ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಮ್ಮಿ’ಯ ಹೊಸ ಕನಸುಗಳು

ಸಿನಿ ಮಾತು
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಪ್ರಿಯಾಂಕಾ’ ಸಿನಿಮಾದ ಮೂಲಕ ಬಣ್ಣದ ಬದುಕಿನ ಸೆಕೆಂಡ್‌ ಇನಿಂಗ್ಸ್‌ ಆರಂಭಿಸಿದ್ದ ಪ್ರಿಯಾಂಕಾ ಉಪೇಂದ್ರ, ‘ಮಮ್ಮಿ’ ಸಿನಿಮಾದಲ್ಲಿ ವಿಭಿನ್ನ ಪಾತ್ರಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.

ಈ ಹಾರರ್‌ ಸಿನಿಮಾದಲ್ಲಿ ಆರು ವರ್ಷದ ಪುಟ್ಟ ಮಗಳನ್ನು ಹೊಂದಿರುವ ಗರ್ಭಿಣಿ ಪಾತ್ರದಲ್ಲಿ ನಟಿಸುವ ಮೂಲಕ ಭಿನ್ನ ಪ್ರಯೋಗಗಳಿಗೆ ಒಳಗಾಗುವ ತಮ್ಮ ಅಭಿಲಾಷೆಯ ದಿಶೆಯಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.

ಮದುವೆಯಾದ ಮೇಲೆ ನಟನೆಯಿಂದ ದೂರವೇ ಉಳಿದಿದ್ದರೂ ಅವರಿಗೆ ಬಣ್ಣದ ಲೋಕದ ಒಡನಾಟವೇನೂ ಕಮ್ಮಿಯಾಗಿರಲಿಲ್ಲ. ಮನಸ್ಸಿನೊಳಗೆ ಚಿಗುರುವ ಹಲವು ಕನಸುಗಳಿಗೆ ಅವರು ಸಂಸಾರದ ನೆಪದಲ್ಲಿ ಕಡಿವಾಣವನ್ನೂ ಹಾಕಿಕೊಳ್ಳಲಿಲ್ಲ. ಈ ನಡುವಿನ ಬಿಡುವಿನಲ್ಲಿ ಮನದಲ್ಲಿ ಅಚ್ಚುಗೊಂಡ ಹಲವು ಕನಸುಗಳನ್ನು ನನಸಾಗಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಿಯಾಂಕಾ ಸಿದ್ಧರಾಗಿದ್ದಾರೆ.

ಸ್ವಂತ ನಿರ್ಮಾಣ ಸಂಸ್ಥೆ, ನಿರ್ದೇಶನ, ವಿಭಿನ್ನ ಚಿತ್ರಗಳಲ್ಲಿ ನಟನೆ ಹೀಗೆ ಹಲವು ಯೋಜನೆಗಳನ್ನು ಮನಸಲ್ಲಿ ಗುಡ್ಡೆ ಹಾಕಿಕೊಂಡಿರುವ ಆಲೋಚನೆಗಳನ್ನು ಒಂದೊಂದಾಗಿ ಕಾರ್ಯಗತಗೊಳಿಸುವ ಯೋಚನೆ ಪ್ರಿಯಾಂಕಾ ಅವರದು.

ಈ ನಡುವೆ ಪ್ರಿಯಾಂಕಾ ಅವರಿಗೆ ನಟನೆಗೆ ಸಾಕಷ್ಟು ಅವಕಾಶಗಳು ಬರುತ್ತಲೇ ಇವೆ. ಆದರೆ ಅವುಗಳಲ್ಲಿ ಬಹುತೇಕ ಪಾತ್ರಗಳು ಒಂದೇ ರೀತಿಯವು. ನಟನೆಯ ವಿಷಯದಲ್ಲಿ ಅವರು ತುಂಬಾ ಚ್ಯೂಸಿ.

‘ಕಾಲಹರಣ ಮಾಡಲಿಕ್ಕೆ ನಟಿಸುವುದು ನನಗೆ ಬೇಕಾಗಿಲ್ಲ. ಸಿನಿಮಾಗಳ ಸಂಖ್ಯೆ ಮುಖ್ಯವಲ್ಲ. ಭಿನ್ನವಾದ, ಒಳ್ಳೆಯ ಪಾತ್ರಗಳಲ್ಲಿ ನಟಿಸಬೇಕು. ಒಂದು ಪಾತ್ರವು ಮೊದಲು ನನ್ನನ್ನು ರೋಮಾಂಚಿತಗೊಳಿಸಬೇಕು’ ಎನ್ನುವ ಅವರಿಗೆ ಕಿರುತೆರೆಯಿಂದ ಧಾರಾವಾಹಿ, ರಿಯಾಲಿಟಿ ಷೋಗಳಲ್ಲಿ ಪಾಲ್ಗೊಳ್ಳುವಂತೆಯೂ ಸಾಕಷ್ಟು ಅವಕಾಶಗಳು ಬರುತ್ತಿವೆ.

ಆದರೆ ಸದ್ಯಕ್ಕೆ ಕಿರುತೆರೆಯತ್ತ ಮುಖಮಾಡಲು ಅವರಿಗೆ ಇಷ್ಟವಿಲ್ಲ. ‘ಚಿತ್ರರಂಗಲ್ಲಿಯೇ ಸೃಜನಶೀಲವಾಗಿ ಇನ್ನಷ್ಟು ತೊಡಗಿಕೊಳ್ಳಬೇಕು’ ಎನ್ನುವುದು ಅವರ ಅಭಿಲಾಷೆ.‘ನನ್ನ ವಯೋಮಾನದವರನ್ನು ಆಧರಿಸಿ ಬರುವ ಸಿನಿಮಾಗಳು ನಮ್ಮಲ್ಲಿ ತುಂಬಾ ಕಡಿಮೆ. ಆದರೆ ನಿಧಾನವಾಗಿ ಟ್ರೆಂಡ್‌ ಬದಲಾಗುತ್ತಿದೆ. ಹಿಂದಿಯಲ್ಲಿಯೂ ಗಮನಿಸಬಹುದು.

ವಿದ್ಯಾ ಬಾಲನ್‌, ಕಾಜೋಲ್‌, ಐಶ್ವರ್ಯಾ ರೈ ಇವರೆಲ್ಲರೂ ಬಾಲಿವುಡ್‌ನಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ’ ಎನ್ನುವ ಈ ಬೆಂಗಾಲಿ ಬೆಡಗಿ ಅಂಥ ಟ್ರೆಂಡ್‌ ಕನ್ನಡದಲ್ಲಿಯೂ ರೂಪುಗೊಳ್ಳಬೇಕಾದ ಅಗತ್ಯದ ಬಗ್ಗೆ ಒತ್ತುಕೊಡುತ್ತಾರೆ.

ನಿರ್ಮಾಣ ಸಂಸ್ಥೆ
‘ನನ್ನ ವಯೋಮಾನದವರಿಗೆ ಒಂದು ಪ್ರೇಕ್ಷಕವರ್ಗ ಇದೆಯಲ್ಲ, ಅವರಿಗಾಗಿ ಯಾರೂ ಸಿನಿಮಾ ಮಾಡುತ್ತಿಲ್ಲ. ಒಂದೋ ಆ್ಯಕ್ಷನ್‌ ಹೀರೊಗಳ ಕಥೆ, ಇಲ್ಲವೇ ಹದಿಹರೆಯದವರ ಪ್ರೇಮಕಥೆ. ಇವೆರಡರ ನಡುವಿನ ವಯಸ್ಸಿನವರ ಕಥೆಗಳು ಸಿನಿಮಾ ಆಗುವುದು ತುಂಬ ಅಪರೂಪ. ಆದ್ದರಿಂದ ನನ್ನ ನಿರ್ಮಾಣ ಸಂಸ್ಥೆಯಲ್ಲಿ ಇಂಥ ಸಿನಿಮಾಗಳನ್ನು ಮಾಡುವ ಆಲೋಚನೆ ಇದೆ’ ಎನ್ನುವ ಪ್ರಿಯಾಂಕಾ ಅವರಿಗೆ ಎರಡು ವರ್ಷಕ್ಕೊಂದಾದರೂ ಭಿನ್ನ ಸಿನಿಮಾ ರೂಪಿಸುವ ಉದ್ದೇಶ ಇದೆ.

ಹಾಗೆಂದು ಮಹಿಳಾ ಪ್ರಧಾನ ಸಿನಿಮಾಗಳನ್ನೇ ಮಾಡವುದು ಅವರ ಗುರಿಯಲ್ಲ. ‘ಕಥಾ ಪ್ರಧಾನ ಸಿನಿಮಾಗಳನ್ನು ಮಾಡುತ್ತೇನೆ’ ಎನ್ನುವುದು ಅವರ ನಿಲುವು.ಈಗಾಗಲೇ ಪ್ರಿಯಾಂಕಾ ಅವರ ಬಳಿ ಎರಡು ಕಥೆಗಳು ಸಿದ್ಧವಿವೆ. ಒಂದು ಕಥೆಯನ್ನು ಉಪೇಂದ್ರ ಅವರಿಗಾಗಿ ಮತ್ತು ಇನ್ನೊಂದು ತಮಗಾಗಿಯೇ ಅವರು ಸಿದ್ಧಪಡಿಸಿಕೊಂಡಿದ್ದಾರೆ. ಆದರೆ ಉಪೇಂದ್ರ ಹಲವು ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ತಾವೇ ನಾಯಕಿಯಾಗಿ ನಟಿಸಲಿರುವ ಸಿನಿಮಾವನ್ನೇ ಮೊದಲು ಮಾಡಲು ಅವರು ನಿರ್ಧರಿಸಿದ್ದಾರೆ.

‘ಇದು ಥ್ರಿಲ್ಲರ್‌ ಕಥೆ’ ಎಂಬ ಸುಳಿವನ್ನೂ ಅವರು ನೀಡುತ್ತಾರೆ. ಮುಂದಿನ ಜನವರಿ 14ರಂದು ಹೊಸ ಸಿನಿಮಾದ ವಿವರಗಳನ್ನು ಬಹಿರಂಗಪಡಿಸಲು ಸಿದ್ಧತೆ ನಡೆಸಿದ್ದಾರೆ.ನಿರ್ದೇಶನಕ್ಕೆ ಇಳಿಯುವ ಮನಸ್ಸಿದ್ದರೂ ಅದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಎಚ್ಚರವೂ ಅವರಿಗಿದೆ.

ನಾವೂ ಸಮರ್ಥರು
‘ಮಹಿಳಾ ನಿರ್ದೇಶಕರ ಸಂಖ್ಯೆ ಕಡಿಮೆ ಇದೆ ಅಂದಾಕ್ಷಣ ಅವರು ನಿರ್ದೇಶನಕ್ಕೆ ಅಸಮರ್ಥರು ಎಂದಲ್ಲ’ ಎನ್ನುವ ಅವರು ‘ನಿಮಗೆ ಯಾರು ನಿರ್ದೇಶಿಸಿದ್ದು ಎಂದು ಹೇಳಿದರೆ ಮಾತ್ರ ಅವರು ಗಂಡೋ ಹೆಣ್ಣೋ ತಿಳಿಯುವುದಲ್ಲವೇ? ಸಿನಿಮಾ ಮುಖ್ಯ. ಯಾರು ನಿರ್ದೇಶಿಸಿದ್ದು ಎನ್ನುವುದಲ್ಲ’ ಎಂದು ಸ್ಪಷ್ಟವಾಗಿ ನುಡಿಯುತ್ತಾರೆ.

ಸಿನಿಮಾ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆ ಮನೆಯಲ್ಲಿಯೇ ಗುರುಗಳಿದ್ದಾರಲ್ಲವೇ (ಉಪೇಂದ್ರ)? ಎಂದು ಕೆಣಕಿದರೆ ‘ಅದೇ ದೊಡ್ಡ ಸಮಸ್ಯೆ’ ಎಂದು ನಕ್ಕರು. ಆ ನಗುವಿನಲ್ಲಿ ವಿಷಾದದ ಎಳೆಯೂ ಇತ್ತು. ‘ನಾನು ಏನೇ ಮಾಡಿದರೂ ಅದು ಉಪೇಂದ್ರ ಮಾಡಿದ್ದು ಎಂದು ಹೇಳಿಬಿಡ್ತಾರೆ’ ಎನ್ನುವುದು ಅವರ ಬೇಸರಕ್ಕೆ ಕಾರಣ.

‘ನನ್ನದು ಮತ್ತು ಉಪೇಂದ್ರ ಅವರ ಸಂವೇದನೆಗಳು ಪೂರ್ತಿ ಭಿನ್ನವಾಗಿವೆ. ಹಾಗೆಯೇ ನಾವು ಮಾಡುವ ಸಿನಿಮಾಗಳೂ ಅಷ್ಟೇ ಭಿನ್ನವಾಗಿರುತ್ತವೆ’ ಎಂದು ಸ್ಪಷ್ಟನೆ ನೀಡುತ್ತಾರೆ. ಇಷ್ಟೆಲ್ಲ ಕೆಲಸಗಳನ್ನು ಮೈಮೇಲೆ ಎಳೆದುಕೊಂಡಿದ್ದರೂ ಕುಟುಂಬದ ಕಾಳಜಿ ಅವರಲ್ಲಿ ಕಿಂಚಿತ್‌ ಕಮ್ಮಿಯಾಗಿಲ್ಲ.  ಮಕ್ಕಳ ಪಾಲಿಗೆ ಅವರೀಗಲೂ ಮುದ್ದಿನ ‘ಮಮ್ಮಿ’ಯೇ.  ಕುಟುಂಬ ಚೆನ್ನಾಗಿದ್ದರೇ ಏನಾದರೂ ಸಾಧನೆ ಮಾಡಲು ಸಾಧ್ಯ ಎನ್ನುವುದು ಅವರ ಅನುಭವದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT