ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಡಿಯಾಲಜಿ ಮತ್ತು ಶಿಕ್ಷಣ

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಮಧ್ಯಮಮಾರ್ಗ ಎನ್ನುವ ವಿಚಾರದ ಬಗ್ಗೆ ತೀವ್ರವಾದ ಚರ್ಚೆಗಳು ಪ್ರಾರಂಭವಾಗಿವೆ. ಎಡಪಂಥೀಯ ಮತ್ತು ಬಲಪಂಥೀಯ ಎನ್ನುವ ಎರಡೂ ಅತಿಯ ಚಿಂತನೆಗಳು ದೋಷಪೂರ್ಣವೆಂದೂ, ಅವೆರಡರ ಮಧ್ಯದ ಮಾರ್ಗವನ್ನು ನಾವು ಆಯ್ದುಕೊಳ್ಳಬೇಕೆಂದೂ ಕೆಲವರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಎಡಪಂಥ ಎನ್ನುವುದು ವೈಜ್ಞಾನಿಕವೆಂದೂ, ಬಲಪಂಥ ಎನ್ನುವುದು ಕೆಲವು ವರ್ಗಗಳ ಹಿತಾಸಕ್ತಿಯನ್ನು ಮಾತ್ರ ಕಾಯುವಂಥ ಚಿಂತನೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವರು ಎಡಪಂಥವೇ ದೋಷಪೂರ್ಣವೆಂದೂ, ಬಲಪಂಥದ ಚಿಂತನೆಯಿಂದಲೇ ದೇಶೋದ್ಧಾರ ಸಾಧ್ಯವೆಂದೂ ಹೇಳಿದ್ದಾರೆ.

ಈ ಚರ್ಚೆಯನ್ನು ನೋಡಿದರೆ, ಎಡ, ಬಲ ಮತ್ತು ಮಧ್ಯಮ ಎನ್ನುವ ಪದಗಳೆಲ್ಲ ಬಹಳ ಸಲೀಸಾದ ಬಳಕೆಗೆ ಒದಗಿ ಬಂದಂತಿದೆ. ಮತ್ತು ಈ ಪದಗಳು ಯಾವ ರೀತಿಯ ಪರಿಕಲ್ಪನೆಗಳು ಎನ್ನುವ ಬಗ್ಗೆ ಗೊಂದಲವಿರುವಂತಿದೆ. ಕನಿಷ್ಠ ಪಕ್ಷ ಈ ಎರಡೂ ಪದಗಳು ಎರಡು ಐಡಿಯಾಲಜಿಗಳನ್ನು ಸೂಚಿಸುತ್ತದೆ ಎಂದು ಎಲ್ಲರೂ ಒಪ್ಪಿಕೊಳ್ಳಬಹುದು.

ಅಂದಮೇಲೆ, ಎಡ ಮತ್ತು ಬಲದಲ್ಲಿ ಯಾವುದು ಉತ್ತಮ, ಯಾವುದು ಅಧಮ ಎನ್ನುವ ಚರ್ಚೆಗಿಂತ ಮುಖ್ಯವಾದದ್ದೆಂದರೆ ‘ಐಡಿಯಾಲಾಜಿಕಲ್ ಚಿಂತನೆ’ ಎಂದರೆ ಏನು ಮತ್ತು ಒಟ್ಟು ಐಡಿಯಾಲಾಜಿಕಲ್ ರೀತಿಯ ಚಿಂತನೆಯಲ್ಲಿರುವ ಸಮಸ್ಯೆಗಳೇನು ಎಂದು ನೋಡುವುದು.

ಹೀಗೆ ಅರ್ಥ ಮಾಡಿಕೊಂಡರೆ, ನಮ್ಮ ನಿಜವಾದ ಸಮಸ್ಯೆ ಎಡ ಅಥವಾ ಬಲಪಂಥದ ಚಿಂತನೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಲೆಕ್ಕ ಮಾಡುವುದಲ್ಲ ಎಂದು ತಿಳಿಯುತ್ತದೆ. ಇಂದಿನ ನಿಜವಾದ ಸಮಸ್ಯೆ ನಮ್ಮ ಬೌದ್ಧಿಕ ಚರ್ಚೆಗಳು ಐಡಿಯಾಲಾಜಿಕಲ್ ಆಗಿರುವುದು. ಈ ಸಮಸ್ಯೆ ಕೇವಲ ಪತ್ರಿಕೆಗಳ ಸಂಪಾದಕೀಯಗಳಲ್ಲಿ, ವಿಚಾರವಂತರ ಅಭಿಪ್ರಾಯಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ ಮಾತ್ರ ಕಂಡುಬರುವಂಥದ್ದಲ್ಲ.

ಐಡಿಯಾಲಾಜಿಕಲ್ ರೀತಿಯ ಚಿಂತನೆ ಶಿಕ್ಷಣದಲ್ಲಿ, ಪಠ್ಯಕ್ರಮದಲ್ಲಿ, ಅದರಲ್ಲೂ ಮಾನವಿಕ, ಸಮಾಜವಿಜ್ಞಾನಗಳಲ್ಲಿ ಹಾಸುಹೊಕ್ಕಾಗಿದೆ ಎನ್ನುವುದು ಗಂಭೀರ ವಿಚಾರ.ಇದರರ್ಥ ಶಿಕ್ಷಕರು ಮತ್ತು ಪಠ್ಯಪುಸ್ತಕಗಳು ಯಾವುದೋ ಒಂದು ರೀತಿಯ ಚಿಂತನೆಯನ್ನೇ ಮುಂದೆ ಮಾಡಿಕೊಂಡು ಪಾಠ ಮಾಡುತ್ತಾರೆ ಎನ್ನುವುದಲ್ಲ. ಅಷ್ಟೇ ಆದರೆ, ಅದನ್ನು ಶಿಕ್ಷಕರ ಪೂರ್ವಗ್ರಹ ಎಂದು ವಿವರಿಸಬಹುದು.

ಅದಕ್ಕಿಂತಲೂ ಮುಖ್ಯವಾಗಿ, ಶಿಕ್ಷಣದಲ್ಲಿ ಐಡಿಯಾಲಜಿ ನುಸುಳಿದೆ ಎಂದು ಹೇಳುವುದರ ಅರ್ಥ ಏನೆಂದರೆ ಅನುಭವವನ್ನು ಕಲಿಕೆಯ ಘಟಕವನ್ನಾಗಿ ರೂಪಿಸುವ ಬದಲು, ಅನುಭವವನ್ನು ಪರೀಕ್ಷೆಗೆ ಒಡ್ಡಬೇಕಾದ ಸಂಗತಿ ಎನ್ನುವಂತೆ ನೋಡಲಾಗುತ್ತದೆ. ಇದು ಹೇಗೆ ಮತ್ತು ಏಕೆ ಎನ್ನುವುದನ್ನು ಸ್ವಲ್ಪ ವಿಸ್ತಾರವಾಗಿ ಗಮನಿಸಬೇಕು.

ಕನ್ನಡದಲ್ಲಿ ‘ಐಡಿಯಾಲಜಿ’ ಎನ್ನುವುದಕ್ಕೆ ‘ಸಿದ್ಧಾಂತ’ ಎನ್ನುತ್ತಾರೆ. ಆದರೆ ಸಮಸ್ಯೆ ಎಂದರೆ ‘ಥಿಯರಿ’ ಎನ್ನುವುದಕ್ಕೂ ‘ಸಿದ್ಧಾಂತ’ ಎನ್ನುವ ಪದವನ್ನೇ ಬಳಸುತ್ತೇವೆ. ನಮಗೆ ಥಿಯರಿಗಳು ಬೇಕು. ಯಾಕೆಂದರೆ ಹಲವು ಅನುಭವಗಳ ನಡುವಿನ ಸಂಘರ್ಷವನ್ನು ನಿವಾರಿಸಲು, ಮತ್ತು ಆ ಮೂಲಕ ನಮ್ಮ ಅನುಭವದ ಸಮಗ್ರತೆಯನ್ನು ಕಾಪಾಡಲು ವೈಜ್ಞಾನಿಕ ಥಿಯರಿಗಳ ಅಗತ್ಯವಿದೆ. ಆದರೆ ಐಡಿಯಾಲಜಿಗಳು ಹೀಗಲ್ಲ. ನಮ್ಮ ಅನುಭವದಿಂದ ಕಲಿಕೆಯನ್ನು ರೂಪಿಸಿಕೊಳ್ಳುವುದಕ್ಕೆ ಐಡಿಯಾಲಜಿಗಳು ಅನಗತ್ಯ.

ಅಪಾಯಕಾರಿ ಕೂಡ. ಹಾಗಾಗಿ, ಸಿದ್ಧಾಂತ ಮತ್ತು ಐಡಿಯಾಲಜಿಯ ನಡುವೆ ಗೊಂದಲ ಆಗದಿರಲೆಂದು ಈ ಇಡೀ ಲೇಖನದಲ್ಲಿ ಐಡಿಯಾಲಜಿ ಎನ್ನುವ ಇಂಗ್ಲಿಷು ಪದವನ್ನೇ ಬಳಸುತ್ತೇನೆ. ಐಡಿಯಾಲಜಿ ಎಂದರೆ ಏನು ಎನ್ನುವ ಬಗ್ಗೆ ತಲೆಗೊಂದರಂತೆ ವಿವರಣೆಗಳಿರುವುದು ಗೊತ್ತಿರುವಂಥದ್ದೇ. ಹಾಗೆಯೇ, ನಮಗೆ ಇಷ್ಟವಿಲ್ಲದ ವಿಚಾರಗಳನ್ನು ತಿರಸ್ಕರಿಸಲು ನಾವು ಬಳಸುವ ಒಂದು ಹತಾರವೇ ಐಡಿಯಾಲಜಿ ಎನ್ನುವ ಭೂತ.

ನೀವು ಉದಾರವಾದಿಗಳಾದರೆ, ಬಲಪಂಥೀಯರು ಹೇಳುವುದೆಲ್ಲಾ ಐಡಿಯಾಲಜಿ; ಹಿಂದುತ್ವ ಐಡಿಯಾಲಜಿ. ಹಾಗೆಯೇ ನೀವು ಸಂಘ ಪರಿವಾರದವರಾದರೆ ಸೆಕ್ಯುಲರ್‌ವಾದಿಗಳು ಹೇಳುವುದೆಲ್ಲಾ ಐಡಿಯಾಲಜಿ; ಸೆಕ್ಯುಲರ್ ಐಡಿಯಾಲಜಿ. ವಿಷಯ ಹೀಗಿರುವಾಗ ಯಾರೊಬ್ಬರ ವಿವರಣೆಯನ್ನು ತೆಗೆದುಕೊಂಡೂ ಐಡಿಯಾಲಜಿ ಎಂದರೆ ಏನು ಎಂದು ಹೇಳಲು ಸಾಧ್ಯವಿಲ್ಲವಷ್ಟೆ.

ಅಂದಮೇಲೆ, ಇವರಿಬ್ಬರೂ ಪರಸ್ಪರರಲ್ಲಿ ಯಾವ ಅಂಶವನ್ನು ವಿರೋಧಿಸುವಾಗ ಅದನ್ನು ಐಡಿಯಾಲಜಿ ಎನ್ನುತ್ತಿದ್ದಾರೆ ಎಂದು ಅರಿಯುವುದೇ ಸರಿಯಾದ ಕ್ರಮ. ಮತ್ತು ಹಾಗೆ ಅರಿತ ಮೇಲೆ ನಮ್ಮ ಚಿಂತನೆಯಲ್ಲೇ ಇರಬಹುದಾದ ಐಡಿಯಾಲಜಿಕಲ್ ಅಂಶಗಳನ್ನು ಚಿಕಿತ್ಸಕವಾಗಿ ತೆಗೆದು ಹಾಕುವುದು ಹೇಗೆ ಎಂದೂ ಗೋಚರಿಸಬಹುದು.

ಸಿದ್ಧಾಂತಕ್ಕೂ (ಅಂದರೆ ವಿಜ್ಞಾನಗಳು ‘ಥಿಯರಿ’ ಎನ್ನುವ ಅರ್ಥದಲ್ಲಿ) ಐಡಿಯಾಲಜಿಗಳಿಗೂ ಇರುವ ಒಂದು ಮುಖ್ಯ ವ್ಯತ್ಯಾಸ ಇಲ್ಲಿ ಸಹಾಯಕ್ಕೆ ಬರಬಹುದು. ಥಿಯರಿಗಳು ನಮ್ಮ ಅನುಭವದಲ್ಲಿ ಬರುವ ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾವು ರೂಪಿಸುವ ವಿವರಣಾತ್ಮಕ ಮಾದರಿಗಳು. ಕೆಲವು ಥಿಯರಿಗಳು ಸರಿಯಾಗಿರುತ್ತವೆ.

ಕೆಲವು ಥಿಯರಿಗಳು ಕಾಲಕ್ರಮದಲ್ಲಿ ತಪ್ಪೆಂದು ಸಾಬೀತಾಗುವ ಸಾಧ್ಯತೆಯೂ ಇರುತ್ತದೆ. ತಪ್ಪಾದ ಮಾತ್ರಕ್ಕೆ ಒಂದು ಥಿಯರಿಯೇನೂ ಐಡಿಯಾಲಜಿ ಆಗಿಬಿಡುವುದಿಲ್ಲ.ಒಂದು ತಪ್ಪು ಥಿಯರಿ ಆಗುತ್ತದೆ ಅಷ್ಟೆ. ಉದಾಹರಣೆಗೆ, ಟಾಲೆಮಿಯ ಭೂಕೇಂದ್ರಿತ ಖಗೋಳ ಸಿದ್ಧಾಂತ ಒಂದು ತಪ್ಪು ಥಿಯರಿ. ಆದರೆ ಅದು ಐಡಿಯಾಲಜಿ ಅಲ್ಲ. ಅದು ಯಾವುದೇ ಹುಸಿಪ್ರಜ್ಞೆಯಿಂದ ಹುಟ್ಟಿದ್ದಲ್ಲ. ನಮ್ಮ ಹಲವಾರು ಕ್ರಿಯಾಕರ್ಮಗಳಲ್ಲಿ ನುಸುಳಬಹುದಾದ ದೋಷಗಳಂತೆ ಥಿಯರಿಗಳಲ್ಲೂ ದೋಷಗಳು ನುಸುಳಬಹುದು. ಅದು ದೋಷವೇ ಹೊರತೂ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳು ರೂಪಿಸಿದ ಕಣ್ಕಟ್ಟಲ್ಲ.

ನಮ್ಮ ಅನುಭವದಲ್ಲಿ ಕೆಲವು ಸಮಸ್ಯೆಗಳು ಏಳುತ್ತವೆ. ನೆಟ್ಟಗಿರುವ ಕೋಲು ನೀರಿನಲ್ಲಿ ಅದ್ದಿದರೆ, ಸೊಟ್ಟಗೆ ಕಾಣುತ್ತದೆ. ಅಷ್ಟು ಭಾರವಿದ್ದರೂ ಒಂದು ಹಡಗು ನೀರಿನಲ್ಲಿ ತೇಲುತ್ತದೆ. ಆದರೆ ಒಂದು ಸಣ್ಣ ಕಲ್ಲು ಮುಳುಗುತ್ತದೆ. ಇದು ಯಾಕೆ ಹೀಗೆ ಎಂಬ ಪ್ರಶ್ನೆಗೆ ಒಂದು ವಿವರಣೆಯ ಮಾದರಿ ಬೇಕಾಗುತ್ತದೆ. ಅದೇ ಥಿಯರಿಗಳು, ಅಥವಾ ಸಿದ್ಧಾಂತಗಳು. ಇದರಲ್ಲಿ ಎರಡೂ ಅನುಭವಗಳು ಪರಸ್ಪರ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿವೆ. ಹಾಗೆಂದು ಯಾವ ಒಂದು ಅನುಭವವನ್ನೂ ಬಿಟ್ಟುಕೊಡಲು ಸಾಧ್ಯವಿಲ್ಲ.

ಏಕೆಂದರೆ, ಕೋಲು ನೆಟ್ಟಗಿದೆ ಎನ್ನುವುದು ಎಷ್ಟು ಸತ್ಯವೋ, ನೀರಿನಲ್ಲಿ ಅದು ಸೊಟ್ಟಗೆ ಕಾಣುತ್ತಿದೆ ಎನ್ನುವುದೂ ಅಷ್ಟೇ ಸತ್ಯ. ಈ ಎರಡೂ ಅನುಭವಗಳನ್ನು ಸಂಘರ್ಷವಿಲ್ಲದ ರೀತಿಯಲ್ಲಿ ಹೊಂದಿಸಿಕೊಳ್ಳಬೇಕೆಂದರೆ ‘ಬೆಳಕಿನ ವಕ್ರೀಭವನ’ ಎನ್ನುವ ಸಿದ್ಧಾಂತದ ಅಗತ್ಯವಿದೆ. ಹೀಗೆ, ಸಂಘರ್ಷದಿಂದ ಛಿದ್ರವಾದ ನಮ್ಮ ಅನುಭವವನ್ನು ಮತ್ತೆ ಸಮಗ್ರವಾಗಿಸುವುದು, ಪೂರ್ಣವಾಗಿಸುವುದು ವಿಜ್ಞಾನಗಳ ಕೆಲಸ. ಇದರಲ್ಲಿ ನೆನಪಿಡಬೇಕಾದದ್ದು ಎರಡು ಅಂಶಗಳು. ಒಂದು ಅವು ‘ನಿರ್ದಿಷ್ಟ’ ಅನುಭವಗಳಿಗೆ ಸಂಬಂಧಪಟ್ಟಿದ್ದು. ಎರಡನೆಯದು ಅವು ನಿರ್ದಿಷ್ಟ ಅನುಭವಗಳಲ್ಲಿ ಹುಟ್ಟುವ ‘ಸಮಸ್ಯೆ’ಗಳಿಗೆ ಸಂಬಂಧಪಟ್ಟಿದ್ದು.

ಆದರೆ, ಐಡಿಯಾಲಜಿಗಳು ಹಾಗಲ್ಲ. ಅವು ಅನುಭವದ ನಿರ್ದಿಷ್ಟ ಸಮಸ್ಯೆಗಳಿಗೆ ಉತ್ತರಗಳಲ್ಲ. ಅವು ನಮ್ಮ ಅನುಭವವನ್ನು ಹೇಗೆ ವ್ಯಾಖ್ಯಾನಿಸಿಕೊಳ್ಳಬೇಕು ಎಂದು ನಿರ್ಧರಿಸುವ ಮಾದರಿಗಳು. ಇದರಲ್ಲೇನು ದೋಷ? ನಮ್ಮ ಅನುಭವವನ್ನು ಸರಿಯಾಗಿ ವ್ಯಾಖ್ಯಾನಿಸಿಕೊಳ್ಳುವ ‘ಒಂದು’ ಮಾರ್ಗ ಎನ್ನುವುದೇ ತರ್ಕರಹಿತವಾದ ವಿಚಾರ.

ನಮ್ಮ ಅನುಭವವನ್ನು ವ್ಯಾಖ್ಯಾನಿಸಿಕೊಳ್ಳುವ ಹಲವು ಮಾರ್ಗಗಳಿವೆ. ಇವೆಲ್ಲವೂ ಆಯಾಯ ಸಮಸ್ಯೆಗಳ ಸಂದರ್ಭಕ್ಕೆ ಸರಿಯಾದದ್ದೇ ಹೊರತೂ, ಸಂದರ್ಭಾತೀತವಾದ ಅನುಭವ ವ್ಯಾಖ್ಯಾನ ಎನ್ನುವುದಿಲ್ಲ. ಅಷ್ಟೇ ಏಕೆ, ಯಾವ ನಿರ್ದಿಷ್ಟ ವ್ಯಾಖ್ಯಾನದಿಂದಲೂ ಸಂಪೂರ್ಣವಾಗಿ ಗ್ರಹಣಕ್ಕೆ ಒಳಗಾಗದಿರುವುದೇ ಅನುಭವದ ಸ್ವರೂಪ.

ಅಂದಮೇಲೆ, ತಾರ್ಕಿಕವಾಗಿ ಹೇಳುವುದಾರರೆ, ಅನುಭವದ ಲಕ್ಷಣವೇ ಅಸಂಖ್ಯ ವ್ಯಾಖ್ಯಾನಗಳಿಗೆ ತೆರೆದುಕೊಂಡೂ ಆ ಯಾವ ವ್ಯಾಖ್ಯಾನಗಳಿಂದಲೂ ಸಂಪೂರ್ಣವಾಗದಿರುವುದು. ಒಂದು ಉದಾಹರಣೆಯನ್ನು ಗಮನಿಸಿ. ಭಾರತದಲ್ಲಿ ಬಹಳಷ್ಟು ಮುಸಲ್ಮಾನರಿದ್ದಾರೆ. ನೀವು ಹಿಂದೂಗಳಾಗಿದ್ದರೆ, ನಿಮಗೆ ಮುಸಲ್ಮಾನರ ಜೊತೆ ಒಡನಾಟದ ಒಂದಷ್ಟು ಅನುಭವಗಳಿದ್ದೇ ಇರುತ್ತವೆ.

ಈಗ ಈ ಅನುಭವವನ್ನು ಯಾವ ರೀತಿ ವ್ಯಾಖ್ಯಾನಿಸಿಕೊಳ್ಳಬೇಕು? ಸಮಾನ ದೇಶಭಕ್ತರ ಜೊತೆ ನನಗಿರುವ ಅನುಭವ ಎಂತಲೋ? ದೇಶದ್ರೋಹಿಗಳ ಜೊತೆಗೆ ನನಗಿರುವ ಅನುಭವ ಎಂತಲೋ? ಅಥವಾ ಅಸಮಾನ ನಾಗರಿಕ ಹಕ್ಕು ಮತ್ತು ಅಸಮಾನ ಪೌರತ್ವ ಇರಬೇಕಾದ ಆದರೆ ಸಮಾನ ಹಕ್ಕು ಮತ್ತು ಪೌರತ್ವವನ್ನು ಪಡೆದುಕೊಂಡುಬಿಟ್ಟಿರುವ ಒಂದು ಅನ್ಯದೇಶ ಧರ್ಮೀಯರ ಜೊತೆಗೆ ನನಗಿರುವ ಅನುಭವ ಎಂತಲೋ? ಅಥವಾ ಭಾರತದ ಸಮನ್ವಯ ಸಂಸ್ಕೃತಿಯ ಸಮಾನ ಪಾಲುದಾರರಾದ ಸೋದರರ ಜೊತೆಗಿರುವ ಸಂಬಂಧ ಎಂತಲೋ?

ಸಮಸ್ಯೆ ಎಂದರೆ ಈ ಯಾವ ಒಂದು ಉತ್ತರವನ್ನು ನೀವು ಹೇಳಿದರೂ ಅದು ತರ್ಕದೋಷವೂ ಅಸಂಬದ್ಧವೂ ಆಗುತ್ತದೆ. ಏಕೆಂದರೆ, ಮುಸಲ್ಮಾನರೊಂದಿಗೆ ನನಗಿರುವ ಅನುಭವ ಯಾವ ರೀತಿಯದ್ದೆಂದರೆ – ಅವರ ಉಸ್ತಾದರು ಹಿಂದೂಸ್ತಾನೀ ಸಂಗೀತ ಹಾಡಿದರೆ ನನಗೆ ಸಂತೋಷವಾಗುತ್ತದೆ. ಬಸ್ಸಿನಲ್ಲಿ ಮುಸಲ್ಮಾನ ಪ್ರಯಾಣಿಕ ಅತ್ತರನ್ನು ಅತಿಯಾಗಿ ಪೂಸಿಕೊಂಡಿದ್ದರೆ ಅದರಿಂದ ಕಿರಿಕಿರಿಯಾಗುತ್ತದೆ. ಸುಂದರವಾದ ಮುಸಲ್ಮಾನ ಮಕ್ಕಳನ್ನು ನೋಡಿದರೆ ನಮ್ಮ ಮನೆಯ ಮಕ್ಕಳಿಗೂ ಹೀಗೆ ಚೆಂದವಾಗಿರಲು ಏನು ದಾಡಿ ಎನಿಸುತ್ತದೆ.

ಅವರ ಮಸೀದಿಯಿಂದ ನನ್ನ ತರಗತಿಯ ಕಾಲಕ್ಕೆ ಸರಿಯಾಗಿ ನಮಾಜಿಗೆ ಕರೆ ಬಂದರೆ ಮೈಕನ್ನು ಆ ಕಡೆಗಾದರೂ ಹಾಕಿಕೊಳ್ಳಬಾರದೇ ಎಂದೆನಿಸುತ್ತದೆ. ಮೊಹಮದ್ ಅಜರುದ್ದೀನ್ ಒಮ್ಮೆ ಅಸಹನೀಯನಾಗುತ್ತಾನೆ; ಆದರೂ ಆತನಷ್ಟು ಚೆನ್ನಾಗಿ ಫೈನ್ ಗ್ಲಾನ್ಸ್ ಮಾಡುತ್ತಿದ್ದ ಕ್ರಿಕೆಟಿಗ ಮತ್ತೆಲ್ಲಿ ಸಿಗುತ್ತಾನೆ ಎಂದೂ ಹೆಮ್ಮೆಯಾಗುತ್ತದೆ.

ಕೆಲವೊಮ್ಮೆ ಭಯೋತ್ಪಾದನೆಗೂ ಇಸ್ಲಾಮಿಗೂ ಸಂಬಂಧವಿದೆಯಾ ಎಂದು ಅನ್ನಿಸುತ್ತದೆ. ಆದರೆ ನನ್ನ ಮುಸಲ್ಮಾನ ಗೆಳೆಯರನ್ನು ಕಂಡಕೂಡಲೇ ಆ ಎಲ್ಲ ಸಂದೇಹವೂ ತಟ್ಟನೆ ಮಾಯವಾಗುತ್ತದೆ.

ಹಾಗಾದರೆ, ಇಂತಹ ಬಹುವಿಧದ ಅನುಭವಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ? ಉತ್ತರ ಸರಳ. ಆಯಾ ಸಮಸ್ಯೆಗಳ ಸಂದರ್ಭಕ್ಕೆ ಅನುಸಾರಿಯಾಗಿ ನಮ್ಮ ವ್ಯಾಖ್ಯಾನಗಳನ್ನು ರೂಪಿಸಿಕೊಳ್ಳುತ್ತೇವೆ. ನೀವು ಹಿಂದೂಗಳಾಗಿದ್ದು ಸಸ್ಯಾಹಾರಿಗಳಾದರೆ ಮುಸಲ್ಮಾನರ ಹೋಟೆಲಿಗೆ ಹೋಗುವುದಿಲ್ಲ. ಅದೇ ಮಾಂಸಾಹಾರ ಪ್ರಿಯರಾದರೆ ರಂಜಾನ್‌ನ ರಾತ್ರಿ ಶಿವಾಜಿನಗರದ ಎಂಪೈರ್ ಹೋಟೆಲಿನ ಬಳಿಯೇ ಬೀಡು ಬಿಡುತ್ತೀರಿ. ಮದುವೆಯ ವಿಚಾರಕ್ಕೆ ಬಂದರೆ ಸಾಮಾನ್ಯವಾಗಿ ನಿಮ್ಮ ಮನೆಯವರು ಅವರ ಮನೆಯವರನ್ನು ಮದುವೆಯಾಗುವುದಿಲ್ಲ. ಆದರೆ ಅಪರೂಪದ ಸನ್ನಿವೇಶದಲ್ಲಿ ಹೀಗೆ ಮದುವೆ ಆದರೆ, ಅದು ಹೇಗೋ ನಿಧಾನವಾಗಿ ನಿಭಾಯಿಸಲು ಕಲಿಯುತ್ತೀರಿ.

ಆದರೆ ರಾಷ್ಟ್ರೀಯತೆ ಎಂಬ ಐಡಿಯಾಲಜಿ ನನ್ನ ಇಂತಹ ಹಲವು ಅನುಭವಗಳ ಮೊತ್ತವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ವ್ಯಾಖ್ಯಾನಿಸಬೇಕು ಎಂದು ಹೇಳುತ್ತದೆ. ಉದಾರ ರಾಷ್ಟ್ರೀಯತೆಯಾದರೆ, ಅದು ಮುಸ್ಮಲಾನರನ್ನು ಸ್ವದೇಶೀಯ ಸೋದರರು ಎಂದೇ ಕಾಣಬೇಕು ಎಂದು ಬಲಾತ್ಕರಿಸುತ್ತದೆ.

ಮೂಲಭೂತವಾದಿ ರಾಷ್ಟ್ರೀಯತೆಯಾದರೆ ಅವರನ್ನು ಅನ್ಯದೇಶ್ಯ ಆಕ್ರಮಣಕಾರರು ಎಂದೇ ಕಾಣಬೇಕು ಎಂದು ಒತ್ತಾಯಿಸುತ್ತದೆ. ಆದರೆ, ವಿಜ್ಞಾನದ ಥಿಯರಿಗಳು ಹೀಗೆ ನಮ್ಮ ಅನುಭವವನ್ನು ಒಂದು ನಿರ್ದಿಷ್ಟ ವ್ಯಾಖ್ಯಾನಕ್ಕೊಗಿಸುವ ಕೆಲಸವನ್ನು ಎಂದೂ ಮಾಡುವುದಿಲ್ಲ. ಇಂತಹ ಹಲವು ಉದಾಹರಣೆಗಳನ್ನು ನಮ್ಮ ನಿತ್ಯ ಜೀವನದಿಂದ ಕೊಡಬಹುದು. ಹೆಣ್ಣುಮಕ್ಕಳಿಗೆ ಕೆಲವೊಮ್ಮೆ ತಮ್ಮ ತಂದೆಯ ಬಗ್ಗೆ ಇನ್ನಿಲ್ಲದ ಕೋಪ ಬರುತ್ತದೆ. ಕುಡಿದು ಮನೆಗೆ ಬರುತ್ತಾನೆ ಎಂದು.

ಇನ್ನು ಕೆಲವೊಮ್ಮೆ ಕನಿಕರವೂ ಆಗುತ್ತದೆ. ಮತ್ತೊಮ್ಮೆ ಹೆಮ್ಮೆಯೂ ಆಗುತ್ತದೆ. ಸಾಮಾನ್ಯವಾಗಿ ಆಯಾ ಸಮಸ್ಯೆಗಳ ಸಂದರ್ಭಕ್ಕೆ ತಕ್ಕಂತೆ ನಾವು ಈ ಅನುಭವಗಳನ್ನು ವ್ಯಾಖ್ಯಾನಿಸಿಕೊಳ್ಳುತ್ತೇವೆ. ಕುಡಿದ ಅಪ್ಪನನ್ನು ಬೇಜವಾಬ್ದಾರಿಯವನೆಂದು ವ್ಯಸನಮುಕ್ತಿ ಕೇಂದ್ರಕ್ಕೆ ಸೇರಿಸುವುದು. ಅದೇ ಹೆಮ್ಮೆ ಪಡಬಹುದಾದ ಅಪ್ಪನಿಗೆ ಹುಟ್ಟುಹಬ್ಬದ ದಿನ ಉಡುಗೊರೆ ಕೊಡುವುದು.

ಹೀಗೆ ಅನಂತ ರೀತಿಗಳಲ್ಲಿ ನಮ್ಮ ಅನುಭವ ವ್ಯಾಖ್ಯಾನ ನಡೆಯುತ್ತದೆ. ಆದರೆ ‘ಸ್ತ್ರೀವಾದ’ ಎನ್ನುವ ಐಡಿಯಾಲಜಿ ಈ ಎಲ್ಲ ಅನುಭವಗಳನ್ನೂ ಒಂದೇ ರೀತಿಯಲ್ಲಿಯೇ ವ್ಯಾಖ್ಯಾನಿಸಬೇಕು ಎಂದು ಒತ್ತಾಯ ಮಾಡುತ್ತದೆ. ಈ ನಿರ್ದಿಷ್ಟ ಅಪ್ಪ ಒಳ್ಳೆಯವನಿರಲೀ ಕೆಟ್ಟವನಿರಲೀ, ಅವನು ಪಿತೃಪ್ರಧಾನ ವ್ಯವಸ್ಥೆಯ ಒಂದು ಪಾತ್ರವೆಂದೇ ನೋಡಬೇಕು ಎಂಬುದು ಇಲ್ಲಿನ ಧೋರಣೆ.

ಹಾಗೆಯೇ, ಒಂದು ನಿರ್ದಿಷ್ಟ ಜಾತಿಯವರ ಜೊತೆ ನಮ್ಮ ಅನುಭವಗಳು ಯಾವಯಾವ ರೀತಿಯಲ್ಲೋ ಸಂದರ್ಭನಿಷ್ಟವಾಗಿ ರೂಪಿತವಾಗಿರುತ್ತದೆ. ಅದೆಲ್ಲವನ್ನೂ ಪುರೋಹಿತಶಾಹಿಗಳೆಂದೋ, ಊಳಿಗಮಾನ್ಯರೆಂದೋ, ಕ್ರಾಂತಿಕಾರಿ ಪ್ರಜ್ಞೆ ಇರುವವರೆಂದೋ – ಹೀಗೆ ಯಾವುದೋ ಒಂದು ವ್ಯಾಖ್ಯಾನದ ರೀತಿಯಲ್ಲೇ ನೋಡಬೇಕು ಎನ್ನುವುದು ಐಡಿಯಾಲಜಿಗಳ ಒತ್ತಾಯ. 

ಇಲ್ಲಿ ಒಂದು ವಿಚಾರ ಗಮನಿಸಿ. ನಿಜವಾದ ವಿಜ್ಞಾನದಲ್ಲಿ ಇರುವಂತೆ ಇದು ನಮ್ಮ ಅನುಭವದಲ್ಲಿ ಏಳಬಹುದಾದ ಯಾವ ‘ನಿರ್ದಿಷ್ಟ’ ‘ಸಮಸ್ಯೆ’ಗೂ ಪರಿಹಾರ ರೂಪಿಯಾದ ವಿವರಣೆಯ ಮಾದರಿಯಲ್ಲ.

ಬದಲಾಗಿ ಇದು ನಮ್ಮ ಎಲ್ಲ ಅನುಭವಗಳನ್ನೂ ಅರ್ಥೈಸಿಕೊಳ್ಳಲು ಇರುವ ಏಕೈಕ ವ್ಯಾಖ್ಯಾನರೂಪಿ ಮಾದರಿ. ಹಾಗಾಗಿಯೇ ಈ ಐಡಿಯಾಲಜಿಯ ಸೋಂಕು ಒಮ್ಮೆ ಬಂದರೆ ಎಲ್ಲರಿಗೂ ತಗುಲುತ್ತದೆ. ಅದಕ್ಕೆ ಎಡಪಂಥೀಯರು, ಬಲಪಂಥೀಯರು, ಉದಾರವಾದಿಗಳು, ಮೂಲಭೂತವಾದಿಗಳು, ಬ್ರಾಹ್ಮಣರು, ದಲಿತರು ಎನ್ನುವ ಭೇದವೂ ಇಲ್ಲ.

ಎಷ್ಟೋ ವೇಳೆ, ನಮ್ಮ ಸಮಾಜವಿಜ್ಞಾನಗಳು ಅಷ್ಟೇ ಏಕೆ, ಜನಪರ ಕಾಳಜಿಯುಳ್ಳ ಹಲವಾರು ಚಿಂತಕರು ಇವರೆಲ್ಲ ತಮಗೇ ಗೊತ್ತಿಲ್ಲದೇ ಇಂತಹ ಕಣ್ಕಟ್ಟಿನಲ್ಲಿ ಬಂಧಿಗಳು.ಆದ್ದರಿಂದಲೇ, ನಾವು ಇಂದು ತುರ್ತಾಗಿ ತಪ್ಪಿಸಿಕೊಳ್ಳಬೇಕಿರುವುದು ಎಡಪಂಥಿಯ ಅಥವಾ ಬಲಪಂಥೀಯವೆಂಬ ಅತಿಯ ಚಿಂತನೆಗಳಿಂದಲ್ಲ.

ಬದಲಾಗಿ ‘ಐಡಿಯಾಲಾಜಿಕಲ್’ ಎನ್ನುವ ಹುಸಿ ಚಿಂತನೆಯ ಮಾದರಿಯಿಂದ. ಅದನ್ನು ಮಾಡುವುದು ಹೇಗೆ ಎನ್ನುವುದು ಶಿಕ್ಷಣತಜ್ಞರು ಮತ್ತು ವಿಚಾರವಾದಿಗಳ ಎದುರಿಗಿರುವ ಬಹುದೊಡ್ಡ ಪ್ರಶ್ನೆ. ಉತ್ತರಿಸಲೇಬೇಕಾದ ಪ್ರಶ್ನೆಗಳನ್ನು ಗಮನಿಸುವ ಬದಲು, ನಮಗೆ ಈಗಾಗಲೇ ಉತ್ತರ ಗೊತ್ತಿರುವ ಪ್ರಶ್ನೆಗಳನ್ನು ಮಾತ್ರ ಗಮನಿಸಿದರೆ ಅದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲವಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT