ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ, ಅಭಿಮಾನ, ಔದಾರ್ಯ

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ರಾಯಚೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಒಂದು ವಿಶೇಷವೆಂದರೆ, ಕನ್ನಡಿಗರ ‘ಇಂಗ್ಲಿಷ್‌ ವ್ಯಾಮೋಹ’ದ ಬಗ್ಗೆ ಅಷ್ಟೊಂದು ಗುಲ್ಲೆಬ್ಬಿಸದೇ ಇದ್ದುದು  ಎಂದು ಕಾಣುತ್ತದೆ. ಹಿಂದಿನ ಅನೇಕ ನುಡಿ ಹಬ್ಬಗಳಲ್ಲಿ ಇದರ ಬಗ್ಗೆ ಭಾರಿ ಕಳವಳ ವ್ಯಕ್ತವಾಗಿದ್ದಿದೆ.

ಕನ್ನಡದ ನೆಲದಲ್ಲಿ ಕನ್ನಡಕ್ಕೆ ದೊಡ್ಡ ಆಪತ್ತೇನೂ ಬಂದಂತಿಲ್ಲ. ಭಾಷೆ ಗಟ್ಟಿಯಾಗಿದೆ, ಬೆಳೆಯುತ್ತಿದೆ ಎಂದೇ ತೋರುತ್ತದೆ. ಹಾಗಾಗಿ ರಾಯಚೂರಿನಲ್ಲಿ ಇದು ಒಂದು ದೊಡ್ಡ ವಿಷಯವಾಗದಿರುವುದು ಸಕಾರಾತ್ಮಕ ಬೆಳವಣಿಗೆಯೆಂದೇ ಭಾವಿಸಬೇಕು.

ಸಮ್ಮೇಳನಾಧ್ಯಕ್ಷರು ಕೂಡ ಎಲ್ಲೂ ಕನ್ನಡ ಭಾಷೆಯ ಭವಿಷ್ಯದ ಬಗ್ಗೆ ಚಿಂತಿತರಾದಂತೆ  ಭಾಷಣ ಮಾಡಿಲ್ಲ ಎಂಬುದು ಸಹ  ಗಮನಾರ್ಹ.  ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಕೊಡಬೇಕೆನ್ನುವುದರ ಬಗ್ಗೆ ಮಾತ್ರ ಮಾತನಾಡಿ, ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ್ದಾರೆ ಅಷ್ಟೆ.

ಕನ್ನಡ ಭಾಷೆಯ ಭವಿಷ್ಯದ ಬಗ್ಗೆ ಅಪಾರ ಕಾಳಜಿ ವ್ಯಕ್ತಪಡಿಸುವುದು ಕನ್ನಡದ ಕಟ್ಟಾಳುಗಳೆಂದು ಹೇಳಿಕೊಳ್ಳುವವರ ‘ಧರ್ಮ’ ಎಂಬಂತಾಗಿಬಿಟ್ಟಿದೆ. ಹಾಗೆ ಹೇಳದಿದ್ದರೆ ಅವರನ್ನಾರು ಕೇಳುತ್ತಾರೆ? ಭಾಷೆಯ ಭವಿಷ್ಯದ ಬಗ್ಗೆ ಕಳವಳದಿಂದ  ಮಾತನಾಡಿದರೆ ಮಾತ್ರ ಅವರಿಗೆ ಭವಿಷ್ಯವಿದೆ. ಇಲ್ಲದಿದ್ದರೆ ಅವರಿಗೇನು ಕೆಲಸ? ಅನೇಕರು ಕನ್ನಡದ ಹೆಸರಿನಲ್ಲಿ ಭವಿಷ್ಯ ಬಂಗಾರವಾಗಿಸಿಕೊಂಡು, ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

ಕನ್ನಡದಲ್ಲಿ ಬರುತ್ತಿರುವ ನೂರಾರು ಸಿನಿಮಾಗಳು, ಸಾವಿರಾರು ಪುಸ್ತಕಗಳು, ಅನೇಕ ಚಾನೆಲ್‌ಗಳು, ಪತ್ರಿಕೆಗಳು ಭಾಷೆಯ ಬೆಳವಣಿಗೆಗೆ ಸಹಾಯ ಮಾಡುತ್ತಿವೆ. ಇನ್ನೂ ಮುಖ್ಯವಾಗಿ, ಕನ್ನಡವನ್ನೇ ನಿತ್ಯದ ಭಾಷೆಯಾಗಿ ಮಾಡಿಕೊಂಡಿರುವ ನಾವು–ನೀವು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುತ್ತಿದ್ದೇವೆ. ನಾಡಿನ ದಿಕ್ಕುದಿಕ್ಕುಗಳಲ್ಲಿ ಸಂಚರಿಸಿದರೆ, ಆಯಾ ಪ್ರಾಂತ್ಯದ ಜನ ತಮ್ಮದೇ ರೀತಿಯಲ್ಲಿ ಕನ್ನಡವನ್ನು ಬಳಸಿ ಬೆಳೆಸುತ್ತಿರುವುದನ್ನು ಕಾಣಬಹುದು.

ಭಾಷೆ ಎನ್ನುವುದು ಸದಾ ಬೆಳೆಯುವ ಒಂದು ಗಿಡ ಇದ್ದಂತೆ. ನೀರು, ಗೊಬ್ಬರ ಸಿಕ್ಕಂತೆ ಬೆಳೆಯುತ್ತದೆ. ಒಂಚೂರು ಇಂಗ್ಲಿಷ್‌ ಗೊಬ್ಬರ ಸಿಕ್ಕರೆ, ಒಂಚೂರು ಇಂಗ್ಲಿಷನ್ನೂ ಮೈಗೂಡಿಸಿಕೊಂಡು ಬೆಳೆಯುತ್ತದೆ. ಬೆಳೆಯಲಿ ಬಿಡಿ. ನಮ್ಮ ಭಾಷೆಯಲ್ಲಿ ಇಂಗ್ಲಿಷ್‌ ಪದಗಳು ಸೇರಿಕೊಂಡರೆ ತೊಂದರೆ ಏನು? ಸ್ವತಃ ಇಂಗ್ಲಿಷ್‌ ಭಾಷೆ ಬೆಳೆದದ್ದೇ ಅನೇಕಾನೇಕ ಭಾಷೆಗಳಿಂದ ಸುಲಭವಾಗಿ ಎರವಲು ಪಡೆಯುವ ತನ್ನ ಪ್ರವೃತ್ತಿಯಿಂದ ಎಂದು ಹೇಳಲಾಗುತ್ತದೆ.

ಕನ್ನಡವೂ ಈ ವಿಷಯದಲ್ಲಿ ಇಂಗ್ಲಿಷ್‌ನಂತೆಯೇ ಆದರೆ ಕನ್ನಡಕ್ಕೇ ಒಳ್ಳೆಯದು. ಅನೇಕಾನೇಕ ಇಂಗ್ಲಿಷ್‌ ಪದಗಳನ್ನು ಕನ್ನಡ ಸಂಭಾಷಣೆಯಲ್ಲಿ ತೂರಿಸುವ ನಾವು–  ನೀವು ಭಾಷೆಗೆ ಅಪಚಾರ ಮಾಡುತ್ತಿದ್ದೇವೆಯೇ? ಹಾಗೇನಿಲ್ಲ. ಅತ್ತ ಬೇಂದ್ರೆ ಇತ್ತ ಯೋಗರಾಜ ಭಟ್ಟ– ಜಯಂತ ಕಾಯ್ಕಿಣಿಯವರ ಹಾಡುಗಳನ್ನೂ ನಾವು ಎಫ್‌ಎಂ ಚಾನೆಲ್‌ಗಳಲ್ಲಿ ಕೇಳಿ, ಆಗಾಗ ಗುನುಗುನಿಸುತ್ತ ಭಾಷೆಯನ್ನೂ ಬೆಳೆಸುತ್ತಿದ್ದೇವೆ.

ಕನ್ನಡ ಭಾಷಿಕರ ಇನ್ನೊಂದು ಗುಣವನ್ನು ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ. ಇತರ ಭಾಷಿಕರೊಡನೆ ಅವರದೇ ಭಾಷೆಯಲ್ಲಿ ವ್ಯವಹರಿಸಲು ಹಾತೊರೆಯುವ ನಾವು ಈ ದೇಶದ ವಿಶೇಷ ಉತ್ಪನ್ನಗಳು. ಇದರ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವ ಅವಶ್ಯಕತೆಯಿಲ್ಲ.

‘ಪರಭಾಷಾ ವ್ಯಾಮೋಹ’ ಎಂದು ಇದಕ್ಕೆ ಹಣೆಪಟ್ಟಿ ಕಟ್ಟುವವರು ಯಾವ ಉದ್ದೇಶದಿಂದ ಹಾಗೆ ಹೇಳುತ್ತಿದ್ದಾರೆಂದು ಎಚ್ಚರದಿಂದ ಗಮನಿಸಬೇಕಷ್ಟೆ. ನಮ್ಮ ಈ ವಿಶೇಷ ಗುಣದಿಂದ ನಾವು ಬೇರೆ ಭಾಷೆಗಳನ್ನು ಬೇಗ ಕಲಿಯುತ್ತೇವೆ. ಇದು  ಒಳ್ಳೆಯದು. ಎಲ್ಲರನ್ನೂ ಒಳಗೊಳ್ಳುವ ಅಂತರಾತ್ಮ, ವಿಶಾಲ ಮನೋಭಾವ ನಮಗಿದೆ ಎಂದು ಹೆಮ್ಮೆ ಪಡೋಣ.

ಇನ್ನು ಇಂಗ್ಲಿಷ್‌ ವ್ಯಾಮೋಹ ಹೇಗೆ ತಪ್ಪು ಎಂಬುದೇ ನನಗೆ ಅರ್ಥವಾಗಿಲ್ಲ. ‘ಮಾರ್ಕ್ಸ್‌ಕಾರ್ಡಿನಲಿ ಸೊನ್ನೆ ರೌಂಡಾಗಿ ಕಾಣುವುದು...’ ಎಂದು ಮತ್ತೆಮತ್ತೆ ಗುನುಗುನಿಸಿದರೆ ಅದು ಇಂಗ್ಲಿಷ್‌ ವ್ಯಾಮೋಹವೇ ಅಥವಾ ಈ ಹಾಡನ್ನು ಹಾಡುವ ಮೂಲಕ ಕನ್ನಡ ಕಟ್ಟುತ್ತಿದ್ದೇವೆಯೇ, ಕೆಡವುತ್ತಿದ್ದೇವೆಯೇ? ಒಮ್ಮೊಮ್ಮೆ ಈ ವ್ಯಾಮೋಹವನ್ನು ಅತಿಯಾಗಿ, ಕೃತಕವಾಗಿ ತೋರಿಸಿಕೊಳ್ಳುತ್ತೇವೆ. ಅದು ತಪ್ಪು ಎಂದರೆ ಒಪ್ಪೋಣ.

ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮದ ಶಾಲೆಗೆ ಕಳುಹಿಸುವುದನ್ನು ಒಮ್ಮೊಮ್ಮೆ ಭಾಷಾಭಿಮಾನದ ಕೊರತೆಯ ಸಂಕೇತವೆಂಬಂತೆ ಉದಾಹರಿಸುವುದಿದೆ. ಗಮನಿಸಬೇಕಾದ ಅಂಶವೆಂದರೆ, ಹಾಗೆ ಕಳುಹಿಸುವವರೆಲ್ಲ ಮನೆಯಲ್ಲಿ ಅಚ್ಚುಕಟ್ಟಾಗಿ ಕನ್ನಡ ಮಾತನಾಡುವವರೇ ಆಗಿರುತ್ತಾರೆ. ಅವರು ಎಷ್ಟೊಂದು ಕನ್ನಡ ಮಾತನಾಡುತ್ತಾರೆಂದರೆ, ಮಕ್ಕಳು ಮನೆಯಲ್ಲಿ ಇಂಗ್ಲಿಷ್‌ ಕಲಿಯುವುದು ಸಾಧ್ಯವೇ ಇರುವುದಿಲ್ಲ.

ಇಂಗ್ಲಿಷ್‌ ಭಾಷೆಯ ಅಗತ್ಯ ಇಂದಿನ ನಮ್ಮ ಸನ್ನಿವೇಶದಲ್ಲಿ ಬಹಳ ಮುಖ್ಯವೆಂಬುದು ಪಾಲಕರಿಗೆ ಅನ್ನಿಸಿದರೆ, ಅದು ಅವರ ತಪ್ಪೇ? ವಸ್ತುಸ್ಥಿತಿಯನ್ನು ಕರಾರುವಾಕ್ಕಾಗಿ ಅಳೆದು ತೂಗಿ ಅವರು ನಿರ್ಧಾರಕ್ಕೆ ಬಂದಿರುತ್ತಾರೆ. ಇದನ್ನು ಭಾಷಾಭಿಮಾನದ ಕೊರತೆಎಂದು ವ್ಯಾಖ್ಯಾನಿಸುವುದು ಕುಚೋದ್ಯವೇ ಸರಿ.

ಎಲ್ಲವನ್ನೂ ಸರಿಯಾಗಿ ಪರಿಗಣಿಸಿದರೆ, ಆಗಬೇಕಿರುವುದು ಸ್ಫಟಿಕಸ್ಪಷ್ಟವಿದೆ: ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸುತ್ತ, ನಮ್ಮ ಮಕ್ಕಳು ಇಂಗ್ಲಿಷನ್ನು ಉತ್ತಮವಾಗಿ ಕಲಿಯುವಂತೆ ಮಾಡಬೇಕಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸುತ್ತ, ಕೇಂದ್ರ ಸರ್ಕಾರ ಹೊಸ ಶಾಸನ ಮಾಡಿ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿಯೇ ಬೋಧಿಸುವಂತೆ ಆಗುವವರೆಗೆ ಕಾಯ್ದು ಕುಳಿತುಕೊಳ್ಳುವಲ್ಲಿ ಯಾವ ಪುರುಷಾರ್ಥವೂ ಇಲ್ಲ. ಕನ್ನಡಪರ ಹೋರಾಟಗಾರರು, ಸರ್ಕಾರ, ಪರಿಣತರು ನಮ್ಮ ಸರ್ಕಾರಿ ಶಾಲೆಗಳಲ್ಲೂ ಮಕ್ಕಳು ಇಂಗ್ಲಿಷ್‌ ಮಾತನಾಡಲು ಅನುವಾಗುವಂತೆ ಮಾಡಲಿ. ಇದು ಅಸಾಧ್ಯವೇನಲ್ಲ.

ಧಾರವಾಡದ ಹತ್ತಿರದ ಕಲಕೇರಿ ಎಂಬ ಹಳ್ಳಿಯಲ್ಲಿ ಸಂಗೀತ ಶಾಲೆಯೊಂದು ಈಗಾಗಲೇ ಇದನ್ನು ಮಾಡಿತೋರಿಸಿದೆ. ಅಲ್ಲಿಗೆ ಬರುವ ವಿದೇಶಿ ಶಿಕ್ಷಕರು, ಸ್ವಯಂ ಸೇವಕರೊಡನೆ ಮಕ್ಕಳೆಲ್ಲ ಇಂಗ್ಲಿಷ್‌ನಲ್ಲೇ ಮಾತನಾಡುತ್ತಾರೆ. ಆದರೆ ಅವರ ಕಲಿಕೆಯ ಭಾಷೆ ಮಾತ್ರ ಕನ್ನಡ. ಇದು ಒಂದು ಮಾಮೂಲಿ ಶಾಲೆಯಂತೆಯೇ ಕೆಲಸ ಮಾಡುತ್ತಿದೆ. ಸರ್ಕಾರದ ಮಾನ್ಯತೆಯೂ ಇದೆ.

ಅಲ್ಲಿ ಮಕ್ಕಳು ತಮ್ಮ ಔಪಚಾರಿಕ ಶಿಕ್ಷಣವನ್ನು ಪೂರೈಸುತ್ತಾರೆ. ಕಾಲೇಜುಗಳಿಗೆ ಹೋಗುವ ಅನೇಕರು ಅಲ್ಲಿ ಹಾಸ್ಟೆಲ್ ಜೀವನವನ್ನೂ ನಡೆಸುತ್ತಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಆಗದಿದ್ದರೂ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲುಗಳಲ್ಲಾದರೂ ನಮ್ಮ ಶಾಲಾ ಮಕ್ಕಳು ಇಂಗ್ಲಿಷ್‌ ಭಾಷೆಯನ್ನು ಉತ್ತಮವಾಗಿ ಕಲಿಯುವಂತೆ ಮಾಡಬಹುದಲ್ಲವೇ? ಇದರಿಂದ ಕನ್ನಡಕ್ಕೇನೂ ಕುಂದು ಉಂಟಾಗುವುದಿಲ್ಲ. ಬದಲಾಗಿ ನಮ್ಮ ಸರ್ಕಾರಿ ಶಾಲೆಗಳತ್ತ ಪಾಲಕರು, ಅವರ ಮಕ್ಕಳು ಮುಖ ಮಾಡುತ್ತಾರೆ.

ಪರಿಣತರೊಬ್ಬರು ಹೇಳುವಂತೆ, ಮೊದಲ ಮೂರು ವರ್ಷ ಇಂಗ್ಲಿಷ್‌ ಭಾಷೆ ಮಕ್ಕಳ ಕಿವಿಯ ಮೇಲೆ ಪದೇಪದೇ (ಸಂಗೀತದ ರೂಪದಲ್ಲಿ) ಬೀಳಬೇಕು. ನಂತರ ಭಾಷೆ ಕಲಿಸುವುದು ಸುಲಭವಾಗುತ್ತದೆ. ಐದನೇ ತರಗತಿಯಿಂದಲೇ ಇದನ್ನು ಆರಂಭಿಸಬಹುದಲ್ಲ (ಅದಕ್ಕೂ ಮುಂಚೆ ಬೇಡವೆಂತಾದರೆ)?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT