ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಯಾಮೆರಾ ನನ್ನ ಕುಂಚ’

ನಾ ಕಂಡ ಬೆಂಗಳೂರು
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನನ್ನ ಪೂರ್ತಿ ಹೆಸರು ತಂಜಾವೂರು ನಟೇಶಾಚಾರ್ ಅಯ್ಯಂ ಪೆರುಮಾಳ್. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಕಬ್ಬನ್ ಪೇಟೆಯಲ್ಲಿ ಅನೇಕ ವರ್ಷಗಳು ವಾಸವಾಗಿದ್ದೆವು. ನನ್ನ ಪ್ರಾಥಮಿಕ ಶಿಕ್ಷಣ ಶುರುವಾದದ್ದು ಅವೆನ್ಯೂ ರಸ್ತೆಯಲ್ಲಿದ್ದ ಶಾಲೆಯಲ್ಲಿ. ಈಗ ರಂಗಸ್ವಾಮಿ ದೇವಸ್ಥಾನ ಇದೆಯಲ್ಲ, ಅಲ್ಲಿ ಪ್ರೌಢ ಶಿಕ್ಷಣ ಮುಗಿಸಿದೆ.

ಆಗ ನನ್ನ ಗುರುಗಳೊಬ್ಬರು ನನ್ನ ಹೆಸರನ್ನು ಕಿರಿದಾಗಿಸಿಕೊಳ್ಳಲು ಸೂಚಿಸಿದರು. ಅಂದಿನಿಂದ ಟಿ.ಎನ್.ಎ.ಪೆರುಮಾಳ್ ಎಂದೇ ಗುರುತಿಸಿಕೊಂಡೆ. ಬೆಂಗಳೂರು ಅದೇ ಹೆಸರನ್ನು ಒಪ್ಪಿಕೊಂಡಿತು.

ಹವ್ಯಾಸಗಳ ಮೇಲುಗೈ
ಹೈಸ್ಕೂಲ್ ಮುಗಿಸಿದ ನಂತರ ಮುಂದೆ ಓದಲು ಆಗಲಿಲ್ಲ. ಆಗಲೇ ನನಗೆ ಫೋಟೊಗ್ರಫಿ, ಪೇಂಟಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಪ್ರಾಣಿಗಳ ಕುರಿತಾದ ಪುಸ್ತಕಗಳನ್ನು ಓದುವುದೂ ಸೇರಿದಂತೆ ಅನೇಕ ಹವ್ಯಾಸಗಳಿದ್ದವು.

ಜಿಮ್ ಕಾರ್ಬೆಟ್ ಅವರ ಶಿಕಾರಿ ಪುಸ್ತಕಗಳನ್ನು ಓದಿದ ಮೇಲೆ ಕಾಡು ಮತ್ತು ಅಲ್ಲಿನ ಅನೂಹ್ಯ ಜಗತ್ತಿನೆಡೆಗೆ ಆಕರ್ಷಿತನಾದೆ. ಆಗಲೇ ನನಗೆ ಕಾಡಿನ ರೊಮ್ಯಾನ್ಸ್ ಅನುಭವಿಸಬೇಕು ಎಂಬ ಆಸೆ ಹುಟ್ಟಿದ್ದು. ನಮಗೆ ಹತ್ತಿರ ಇದ್ದ ಕಾಡು ಬನ್ನೇರುಘಟ್ಟ. ಜೀವ ವೈವಿಧ್ಯದ ಮೊದಲ ಪಾಠಗಳನ್ನು ಕಲಿತಿದ್ದು ಬನ್ನೇರುಘಟ್ಟದ ದಟ್ಟ ಅರಣ್ಯದಲ್ಲಿ.

ರೈಫಲ್ ಶೂಟಿಂಗ್ ನನ್ನ ಇನ್ನೊಂದು ಹವ್ಯಾಸ. ಆಗ ಮೈಸೂರು ಸ್ಟೇಟ್ ರೈಫಲ್ ಅಸೋಸಿಯೇಷನ್ ಇತ್ತು. ಅದರಲ್ಲಿ ನಾನು ಸದಸ್ಯನಾಗಿದ್ದೆ. ಆಗ ರೈಫಲ್ ಸ್ಪರ್ಧೆಯಲ್ಲಿ ಮೈಸೂರು ರಾಜ್ಯಕ್ಕೆ ಪ್ರಶಸ್ತಿ ತಂದು ಕೊಟ್ಟ ತಂಡದಲ್ಲಿ ನಾನೂ ಇದ್ದೆ. ಇದರ ಜೊತೆಗೆ ಫೋಟೊಗ್ರಫಿ ಹವ್ಯಾಸ ಮುಂದುವರಿದಿತ್ತು.

ಬನ್ನೇರುಘಟ್ಟದಲ್ಲಿಯೇ ಒಮ್ಮೆ ನನ್ನ ಫೋಟೊಗ್ರಫಿ ಗುರುಗಳಾದ ಒ.ಸಿ.ಎಡ್ವರ್ಡ್ಸ್ ಅವರನ್ನು ಭೇಟಿಯಾದೆ. ನಮ್ಮಿಬ್ಬರ ಇಷ್ಟದ ಹವ್ಯಾಸ ನಮ್ಮ ನಡುವಿನ ಸ್ನೇಹ ಗಾಢವಾಗಲು ಕಾರಣವಾಯಿತು. ಅವರ ಮಾರ್ಗದರ್ಶನದಲ್ಲಿ ಫೋಟೊಗ್ರಫಿ ಅಭ್ಯಾಸ ಮಾಡಿದೆ. ಅವರು ಪ್ರಕೃತಿ ಮತ್ತು ಅದರ ಮಡಿಲಿನಲ್ಲಿರುವ ಅಸಂಖ್ಯಾತ ಪ್ರಾಣಿಗಳನ್ನು ಹೇಗೆ ಇಡಿಯಾಗಿ, ಅದರ ಸೌಂದರ್ಯಕ್ಕೆ ಚ್ಯುತಿ ಬಾರದಂತೆ ಸೆರೆ ಹಿಡಿಯಬೇಕು ಎಂಬ ಬಗ್ಗೆ ಎಲ್ಲ ದೃಷ್ಟಿಯಿಂದಲೂ ಅತ್ಯುತ್ತಮ ಎನ್ನುವಂಥ ಪಾಠಗಳನ್ನು ನನಗೆ ಹೇಳಿಕೊಟ್ಟರು.

ಆಗ ಅಸ್ತಿತ್ವದಲ್ಲಿದ್ದ ಮೈಸೂರು ಫೋಟೊಗ್ರಫಿಕ್ ಸೊಸೈಟಿಗೆ ನಾನು ಸದಸ್ಯನಾಗಿದ್ದೆ. ಅದು ಆಗಿನ ಕಾಲಕ್ಕೆ ಜಗದ್ವಿಖ್ಯಾತ ಫೋಟೊಗ್ರಫಿಕ್ ಸೊಸೈಟಿಗಳಲ್ಲಿ ಒಂದಾಗಿತ್ತು.ಸರ್ ಸಿ.ವಿ.ರಾಮನ್ ಅದರ ಅಧ್ಯಕ್ಷರಾಗಿದ್ದರು.  ಮೈಸೂರು ಫೋಟೊಗ್ರಫಿಕ್ ಸೊಸೈಟಿ ಜಗದ್ವಿಖ್ಯಾತ ಆಗಿದ್ದ ಕಾರಣ ಶ್ರೇಷ್ಠ ಛಾಯಾಚಿತ್ರಗಾರರು ಇಲ್ಲಿಗೆ ಬರುತ್ತಿದ್ದರು.

ಸದಸ್ಯರೆಲ್ಲ ಕೂಡಿಕೊಂಡು ಛಾಯಾಚಿತ್ರ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದೆವು. ಆಗ ಕ್ಯಾಮೆರಾ ಸಿಗುವುದು ಕಷ್ಟವಿತ್ತು. ಫಿಲ್ಮ್ ಕೂಡ ಸಿಗ್ತಿರಲಿಲ್ಲ. ಆದರೂ ಫೋಟೊಗ್ರಫಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದೆವು.

ವೃತ್ತಿ ಜೀವನ...
ನನ್ನ ತಂದೆ ಆಭರಣ ತಯಾರಕರಾಗಿದ್ದರು. ಆಭರಣ ಮಾರುವ ಅಂಗಡಿಯೂ ಇತ್ತು. ನನ್ನ ತಂದೆಯ ನಂತರ ಅದನ್ನು ನಾನು ಮುಂದುವರಿಸಿದೆನಾದರೂ ವ್ಯಾಪಾರ ಕೈ ಹತ್ತಲಿಲ್ಲ. ಬ್ರಿಗೇಡ್ ರಸ್ತೆಯಲ್ಲಿದ್ದ ರೇಡಿಯೊ ಎಂಜಿನಿಯರಿಂಗ್ ಕಂಪೆನಿಯಲ್ಲಿ ರೇಡಿಯೊ ಸರ್ವಿಸ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡೆ. ಅದೇ ಕಂಪೆನಿಯವರು ಮಾಡರ್ನ್ ರೇಡಿಯೊ ಎಂಬ ಕಂಪೆನಿ ಶುರು ಮಾಡಿದ್ದರು. ಅಲ್ಲಿ ಕೂಡ ಕೆಲಸ ಮಾಡಿದ್ದೆ. ಆದರೆ ಅದರಲ್ಲೇ ಮುಂದುವರಿಯಲು ಮನಸ್ಸು ಒಪ್ಪಲಿಲ್ಲ.

ಫೋಟೊಗ್ರಫಿ ನನ್ನ ಸಹಾಯಕ್ಕೆ ಬಂತು. ಪ್ರಸಿದ್ಧ ಛಾಯಾಚಿತ್ರಗಾರರಾದ ಎಂ.ವೈ.ಘೋರ್ಪಡೆ ಅವರ ಕಂಪೆನಿಗೆ ಸೇರಿಕೊಂಡೆ. ಅವರ ಪ್ರೋತ್ಸಾಹ ನೆನೆಯುವಂಥದ್ದು.ಅವರೊಂದಿಗೆ ಭಾರತದ ಅನೇಕ ಅಭಯಾರಣ್ಯಗಳಿಗೆ ಹೋಗಿ ಫೋಟೊಗ್ರಫಿ ಮಾಡಿದೆ. ಆ ಎಲ್ಲ ಅನುಭವಗಳನ್ನು ಫೋಟೊಗಳೊಂದಿಗೆ ಘೋರ್ಪಡೆಯವರು ‘ಸನ್‌ಲೈಟ್ ಅಂಡ್ ಶಾಡೊಸ್’ (Sunlight and Shadows) ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ಅಲ್ಲೊಂದು– ಇಲ್ಲೊಂದು
ಬೆಂಗಳೂರಿನ ಸುಮಾರು 70 ವರ್ಷದ ಫೋಟೊಗ್ರಫಿ ಜಗತ್ತಿನ ಆಗುಹೋಗುಗಳಿಗೆ ನಾನು ಸಾಕ್ಷಿ. ಆಗ ಬೆಂಗಳೂರಿನಲ್ಲಿ ಅಲ್ಲೊಂದು– ಇಲ್ಲೊಂದು ಫೋಟೊ ಸ್ಟುಡಿಯೊಗಳು ಇದ್ದವು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಛಾಯಾಗ್ರಹಣ ಕಲೆಯಲ್ಲಿ ಬೆಂಗಳೂರು ವಿಶ್ವದಲ್ಲಿಯೇ ಅತ್ಯುತ್ತಮ ಸ್ಥಾನದಲ್ಲಿದೆ. ಅದಕ್ಕೆ ಕಾರಣ ನಮ್ಮ ಹಿರೀಕರಾದ ಎಡ್ವರ್ಡ್ಸ್, ರಾಜಗೋಪಾಲ್, ಡಾ.ಥಾಮಸ್ ಅಂಥವರು ಹಾಕಿಕೊಟ್ಟ ಗಟ್ಟಿ ಅಡಿಪಾಯ.

ಕೆ.ಎನ್‌.ಗುರುಸ್ವಾಮಿಯವರ ಕ್ಯಾಡಿಲಾಕ್ ಕಾರ್
‘ಪ್ರಜಾವಾಣಿ’ ಸಂಸ್ಥಾಪಕರಾದ ಕೆ.ಎನ್.ಗುರುಸ್ವಾಮಿ ಅವರ ಬಳಿ ಕಪ್ಪು ಬಣ್ಣದ ಕ್ಯಾಡಿಲಾಕ್ ಕಾರ್ ಇತ್ತು. ತಲೆ ಮೇಲೊಂದು ಟರ್ಬನ್ ಸುತ್ತಿಕೊಂಡು, ಶಿಸ್ತಿನ ಸಿಪಾಯಿಯಂತೆ ಗಂಭೀರವಾಗಿ ಬರುತ್ತಿದ್ದರೆ ನಾವೆಲ್ಲ ಒಮ್ಮೆ ತಿರುಗಿ ನೋಡುತ್ತಿದ್ದೆವು. ಆಗ ಎಂ.ಜಿ.ರಸ್ತೆಯಲ್ಲಿ ದಿನವೂ ಓಡಾಡುತ್ತಿದ್ದ ಕಾರು ಅದೊಂದೇ.

ನಿರ್ಜನ ಬೆಂಗಳೂರು
ಈಗಿನ ಕಂಟೋನ್ಮೆಂಟ್‌ಗೆ ಬರಲು ಆಗ ಜನರೆಲ್ಲ ಹೆದರುತ್ತಿದ್ದರು. ಸೈನಿಕರನ್ನು ಬಿಟ್ಟರೆ ಬೇರೆಯವರ ಸಂಚಾರವೇ ಇರುತ್ತಿರಲಿಲ್ಲ. ಅಂಥ ಹತ್ತಾರು ಸ್ಥಳಗಳು ಬೆಂಗಳೂರಲ್ಲಿದ್ದವು. ದಟ್ಟವಾಗಿ ಹರವಿಕೊಂಡಿದ್ದ ಮರಗಳು, ಸೌಂದರ್ಯದ ಖನಿಯಂತಿದ್ದ ವಿಶಿಷ್ಟ ಹೂಗಳ ಗಿಡಗಳು ಎಲ್ಲೆಲ್ಲೂ ಕಾಣಿಸುತ್ತಿದ್ದವು. ಈಗ ಬೆಂಗಳೂರು ಬೆಳೆದಿರುವುದನ್ನು ನೋಡಿದರೆ ಇದೆ ಊರಿನಲ್ಲೇ ನಾನು ಹುಟ್ಟಿ ಬೆಳೆದಿದ್ದಾ ಎಂಬ ಅನುಮಾನ ಮೂಡುತ್ತದೆ.

ಬೌದ್ಧಿಕತೆಯ ಕೇಂದ್ರ
ಆಗ ಎಂ.ಜಿ.ರಸ್ತೆಯಲ್ಲಿ ‘ಸೆಲೆಕ್ಟ್ ಬುಕ್’ ಶಾಪ್ ಎಂಬ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಅಂಗಡಿ ಇತ್ತು. ನಾನು ಪುಸ್ತಕ ಪ್ರೇಮಿಯಾದ್ದರಿಂದ ಪದೇಪದೆ ಅಲ್ಲಿಗೆ ಭೇಟಿ ಕೊಡುತ್ತಿದ್ದೆ. ಆಗೆಲ್ಲ ಪುಸ್ತಕ ಪ್ರೇಮಿಗಳ ಸಮಾನ ಮನಸ್ಕರ ತಂಡ ಅಲ್ಲಿ ಸೇರುತ್ತಿತ್ತು. ಆ ಅಂಗಡಿಗೆ ಜಿ.ಪಿ.ರಾಜರತ್ನಂ, ಕೊಲ್ಲಾಪುರದ ಮಹಾರಾಜ, ಕೆನ್ನೆತ್ ಆಂಡರ್ಸನ್, ಗಿರೀಶ್ ಕಾರ್ನಾಡ್, ರಾಮಚಂದ್ರ ಗುಹಾ ಹೀಗೆ ಅನೇಕ ಹೆಸರಾಂತ ವ್ಯಕ್ತಿಗಳು ಬರುತ್ತಿದ್ದರು.

ನಾವೆಲ್ಲ ಅಲ್ಲಿ ಓದಿದ, ಓದಲೇಬೇಕಾದ ಪುಸ್ತಕಗಳ ಬಗ್ಗೆ  ಚರ್ಚಿಸುತ್ತಿದ್ದೆವು. ಅದೊಂದು ಬೌದ್ಧಿಕತೆ ಬೆಳೆಸುವ ಕೇಂದ್ರವಾಗಿತ್ತು. ಈಗ ಹತ್ತಾರು ಪುಸ್ತಕದಂಗಡಿಗಳಿವೆ. ಆದರೆ ಅವು ಚರ್ಚಾ ಕೇಂದ್ರಗಳಾಗಿವೆಯೇ? ಗೊತ್ತಿಲ್ಲ.

ವಾಕಿಂಗ್ ಎಂಬ ನಿತ್ಯದ ಜಪ
ಬೆಂಗಳೂರು ಆಗ ಉದ್ಯಾನಗಳಿಂದ ಕೂಡಿತ್ತು. ಆಗ ಇದ್ದ ಉದ್ಯಾನಗಳ ಅರ್ಧದಷ್ಟೂ ಈಗ ಇಲ್ಲ. ಉದ್ಯಾನದ ಸೌಂದರ್ಯ ಸವಿಯುವುದು ಒಂದು ರೀತಿ ಚೇತೋಹಾರಿ ಅನುಭವವಾಗಿತ್ತು. ವಾಕಿಂಗ್ ನೆಪದಲ್ಲಿ ಬಣ್ಣಬಣ್ಣದ ಹೂವಿನ ಗಿಡಗಳು, ಚಿತ್ರವಿಚಿತ್ರವಾದ ಬಳ್ಳಿಗಳು ಮತ್ತು ಹಸಿರಿನ ಮಧ್ಯೆ ನನ್ನ ಜೀವನದ ಅನೇಕ ಸಮಯವನ್ನು ಕಳೆದಿದ್ದೇನೆ.

ವಿದ್ಯಾರ್ಥಿ ಭವನ ಆಗಲೇ ಪ್ರಸಿದ್ಧಿಯಾಗಿತ್ತು. ಅಲ್ಲಿನ ದೋಸೆಯ ರುಚಿ ಈಗಲೂ ನಾಲಿಗೆಯ ಮೇಲಿದೆ. ಹಾಕಿ, ಫುಟ್ಬಾಲ್ ಅಂದ್ರೆ ನನಗೆ ಪಂಚಪ್ರಾಣ. ಬೆಂಗಳೂರು ಬ್ಲೂಸ್ ಮತ್ತು ಬೆಂಗಳೂರು ಮುಸ್ಲಿಮ್ಸ್ ತಂಡಗಳು ಫುಟ್ಬಾಲ್‌ನಲ್ಲಿ ಪರಸ್ಪರ ಸೆಣೆಸುತ್ತಿದ್ದವು. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ನಮ್ಮಲ್ಲಿ ಹುಟ್ಟುಹಾಕುವ ಕೂತೂಹಲ ಮತ್ತು ತವಕಗಳಷ್ಟೇ ಆ ಎರಡು ತಂಡಗಳ ನಡುವಿನ ಫುಟ್ಬಾಲ್ ಪಂದ್ಯಗಳು ನಮ್ಮನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತಿದ್ದವು.

ಇವರೇ ನೋಡಿ ಪೆರುಮಾಳ್ ಸಾರ್
ಬೆಂಗಳೂರಿನಲ್ಲಿ ಕ್ಯಾಮೆರಾ ಹಿಡಿದ ಹವ್ಯಾಸಿಗಳ ಎದುರು ಪೆರುಮಾಳ್, ಟಿ.ಎನ್.ಎ.ಪೆರುಮಾಳ್ ಎಂದರೆ ‘ಯಾರವರು’ ಎನ್ನುತ್ತಾರೆ. ‘ಪೆರುಮಾಳ್ ಸಾರ್ ಗೊತ್ತೇನ್ರೀ’ ಎಂದರೆ, ‘ಅವರು ಗೊತ್ತಿಲ್ಲದ ಫೋಟೊಗ್ರಾಫರ್ ಬೆಂಗಳೂರಿನಲ್ಲಿ ಇದ್ದಾರಾ?’ ಎಂಬ ಪ್ರಶ್ನೆಯೇ ಉತ್ತರವಾಗಿರುತ್ತದೆ.

1955ರಲ್ಲಿ ಫೋಟೊಗ್ರಫಿ ಶುರು ಮಾಡಿದ ಪೆರುಮಾಳ್ ಅವರು ಬೆಂಗಳೂರು ಕಂಡ ಹಿರಿಯ ಹವ್ಯಾಸಿ ಛಾಯಾಗ್ರಾಹಕರು. ಅವರು ತಮ್ಮನ್ನು ತಾವು ‘ಛಾಯಾಚಿತ್ರಗಾರ’ ಎಂದು ಕರೆದುಕೊಳ್ಳುತ್ತಾರೆ. ‘ಕ್ಯಾಮೆರಾ ನನ್ನ ಕುಂಚ, ಛಾಯಾಚಿತ್ರವೇ ನನ್ನ ಕಲೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಡಿಜಿಟಲ್ ಯುಗ ಕಾಲಿಡುವ ಮೊದಲೇ ಮ್ಯಾಕ್ರೋ ಫೋಟೊಗ್ರಫಿಯಲ್ಲಿ ಹಲವು ಪ್ರಯೋಗ ಮಾಡಿದ ಸೃಜನಶೀಲ ಮನಸು ಪೆರುಮಾಳ್ ಅವರದು. ‘ಎನ್‌ಕೌಂಟರ್ ಇನ್ ದಿ ಫಾರೆಸ್ಟ್’, ‘ಫೀಲ್ಡ್ ಗೈಡ್ ಫಾರ್ ಬಟರ್‌ಫ್ಲೈ’, ‘ದಿ ಡಾಯನ್ ಆಫ್ ನೇಚರ್ ಫೋಟೊಗ್ರಫಿ’ ಪೆರುಮಾಳ್ ಅವರ ಪ್ರಮುಖ ಕೃತಿಗಳು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಮಾಸ್ಟರ್ ಫೋಟೊಗ್ರಫಿಕ್ ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಆರ್ಟ್ ಫೋಟೊಗ್ರಫಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT