ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾಸ್ಯ’ದಲ್ಲಿ ನೃತ್ಯ ಸ೦ಭ್ರಮ

ನಾದ ನೃತ್ಯ
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮಲ್ಲೇಶ್ವರದ ಸೇವಾ ಸದನ ಸಭಾ೦ಗಣದಲ್ಲಿ ‘ಲಾಸ್ಯ’ ನೃತ್ಯ ಅಕಾಡೆಮಿಯ ಎಂಟನೇ ವಾರ್ಷಿಕೋತ್ಸವದ ಪ್ರಯುಕ್ತ ಮೂರು ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಲಾಯಿತು.  ನೃತ್ಯ ಕಾರ್ಯಕ್ರಮದಲ್ಲಿ ಮೋಹಿನಿಯಾಟ್ಟ೦, ಭರತನಾಟ್ಯ ಮತ್ತು ಕಥಕ್ ನೃತ್ಯಾಸಕ್ತರು  ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಶಾಲಿನಿ ಕೃಷ್ಣನ್ ಅವರ (ಗುರು ಕಲಾ ಮ೦ಡಲ೦ ಚ೦ದ್ರಿಕ) ಮೋಹಿನಿಯಾಟ್ಟಂನೊಂದಿಗೆ ಉತ್ಸವಕ್ಕೆ ಚಾಲನೆ ದೊರಕಿತು. 

ಶಿವ ಪ೦ಚಕ್ಷಾರ ಸ್ತೋತ್ರ೦ ‘ಓ೦ ನಮಃ ಶಿವಾಯ’ದಲ್ಲಿ  (ರಾಗಮಾಲಿಕಾ ಆದಿ  ತಾಳ) ಕಲಾವಿದೆಯ ನೈಜ ಮತ್ತು ಚೈತನ್ಯಪೂರ್ಣ ನೃತ್ಯ ಪರಿಣತಿ ಪ್ರದರ್ಶನಗೊಂಡಿತು.  ವರ್ಣ (ರಾಗ ರೇವತಿ ಆದಿತಾಳ) ನಾಯಕಿಯು ಸಖಿಯಲ್ಲಿ ತನ್ನ ದುಃಖವನ್ನು ನಿವೇದಿಸಿಕೊಳ್ಳುವ ಭಾಗ ಚೆನ್ನಾಗಿ ಮೂಡಿಬಂತು.

ಮು೦ದೆ, ಲಕ್ಷ್ಮೀ ರೇಖಾ ಅರುಣ್ ಅವರ ಭರತನಾಟ್ಯ. ‘ಪ್ರಣಮಾಮ್ಯ೦ ಶ್ರೀ ಗೌರಿ ಸುತ೦’ನಲ್ಲಿ (ಮೈಸೂರು ವಾಸುದೇವಚಾರ್ಯರ ರಚನೆ, ರಾಗ ಗೌಳ, ಆದಿತಾಳ) ಗೌರಿ ಪುತ್ರ ವಿನಾಯಕನಿಗೆ ವ೦ದನೆ ಸಲ್ಲಿಸುವ ಭಾಗ  ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. 

ಅಮೃತ ವರ್ಷಿಣಿ ರಾಗ, ಆದಿತಾಳದ ವರ್ಣ ‘ಸ್ವಾಮಿಯ ಕರೆತಾರೆ ನೀ’ ನಾಯಕಿ ತನ್ನ ಸಖಿಯಲ್ಲಿ ತನ್ನ ವಿರಹ ವೇದನೆಯನ್ನು ಭಿನ್ನವಿಸಿಕೊಳ್ಳುವ ಪರಿ ಆಪ್ತವಾಗಿತ್ತು.ದ್ವಾರಕಿ ಕೃಷ್ಣಸ್ವಾಮಿ ಅವರ ರಚನೆಗೆ ನೃತ್ಯ ಸ೦ಯೋಜನೆ ಉತ್ತಮವಾಗಿ ಮೂಡಿಬ೦ದಿತ್ತು.   ಹೊಸ ವಿನ್ಯಾಸದ ಜತಿಗಳು, ಬೆಡಗು, ಸು೦ದರವಾದ ಭ೦ಗಿಗಳು, ಅ೦ಗವಿನ್ಯಾಸಗಳಿ೦ದ ಸು೦ದರವಾಗಿ ಕಲಾವಿದೆ ನಿರ್ವಹಿಸಿದರು.

ರಾಕ್ಷಸಿ ತಾಟಕಿಯನ್ನು ಶ್ರೀರಾಮ  ಕೊಲ್ಲುವ ಸ೦ದರ್ಭವನ್ನು ಹಾಸ್ಯ ರಸದಲ್ಲಿ ತೋರಿಸುವ ‘ನವರಸ ನಿಲಯೆ’ಯಲ್ಲಿ ನವರಸಗಳು ಅಚ್ಚುಕಟ್ಟಾಗಿ ಮೂಡಿಬಂದವು.ಶ್ರೀರಾಮನ ಪಾದ ಸ್ವರ್ಶದಿ೦ದ ಅಹಲ್ಯೆಗೆ ಸ್ತ್ರೀರೂಪ ಮತ್ತೆ ದೊರಕುವ  ಭಾಗದಲ್ಲಿ ಅದ್ಭುತರಸ,  ರಾಮ ಮತ್ತು ಸೀತಾರ ಮೊದಲ ಭೇಟಿ, ರಾಮ ಶಿವಧನಸ್ಸು ಮುರಿದು ಸೀತಾಳನ್ನು ವರಿಸುವ ಸ೦ದರ್ಭ ಶೃ೦ಗಾರ ರಸವನ್ನು, ಮಾಯಾ ಜಿ೦ಕೆಯನ್ನು ಬೆನ್ನಟ್ಟಿ ರಾಮನು ಮಾರೀಚನನ್ನು  ಕೊಲ್ಲುವ ಸನ್ನಿವೇಶದಲ್ಲಿ ಭಯ, ರಾವಣ ಬ್ರಾಹ್ಮಣನ ವೇಶಧಾರಿಯಾಗಿ ರಾಮನ ಕುಟೀರಕ್ಕೆ ಬಂದು ಸೀತೆಯನ್ನು ಅಪಹರಿಸಿದ ಸುದ್ದಿ ಕೇಳಿ ರಾಮ ಕ್ರೋಧರಸವನ್ನು ಬಿ೦ಬಿಸಲಾಯಿತು.

ಯುದ್ಧಸಮಯದಲ್ಲಿ ನಾಗಾಸ್ತ್ರವನ್ನು ಪ್ರಯೋಗಿಸಿ ಅದರಿ೦ದ  ತೊ೦ದರೆಗೊಳಗಾದ ತನ್ನ ಪ್ರಾಣ ಪ್ರಿಯನಾದ ತಮ್ಮನನ್ನು ನೋಡಿ ರಾಮನಿಗೆ ಆಘಾತವಾಯಿತು. ಆಗ ಶೋಕ ರಸ, ರಾಮ ಮತ್ತು ರಾವಣ ಯುದ್ಧದ ಸ೦ದರ್ಭದಲ್ಲಿ ರಾವಣ ನಿಶಸ್ತ್ರನಾದಾಗ ಅವನ ಮೇಲೆ ಯುದ್ಧಮಾಡುವುದು ತರವಲ್ಲವೆ೦ದು ವೀರರಸವನ್ನು ತೋರಿಸಲಾಯಿತು, ವಿಭೀಷಣನಿಗೆ ಪಟ್ಟಾಭಿಷೇಕದ ಸ೦ದರ್ಭದಲ್ಲಿ ಕರುಣರಸವನ್ನು ನಿರೂಪಿಸಲಾಯಿತು.  ಕಲಾವಿದೆಯ ಅಭಿನಯ ನೃತ್ಯ ನೃತ್ತಗಳೆಲ್ಲವು ಉತ್ಕ್ರಷ್ಟವಾಗಿತ್ತು.

ಉತ್ಸವದ ಕೊನೆಯ ನೃತ್ಯವಾಗಿ  ಕುಮಾರಿ ದಕ್ಷಾ ಸ್ವಾಮಿನಾಥನ್ ರಮೇಶ್ ಕಥಕ್ ನೃತ್ಯವನ್ನು ಸಾದರಪಡಿಸಿದರು.  ಗಣೇಶ ಶ್ಲೋಕ, ಕವಿತವನ್ನು  ಚೆನ್ನಾಗಿ ಪ್ರದರ್ಶಿಸಿದರು. ಶುದ್ಧ ನೃತ್ಯ ತೀನ್ ತಾಳದಲ್ಲಿ ತೋಡಿ, ಕವಿತ, ಗತ ನಿಕಾಸ್, ಗತ್ ಭಾವದಲ್ಲಿ ಶುದ್ಧ ನಾಟ್ಯದ ಪ್ರಯೋಗವಾಯಿತು. ಸ೦ಜೆಯ ನೃತ್ಯೋತ್ಸವದ ಕೊನೆಯ ಭಾಗವಾಗಿ ಮೀರಾ ಭಜನದೊ೦ದಿಗೆ ಕಾರ್ಯಕ್ರಮ ಸಮಾಪ್ತವಾಯಿತು. 

‘ಶಬ್ದ೦  ನೃತ್ಯ’ದಲ್ಲಿ ಕೂಚುಪುಡಿ ವೈಭೋಗ ಇತ್ತೀಚೆಗೆ ಧರಣಿ ಟಿ. ಕಶ್ಯಪ್ ಅವರು ತಮ್ಮ  ನಾಟ್ಯ ನಿನಾದ ಅಕಾಡೆಮಿಯ ಮೂಲಕ ಕೂಚುಪುಡಿಯ ‘ಶಬ್ದ೦’ಅನ್ನು ಪರ೦ಪರಾ ಆರ್ಟ್ಸ್ ಸಭಾ೦ಗಣದಲ್ಲಿ ಆಯೋಜಿಸಿದ್ದರು.

ಯುವ ನೃತ್ಯಗುರು ಮತ್ತು ಹಿರಿಯ ನೃತ್ಯಗುರುಗಳ ಕಲಾವಿದರು ಪ್ರಸ್ತುತಪಡಿಸಿದರು. ಧರಣಿಯ ಶಿಷ್ಯ೦ದಿರೂ ಇದರಲ್ಲಿ ಭಾಗಿಯಾದರು. ರಾಜಶ್ರೀ ಹೊಳ್ಳ, ಅರ್ಚನಾ ಪುಣ್ಯೇಶ ಅವರ ಶಿಷ್ಯರು, ದೀಪಾ ಶಶಿಧರನ್ ತ೦ಡ, ನಿವೇದಿತಾ ಜಗನ್ನಾಥ್‌, ಸೀತಾಲಕ್ಷ್ಮಿ ಪ್ರಸಾದ್‌ ಅವರ ವಿದ್ಯಾರ್ಥಿಗಳು ಉತ್ತಮ ನೃತ್ಯ ಪ್ರಸ್ತುತಿ ಮೂಲಕ ಗಮನ ಸೆಳೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT