ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚದಿಂದ ಬಿಡಿಸಿದ ಸಿನಿಮಾ! ‘ಲವಿಂಗ್ ವಿನ್ಸೆಂಟ್’

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅದು 1890ರ ಜುಲೈ 29. ಫ್ರಾನ್ಸ್‌ನ ಸಣ್ಣಹಳ್ಳಿಯ ಬೀದಿಯೊಂದರಲ್ಲಿ ಒಬ್ಬಾತ ಕೈಕಟ್ಟಿಕೊಂಡು ನಡೆಯುತ್ತಿದ್ದಾನೆ. ಇದ್ದಕ್ಕಿದ್ದಂತೆ ಬಂದೂಕಿನ ಸದ್ದು. ಕಣ್ಣುಮುಚ್ಚಿ ಬಿಡುವುದರೊಳಗೆ ಆ ವ್ಯಕ್ತಿಯ ಹೊಕ್ಕಳು ಸೀಳಿ ಗುಂಡು ಆಚೆ ಬರುತ್ತದೆ. ಹಾಗೆ ಸತ್ತುಹೋದ ವ್ಯಕ್ತಿ ವಿನ್ಸೆಂಟ್ ವ್ಯಾನ್ ಗೋ. ಮುಂದೊಂದು ದಿನ ಇಡೀ ಜಗತ್ತು ಕೊಂಡಾಡಿದ ಮಹಾನ್ ಕುಂಚಕಲಾವಿದ.

ತನ್ನ ಜೀವನದುದ್ದಕ್ಕೂ ಅಷ್ಟೇನೂ ಖ್ಯಾತಿಗೆ ಬಾರದ, ಬಡತನದಲ್ಲಿಯೇ ಬದುಕು ಸವೆಸಿದ ಈ ಡಚ್ ಕಲಾವಿದ ಅದ್ಯಾಕೆ ಅಂಥ ಕೆಟ್ಟ ಅಂತ್ಯ ಕಂಡ? ಅವನದು ಆತ್ಮಹತ್ಯೆಯೇ, ಕೊಲೆಯೇ? ಕೊಲೆಯೇ ಆಗಿದ್ದರೆ ಅವನನ್ನು ಕೊಂದವರು ಯಾರು? ಈ ರಹಸ್ಯ ಸಂಗತಿಗಳನ್ನು ಹೊತ್ತು ಬರುತ್ತಿದೆ ‘ಲವಿಂಗ್ ವಿನ್ಸೆಂಟ್’ ಸಿನಿಮಾ.

‘ಲವಿಂಗ್ ವಿನ್ಸೆಂಟ್’ ಕುಂಚಕಲೆಯಿಂದಲೇ ತಯಾರಾದ ವಿಶ್ವದ ಮೊದಲ ಅನಿಮೇಟೆಡ್ ಚಲನಚಿತ್ರ. ಹಾಲಿವುಡ್ ನಟರನ್ನೋ ಯೂರೋಪಿನ ಕಲಾವಿದರನ್ನೋ ಬಳಸಿ ಚಲನಚಿತ್ರ ಪೂರ್ಣಗೊಳಿಸಬಹುದಾಗಿದ್ದ ‘ಬ್ರೇಕ್ ಥ್ರೂ’ (‘ಪೀಟರ್ ಅಂಡ್ ದ ವೂಲ್ಫ್’ ಚಿತ್ರಕ್ಕಾಗಿ ಆಸ್ಕರ್ ಗೌರವ ಪಡೆದ ಸಂಸ್ಥೆ ಇದು) ಚಿತ್ರ ತಯಾರಿಕೆ ಸಂಸ್ಥೆ ಹಿಡಿದದ್ದು ಭಿನ್ನ ಹಾದಿಯನ್ನು. ವ್ಯಾನ್ ಗೋನ ಪ್ರಧಾನ ಕಲಾಕೃತಿಗಳನ್ನು ಮುಂದಿಟ್ಟುಕೊಂಡು ಸಂಸ್ಥೆ ಚಂದದ ಕಥೆ ಕಟ್ಟಿದೆ. ವ್ಯಾನ್ ಗೋ ಬಿಡಿಸಿದ ಮೂಲ ಪೇಂಟಿಂಗ್‌ಗಳೇ ಎದ್ದುಬಂದು ಸಿನಿಮಾದಲ್ಲಿ ಕಥೆ ಹೇಳುತ್ತಿರುವಂತಿದೆ.

ನೂರಾರು ಕುಂಚಕಲಾವಿದರು ಒಂದೆಡೆ ಸೇರಿ 62,450 ತೈಲಚಿತ್ರಗಳನ್ನು ಇದಕ್ಕೆಂದೇ ತಯಾರಿಸಿದ್ದಾರೆ. ಹಾಗಾಗಿ ‘ಇಲ್ಲಿ ನಡೆಯುತ್ತಿರುವುದು ಮುಂದೆಂದೂ ನಡೆಯುವುದಿಲ್ಲ’ ಎಂದು ನಿರ್ಮಾಪಕ ಹ್ಯೂಗ್ ವೆಲ್ಚ್‌ಮನ್ ಬಣ್ಣಿಸಿದ್ದಾರೆ.

‘ಕುಂಚದ ಪ್ರತಿಯೊಂದು ಸ್ಟ್ರೋಕ್ ಜೀವ ತಳೆದು ಚಲಿಸುತ್ತದೆ. ಅನುಮಾನವೇ ಇಲ್ಲ – 120 ವರ್ಷಗಳ ಸಿನಿಮಾ ಇತಿಹಾಸದಲ್ಲಿ ಸಿನಿಮಾದ ಪ್ರತಿಯೊಂದು ಫ್ರೇಮನ್ನೂ ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದ ಬಹಳ ನಿಧಾನಗತಿಯ ಸಿನಿಮಾ ಇದೊಂದೇ!’ ಎಂದು ಚಿತ್ರತಂಡ ಉದ್ಗಾರ ತೆಗೆದಿದೆ. ಅದು ನಿಜವೂ ಹೌದು. ಚಿತ್ರಕ್ಕೆಂದು ವಿಶೇಷ ತಂತ್ರಾಂಶಗಳನ್ನು ರೂಪಿಸಲಾಗಿದೆ. ಬ್ರೇಕ್ ಥ್ರೂ ಅಂದುಕೊಂಡಿದ್ದು ನಾಲ್ಕು ವರ್ಷಗಳ ಯೋಜನೆ ಎಂದು. ಆದರೆ ಚಿತ್ರ ಪೂರ್ಣಗೊಳ್ಳಲು ಹಿಡಿದದ್ದು ಒಟ್ಟು ಐದು ವರ್ಷಗಳು. ಎಲ್ಲವೂ ಅಂದುಕೊಂಡಂತೆ ನಡೆದರೆ 2017ರಲ್ಲಿ ‘ವಿನ್ಸೆಂಟ್’ ಪ್ರೇಕ್ಷಕರ ಎದುರು ನಿಲ್ಲಲಿದ್ದಾನೆ.

ಚಿತ್ರದ ನಿರ್ದೇಶಕಿ ಡೊರೊಟ ಕೊಬಿಯೆಲಾ. ಅಂದಹಾಗೆ, ಪೂರ್ತಿ ಪೇಂಟಿಂಗ್ ಬಳಸಿಯೇ ಸಿನಿಮಾ ಹೆಣೆಯಬೇಕು ಎಂದು ಈಕೆಗೆ ಏಕೆ ಅನ್ನಿಸಿತು? ಅದರ ಹಿಂದೆ ಸ್ವಾರಸ್ಯಕರ ಕಥೆಯೊಂದಿದೆ. ಡೊರೊಟ ಕೂಡ ಚಿತ್ರ ಕಲಾವಿದೆ. ಅದರ ಚುಂಗು ಹಿಡಿದೇ ಸಿನಿಮಾ ಕ್ಷೇತ್ರಕ್ಕೆ ಬಂದವರು. ಆದರೆ ಕುಂಚದ ಗೀಳು ಅವರೊಳಗಿನ್ನೂ ಹಬೆಯಾಡುತ್ತಿತ್ತು. ಮೊದಲ ಸಿನಿಮಾ ನಿರ್ದೇಶಿಸಿದ ಬಳಿಕ ಸಿನಿಮಾಗೆ ಮರಳುವುದೋ ಅಥವಾ ಕುಂಚ ಕಲಾವಿದೆಯಾಗಿ ಮುಂದುವರಿಯುವುದೋ ಎಂಬ ಗೊಂದಲದಲ್ಲಿದ್ದರು. ಆ ಹೊತ್ತಿನಲ್ಲಿ ಸಿಕ್ಕಿದ್ದೇ ವ್ಯಾನ್ ಗೋನ ಕಡೆಯ ಪತ್ರ.

‘ನಾವು ನಮ್ಮ ಪೇಂಟಿಂಗ್‌ಗಳ ಹೊರತಾಗಿ ಬೇರೇನನ್ನೂ ಮಾತನಾಡಲು ಸಾಧ್ಯವಿಲ್ಲ’ ಎಂಬುದು ಆ ಕಾಗದದಲ್ಲಿದ್ದ ಸಾಲು. ಅರಗಿನ ಮನೆಯಲ್ಲಿದ್ದವಳಿಗೆ ಅರಮನೆ ಸಿಕ್ಕಷ್ಟು ಖುಷಿಯಾಯಿತು. ಪೇಂಟಿಂಗ್‌ಗಳ ಮೂಲಕ ಕಲಾವಿದನ ಕತೆ ಹೇಳುವ ಕಾಯಕ ಆರಂಭವಾಯಿತು. ತಮ್ಮ ಪತಿ ಹ್ಯೂಗ್ ವೆಲ್ಚ್‌ಮನ್ ಈ ಪ್ರಯತ್ನಕ್ಕೆ ಬೆಂಬಲವಾಗಿ ನಿಂತು ನಿರ್ಮಾಣದ ಹೊಣೆ ಹೊತ್ತರು.

ಕಲಾವಿದರು ಬೇಕು ಕಲಾವಿದರು
ಸಿನಿಮಾ ಪೂರ್ಣಗೊಳ್ಳುವ ಹಂತ ತಲುಪಿದ್ದರೂ ‘ಬ್ರೇಕ್ ಥ್ರೂ’ ಸಂಸ್ಥೆಯ ಕಲಾವಿದರ ಹುಡುಕಾಟ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ‘ವ್ಯಾನ್್ ಗೋ ಶೈಲಿಯನ್ನು ಅನುಕರಿಸುವ ಕಲಾವಿದರು ಬೇಕಾಗಿದ್ದಾರೆ’ ಎಂದು ಪದೇ ಪದೇ ಅದು ಜಾಹೀರಾತು ನೀಡುತ್ತಿದೆ. ಇತ್ತ ಸಿನಿಮಾ ತಯಾರಿಕೆಯಲ್ಲಿ ಪಾಲ್ಗೊಳ್ಳಬೇಕೆಂದು ಕಲಾವಿದರು ಸಾಲು ಸಾಲು ಅರ್ಜಿ ಸಲ್ಲಿಸುತ್ತಿದ್ದಾರೆ. ಸಾವಿರಾರು ಅರ್ಜಿಗಳು ಬರುತ್ತಿದ್ದರೂ ಎಲ್ಲವನ್ನೂ ಅಳೆದು ತೂಗಿ ನೋಡಲಾಗುತ್ತಿದೆ. ಅರ್ಜಿ ಪರಿಶೀಲನೆಗೆಂದೇ ನುರಿತ ಕಲಾವಿದರ ದಂಡನ್ನು ಸಂಸ್ಥೆ ನೇಮಿಸಿದೆ.

ಬೆಂಗಳೂರು ನಂಟು
ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಬೆಂಗಳೂರಿನ ಶುಚಿ ಮುಲೆ (ಮೂಲತಃ ಭೋಪಾಲ್‌ವರು) ‘ವಿನ್ಸೆಂಟ್’ ಸಿನಿಮಾದಲ್ಲಿ ಕೈಯಾಡಿಸಿದ್ದಾರೆ. ಸಿನಿಮಾಕ್ಕಾಗಿ ತೈಲಚಿತ್ರಗಳನ್ನು ರಚಿಸಲು ಆಯ್ಕೆಯಾದ ವಿಶ್ವದ 124 ಕಲಾವಿದರಲ್ಲಿ ಅವರೂ ಒಬ್ಬರು. ಅವರ ಸುಮಾರು 400 ಪೇಂಟಿಂಗ್‌ಗಳು ವ್ಯಾನ್ ಗೋ ಕಥೆ ಹೇಳಲು ತಯಾರಾಗಿವೆ. 5 ಸಾವಿರಕ್ಕೂ ಹೆಚ್ಚು ಕಲಾವಿದರು ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಅರ್ಜಿ ಹಾಕಿದ್ದರೂ ಶುಚಿ ಭಾರತದಿಂದ ಆಯ್ಕೆಯಾದರು. ಹೀಗೆ ಸಿನಿಮಾಗೆ ಆಯ್ಕೆಯಾಗುತ್ತಿರುವವರ ಪೈಕಿ ಅವರು ದೇಶದ ಎರಡನೇ ಕಲಾವಿದೆ. ವ್ಯಾನ್್ ಗೋನ ಶೈಲಿಯಿಂದ ಪ್ರಭಾವಿತವಾಗಿದ್ದೇ ಅವರು ಸಿನಿಮಾದಲ್ಲಿ ತೊಡಗಿಕೊಳ್ಳಲು ಮುಖ್ಯ ಕಾರಣವಂತೆ.

ಜಾಲತಾಣವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಸಿನಿಮಾ ಅನುಭವಗಳನ್ನು ಹಂಚಿಕೊಂಡಿರುವ ಶುಚಿ – ‘ಚಿತ್ರದ ಟ್ರೇಲರ್ ನೋಡಿದಾಗ ಸಿನಿಮಾದಲ್ಲಿ ತೊಡಗಿಸಿಕೊಳ್ಳಬೇಕೆನ್ನಿಸಿತು. ಈ ಬಗ್ಗೆ ಸಾಕಷ್ಟು ಪ್ರಯತ್ನಿಸಿದೆ. ಕಡೆಗೊಂದು ದಿನ ಪೋಲೆಂಡ್‌ನಲ್ಲಿ ನಡೆಯಲಿರುವ ಮೂರು ದಿನಗಳ ಪರೀಕ್ಷೆಗೆ ಹಾಜರಾಗಬೇಕೆಂದು ಆಹ್ವಾನ ಬಂತು. ಈ ಪರೀಕ್ಷೆ ವೇಳೆ ವ್ಯಾನ್ ಗೋನ ಕುಂಚ ಶೈಲಿಯ ಬಗ್ಗೆ ಮಾತ್ರವಲ್ಲದೇ ಸಿನಿಮಾಗೆ ಬಳಸಲಾಗುತ್ತಿರುವ ವಿಶಿಷ್ಟ ತಂತ್ರಾಂಶದ ಕುರಿತೂ ಸಾಕಷ್ಟು ಅಧ್ಯಯನ ಮಾಡಬೇಕಿತ್ತು. ಅದರಲ್ಲಿ ಪಾಸಾದೆ. ನಂತರ 16 ದಿನಗಳ ಕಠಿಣ ತರಬೇತಿಯನ್ನು ಪಡೆದೆ’ ಎಂದು ಹೇಳಿಕೊಂಡಿದ್ದಾರೆ.

ಭಾರಿ ತಯಾರಿ
‘ವಿನ್ಸೆಂಟ್’ ಅನಿಮೇಟೆಡ್ ಚಿತ್ರವಾದರೂ ಭಾರಿ ನಟವರ್ಗ ಸಿನಿಮಾಗಾಗಿ ದುಡಿಯುತ್ತಿದೆ. ಪೋಲೆಂಡಿನ ಹವ್ಯಾಸಿ ರಂಗಭೂಮಿ ಕಲಾವಿದರಿಂದ ಹಿಡಿದು ಮಾಗಿದ ಬ್ರಿಟಿಷ್ ನಟರವರೆಗೆ ಅನೇಕರು ಚಿತ್ರದೊಂದಿಗೆ ಗುರುತಿಸಿಕೊಂಡಿದ್ದಾರೆ.

‘ಮೊದಲು ವ್ಯಾನ್ ಗೋನ ತೈಲಚಿತ್ರಗಳಲ್ಲಿ ಬಿಂಬಿತವಾದ ವ್ಯಕ್ತಿಗಳನ್ನು ಹೋಲುವ ನಟರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಅವರಿಂದ ಪಾತ್ರ ಮಾಡಿಸಿದ ನಂತರ ಅದಕ್ಕೆ ಅನಿಮೇಷನ್ ರೂಪ ನೀಡಲಾಯಿತು’ ಎಂದು ಚಿತ್ರದ ನಿರ್ಮಾಪಕ ಹ್ಯೂಗ್ ವೆಲ್ಚ್‌ಮನ್ ಹೇಳಿಕೊಂಡಿದ್ದಾರೆ. ಭಾರತವೂ ಸೇರಿದಂತೆ ನೂರಕ್ಕೂ ಹೆಚ್ಚು ದೇಶಗಳಿಗೆ ಚಿತ್ರದ ಪ್ರದರ್ಶನ ಹಕ್ಕನ್ನು ಮಾರಾಟ ಮಾಡಲಾಗಿದೆ. ಲಂಡನ್‌ನಲ್ಲಿ ಚಿತ್ರದ ಮೊದಲ ಪ್ರದರ್ಶನ ಏರ್ಪಡಿಸಲು ಭೂಮಿಕೆ ಸಿದ್ಧವಾಗುತ್ತಿದೆ.

ಅಪೂರ್ವ ಸೋದರರು
ತನ್ನ ಕಿರಿಯ ಸೋದರ ಥಿಯೋನ ಹೊರತಾಗಿ ವ್ಯಾನ್ ಗೋ ಬದುಕಿನ ಕಥನ ಅಪೂರ್ಣವಾದೀತು. ವ್ಯಾನ್್ ಗೋಗೆ ಚಿತ್ರಕಲೆಯನ್ನು ಒಂದು ಶಿಸ್ತಾಗಿ ಅಧ್ಯಯನ ಮಾಡಲು ಸಾಧ್ಯವಾದದ್ದೇ ಥಿಯೋನಿಂದಾಗಿ. ಬ್ರಸೆಲ್ಸ್, ಪ್ಯಾರಿಸ್ ಹೀಗೆ ವ್ಯಾನ್್ ಗೋ ಬಣ್ಣದ ಪ್ರಪಂಚವನ್ನು ಅರಸಿ ಹೋದಲ್ಲೆಲ್ಲ ಥಿಯೋ ಅವನ ಬೆನ್ನೆಲುಬಾಗಿ ನಿಂತ.ತನ್ನ ಕೈಲಾದಷ್ಟೂ ಸಹಾಯ ಮಾಡಿದ. ಅಣ್ಣನ ನಿಗೂಢ ಸಾವು ಥಿಯೋನನ್ನು ಕಂಗೆಡಿಸಿತು. ವ್ಯಾನ್್ ಗೋ ಇಹಲೋಕ ತ್ಯಜಿಸಿದ ಆರು ತಿಂಗಳಲ್ಲೇ ಇವನೂ ಕಾಲವಾದ.

ಒಂಟಿಕಿವಿಯ ವ್ಯಾನ್ ಗೋ
ವಿಕ್ಷಿಪ್ತತೆ ವ್ಯಾನ್ ಗೋನ ಮತ್ತೊಂದು ಹೆಸರು. ಅವನ ಬದುಕು ಒಂದರ್ಥದಲ್ಲಿ ನಿಗೂಢಗಳ ಗೂಡು. ಚಿತ್ರ ಬಿಡಿಸುವ ಹುಚ್ಚಿನ ಜೊತೆಗೆ ಪ್ರೀತಿ ಪ್ರಣಯದ ಗುಂಗು. ಹದಿಹರೆಯದಲ್ಲೇ ಪ್ರೇಮ ವೈಫಲ್ಯ, ವೇಶ್ಯೆಯ ಒಡನಾಟ, ಕಾಡುವ ಒಂಟಿತನ – ಇವೆಲ್ಲವುಗಳಿಂದಾಗಿ ವ್ಯಾನ್್ ಗೋ ಮನೋವೈಕಲ್ಯಕ್ಕೆ ತುತ್ತಾಗಿದ್ದ. ಬಣ್ಣ ಬಣ್ಣದ ಚಿತ್ರ ಬಿಡಿಸುತ್ತಿದ್ದ ಆತನ ಮನಸ್ಸು ಮಾತ್ರ ಗೊಂದಲಗಳ ಕಡುಗಪ್ಪಿನಲ್ಲಿ ಅದ್ದಿ ತೆಗೆದಂತಿತ್ತು.

ಅವನ ವಿಕ್ಷಿಪ್ತ ಮನಸ್ಸಿಗೆ ಈ ಘಟನೆ ಉದಾಹರಣೆಯಂತಿದೆ: ಒಮ್ಮೆ ಹುಡುಗಿಯೊಬ್ಬಳು ಆತನಲ್ಲಿ ಅನುರಕ್ತಳಾದಳು. ಅಷ್ಟೇ ಆಗಿದ್ದರೆ ಚಂದವಿರುತ್ತಿತ್ತು. ಆದರೆ ‘ನೀನು ನನಗೇನಾದರೂ ಕಾಣಿಕೆ ಕೊಡಬೇಕು.

ಅದು ನಿನ್ನ ಕಿವಿಯಾದರೂ ಪರವಾಗಿಲ್ಲ’ ಎಂದು ವ್ಯಾನ್ ಗೋನನ್ನು ಕೇಳಿದಳು. ಮರುದಿನ ಒಂದು ಉಡುಗೊರೆ ಪೊಟ್ಟಣ ಆಕೆಯ ಮುಂದಿತ್ತು. ಅದರಲ್ಲಿದ್ದದ್ದು ವ್ಯಾನ್ ಗೋ ರಕ್ತಸಿಕ್ತ ಬಲಗಿವಿ! ಮುಂದೆ ತಾನು ಕಳೆದುಕೊಂಡ ಕಿವಿಯನ್ನೇ ಪ್ರಧಾನವಾಗಿಟ್ಟುಕೊಂಡು ಸ್ವ-ಭಾವಚಿತ್ರವೊಂದನ್ನು ಅವನು ರಚಿಸುತ್ತಾನೆ. ಅದು ಅವನ ಅಮೂಲ್ಯ ಕೃತಿಗಳಲ್ಲಿ ಒಂದು ಎಂದೇ ಬಣ್ಣಿತ.

ಕರ್ನಾಟಕದ ಕಲಾವಿದರು ಕಂಡಂತೆ...
ದೃಶ್ಯಕಲೆಯ ಬಹುದೊಡ್ಡ ‘ಕವಿ’ ವ್ಯಾನ್ ಗೋ. ಕವಿ ತನಗಾಗಿ ಕವಿತೆ ಬರೆಯುವಂತೆ ಆತ ಚಿತ್ರಗಳನ್ನು ಬಿಡಿಸಿದ. ರಾಜಾಶ್ರಯ ಅಥವಾ ಸರ್ಕಾರದ ಮರ್ಜಿಗಾಗಿ ಅವನು ಎಂದಿಗೂ ಕಾಯಲೇ ಇಲ್ಲ. ಹಟತೊಟ್ಟ ಋಷಿಯಂತೆ ಅವನು ಸದಾ ಕಾಣುತ್ತಾನೆ.
–ಕೆ.ಕೆ. ಮಕಾಳಿ, ವಿನ್ಯಾಸ ಕಲಾವಿದ, ಹಂಪಿ ವಿಶ್ವವಿದ್ಯಾಲಯ

***
ಕ್ಯಾನ್್ವಾಸ್ ಮೇಲೆ ಪದರ ಪದರವಾಗಿ ಬಣ್ಣ ಎಳೆವ ಕಲಾವಿದ ವ್ಯಾನ್್ ಗೋ ಕಲಾವಿದರಿಗೆ ಬಹುದೊಡ್ಡ ಸ್ಫೂರ್ತಿಯ ಸೆಲೆ. ನನಗೂ ಅವನಂತೆಯೇ ದಿನಕ್ಕೊಂದು ಚಿತ್ರ ಬರೆಯುವ ಆಸೆ.
–ಸ್ಮಿತಾ ಕಾರ್ಯಪ್ಪ, ಇನ್‌ಸ್ಟಾಲೇಷನ್ ಕಲಾವಿದೆ

***
ವ್ಯಾನ್ ಗೋ ತನ್ನ ಸುತ್ತಮುತ್ತಲ ಪರಿಸರ, ವೈಯಕ್ತಿಕವಾಗಿ ಹತ್ತಿರವಾಗಿದ್ದ ವ್ಯಕ್ತಿಗಳು ಮತ್ತು ವಸ್ತುಗಳು – ಇಂಥ ಪ್ರಪಂಚದ ಮೂಲಕವೇ ತನ್ನ ಒಳದನಿಯನ್ನು ಅಭಿವ್ಯಕ್ತಿಸುತ್ತಿದ್ದ. ಇನ್ನೊಂದು ವಿಶೇಷವೆಂದರೆ, ಜಪಾನೀ ಮುದ್ರಣ ಕಲೆಯಿಂದ ಪ್ರಭಾವಿತನಾಗಿ ಈತ ರಚಿಸಿದ ಕೃತಿಗಳು ಯೂರೋಪಿನ ಇತರ ಕಲಾವಿದರಿಗಿಂತ ಇವನನ್ನು ಭಿನ್ನವಾಗಿಸಿವೆ.
–ಎಂ.ಎಸ್. ಪ್ರಕಾಶ್ ಬಾಬು, ಚಿತ್ರ ಕಲಾವಿದ

***
ಪ್ರತಿಕೂಲವಾದ ವಾತಾವರಣದಲ್ಲಿ ಕಲಾವಿದನಾಗಿ ಗುರುತಿಸಿಕೊಳ್ಳಲು ಹಾಗೂ ಸೃಜನಶೀಲತೆಯಲ್ಲಿ ಸ್ವಾನುಭವ ತರುವುದು ಮುಖ್ಯ ಎಂದು ಕಂಡುಕೊಳ್ಳಲು ವ್ಯಾನ್ ಗೋ ಪ್ರೇರೇಪಿಸುತ್ತಾನೆ. ಆತ ಅನುಭವಿಸಿದ ಹೆಣ್ಣಿನ ಸ್ನೇಹ–ಪ್ರೀತಿಗಾಗಿ ಹಪಹಪಿಸಿದವರು ನಾವುಗಳು ಸಹ. ನಮ್ಮಂಥ ಕಲಾವಿದರು ಆತನ ಬದುಕಿನೊಟ್ಟಿಗೆ ತಮ್ಮದನ್ನು ತಳಕು ಹಾಕಿ ಬೆಳೆಯಲು ಯತ್ನಿಸುತ್ತಾರೆ. ಇದು ನನ್ನ ನಾಟಕ, ಕಥಾ ಪ್ರಪಂಚದ ಸೃಜನಕ್ಕೂ ಅನ್ವಯಿಸುತ್ತದೆ.
–ಡಿ.ಎಸ್. ಚೌಗಲೆ, ಸಾಹಿತಿ ಹಾಗೂ ಕಲಾವಿದ

***
ಗಣಿ ಕಾರ್ಮಿಕರು, ಕೂಲಿಕಾರರಂಥ ಸಾಮಾನ್ಯರ, ಬಡವರ ಶ್ರಮದ ಬದುಕನ್ನು ಆತ ಚಿತ್ರಿಸಿದ. ರೂಪದಲ್ಲಿ, ಬಣ್ಣದಲ್ಲಿ ಇತರರು ಕಾಣಲಾಗದ ಸತ್ಯವೊಂದನ್ನು ವ್ಯಾನ್ ಗೋ ಕಂಡುಕೊಂಡ.
–ಬಾಬು ಈಶ್ವರ್ ಪ್ರಸಾದ್, ದೃಶ್ಯ ಕಲಾವಿದ, ಸಿನಿಮಾ ತಯಾರಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT