ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸ್‌: ಕಣ್ಣೊರೆಸುವ ತಂತ್ರ ಸಾಕು, ನಿರ್ದಿಷ್ಟ ಕ್ರಮ ಬೇಕು

Last Updated 4 ಡಿಸೆಂಬರ್ 2016, 20:27 IST
ಅಕ್ಷರ ಗಾತ್ರ

ಬೆಂಗಳೂರು– ಮೈಸೂರು ಮಧ್ಯೆ ಟೋಲ್‌ ರಸ್ತೆ ನಿರ್ಮಾಣದ ನೆಪದಲ್ಲಿ  ಖಾಸಗಿ ಒಡೆತನದ ‘ನೈಸ್‌’ (ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌) ಸಂಸ್ಥೆ ಭಾರಿ ಅಕ್ರಮ ನಡೆಸಿದೆ ಎಂಬುದು ರಾಜ್ಯ ವಿಧಾನ ಮಂಡಲದ ಸದನ ಸಮಿತಿ ವರದಿಯ ಮುಖ್ಯ ಹೂರಣ. 

ಸಂಸ್ಥೆಯ ಪ್ರಾಯೋಜಕರು ತಮ್ಮ ಕೈಯಿಂದ ಕೇವಲ ₹ 110 ಕೋಟಿ ಬಂಡವಾಳ ಹೂಡಿ ಸಾವಿರಾರು ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ ಎಂಬ ಅಂಶವೂ ವರದಿಯಲ್ಲಿದೆ. ಟೋಲ್‌ ರಸ್ತೆ ನಿರ್ಮಾಣದ ನಿರ್ದಿಷ್ಟ ಉದ್ದೇಶಕ್ಕಾಗಿ ರೈತರ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ನೈಸ್‌ಗೆ ಹಸ್ತಾಂತರಿಸಿದೆ.

ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿ ನೈಸ್‌ ಸಂಸ್ಥೆ ಆ ಭೂಮಿಯಲ್ಲಿ 756 ಎಕರೆಯಷ್ಟನ್ನು ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಬಳಸಿಕೊಂಡಿದೆ ಎಂದೂ ವರದಿ ಹೇಳಿದೆ.  423 ಎಕರೆ ಕೆರೆ ಅಂಗಳವನ್ನು ಸರ್ಕಾರವೇ ಸ್ವಾಧೀನ ಮಾಡಿಕೊಂಡು, 213 ಎಕರೆಯನ್ನು ನೈಸ್‌ಗೆ ಹಸ್ತಾಂತರಿಸಿದೆ. ಇಡೀ ಯೋಜನೆಗೆ ಸಂಬಂಧಪಟ್ಟ ಹಲವಾರು ಕಡತಗಳು ನಾಪತ್ತೆಯಾಗಿವೆ. ಈ ಅಕ್ರಮಗಳೆಲ್ಲ ನಡೆದಿರುವುದು ನಿಜವೇ ಆಗಿದ್ದರೆ ಇದೊಂದು ಗಂಭೀರವಾದ ವಿಷಯ. ಆದ್ದರಿಂದ ಸಮಿತಿಯ ಸಲಹೆಗೆ ಅನುಗುಣವಾಗಿ ಇಡೀ ವ್ಯವಹಾರವನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ತನಿಖೆಗೆ ಒಪ್ಪಿಸುವುದು ಒಳ್ಳೆಯದು.

ಕೆರೆ ಜಮೀನಿನ ಒತ್ತುವರಿ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್, ಹೈಕೋರ್ಟ್‌, ಹಸಿರು ನ್ಯಾಯಪೀಠ ಅನೇಕ ಸಲ ಹೇಳಿವೆ. ತಿಳಿದೋ ತಿಳಿಯದೆಯೋ ಜನಸಾಮಾನ್ಯರು ಕೆರೆ ಅಂಗಳ ಒತ್ತುವರಿ ಮಾಡಿ ಕಟ್ಟಿದ ಕಟ್ಟಡಗಳನ್ನು ಬೆಂಗಳೂರು ನಗರದಲ್ಲಿ ಮುಲಾಜಿಲ್ಲದೆ ನೆಲಸಮ ಮಾಡಲಾಗಿದೆ. ಹೀಗಿರುವಾಗ ನೈಸ್‌ ಸಂಸ್ಥೆಗೆ ಸರ್ಕಾರವೇ ಹೇಗೆ ಕೆರೆ ಅಂಗಳ ಹಸ್ತಾಂತರಿಸಿತು ಎನ್ನುವುದೇ ಅನುಮಾನಕ್ಕೆ ಎಡೆ ಮಾಡುವ ವಿಷಯ.

ಏಕೆಂದರೆ ಕಾನೂನು ಎಲ್ಲರಿಗೂ ಒಂದೇ. ಶಾಸಕರೊಬ್ಬರು ಹೇಳಿರುವಂತೆ ನೈಸ್‌ಗೆ ಭೂಮಿ ಗುತ್ತಿಗೆಗೆ ಕೊಟ್ಟಿರುವುದು 30 ವರ್ಷಗಳ ಅವಧಿಗೆ. ಆ ಭೂಮಿಯಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಮಾರಲಾಗಿದೆ. ಹಾಗಾದರೆ ಅವುಗಳನ್ನು ಕೊಂಡವರ ಗತಿ 30 ವರ್ಷಗಳ ನಂತರ ಏನಾಗಬಹುದು? ಜನಸಾಮಾನ್ಯರಿಗೆ ನ್ಯಾಯಯುತ ಉದ್ದೇಶಕ್ಕೆ ಒಂದೊಂದು ಗುಂಟೆ ಭೂಮಿ ಕೊಡಲೂ ನಾನಾ ಬಗೆಯಲ್ಲಿ ಅಡ್ಡಿಪಡಿಸುವ ಅಧಿಕಾರಶಾಹಿ ವ್ಯವಸ್ಥೆ,  ನೈಸ್‌ಗೆ ಸಾವಿರಾರು ಎಕರೆಯನ್ನು ಸಲೀಸಾಗಿ ಕೊಟ್ಟಿದ್ದೇ ದೊಡ್ಡ ಸೋಜಿಗ.

ನೈಸ್‌ ಮತ್ತು ಸರ್ಕಾರದ ಮಧ್ಯೆ ಒಪ್ಪಂದಕ್ಕೆ ಸಹಿ ಬಿದ್ದದ್ದು ಈಗ ನೈಸ್‌ ಯೋಜನೆಯನ್ನು ಶತಾಯಗತಾಯ ವಿರೋಧಿಸುತ್ತಿರುವ ರಾಜಕಾರಣಿಯೊಬ್ಬರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ. ‘2003ರಲ್ಲಿ ನಗರಾಭಿವೃದ್ಧಿ ಮಂತ್ರಿಯಾಗಿದ್ದವರು ನೈಸ್‌ ಒ.ಡಿ.ಪಿ. ನಕ್ಷೆಗೆ ಅನುಮೋದನೆ ನೀಡಿದ್ದರು. 

1997ರಿಂದಲೇ ಸಂಸ್ಥೆ ಅಕ್ರಮ ನಡೆಸುತ್ತ ಬಂದಿದೆ’ ಎಂದು ಉಲ್ಲೇಖಿಸಿರುವ ಸದನ ಸಮಿತಿಯು ಅಂದಿನಿಂದ ಇಂದಿನವರೆಗೆ ಈ ಯೋಜನೆ ಜತೆ ನೇರವಾಗಿ ಸಂಪರ್ಕ ಇದ್ದ ಇಲಾಖೆಗಳ ಅಧಿಕಾರಿಗಳ ಹೆಸರುಗಳನ್ನೂ ಪಟ್ಟಿ ಮಾಡಿದೆ. ಇವೆಲ್ಲ ಸರಿ. ಆದರೆ ‘2003ರಲ್ಲಿ ಇದ್ದ ನಗರಾಭಿವೃದ್ಧಿ ಮಂತ್ರಿ’ ಎಂದು ಉಲ್ಲೇಖಿಸಿದರೂ ಅವರ ಹೆಸರನ್ನು ಹೇಳಲು ಹಿಂಜರಿದಿದ್ದು ಏಕೆ? 

ಇಷ್ಟೊಂದು ದೊಡ್ಡ ಪ್ರಮಾಣದ ಅಕ್ರಮ ನಡೆಯುತ್ತಿದೆ ಎಂಬ ದೂರು ಬರುತ್ತಿದ್ದಾಗಲೂ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೇ ಏನು ಮಾಡುತ್ತಿದ್ದರು? ವಿವಿಧ ಮುಖ್ಯಮಂತ್ರಿಗಳು, ಸಚಿವರು  ಏಕೆ ಸುಮ್ಮನಿದ್ದರು? ಸಾರ್ವಜನಿಕ ಆಸ್ತಿ ರಕ್ಷಿಸುವ, ಹಿತ ಕಾಯುವ ಹೊಣೆಯನ್ನು  ಏಕೆ ಮರೆತಿದ್ದರು? ಅವರಿಗೇನು ಶಿಕ್ಷೆ? ಈ ಅವಧಿಯಲ್ಲಿನ ಸಚಿವ ಸಂಪುಟಗಳು ಸಾಮೂಹಿಕ ಹೊಣೆಗಾರಿಕೆಯಲ್ಲಿ ವಿಫಲವಾಗಿದ್ದರೆ ಅವುಗಳ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಬರೀ ಅಧಿಕಾರಿಗಳ ಮೇಲೆ ದೋಷಾರೋಪ ಹೊರಿಸುವುದು ಕಣ್ಣೊರೆಸುವ ತಂತ್ರ ಎನಿಸಿಕೊಳ್ಳುತ್ತದೆ.

ನೈಸ್‌ ಮೇಲಿನ ಆರೋಪಗಳು ಹೊಸವೇನಲ್ಲ. ಈ ಯೋಜನೆ ಆರಂಭವಾದ ದಿನದಿಂದಲೂ ಇವೆ. ಅನೇಕ ಸಲ ಕೋರ್ಟ್‌ಗಳ ಮೆಟ್ಟಿಲನ್ನೂ ಏರಿವೆ. ಬಹಳಷ್ಟು ಸಂದರ್ಭಗಳಲ್ಲಿ ಸರ್ಕಾರದ ವಾದವನ್ನು ಕೋರ್ಟ್‌ಗಳು ಒಪ್ಪಿಲ್ಲ. ಇದರ ಮಧ್ಯೆ ಬೆಂಗಳೂರಿನ ಸುತ್ತ ವರ್ತುಲ ರಸ್ತೆ ನಿರ್ಮಿಸಿ ಶುಲ್ಕ ವಸೂಲು ಮಾಡುವುದನ್ನು ಬಿಟ್ಟರೆ ನೈಸ್‌ನ ಬೆಂಗಳೂರು– ಮೈಸೂರು  ರಸ್ತೆ ಕಾಮಗಾರಿಯಲ್ಲಿ ಪ್ರಗತಿಯೇನೂ ಕಂಡುಬಂದಿಲ್ಲ. ಈಗಾಗಲೇ ಬೇಕಾದಷ್ಟು ವಿಳಂಬವೂ ಆಗಿದೆ, ಅನಾಹುತವೂ ಆಗಿದೆ. ಇನ್ನೂ ಮೀನಮೇಷ ಬೇಡ.ತಪ್ಪಾಗಿದ್ದರೆ  ಮುಲಾಜಿಲ್ಲದೆ ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT