ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮೂರಲ್ಲೇ ‘ಅನ್ಯ’ರಿವರು; ವಿವಾದಗಳ ತವರಿನವರು

ಹೀಗಿದ್ದಾರೆ ನಮ್ಮ ಗಡಿನಾಡ ಕನ್ನಡಿಗರು
Last Updated 2 ಡಿಸೆಂಬರ್ 2016, 19:54 IST
ಅಕ್ಷರ ಗಾತ್ರ

ಕ್ಷಣ ಮತ್ತು ಉದ್ಯೋಗ ಎಂಬುದು ನಿರ್ದಿಷ್ಟ ತಲೆಮಾರು ಹಾಗೂ ಅದು ಪ್ರತಿನಿಧಿಸುವ ಸಮಾಜದ ಭವಿಷ್ಯಸೂಚಿ. ವೈಯಕ್ತಿಕ ಮತ್ತು ಸಾಮುದಾಯಿಕ ನೆಲೆಗಳಲ್ಲಿ ಅಭಿವೃದ್ಧಿ ಪರಿಕಲ್ಪನೆಯನ್ನು ವಿಸ್ತರಿಸುವ ಮಾನದಂಡ. ಭಾಷಾವಾರು ರಾಜ್ಯಗಳ ವಿಂಗಡಣೆ ಮತ್ತು ಕರ್ನಾಟಕ ಏಕೀಕರಣದ ಬಳಿಕ ಗಡಿ ಪ್ರದೇಶಗಳಲ್ಲಿ ಹಲವು ತಲೆಮಾರುಗಳು ಈ ಎರಡೂ ಸೌಲಭ್ಯಗಳಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇನ್ನೂ ಪರಿಹಾರವಾಗಿಲ್ಲ. ದ್ವಿಭಾಷಿಕ ಪರಿಸರದಲ್ಲಿ, ಮಾತೃಭಾಷೆಯನ್ನೇ ಅಪ್ಪಿಕೊಂಡಿರುವ ಗಡಿ ಪ್ರದೇಶಗಳ ಕನ್ನಡಿಗರ ಶೈಕ್ಷಣಿಕ ಮತ್ತು ಔದ್ಯೋಗಿಕ ಬಿಕ್ಕಟ್ಟು ಮುಂದುವರಿದು, ಸ್ಥಗಿತ ಅಭಿವೃದ್ಧಿಯ ಮಾದರಿಯಾಗಿಯೇ ಉಳಿದಿದೆ.

ಗಡಿಭಾಗದ ಕನ್ನಡಿಗರು ಎಂದರೆ ವಿವಾದಗಳ ತವರುಮನೆಯವರು. ಕನ್ನಡಿಗರಾದರೂ ಕನ್ನಡಿಗರ ನಡುವೆ ‘ಅನ್ಯ’ರಾದವರು. ಇರುವ ಊರು–ರಾಜ್ಯದಲ್ಲೂ ಅವರು ಪರಕೀಯರು. ಜೀವನೋಪಾಯ ಮೂಲವಾದ ಶಿಕ್ಷಣ ಮತ್ತು ಉದ್ಯೋಗದ ಸಲುವಾಗಿ ಎಲ್ಲಿಯೂ ಸಲ್ಲದವರು. ಕನ್ನಡ ಎಂಬುದು ಅವರಿಗೆ ಅಭಿಮಾನದ ವಿಷಯವೂ, ಬದುಕಿಗೆ ತೊಡಕಾಗಿಯೂ ಏರ್ಪಟ್ಟ ವಿಚಿತ್ರ ಸನ್ನಿವೇಶ ಇದು.

ಭಾಷಾವಾರು ರಾಜ್ಯ ವಿಂಗಡಣೆ ಪ್ರಕ್ರಿಯೆಯಲ್ಲಿ ಮೊದಲು ಆಂಧ್ರ ಪ್ರದೇಶ ಅಸ್ತಿತ್ವಕ್ಕೆ ಬರುವ ಕಾಲಘಟ್ಟದಲ್ಲಿ, ಹೈದರಾಬಾದ್‌ ಸಂಸ್ಥಾನಕ್ಕೆ ಸೇರಿದ್ದ ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ನಡೆದ ಹೋರಾಟ, ಏಕೀಕರಣಕ್ಕೆ ಮುನ್ನುಡಿಯಂತೆ ಕಾಣುತ್ತದೆ. ಇಂಥ ಬಳ್ಳಾರಿಯಿಂದ ಕೇವಲ 16 ಕಿ.ಮೀ ದೂರದಲ್ಲಿರುವ ಡಿ.ಹಿರೇಹಾಳು ಕನ್ನಡಿಗರೇ ಹೆಚ್ಚಿರುವ ಗ್ರಾಮ. ಆಂಧ್ರ ಅಸ್ತಿತ್ವಕ್ಕೆ ಬಂದಂದಿನಿಂದಲೂ ಅಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯೇನೂ ಆಗಿಲ್ಲ. ಆದರೆ ಅಲ್ಲಿನ ಕನ್ನಡ ಶಾಲೆಗಳು ಮಾತ್ರ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿವೆ.

ಎಸ್ಸೆಸ್ಸೆಲ್ಸಿ ಬಳಿಕ ಆಂಧ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮುಂದುವರಿಸಲು ಅವಕಾಶಗಳಿಲ್ಲ. ಇದ್ದರೂ, ತೆಲುಗನ್ನು ಪ್ರಥಮ ಭಾಷೆಯಾಗಿ ಓದಿದವರಿಗೆ ಆದ್ಯತೆ. ಆದರೆ ಕನ್ನಡದ ಅಭಿಮಾನ ಅಲ್ಲಿನ ಕನ್ನಡಿಗರನ್ನು ಹಾಗೆ ಮಾಡಲು ಬಿಟ್ಟಿಲ್ಲ. ಒಂದು ವೇಳೆ, ತೆಲುಗಿನಲ್ಲೇ ಓದುತ್ತೇವೆ ಎನ್ನುವುದಾದರೆ ಅವರು ದೂರದ ರಾಯದುರ್ಗ, ಅನಂತಪುರ, ಕಲ್ಯಾಣದುರ್ಗ, ಕರ್ನೂಲು, ಗುಂತಕಲ್‌ವರೆಗೂ ಹೋಗಬೇಕು. ಹೋದರೂ ಅಲ್ಲಿ ಅವರು ಅನ್ಯರೇ ಆಗಿರುತ್ತಾರೆ. ಹೀಗಾಗಿಯೇ ಬಹುತೇಕರು ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣಕ್ಕಾಗಿ ಬಳ್ಳಾರಿ, ಸಿರುಗುಪ್ಪ, ಹತ್ತಿರದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ರಾಂಪುರಕ್ಕೆ ಹೋಗುತ್ತಾರೆ. ಅವರು ಓದುವುದಾದರೂ ಏನನ್ನು? ಪಿಯುಸಿ, ಡಿ.ಇಡಿ, ಬಿ.ಇಡಿ, ಐಟಿಐ. ಅಲ್ಲಿಂದ ಮುಂದಕ್ಕೆ ಉನ್ನತ ವೃತ್ತಿಶಿಕ್ಷಣಎಂಬುದು ಅವರಿಗೆ ದೂರವೇ ಉಳಿದಿದೆ. ಗಡಿ ಪ್ರದೇಶದಲ್ಲಿನ ಕನ್ನಡಿಗರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಹೀಗೆ ಕಮರಿಹೋಗಿವೆ.
ಡಿ.ಹಿರೇಹಾಳು ಒಂದು ನಿದರ್ಶನವಷ್ಟೆ. ಅಂಥ ನೂರಾರು ಹಳ್ಳಿಗಳ ಸಾವಿರಾರು ಮಕ್ಕಳ ಭವಿಷ್ಯವು ಅವರು ಗಡಿ ಪ್ರದೇಶದಲ್ಲಿ ಹುಟ್ಟಿ ಬೆಳೆದವರು, ಭಾಷಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೇ ಕಳಾಹೀನವಾಗಿದೆ. ಅನಂತಪುರ, ಕರ್ನೂಲು, ಮೆಹಬೂಬ್‌ನಗರ, ಮೆದಕ್, ಹೈದರಾಬಾದ್‌ನಲ್ಲಿರುವ ಕನ್ನಡ ಶಾಲೆಗಳು ಮತ್ತು ಮಕ್ಕಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೇನಿಲ್ಲ.

ನಮ್ಮ ಶಿಕ್ಷಣ, ವೃತ್ತಿಶಿಕ್ಷಣ ಹಾಗೂ ಉದ್ಯೋಗ ನೀತಿಯು ನಾಡಿನ ಒಳಗೆ ಮತ್ತು ಹೊರಗೆ ಇರುವ ಸಮಸ್ತ ಕನ್ನಡಿಗರಿಗೆ ಅನುಕೂಲ ಕಲ್ಪಿಸುವಂತೆ ಇಲ್ಲ. ಅದರೊಂದಿಗೆ, ಎರಡೂ ರಾಜ್ಯ ಸರ್ಕಾರಗಳು ತಮ್ಮ ಭಾಷಿಕರಿಗೆ ಅಗತ್ಯವಿರುವ ಶಿಕ್ಷಣ–ಉದ್ಯೋಗ ಸೌಕರ್ಯವನ್ನು ಕೊಡುವಲ್ಲಿ ಪರಸ್ಪರ ಸಹಯೋಗದೊಂದಿಗೆ ಆಡಳಿತ ನೀತಿಯನ್ನು ರೂಪಿಸಿಲ್ಲ ಎಂಬುದು ಈ ಪರಿಸ್ಥಿತಿಗೆ ಪ್ರಮುಖ ಕಾರಣ.

ಅನಂತಪುರ ಜಿಲ್ಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಗಿರಿಜಾಪತಿ ಕೇಳುತ್ತಾರೆ: ‘ಗಡಿ ಶಾಲೆಗಳ ಶಿಕ್ಷಕರು ಕನ್ನಡ ಭಾಷೆಯ ಪಠ್ಯಪುಸ್ತಕಗಳಿಗಾಗಿ ಕರ್ನಾಟಕದ ಡಿಡಿಪಿಐ, ಬಿಇಒ ಕಚೇರಿಗೆ ಪ್ರತಿ ವರ್ಷವೂ ಅಲೆದಾಡುತ್ತಲೇ ಇರಬೇಕೆ?’ ಇದು, ಕನ್ನಡ ಶಾಲೆಗಳ ಕಡೆಗೆ ಎರಡೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗೆ ಕನ್ನಡಿ ಹಿಡಿಯುತ್ತದೆ.

ವೃತ್ತಿಶಿಕ್ಷಣದಲ್ಲಿ ಕರ್ನಾಟಕವು ಗಡಿ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಅನುಸರಿಸುತ್ತಿರುವ ತಾರತಮ್ಯ ನೀತಿ ಇನ್ನೂ ಅಮಾನವೀಯವಾಗಿದೆ. ಸೂಕ್ಷ್ಮವಾಗಿ ನೋಡಿದರೆ, ಕನ್ನಡ ವಿರೋಧಿಯಾಗಿಯೂ ಕಾಣುತ್ತದೆ. ಇದನ್ನು ಒಂದು ಉದಾಹರಣೆ ಮೂಲಕ ವಿವರಿಸಬಹುದು. ಬಳ್ಳಾರಿಯ ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಎನ್‌.ರಾಘವೇಂದ್ರ ಶೆಟ್ಟಿ ಕರ್ನೂಲು ಜಿಲ್ಲೆಯ ಹೊಳಲಗುಂದಿಯವರು. 10ನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದವರು. ಬಳ್ಳಾರಿಯಲ್ಲಿ ಪಿಯುಸಿ ಬಳಿಕ ಎಂಜಿನಿಯರಿಂಗ್‌ ಓದುವ ಉದ್ದೇಶದಿಂದ ಸಿಇಟಿಗೆ ಅರ್ಜಿ ಸಲ್ಲಿಸಿದ ವೇಳೆ ಅವರು ಮತ್ತೊಮ್ಮೆ ಕನ್ನಡ ಪರೀಕ್ಷೆಗೆ ಹಾಜರಾಗಬೇಕಾಯಿತು. ಅವರು ಕನ್ನಡ ಮಾಧ್ಯಮದಲ್ಲೇ ಓದಿದ್ದರೂ, ‘ಕರ್ನಾಟಕದವರಲ್ಲ’ ಎಂಬ ಕಾರಣದಿಂದ ಅವರಿಗೆ ನೇರವಾಗಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಿಲ್ಲ. ಅದಷ್ಟೇ ಅಲ್ಲ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬಂದು ಓದುವ ವಿದ್ಯಾರ್ಥಿ ಎಂದೇ ಅವರನ್ನು ಪರಿಗಣಿಸಿದ್ದರಿಂದ, ಆಂಧ್ರ ಸರ್ಕಾರ ನೀಡಿದ ಆದಾಯ ಪ್ರಮಾಣಪತ್ರವನ್ನು ಪರಿಗಣಿಸದೇ ಇದ್ದುದರಿಂದ, ಸಾಮಾನ್ಯರು ಪಾವತಿಸುವ ಶುಲ್ಕಕ್ಕಿಂತ ಹತ್ತು ಸಾವಿರ ರೂಪಾಯಿ ಹೆಚ್ಚು ಪಾವತಿಸಬೇಕಾಯಿತು. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನೀಡುವ ವಿದ್ಯಾರ್ಥಿ ವೇತನವೂ ಅವರಿಗೆ ದೊರಕಲಿಲ್ಲ.

‘ಇಂಥ ಸನ್ನಿವೇಶದಲ್ಲಿ, ಶ್ರೀಧರಗಡ್ಡೆ ಸಿದ್ಧಬಸಪ್ಪ ಅವರಂಥ ದಾನಿಗಳ ನೆರವು ದೊರಕದೇ ಹೋಗಿದ್ದರೆ ಪದವಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ’ ಎನ್ನುತ್ತಾರೆ ಅವರು. ತಾರತಮ್ಯ ನೀತಿ ತಾಳಲಾರೆವು ಎನ್ನುವ ಮಂದಿ ಮಾತ್ರ, ತೆಲುಗು ನಾಡಲ್ಲಿದ್ದರೂ ಶಿಕ್ಷಣಕ್ಕಾಗಿ ಕನ್ನಡ ನಾಡಲ್ಲಿರುವ ಸಂಬಂಧಿಕರ ವಿಳಾಸವನ್ನು ನೀಡುತ್ತಾರೆ. ಅಲ್ಲಿಯೇ ಪ್ರಮಾಣಪತ್ರ ಪಡೆಯುತ್ತಾರೆ. ಹಲವು ಪೋಷಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಕ್ಕಳು ನಡೆಯಲು ಕಲಿತ ಕೂಡಲೇ ಕರ್ನಾಟಕದ ಶಾಲೆಗಳಿಗೆ ಸೇರಿಸಿ, ಅಲ್ಲಿಯೇ ಸಂಬಂಧಿಕರ ಮನೆಗಳಲ್ಲಿ ಇರಿಸುತ್ತಾರೆ!

‘ಗಡಿನಾಡಿನ ಜನ ವ್ಯವಸ್ಥೆಯ ವಿರುದ್ಧ ಆಕ್ರೋಶ ಮತ್ತು ಅಸಹಾಯಕತೆಯಲ್ಲಷ್ಟೇ ಉಳಿಯದೆ ತಮ್ಮ ಹಕ್ಕು ಸ್ಥಾಪನೆಗಾಗಿ ಹೋರಾಡುವುದು, ನ್ಯಾಯಾಂಗದ ಮೂಲಕ ಹೋರಾಟ ಮಾಡುವುದು ಅನಿವಾರ್ಯ’ ಎಂಬುದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗಡಿ ಗ್ರಾಮ ಕಶೆಟ್ಟಿಪಲ್ಲಿಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತರಾದ ಲೇಖಕ ಸ.ರಘುನಾಥ ಅವರ ಅಭಿಮತ.

ಈ ಇಬ್ಬರ ಅಭಿಪ್ರಾಯಗಳು, ಕನ್ನಡ ಆಡಳಿತ ಭಾಷೆಯಾದ ಕರ್ನಾಟಕವಷ್ಟೇ ಅಲ್ಲದೆ, ಕನ್ನಡಿಗರನ್ನು ತಮ್ಮ ಪ್ರಜೆಯಾಗಿ ಉಳ್ಳ ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ಸಹ ಗಡಿ ಕನ್ನಡಿಗರಿಗೆ ಅನುಕೂಲ ಮಾಡಿಕೊಡುವಲ್ಲಿ ಸಮ ಜವಾಬ್ದಾರಿ ಹೊಂದಿವೆ ಎಂಬುದರ ಕಡೆಗೆ ಗಮನ ಸೆಳೆಯುತ್ತವೆ. ಈ ರಾಜ್ಯಗಳನ್ನು ಕೂಡಿಸುವ ಏಕಸೂತ್ರ ಯಾವುದು ಎಂಬುದೇ ಸದ್ಯದ ಪ್ರಶ್ನೆ. ಆದರೆ, ಗಡಿ ಕನ್ನಡಿಗರ ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿದ ಈ ಪ್ರಶ್ನೆಯೂ ಮೂಲೆಗುಂಪಾಗಿದೆ ಎಂಬುದೇ ಸದ್ಯದ ವಿಪರ್ಯಾಸ.

ಏನು ಮಾಡುತ್ತಿದೆ ಪ್ರಾಧಿಕಾರ?

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. 2009ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿತ್ತು. ಆಗ ಸರ್ಕಾರ ವರ್ಷಕ್ಕೆ ₹ 10 ಕೋಟಿ ಅನುದಾನವನ್ನೂ ಮೀಸಲಿಟ್ಟಿತ್ತು. ಗಡಿಭಾಗದಲ್ಲಿ ಮೂಲಸೌಕರ್ಯ ಕಲ್ಪಿಸುವುದು ಮತ್ತು ಶೈಕ್ಷಣಿಕ ಸೌಕರ್ಯಗಳನ್ನು ಕಲ್ಪಿಸುವುದು ಪ್ರಾಧಿಕಾರದ ಪ್ರಮುಖ ಜವಾಬ್ದಾರಿಗಳು.

ಆದರೆ, ಗಡಿ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಔದ್ಯೋಗಿಕ ಅವಕಾಶಗಳಿಗಾಗಿ ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ಪ್ರಾಧಿಕಾರ ಗಮನ ಹರಿಸಿದ್ದು ಕಡಿಮೆ. ವಿವಿಧ ನಿಗಮ, ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕವಾದ ಸಂದರ್ಭದಲ್ಲಿ ಸುದ್ದಿಯಾಗುವ ಪ್ರಾಧಿಕಾರ, ನಂತರ ತನ್ನ ನಿಜವಾದ ಉದ್ದೇಶಗಳನ್ನು ಈಡೇರಿಸುವ ಪ್ರಯತ್ನಗಳ ಕಾರಣಕ್ಕೆ ಸುದ್ದಿಯಾಗಿದ್ದೂ ಕಡಿಮೆ. ಈ ಪ್ರಾಧಿಕಾರ ಗಡಿ ಪ್ರದೇಶದಲ್ಲಿರುವವರಿಗಾಗಿ ಏನು ಮಾಡುತ್ತಿದೆ ಎಂಬ ಪ್ರಶ್ನೆಯೇ ದೊಡ್ಡದಾಗಿದೆ.

ವರದಿಗಳು ಏನಾದವು?
‘ಗಡಿನಾಡು ಮತ್ತು ಹೊರನಾಡಿನವರು 1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ, ಅಂಥವರಿಗೆ ಕರ್ನಾಟಕದೊಳಗಿನ ಅಭ್ಯರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಮುಕ್ತವಾಗಿ ನೀಡಬೇಕು. ಇಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವುದೊಂದೇ ಮಾನದಂಡವಾಗಬೇಕು’.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ, 2011ರಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಸಲ್ಲಿಸಿದ್ದ ಶಿಕ್ಷಣ ಮತ್ತು ಮಾಧ್ಯಮದ (ನೀತಿ ನಿರೂಪಣೆ) ವರದಿಯಲ್ಲಿ ಮಾಡಿರುವ ಶಿಫಾರಸು ಇದು. ಆದರೆ ಇಂದಿಗೂ ಹೊರನಾಡು ಮತ್ತು ಗಡಿನಾಡು ಪ್ರದೇಶದಲ್ಲಿನ ಯುವಜನರಿಗೆ, ಅವರು ಕನ್ನಡ ಮಾಧ್ಯಮದಲ್ಲಿ ಓದಿದ್ದೇ ತಪ್ಪು ಎಂಬಂಥ ಸನ್ನಿವೇಶ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿದೆ.

ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿಯನ್ನು ಪಡೆಯುವುದೂ ದುರ್ಲಭವಾಗಿರುವ ಸನ್ನಿವೇಶದಲ್ಲೇ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದಲ್ಲಿ ನೀಡಲಾಗುವ ಶೇ 5ರಷ್ಟು ಮೀಸಲಾತಿ ಸೌಲಭ್ಯವನ್ನು ನೆರೆ ರಾಜ್ಯಗಳ ಕನ್ನಡ ಶಾಲೆಗಳಲ್ಲಿ ಓದಿದವರಿಗೂ ನೀಡಬೇಕು ಎಂಬ ಕೂಗೂ ಇದೆ. ‘ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷ ಡಾ. ಎಲ್‌.ಹನುಮಂತಯ್ಯ ಅವರು, ಹಿಂದಿನ ವರ್ಷ ಹಿರೇಹಾಳ್‌ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು. ಆಮೇಲೇನಾಯಿತು ಎಂಬುದನ್ನು ಈಗಿನ ಅಧ್ಯಕ್ಷರಾದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯನವರಾದರೂ ಗಡಿ ಪ್ರದೇಶದ ಜನರಿಗೆ ತಿಳಿಸಬೇಕು.

ಗಡಿ ಪ್ರದೇಶಗಳ ಅಭಿವೃದ್ಧಿಯ ಅಧ್ಯಯನ ಕೈಗೊಂಡು ವಾಟಾಳ್‌ ನಾಗರಾಜ್‌ ಅವರು ಸಲ್ಲಿಸಿದ್ದ ಮಧ್ಯಂತರ ವರದಿ, ಆನಂತರ ಬರಗೂರು ಅವರು ಸಲ್ಲಿಸಿದ್ದ ವರದಿಗಳನ್ನು ಸರ್ಕಾರ ಏನು ಮಾಡಿದೆ ಎಂಬುದಕ್ಕೂ ಉತ್ತರ ಸಿಕ್ಕರೆ, ಗಡಿಪ್ರದೇಶದ ಜನರ ಸಂಕಟ ತೀರಿದಂತಾಗುತ್ತದೆ. ಅದಕ್ಕೂ ಮುಂಚೆ, ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ದೊರಕಬೇಕು ಎಂಬುದನ್ನು ಪ್ರತಿಪಾದಿಸಿದ್ದ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಇನ್ನೂ ಹೋರಾಟ ನಡೆಯುತ್ತಲೇ ಇದೆ ಎಂಬುದನ್ನು ನೆನಪಿಸಿಕೊಂಡರೆ, ಗಡಿ ಕನ್ನಡಿಗರ ಪರಿಸ್ಥಿತಿ ಕುರಿತು ದಟ್ಟ ವಿಷಾದವೂ ಮೂಡುತ್ತದೆ.

* ಪ್ರಪಂಚದ ಯಾವುದೇ ಮೂಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ, ಕರ್ನಾಟಕದಲ್ಲಿ ಸ್ಥಳೀಯರಿಗೆ ನೀಡುವ ಎಲ್ಲ ಸೌಲಭ್ಯಗಳನ್ನೂ ಒದಗಿಸಬೇಕು ಎಂದು ಸರ್ಕಾರ ಆದೇಶ ಮಾಡುವವರೆಗೆ ಪರಿಸ್ಥಿತಿ ಬದಲಾಗುವುದಿಲ್ಲ.

–ಕುಂ.ವೀರಭದ್ರಪ್ಪ, ಲೇಖಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT