ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಏಳುಬೀಳುಗಳ ಪಯಣ...

ರಣಜಿ
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ದೇಶಿ ಟೂರ್ನಿಗಳಲ್ಲಿ ಪ್ರತಿಷ್ಠಿತವೆನಿಸಿರುವ ರಣಜಿಯಲ್ಲಿ ಪ್ರಶಸ್ತಿ ಗೆದ್ದರೆ ವಿಶ್ವಕಪ್‌ ಜಯಿಸಿದಷ್ಟೇ ಖುಷಿ ಲಭಿಸುತ್ತದೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಹಾದಿ ಸಿಕ್ಕಂತಾಗುತ್ತದೆ. ಇವುಗಳೆಲ್ಲದರ ನಡುವೆ ಏಳುಬೀಳುಗಳು ಇದ್ದೇ ಇರುತ್ತದೆ. ಕರ್ನಾಟಕ ತಂಡ ಅನೇಕ ಬೀಳುಗಳ ನಡುವೆಯೇ ಈಗ ಮೈಕೊಡವಿ ನಿಂತಿದೆ. ಈ ಬಾರಿಯ ಟೂರ್ನಿಯ ಲೀಗ್‌ನಲ್ಲಿ ರಾಜ್ಯ ತಂಡದ ಪಯಣ ಹೇಗಿತ್ತು ಎಂಬುದರ ಬಗ್ಗೆ ಪ್ರಮೋದ ಜಿ.ಕೆ. ವಿಶ್ಲೇಷಿಸಿದ್ದಾರೆ.

ಸೋತಾಗಲೇ ಅಲ್ಲವೇ ಗೆಲುವಿನ ಮಹತ್ವ ಗೊತ್ತಾಗುವುದು? ಎರಡು ತಿಂಗಳ ಹಿಂದಿನ ಮಾತು. ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆ ಯಾಗಿದ್ದ ಸಂಭಾವ್ಯ ಆಟಗಾರರು ಅಂತಿಮ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಬೆಂಗಳೂರಿನ ಆರ್‌ಎಸ್‌ಐ ಮೈದಾನದಲ್ಲಿ ಕಸರತ್ತು ನಡೆಸುತ್ತಿದ್ದರು. ಪ್ರತಿಯೊಬ್ಬ ಆಟಗಾರನಲ್ಲಿಯೂ ತಮ್ಮದೇ ಆದ ಪ್ರತಿಭೆ ಇತ್ತು. ತಂಡಕ್ಕೆ ಆಯ್ಕೆಯಾಗಬೇಕೆನ್ನುವ ಆಸೆಯಿತ್ತು.

ಕಠಿಣ ಅಭ್ಯಾಸದಲ್ಲಿ ತೊಡಗಿದ್ದ ರಾಜ್ಯದ ಕ್ರಿಕೆಟಿಗರತ್ತ ಕೈ ತೋರಿಸುತ್ತ ಇವರೆಲ್ಲರೂ ಪ್ರತಿಭಾನ್ವಿತರು. ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ನೀವೇ ಹೇಳಿ ಎಂದು ಕರ್ನಾಟಕ ತಂಡದ ಮುಖ್ಯ ಕೋಚ್‌ ಜೆ. ಅರುಣ್‌ ಕುಮಾರ್‌ ಪ್ರಶ್ನಿಸಿದ್ದರು.

ಎರಡು ವರ್ಷಗಳ ದೇಶಿ ಟೂರ್ನಿಗಳಲ್ಲಿ ಆರು ಪ್ರಶಸ್ತಿಗಳನ್ನು ಜಯಿಸಿ ದೇಶದ ಗಮನ ಸೆಳೆದಿದ್ದ ಕರ್ನಾಟಕ ಹೋದ ವರ್ಷ ಲೀಗ್‌ನಲ್ಲಿಯೇ ಸೋತು ಹೋಯಿತಲ್ಲ. ಆದ್ದರಿಂದ ಈ ಬಾರಿ ತಂಡದ ಆಯ್ಕೆಯಲ್ಲಿ ಹೆಚ್ಚು ಎಚ್ಚರ ವಹಿಸುವುದು ಅಗತ್ಯವಲ್ಲವೇ ಎಂದಾಗ ‘ಒಂದು ಟೂರ್ನಿಯಲ್ಲಿನ ಸೋಲು ನಮ್ಮ ತಂಡದ ಸಾಮರ್ಥ್ಯ ನಿರ್ಧರಿಸುವುದಿಲ್ಲ.

ಸತತವಾಗಿ ಗೆಲ್ಲುತ್ತಾ ಹೋದರೆ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಸೋತಾಗಲೇ ಅಲ್ಲವೇ ಗೆಲುವಿನ ಬೆಲೆ ಗೊತ್ತಾಗುವುದು’ ಎಂದು ಮರುಪ್ರಶ್ನೆ ಹಾಕಿದ್ದು ಅರುಣ್‌.ಹೀಗೊಂದು ಪುಟ್ಟ ಸಂಭಾಷಣೆ ನಡೆದು ಈಗ ಎರಡು ತಿಂಗಳುಗಳು ಉರುಳಿವೆ. ಅವರ ಮಾತೂ ನಿಜವಾಗಿದೆ. ರಾಜ್ಯ ತಂಡ ದುರ್ಬಲವಲ್ಲ ಎಂಬುದು ಈಗ ಸಾಬೀತಾಗಿದೆ.

ರಣಜಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಹೊರತು ಪಡಿಸಿದರೆ ಹೆಚ್ಚು ಬಾರಿ ಟ್ರೋಫಿ ಗೆದ್ದ ಹೆಗ್ಗಳಿಕೆ ಕರ್ನಾಟಕದ ಹೆಸರಿನಲ್ಲಿದೆ. 2013–14ರಲ್ಲಿ ರಾಜ್ಯ ತಂಡ ಟ್ರೋಫಿ ಜಯಿಸಿದ್ದಾಗ ನಮ್ಮಲ್ಲಿದ್ದ ಸಂಭ್ರಮವೇ ಬೇರೆ ತೆರನಾಗಿತ್ತು. ಏಕೆಂದರೆ ಆ ಹಿಂದಿನ 14 ವರ್ಷ ರಾಜ್ಯದ ಆಟಗಾರರು ಒಂದು ಚಾಂಪಿಯನ್‌ ಪಟ್ಟಕ್ಕಾಗಿ ವನವಾಸ ಅನುಭವಿಸಿದ್ದರು. 2009–10ರಲ್ಲಿ ಮೈಸೂರಿನಲ್ಲಿ ನಡೆದ ಫೈನಲ್‌ನಲ್ಲಿ ಕರ್ನಾಟಕ ಕೂದಲೆಳೆಯ ಅಂತರದಲ್ಲಿ ಟ್ರೋಫಿ ಗೆಲ್ಲುವ ಅವಕಾಶ ಕೈಚೆಲ್ಲಿತ್ತು.

ತವರಿನಲ್ಲಿ ತಂಡ ಟ್ರೋಫಿ ಗೆಲ್ಲುವ ಸುಂದರ ಕ್ಷಣಗಳನ್ನು ನೋಡಬೇಕೆಂದು ಮೈಸೂರಿನ ಮೈದಾನದಲ್ಲಿ ಸಾವಿರಾರು ಜನಸೇರಿದ್ದರು. ಕರ್ನಾಟಕ ಸೋಲುತ್ತಿದ್ದಂತೆಯೇ ಕೆಲ ಆಟಗಾರರು ಮತ್ತು ಅವರ ಪೋಷಕರು ಮೈದಾನ ದಲ್ಲಿಯೇ ಕಣ್ಣೀರು ಹಾಕಿದ್ದರು. ಮೂರು ವರ್ಷಗಳ ಹಿಂದೆ ಪ್ರಶಸ್ತಿ ಜಯಿಸಿದ್ದಾಗ ರಾಜ್ಯದ ಆಟಗಾರರು ಆ ನಿರಾಸೆಯ ದಿನಗಳನ್ನೇ ನೆನಪಿಸಿಕೊಂಡು ‘ಆ ಸೋಲೇ ನಮಗೆ ಈಗ ಟ್ರೋಫಿ ಗೆಲ್ಲಲು ಸ್ಫೂರ್ತಿ’ ಎಂದಿದ್ದರು.

ಆಗ ರಾಜ್ಯ ತಂಡದ ನಾಯಕರಾಗಿದ್ದ ರಾಬಿನ್‌ ಉತ್ತಪ್ಪ ಅವರನ್ನು ಇದರ ಬಗ್ಗೆ ಮಾತನಾಡಿಸಿದಾಗ ‘ಅನೇಕ ಸಲ ರಾಷ್ಟ್ರೀಯ ತಂಡದಲ್ಲಿ ಆಡಿದ್ದೇನೆ. ಹಲವಾರು ಟ್ರೋಫಿಗಳನ್ನೂ ಗೆದ್ದಿದ್ದೇನೆ. ಆದರೆ ರಣಜಿ ಫೈನಲ್‌ನಲ್ಲಿ ಎದುರಾದ ಸೋಲು ನನ್ನ ಜೀವ ಮಾನದಲ್ಲಿ ಮರೆಯಲಾಗದ ದುರಂತ’ ಎಂದಿದ್ದರು.

ಈಗ ಆ ಸೋಲಿನ ದಿನಗಳಲ್ಲೆವೂ ಮುಗಿದು ಕರ್ನಾಟಕ ತಂಡ ಮೊದಲಿನ ಹಾಗೆ ದೇಶಿ ಟೂರ್ನಿಯಲ್ಲಿ ಬಲಿಷ್ಠ ಎಂಬುದನ್ನು ಸಾಬೀತು ಮಾಡುತ್ತಿದೆ. 14 ವರ್ಷಗಳಿಂದ ಒಂದೇ ಒಂದು ಟ್ರೋಫಿ ಗೆಲ್ಲದ ರಾಜ್ಯ ತಂಡ ನಂತರದ ಎರಡು ವರ್ಷ ಆನೆ ನಡೆದದ್ದೇ ದಾರಿ ಎನ್ನುವ ಹಾದಿಯಲ್ಲಿ ಸಾಗಿತು. ಮುಟ್ಟಿದ ಪ್ರತಿ ವಸ್ತು ಕೂಡ ಚಿನ್ನವಾಗ ತೊಡಗಿತು.ಎರಡು ಸಲ ರಣಜಿ, ಇರಾನಿ ಮತ್ತು ವಿಜಯ್‌ ಹಜಾರೆ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು ಇದಕ್ಕೆ ಸಾಕ್ಷಿ.

ಗೆಲುವಿನಲ್ಲಿದೆ ಸೋಲಿನ ಪ್ರತಿಬಿಂಬ
ಸತತ ಪ್ರಶಸ್ತಿಗಳನ್ನು ಜಯಿಸುತ್ತಾ ಸಾಗಿದಾಗ ಕರ್ನಾಟಕ ತಂಡದ ಆಟಗಾರರು ರಾಜ್ಯದ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಹೀರೊಗಳಾಗಿದ್ದರು. ಹೋದ ವರ್ಷ ಅನಿರೀಕ್ಷಿತವಾಗಿ ಲೀಗ್‌ ಹಂತ ದಿಂದ ಹೊರಬಿದ್ದಾಗ ಟೀಕೆಗೂ ಗುರಿಯಾದರು. ಆ ಟೀಕೆ, ಅವಮಾನಗಳೇ ಈ ಬಾರಿ ಉತ್ತಮ ಪ್ರದರ್ಶನ ನೀಡಲು ಸ್ಫೂರ್ತಿಯಾದವು.

ರಾಜ್ಯ ತಂಡ 2013–14 ಮತ್ತು 2014–15ರಲ್ಲಿ ರಣಜಿ ಟ್ರೋಫಿ ಜಯಿಸಿದ್ದಾಗ ಒಂದೂ ಪಂದ್ಯ ಸೋಲದೇ ಈ ಸಾಧನೆ ಮಾಡಿತ್ತು. ಆದ್ದರಿಂದ ಸತತ ಮೂರನೇ ವರ್ಷವೂ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಆಗಿದ್ದೇ ಬೇರೆ. ಪುಣೆಯಲ್ಲಿ ಮಹಾರಾಷ್ಟ್ರ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ರಾಜ್ಯ ತಂಡ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತು.

‘ಎದುರಾಳಿ ತಂಡ ಯಾವುದು. ಆ  ತಂಡದ ಶಕ್ತಿ ಮತ್ತು ದೌರ್ಬಲ್ಯವೇನು ಎನ್ನುವುದರ ಬಗ್ಗೆ ಯೋಚಿಸುತ್ತಾ ಕೂಡುವುದಿಲ್ಲ.  ನಮ್ಮ ತಂಡದ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ನಂಬಿಕೆಯಿದೆ. ಹಾಗಂದ ಮಾತ್ರಕ್ಕೆ ಎದುರಾಳಿಯನ್ನು ಸುಲಭವಾಗಿ ಪರಿಗಣಿಸುವುದಿಲ್ಲ’ ಎಂದು ರಾಜ್ಯ ತಂಡದ ನಾಯಕ ವಿನಯ್‌ ಪ್ರತಿ ಪಂದ್ಯಕ್ಕೂ ಮೊದಲು ಹೇಳುತ್ತಾರೆ.

ಆದರೆ ಹೋದ ವರ್ಷ ಪ್ರತಿ ಪಂದ್ಯದಲ್ಲಿಯೂ ರಾಜ್ಯ ತಂಡದ ವರು ತಪ್ಪುಗಳನ್ನು ಮಾಡುತ್ತಲೇ ಹೋದರು. ದೇಶಿ ಟೂರ್ನಿಯಲ್ಲಿ ಇತ್ತೀಚಿನ ವರ್ಷಗಳಲ್ಲಷ್ಟೇ ಗಮನ ಸೆಳೆಯುತ್ತಿರುವ ಅಸ್ಸಾಂ ತಂಡದ ವಿರುದ್ಧವೂ ಡ್ರಾ ``ಮಾಡಿಕೊಂಡು ಇನಿಂಗ್ಸ್‌ ಮುನ್ನಡೆ ಬಿಟ್ಟುಕೊಟ್ಟರು. ಅಸ್ಸಾಂ ವಿರುದ್ಧದ ಪಂದ್ಯ ದಲ್ಲಿ ಮಾಡಿದ ಒಂದು ತಪ್ಪು ಕರ್ನಾಟಕದ ಪಾಲಿಗೆ ಮುಳುವಾಯಿತು. ಇದರಿಂದ ಎರಡು ವರ್ಷಗಳ ಅಧಿಪತ್ಯವೂ ಅಂತ್ಯಕಂಡಿತ್ತು.

ಆದ್ದರಿಂದ ಈ ಬಾರಿ ರಾಜ್ಯ ತಂಡದವರು ಮೊದಲ ಪಂದ್ಯದಿಂದಲೇ ಗೆಲುವಿನ ಗುರಿಯೊಂದಿಗೆ ಆಡಿದರು. ಜಾರ್ಖಂಡ್‌ ವಿರುದ್ಧ ಗ್ರೇಟರ್‌ ನೋಯ್ಡಾದಲ್ಲಿ ನಡೆದ ಮೊದಲ ಪಂದ್ಯ ಡ್ರಾ ಆಯಿತು. ಆ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಸಂಪಾದಿಸಿ ವಿನಯ್‌ ಪಡೆ ಮೂರು ಪಾಯಿಂಟ್ಸ್‌ ಪಡೆದುಕೊಂಡಿತು.

ಹೀಗೆ ಆರಂಭವಾದ ಕರ್ನಾಟಕ ತಂಡದ ರಣಜಿ ಟೂರ್ನಿಯ ಪಯಣಕ್ಕೆ ಭರ್ಜರಿ ಹುಮ್ಮಸ್ಸು ತುಂಬಿದ್ದು ದೆಹಲಿ ವಿರುದ್ಧದ ಪಂದ್ಯ. ಅನುಭವಿ ಆಟಗಾರರಾದ ಗೌತಮ್‌ ಗಂಭೀರ್ ಮತ್ತು ವೇಗಿ ಇಶಾಂತ್‌ ಶರ್ಮಾ ಅವರನ್ನು ಹೊಂದಿದ್ದ ದೆಹಲಿ ತಂಡ ಬಲಿಷ್ಠವಾಗಿತ್ತು. ಆದ್ದರಿಂದ ಹೋದ ತಿಂಗಳು ಕೋಲ್ಕತ್ತದಲ್ಲಿ ಆಯೋಜನೆ ಯಾಗಿದ್ದ ಕರ್ನಾಟಕ ಮತ್ತು ದೆಹಲಿ ನಡುವಣ ಪಂದ್ಯ ಅತ್ಯಂತ ಕುತೂಹಲಕಾರಿ ಮತ್ತು ಬಲಿಷ್ಠ ತಂಡಗಳ ನಡುವಣ ಹೋರಾಟ ಎಂದೇ ಬಿಂಬಿತವಾಗಿತ್ತು. ಆದರೆ ಆಗಿದ್ದೇನು?

ಕರ್ನಾಟಕದ ಅತ್ಯಂತ ಕರಾರುವಾಕ್ಕಾದ ಬೌಲಿಂಗ್‌ ಸಾಮರ್ಥ್ಯದ ಮುಂದೆ ದೆಹಲಿ ಎರಡೂವರೆ ದಿನಗಳಲ್ಲಿಯೇ ಮಂಡಿಯೂರಿತು. ಬಲಿಷ್ಠ ತಂಡದ ವಿರುದ್ಧ ರಾಜ್ಯ ತಂಡ ಇನಿಂಗ್ಸ್ ಮತ್ತು 160 ರನ್‌ಗಳ ಅಂತರದ ಗೆಲುವು ಪಡೆದು ಸಂಭ್ರಮಿಸಿತು.

ಒಂದು ಪಂದ್ಯದಲ್ಲಿ ಲಭಿಸಿದ ಜಯ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲೂ ಕಾರಣವಾಯಿತು. ಅಸ್ಸಾಂ, ವಿದರ್ಭ ಮತ್ತು ರಾಜಸ್ತಾನ ಎದುರಿನ ಪಂದ್ಯಗಳಲ್ಲಿ ಸುಲಭವಾಗಿ ಜಯ ಪಡೆದು ಈ ಬಾರಿಯ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಯಿತು. ಆದ್ದ ರಿಂದ ಉಳಿದ ಕೊನೆಯ ಮೂರೂ ಲೀಗ್ ಪಂದ್ಯಗಳು  ತಂಡಕ್ಕೆ ಮುಖ್ಯವೆನಿಸಲೇ ಇಲ್ಲ.

ಬ್ಯಾಟಿಂಗ್‌ ವೈಫಲ; ಎಚ್ಚರಿಕೆ ಗಂಟೆ
ಆರಂಭದ ಐದೂ ಪಂದ್ಯಗಳಲ್ಲಿ ಉತ್ತಮವಾಗಿ ಆಡಿ ನಾಕೌಟ್‌ ಪ್ರವೇಶಿಸಿದ್ದರಿಂದ ಕರ್ನಾಟಕ ತಂಡ ಉಳಿದ ಲೀಗ್‌ ಪಂದ್ಯಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸಲಿಲ್ಲ. ಒಡಿಶಾ ವಿರುದ್ಧ ಇನಿಂಗ್ಸ್ ಹಿನ್ನಡೆ ಅನುಭವಿಸಿ, ಸೌರಾಷ್ಟ್ರ ಎದುರು ಸೋಲು ಕಂಡಿತು. ಒಡಿಶಾ ವಿರುದ್ಧ ದೆಹಲಿಯ ಪಾಲಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಸೋಲಿನಿಂದ ಪಾರಾಗಿದ್ದೇ ಒಂದು ಪವಾಡ. ಲೀಗ್‌ ಹಂತದಲ್ಲಿ ಅನೇಕ ಸಕಾರಾತ್ಮಕ ಅಂಶಗಳನ್ನು ಕಂಡಂತೆ ಹಲವಾರು ವೈಫಲ್ಯಗಳೂ ರಾಜ್ಯ ತಂಡವನ್ನು ಕಾಡಿದವು. ಅದರಲ್ಲೂ ವಿಶೇಷವಾಗಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ನೀರಸ ಆಟವೇ ಇನ್ನಿಲ್ಲದಂತೆ ಕಾಡಿತು.

ಲೀಗ್‌ ಹಂತದಲ್ಲಿ ಒಂದು ತಪ್ಪು ಮಾಡಿದರೆ ಅದನ್ನು ಸರಿ ಪಡಿಸಿಕೊಳ್ಳಲು ಮತ್ತೊಂದು ಅವಕಾಶವಿರುತ್ತದೆ. ಆದರೆ ನಾಕೌಟ್‌ ನಲ್ಲಿ ಸೋತರೆ ಟೂರ್ನಿಯಿಂದಲೇ ಹೊರಬೀಳಬೇಕಾಗುತ್ತದೆ. ಆದ್ದ ರಿಂದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಪದೇ ಪದೇ ವೈಫಲ್ಯ ಕರ್ನಾಟಕಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

ವೈಫಲ್ಯದ ನಡುವೆಯೂ ಸಮರ್ಥ ಭರವಸೆ
ಕರ್ನಾಟಕ ತಂಡದಲ್ಲಿ ಆರಂಭಿಕ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಹೊಸ ಆಟಗಾರರ ನಡುವೆ ಮೊದಲಿನಿಂದಲೂ ಸಾಕಷ್ಟು ಪೈಪೋಟಿಯಿದೆ. ಕೆ.ಬಿ. ಪವನ್‌, ರಾಬಿನ್‌ ಉತ್ತಪ್ಪ, ಭರತ್‌ ಚಿಪ್ಲಿ, ಆರ್‌. ಬ್ಯಾರಿಂಗ್ಟನ್‌, ಮಯಂಕ್‌ ಅಗರವಾಲ್‌, ಅಮಿತ್‌ ವರ್ಮಾ ಹೀಗೆ ಪಟ್ಟಿ ಬೆಳೆಯುತ್ತದೆ. ಕಠಿಣ ಸ್ಪರ್ಧೆಯಿದ್ದ ಕಾರಣ ರಾಜ್ಯ  ತಂಡದಲ್ಲಿ ಇನಿಂಗ್ಸ್‌ ಆರಂಭಿಸುವ ಅವಕಾಶ ಗಳಿಸುವುದು ಸುಲಭದ ಮಾತಾಗಿರಲಿಲ್ಲ. ಈ ಸವಾಲುಗಳನ್ನೂ ಮೀರಿ ಆರ್‌. ಸಮರ್ಥ್‌ ಉತ್ತಮ ಆರಂಭಿಕರಾಗಿ ಹೊರಹೊಮ್ಮಿದ್ದಾರೆ.

ತಂಡದಲ್ಲಿ ಸ್ಥಾನ ಗಳಿಸಲು ಸಮರ್ಥ್‌ ಸಾಕಷ್ಟು ಶ್ರಮಪಟ್ಟಿದ್ದಾರೆ. ಅದು 2013ರ ಶಫಿ ದಾರಾಶಾ ಟೂರ್ನಿಯಲ್ಲಿ  ಸಮರ್ಥ್‌ ಐದು ಪಂದ್ಯಗಳಿಂದ ಆರು ಶತಕ ಸೇರಿದಂತೆ ಒಟ್ಟು 850 ರನ್‌ ಹೊಡೆದು ಮೊದಲ ಬಾರಿಗೆ ರಣಜಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಇದಕ್ಕೂ ಮೊದಲು ಅವರು ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್ ಕ್ಲಬ್‌ ಸೇರಿಕೊಂಡು 19 ವರ್ಷದೊಳಗಿನವರ ಟೂರ್ನಿಯಲ್ಲಿ 2011ರಲ್ಲಿ ಒಟ್ಟು 1000 ರನ್‌ ಗಳಿಸಿದ್ದರು.

ವಿವಿಧ ವಯೋಮಿತಿ ಯೊಳಗಿನ ಟೂರ್ನಿಗಳಲ್ಲಿ ಗಮನ ಸೆಳೆದು ರಾಜ್ಯ ತಂಡದಲ್ಲಿ ಸ್ಥಾನ ಗಳಿಸಿದ ಸಮರ್ಥ್‌ ಈಗ ತಂಡದ ಆಧಾರಸ್ಥಂಭ. ಇವರ ಜೊತೆ ಇನಿಂಗ್ಸ್‌ ಆರಂಭಿಸುವ ಮಯಾಂಕ್‌ ರನ್ ಗಳಿಸಲು ಪರದಾಡಿ ದರೂ ಸಮರ್ಥ್‌ ಒಮ್ಮೆಯೂ ಸ್ಥಿರ ಪ್ರದರ್ಶನ ಬಿಟ್ಟುಕೊಟ್ಟಿಲ್ಲ. ಈ ಬಾರಿಯ ರಣಜಿಯಲ್ಲಿ ಚೊಚ್ಚಲ ದ್ವಿಶತಕ ಹೊಡೆದರು.  ಜಾರ್ಖಂಡ್‌ ವಿರುದ್ಧ ದ್ವಿಶತಕದ ಸಾಧನೆ ಮಾಡಿದ್ದರು.

ತಟಸ್ಥ ಸ್ಥಳ, ಭಿನ್ನ ಅನುಭವ
ತವರಿನ ತಂಡ ತನ್ನ ಅನುಕೂಲಕ್ಕೆ ತಕ್ಕಂತೆ ಪಿಚ್‌ ಸಜ್ಜು ಮಾಡಿ ಕೊಳ್ಳುತ್ತದೆ. ಆ ತಂಡ ಯಾವ ವಿಭಾಗದಲ್ಲಿ ಬಲಿಷ್ಠವಾಗಿದೆಯೋ ಅದೇ ವಿಭಾಗಕ್ಕೆ ಒತ್ತುಕೊಟ್ಟು ಪಿಚ್‌ ಮಾಡಲು ಆಯಾ ಕ್ರಿಕೆಟ್‌ ಸಂಸ್ಥೆ ಕಾಳಜಿ ವಹಿಸುತ್ತದೆ ಎಂಬುದು ಪ್ರತಿ ವರ್ಷದ ರಣಜಿ ಟೂರ್ನಿಗೂ ಮುನ್ನ ಸಹಜವಾಗಿ ಕೇಳಿ ಬರುತ್ತಿದ್ದ ದೂರು. ಆದ್ದ ರಿಂದ ಈ ಬಾರಿ ತಟಸ್ಥ ಸ್ಥಳದಲ್ಲಿ ರಣಜಿ ಪಂದ್ಯಗಳನ್ನು ಆಯೋಜಿಸಲಾಗಿದೆ.

ಪ್ರತಿ ವರ್ಷ ದೇಶಿ ಟೂರ್ನಿಗಳು ಮುಗಿದ ಬಳಿಕ ಬಿಸಿಸಿಐ ತಾಂತ್ರಿಕ ಸಮಿತಿ ರಣಜಿ ಆಡುವ ಎಲ್ಲಾ ತಂಡಗಳ ನಾಯಕರ ಮತ್ತು ಕೋಚ್‌ಗಳ ಸಭೆ ನಡೆಸಿತ್ತು. ಆ ಸಭೆಯಲ್ಲಿ ಬಹುತೇಕ ತಂಡದವರು ತಟಸ್ಥ ಸ್ಥಳದಲ್ಲಿ ರಣಜಿ ಆಯೋಜಿಸುವ ವಿಷಯಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದರಿಂದ ತಾಂತ್ರಿಕ ಸಮಿತಿಯೂ ಒಪ್ಪಿಗೆ ಕೊಟ್ಟಿತು. ರಣಜಿ ಇತಿಹಾಸದಲ್ಲಿ ಮೊದಲ ಬಾರಿಗೆ ತಟಸ್ಥ ಸ್ಥಳದಲ್ಲಿ ಪಂದ್ಯಗಳು ಜರುಗುತ್ತಿವೆ. ಇದರಿಂದ ಹಲವು ತಂಡಗಳಿಗೆ ಖುಷಿಯಾದರೂ, ತವರಿನ ಅಭಿಮಾನಿಗಳಿಗೆ ನಿರಾಸೆ ಕಾಡಿತು.

ಮರುಕಳಿಸಲಿದೆಯೇ ಇತಿಹಾಸ?
ಕರ್ನಾಟಕ ತಂಡ ಹಿಂದೆ ಅನೇಕ ಏಳುಬೀಳುಗಳನ್ನು ಅನುಭವಿಸಿಯೇ ಯಶಸ್ಸು ಕಂಡಿದೆ. ನಾಲ್ಕೈದು ವರ್ಷಗಳ ಅವಧಿಯ ನಡುವೆ ಟ್ರೋಫಿ ಗೆದ್ದು ಮತ್ತೆ ಮುಗ್ಗರಿಸಿದೆ. ನಂತರದ ವರ್ಷ ಮತ್ತೆ ದೇಶಿ ಕ್ರಿಕೆಟ್‌ನ ‘ರಾಜ’ನಾಗಿ ಮೆರೆದ ಉದಾಹರಣೆಗಳಿವೆ.

1973–74ರಲ್ಲಿ ಎರ್ರಪಳ್ಳಿ ಪ್ರಸನ್ನ ಅವರ ನಾಯಕತ್ವದಲ್ಲಿ ರಾಜ್ಯ ತಂಡ ಚೊಚ್ಚಲ ಟ್ರೋಫಿ ಜಯಿಸಿತ್ತು. ನಂತರದ ವರ್ಷವೂ ಚಾಂಪಿಯನ್ ಆಯಿತು. ಆದರೆ, ಬಳಿಕದ ಎರಡು ವರ್ಷ ನಿರಾಸೆ ಕಂಡು 1977–78ರಲ್ಲಿ ಮತ್ತೆ ಪ್ರಶಸ್ತಿ ಗೆದ್ದುಕೊಂಡು ಐದು ವರ್ಷಗಳ ಅವಧಿಯಲ್ಲಿ ಮೂರು ಸಲ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿತ್ತು. 1995–96ರಲ್ಲಿಯೂ ಇದೇ ರೀತಿ ಆಗಿತ್ತು. ಅನಿಲ್‌ ಕುಂಬ್ಳೆ ಅವರ ನಾಯಕತ್ವದಲ್ಲಿ ರಾಜ್ಯ ತಂಡ ಆಗ ಪ್ರಶಸ್ತಿ ಗೆದ್ದು ನಂತರದ ವರ್ಷ ಮುಗ್ಗರಿಸಿತು.

1997–98ರಲ್ಲಿ ರಾಹುಲ್‌ ದ್ರಾವಿಡ್‌ ಮುಂದಾಳತ್ವದಲ್ಲಿ ಮತ್ತು 1998–99ರಲ್ಲಿ ಸುನಿಲ್‌ ಜೋಶಿ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಯಿತು. ಆಗಲೂ ಕರ್ನಾಟಕ ನಾಲ್ಕು ವರ್ಷಗಳಲ್ಲಿ ಮೂರು ಸಲ ದೇಶಿ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದಿತ್ತು. ಆದ್ದರಿಂದ ಈಗಲೂ ಇತಿಹಾಸ ಮರುಕಳಿಸುವುದೇ ಎನ್ನುವ ಕುತೂಹಲವಿದೆ.

ಏಕೆಂದರೆ ವಿನಯ್‌ ಕುಮಾರ್ ನಾಯಕತ್ವದಲ್ಲಿ ತಂಡ ಸತತ ಎರಡು ವರ್ಷ ಟ್ರೋಫಿ ಜಯಿಸಿ ಹೋದ ವರ್ಷ ಲೀಗ್‌ನಲ್ಲಿ ಮುಗ್ಗರಿಸಿತ್ತು. ಈ ಸಲ ಸುಲಭವಾಗಿ ನಾಕೌಟ್‌ ತಲುಪಿದೆ. ಆದ್ದರಿಂದ ಮತ್ತೆ ಪ್ರಶಸ್ತಿಯ ನಿರೀಕ್ಷೆ ಮೂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT