ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ...

ಚೌಕಟ್ಟು
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

-ಕೆ.ಎಸ್. ರಾಜಾರಾಮ್

ದೊಡ್ಡದೊಡ್ಡ ಕಟ್ಟಡಗಳನ್ನು ಕಟ್ಟುವ ಈ ನಗರಿಯಲ್ಲಿ ತಮಗೊಂದು ಪುಟ್ಟ ಸೂರಿಲ್ಲದೆ ರಸ್ತೆ ಬದಿಯಾಲ್ಲೋ, ಖಾಲಿ ಸೈಟ್ ಒಂದರ ಮರೆಯಲ್ಲೋ, ಯಾರಾದರೂ ಬಂದು ಎತ್ತಂಗಡಿ ಮಾಡುವವರೆಗೆ ಠಿಕಾಣಿ ಹೂಡುವ ಕೂಲಿಕಾರರ ಮತ್ತು  ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವನ ಸಾಗಿಸುವ ವಲಸಿಗರ ಬದುಕಿಗೂ ಅರ್ಥವಿದೆಯಲ್ಲವೇ?

ಇವರು ಬದುಕು ಒಂದು ಅರ್ಥದಲ್ಲಿ ‘ದೀಪದ ಬುಡ ಕತ್ತಲೆ’. ಬೀದಿ ಬದುಕು ನಡೆಸುವವರ ಬಡತನ ಬಿಂಬಿಸುವ ಸಾಕಷ್ಟು ಚಿತ್ರಗಳನ್ನು ಛಾಯಾಗ್ರಾಹಕರು ತೆಗೆದಿದ್ದಾರೆ. ಆದರೆ ಅವರ ಬದುಕಿನ ಸಂತಸದ ಕ್ಷಣಗಳನ್ನು ಬಿಂಬಿಸುವ ಚಿತ್ರಗಳು ಕಡಿಮೆ. ಇಂಥ ಚಿತ್ರ ತೆಗೆಯಲು ಸೂಕ್ಷ್ಮ ದೃಷ್ಟಿ ಬೇಕು, ಒಳಗಣ್ಣು ಜಾಗೃತವಾಗಿರಬೇಕು.

ಬೆಂಗಳೂರಿನಲ್ಲಿ ಈಚೆಗೆ ಬೀದಿ ಛಾಯಾಗ್ರಹಣ (ಸ್ಟ್ರೀಟ್ ಫೋಟೊಗ್ರಫಿ) ಒಂದು ಪ್ರಕಾರವಾಗಿ ಬೆಳೆಯುತ್ತಿದೆ. ಈ ವಿಭಾಗದಲ್ಲಿ ಆಸಕ್ತಿ ಹೊಂದಿರುವ ಯುವ ಛಾಯಾಗ್ರಾಹಕ ನವೀನ್ ತೇಜಸ್ವಿ ಸೆರೆ ಹಿಡಿದ ದೃಶ್ಯ ಇದು.

ಹೊರಾಂಗಣ ಜೀವನವನ್ನು ಸಹಜವಾಗಿ ಸೆರೆ ಹಿಡಿಯುವುದು ಸುಲಭವಲ್ಲ. ಇದಕ್ಕೆ ಸೂಕ್ಷ್ಮ ದೃಷ್ಟಿ ಮತ್ತು ಬಯಲು ನೋಟಗಳ ಅಧ್ಯಯನ ಇರಬೇಕು. ಇದೀಗ ಬಿಎಸ್ಸಿ ಓದುತ್ತಿರುವ ಯುವ ಛಾಯಾಗ್ರಾಹಕ ನವೀನ್ ಅವರಿಗೆ ಈ ಅಂಶಗಳು ಒಲಿದಿರುವುದನ್ನು ಈ ಚಿತ್ರ ಸಾರಿ ಹೇಳುತ್ತದೆ. ಹೆಬ್ಬಾಳ  ಮೇಲ್ಸೇತುವೆಯ ಸ್ವಲ್ಪ ಜನ ಜಂಗುಳಿ ಕಡಿಮೆ ಇರುವ ಕೆಳಭಾಗದ ಅಂಚಿನಲ್ಲಿ  ಈ ದೃಶ್ಯವನ್ನು  ಸೆರೆ ಹಿಡಿಯಲಾಗಿದೆ.

ಏನೋ ತಪ್ಪು ಮಾಡಿ ಅಮ್ಮನ ಹತ್ತಿರ ರೆಡ್ ಆಗಿ ಸಿಕ್ಕಿಹಾಕಿಕೊಂಡ ಮಗ ಅಮ್ಮ ಕೊಡುವ ಶಿಕ್ಷೆಯ ಭಯದಲ್ಲಿ ಪರಿತಪಿಸುತ್ತಿರುವ ಪರಿ ಚೌಕಟ್ಟಿನಲ್ಲಿ ಮೂಡಿಬಂದಿದೆ. ಇದು ಕೇವಲ ಬೀದಿ ಬದುಕಿನ ದೃಶ್ಯ ಎನಿಸುವುದಿಲ್ಲ. ಎಲ್ಲ ಮನೆಯಲ್ಲೂ ಅಮ್ಮ– ಮಕ್ಕಳ ಇಂಥ ಮುಖಾಮುಖಿ ಸಾಮಾನ್ಯ ತಾನೆ? ಈ ಚಿತ್ರಕ್ಕೆ ಬಳಕೆಯಾದ ಕ್ಯಾಮೆರಾ ನಿಕಾನ್ D3100, ಲೆನ್ಸ್ 70–300  ಎಂಎಂ, ಷಟರ್ ಸ್ಪೀಡ್ 1/500 ಸೆಕೆಂಡ್, ಐಎಸ್‌ಒ 1425.

ಈ ಛಾಯಾಚಿತ್ರದೊಂದಿಗೆ ನಡೆಸಬಹುದಾದ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನ ಇಂತಿದೆ...
* ಕೆಲ ವರ್ಷಗಳ ಹಿಂದೆ ‘ಸ್ಟ್ರೀಟ್ ಫೋಟೊಗ್ರಫಿ’ ಪತ್ರಿಕಾ ಛಾಯಾಗ್ರಹಣಕ್ಕೆ ಸೀಮಿತವಾಗಿತ್ತು. ಆದರೆ ಈಗ ಇದು ಅನೇಕ ಆಯಾಮಗಳಿಗೆ ತೆರೆದುಕೊಂಡಿದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈ ವಿಭಾಗದಲ್ಲೂ ಅನೇಕ ಪಿಕ್ಟೋರಿಯಲ್ ಛಾಯಾಗ್ರಹಣ ಸಾಧ್ಯ ಎಂದು ಅನೇಕರಿಗೆ ಮನವರಿಕೆಯಾಗಿದೆ.

* ಈ ಚಿತ್ರ ನೋಡಲು ಚೆನ್ನಾಗಿದೆ. ಆದರೆ ಎಕ್ಸ್‌ಪೋಷರ್ ಸಮರ್ಪಕವಾಗಿ ಬಳಕೆಯಾಗಿಲ್ಲ. ಸೂರ್ಯನ ಬೆಳಕು ಚೆನ್ನಾಗಿದ್ದ ಕಾರಣ ಐ.ಎಸ್.ಒ ಸೆನ್ಸಿಟಿವಿಟಿ  100 ಅಥವಾ 160 ಇಟ್ಟುಕೊಂಡಿದ್ದರೆ ಸಾಕಾಗುತ್ತಿತ್ತು. ಷಟರ್ ವೇಗ 1/250 ಸೆಕೆಂಡ್ ಇಟ್ಟಿದ್ದರೆ ಒಟ್ಟಾರೆ ಭಾವ ಸಮರ್ಪಕವಾಗಿ ಮೂಡಿ ಬರುತ್ತಿತ್ತು.

* ಚಿತ್ರವನ್ನು ತುಂಬಾ ‘ಕ್ರಾಪ್’  ಮಾಡದೇ,  ಫೋರ್ ಗ್ರೌಂಡ್ (ಮುನ್ನೆಲೆ ಭಾಗ) ಸ್ವಲ್ಪ ಜಾಸ್ತಿ ಬಿಟ್ಟಿದ್ದರೆ, ಮಗುವಿನ  ಹಿಂಬದಿಯ ದೃಶ್ಯವೂ ಚೆನ್ನಾಗಿ ಕಾಣುವಷ್ಟು ಜಾಗ ಬಿಟ್ಟಿದ್ದರೆ ತಾಯಿ– ಮಗು ಮತ್ತು ಒಟ್ಟಾರೆ ಪ್ರದೇಶದ ನೋಟ ನೋಡುಗನ ಅರಿವಿಗೆ ಬರುತ್ತಿತ್ತು.

* ಈ ಚಿತ್ರದಲ್ಲಿ ಮಗುವಿನ ಮುಖಭಾವ   ಸರಿಯಾಗಿ   ಮೂಡಿದೆ. ಆದರೆ ತಾಯಿಯ  ಮುಖ ಹಿಂಬದಿಗೆ ವಾಲಿದೆ.  ಆಕೆಯ  ಮುಖದ ಭಾವನೆಗಳು (ಎಕ್ಸ್‌ಪ್ರೆಷನ್) ನೋಡುಗನ ಕಣ್ಣಿಗೆ ಗೋಚರಿಸುತ್ತಿಲ್ಲ.

* ಚಿತ್ರ ತೆಗೆಯುವ ಮೊದಲು ಛಾಯಾಗ್ರಾಹಕ ತನ್ನ ಎಡಭಾಗಕ್ಕೆ ಒಂದೆರಡು ಅಡಿ ಸರಿದು, ಫ್ರೇಂ ಫಿಕ್ಸ್ ಮಾಡಿಕೊಳ್ಳಬೇಕಿತ್ತು. ಹೀಗೆ ಮಾಡಿದ್ದರೆ ಇಬ್ಬರ  ಮುಖಗಳೂ ಸಮರ್ಪಕವಾಗಿ ಮೂಡುತ್ತಿದ್ದವು.

* ಯಾವುದೇ ಚಿತ್ರದ ಚೌಕಟ್ಟಿನ ಕಲಾತ್ಮಕ  ಸಂಯೋಜನೆ,  ಮನಸ್ಸಿಗೆ ನಾಟುವ ಒಟ್ಟಾರೆ ಸಂವೇದನೆಗೆ ಅತಿಮುಖ್ಯ ಅಂಶ. ಈ ವಿಭಾಗದಲ್ಲೂ ಈ ಚಿತ್ರ ಅಷ್ಟು ಯಶಸ್ವಿಯಾಗಿಲ್ಲ.

* ಬೀದಿ ಛಾಯಾಗ್ರಹಣವು ಕೇವಲ ‘ಯಥಾವತ್ತು ದಾಖಲೆ’ಯ ಮಿತಿಯನ್ನು ಮೀರಿ, ‘ಪಿಕ್ಟೋರಿಯನ್’ ಹಂತಕ್ಕೆ ಬೆಳೆಯುವ ಎಲ್ಲ ಸಾಧ್ಯತೆಗಳು ಈ ಚಿತ್ರದಲ್ಲಿ ಢಾಳಾಗಿ ಗೋಚರಿಸುತ್ತದೆ. ನವೀನ್ ತೇಜಸ್ವಿ ಅವರ ಪ್ರತಿಭೆಯನ್ನು ಈ ಚಿತ್ರ ಎತ್ತಿ ತೋರುತ್ತದೆ. ಯುವ ಛಾಯಾಗ್ರಾಹಕನ ಒಳಗಣ್ಣು ಇನ್ನಷ್ಟು ಸೂಕ್ಷ್ಮವಾದರೆ, ನಮ್ಮ ನಾಡಿಗೆ ಮತ್ತೊಬ್ಬ ಹೆಮ್ಮೆಯ ಛಾಯಾಗ್ರಾಹಕ ದೊರಕುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT