ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಮು ಚುಮು ಚಳಿಯ ಅನುಭವ

‘ನಾದ’ ಚಂಡಮಾರುತ ಪರಿಣಾಮ ನಗರದಲ್ಲಿ ತುಂತುರು ಮಳೆ
Last Updated 3 ಡಿಸೆಂಬರ್ 2016, 19:57 IST
ಅಕ್ಷರ ಗಾತ್ರ

ಬೆಂಗಳೂರು: ನೆತ್ತಿ ಮೇಲೆ ಸುಡುತ್ತಿದ್ದ ಸೂರ್ಯ ಗಪ್ಪನೆ ಮೋಡಗಳ ಮರೆಗೆ ಸರಿದಿದ್ದಾನೆ. ತುಂತುರು ಮಳೆ, ಮೋಡ ಮುಸುಕಿದ ವಾತಾವರಣ, ಮೈಯೊಳಗೆ ನಡುಕ ಹುಟ್ಟಿಸುವ ತಣ್ಣನೆ ಗಾಳಿಯಿಂದ ನಗರದ ಬೆಳಗು, ಸಂಜೆಗಳು ಚಳಿರಾಯನ ಸ್ಪರ್ಶಕ್ಕೆ ಮುದಗೊಂಡಿವೆ.

ಚಳಿಗಾಲ ಪ್ರಾರಂಭಗೊಂಡರೂ ಮೈಕೊರೆಯುವ ಚಳಿ ಇಲ್ಲದ ಕಾರಣಕ್ಕೆ ಸ್ವೆಟರ್‌, ಶಾಲುಗಳು ಕಪಾಟಿನಲ್ಲೇ ಬಂಧಿಯಾಗಿದ್ದವು. ಚಳಿ ಹೆಚ್ಚುತ್ತಿದ್ದಂತೆಯೇ ಅವೆಲ್ಲವೂ  ಹೊರಗೆ ಬಂದಿವೆ. ಗುರುವಾರದವರೆಗೂ ಮೈ ಸುಡುವ ತಾಪಮಾನ ಅನುಭವಿಸುತ್ತಿದ್ದ ಜನರಿಗೆ ವಾತಾವರಣ ಬದಲಾವಣೆ ಮುದ ನೀಡಿದೆ.
 
‘ನಾದ’ ಚಂಡಮಾರುತ ಪರಿಣಾಮ ನಗರದಲ್ಲಿ ತುಂತುರು ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ‘ನವೆಂಬರ್‌ನಲ್ಲೂ  ಬಿಸಿಲ ಬೇಗೆ ಹೆಚ್ಚಿತ್ತು. ಇದರಿಂದ ಚಳಿಗಾಲ ಬಂದಿದೆ ಎನ್ನುವುದನ್ನೇ ಮರೆತಿದ್ದೆವು. ಮಳೆಯಿಂದ ಈಗ ವಾತಾವರಣ ತಂಪಾಗಿದೆ. ನಗರದಲ್ಲಿ ತಡವಾಗಿ ಚಳಿ ಅನುಭವ ಆಗುತ್ತಿರುವುದು ಇದೇ ಮೊದಲು’ ಎಂದು ಜಯನಗರ ನಿವಾಸಿ ವೇಣುಗೋಪಾಲ್‌  ತಿಳಿಸಿದರು.

‘ನಗರ ವ್ಯಾಪ್ತಿಯಲ್ಲಿ ಗುರುವಾರ 5.2 ಎಂ.ಎಂ, ಶುಕ್ರವಾರ 3 ಎಂ.ಎಂ ಮಳೆಯಾಗಿದೆ. ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಮತ್ತೊಂದು ಚಂಡಮಾರುತ ನಿರ್ಮಾಣ ಆಗುತ್ತಿದ್ದು, ಅದು ಪಶ್ಚಿಮಕ್ಕೆ ಚಲಿಸಿದರೆ ಮುಂದಿನ ವಾರದಲ್ಲಿ ಮತ್ತೆ ನಗರದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಇದರಿಂದ ಚಳಿಗಾಲ ಇನ್ನೂ ಮುಂದಕ್ಕೆ ಹೋಗಬಹುದು’ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ)   ನಿರ್ದೇಶಕ ಡಾ. ಜಿ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದರು.

‘ಮಳೆ ಆಗುತ್ತಿರುವುದರಿಂದ ದಿನದ ಗರಿಷ್ಠ ತಾಪಮಾನ 3ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿರುವುದರಿಂದ ಜನರಿಗೆ ಚಳಿಯ ಅನುಭವಾಗುತ್ತಿದೆ.  ಈ ಋತುವಿನ ಸಹಜ ಚಳಿಗಾಲ ಇನ್ನೂ ಪ್ರಾರಂಭವಾಗಿಲ್ಲ’ ಎಂದರು.

‘ತಿಳಿ ಆಕಾಶ ನಿರ್ಮಾಣ ಆಗುವವರೆಗೂ ಕೊರೆಯುವ ಚಳಿ ಬರುವುದಿಲ್ಲ. ಸಾಮಾನ್ಯವಾಗಿ ಈ ತಿಂಗಳಲ್ಲಿ 15 ಡಿಗ್ರಿ ಸೆಲ್ಸಿಯಸ್‌ ಇರಬೇಕಿದ್ದ ಕನಿಷ್ಠ ಉಷ್ಣಾಂಶ ಮೋಡ ಕವಿದ ವಾತಾವರಣದಿಂದಾಗಿ 19 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT