ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಾಕ್ರಿಕೆಟ್‌ಗೆ ವಿದ್ಯಾರ್ಥಿಗಳು ಬೌಲ್ಡ್‌!

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

-ಪ.ನಾ. ಹಳ್ಳಿ ಹರೀಶ್ ಕುಮಾರ್

ಪ್ರತಿ ದಿನ ಒಂದೇ ರೀತಿಯಲ್ಲಿ ತರಗತಿಯಲ್ಲಿ ಮೌಲ್ಯಮಾಪನ ಮಾಡುವುದರಿಂದ ಮಕ್ಕಳಲ್ಲೂ ಏಕತಾನತೆ ಉಂಟಾಗಿ, ಬೇಸರಿಕೆ ಮೂಡುತ್ತದೇನೋ ಎಂಬ ಭಾವ ಮನದಲ್ಲಿ ಆಗಾಗ ಮೂಡುತ್ತಿತ್ತು. ಆದರೆ ಶಿಕ್ಷಕನಾಗಿ ನಾನೇ ನನ್ನ ಪದ್ಧತಿಗಳಿಂದಾಗಿ ಬೇಸರಿಸಿಕೊಳ್ಳುವುದಾದರೆ, ಸದಾ ಕಾಲ ಹೊಸತನಕ್ಕಾಗಿ ತುಡಿಯುತ್ತಿರುವ ಮಕ್ಕಳ ಭಾವನೆಗಳಿಗೆ ಮನ್ನಣೆ ಸಿಗಬೇಕಲ್ಲವೇ?

ಹಾಗೆಂದು ಚಿಂತಿಸಿ, ಒಮ್ಮೆ ಮಕ್ಕಳನ್ನು ಧೈರ್ಯವಾಗಿ ಕೇಳಿದೆ. ‘ಪ್ರತಿದಿನ ನಾನು ಹಿಂದಿನ ಪಠ್ಯದ ಕುರಿತಾಗಿ ಪರಾಮರ್ಶಿಸಲು ಕೇಳುವ ಪ್ರಶ್ನೋತ್ತರ ಸಂದರ್ಭದಲ್ಲಿ ನಿಮಗೇನಾದರೂ ನಿರಾಸೆಯಾಗುತ್ತಿದೆಯೇ?’ – ಎಂದು. ಅದಕ್ಕವರು ಮುಲಾಜಿಗೆಂಬಂತೆ ‘ಊಹೂಂ... ‘ ಎಂದರಾದರೂ ಒಳಗೊಳಗೆ ಬದಲಾವಣೆಯನ್ನೇನಾದರೂ ತರಲು ಮನಸ್ಸು ಮಾಡಿದ್ದಾರೇನೋ ಎಂಬ ಆಶಾಭಾವನೆ ಅವರಲ್ಲಿ ಚಿಗುರೊಡೆದಿದ್ದನ್ನು ಅರ್ಥೈಸಿಕೊಂಡೆ.

ಆಗ ಹೊಳೆದದ್ದೇ ಹಿಂದೊಮ್ಮೆ ನನ್ನ ವಿದ್ಯಾರ್ಥಿನಿಯೊಬ್ಬಳು ನನ್ನೊಂದಿಗೆ ಚರ್ಚಿಸುವಾಗ ಹೇಳಿದ್ದ ಮಾತು:  ‘ಸರ್. ಪಾಠದ ವಿಷಯ ಕಲಿಸಲು ಹೊಸಹೊಸ ಚಟುವಟಿಕೆಗಳಿರುವಂತೆ ಪ್ರಶ್ನೆಗಳನ್ನೂ ಚಟುವಟಿಕೆಯಿಂದಲೇ ಕೇಳಿ, ನಾವೂ ಆಟವಾಡುತ್ತಾ ಉತ್ತರ ನೀಡುವಂತೆ ಮಾಡಲು ಸಾಧ್ಯವಿಲ್ಲವೇ?’  ತಕ್ಷಣಕ್ಕೆ ನನ್ನ ಮನಸ್ಸು ‘ಏಕೆ ಸಾಧ್ಯವಿಲ್ಲಾ? ಅದು  ಸುಲಭವಲ್ಲವೇ?’ ಎಂದು ಪ್ರೋತ್ಸಾಹಿಸಿತು. ಕೆಲವೇ ನಿಮಿಷಗಳ ಯೊಚನೆಯ ನಂತರ ನನ್ನ ಮನಸ್ಸಿಗೆ ಹೊಳೆದದ್ದು ಕ್ರಿಕೆಟ್ ಎಂಬ ಮಾಯಾಂಗನೆ. ಹೌದು, ಕ್ರಿಕೆಟ್ ಬಗ್ಗೆ ಕೇಳದವರು ಯಾರಿದ್ದಾರೆ ಇಂದು. ನಮ್ಮ ಶಾಲಾಮಕ್ಕಳಿಗಂತೂ ಅದರ ಬಗ್ಗೆ ಹೆಚ್ಚು ಹೇಳಬೇಕಿಲ್ಲ.

ತಕ್ಷಣಕ್ಕೆ ಯೊಜನೆಯೊಂದನ್ನು ರೂಪಿಸಿ, ಎರಡು ಬೇರೆಬೇರೆ ಪ್ರಶ್ನಾಕೋಶಗಳನ್ನು ಸಿದ್ಧಪಡಿಸಲಾಯಿತು. ಅಷ್ಟೇ ಅಲ್ಲದೇ ತರಗತಿಯ ವಿದ್ಯಾರ್ಥಿಗಳನ್ನು ಪ್ರತಿ ತಂಡದಲ್ಲಿ 11 ಸದಸ್ಯರಿರುವಂತೆ ಎರಡು ಸಮತೋಲಿತ ತಂಡಗಳನ್ನಾಗಿ ರಚಿಸಿ. ಪ್ರತಿ ತಂಡಕ್ಕೂ ಸಿದ್ಧಪಡಿಸಲಾದ ಪ್ರಶ್ನಾವಳಿಯನ್ನು ನೀಡಿ, ಪ್ರತಿಯೊಬ್ಬರೂ ಒಂದೊಂದು ಪ್ರಶ್ನೆಯನ್ನು ಓದಿ, ಅದರ ಉತ್ತರವನ್ನು ತಿಳಿದುಕೊಂಡು ಸಿದ್ಧವಾಗಿರಲು ಕೆಲವು ನಿಮಿಷಗಳಷ್ಟು ಸಮಯವನ್ನು ನೀಡುವುದು.

ಒಂದು ತಂಡದ ಪ್ರಶ್ನೆಗಳನ್ನು ವಿರೋಧೀ ಸದಸ್ಯರಿಗೆ ತಿಳಿಸುವಂತಿಲ್ಲ. ಆ ರೀತಿ ಮಕ್ಕಳು ಸಿದ್ಧವಾದ ನಂತರ ಎರಡೂ ತಂಡಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ನಾಯಕಿಯರನ್ನು ಕರೆದು, ಪದ್ಧತಿ ಪ್ರಕಾರ ನಾಣ್ಯ ಚಿಮ್ಮಿಸಿ, ಆಯ್ಕೆಯನ್ನು ಕೇಳುವುದು. ತದನಂತರ ಬೌಲಿಂಗ್ ಆಯ್ದುಕೊಂಡ ತಂಡದ ಸದಸ್ಯರು ಒಬ್ಬೊಬ್ಬರಾಗಿ ಬಂದು ಎದುರಾಳಿ ತಂಡದ ಸದಸ್ಯರಿಗೆ ಬೌಲಿಂಗ್ ಮಾಡುವ ಶೈಲಿಯಲ್ಲಿ ಪ್ರಶ್ನೆಗಳನ್ನು ಕೇಳುವುದು.

ಆ ಪ್ರಶ್ನೆಗಳಿಗೆ ಎದುರಾಳಿ ತಂಡದ ಸದಸ್ಯರು ಬ್ಯಾಟಿಂಗ್ ಶೈಲಿಯಲ್ಲಿ ಕೈಬೀಸುತ್ತಾ ಉತ್ತರ ನೀಡಬೇಕು. ಹಾಗೆ ಸರಿಯುತ್ತರ ನೀಡಿದ ತಂಡಕ್ಕೆ ಅಂಕಗಳನ್ನು ನೀಡುವುದು. ಆಗ ಪ್ರಶ್ನೆ ಕೇಳಿದ ಸದಸ್ಯೆ ಹಿಂದಕ್ಕೆ ಸರಿದು ಮತ್ತೊಬ್ಬರಿಗೆ ಬೌಲಿಂಗ್ ಮಾಡಲು ಅವಕಾಶ ನೀಡುವುದು ಹಾಗೂ ಉತ್ತರ ನೀಡಿದ ಸದಸ್ಯೆ ಬ್ಯಾಟಿಂಗನ್ನು ತಾನು ಔಟ್ ಆಗುವವರೆಗೂ ಮುಂದುವರೆಸಲು ಅವಕಾಶವಿದೆ.

ಒಂದು ವೇಳೆ ಎದುರಾಳಿ ಸದಸ್ಯೆ ಉತ್ತರ ನೀಡುವಲ್ಲಿ ವಿಫಲವಾದರೆ ಬೌಲಿಂಗ್ ಮಾಡಿದ ತಂಡ ಒಂದು ವಿಕೆಟ್ ಪಡೆದಂತೆ. ಇದೇ ರೀತಿ ಆಟವನ್ನು ಸೀಮಿತ ಒವರ್‌ಗಳಿಗೆ
(6 ಅಥವಾ 12 ಬಾಲ್) ನಿಗದಿಪಡಿಸಬಹುದು. ಮೊದಲು ಬೌಲಿಂಗ್ ಮಾಡಿದ ತಂಡ ಪುನಃ ತನ್ನ ಬ್ಯಾಟಿಂಗ್ ಸರದಿಯಲ್ಲಿ ಆ ಗುರಿಯನ್ನು ಹಿಮ್ಮೆಟ್ಟಿಸಿದಲ್ಲಿ ತಂಡವನ್ನು ವಿಜಯಿಯೆಂದು ಘೋಷಿಸಬಹುದಾಗಿದೆ. ಬಹಳಷ್ಟು ಸಂಖ್ಯೆಯ ಮಕ್ಕಳಿರುವ ವರ್ಗಗಳಲ್ಲಿ ನಾಲ್ಕು ಅಥವಾ ಐದು ತಂಡಗಳನ್ನು ಮಾಡಿಕೊಂಡು. ಲೀಗ್ ಮಾದರಿಯ ಟೂರ್ನಮೆಂಟ್ ಆಡಿಸುವ ಮೂಲಕ ಆಟದಲ್ಲಿ ಮತ್ತಷ್ಟು ಬೆಳವಣಿಗೆ ಕಾಣಬಹುದಾಗಿದೆ.

ಈ ಆಟಕ್ಕೆ ನಾವು ‘ಪ್ರಶ್ನಾ–ಕ್ರಿಕೆಟ್’ ಎಂದು ಹೆಸರಿಸಿ, ನಾಲ್ಕಾರು ವಾರಗಳವರೆಗೆ ಮುಂದುವರೆಸಿದೆವು. ಆನಂತರ ಪರಿಶೀಲಿಸಿದಾಗ ಈ ಆಟದಲ್ಲಿ ಭಾಗವಹಿಸಬೇಕೆಂಬ ದೃಷ್ಟಿಯಿಂದಲೇ ಬಹಳಷ್ಟು ಮಕ್ಕಳು ಪ್ರತಿನಿತ್ಯ ಒಂದೆರಡು ತಾಸುಗಳಷ್ಟು ಸಮಯವನ್ನು ಓದಿಗಾಗಿ ಮೀಸಲಿರಿಸಿರುವುದು ಕಂಡುಬಂತು. ಅಷ್ಟೇ ಅಲ್ಲದೆ, ಕಲಿಕೆಯಲ್ಲಿ ಹಿಂದುಳಿದಿರುವ ಮಗುವೂ ಸಹ ಕಲಿಕೆಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳುವತ್ತ ದಾಪುಗಾಲಿಡುತ್ತಿರುವುದು ಗೋಚರಿಸಿತು. ಒಂದು ಆಟದ ಬಳಕೆಯು ನಮ್ಮ ವರ್ಗದ ಕಲಿಕಾ ವಾತಾವರಣವನ್ನೇ ಬದಲಿಸಿದ್ದು ವರ್ಗಶಿಕ್ಷಕನಾದ ನನ್ನಲ್ಲಿ ಸಾರ್ಥಕ ಭಾವನೆಯನ್ನು ತಂದಿತ್ತು; ಇಂತಹ ಇನ್ನೂ ನವನವೀನ ಯೋಜನೆಗಳನ್ನು ಜಾರಿಗೊಳಿಸಲು ಪ್ರೇರೇಪಿಸಿತು.

(ಲೇಖಕರು ಶಿಕ್ಷಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT