೊಳ್ಳಬೇಕು.

ಇಲ್ಲದೇ ಹೋದರೆ, ಅವರು ಪದೇ ಪದೇ ಹೇಳುವ ‘ಆರೋಗ್ಯಕ್ಕೆ ಸಿರಿಧಾನ್ಯ ಸೇವಿಸಿ’ ಎಂಬ ಮಾತು ಕೂಡ ಸಿಲ್ಕಿ ಪಾಲಿಶ್ ಅಕ್ಕಿಯಂತೆಯೇ ಸತ್ವ ಕಳೆದುಕೊಂಡು ಬಿಡುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT