ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮಾಹಿತಿ ಕನ್ನಕ್ಕೆ ಆರೇ ಸೆಕೆಂಡ್‌ ಸಾಕು

Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಲಂಡನ್: ಕಾರ್ಡ್‌ ಇಲ್ಲದೆಯೇ ಹ್ಯಾಕರ್‌ಗಳು ವೀಸಾ ಡೆಬಿಟ್‌ ಮತ್ತು ಕ್ರೆಡಿಟ್ ಕಾರ್ಡ್‌ಗಳ ಎಲ್ಲಾ ಗೋಪ್ಯ ವಿವರಗಳನ್ನು ಕಲೆ ಹಾಕಬಹುದು. ಒಮ್ಮೆ ಆ ಮಾಹಿತಿ ಕಲೆ ಹಾಕಿದ ನಂತರ ಕೇವಲ 6 ಸೆಕೆಂಡ್‌ಗಳಲ್ಲಿ  ಈ ಕಾರ್ಡ್‌ನ ಮಾಹಿತಿ ಬಳಸಿ ಆನ್‌ಲೈನ್‌ ಖರೀದಿ ಮಾಡಬಹುದು ಎಂದು ಬ್ರಿಟನ್‌ನ ಸಂಶೋಧಕರ ತಂಡವೊಂದು ಪ್ರತಿಪಾದಿಸಿದೆ.

ಇಲ್ಲಿನ ನ್ಯೂಕ್ಯಾಸಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಈ ಸಂಶೋಧನೆ ನಡೆಸಿದೆ. ಈಗಿನ ‘ಇ–ಪೇಮೆಂಟ್‌’ ವ್ಯವಸ್ಥೆಯಲ್ಲಿರುವ ಕೆಲವು ನ್ಯೂನತೆಗಳನ್ನು ಈ ತಂಡ ಪತ್ತೆ ಮಾಡಿದೆ. ಸಂಶೋಧನೆಯ ವಿವರ ಇಂತಿದೆ.

ಕಾರ್ಡ್‌ಗಳ ಮೊದಲ ಆರು ಸಂಖ್ಯೆಗಳು ಅದು ಡೆಬಿಟ್‌ ಕಾರ್ಡೇ ಅಥವಾ ಕ್ರೆಡಿಟ್‌ ಕಾರ್ಡೇ ಎಂಬುದನ್ನು ಗುರುತಿಸಲು ನೆರವಾಗುತ್ತದೆ. ಇವೇ ಸಂಖ್ಯೆಗಳು ಅದು ಯಾವ ಬ್ಯಾಂಕ್‌ನದ್ದು ಎಂಬುದನ್ನು ಸೂಚಿಸುತ್ತದೆ.

ಒಂದು ಕಾರ್ಡ್‌ನ ಈ ವಿವರ ದೊರೆತರೆ ಅದೇ ಬ್ಯಾಂಕ್‌ನ ಇತರ ಕಾರ್ಡ್‌ಗಳ ಸಂಖ್ಯೆಗಳು ಹ್ಯಾಕರ್‌ಗಳಿಗೆ ಸುಲಭವಾಗಿ ದೊರೆಯುತ್ತವೆ.

ಈ ಆರು ಸಂಖ್ಯೆಗಳು ದೊರೆತರೆ ಮುಂದಿನ 10 ಸಂಖ್ಯೆಗಳನ್ನು ಊಹೆಯ ಮೇಲೆ ನಮೂದಿಸಲಾಗುತ್ತದೆ. ಕಾರ್ಡ್‌ನ ಸಿವಿವಿ ಸಂಖ್ಯೆ ಮತ್ತು ಮುಕ್ತಾಯದ ಅವಧಿಯನ್ನು ಊಹೆಯ ಮೇಲೆ ನಮೂದಿಸಬಹುದು. ಹಲವು ವೆಬ್‌ಸೈಟ್‌ಗಳಲ್ಲಿ ಏಕಕಾಲಕ್ಕೆ ಪ್ರಯತ್ನಿಸಿ ಗೋಪ್ಯ ಸಂಖ್ಯೆಗಳನ್ನು ಪಡೆಯಲಾಗುತ್ತದೆ. ವಿವಿಧ ಸಂಯೋಜನೆಗಳಲ್ಲಿ ಸಂಖ್ಯೆಗಳನ್ನು ದಾಖಲಿಸುತ್ತಾ ಹೋದರೆ ಒಮ್ಮೆ ಸರಿಯಾದ ಸಿವಿವಿ ಸಂಖ್ಯೆ ಸಿಗುತ್ತದೆ.  ಇದೇ ತಂತ್ರವನ್ನು ಮುಕ್ತಾಯದ ಅವಧಿಯನ್ನು ಪತ್ತೆ ಮಾಡಲೂ ಬಳಸಲಾಗುತ್ತದೆ.

ಒಂದೇ ಜಾಲತಾಣದಲ್ಲಿ ಹಲವು ಬಾರಿ ತಪ್ಪು ಸಂಖ್ಯೆ ನಮೂದಿಸಿದರೂ, ಜಾಲತಾಣಕ್ಕಾಗಲೀ ಬ್ಯಾಂಕ್‌ಗಾಗಲಿ ಇದು ತಿಳಿಯುವುದಿಲ್ಲ. ಇದು ಈಗಿನ ವೀಸಾ ಕಾರ್ಡ್‌ಗಳ ಇ–ಪೇಮೆಂಟ್‌ ವ್ಯವಸ್ಥೆಯಲ್ಲಿನ ಭದ್ರತೆಯ ದೊಡ್ಡ ಲೋಪ. ಹೀಗೆ ಕಲೆಹಾಕಿದ ವಿವರಗಳನ್ನು ಬಳಸಿಕೊಂಡು ಹಲವು ಬಾರಿ ಪ್ರಯತ್ನಿಸಿದ ನಂತರ ಕಾರ್ಡ್‌ನ ಪಾಸ್‌ವರ್ಡ್‌ ಪತ್ತೆಯಾಗುತ್ತದೆ. ನಂತರ ಕೇವಲ ಆರು ಸೆಕೆಂಡ್‌ಗಳಲ್ಲಿ ಆ ಕಾರ್ಡ್‌ನಿಂದ ಇ–ಪಾವತಿ ಮಾಡಬಹುದು.

ಭಾರತದ ಕಾರ್ಡ್‌ಗಳಿಗೂ ಅಪಾಯ

ವಿದೇಶಿ ವೀಸಾ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಈ ಸಂಶೋಧನೆ ನಡೆಸಲಾಗಿದೆ. ವಿದೇಶಗಳಲ್ಲಿ ಇ– ಪೇಮೆಂಟ್‌ ವೇಳೆ ಒಂದು ಬಾರಿಯ ರಹಸ್ಯಸಂಖ್ಯೆ (ಒನ್‌ ಟೈಂ ಪಾಸ್‌ವರ್ಡ್ –ಒಟಿಪಿ) ಕೇಳುವ ವ್ಯವಸ್ಥೆ ಇಲ್ಲ. ಭಾರತದಲ್ಲಿ ಈ ವ್ಯವಸ್ಥೆ ಇದೆ.

ಭಾರತದ ಯಾವುದೇ ಇ–ಮಾರುಕಟ್ಟೆಗಳಲ್ಲಿನ ಖರೀದಿಗೆ ಇ–ಪಾವತಿ ಮಾಡಬೇಕೆಂದರೆ ಒಟಿಪಿ ನಮೂದಿಸುವುದು ಕಡ್ಡಾಯ. ಆದರೆ ಭಾರತೀಯರ ಕಾರ್ಡ್‌ ವಿವರ ಬಳಸಿಕೊಂಡು ವಿದೇಶಿ ಇ–ಮಾರುಕಟ್ಟೆಗಳಲ್ಲಿನ ಖರೀದಿಗೆ ಇ–ಪಾವತಿ ಮಾಡುವಾಗ ಒಟಿಪಿ ನಮೂದಿಸುವ ಅಗತ್ಯವಿಲ್ಲ. ಹೀಗಾಗಿ ಭಾರತೀಯರ ವೀಸಾ ಕಾರ್ಡ್‌ಗಳಿಗೂ ಈ ಸ್ವರೂಪದ ಹ್ಯಾಕಿಂಗ್‌ನ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT