ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೆಂಬ ಭಿನ್ನ ವೇಷ

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

-ಮಂಜುನಾಥ್‌ಲತಾ

ಅರಿವು ತೊರೆದ ಎರಡೆಂಬ ಭಿನ್ನವೇಷವ ತೊಟ್ಟು
ಡಂಬಕವ ನುಡಿದಹೆವೆಂಬ ಉದ್ದಂಡರ ಗುಹೇಶ್ವರ ಕಂಡರೆ ಕನಲುವ
– ಅಲ್ಲಮಪ್ರಭು

ಈ ಸಲ ಗ್ರಾಮ ಪಂಚಾಯಿತಿ ಎಲೆಕ್ಷನ್ ತಾರೀಖು ಪ್ರಕಟವಾಗುತ್ತಲೇ ಎಂತಹುದೋ ಹುಮ್ಮಸ್ಸು ಕೇರಿಯೆಲ್ಲೆಡೆ ಬೇಸಿಗೆಯ ಧೂಳಿನಂತೆ ಎದ್ದು ಎಲ್ಲರ ಮೂಗಿನ ಹೊಳ್ಳೆಗಳನ್ನೂ ಹೊಕ್ಕು ಉಸಿರು ಕೆಡಿಸತೊಡಗಿತ್ತು. ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ನ ಹೊರಗಿನ ಬೆಂಚಿನಲ್ಲಿ ಕುಳಿತ ನಿಂಗರಾಜನಿಗೆ ಹೋದ ಸಲದ ಎಲೆಕ್ಷನ್ನಿನ ನೆನಪುಗಳೆಲ್ಲವೂ ಇನ್ನೂ ಹೊಲದಲ್ಲಿ ಹಸಿರಾಗಿ ತೊನೆಯುತ್ತಿರುವ ರಾಗಿ ಪೈರುಗಳಂತೆ ಕಂಡವು.

***
ಆ ಸಲ ಅವನ ಚಿಕ್ಕವ್ವ ‘ನಂಗ್ಯಾಕಪ್ಪ ಎಲೆಕ್ಸನ್ನು...? ನೀವೇ ಯಾರಾದ್ರೂ ನಿಂತ್ಕಳ್ಳಿ’ ಎಂದು ನಿರ್ವಿಕಾರವಾಗಿ ಹೇಳಿ ಎಲ್ಲರಿಗೂ ಕೈ ಮುಗಿದಿದ್ದಳು.ಆದರೆ ಪಟ್ಟು ಬಿಡದೆ ಕುಂತಿದ್ದ ಅವರ್ಯಾರೂ ಅವಳ ಮಾತನ್ನು ಒಪ್ಪಲು ತಯಾರಿಲ್ಲದವರಂತೆ ‘ನೀನೆ ನಿಂತ್ಕಬೇಕು’ ಅಂತಂತಲೇ ಒತ್ತಿ ಅಂದಾಗ, ‘ಬೇಕಾದ್ರ ನನ್ನ ಮಗ ಅವ್ನಲ್ಲ ನಿಂಗರಾಜನ್ನ ನಿಲ್ಲುಸ್ಕಳ್ಳಿ’ ಎಂದು ಸೆರಗು ಒದರಿ ಹೊರಡಲು ಸಿದ್ಧವಾಗಿದ್ದಳು.

‘ಅಯ್ಯೋ ಮಲ್ಲಾಜಕ್ಕ ನಿಂಗ ಅರ್ಥ ಆಗಲ್ಲ... ಈ ಸಲ ಎರಡ್ನೇ ಬ್ಲಾಕು ರಿಸರ್ವೇಸನ್ನು ನಮ್ ಜಾತಿ ಲೇಡೀಸ್‌ಗೇ ಇರೋದು... ಮೊದಲೆಲ್ಲ ಊರು ಕೇರಿ ಅಂತ ಬಾಯಿ ಜೋರ್ ಮಾಡ್ಕಂಡು ಓಡಾಡ್ಕಂಡು ಇದ್ದವಳು ನೀನಿಯಾ... ಎಲ್ಲರ ಎದುರ್ಗೂ ಜಯಿಸ್‌ಕಂಡು ಬಂದಿರೋ ನಿನ್ ಜಾಗಕ್ಕ ನಿನ್ನ ಮಗ ಹೆಂಗಾದನು..?’ ಎಂದು ಅವಳನ್ನ ಒಪ್ಪಿಸುವ ಮಾತಾಡಿದರು. ‘ಚಿಕ್ಕಿ ಅವರ್ಯಾರು ಬೇರೆಯವರಾ? ನಮ್ಮ ಒಳ್ಳೇದಕ್ಕಲ್ವ ಹೇಳದು’ ಎಂದು ನಿಂಗರಾಜ ಚಿಕ್ಕವ್ವನನ್ನ ಒಪ್ಪಿಸಲು ಪಟ್ಟು ಹಿಡಿದ...
***
ಆ ಸಲ ಗೆದ್ದ ಮಲ್ಲಾಜಮ್ಮ ಮೆಂಬರಾದಳು. ಎಲ್ಲ ಮೆಂಬರುಗಳೂ ಸ್ವಾರ್ಥದಲ್ಲಿ ಮುಳುಗೇಳುತ್ತಿದ್ದಾಗ ಕೇರಿಗೊಂದು ಬೋರು, ಗುಡಿಸಲ್ಲಿರುವವರಿಗೆ ಆಶ್ರಯ ಯೋಜನೆಯಲ್ಲೊಂದು ಮನೆ ಎಂದು ತನ್ನ ಗಡಸು ಧ್ವನಿಯಲ್ಲಿ ಪಟ್ಟು ಹಿಡಿದು ಗ್ರಾಮ ಸಭೆಯಲ್ಲಿ ಗದ್ದಲ ಎಬ್ಬಿಸುತ್ತಲೇ ಗಂಡಸರ ಧ್ವನಿಗಳು ಅಡಗಿದಂತಾಗಿದ್ದವು.

‘ಗಂಡಸಿಗಿಂತ್ಲೂ ಇವಳ್ದೇ ಆರ್ಭಟ ಜಾಸ್ತಿ ಆಯ್ತು’ ಎಂದು ಕೆಲವು ಗಂಡಸರು ಹಲ್ಲು ಮಸೆದಾಗ ಮಚ್ಚು ಮಸೆದುಕೊಂಡು ಬಂದು ಅವಳ ಬೆನ್ನಿಗೆ ನಿಂತವನು ಅವಳ ಅಕ್ಕನ ಮಗ ನಿಂಗರಾಜ. ಮದುವೆಯಾದ ಹೊಸತರಲ್ಲೇ ತನ್ನ ಗಂಡನನ್ನೂ ಅಕ್ಕನನ್ನೂ ಭಾವನನ್ನೂ ಒಂದೇ ದಿನ, ಒಟ್ಟಿಗೇ ಕಳೆದುಕೊಂಡ ಗಳಿಗೆ ಇನ್ನೂ ಅವಳ ಕಣ್ಣ ಪರದೆಯ ಮುಂದೆ ಕಟ್ಟಿದಂತಿದೆ...

ಅಂದು ಅವಳು ಹೊರಗಾಗಿ ಹಟ್ಟಿಯಲ್ಲೇ ಇದ್ದಳು. ತನ್ನ ಅಕ್ಕನೂ ಭಾವನೂ ಕೊಳ್ಳೇಗಾಲದ ಸಂತೆಗೆಂದು ಹೊಂಟು ನಿಂತಿದ್ದರು. ಜೊತೆಯಲ್ಲಿ ಅದಾಗ ತಾನೆ ಮದುವೆಯಾಗಿದ್ದ ಅವಳ ಗಂಡನೂ ಇದ್ದ. ನಾಲ್ಕು ವರ್ಷ ಪ್ರಾಯದ ಅವಳ ಅಕ್ಕನ ಮಗ ನಿಂಗರಾಜ ಅವರ ಜೊತೆಯಲ್ಲೇ ಇದ್ದ. ಎತ್ತಿನ ಗಾಡಿ ಅದೇ ತಾನೇ ಹೊಸದಾಗಿ ರಿಪೇರಿಯಾಗುತ್ತಿದ್ದ ಸೇತುವೆ ಬದಿಯ ಕಿರುದಾರಿಯಲ್ಲಿ ಚಲಿಸಲು ಹೋಗಿ ಬಲಗಡೆಗೆ ಉರುಳಿ ಎಲ್ಲರೂ ಕಾಲುವೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಗಾಡಿಯ ಗೂಟ ಹಿಡಿದುಕೊಂಡು ಎತ್ತುಗಳ ಗೆಜ್ಜೆಗಳ ನಾದಕ್ಕೆ ಕಿಲಕಿಲ ನಗುತ್ತ ನಿಂತುಕೊಂಡಿದ್ದ ನಿಂಗರಾಜ ಗಾಡಿ ಉರುಳಿದ ರಭಸಕ್ಕೆ ಕಾಲುವೆ ಏರಿಯ ಮೇಲಕ್ಕೆ ಎಸೆಯಲ್ಪಟ್ಟಿದ್ದ...! ನಿಂತ ನಿಲುವಿನಲ್ಲೇ ಕಾಲುವೆ ಏರಿಯತ್ತ ಓಡಿ ಹೋಗಿದ್ದ ಮಲ್ಲಾಜಮ್ಮ ಅತ್ತು ಅತ್ತೂ ಸುಸ್ತಾಗಿದ್ದ ನಿಂಗರಾಜನ ಬೆವೆತ ಮುಖವನ್ನು ಎದೆಗೆ ಹುದುಗಿಸಿಕೊಂಡು ಇಡೀ ಮಾಳವೇ ಕಿವಿಯಾಗುವಂತೆ ಭೋರ್ಗರೆದು ಅತ್ತಿದ್ದಳು. ಅಂದಿನಿಂದ ನಿಂಗರಾಜನೇ ಅವಳ ಸರ್ವಸ್ವವಾಗಿದ್ದ. ಹೆತ್ತ ಮಗನಿಗಿಂತಲೂ ಹೆಚ್ಚೆಂಬಂತೆ ಅವನನ್ನೇ ಹಚ್ಚಿಕೊಂಡು ಹಗಲೂ ರಾತ್ರಿ ದುಡಿದು ಅವನ ಉಗುರು ಮೊನೆಯೂ ನೋವಾಗದಂತೆ ನೋಡಿಕೊಂಡಿದ್ದಳು.

***
ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಮರು ವರ್ಷದಲ್ಲೇ ಅಧ್ಯಕ್ಷೆಯಾದ ಮಲ್ಲಾಜಮ್ಮ ತನ್ನ ಎರಡು ವರ್ಷಗಳ  ಅಧಿಕಾರವಧಿಯಲ್ಲೇ ಸಾಕಷ್ಟು ಕೆಲಸ ಮಾಡಿದ್ದಳು. ಅವಳಿಗೆ ಹೆಗಲಾಗಿ ನಿಂತ ನಿಂಗರಾಜನೂ ಎರಡು ಎಕರೆ ಜಮೀನು ಕೊಂಡು, ಪಂಪ್‌ಸೆಟ್ ಮಾಡಿಸಿ ತರಕಾರಿ, ಹಣ್ಣು ಹಂಪಲು ಬೆಳೆಯುತ್ತಾ ನೋಡಿದವರ್ಯಾರೂ ಅವ ಅವಳ ಅಕ್ಕನ ಮಗ, ಇವಳು ಅವನ ಚಿಕ್ಕವ್ವ ಎಂದು ಬೊಟ್ಟು ಮಾಡದಂತಿದ್ದುಕೊಂಡು...

ಮಲ್ಲಾಜಮ್ಮ ನಿಂಗರಾಜನಿಗೆ ಹುಡುಕಿ ಹುಡುಕಿ ಹುಡುಗಿ ತಂದಳು. ಅವಳ ಮನಸ್ಸಲ್ಲಿದ್ದದ್ದು ಒಂದೇ: ನಾನಾದರೂ ಓದಲಿಲ್ಲ ಬರೀಲಿಲ್ಲ... ಅವನಾದರೂ ಓದಲಿ ಅಂದರೆ ಎಸ್ಸೆಲ್ಸಿಗೇ ನಿಂತು ಬಿಟ್ಟ. ಆದರೆ ಬೇಸಾಯದಲ್ಲಿ ಚೆನ್ನಾಗಿ ಗೆಯ್ಮೆಗೆ ನಿಂತುಬಿಟ್ಟಿದ್ದಾನೆ... ಅವನ ಕಷ್ಟಸುಖಕ್ಕೆ ಕೊನೆವರೆಗೂ ನಾನೆಲ್ಲಿರುತ್ತೇನೆ...? ಮಲ್ಲಾಜಮ್ಮನಿಗೆ ಸಿಕ್ಕ ಸೊಸೆ ಪದ್ಮಾವತಿ.

ನೋಡನೋಡುತ್ತಲೇ ಮಲ್ಲಾಜಮ್ಮನಿಗೊಬ್ಬ ಮೊಮ್ಮಗ ರಂಗೇಶ ಬಂದ. ಅತ್ತೆ ಎಂದರೆ ಪದ್ಮಾವತಿಗೂ ಅಕ್ಕರೆ... ನಾಲ್ವರೂ ನಿಂಗರಾಜನ ಹೊಲದ ಹುಣಸೆ ಮರದ ನೆರಳಲ್ಲಿ ಕೂತು ಉಣ್ಣುವಾಗಲೆಲ್ಲ ಎರಡು ವರ್ಷದ ರಂಗೇಶ ಪುಟಾಣಿ ಚಪ್ಪಲಿಗಳನ್ನು ಹೊಲದ ಮಣ್ಣಲ್ಲಿ ಹೊರಳಿಸುತ್ತಾ ಪಂಪ್‌ಸೆಟ್ ಚಿಮ್ಮಿಸುವ ನೀರಿನತ್ತ ನಡೆಯುತ್ತಾನೆ... ‘ಅಯ್ಯೋ ನನ್ನ ಕಂದ’ ಎಂದು ಮಲ್ಲಾಜಮ್ಮ ಎದ್ದುಬಿದ್ದು ಅವನ ಹಿಂದೆ ಓಡುತ್ತಾಳೆ...

***
‘ಈ ಬಾರಿ ಅಧ್ಯಕ್ಷರು, ಉಪಾಧ್ಯಕ್ಷರ ಸೀಟಿನ ಅವಧಿ ಐದು ವರ್ಷವಂತೆ’ ಅಂತ ಊರೆಲ್ಲ ಸುದ್ದಿಯಾಗುತ್ತಲೇ ಎಲ್ಲೆಲ್ಲೂ ಇನ್ನಷ್ಟು ಹುರುಪು ಉರಿಬಿಸಿಲಿನಂತೆ ಹಬ್ಬತೊಡಗಿತ್ತು...
ತರಕಾರಿ, ಸೊಪ್ಪು ಬದಲಿಗೆ ಈ ಸಲ ಕಬ್ಬು ಬೆಳೆದಿದ್ದ ನಿಂಗರಾಜನಿಗೆ ಮೂರು ಲಕ್ಷಕ್ಕೂ ಹೆಚ್ಚು ಹಣ ಬಂದಿದೆ. ಪದ್ಮಾವತಿ ಹಿಂದೆಂದಿಗಿಂತಲೂ ಚುರುಕಾಗಿ ‘ಸ್ತ್ರೀಶಕ್ತಿ  ಸ್ವಸಹಾಯ ಸಂಘ’ಗಳಲ್ಲಿ ಹೆಂಗಸರೊಡನೆ ಒಡನಾಡಿ ಸುತ್ತಮುತ್ತಲಿಗೆಲ್ಲ ಹೊಸ ಕಳೆ ತಂದುಕೊಟ್ಟಿದ್ದಾಳೆ.

ಸೆಕೆಂಡ್ ಪಿಯುಸಿ ಪಾಸಾಗಿರುವ ಅವಳ ಕಂಗಳಲ್ಲಿ ಹೊಸ ಹೊಳಪನ್ನು ಕಂಡ ಸಂಘಗಳ ಹೆಂಗಸರೂ ‘ಅಯ್ಯೋ ನಮ್ಮ ಪದ್ಮಾವತಿ ಬೇಕಾದ್ರೆ ಹೇಳು’ ಎನ್ನುವಂತಾಗಿದ್ದಾಳೆ.ಚಿಕ್ಕವ್ವನ ಹಳೆಯ ಮನೆಯ ಪಕ್ಕದಲ್ಲೇ ನಿಂಗರಾಜ ಹೊಸದೊಂದು ಪುಟ್ಟ ತಾರಸಿ ಮನೆ ಕಟ್ಟಿದ್ದಾನೆ. ಅಲ್ಲೇ ಟೈಲ್ಸ್, ಎಲ್‌ಸಿಡಿ ಟೀವಿ ಬಂದಿವೆ...

ಹಿಂದೆಂದೂ ಕಾಣದ ಹೊಸ ಸುಖದ ಹೆಜ್ಜೆಗಳನ್ನು ಗದ್ದೆಯ ತೆವರುಗಳಲ್ಲಿ ಇಡತೊಡಗಿದ ನಿಂಗರಾಜನಿಗೆ ಇಡೀ ಊರೇ ನನ್ನತ್ತ ತಿರುತಿರುಗಿ ನೋಡುತ್ತಿದೆ ಎನ್ನಿಸತೊಡಗಿದೆ.ಹೆಂಡತಿಯ ಬುದ್ದಿವಂತಿಕೆ, ಮಾತುಗಾರಿಕೆ, ಹೆಂಗಸರನ್ನೆಲ್ಲ ಗುಂಪುಗೂಡಿಸುವ ಪರಿ ಎಲ್ಲವೂ ಅವನನ್ನು ತಾನೆಂದೂ ಕೇಳರಿಯದ ಲೋಕಕ್ಕೆ ಎಳೆಎಳೆಯಾಗಿ ಎಳೆಯತೊಡಗಿದೆ..

ಎಂದಿನಂತೆ ಅಂದು ನಿಂಗರಾಜನ ತಾರಸಿ ಮನೆಯ ಅಂಗಳದಲ್ಲಿ ನಡೆದಿದ್ದ ಸ್ತ್ರೀ ಶಕ್ತಿ ಸಂಘದ ಮೀಟಿಂಗಿನಲ್ಲಿ ಹೆಂಗಸರೆಲ್ಲರೂ ಪದ್ಮಾವತಿಯೊಂದಿಗೆ ಹೇಳಿ ಹೋಗಿದ್ದು ಇನ್ನೂ ಅವನ ಕಿವಿಯಲ್ಲಿ ಕೊರೆಯುತ್ತಿದೆ... ‘...ನಮ್ ಬೀದೀಲಿ ನಿಂಗಿಂತಲೂ ಓದಿರೋರು ಇನ್ಯಾರಿದ್ದಾರು ಪದ್ಮ...? ನಿನ್ನ ಗಂಡನೂ ಎಲ್ಲರ ಜೊತೆಲೂ ಓಡಾಡ್ಕಂಡು ಜನ ಸಂಪಾದ್ನೆ ಮಾಡವ್ನ...‘

ಪದ್ಮಾವತಿ: ನಮ್ಮತ್ತೆನೂ ನಿಂತ್ಕಳಲ್ವಾ?
ಹೆಂಗಸರು: ಛೆ ಪಾಪಾ... ಅವರು ಹೋದ ಸಲನೇ ನನ್ನ ಮಗ ನಿಂತ್ಕಳ್ಳಿ ಅಂತಿದ್ರು... ಈ ಸಲ ಲೇಡೀಸ್ ಮೀಸಲಂತಲ್ಲಾ... ನಿನ್ ಬ್ಯಾಡ ಅಂದಾರಾ?

ಮೊನ್ನೆ ಬಸವನಗುಡಿಯಲ್ಲಿ ಹರಟುತ್ತಾ ಕುಳಿತಿದ್ದ ನಿಂಗರಾಜನ ಸ್ನೇಹಿತರೂ ಇದೇ ವಿಚಾರವನ್ನೆತ್ತಿದ್ದರು. ಅಂತಹದ್ದೊಂದು ಹೊಳೆಯುತ್ತಲೇ ಗೆಳೆಯರೊಂದಿಗೆ ಕೊಳ್ಳೇಗಾಲದ ಕಡೆಗೆಲ್ಲ ಓಡಾಡಿ ಎಂಎಲ್‌ಎ ಚೆನ್ನಿಂಗಯ್ಯನವರ ಭಾಷಣಗಳ ಗುಂಗಿನಲ್ಲಿ ಮುಳುಗಿ ಹೋಗಿದ್ದು ಅವನಿಗೆ ನೆನಪಾಗಿತ್ತು.

ಚೆನ್ನಿಂಗಯ್ಯನವರು ಭಾಷಣದಲ್ಲಿ ಹೇಳಿದ್ದು ಹೀಗಿತ್ತು: ಮೊದಲು ಹಳ್ಳಿಗಳನ್ನ ಉದ್ಧಾರ ಮಾಡಬೇಕು... ಅದಕ್ಕೇ ಯುವಕರು ರಾಜಕಾರಣಕ್ಕಿಳಿಯಬೇಕು... ಅರ್ಧಂಬರ್ಧ ಓದಿ ಬದುಕು ಹಾಳು ಮಾಡ್ಕೊ ಬದಲು ಅಂಥ ಯುವಕರು ನಮ್ಮೊಂದಿಗೆ ಬರಬೇಕು...

ಅದೇಕೋ ಅಂದು ಚೆನ್ನಿಂಗಯ್ಯನವರು ನನ್ನತ್ತಲೇ ನೋಡಿ ಆ ಮಾತು ಆಡಿದರೇನೋ ಅಂತ ಗೆಳೆಯರು ಎಲೆಕ್ಷನ್ ವಿಚಾರ ಹೇಳಿದ ಮೇಲೆ ಹೊಳೆಯತೊಡಗಿ ನಿಂಗರಾಜನಿಗೆ ರೋಮಾಂಚನವಾದಂತಾಯಿತು. ಅವರ ಬಿಳಿ ಶರ್ಟು, ಬಿಳಿ ಪ್ಯಾಂಟಿನ ಗರಿಮುರಿಯದ ಠೀವಿ, ಗತ್ತು ಗೈರತ್ತು, ಕೆನ್ನೆಯನ್ನು ಒತ್ತಿ ಕೂತ ಕಪ್ಪು ಕನ್ನಡಕ... ಜನರತ್ತ ಕೈಬೀಸುವ ವೈಖರಿ... ಗುಂಪನ್ನು ಭೇದಿಸಿಕೊಂಡು ಹೊರಟುಬಿಟ್ಟ ಕಾರು – ಎಲ್ಲವೂ ಯಾಕೋ ಅತ್ತ ಎಳೆದಂತಾಯಿತು.
***

ಅಷ್ಟರಲ್ಲೇ ಈ ಸಲದ ಎಲೆಕ್ಷನ್‌ನಲ್ಲಿ ಎರಡನೇ ಬ್ಲಾಕ್ ಮಹಿಳೆಗೆ ಮೀಸಲು, ಪುರುಷರಿಗೆ ಅಲ್ಲಿ ಅವಕಾಶವಿಲ್ಲ ಅಂತ ಗೊತ್ತಾಗುತ್ತಲೇ ಚಡಪಡಿಸಿದ್ದ ನಿಂಗರಾಜ. ಆದರೆ ಅವನ ಸ್ನೇಹಿತರು ‘ಅಯ್ಯೋ ನೀನು ನಿಂತ್ಕಳ್ಳೋದು ಬ್ಯಾಡ, ನಿನ್ನ ಹೆಂಡತಿ ಇಲ್ವಾ? ಅವಳು ಗೆದ್ದರೇನ ನೀ ಗೆದ್ದರೇನ...! ಅಧಿಕಾರ ನಿಮ್ದೆ ತಾನೆ? ಅವ್ಳೇನು ದಡ್ಡಿನಾ...ಓದ್ದೋಳಲ್ವ...?’ ಎಂದು ಒತ್ತತೊಡಗಿದರು. ‘ನಮ್ಮ ಚಿಕ್ಕವ್ವ ನಿಂತ್ಗಂಡ್ರ...?’ ‘ಏಯ್ ಏನ ಮಾರಾಯ ನೀನು... ಹೋದ ಸಲವೇ ನಿನ್ನೇ ನಿಲ್ಸಿ ಅನ್ಲಿಲ್ವ... ವಯಸ್ಸಾಗದ... ಅವಳೇನು ಮಾಡೀಳು?’

***
ಅತ್ತ ಮಲ್ಲಾಜಮ್ಮನಿಗೂ ನಿದ್ದೆ ಬಾರದು. ಪುಟ್ಟಸಿದ್ದ, ಸುನಂದಯ್ಯ, ಬೋರಚಿಕ್ಕ ಹೇಳಿದ್ದೆಲ್ಲವೂ ನೆನಪಾಗಿ ಕಣ್ಣುಗಳು ನಿಂಗರಾಜನ ಇಂದಿನ ಸ್ಥಿತಿಯನ್ನೇ ಕಲ್ಪಿಸಿ ಹಲವು ಚಿತ್ರಗಳನ್ನು ಮೂಡಿಸಿದವು.

‘ಮಲ್ಲಾಜಕ್ಕ... ನಿಮ್ಮಕ್ಕನ ಮಗ ನಿಂಗರಾಜ ಮೊದಲಿಂತರ ಅಲ್ಲ... ಈಗಾಗ್ಲೇ ನಿಂಗೇ ಗೊತ್ತಿಲ್ದೆ ಜಮೀನ್ ಮೇಲೆ ಸಾಲ ಮಾಡ್ಕಂಡು ಕುಂತವ್ನ... ನೀನೇ ಮೊದ್ಲು ಹೇಳ್ತಿರ್ಲಿಲ್ವ ಸೊಪ್ಪು ತರಕಾರಿನೇ ಸಾಕು ಹೊಟ್ಟೆಪಾಡ್ಗೆ ಅಂತ... ಈಗ ಅವುನ್ಗ ಅದೆಲ್ಲ ಬೇಕಾಗಿಲ್ಲ... ಕಬ್ಬನ್ನೇ ಬೆಳಿತೀನಿ, ಶುಂಠಿ ಹಾಕ್ತೀನಿ... ಬೆಳೆಯೋರ್ಗೆ ಜಮೀನನ್ನ ಗುತ್ತಿಗೆಗೆ ಕೊಡ್ತೀನಿ ಅಂತ ಏನೇನೊ ಮಾಡ್ತಾ ಅವ್ನಪ್ಪ... ಈ ಸಲ ಹೆಂಡ್ತಿನಾ ಎಲೆಕ್ಸನ್ನುಗ ಬ್ಯಾರೆ ನಿಲ್ಲುಸ್ತಿನಿ ಅಂತಿದಾನಂತ... ದುಡ್ಡೆಲ್ಲಿಂದ ತತ್ತೀಯಪ್ಪ ಎಲೆಕ್ಷನ್‌ಗೆ ಅಂದ್ರ ಜಮೀನಿಲ್ವ ಅಂತಾನಂತ...

ನೀನು ಹಿಂಗೇ ಬುಟ್ರ ನಿನ್ನ ಮಗ ನೀನು ಕೇರೀಲಿ ಉಳಿಸ್ಕಂಡಿರ ಹೆಸುರ್ನೂ ಮಣ್ ಮಾಡ್ಬುಡ್ತಾನಾ... ನೀನು ಉಳಿಸಿರೋ ಜಮೀನನ್ನೂ ಕಳದ್‌ಬುಡ್ತಾನಾ... ಒಂದ್ ಕೆಲಸ ಮಾಡು, ನೀನು ನಿನ್ನ ಸೊಸ ಎದುರ್ಗೇ ಎಲೆಕ್ಷನ್‌ಗ ನಿಂತ್ಕಾ... ನೋಡೇ ಬುಡಂವು ನಿನ್ನ ಒಳ್ಳೇತನ ಗೆದ್ದದಾ ಇಲ್ಲ ನಿನ್ನ ಮಗನ ಕೆಟ್ಟ ಬುದ್ಧಿ ಗೆದ್ದದಾ ಅಂತಾ... ನೀನು ಎಲಕ್ಷನ್‌ಗ ನಿಂತ್ಕಂಡ್ರ ನಿನ್ನ ಸೊಸ ಖಂಡಿತಾ ನಿಲ್ಲಲ್ಲ... ನಾವು ಸಪೋಟ್ ಮಾಡ್ತೀವಿ.. ನಿನ್ನ ಜಮೀನೂ ಉಳೀತದ, ನಿಂಗರಾಜನೂ ಉಳೀತಾನಾ..!’.

ಸುಮ್ಮನೇ ಆಲೋಚಿಸುತ್ತಲೇ ಮಲ್ಲಾಜಮ್ಮನ ಮುಖದ ಮುಂದೆ ತಾನೆಂದೂ ಮಲಮಗನೆಂದು ಎಣಿಸದ ನಿಂಗರಾಜನೂ ಅವಳ ಸೊಸೆ ಪದ್ಮಾವತಿಯೂ ಅವಳ ಮೊಮ್ಮಗ ರಂಗೇಶನೂ ಸದಾ ಹೊಳಪಿನಲ್ಲಿ ನಗುತ್ತಿರುವ ಮುಖಗಳಂತೆ ಕಂಗೊಳಿಸಿದರು. ಆದರೂ ತಾನೇತಾನಾಗಿ ತನ್ನ ನಿಂಗರಾಜನಲ್ಲಿ ಕಾಣತೊಡಗುತ್ತಿರುವ ಬದಲಾವಣೆಗಳನ್ನು ಒಕ್ಕಡೆಯಿಂದ ಎಣಿಸತೊಡಗಿದಳು.

ಈವರೆಗೂ ನಿಂಗರಾಜನನ್ನ ತಾನು ಯಾವತ್ತೂ ಹಣಕಾಸಿನ ಲೆಕ್ಕಾಚಾರ ಕೇಳಿಲ್ಲ, ಜಮೀನಿನಲ್ಲಿ ಉತ್ತಿದ್ದೇನು, ಬೆಳೆದದ್ದೇನು ಅನ್ನಲಿಲ್ಲ. ಹೆತ್ತ ತನ್ನವ್ವನಿಗಿಂತಲೂ ನನ್ನನ್ನ  ಹಂಬಲಿಸುತ್ತಾನೆಂಬುದು ಅವಳಿಗೆ ಗೊತ್ತು. ಆದರೂ ಕೇರಿಯ ಒಬ್ಬೊಬ್ಬರೂ ಹೇಳತೊಡಗಿದ ಮಾತುಗಳು ಒಂದಕ್ಕೊಂದು ತೂಗತೊಡಗಿದ್ದವು.

***
ಸೊಸೆ ತನ್ನೆದುರು ಯಾವತ್ತೂ ಹಿಂಗೆ ಮಾತಾಡಿಲ್ಲವೆನ್ನಿಸಿತ್ತು ಅಂದು ಮಲ್ಲಾಜಮ್ಮನಿಗೆ. ‘ನಿಂಗ ವಯಸ್ಸಾಗದ ಅಂತ ಮರ್ಯಾದಿ ಕೊಟ್ಕಂಡು ಬಂದದ್ಕ ನನ್ನ ಮ್ಯಾಲೇ ಬಂದಯಾ..? ನಾನು ಈ ಸಲ ಎಲೆಕ್ಷನ್‌ಗ ನಿಂತೇಗತೀನಿ ಅದ್ಯಾನ್ ಕಿತ್ಕಂಡಿಯಿ ನೋಡೇಬುಡ್ತೀನಿ...!’ ಸೊಸೆಯ ಮಾತು ಅವಳಲ್ಲಿ ಇನ್ನಿಲ್ಲದ ಕಿಚ್ಚು ಹುಟ್ಟಿಸಿತ್ತು.

***
ಚಾನೆಲ್‌ಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ ಪೇಪರ್‌ಗಳಲ್ಲಿ ‘ಅತ್ತೆ ಸೊಸೆಯರಿಬ್ಬರೂ ಚುನಾವಣಾ ಕಣಕ್ಕೆ’ ಎಂಬ ಪುಟ್ಟ ಸುದ್ದಿಗಳು ಅಲ್ಲಲ್ಲಿ ಗಮನ ಸೆಳೆಯತೊಡಗಿದ್ದವು.ನಿಂಗರಾಜನಿಗೆ ಚಿಕ್ಕವ್ವನ ಮುಖ ಎದುರಿಸಲಾಗದ ನಡುಕ; ಹೆಂಡತಿಗೂ ಹೇಳಲಾರದ ಅಳುಕು. ಇಬ್ಬರ ನಡುವೆಯೂ ಎಳೆಯಲಾರದ ನೊಗ ಹೊತ್ತವನಂತೆ ಕುಡಿದೂ ಕುಡಿದು ಕಾಲು ಜೋತು ಬಿದ್ದು ಸೆಟೆದುಕೊಂಡವನನ್ನು ಊರವರು ಎಳೆದುತಂದು ಹಟ್ಟಿಯ ಮುಂದೆ ಕೆಡವಿದ್ದರೂ ಇನ್ನೂ ಪೇಚಾಡುತ್ತಲೇ ಇದ್ದ.
‘ಏಯ್! ನನ್ನ ಮಕ್ಳಾ... ನನ್ನ ಚಿಕ್ಕವ್ವ ಗೊತ್ತಾ ಬಡ್ಡೆತ್ತವ ನಿಮ್ಗಾ... ಅವಳು ಗುಡಸಟ್ಟಿನಾ... ನಿಮ್ಮವ್ವರ್ನಾ..!’

ಕರೆಂಟು ಹೋಗಿತ್ತು. ಮಲ್ಲಾಜಮ್ಮ ಟಾರ್ಚು ಹಿಡಿದು ಪದ್ಮಾವತಿಯನ್ನು ಎಬ್ಬಿಸಲು ಎದುರಿನ ಹಟ್ಟಿಯ ಬಾಗಿಲು ತಟ್ಟಲು ಕೈ ಇಟ್ಟೊಡನೇ ತೆರೆದುಕೊಂಡಿತು... ಪದ್ಮಾವತಿಗೆ ತುಂಬು ನಿದ್ದೆ. ಮೊಮ್ಮಗ ರಂಗೇಶ ನರಳುತ್ತಿದ್ದುದನ್ನು ಗಮನಿಸಿ ‘ಪದ್ದೂ... ಪದ್ದೂ’ ಎಂದು ಕೂಗಿದಳು; ತುಂಬುನಿದ್ದೆಯಲ್ಲಿದ್ದ ಅವಳಿಂದ ಒಂದು ದನಿಯೂ ಇಲ್ಲ. ಹತ್ತಿರ ಹೋಗಿ ಅವಳ ತೋಳು ಹಿಡಿದು ಅಲುಗಿಸಲೂ ಅವಳಿಗೆ ಮನಸ್ಸಿಲ್ಲ...

ಮೊಮ್ಮಗನನ್ನು ಹೆಗಲಿಗೆ ಅವುಚಿಕೊಂಡು ಹಟ್ಟಿಗೆ ಬಂದವಳೇ ಚಿಲಕ ಹಾಕುವುದನ್ನೂ ಮರೆತು ಜ್ವರದಿಂದ ಮಲಗುತ್ತಿದ್ದ ಕಂದನಿಗೆ ಗುಟುಕು ಬಿಸಿನೀರು ಕುಡಿಸಿ ಬಟ್ಟಲಲ್ಲಿ ಬಟ್ಟೆ ಅದ್ದಿ ಹಣೆಗೆ ಇಟ್ಟು ಮೆಲ್ಲಗೆ ಮೊಮ್ಮಗನ ಕೆನ್ನೆ ನೇವರಿಸುತ್ತಾ ‘ಇಷ್ಟೊತ್ಲಿ ನಾ ಎಲ್ಲಿಗೋಗಲಿ ಸಿವನೇ... ನನ್ನ ಕಂದನ ಜ್ವರ ಇಳಿಸು ಭಗವಂತ’ ಎಂದು ರಂಗೇಶನನ್ನು ತೋಳ ಮೇಲೆ ಒರಗಿಸಿಕೊಂಡು ಹಾಗೇ ತೂಗುತ್ತಾ ತೂಕಡಿಸತೊಡಗಿದಳು...

***
ಬೆಳಗಾದರೆ ನಾಮಪತ್ರ ಸಲ್ಲಿಕೆ.

‘ಅಯ್ಯೋ ಅವಳು ನಾಮಿನೇಷನ್ ಮಾಡೋಕು ಮುಂಚೆಯೇ ಅವಳ್ನಾ ಬಾಯಿ ಕಟ್ಟಿ ಹೊಲಕ್ಕೋ ಮಾಳಕ್ಕೋ ಎತ್ತಾಕಂಡು ಹೋಗು... ಮೂರ್ನಾಕು ದಿನ ಅಲ್ಲೇ ಬಿದ್ದಿರ್ಲಿ... ನಂ ಚಿಕ್ಕಿ ನನ್ನ ಸೊಸೆ ಗೆಲ್ಲಲಿ ಅಂತ ಧರ್ಮಸ್ಥಳಕ್ಕ ದೇವರ್ ಮಾಡಕ್ಕೋಗಳ ಅಂತ ಊರವರ್ಗ ಹೇಳಿದ್ರಾಯ್ತು...’ ಅಂತ ಪದೇ ಪದೇ ಹೇಳುತ್ತಲೇ ಇದ್ದ ಸಿದ್ದಮಲ್ಲನ ಮಾತು ಎದೆಯನ್ನು ಇಂಚಿಂಚು ಕೊಚ್ಚತೊಡಗಿ ತೂರಾಡುತ್ತಲೇ ಎದ್ದು ನಿಂತ ನಿಂಗರಾಜ ಹಟ್ಟಿಯ ಬಾಗಿಲು ನೂಕಿದ.

ಮುದ್ದೆಯಾಗಿ ನಾಕಾರು ರಗ್ಗುಗಳಲ್ಲಿ ಮಲಗಿದ್ದ ಆಕೃತಿಗಳಲ್ಲೊಂದನ್ನು ಹೊತ್ತುಕೊಂಡವನೇ ಬಾಗಿಲೆಳೆದುಕೊಂಡು, ಕಾಲೆಳೆದುಕೊಂಡು ಹೊರಟ. ಮಗನನ್ನು ಅರೆಗತ್ತಲಲ್ಲಿ ಕಂಡ ಮಲ್ಲಾಜಮ್ಮ ಕೋಣೆಯಲ್ಲಿ ನೀರು ಕುಡಿಯುವುದನ್ನೂ ಮರೆತವಳಂತೆ ‘ಅದಕ್ಕ ಜ್ಯರ ಬಂದು ನರಳ್ತದಾ... ಎಲ್ಲೋಗಿದ್ದ ನೀನು... ಇವತ್ತು ಇಲ್ಲೇ ಮಲಿಕ್ಕಳ್ಲಿ ಬುಡು...’ ಎಂದು ಆಕಳಿಸುತ್ತಾ ಹೊಸ್ತಿಲವರೆಗೂ ಬಂದಳು.

ತನ್ನದೇ ಅಮಲಿನ ತೇಲಾಟದಲ್ಲಿದ್ದ ನಿಂಗರಾಜನಿಗೆ ಅದು ಕೇಳಿಸದೆ ತನ್ನಪಾಡಿಗೆ ಅಷ್ಟೂ ರಗ್ಗುಗಳ ಒಳಗೆ ಅಡಗಿದ್ದ ಆಕೃತಿಯನ್ನು ಹೊತ್ತು ಗೂಡ್ಸ್ ಆಟೋದೊಳಕ್ಕೆ ಕೆಡವಿ ಸ್ಟಾರ್ಟ್ ಮಾಡಿದ. ಸಿದ್ದಮಲ್ಲ ‘ನಿಮ್ಮ ಚಿಕ್ಕವ್ವನ ಮೊಕಕ್ಕ ನಾನು ಔಷದಿ ಹೊಡ್ದೀನಿ ಎದುರ್ಕಬ್ಯಾಡ...’ ಎಂದಿದ್ದ ಮಾತು ಅವನಲ್ಲಿ ಧೈರ್ಯ ತುಂಬಿತು.

***
‘ನನ್ನಿಂದ ನನ್ನ ಮೊಮ್ಮಗುನ ದೂರ ಮಾಡೋಷ್ಟು ಕಟುಕತನವಾ ನಿಂಗರಾಜನಿಗೆ? ನನ್ನ ಮೊಮ್ಮಗುಗಿಂತ ಅವುನ್ಗ ಎಲೆಕ್ಷನ್ನೇ ಹೆಚ್ಚಾ? ಅದ್ಯಾವುದೂ ಬ್ಯಾಡ, ನಂಗ ನನ್ನ ಮೊಮ್ಮಗು ಬೇಕು’ ಅಂತ ಹತ್ತಾರು ಬಾರಿ ಕಂಗೆಟ್ಟು, ಎದ್ದು ಕೂತು ಒದ್ದಾಡಿ ಕಣ್ಣೀರಾಗಿದ್ದ ಮಲ್ಲಾಜಮ್ಮನನ್ನು ಸುನಂದಯ್ಯ, ಬೋರಚಿಕ್ಕ ಇನ್ಯಾರ್ಯಾರೋ ಸಮಾಧಾನ ಮಾಡುತ್ತಲೇ ಇದ್ದರು...

‘ನೀನು ನಡಿಯಕ್ಕ... ನಾವು ನೋಡ್ಕತೀವಿ... ಇವತ್ತು ನಾಮಿನೇಸನ್ನು ಲಾಸ್ಟು... ನಿಂಗರಾಜ ಅತ್ತೆ ಮನಲಿ ತನ್ನ ಮಗನ್ನ  ಕರ್ಕಂಡೋಗಿ ಬುಟ್ಟಿದ್ದಾನಂತ...’ ಎಂದು ಏಳಿಸಿದರು.

***
‘ಲೇ ಪದ್ಮಾ... ರೆಡಿ ಆದ್ಯಾ..? ಹೊತ್ತಾಯ್ತದಾ... ಲೇಟಾದ್ರಾ ರಶ್ಶಾಯ್ತಾದ... ಎಲ್ಲ ಈಚ ಕಾಯ್ಕಂಡವರಾ...’ ಅಂತ ನಿಂಗರಾಜ ಬಡಬಡಾಯಿಸುತ್ತಲೇ ಇದ್ದ.
ಸೀರೆಯ ನೆರಿಗೆಗೆ ಪಿನ್ನು ಸಿಕ್ಕಿಸಿಕೊಳ್ಳುತ್ತಲೇ ಆತಂಕದಲ್ಲಿದ್ದ ಪದ್ಮಾವತಿ, ‘ಅಯ್ಯೋ ಇರೀ ನೀವು... ರಂಗೇಶ ಅದೆಲ್ಲೋ ಬೆಳಗಿಂದಲೂ ಕಾಣ್ತಿಲ್ಲ... ಹೊಟ್ಟೆಗೂ ತಿಂದಿಲ್ಲ...’ ಅಂತ ನಿಧಾನಿಸತೊಡಗಿದಳು. ರಾತ್ರಿ ಯಾವುದೋ ಹೊಗೆಯ ಘಾಟು ತನ್ನ ಮುಖಕ್ಕೆ ರಾಚಿದಂತಾಗಿ ಪ್ರಜ್ಞೆ ತಪ್ಪುವಂತಾಗಿ ಥಟ್ಟನೆ ಎದ್ದು ವಾಂತಿ ಮಾಡಿ, ಮುಖ ತೊಳೆದು, ನೀರು ಕುಡಿದು ಸುಸ್ತಾಗಿ ಮಲಗಿದ್ದನ್ನು ಗಂಡನಿಗೆ ಹೇಳಲೋ ಬೇಡವೋ ಎಂಬಂತೆ ತಡಬಡಾಯಿಸಿದಳು.

‘ರಂಗೇಶ ಇಲ್ಲೇ ಎಲ್ಲೋ ಹೈಕಳ ಜೊತ ಆಡ್ಕಾತಾ ಅವ್ನ ಅನ್ನಂಗದ... ನೀ ಹೊರಡು...ಮೆರವಣಿಗೇಲಿ ಹೋಗ್ಬೇಕು...’ ಅಂತ  ಅವಸರಿಸತೊಡಗಿದ. ಒಂದೆಡೆ ಅವನ ತುರ್ತಿನಲ್ಲಿಯೂ ಇನ್ನೊಂದೆಡೆ ರಂಗೇಶ ಕಾಣದ ದುಗುಡದಲ್ಲಿಯೂ ಹೆಜ್ಜೆ ಇಟ್ಟ ಪದ್ಮಾವತಿಗೆ ಸಂಘದ ಹೆಂಗಸರೆಲ್ಲ ಒಂದೇ ಬಗೆಯ ಸೀರೆಯುಟ್ಟು ತನ್ನನ್ನೇ ಎದುರು ನೋಡುತ್ತಿರುವಂತೆ ಅನ್ನಿಸಿ, ಮೆರವಣಿಗೆಯಲ್ಲಿ ಕೇರಿಯ ಜನ ನನ್ನ ಕೇಂದ್ರೀಕರಿಸಿ ಸಂಭ್ರಮಿಸುತ್ತಿದ್ದಾರೆ ಎಂದೆನ್ನಿಸಿದ ಎಂತಹುದೋ ಸಂತಸ ಮೈಹೊಕ್ಕಿದಂತಾಯಿತು.

***
ನಾಮಪತ್ರಕ್ಕೆ ಸೈನು ಮಾಡಿ ಪದ್ಮಾವತಿ ಹೊರಡಲು ತಿರುಗುವುದಕ್ಕೂ ಪಂಚಾಯಿತಿ ಆಫೀಸಿನ ಹೊಸ್ತಿಲು ದಾಟಿ ಮಲ್ಲಾಜಮ್ಮ ಎದುರಾಗುವುದಕ್ಕೂ ಸರಿಹೋಯಿತು! ಹೆಂಡತಿಯ ಹಿಂದೆಯೇ ಉತ್ಸಾಹದ ಹೆಜ್ಜೆ ಇಟ್ಟಿದ್ದ ನಿಂಗರಾಜ ಚಿಕ್ಕವ್ವನ ಮುಖ ಕಂಡು ಸಿಡಿಲು ಎದೆಗೊದ್ದವನಂತೆ ಒಣಗಿದ ಬಾಯಿ ಅಗಲಿಸಿ ನೋಡತೊಡಗಿದ್ದ.

ಪಂಚಾಯಿತಿ ಆಫೀಸಿನ ಹೊರಗೆ ಅದಾಗಲೇ ಗದ್ದಲ ಶುರುವಾಗಿತ್ತು. ನಾಮಪತ್ರ ಸಲ್ಲಿಸಿದವರು, ಅವರ ಸುತ್ತಮುತ್ತಲಿನ ಬೆಂಬಲಿಗರ ಮಾತು, ನೂಕಾಟ, ನಗೆಗಳ ನಡುವೆಯೇ ಸಿದ್ದಮಲ್ಲ ಏದುಸಿರು ಬಿಟ್ಟುಕೊಂಡು ನಿಂಗರಾಜನ ಬಳಿ ಬಂದವನೇ ಮೆಲ್ಲಗೆ ಹೇಳುವಂತೆ ಹೇಳಿದರೂ ಎಲ್ಲರಿಗೂ ಅದು ಕೇಳಿಸಿತು: ‘ಅಯ್ಯೋ ನಿನ್ನ ಜಮೀನ್ನಲ್ಲಿ ನಿನ್ನ ಮಗನ್ನ ಯಾರೋ ಬಿಸಾಕ್ಬುಟ್ಟು ರಾತ್ರಿಯೆಲ್ಲ ಕೂಸು ಒದ್ದಾಡಿ ನಾಯಿಗಳು ಕಚ್ಚಾಕವ... ಕೂಸ್ನ ನಾನೇ ಆಸ್ಪತ್ರಗ ಸೇರುಸ್ಬುಟ್ಟು ಬಂದಿವ್ನಿ...!’. ಸಿದ್ದಮಲ್ಲನ ಮಾತುಗಳು ಕಿವಿಗೆ ಬೀಳುತ್ತಲೇ ಪದ್ಮಾವತಿಯೂ ಮಲ್ಲಾಜಮ್ಮನೂ ಕೂಗಿಕೊಂಡು ಪ್ರಜ್ಞೆ ತಪ್ಪಿದವರಂತೆ ಒಬ್ಬರನ್ನೊಬ್ಬರು ಒರಗಿಕೊಂಡರು.

***
ಡಾಕ್ಟರು ಹೊರಬರುತ್ತಲೇ ನಿಂಗರಾಜ ಅಳುಗಣ್ಣಲ್ಲಿ ಅವರ ಮುಖ ನೋಡಿದ; ಅವರ ಕಾಲಿಗಾದರೂ ಬಿದ್ದು ಬೇಡಿಕೊಳ್ಳಲೆ ಎಂದು ಅವನಿಗೆ ಅನ್ನಿಸತೊಡಗಿತ್ತು. ‘ನೋಡೋಣ ಇವ್ರೆ... ನಿಮ್ಮ ಅಮ್ಮ, ಮಿಸೆಸ್ ಚೆನ್ನಾಗಿದಾರೆ... ಪಾಪು ಕಂಡೀಷನ್ ಹೇಳೋಕ್ಕಾಗಲ್ಲ... ನಾಯಿಗಳು ತುಂಬಾ ಕಚ್ಚಿರೋದ್ರಿಂದ ತುಂಬಾ ಗಾಯಗಳಾಗಿವೆ... ಇನ್ನೆರಡು ದಿನ ಆಗ್ಲಿ...’ ಎಂದವರೇ ಮೆಟ್ಟಿಲೇರತೊಡಗಿದರು.

ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ 2016-ತೀರ್ಪುಗಾರರು ಮೆಚ್ಚಿದ ಕಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT