ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗದರ್ಶಕನ ಯಶೋಗಾಥೆ

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ದಶಕದ ಹಿಂದೆ ಕರ್ನಾಟಕದ ವೇಗಿ ಜಾವಗಲ್‌ ಶ್ರೀನಾಥ್‌ ಅವರು ರಣಜಿಯಲ್ಲಿ ಚೊಚ್ಚಲ  ವಿಕೆಟ್‌ ಪಡೆದಿದ್ದು ಈಗ ಇತಿಹಾಸ.  ಶ್ರೀನಾಥ್‌ ಅವರ ಖಾತೆಗೆ ಆ ವಿಕೆಟ್‌ ಸೇರಲು ಕಾರಣನಾದ ಆ ಆಟಗಾರನ ಬಗ್ಗೆ  ಇಂದಿಗೂ ಬಹುತೇಕರಿಗೆ ಗೊತ್ತಿದ್ದಂತಿಲ್ಲ.

ಹೈದರಾಬಾದ್‌ ವಿರುದ್ಧದ ಆ ಪಂದ್ಯದಲ್ಲಿ ಎಂ.ವಿ. ಶ್ರೀಧರ್‌ ಬಾರಿಸಿದ ಚೆಂಡನ್ನು ಪಾಯಿಂಟ್‌ನಲ್ಲಿದ್ದ ಯುವಕನೊಬ್ಬ ಸೊಗಸಾದ ರೀತಿಯಲ್ಲಿ ಜಿಗಿದು ಹಿಡಿತಕ್ಕೆ ಪಡೆದಿದ್ದ. ಆ ದಿನ ಹಿರಿಯ ಮತ್ತು ಕಿರಿಯ ಆಟಗಾರರು ಆತನ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದವರು ಮಂಗಳೂರಿನ ಪರಂಬತೆವೀಡ್‌ ಶಶಿಕಾಂತ್‌.

ಕರ್ನಾಟಕ ಸಂಕಷ್ಟದಲ್ಲಿದ್ದಾಗಲೆಲ್ಲಾ ಮನಮೋಹಕ ಆಟ ಆಡಿ  ಆಸರೆಯಾಗುತ್ತಿದ್ದ ಶಶಿಕಾಂತ್‌  ರಾಜ್ಯ ತಂಡದ ‘ಆಪತ್ಭಾಂದವ’ ಎಂದೇ ಪರಿಚಿತರಾಗಿದ್ದರು. ಆಟಗಾರನಾಗಿ ಮತ್ತು ಯಶಸ್ವಿ ಕೋಚ್‌ ಆಗಿ ಕರ್ನಾಟಕದ ಕ್ರಿಕೆಟ್‌ ಲೋಕಕ್ಕೆ ಅವರು  ಅಪಾರ  ಕೊಡುಗೆ ನೀಡಿದ್ದಾರೆ.

ಶಶಿಕಾಂತ್‌ ಅವರ ಸಾರಥ್ಯದಲ್ಲಿ ಅನನುಭವಿಗಳಿಂದ ಕೂಡಿದ್ದ ಕರ್ನಾಟಕ ತಂಡ  ನವಜೋತ್‌ ಸಿಂಗ್‌ ಸಿಧು ಅವರ ನೇತೃತ್ವದ ಭಾರತ ಇತರೆ ತಂಡವನ್ನು ಮಣಿಸಿ ಇರಾನಿ ಟ್ರೋಫಿಗೆ ಮುತ್ತಿಟ್ಟಿದ್ದು  ಚರಿತ್ರಾರ್ಹ.

ಕೇವಲ ಆಟಗಾರನಾಗಿ ಮಾತ್ರವಲ್ಲದೆ, ಕೋಚ್‌ ಆಗಿಯೂ ಶಶಿಕಾಂತ್‌ ಅವರು ಅಪಾರ ಯಶಸ್ಸು ಗಳಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ  17 ವರ್ಷದೊಳಗಿನವರ ರಾಜ್ಯ ತಂಡ ದಕ್ಷಿಣ ವಲಯ ಟ್ರೋಫಿ ಎತ್ತಿಹಿಡಿದಿದೆ.

2011ರಲ್ಲಿ ನಡೆದಿದ್ದ ಶಫಿ ದಾರಾ ಶಾ ಕ್ರಿಕೆಟ್‌ ಟೂರ್ನಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌ ಚಾಂಪಿಯನ್‌ ಆಗಿದ್ದನ್ನೂ ಮರೆಯುವಂತಿಲ್ಲ.   ಈ ಬಾರಿ ಸತತ ವೈಫಲ್ಯದಿಂದ ಕಂಗೆಟ್ಟಿದ್ದ  23 ವರ್ಷದೊಳಗಿನವರ ತಂಡಕ್ಕೆ ನವ ಚೈತನ್ಯ ತುಂಬಿ  ಯಶಸ್ಸಿನ ಉತ್ತುಂಗಕ್ಕೆ ಏರುವಂತೆ ಮಾಡಿರುವ ಅವರು ‘ಪ್ರಜಾವಾಣಿ’ ಜೊತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

*ನೀವು ಕ್ರಿಕೆಟ್‌ ಲೋಕಕ್ಕೆ ಅಡಿ ಇಟ್ಟ ಬಗ್ಗೆ ಹೇಳಿ?
ಐದನೇ ತರಗತಿಯಲ್ಲಿದ್ದಾಗ ಅಣ್ಣ ಪಿ.ವಿ. ಮೋಹನ್‌ ಜೊತೆ ಕ್ರಿಕೆಟ್‌ ಆಡಲು ಹೋಗುತ್ತಿದ್ದೆ. ಆಗೆಲ್ಲಾ ಹೆಚ್ಚಾಗಿ ‘ಅಂಡರ್‌ ಆರ್ಮ್‌ ಕ್ರಿಕೆಟ್‌’ ಆಡುತ್ತಿದ್ದೆವು.   ಆಗ ಶಾಲಾ ಲೀಗ್‌ನಲ್ಲಿ  ಹೆಚ್ಚು ರನ್ ಗಳಿಸಿದ್ದೆ. ಅದನ್ನು ನೋಡಿ ಅಣ್ಣ ಇಲ್ಲಿದ್ದರೆ ಯಾರೂ ನಿನ್ನನ್ನು ಗುರುತಿಸುವುದಿಲ್ಲ ಎಂದು ಹೇಳಿ 1986ರಲ್ಲಿ ಬೆಂಗಳೂರಿಗೆ  ಕರೆತಂದು  ಸೇಂಟ್‌ ಜೋಸೆಫ್‌ ಕಾಲೇಜಿಗೆ ಸೇರಿಸಿದರು. ಶಾಲಾ ಲೀಗ್‌ನಲ್ಲಿ ಚೆನ್ನಾಗಿ ಆಡಿದ್ದರಿಂದ  ಕಾಲೇಜು ತಂಡದಲ್ಲಿ ಸುಲಭವಾಗಿ ಸ್ಥಾನ ಸಿಗುತ್ತದೆ ಎಂಬುದು ನನ್ನ ಭಾವನೆಯಾಗಿತ್ತು.

ಆದರೆ  ಆರಂಭದಲ್ಲಿ ಅವಕಾಶವೇ ಸಿಗಲಿಲ್ಲ. 12ನೇ ಆಟಗಾರನಾಗಿ ತಂಡದಲ್ಲಿದ್ದೆ.  ಬಳಿಕ ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ ಸೇರಿಕೊಂಡೆ. ಆ ಸಮಯದಲ್ಲೇ ಕಾಲೇಜು ತಂಡದ ಪರ ಆಡುವ ಅವಕಾಶ ಸಿಕ್ಕಿತ್ತು. ಅದನ್ನು ಸದು ಪಯೋಗಪಡಿಸಿಕೊಂಡಿದ್ದರಿಂದ ಮರು ವರ್ಷ ತಂಡದ ನಾಯಕತ್ವ ಸಿಕ್ಕಿತು. ನಂತರ 22 ವರ್ಷದೊಳಗಿನ ರಾಜ್ಯ ತಂಡದಲ್ಲಿ  ಆಂಧ್ರಪ್ರದೇಶ ವಿರುದ್ಧ  ಮೊದಲ ಪಂದ್ಯ ಆಡಿದ್ದೆ. ಅದರಲ್ಲಿ 161 ಮತ್ತು 166ರನ್‌ ಗಳಿಸಿದೆ. ಮುಂದೆ 22 ಮತ್ತು 25 ವರ್ಷದೊಳಗಿನವರ ರಾಜ್ಯ ತಂಡದ ಸಾರಥ್ಯವೂ ಸಿಕ್ಕಿತು. 

* ರಣಜಿ ತಂಡಕ್ಕೆ ಆಯ್ಕೆಯಾಗಿದ್ದರ ಬಗ್ಗೆ ಹೇಳಿ?
1988ರಲ್ಲಿ ರಣಜಿ ತಂಡಕ್ಕೆ ಆಯ್ಕೆಯಾದೆ. ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲಿ  ಪದಾರ್ಪಣೆಯ ಅವಕಾಶ ಸಿಗಲಿಲ್ಲ. ಆಂಧ್ರಪ್ರದೇಶದ ಎದುರಿನ ಚೊಚ್ಚಲ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ  ಬ್ಯಾಟಿಂಗ್‌ ಮಾಡಿ ವೈಫಲ್ಯ ಕಂಡಿದ್ದೆ. ನಂತರ ಕೇರಳ ವಿರುದ್ಧ ಆರಂಭಿಕನಾಗಿ ಆಡಿ ಶತಕ ಗಳಿಸಿದೆ. ಬಳಿಕ ತಮಿಳುನಾಡು ವಿರುದ್ಧದ ಪಂದ್ಯದಲ್ಲಿಯೂ ಮಿಂಚಿದ್ದೆ.

* ಮೊದಲ ಎರಡು ಪಂದ್ಯಗಳಲ್ಲಿ ವೈಫಲ್ಯ ಕಂಡಾಗ. ಮತ್ತೆ ತಂಡದಲ್ಲಿ ಸ್ಥಾನ ಸಿಗುತ್ತದೆ ಅಂದುಕೊಂಡಿದ್ದಿರಾ?
ಆಗ  ತುಂಬಾ ಪೈಪೋಟಿ ಇರುತ್ತಿತ್ತು. ಮೊದಲ ಎರಡು ಪಂದ್ಯಗಳಲ್ಲಿ ವೈಫಲ್ಯ ಕಂಡಾಗ ನನ್ನ ಕಥೆ ಮುಗಿಯಿತು ಎಂದೇ ಭಾವಿಸಿದ್ದೆ. ಆದರೆ ಚೆನ್ನಾಗಿ ಕ್ಷೇತ್ರರಕ್ಷಣೆ ಮಾಡುತ್ತಿದ್ದುದರಿಂದ ತಂಡದಲ್ಲಿ ಉಳಿಸಿಕೊಂಡರು.  ಆ ನಂತರ  ಸ್ಥಿರ ಸಾಮರ್ಥ್ಯ ತೋರಿ ಆಡುವ ಬಳಗದಲ್ಲಿ ಸ್ಥಾನ ಭದ್ರಪಡಿಸಿಕೊಂಡೆ.

* ತಂಡ ಮುನ್ನಡೆಸುವ ಅವಕಾಶ ಸಿಕ್ಕಿದ್ದರ ಬಗ್ಗೆ ಹೇಳಿ?
ಅದೊಂದು ಸುಂದರ ಅನುಭವ. 1996ರಲ್ಲಿ ನಡೆದಿದ್ದ ಮೊಯಿನ್‌ ಉದ್‌ ದೌಲಾ ಗೋಲ್ಡ್‌ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ರಾಜ್ಯ ತಂಡದ ಸಾರಥ್ಯ ವಹಿಸುವ ಅವಕಾಶ ಸಿಕ್ಕಿತ್ತು.

ಆ ಪಂದ್ಯದಲ್ಲಿ ಸಚಿನ್‌ ತೆಂಡೂಲ್ಕರ್‌ ನಾಯಕತ್ವದ ಸನ್‌ ಗ್ರೇಸ್‌ ಇಲೆವೆನ್‌ ತಂಡವನ್ನು ಮಣಿಸಿದ್ದೆವು. ಬಳಿಕ ಇರಾನಿ ಟ್ರೋಫಿಯಲ್ಲಿ ಭಾರತ ಇತರೆ ತಂಡವನ್ನು ಸೋಲಿಸಿದ್ದು  ದೊಡ್ಡ ಸಾಧನೆ. ಏಕೆಂದರೆ ಆಗ  ತಂಡದಲ್ಲಿ ರಾಹುಲ್‌ ದ್ರಾವಿಡ್‌, ಜಾವಗಲ್‌ ಶ್ರೀನಾಥ್‌ ಮತ್ತು ಅನಿಲ್‌ ಕುಂಬ್ಳೆ ಅವರು ಇರಲಿಲ್ಲ. ಅವರೆಲ್ಲಾ ಇಂಗ್ಲೆಂಡ್‌ ಪ್ರವಾಸಕ್ಕೆ ಹೋಗಿದ್ದ ಭಾರತ ತಂಡದಲ್ಲಿದ್ದರು.

* ದೇಶಿ ಟೂರ್ನಿಗಳಲ್ಲಿ ಅಮೋಘ ಆಟ ಆಡಿದಾಗಲೆಲ್ಲಾ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುತ್ತೀರಿ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಕೊನೆಗೂ ಭಾರತ ತಂಡದಲ್ಲಿ ಆಡುವ  ಕನಸು ಕೈಗೂಡಲಿಲ್ಲವಲ್ಲ?
ರಾಷ್ಟ್ರೀಯ ತಂಡದಲ್ಲಿ ಆಡುವ ಅರ್ಹತೆ ಇದ್ದರೂ  ಆ ಕನಸು ಕೈಗೂಡಲಿಲ್ಲ ಎಂಬ ಕೊರಗು ಈಗಲೂ ಕಾಡುತ್ತಲೇ ಇದೆ.  ಆಗ ಆರಂಭಿಕ ಆಟಗಾರನ ಸ್ಥಾನಕ್ಕಾಗಿ ಭಾರೀ ಪೈಪೋಟಿ ಇತ್ತು. ದಕ್ಷಿಣ ವಲಯದಿಂದ ಒಬ್ಬರಿಗೆ ಮಾತ್ರ ಅವಕಾಶ ಇತ್ತು. ಇದಕ್ಕಾಗಿ   ಕೆ.ಶ್ರೀಕಾಂತ್‌, ವಿ.ಬಿ. ಚಂದ್ರಶೇಖರ್‌ ಮತ್ತು ಡಬ್ಲ್ಯು.ವಿ. ರಾಮನ್‌ ಅವರೊಂದಿಗೆ ನಾನು ಸ್ಪರ್ಧೆ ನಡೆಸಬೇಕಿತ್ತು.

ಆ ಸಮಯದಲ್ಲಿ ಅದೃಷ್ಟವೂ ಕೈ ಹಿಡಿಯಲಿಲ್ಲ. ಒಮ್ಮೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ಡೇವಿಡ್‌ ಜಾನ್ಸನ್‌ ಬೌಲಿಂಗ್‌ನಲ್ಲಿ ಚೆಂಡು ಬಲವಾಗಿ ಅಪ್ಪಳಿಸಿದ್ದರಿಂದ ಬೆರಳು ಮುರಿದಿತ್ತು. ಇನ್ನೊಮ್ಮೆ ಟೈಫಾಯ್ಡ್‌ನಿಂದ ಬಳಲಿದ್ದೆ. ದಕ್ಷಿಣ ಆಫ್ರಿಕಾ ವಿರುದ್ಧ ಕೇರಳದಲ್ಲಿ ನಡೆದಿದ್ದ ಪಂದ್ಯದಲ್ಲಿ  20 ರನ್‌ ಗಳಿಸಿ ಅಲನ್‌ ಡೊನಾಲ್ಡ್‌ಗೆ ವಿಕೆಟ್‌ ಒಪ್ಪಿಸಿದ್ದೆ. 

ಬುಚ್ಚಿಬಾಬು ಕ್ರಿಕೆಟ್‌ನಲ್ಲಿ  ತಮಿಳುನಾಡು ವಿರುದ್ಧ 70 ರನ್‌ ಗಳಿಸಿ ಔಟಾಗಿದ್ದೆ. ಅದೇ ಪಂದ್ಯದಲ್ಲಿ ಶ್ರೀಕಾಂತ್‌ ಶತಕ ಬಾರಿಸಿ ತಂಡದಲ್ಲಿ ಸ್ಥಾನ ಭದ್ರ ಮಾಡಿಕೊಂಡಿದ್ದರು. ಆ ಪಂದ್ಯದಲ್ಲಿ ಸಯ್ಯದ್‌ ಕಿರ್ಮಾನಿ ಅವರು ಶ್ರೀಕಾಂತ್‌  ಕ್ಯಾಚ್‌ ಕೈಚೆಲ್ಲಿದ್ದು ನನಗೆ ಮುಳುವಾಗಿತ್ತು.

* ತಂಡದ ಯಶಸ್ಸಿನಲ್ಲಿ ಆರಂಭಿಕರ ಪಾತ್ರ ಎಂತಹದ್ದು?
ಒಂದು ಸುಸಜ್ಜಿತ ಕಟ್ಟಡ ಎದ್ದು ನಿಲ್ಲಬೇಕಾದರೆ. ಅದರ ಬುನಾದಿ ಗಟ್ಟಿಯಾಗಿರಬೇಕು. ಇಲ್ಲದಿದ್ದರೆ ಅದು ಕುಸಿದು ಬೀಳುವ ಅಪಾಯ ಹೆಚ್ಚಿರುತ್ತದೆ. ಅದೇ ರೀತಿ  ಆರಂಭಿಕರು ಚೆನ್ನಾಗಿ ಆಡಿದರೆ ಮಾತ್ರ ತಂಡ ಯಶಸ್ಸಿನ ಪಥದಲ್ಲಿ ಸಾಗಲು ಸಾಧ್ಯ.

* ಕರ್ನಾಟಕದಲ್ಲಿ ಕ್ರಿಕೆಟ್‌ ಬೆಳವಣಿಗೆ ಹೇಗಿದೆ?
ರಾಷ್ಟ್ರೀಯ ತಂಡಕ್ಕೆ ಹಲವು ಪ್ರತಿಭೆಗಳನ್ನು ನೀಡಿದ ಹೆಗ್ಗಳಿಕೆ  ರಾಜ್ಯದ್ದು. ಇಲ್ಲಿ ಮೊದಲಿನಿಂದಲೂ ಕ್ರಿಕೆಟ್‌ಗೆ ಅಪಾರ ಮನ್ನಣೆ ಸಿಗುತ್ತಿದೆ. ಈಗ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಸುಸಜ್ಜಿತ ಮೈದಾನಗಳು ತಲೆ ಎತ್ತಿವೆ. ಜೊತೆಗೆ ಸಾಕಷ್ಟು ಶಾಲಾ ಲೀಗ್‌ಗಳು ಜರುಗುತ್ತಿವೆ. ಇದರಿಂದ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ.

* ಕಿರಿಯರ ತಂಡಕ್ಕೆ ತರಬೇತಿ ನೀಡುವುದು ಸವಾಲೆನಿಸುವುದಿಲ್ಲವೇ?
ನಾನು ಕೋಚ್‌ ಆಗಿ ಕೆಲಸ ಮಾಡುವ ಮುನ್ನ ನಾಲ್ಕು ವರ್ಷ ರಾಜ್ಯ ರಣಜಿ ತಂಡದ ಆಯ್ಕೆ ಸಮಿತಿ ಸದಸ್ಯನಾಗಿದ್ದೆ. ಜೊತೆಗೆ ಎರಡು ವರ್ಷ ಕೆಎಸ್‌ಸಿಎ ಅಕಾಡೆಮಿಯಲ್ಲಿ ಕೆಲಸ ಮಾಡಿದ್ದೆ.  ಕಿರಿಯರ ತಂಡವನ್ನು ಸಜ್ಜುಗೊಳಿಸುವುದು ಕಷ್ಟವೇ. ಅಂತಹ ಸವಾಲುಗಳಿಗೆ ಎದೆಯೊಡ್ಡುವುದು ನನಗೆ ತುಂಬಾ ಇಷ್ಟ. 

* ನಿಮ್ಮ ಕೋಚಿಂಗ್‌ ವಿಧಾನ ಹೇಗಿರುತ್ತದೆ?
ಆಟಗಾರರಲ್ಲಿ ಆಕ್ರಮಣಕಾರಿ ಮನೋಭಾವ ಬೆಳೆಸಲು  ಮೊದಲ ಆದ್ಯತೆ ನೀಡುತ್ತೇನೆ. ಎಂತಹುದೇ ಸಂದರ್ಭದಲ್ಲೂ ಆಟಗಾರರು ಎದೆಗುಂದದಂತೆ ನೋಡಿಕೊಳ್ಳುವ ಜೊತೆಗೆ ಎದುರಾಳಿಗಳ ದೌರ್ಬಲ್ಯಗಳನ್ನು ಗುರುತಿಸಿ ಅದಕ್ಕನುಗುಣವಾಗಿ ಯೋಜನೆ ಹೆಣೆಯುತ್ತೇವೆ. ಮುಖ್ಯವಾಗಿ ತಂಡ ಸ್ಫೂರ್ತಿ ನೆಲೆಗೊಳ್ಳುವಂತೆ ನೋಡಿಕೊಳ್ಳುತ್ತೇವೆ.

ಅಭ್ಯಾಸದ ವೇಳೆ ಬೌಲರ್‌ಗಳಿಂದ ಹೆಚ್ಚು ಎಸೆತಗಳನ್ನು ಹಾಕಿಸದೆ ಸಾಕಷ್ಟು ವಿಶ್ರಾಂತಿ ನೀಡುತ್ತೇವೆ. ಆಲ್‌ರೌಂಡರ್‌ಗಳನ್ನು ರೂಪಿಸುವುದಕ್ಕೂ ಒತ್ತು ನೀಡುತ್ತೇವೆ. ಯಾರ ಮೇಲೂ  ಒತ್ತಡ ಹೇರದೆ ಸ್ವಾಭಾವಿಕ ಆಟವನ್ನು ಪೋಷಿಸುತ್ತೇವೆ.

* ಈಗಿನ ರಣಜಿ ತಂಡದ ಬಗ್ಗೆ ಹೇಳಿ?
ಎಲ್ಲರೂ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ತಂಡ ತನ್ನ ಶಕ್ತಿಯನ್ನು ಸಾಬೀತು ಮಾಡಿದೆ. ಹೀಗಾಗಿ ಈ ಬಾರಿಯೂ ಪ್ರಶಸ್ತಿ ಗೆಲ್ಲಬಹುದೆಂಬ ಆಸೆ ಚಿಗುರೊಡೆದಿದೆ.

* ರಣಜಿ, ಐಪಿಎಲ್‌, ಹೀಗೆ ಎಲ್ಲಾ ಟೂರ್ನಿಗಳಲ್ಲಿ ರಾಜ್ಯದ ಆಟಗಾರರು ಮಿಂಚುತ್ತಿದ್ದಾರೆ. ಹೀಗಿದ್ದರೂ ರಾಷ್ಟ್ರೀಯ ತಂಡದಲ್ಲಿ ನಮ್ಮವರಿಗೆ ಹೆಚ್ಚು ಸ್ಥಾನ ಸಿಗುತ್ತಿಲ್ಲವಲ್ಲ?
ಎಲ್ಲಾ ರಾಜ್ಯಗಳಲ್ಲೂ ಹೊಸ ಹೊಸ ಪ್ರತಿಭೆಗಳು ಹುಟ್ಟಿಕೊಳ್ಳುತ್ತಿದ್ದಾರೆ. ಸ್ಪರ್ಧೆ ಮೊದಲಿಗಿಂತಲೂ ಕಠಿಣವಾಗಿದೆ. ಈ ಬಾರಿ ವಿನಯ್‌ ಕುಮಾರ್‌, ಕೆ. ಗೌತಮ್‌, ಸಿ.ಎಂ. ಗೌತಮ್‌, ಅರವಿಂದ್‌, ರಾಬಿನ್‌ ಉತ್ತಪ್ಪ ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ. ವಿನಯ್‌ಗೆ ಮತ್ತೊಮ್ಮೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇದೆ.

* ಕರುಣ್‌ ನಾಯರ್‌ ಅವರ ವೈಯಕ್ತಿಕ ಕೋಚ್‌ ಆಗಿದ್ದೀರಿ. ಅವರಿಗೆ ಯಾವ ರೀತಿ ತರಬೇತಿ ನೀಡುತ್ತೀರಿ?
ಕರುಣ್‌ ಪ್ರತಿಭಾನ್ವಿತ ಆಟಗಾರ. 19 ವರ್ಷದೊಳಗಿನವರ ತಂಡದಲ್ಲಿ ಆರಂಭಿಕನಾಗಿ ಆಡುತ್ತಿದ್ದ. ಆಗೆಲ್ಲಾ 60, 70 ರನ್‌ ಗಳಿಸಿ ಔಟಾಗಿ ಬಿಡುತ್ತಿದ್ದ. ಆಗ  ಆತನನ್ನು ಕರೆದು ನೀನು ಇಷ್ಟು ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರೆ ತಂಡಕ್ಕೂ ಪ್ರಯೋಜನವಿಲ್ಲ. ನಿನಗೂ ಲಾಭವಾಗುವುದಿಲ್ಲ. ಇದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವತ್ತ ಚಿತ್ತ ಹರಿಸು ಎಂದು ಸಲಹೆ ನೀಡಿದ್ದೆ. ಬಳಿಕ ಅವರ ತಂದೆ ಬಂದು ವೈಯಕ್ತಿಕ ಕೋಚ್‌ ಆಗುವಂತೆ ಕೇಳಿಕೊಂಡಿದ್ದರು.

ಆತ ಚೆಂಡನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವುತ್ತಿದ್ದ. ಅದನ್ನು ಗುರುತಿಸಿ ತಿದ್ದಿದೆ. ಜೊತೆಗೆ ಬೌಲಿಂಗ್‌ ಯಂತ್ರ ಬಳಸಿ ಅಭ್ಯಾಸ ಮಾಡಿಸುತ್ತಿದ್ದೆ. ಮುಖ್ಯವಾಗಿ ಆತನಲ್ಲಿ ಆತ್ಮಸ್ಥೈರ್ಯ ತುಂಬಿದೆ.  ನಂತರದ ಪಂದ್ಯದಲ್ಲಿ ಕರುಣ್‌ 160ರನ್‌ ಗಳಿಸಿದ್ದ.  ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ವಿಷಯ ತಿಳಿದು ತುಂಬಾ ಆನಂದವಾಯಿತು. ಆತ ಮುಂದೊಂದು ದಿನ ಭಾರತ ತಂಡದ ನಾಯಕನಾದರೂ ಅಚ್ಚರಿ ಪಡಬೇಕಿಲ್ಲ. ಆ ಗುಣ ಅವನಲ್ಲಿದೆ.

23 ವರ್ಷದೊಳಗಿನ ತಂಡದ ಯಶಸ್ಸಿನ ಹಿಂದಿನ ಗುಟ್ಟು..
ಈ ಬಾರಿ 23 ವರ್ಷದೊಳಗಿನವರ ತಂಡ ಎಲೈಟ್‌ ಗುಂಪಿನಿಂದ ಪ್ಲೇಟ್‌ ಗುಂಪಿಗೆ ಹಿಂಬಡ್ತಿ ಹೊಂದಿತ್ತು. ಕೂಚ್‌ ಬೆಹಾರ್‌ ಟ್ರೋಫಿಯಲ್ಲಿ ಮೊದಲ ಬಾರಿಗೆ 19 ವರ್ಷದೊಳಗಿವರ ತಂಡದ ಕೋಚ್‌ ಆಗಿದ್ದ ಶಶಿಕಾಂತ್‌  ಆ ನಂತರ 22 ಮತ್ತು 25 ವರ್ಷದೊಳಗಿನವರ ತಂಡಗಳ ಮಾರ್ಗದರ್ಶಕರಾಗಿಯೂ  ಕೆಲಸ ಮಾಡಿದ್ದರು.  ಅವರ  ಸಾರಥ್ಯದಲ್ಲಿ ತಂಡಗಳು ಅಪಾರ ಯಶಸ್ಸು ಕಂಡಿದ್ದವು.  ಹೀಗಾಗಿ  ಕೆಎಸ್‌ಸಿಎ ಅವರನ್ನು  23 ವರ್ಷದೊಳಗಿನವರ ಮುಖ್ಯಕೋಚ್‌ ಆಗಿ ನೇಮಿಸಿತ್ತು.

ಅವರ ಮಾರ್ಗದರ್ಶನದಲ್ಲಿ ತಂಡ ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ಉತ್ತಮ ಸಾಮರ್ಥ್ಯ ತೋರಿ ಸೆಮಿಫೈನಲ್‌ ಪ್ರವೇಶಿಸಿದೆ. ಮುಂದಿನ ವರ್ಷದ ಫೆಬ್ರುವರಿಯಲ್ಲಿ ಹರಿಯಾಣ ವಿರುದ್ಧ ಪಂದ್ಯ ಇದೆ. ಆ ಪಂದ್ಯದಲ್ಲಿ ಗೆದ್ದರೆ   ಮತ್ತೆ ಎಲೈಟ್‌ ಗುಂಪಿಗೆ ಬಡ್ತಿ ಹೊಂದಲಿದೆ.

ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧ ಡ್ರಾ ಮಾಡಿಕೊಂಡಿದ್ದ ರಾಜ್ಯ ತಂಡ ತ್ರಿಪುರ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 132 ರನ್‌ಗಳಿಂದ ಗೆದ್ದಿತ್ತು. ನಂತರದ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಇನಿಂಗ್ಸ್‌ ಮತ್ತು 158ರನ್‌ಗಳಿಂದ ಜಯಿಸಿತ್ತು. ಬಳಿಕ ನಡೆದ ರಾಜಸ್ತಾನ ಹಾಗೂ ಜಮ್ಮು ಮತ್ತು ಕಾಶ್ಮೀರದ ಮೇಲೂ ಪಾರಮ್ಯ ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT