ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನಲ್ಲಿ ನೌಕೆ ಇಳಿಸುವತ್ತ ‘ಟೀಂ ಇಂಡಸ್’

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಚಂದ್ರಯಾನ–2ಕ್ಕೆ ಸಿದ್ಧತೆ ನಡೆಸಿರುವ ಮಧ್ಯೆಯೇ ಬೆಂಗಳೂರು ಮೂಲದ ಖಾಸಗಿ ಸಂಸ್ಥೆ  ‘ಟೀಂ ಇಂಡಸ್’ ಚಂದ್ರನ ಮೇಲೆ ತನ್ನ ರೋವರ್‌ ನೌಕೆ ಇಳಿಸಲು ಸಿದ್ಧತೆ ನಡೆಸಿದೆ.

ಗೂಗಲ್ ಲೂನಾರ್‌ ಎಕ್ಸ್‌ಪ್ರೈಸ್‌ ಸ್ಪರ್ಧೆಯ ಅಂಗವಾಗಿ ಟೀಂ ಇಂಡಸ್‌ ಈ ಸಾಹಸಕ್ಕೆ ಕೈಹಾಕಿದೆ. ಗೂಗಲ್‌ ಲೂನಾರ್‌ ಎಕ್ಸ್‌ಪ್ರೈಸ್‌ ಸ್ಪರ್ಧೆಗೆ ಪ್ರವೇಶ 2010ರಲ್ಲೇ ಮುಗಿದಿದೆ. ಸ್ಪರ್ಧೆಗೆ ಪ್ರವೇಶ ಪಡೆದಿರುವ ಮೊದಲ ನಾಲ್ಕು ತಂಡಗಳಲ್ಲಿ ಟೀಂ ಇಂಡಸ್‌ ನಾಲ್ಕನೆಯದು. ಒಟ್ಟಾರೆ 16 ತಂಡಗಳು ಈ ಸ್ಪರ್ಧೆಗೆ ತಮ್ಮನ್ನು ನೋಂದಾಯಿಸಿಕೊಂಡಿವೆ. ಖಾಸಗಿ ಸಂಸ್ಥೆಗಳಷ್ಟೇ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

2017ರ ಡಿಸೆಂಬರ್‌ ಅಂತ್ಯದ ವೇಳೆಗೆ  ಎಲ್ಲಾ ತಂಡಗಳೂ ತಮ್ಮ ನೌಕೆಗಳನ್ನು ಚಂದ್ರನ ಅಂಗಳದಲ್ಲಿ ಇಳಿಸಿರಬೇಕು. ಸಲಹೆಗಾರರು ಮತ್ತು ಪಾಲುದಾರರ ತಂಡದಲ್ಲಿ ನಂದನ್‌ ನಿಲೇಕಣಿ ಮತ್ತು ರತನ್‌ ಟಾಟಾರಂತಹ ದೈತ್ಯ ಉದ್ಯಮಿಗಳು ಇರುವುದು ನಮ್ಮ ತಂಡಕ್ಕೆ ಧೈರ್ಯ ತುಂಬಿದೆ
ರಾಹುಲ್ ನಾರಾಯಣ್

ಈ ಪ್ರಯತ್ನವನ್ನು ಇಸ್ರೊ ಸಹ ಸ್ವಾಗತಿಸಿದೆ. ಖಾಸಗಿ ಸಂಸ್ಥೆಯೊಂದು ಚಂದ್ರಯಾನ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಇಸ್ರೊ ಅಧ್ಯಕ್ಷ ಎ.ಎಸ್‌. ಕಿರಣ್ ಕುಮಾರ್‌ ಹೇಳಿದ್ದಾರೆ.

ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರೈಸಲು ಟೀಂ ಇಂಡಸ್ ಸಂಸ್ಥಾಪಕ ರಾಹುಲ್ ನಾರಾಯಣ್ ಭಾರಿ ಯೋಜನೆ ರೂಪಿಸಿದ್ದಾರೆ. ದೇಶದ ಎಲ್ಲೆಡೆ ತಿರುಗಿ, ಆಗ ತಾನೇ ಪದವಿ ಮುಗಿಸಿದ್ದ 100 ಎಂಜಿನಿಯರ್‌ಗಳನ್ನು ಕಲೆಹಾಕಿದ್ದಾರೆ. ಈ ಹೊಸ ತಂತ್ರಜ್ಞರಿಗೆ ನೆರವು ನೀಡಲು ಇಸ್ರೊದ ನಿವೃತ್ತ ವಿಜ್ಞಾನಿಗಳ ತಂಡ ಕಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಪ್ರಮುಖ ಉದ್ಯಮಿಗಳನ್ನು ತಮ್ಮ ಕಾರ್ಯಾಚರಣೆಗೆ ಸಲಹೆಗಾರರನ್ನಾಗಿ ಹಾಗೂ ಪಾಲುದಾರರನ್ನಾಗಿ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

‘ಟೀಂ ಇಂಡಸ್‌ ನವಭಾರತದ ಮತ್ತೊಂದು ಮುಖ. ಅವರು ಮುಂದಿನ ತಲೆಮಾರಿನ ಸಂಶೋಧಕರಿಗೆ ಮತ್ತು ಸಾಧಕರಿಗೆ ಸ್ಫೂರ್ತಿಯಾಗಲಿದ್ದಾರೆ ಎಂಬ ಭರವಸೆಯಿಂದಲೇ, ಅವರ ಯೋಜನೆಯಲ್ಲಿ ಪಾಲುದಾರನಾಗಿದ್ದೇನೆ’ ಎಂದು ನಂದನ್ ನಿಲೇಕಣಿ ಹೇಳಿದ್ದಾರೆ.

ಇಸ್ರೊ ಜತೆ ಒಪ್ಪಂದ
ತಮ್ಮ ಲ್ಯಾಂಡರ್‌ ಅನ್ನು ಉಡಾವಣೆ ಮಾಡಲು ಟೀಂ ಇಂಡಸ್‌ ಇಸ್ರೊ ಜತೆ ಒಪ್ಪಂದ ಮಾಡಿಕೊಂಡಿದೆ. ಇಸ್ರೊ ತನ್ನ  ಖ್ಯಾತ ಧ್ರುವೀಯ ಉಪಗ್ರಹ ಉಡಾವಣಾ  ವಾಹನ– ಪಿಎಸ್‌ಎಲ್‌ವಿಯ ಸೇವೆಯನ್ನು ಟೀಂ ಇಂಡಸ್‌ಗೆ ಒದಗಿಸಲಿದೆ. 2017ರ ಡಿಸೆಂಬರ್‌ 28ರಂದು ಪಿಎಸ್‌ಎಲ್‌ವಿ ಟೀಂ ಇಂಡಸ್‌ನ ನೌಕೆಗಳನ್ನು ಹೊತ್ತು ನಭಕ್ಕೆ ಜಿಗಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT