ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಯ ನೆಲದ ನೆನಕೆ...

Last Updated 2 ಡಿಸೆಂಬರ್ 2016, 20:10 IST
ಅಕ್ಷರ ಗಾತ್ರ

ಬೆಳಗಾವಿ ಗಡಿ ಭಾಗದಲ್ಲಿ ಗಡಿಯ ಮಹತ್ವ ಹೇಳುವ ಪ್ರಾಸಬದ್ಧ ಮಾತೊಂದು ವೇದಿಕೆಗಳಲ್ಲಿ ಮೇಲಿಂದ ಮೇಲೆ ಕೇಳಿಬರುತ್ತದೆ. ಅದು, ‘ಗಡಿ ಗಟ್ಟಿ ಇದ್ದರ ನಾಡು, ಧಡಿ ಗಟ್ಟಿ ಇದ್ದರ ಸೀರಿ’ ಎಂಬುದು. ‘ಧಡಿ’ ಎಂದರೆ ‘ಅಂಚು’. ಯಾವುದೇ ಒಂದು ವಸ್ತ್ರದ ಅಂಚು, ಅಂಚಿನ ನೇಯ್ಗೆ ಮಜಬೂತಾಗಿರಬೇಕು. ಹಾಗಿದ್ದರೆ ಮಾತ್ರ ಅದು ಹೆಚ್ಚು ತಾಳುತ್ತದೆ, ಬಾಳುತ್ತದೆ. ವಸ್ತ್ರದ ಸೌಂದರ್ಯ ಕೂಡ ಅಂಚಿನ ಕುಸುರಿಗೆಲಸವನ್ನೇ ಅವಲಂಬಿಸಿರುತ್ತದೆ. ಮೇಲಿನ ಮಾತು ಇದನ್ನೇ ರೂಪಕವಾಗಿ ಗಡಿಭಾಗದ ಜನಜೀವನ, ಭಾಷೆ-ಸಂಸ್ಕೃತಿಗೆ ಅನ್ವಯಿಸಿ ಹೇಳುತ್ತದೆ.

ಗಡಿನಾಡು ಎಂಬುದು ಏಕಕಾಲಕ್ಕೆ ತನ್ನ ನಾಡನ್ನು-ನುಡಿಯನ್ನು ಕಾಯುವ, ತನ್ನ ಸಂಸ್ಕೃತಿಯನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರುತ್ತದೆ. ಗಡಿನಾಡು ಭದ್ರವಾಗಿದ್ದರೆ ಮಾತ್ರ ಒಳನಾಡು ನೆಮ್ಮದಿಯಿಂದಿರಲು ಸಾಧ್ಯ. ಅಲ್ಲದೆ ಮತ್ತೊಂದು ಮಹತ್ವದ ಚಟುವಟಿಕೆಯೆಂದರೆ ತನಗೆ ಜೊತೆಯಾಗಿರುವ ಬೇರೆ ಭಾಷೆ, ಜೀವನ ವಿಧಾನದ ಸಹಬಾಳ್ವೆಯಲ್ಲಿ ರೂಪುಗೊಳ್ಳುವ ಕಲೆ, ಜ್ಞಾನ, ಇತರ ಫಲಗಳು ಸಂಸ್ಕೃತಿಗೆ ದೊಡ್ಡ ನಿಧಿಯಾಗಬಲ್ಲವು. ಈ ತರಹದ ಭಾಷಿಕ, ಸಾಂಸ್ಕೃತಿಕ ಸಹಬಾಳ್ವೆಯ ಫಲಗಳನ್ನು ನಾವು ಕರ್ನಾಟಕ- ಮಹಾರಾಷ್ಟ್ರ ಚರಿತ್ರೆಯುದ್ದಕ್ಕೂ ಕಾಣುತ್ತೇವೆ. ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ಮಾತ್ರ ಇವುಗಳ ಸಂಬಂಧ ಕೆಟ್ಟಿತು. ದಾಯಾದಿ ಮತ್ಸರ ಶುರುವಾಯಿತು. ಆಸ್ತಿಗಾಗಿ ಜಗಳ ಜೋರಾಯಿತು. ಅದಕ್ಕೆ ರಾಜಕಾರಣದ ಹಿತಾಸಕ್ತಿ ಬೇರೆ ಕೂಡಿ, ಜಗಳದ ಬೆಂಕಿಗೆ ಇನ್ನಷ್ಟು ಗಾಳಿ ಹಾಕಿತು. 1970, 80ರ ದಶಕದಲ್ಲಿಯ ಜಗಳದ ತೀವ್ರತೆ ಈಗ ಉಳಿದಿಲ್ಲ. ವಸ್ತುಸ್ಥಿತಿಯ ಅರಿವಾಗುತ್ತಿದ್ದಂತೆಯೇ ಪರಿಸ್ಥಿತಿಯಲ್ಲಿ ಸುಧಾರಣೆ ಆಗಿದೆ, ಆಗುತ್ತಿದೆ.

ಒಟ್ಟಾರೆ, ಒಂದು ನಾಡಿನ ಸಮಗ್ರ ಬದುಕಿನ ಹಿನ್ನೆಲೆಯಲ್ಲಿ ಗಡಿನಾಡಿನ ಬದುಕಿಗಿರುವ ವಿಶೇಷ ಮಹತ್ವವನ್ನು ಮರೆಯಲಾಗದು. ಈ ಕಾರಣಕ್ಕಾಗಿಯೇ ನಮ್ಮ ಸರ್ಕಾರ ‘ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ವನ್ನು ಹುಟ್ಟುಹಾಕಿತು. ಗಡಿಪ್ರದೇಶದ ಯೋಗಕ್ಷೇಮ, ಅಭಿವೃದ್ಧಿ ಕುರಿತು ಚಿಂತಿಸಬೇಕಾದ, ಮಾರ್ಗದರ್ಶನ ಮಾಡಬೇಕಾದ ಈ ಸಂಸ್ಥೆಯ ಕಾರ್ಯವೈಖರಿ ಮಾತ್ರ ಆಶ್ಚರ್ಯಉಂಟು ಮಾಡುವಂಥದ್ದು. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಿದೆ. ವಿಧಾನಸಭೆಯಲ್ಲಿ ಶಾಸಕ ಬಾಲಕೃಷ್ಣ ಅವರ ಪ್ರಶ್ನೆಗೆ, ‘ಗಡಿ ಪ್ರದೇಶ ಅಭಿವೃದ್ಧಿಗೆ ನೀಡಿದ್ದ ಹಣದಲ್ಲಿ ₹ 1 ಕೋಟಿ ಲ್ಯಾಪ್ಸ್’ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಉತ್ತರಿಸಿದ್ದಾರೆ.

ಏನಿದರ ಅರ್ಥ? ‘ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ ಮಾಡಬೇಕಾದದ್ದು ಏನೂ ಇಲ್ಲವೆ? ಅಥವಾ ಆ ಭಾಗ ಅಭಿವೃದ್ಧಿಯಾಗಿದೆಯೇ? ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಗಡಿಭಾಗದ ಕನ್ನಡಿಗರ ಬದುಕನ್ನು ಕಣ್ಣಿಟ್ಟು ನೋಡಿದ್ದಾರೆಯೇ? ಅವರ ನೋವಿನ ದನಿಯನ್ನು ಕಿವಿಗೊಟ್ಟು ಕೇಳಿದ್ದಾರೆಯೇ? ಅಥಣಿ, ಚಿಕ್ಕೋಡಿ ಭಾಗದ ಜನರು ಸಾಂಗಲಿ ಮಾರುಕಟ್ಟೆಯನ್ನೇ ಏಕೆ ಅವಲಂಬಿಸಿದ್ದಾರೆ? ಮಿರಜ್‌ನ ಆಸ್ಪತ್ರೆಗಳಿಗೇ ಏಕೆ ಹೋಗುತ್ತಾರೆ? ರೈತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳತ್ತ ಯಾಕೆ ಹೆಜ್ಜೆ ಹಾಕುತ್ತಾರೆ? ಗಡಿ ಈಚೆಯ ಮರಾಠಿ ಭಾಷಿಕರ ಜೊತೆಗೆ ಅಲ್ಲಿಯ ಸರ್ಕಾರ, ಸಮಾಜ ಹೇಗೆ ನಡೆದುಕೊಳ್ಳುತ್ತವೆ? ಗಡಿ ಆಚೆಯ ಕನ್ನಡಿಗರೊಂದಿಗೆ ನಮ್ಮ ಸರ್ಕಾರ ಹೇಗೆ ವರ್ತಿಸುತ್ತದೆ? ಗಡಿಭಾಗದ ಜನರು ಅಲ್ಲಿಯ ಕೃಷಿ, ಸಹಕಾರ ಕ್ಷೇತ್ರ, ಅಭಿವೃದ್ಧಿ ಚಟುವಟಿಕೆಗಳನ್ನು ಯಾಕೆ ಮನದುಂಬಿ ಬಣ್ಣಿಸುತ್ತಾರೆ? ತಮ್ಮ ಪರಿಸ್ಥಿತಿಗಾಗಿ ಇಲ್ಲಿಯ ಆಡಳಿತವನ್ನೇಕೆ ಶಪಿಸುತ್ತಾರೆ? ಇತ್ಯಾದಿ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಾಧಿಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆಯೇ? ಗಡಿಭಾಗದಲ್ಲಿ ಅಭಿವೃದ್ಧಿ ಇಲ್ಲವೆಂದು ಕನ್ನಡಿಗರ ಕೊರಗು ಒಂದೆಡೆಯಾದರೆ, ಪ್ರಾಧಿಕಾರಕ್ಕೆ ಹಂಚಿಕೆಯಾದ ಅನುದಾನದಲ್ಲಿ ಒಂದು ಕೋಟಿ ಲ್ಯಾಪ್ಸ್ ಆಗುತ್ತದೆಂದರೆ ಎಂಥ ವಿಪರ್ಯಾಸ! ಕರ್ನಾಟಕದಲ್ಲಿ ಅಲ್ಪಸಂಖ್ಯಾತರಂತೆ ಬದುಕುತ್ತಿರುವ ನಿದರ್ಶನಗಳು ಅಥಣಿ, ಖಾನಾಪುರ ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿವೆ. ರಸ್ತೆ, ವಿದ್ಯುತ್‌ನಂಥ ಮೂಲ ಸೌಕರ್ಯಗಳಿಗಾಗಿ ತಹಶೀಲ್ದಾರರಲ್ಲಿ ಮನವಿ ಮಾಡಿಕೊಳ್ಳುವುದು ನಿತ್ಯ ನಡೆದೇ ಇದೆ. ಮೂಲ ಸೌಕರ್ಯಗಳಿಲ್ಲವೆಂದೇ ಅಥಣಿ ತಾಲ್ಲೂಕಿನ 30ಕ್ಕೂ ಹೆಚ್ಚು ಹಳ್ಳಿಗಳ ಜನ ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಾಯಿಸಿದ್ದನ್ನು ಮರೆಯುವಂತಿಲ್ಲ.

ಗಡಿಭಾಗದಲ್ಲಿರುವ ಒಂದು ಅನುಕೂಲ ಎಂದರೆ ಪರಸ್ಪರರು ಹೋಲಿಸಿಕೊಂಡು ತಮ್ಮ ಬದುಕಿನ ಮಟ್ಟವನ್ನು   ಅಳೆದುಕೊಳ್ಳುತ್ತಾರೆ. ಉತ್ತಮ ಗುಣಮಟ್ಟದ ಬದುಕಿಗಾಗಿ ಹಂಬಲಿಸುತ್ತಾರೆ. ಈ ದೃಷ್ಟಿಯಿಂದ ಕನ್ನಡಿಗರಿಗೆ ಅಭಿವೃದ್ಧಿಯದ್ದೇ ಧ್ಯಾನ. ಈ ಗಡಿಭಾಗದಲ್ಲಿ ಅಭಿವೃದ್ಧಿಯೇನಾದರೂ ಆಗಿದ್ದರೆ ಅದಕ್ಕೆ ಮಹಾರಾಷ್ಟ್ರ ಗಡಿಯಲ್ಲಿರುವ ಪ್ರಗತಿಪರ ರೈತರು, ಸಹಕಾರಿ ಧುರೀಣರ ಮಾರ್ಗದರ್ಶನ, ಪ್ರೋತ್ಸಾಹವೂ ಒಂದು ಕಾರಣವಾಗಿದೆ. ಕೃಷಿ, ಸಹಕಾರ ಕ್ಷೇತ್ರದಲ್ಲಿ ಮರಾಠಿ ಜನ ಮುಂಚೂಣಿಯಲ್ಲಿದ್ದಾರೆ. ಅವರ ಚಟುವಟಿಕೆಗಳಿಂದ ಪ್ರೇರಣೆ ಪಡೆದು ನಮ್ಮವರೂ ಪ್ರಯತ್ನಶೀಲರಾಗುತ್ತಾರೆಂಬುದು ಸಂತೋಷದ ಸಂಗತಿ. ಇಂಥವರಿಗೆ ನಮ್ಮ ಸರ್ಕಾರದ ನೀತಿ, ಅಧಿಕಾರಿಗಳ ಬೆಂಬಲ ದೊರೆತಲ್ಲಿ ಪ್ರಗತಿ ಸುಲಭ ಸಾಧ್ಯವಾಗುತ್ತದೆ.

ನಮ್ಮ ಗಡಿಭಾಗದ ಜನರು ಮಾರುಕಟ್ಟೆಗಾಗಿ, ಉದ್ದಿಮೆ ನಡೆಸುವುದಕ್ಕಾಗಿ ನೆರೆಯ ಮಹಾರಾಷ್ಟ್ರದ ನೆಲವನ್ನೇ ಏಕೆ ಅರಸುತ್ತಾರೆಂದರೆ, ಅಲ್ಲಿಯ ಅನುಕೂಲಕರ ನೀತಿ ನಿಯಮಗಳಿಂದಾಗಿ, ಸವಲತ್ತುಗಳನ್ನು ಕೊಡುವುದರಿಂದಾಗಿ. ಬಿಗಿ ನಿಲುವುಗಳಿಂದ, ಅಧಿಕಾರಿಗಳ ಸ್ವಾರ್ಥ, ಅಸಹಕಾರದಿಂದ ಬೆಳಗಾವಿಯಲ್ಲಿರುವ ಉದ್ಯಮಬಾಗ ಕರಗಿದೆ. ಪಕ್ಕದ ಸುಳಗಾ ಬೆಳಗುಂದಿ ಪ್ರದೇಶಗಳು ಬೆಳೆಯುತ್ತಿವೆ. ಈ ವೈಪರೀತ್ಯವನ್ನು ಹೋಗಲಾಡಿಸುವುದಕ್ಕಾಗಿ ನಮ್ಮ ಆಡಳಿತವು ಗಡಿಭಾಗದ ಜನರ ಅನುಕೂಲಕ್ಕಾಗಿ ಮಾರುಕಟ್ಟೆ, ಉದ್ದಿಮೆಗೆ ಬೇಕಾದ ಪರಿಸರವನ್ನು ನಿರ್ಮಿಸಬೇಕಾಗಿದೆ.

ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ದೃಷ್ಟಿಯಿಂದ ಎರಡೂ ಭಾಷೆಗಳ ಜನರಲ್ಲಿ ಸಾಮರಸ್ಯ ಎದ್ದು ಕಾಣುತ್ತದೆ. ಚಿಕ್ಕೋಡಿ, ನಿಪ್ಪಾಣಿ ಭಾಗದ ಹಳ್ಳಿಗಳಲ್ಲಿ ಮರಾಠಿ ಗ್ರಾಮೀಣ ಸಾಹಿತ್ಯ ಸಮ್ಮೇಳನಗಳು ಜರುಗುತ್ತವೆ. ಕನ್ನಡಿಗರೂ ಪಾಲ್ಗೊಳ್ಳುತ್ತಾರೆ. ಕಾರದಗಾ, ಬೋರಗಾಂವದಂತಹ ಊರುಗಳಲ್ಲಿ ಕನ್ನಡ ಸಮ್ಮೇಳನಗಳು ಅದ್ದೂರಿಯಾಗಿ ನಡೆಯುತ್ತವೆ. ಮರಾಠಿಗರೂ ಪಾಲ್ಗೊಳ್ಳುತ್ತಾರೆ. ಸಂತೋಷ ಅನುಭವಿಸುತ್ತಾರೆ.

ಬೆಳಗಾವಿ ನಗರವನ್ನೇ ಕೇಂದ್ರವಾಗಿಟ್ಟುಕೊಂಡರೆ, ಮರಾಠಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಸಂಘಟನೆಯಲ್ಲಿಯ ಶಿಸ್ತು, ಉತ್ಸಾಹ, ಅವರ ವ್ಯವಸ್ಥೆ ಕನ್ನಡ ಕಾರ್ಯಕ್ರಮಗಳಿಗೂ ಹರಿದುಬರಬೇಕಾಗಿದೆ. ಕನ್ನಡಿಗರು ಆ ಮಾತನ್ನು ಮನಸಾರೆ ಒಪ್ಪಿ, ಆ ದಿಸೆಯಲ್ಲಿ ಕ್ರಿಯಾಶೀಲರಾಗುತ್ತಿದ್ದಾರೆ. ಬೆಳಗಾವಿಯಲ್ಲಿ ಚಿತ್ರಕಲೆಗಳ ಪ್ರದರ್ಶನಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆಯಾಗಬೇಕೆಂದು, ಪುಟ್ಟ ರಂಗಮಂದಿರ ನಿರ್ಮಾಣವಾಗಬೇಕೆಂದು ಸರ್ಕಾರಕ್ಕೆ ಬಹು ದಿನಗಳಿಂದ ಕೇಳುತ್ತಿದ್ದಾರೆ. ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಉಸ್ತುವಾರಿಯಲ್ಲಿ ಎರಡು ಪ್ರತಿಷ್ಠಾನಗಳಿವೆ. ಬಸವರಾಜ ಕಟ್ಟೀಮನಿ ಪ್ರತಿಷ್ಠಾನಕ್ಕೆ ಡಾ. ಎಂ.ಎಂ.ಕಲಬುರ್ಗಿ ಅವರು ರಾಜೀನಾಮೆ ನೀಡಿದಂದಿನಿಂದ (ಒಂದೂವರೆ ವರ್ಷವಾಯಿತು) ಅಧ್ಯಕ್ಷರನ್ನು ನೇಮಿಸಿಲ್ಲ. ಅದರಿಂದ ಅದರ ಕಾರ್ಯಕ್ರಮಗಳೇ ನಿಂತುಹೋಗಿವೆ. ಆ ಬಗೆಗೆ ಸಾಹಿತಿ, ಕಲಾವಿದರು ಮನವಿ ಮಾಡಿದರೂ ಸಚಿವಾಲಯ ಜಪ್ಪೆನ್ನುತ್ತಿಲ್ಲ.

ಒಟ್ಟಾರೆ ಕನ್ನಡಿಗರಿಗೆ ತಮ್ಮ ಅಭಿವೃದ್ಧಿಯದ್ದೇ ಚಿಂತೆ. ‘ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ವು ಈ ದಿಸೆಯಲ್ಲಿ ಕೆಲಸ ಮಾಡಬೇಕಲ್ಲವೆ? ನಮ್ಮ ಜನರು, ಜನಪ್ರತಿನಿಧಿಗಳು ತಮ್ಮ ಮನೆಯ ಅಭಿವೃದ್ಧಿ ಕೆಲಸವೆಂದು ಅದರಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT