ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕು ಚೆಲುವೆ!

ಭಾವಸೇತು
Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಎಂಬತ್ತರ ದಶಕದಲ್ಲಿ ನಾನು ಒಂದನೆಯ ತರಗತಿಯಲ್ಲಿದ್ದ ಪುಟ್ಟ ಹುಡುಗಿ. ನಾವಿದ್ದ ದಾವಣಗೆರೆಯಲ್ಲಿ ಸರ್ಕಸ್ಸು ಬಂದಿತ್ತು. ಎಲ್ಲೆಲ್ಲೂ ಅದರದ್ದೇ ಮಾತು–ಚರ್ಚೆ. ದಿನಾ ಬೆಳಿಗ್ಗೆ–ಸಂಜೆ ಆಟೋಗಳಲ್ಲಿ ‘ಅಮೋಘ ಸರ್ಕಸ್, ತಪ್ಪಿಸಿಕೊಳ್ಳಬೇಡಿ’ ಎಂದು ತಮ್ಮ ಗಂಟಲು, ನಮ್ಮ ಕಿವಿ ಹರಿಯುವಷ್ಟು ಜೋರಾಗಿ ಕೂಗಿಕೊಂಡು ಪ್ರಚಾರ ಮಾಡುತ್ತಿದ್ದರು.

ಮಕ್ಕಳಾದ ನಮಗೆ ಬಣ್ಣದ ಟೆಂಟಿನೊಳಗೆ ನಡೆಯುತ್ತಿದ್ದ ಅದು ಇಂದ್ರಲೋಕ ಅನ್ನಿಸುವಷ್ಟು ಆಕರ್ಷಣೆ. ಸುತ್ತ ಕಟ್ಟಿದ್ದ ಕುದುರೆ, ಮರಿಯಾನೆ, ನಾಯಿ–ಬೆಕ್ಕುಗಳಂತೂ ನಮ್ಮ ಪಾಲಿಗೆ ಸಾಕ್ಷಾತ್ ಐರಾವತವೇ!  ಅತ್ತೂ ಕರೆದು, ಹಟ ಮಾಡಿ ಅಪ್ಪ–ಅಮ್ಮನ ಜತೆ ಸರ್ಕಸ್ಸಿಗೆ ಹೋಗಿದ್ದೆವು.

ಫಳಫಳಗುಟ್ಟುವ ತುಂಡು ಬಟ್ಟೆ ಧರಿಸಿದ ಬಿಳಿ ಬೆಡಗಿಯರು, ಚಿತ್ರವಿಚಿತ್ರ ವೇಷ ತೊಟ್ಟ ವಿದೂಷಕರು, ಅಲ್ಲಲ್ಲಿ ತೂಗು ಬಿಟ್ಟ ಹಗ್ಗ – ಹೀಗೆ ಎಲ್ಲಿ, ಯಾರನ್ನು ನೋಡಬೇಕು ಎಂದೇ ತಿಳಿಯದ ಸಂ–ಭ್ರಾಂತಿ! ಹೆದರಿಕೆ, ಖುಷಿ, ಕುತೂಹಲ ಎಲ್ಲವೂ ಬೆರೆತ ಸ್ಥಿತಿಯಲ್ಲಿ ಸರ್ಕಸ್ ನೋಡಿದೆವು.

ಸರ್ಕಸ್‌ನ ಕಡೆಯ ಷೋ, ಸುಂದರಿಗೆ ಚಾಕು! ಇಡೀ ಟೆಂಟ್ ಕತ್ತಲಾಯಿತು. ಸುಂದರಿಯೊಬ್ಬಳನ್ನು ಸ್ಟೇಜ್ ಮೇಲೆ ಮರದ ಬೋರ್ಡ್ ಮುಂದೆ ನಿಲ್ಲಿಸಲಾಯಿತು. ಆಕೆಯ ಮೇಲೆ ಮಾತ್ರ ಬೆಳಕು. ಸುಮಾರು ಹತ್ತು ಅಡಿ ದೂರದಲ್ಲಿ ಶಿಸ್ತಾಗಿ ಉಡುಪು ಧರಿಸಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಯುವಕನೊಬ್ಬ ಕೈಯಲ್ಲಿ ಹತ್ತು ಚಾಕು ಹಿಡಿದು ಸಿದ್ಧನಾಗಿದ್ದ.

ಇಡೀ ಟೆಂಟ್‌ನಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಶಬ್ದ. ಜನರೆಲ್ಲ ಉಸಿರನ್ನು ಬಿಗಿ ಹಿಡಿದಿದ್ದರು. ಜೋರಾಗಿ ಬೆಲ್ ಬಾರಿಸುತ್ತಿದ್ದಂತೆ ಆತ ಒಂದೊಂದಾಗಿ ಚಾಕು ಎಸೆಯಲಾರಂಭಿಸಿದ. ಆಕೆಯ ತಲೆ, ಕಾಲು, ಭುಜ, ಹೊಟ್ಟೆ, ತೊಡೆಯ ಪಕ್ಕ ಚಾಕುಗಳನ್ನು ಕ್ಷಣಾರ್ಧದಲ್ಲಿ ನಿಖರವಾಗಿ ಎಸೆದ. ಆಕೆ ಕಣ್ಣು ಮುಚ್ಚಿ ಅಲ್ಲಾಡದೇ ನಿಂತಿದ್ದಳು.

ಕುಳಿತ ನಮಗೋ ಕೈ–ಕಾಲು ನಡುಗುತ್ತಿತ್ತು. ಕಣ್ಣು ಸಣ್ಣದಾಗಿಸಿ ನೋಡನೋಡುತ್ತಿರುವಂತೆ ಆಕೆಯ ಸುತ್ತ ಚಾಕುಗಳ ಮಾಲೆ ಹರಡಿತ್ತು. ನೆರೆದವರಿಂದ ಭರ್ಜರಿ ಚಪ್ಪಾಳೆ, ಕೇಕೆ, ಸೀಟಿ. ಹೀಗೆ ಸರ್ಕಸ್ ಮುಗಿದಿತ್ತು.

ಮರಳಿ ಮನೆಗೆ ಬರುವಾಗ ನಾವು ಮಂಡಕ್ಕಿ ತಿನ್ನುತ್ತಿದ್ದೆವು, ಅಮ್ಮ ಅಪ್ಪರ ಮಾತು ಸರ್ಕಸ್ ಬಗ್ಗೆ ನಡೆದಿತ್ತು. ಆ ಚಾಕುಗಳು ನಿಜವಾದದ್ದಲ್ಲ, ಎಂದು ಅಮ್ಮನ ಸಂಶಯ.ಆಗದಿದ್ದರೇ ಒಳ್ಳೆಯದು ಅಪ್ಪನ ದೃಢನುಡಿ. ನಮಗಂತೂ ಮನೆಯಲ್ಲಿ ಮಲಗಿದರೂ ಮತ್ತೆ ಸರ್ಕಸ್ ಕನಸು. ಇದಾದ ಮಾರನೇ ದಿನ ಸರ್ಕಾರಿ ವೈದ್ಯರಾಗಿದ್ದ ಅಪ್ಪನಿಗೆ ಆಸ್ಪತ್ರೆಯಲ್ಲಿ ರಾತ್ರಿ ಪಾಳಿ ಇತ್ತು.

ಮನೆಯಲ್ಲಿ ಅಮ್ಮ ಹೇಳಿದ ಕತೆ ಕೇಳಿ ಮಲಗಿದವರಿಗೆ ಎಚ್ಚರವಾದದ್ದು ಬೆಳಿಗ್ಗೆ ಎಂಟು ಗಂಟೆಗೆ. ಅಪ್ಪ ಆಗಲೇ ಮನೆಗೆ ಬಂದಾಗಿತ್ತು. ಮುಖ ಬಾಡಿತ್ತು, ಸುಸ್ತು ಎದ್ದು ಕಾಣುತ್ತಿತ್ತು. ಕಾರಣ ಸರ್ಕಸ್ಸಿನ ಆಟ! ಆ ರಾತ್ರಿ ಆಸ್ಪತ್ರೆಗೆ ತುರ್ತು ಪರಿಸ್ಥಿತಿಯಲ್ಲಿ ಬಂದದ್ದು ಬೇರಾರೂ ಅಲ್ಲ, ನೆತ್ತರಲ್ಲಿ ತೋಯ್ದ ಸರ್ಕಸ್ಸಿನ ಚಾಕು ಚೆಲುವೆ!
ಚಾಕು ಎಸೆಯುವಾಗ ಹೊಟ್ಟೆಗೆ ಚುಚ್ಚಿ ಆಕೆಗೆ ಆಳವಾದ ಗಾಯವಾಗಿ ರಕ್ತ ಸುರಿಯುತ್ತಿತ್ತು.

ಆಸ್ಪತ್ರೆಯಲ್ಲಿ ಕೂಡಲೇ ಸರ್ಜನ್ ಮತ್ತು ಅಪ್ಪ ಸೇರಿ ಇಪ್ಪತ್ತೆರಡು ಹೊಲಿಗೆ ಹಾಕಿದ್ದರು. ತಕ್ಷಣ ಚಿಕಿತ್ಸೆ ದೊರೆತು ಪ್ರಾಣಾಪಾಯದಿಂದ ಪಾರಾಗಿದ್ದರೂ ಪೆಟ್ಟು ತೀವ್ರವಾಗಿ ತಾಗಿತ್ತು. ಇದನ್ನು ಕೇಳಿದೊಡನೆ ಅಮ್ಮ ಹನಿಗಣ್ಣಾಗಿದ್ದರು. ಆನಂತರ ಈ ದುರ್ಘಟನೆ ನಡೆಯಲು ಕಾರಣದ ಬಗ್ಗೆ ಅಲ್ಲಲ್ಲಿ ಕೇಳಿಬಂದ ಸುದ್ದಿ –  ‘ಗುರಿ ತಪ್ಪಿತು, ಪ್ರೇಮ ವೈಫಲ್ಯ, ಹಳೆಯ ದ್ವೇಷ’ ಇತ್ಯಾದಿ.

ಇವೆಲ್ಲಾ ನಡೆದು ಮೂರೂವರೆ ದಶಕಗಳು ಕಳೆದಿವೆ. ಚಾಕು ಚೆಲುವೆಯ  ಗಾಯ ಮಾಯ್ದರೂ, ಅಪ್ಪ–ಅಮ್ಮರ ಮನದಲ್ಲಿ ಕಲೆ ಹಾಗೇ ಉಳಿದಿದೆ. ಅದೇ ಕೊನೆ, ಅಪ್ಪ–ಅಮ್ಮ ಇಬ್ಬರೂ ಸರ್ಕಸ್‌ಗೆ ಹೋಗಿದ್ದೇ ಇಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT