ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ

ವೀರೇಶ್‌ ಚಿತ್ರಮಂದಿರದಲ್ಲಿ ಹಿಂದಿನಿಂದ ಇದೆ ಈ ಪರಿಪಾಠ
Last Updated 3 ಡಿಸೆಂಬರ್ 2016, 19:32 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮೊದಲು ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಮತ್ತು ಈ ಸಂದರ್ಭದಲ್ಲಿ  ಪರದೆಯ ಮೇಲೆ ರಾಷ್ಟ್ರಧ್ವಜ ಪ್ರದರ್ಶಿಸಬೇಕು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಸೂಚಿಸಿದೆ. ನಗರದ ಮಾಗಡಿ ರಸ್ತೆಯ ವೀರೇಶ್‌ ಚಿತ್ರಮಂದಿರದಲ್ಲಿ  1988ರಿಂದಲೇ ರಾಷ್ಟ್ರಗೀತೆ ಪ್ರಸಾರಮಾಡುವ ಪರಿಪಾಠ ಪಾಲಿಸಲಾಗುತ್ತಿದೆ.

‘ಸುಪ್ರೀಂ ಕೋರ್ಟ್‌ ಸೂಚನೆ ನೀಡುವುದಕ್ಕೆ ಸಾಕಷ್ಟು ಹಿಂದಿನಿಂದಲೂ ನಮ್ಮ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆಯ ಧ್ವನಿಮುದ್ರಿಕೆಯನ್ನು ಪ್ರಸಾರ ಮಾಡುತ್ತಿದ್ದೇವೆ. ಪ್ರೇಕ್ಷಕರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುತ್ತಾರೆ. ಈ ಪರಿಪಾಠ 1988ರಿಂದಲೂ ಚಾಚೂತಪ್ಪದೇ ನಡೆದುಬಂದಿದೆ’ ಎಂದು ವೀರೇಶ್‌ ಚಿತ್ರಮಂದಿರದ ಮಾಲೀಕ ಕೆ.ವಿ.ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಂಗಪುರ ಪ್ರೇರಣೆ: ‘1988ರ ವೇಳೆ ಚಿತ್ರಮಂದಿರಗಳಲ್ಲಿ  ಬಳಸುವ ತಂತ್ರಜ್ಞಾನಗಳಲ್ಲಿ ಪ್ರಮುಖ ಬದಲಾವಣೆಗಳಾದವು. ಆಗ ನನ್ನ ಸಹೋದರ ಧನಂಜಯ  ಪ್ರೊಜೆಕ್ಟರ್‌   ಮತ್ತಿತರ ಪರಿಕರಗಳನ್ನು ಖರೀದಿಸಲು ಸಿಂಗಪುರಕ್ಕೆ ಹೋಗಿದ್ದ. ಅಲ್ಲಿನ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಯನ್ನು ನುಡಿಸುವುದನ್ನು ನೋಡಿ ಪ್ರಭಾವಿತನಾಗಿದ್ದ. ಊರಿಗೆ ಮರಳಿದ ಬಳಿಕ ನಮ್ಮ ಚಿತ್ರಮಂದಿರದಲ್ಲೂ ಈ ಪರಿಪಾಠ ಆರಂಭಿಸಲು ಮುಂದಾದ. ನಮಗೂ ಇದು ಒಳ್ಳೆಯದು ಎನಿಸಿತು’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಆಗಿರುವ ಚಂದ್ರಶೇಖರ್‌ ತಿಳಿಸಿದರು.

‘ನಾವು ರಾಷ್ಟ್ರಗೀತೆ ಪ್ರಸಾರ  ಆರಂಭಿಸುವಾಗ ಕೇಂದ್ರ ಸರ್ಕಾರದ ಇದನ್ನು ಕಡ್ಡಾಯ ಮಾಡಿರಲಿಲ್ಲ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಕುರಿತ ಇಂಡಿಯನ್‌ ನ್ಯೂಸ್‌ ರೀಲ್‌ ಅನ್ನು ಚಿತ್ರಮಂದಿರದಲ್ಲಿ ಪ್ರಸಾರ ಮಾಡುವುದು ಕಡ್ಡಾಯವಿತ್ತು. ಹೆಚ್ಚಿನ ಚಿತ್ರಮಂದಿರಗಳಲ್ಲಿ ಚಲನಚಿತ್ರ ಮುಗಿದ ಬಳಿಕ ಇದನ್ನು ತೋರಿಸುತ್ತಿದ್ದರು. ಅಷ್ಟರಲ್ಲಿ ಪ್ರೇಕ್ಷಕರು ಎದ್ದುಹೋಗಿರುತ್ತಿದ್ದರು’ ಎಂದು ಅವರು ಮೆಲುಕು ಹಾಕಿದರು.

‘ವೀರೇಶ್‌ ಚಿತ್ರಮಂದಿರ ಆರಂಭವಾಗಿದ್ದು 1973ರಲ್ಲಿ. ಆಗ ಬೆಂಗಳೂರಿನ ಪಶ್ಚಿಮ ಭಾಗದಲ್ಲಿ  ನವರಂಗ್‌ ಬಿಟ್ಟರೆ ಬೇರೆ ಚಿತ್ರಮಂದಿರಗಳಿರಲಿಲ್ಲ. ನನ್ನ ತಂದೆ ಆರ್‌.ವೀರಣ್ಣ ಒಬ್ಬ ರೈತ. ಬಳಿಕ ಗುತ್ತಿಗೆದಾರರಾದರು. ಬಿಡಿಎ  ಹೊಸಹಳ್ಳಿಯಲ್ಲಿ ನೀಡಿದ ನಿವೇಶನದಲ್ಲಿ ಈ ಚಿತ್ರಮಂದಿರ ಆರಂಭಿಸಿದ್ದರು’ ಎಂದು ತಿಳಿಸಿದರು.

‘ಘರ್ಷಣೆಗೆ ಕಾರಣವಾಗಬಹುದು’
‘ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡುವುದನ್ನು ಕಡ್ಡಾಯಮಾಡುವುದು ಒಳ್ಳೆಯದೇ.  ಆದರೆ, ರಾಷ್ಟ್ರಗೀತೆ ಮೊಳಗುವ ವೇಳೆ ಯಾರಾದರೂ ಎದ್ದು ನಿಂತು ಗೌರವ ಸೂಚಿಸದೆ ಇದ್ದರೆ ಅದನ್ನು ನಿಭಾಯಿಸುವುದು ಹೇಗೆ ಎಂಬ ಚಿಂತೆ ನಮ್ಮದು. ಕೆಲವೊಮ್ಮೆ ಸಹಪ್ರೇಕ್ಷಕರು ಅಂತವರ ಮೇಲೆ ಹಲ್ಲೆಗೂ ಮುಂದಾಗಬಹುದು. ಇದು ಘರ್ಷಣೆಗೂ ಕಾರಣವಾಗುವ ಸಾಧ್ಯತೆ ಇದೆ. ಇದರಿಂದ ಇತರ ಪ್ರೇಕ್ಷಕರಿಗೂ ತೊಂದರೆ’ ಎಂದು ಚಂದ್ರಶೇಖರ್‌  ಆತಂಕ ವ್ಯಕ್ತಪಡಿಸಿದರು.

‘ನಮ್ಮ ಚಿತ್ರಮಂದಿರದಲ್ಲಿ ಇದುವರೆಗೆ ರಾಷ್ಟ್ರಗೀತೆ ವಿಚಾರದಲ್ಲಿ ಯಾವುದೇ ಘರ್ಷಣೆ ನಡೆದಿಲ್ಲ. ರಾಷ್ಟ್ರಗೀತೆ ಕೇಳಿಸುತ್ತಿದ್ದಂತೆಯೇ ಜನ ಸ್ವಯಂಪ್ರೇರಿತವಾಗಿ ಎದ್ದು ನಿಂತು ಗೌರವ ಸಲ್ಲಿಸುತ್ತಿದ್ದರು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT