ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಜ್ವಾ ಪಾಕ್ ಚಿಂತನೆ ಬದಲಿಸುವರೇ?

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಜಮ್ಮುವಿಗೆ ಸಮೀಪದ ಸಾಂಬಾ ಮತ್ತು ನಗರೋಟಾಗಳಲ್ಲಿ ನವೆಂಬರ್‌ 29ರಂದು ಉಗ್ರರ ದಾಳಿಯ ವೇಳೆ ಹೋರಾಡಿದ ಬೆಂಗಳೂರಿನ ಮೇಜರ್‌ ಅಕ್ಷಯ್‌ ಗಿರೀಶ್‌ ಕುಮಾರ್‌ ವೀರಮರಣ ಅಪ್ಪಿದರು. ಆ ತ್ಯಾಗದ ಕಥನದ ಕುರಿತು ನಾಡಿನಾದ್ಯಂತ ಜನ ಮಾತನಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆಯಲ್ಲಿ ಮಹತ್ವದ ಬದಲಾವಣೆಯೊಂದು ನಡೆದಿದೆ.

ಜನರಲ್‌ ಖಮರ್‌ ಜಾವೆದ್‌ ಬಾಜ್ವಾ ಅವರು ಪಾಕಿಸ್ತಾನದ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪಾಕಿಸ್ತಾನ ಸೇನೆಯ ಅತ್ಯುನ್ನತ ಹುದ್ದೆಯನ್ನು ಏರಿದವರು ಸಹಜವಾಗಿಯೇ ಆ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಯಾಗುತ್ತಾರೆ. 1947ರಲ್ಲಿ ಸ್ವಾತಂತ್ರ್ಯ ಪಡೆದ ಪಾಕಿಸ್ತಾನ ಅಲ್ಲಿಂದ ಈವರೆಗಿನ ಎಪ್ಪತ್ತು ವರ್ಷಗಳಲ್ಲಿ ಅರ್ಧದಷ್ಟನ್ನು ಸೇನಾಡಳಿತಗಾರರ ಕಪಿಮುಷ್ಟಿಯಲ್ಲಿಯೇ ಕಳೆದಿದೆ.

ಅಯೂಬ್‌ ಖಾನ್‌, ಯಾಹ್ಯಾ ಖಾನ್‌, ಜಿಯಾ ಉಲ್‌ ಹಖ್‌ ಮತ್ತು ಪರ್ವೇಜ್‌ ಮುಷರಫ್‌ ಹಿಂದೆ ಸೇನಾಡಳಿತದ ಚುಕ್ಕಾಣಿ ಹಿಡಿದಿದ್ದರು. ಸೇನಾ ಪ್ರಾಬಲ್ಯ ಇರುವ ಪ್ರಜಾಪ್ರಭುತ್ವ ದೇಶದ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಾಜ್ವಾ ಅವರ ಬಗ್ಗೆ ಪ್ರಸ್ತುತ ಜಗತ್ತಿನಾದ್ಯಂತ ಕುತೂಹಲ ಇರುವುದು ಸಹಜ.

ಇದಕ್ಕೆ ಮೊದಲು ಸೇನಾ ಮುಖ್ಯಸ್ಥರಾಗಿದ್ದ ಜನರಲ್‌ ರಹೀಲ್‌ ಷರೀಫ್‌ ಅವರು ಸೇನೆಯಲ್ಲಷ್ಟೇ ಅಲ್ಲ, ಜನಸಾಮಾನ್ಯರ ನಡುವೆಯೂ ಜನಪ್ರಿಯರಾಗಿದ್ದರು. ರಹೀಲ್‌ ಅವರು ಸೇನಾ ಪರಂಪರೆಯ ಪ್ರತಿಷ್ಠಿತ ಕುಟುಂಬದಿಂದ ಬಂದವರು. ರಹೀಲ್‌ ಅವರ ಅಣ್ಣ ಮೇಜರ್‌ ರಾಣಾ ಶಬೀರ್‌ ಷರೀಫ್‌ 1971ರ ಭಾರತ– ಪಾಕ್‌ ನಡುವಣ ಯುದ್ಧದಲ್ಲಿ ಮಡಿದಿದ್ದರು. ಅವರಿಗೆ ಆ ದೇಶದ ಸೇನೆಯ ಅತ್ಯುನ್ನತ ಪ್ರಶಸ್ತಿಯಾದ ನಿಶಾನ್‌ ಎ ಹೈದರ್‌ ಅನ್ನು ಮರಣೋತ್ತರವಾಗಿ ನೀಡಲಾಗಿತ್ತು. ರಹೀಲ್‌ ಅವರ ಮಾವ ಮೇಜರ್‌ ರಾಜಾ ಅಜೀಜ್‌ ಭಟ್ಟಿ ಅವರು 1965ರಲ್ಲಿ ನಡೆದ ಭಾರತ ವಿರುದ್ಧದ ಯುದ್ಧದಲ್ಲಿ ತೋರಿದ್ದ ಶೌರ್ಯಕ್ಕಾಗಿ ಅವರಿಗೂ ಮರಣೋತ್ತರ ನಿಶಾನ್‌ ಎ ಹೈದರ್‌ ಪ್ರಶಸ್ತಿ ನೀಡಲಾಗಿತ್ತು.

  ಜನರಲ್‌ ರಹೀಲ್‌ ಅವರು ಉತ್ತರ ವಜೀರಿಸ್ತಾನದಲ್ಲಿ ಉಗ್ರಗಾಮಿಗಳ ಸದ್ದಡಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ, ಆ ದೇಶದ ವಾಣಿಜ್ಯ ರಾಜಧಾನಿ ಕರಾಚಿಯಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ನಿಲ್ಲಿಸಿ, ಗೊಂದಲಮಯ ವಾತಾವರಣವನ್ನು ಸಂಪೂರ್ಣ ತಹಬಂದಿಗೆ ತಂದಿದ್ದರು. ಅದೇನೋ ಎಂತದೋ ಗೊತ್ತಿಲ್ಲ, ರಹೀಲ್ ಅವರ ನಿವೃತ್ತಿ ನಂತರ ಸರ್ಕಾರ ಅವರಿಗೆ ಹೆಚ್ಚುವರಿ ಸೇವಾ  ಅವಕಾಶವನ್ನೇ ನೀಡಲಿಲ್ಲ. 

ಕಳೆದ 20 ವರ್ಷಗಳಲ್ಲಿ ಸೇವಾವಧಿ ವಿಸ್ತರಣೆ ಸಿಗದೆ ನಿವೃತ್ತಿ ದಿನವೇ ಕಚೇರಿ ತೊರೆದ ಮೊದಲ ಜನರಲ್‌ ಇವರು. ರಹೀಲ್‌ ಅವರಿಗೆ ಇರುವಂತಹ ಅನನ್ಯ ಸೇನಾ ಕೌಟುಂಬಿಕ ಪರಂಪರೆ ಇಲ್ಲದ, ಜನಸಾಮಾನ್ಯರ ನಡುವೆ ಅಷ್ಟೇನೂ ಪರಿಚಿತರಲ್ಲದ ಬಾಜ್ವಾ ಅವರನ್ನು ನವಾಜ್‌ ಷರೀಫ್‌ ಸರ್ಕಾರ ಸೇನಾ ಮುಖ್ಯಸ್ಥ ಪಟ್ಟಕ್ಕೇರಿಸಿರುವುದು ಇದೀಗ ಆ ದೇಶದಾದ್ಯಂತ ಚರ್ಚೆಗೆ ಗ್ರಾಸ ಒದಗಿಸಿದೆ.

ನವಾಜ್‌ ಷರೀಫ್‌ ಪ್ರಧಾನಿಯಾಗಿ ತಮ್ಮ ನಾಲ್ಕು ಅವಧಿಗಳಲ್ಲಿ ಐವರು ಜನರಲ್‌ಗಳನ್ನು ನೇಮಿಸಿದ್ದಾರೆ. 1998ರಲ್ಲಿ ಷರೀಫ್‌ ಅವರೇ ಪರ್ವೇಜ್‌ ಮುಷರಫ್‌ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಮುಷರಫ್‌ 1999ರ ಅಕ್ಟೋಬರ್‌ನಲ್ಲಿ ಸೇನಾ ಬಂಡಾಯ ನಡೆಸಿ, ಷರೀಫ್‌ ಅವರನ್ನೇ ಅಧಿಕಾರದಿಂದ ಕೆಳಗಿಳಿಸಿ ತಾವೇ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಇಂಥ ಹತ್ತು ಹಲವು ಘಟನೆಗಳನ್ನು ಕಂಡಿರುವ ಅನುಭವಿ ಷರೀಫ್‌ ಇದೀಗ ರಹೀಲ್‌ ಅವರಿಗೆ ಸೇವಾ ವಿಸ್ತರಣೆ ನೀಡದಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ರಕ್ಷಣೆ ನಿಟ್ಟಿನಲ್ಲಿ ಸಮಂಜಸ ಎನ್ನುವವರೇ ಬಹಳ ಮಂದಿ. ಷರೀಫ್‌ ಅವರ ಇಂತಹಅರ್ಥಪೂರ್ಣ ನಿರ್ಧಾರದ ಲಾಭ ಬಾಜ್ವಾ ಅವರದಾಗಿದೆ.

ಪಾಕಿಸ್ತಾನ ಸೇನೆಯಂತೂ ಸದಾ ಭಾರತದ ವಿರುದ್ಧ ತಂತ್ರಗಾರಿಕೆ ನಡೆಸುವುದರಲ್ಲಿಯೇ ಗಿರಕಿ ಹೊಡೆಯುತ್ತಿರುತ್ತದೆ. 1971ರಲ್ಲಿ ನಡೆದ ಭಾರತ– ಪಾಕ್‌ ನಡುವಣ ಯುದ್ಧದ ನಂತರವಂತೂ ಇದು ಇನ್ನೂ ಹೆಚ್ಚಾಗಿದೆ.  ಇಂತಹದ್ದೊಂದು ವಿಚಿತ್ರವಾದ ಕಾರಣದಿಂದಲೇ ಅಲ್ಲಿನ ಸೇನೆ ಆ ದೇಶದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತನ್ನ ಪ್ರಭಾವಲಯವನ್ನೇ ಸೃಷ್ಟಿಸಿಕೊಂಡು ಬಿಟ್ಟಿದೆ. ದುರದೃಷ್ಟದ ಸಂಗತಿ ಎಂದರೆ  ಪಾಕ್‌ನ ಸೇನಾ ಮುಖ್ಯಸ್ಥ ಪಟ್ಟಕ್ಕೆ ಏರಿದ ಯಾರು ಕೂಡಾ ಇಂತಹದ್ದೊಂದು ಚಿಂತನೆ ಮತ್ತು ಕಾರ್ಯತಂತ್ರದಿಂದ ದೂರ ನಿಂತು ಯೋಚಿಸಲೇ ಇಲ್ಲ.

ಈ ಹಿನ್ನೆಲೆಯಲ್ಲಿ ಬಾಜ್ವಾ ಅವರ ಆಲೋಚನೆ ಏನು ಎಂಬ ಸಂಗತಿಯೂ ಕುತೂಹಲ ಮೂಡಿಸಿದೆ. ಷರೀಫ್‌ ಅವರಂತೂ ಬಾಜ್ವಾ ಅವರ ಬಗ್ಗೆ ಅಪಾರ ಭರವಸೆ ಇರಿಸಿಕೊಂಡಿರುವಂತಿದೆ. ಇತರ ಲೆಫ್ಟಿನೆಂಟ್‌ ಜನರಲ್‌ಗಳ ಸೇವಾ ಹಿರಿತನ ಕಡೆಗಣಿಸಿ ಅವರನ್ನೇ ಆಯ್ಕೆ ಮಾಡಿರುವುದೂ ಈ ಭರವಸೆಗೆ ನಿದರ್ಶನ.

ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಸಂದಿಗ್ಧ ಕಾಲಘಟ್ಟದಲ್ಲಿದೆ. ಒಂದು ಕಡೆ ‘ನಿರ್ದಿಷ್ಟ ದಾಳಿ’ ಎರಡೂ ದೇಶಗಳಲ್ಲಿ ಸುದ್ದಿಯಾಗಿದ್ದರೆ, ಉಭಯ ದೇಶಗಳ ನಡುವಣ ಗಡಿ ನಿಯಂತ್ರಣ ರೇಖೆಯ ಬಳಿ ಪದೇಪದೇ ಕದನ ವಿರಾಮ ಉಲ್ಲಂಘನೆಯಾಗುತ್ತಿದೆ. ಇದೇ ವೇಳೆ ಅಮೆರಿಕದಲ್ಲಿ ಬರಾಕ್‌ ಒಬಾಮ ನಂತರ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಟ್ರಂಪ್‌ ನಿಲುವು ಒಲವುಗಳ ಬಗ್ಗೆಯೂ ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕ ವಲಯದಲ್ಲಿ ಇನ್ನೂ ಸ್ಪಷ್ಟ ಸ್ವರೂಪ ಮೂಡಿಲ್ಲ.

ಇದೇ ವೇಳೆ ಚೀನಾ ಸರ್ಕಾರ ಪಾಕಿಸ್ತಾನದಲ್ಲಿ ತನ್ನ ಪ್ರಭಾವ ಬೆಳೆಸಿಕೊಳ್ಳಲು ಯತ್ನಿಸುತ್ತಿದೆ. ಚೀನಾ ಮತ್ತು ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಎಂಬ ಮಹತ್ವದ ಕಾರ್ಯಕ್ರಮ ಆ ಎರಡೂ ದೇಶಗಳನ್ನು ಇನ್ನಷ್ಟು ಹತ್ತಿರ ಮಾಡಿದೆ. ಹಿಮಾಲಯದ ಗಿರಿಕಂದರಗಳಲ್ಲಿರುವ ಪಾಕ್‌– ಚೀನಾ ಗಡಿ ಪ್ರದೇಶದಿಂದ ಅರಬ್ಬಿ ಕಡಲಿನ ತಡಿಯಲ್ಲಿರುವ ಗ್ವದಾರ್‌ ಬಂದರುವರೆಗೆ ಹೆದ್ದಾರಿ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ.

ಬಲೂಚಿಸ್ತಾನ ಪ್ರದೇಶದ ನಡುವೆಯೇ ಸಿಪಿಇಸಿ ಯೋಜನೆ ಹಾದು ಹೋಗಲಿದೆ. ಆದರೆ ಬಲೂಚಿಸ್ತಾನ ಪ್ರದೇಶದಲ್ಲಿ ಹಿಂಸಾಚಾರ ಸಾಮಾನ್ಯ.  ಅಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸದಾ ಸೇನೆಯ ಎಚ್ಚರಗಣ್ಣು ಅನಿವಾರ್ಯ. ಬಾಜ್ವಾ ಅವರ ಎದುರು ಇಂತಹ ಹತ್ತು ಹಲವು ಸವಾಲುಗಳು ಇವೆ. ಅವುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಜನರಲ್‌ ಬಾಜ್ವಾ ಅವರು ಸೇನೆಯ ಇನ್‌ಫೆಂಟ್ರಿ ವಿಭಾಗದಲ್ಲೇ ಎತ್ತರದಿಂದ ಎತ್ತರಕ್ಕೇರಿದವರು. ಗಡಿ ನಿಯಂತ್ರಣ ರೇಖೆ ಬಳಿಯ ಆಗುಹೋಗುಗಳ ಬಗ್ಗೆ ಅವರಿಗೆ ಅಪಾರ ಅನುಭವ  ಇದೆ. ಪಾಕಿಸ್ತಾನದ ‘ರಾಜಕೀಯ’ದಲ್ಲಿ ಸೇನೆಯ ಮಹತ್ವವನ್ನು ಕುಂಠಿತಗೊಳಿಸುವ ಬಗ್ಗೆ ಇವರು ಆಸಕ್ತಿ ವಹಿಸುತ್ತಾರೆನ್ನುವಂತಿಲ್ಲ.

ಒಂದಂತೂ ನಿಜ, ಭಯೋತ್ಪಾದಕರಿಂದ ಪಾಕಿಸ್ತಾನಕ್ಕೆ ಆಗುತ್ತಿರುವ ಹಾನಿಯ ಎದುರು ಭಾರತ ಎಂಬ  ‘ಗುಮ್ಮ’ ಏನೇನೂ ಅಲ್ಲ ಎಂಬ ಸತ್ಯವಂತೂ ಬಾಜ್ವಾ ಅವರಿಗೆ ಚೆನ್ನಾಗಿ ಗೊತ್ತಿದೆ ಎನ್ನಬಹುದು. ಅದೇನೇ ಇದ್ದರೂ, ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಬಾಜ್ವಾ ಕೂಡ ಸಾಂಪ್ರದಾಯಿಕ ನಿಲುವನ್ನೇ ಮುಂದುವರಿಸುವಂತೆ ಕಾಣುತ್ತದೆ. ಪಾಕ್‌ ಸೇನೆಯ ಸಂಪೂರ್ಣ ಗಮನ ಪೂರ್ವ ಗಡಿಯಷ್ಟೆ. ಈ ನಿಲುವಿನಲ್ಲಿ ಬದಲಾವಣೆ ಇರಲಿಕ್ಕಿಲ್ಲ!

ಇವುಗಳೆಲ್ಲದರ ನಡುವೆ ಆ ದೇಶದಲ್ಲಿ ಅಂತರ್ಗತವಾಗಿರುವಂತಿರುವ ಐಎಸ್‌ಐ, ಭಯೋತ್ಪಾದಕರ ಗುಂಪುಗಳು, ಸೇನೆಯ ‘ಉಗ್ರ’ ಅಧಿಕಾರಿಗಳ ‘ಅದೃಶ್ಯ’ ಕೂಟದ ಕಾರ್ಯಾಚರಣೆ ಮೂಲಕ ಭಾರತದ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕಾರ್ಯತಂತ್ರಕ್ಕೆ ಒಂದು ವೇಳೆ ಬಾಜ್ವಾ ಅವರೂ ಕೈಜೋಡಿಸಿದರೆ ಅದೆಷ್ಟರ ಮಟ್ಟಿಗೆ ಯಶ ಪಡೆಯಲು ಸಾಧ್ಯ? ಕಾಲವೇ ಉತ್ತರ ಹೇಳಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT