ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಆರನೇ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ; ಮಿಥಾಲಿ ರಾಜ್‌ ಮಿಂಚು; ಪಾಕಿಸ್ತಾನಕ್ಕೆ ಮತ್ತೆ ನಿರಾಸೆ
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಬ್ಯಾಂಕಾಕ್‌ :‌ ಏಷ್ಯಾ ಕ್ರಿಕೆಟ್‌ ಲೋಕದಲ್ಲಿ  ಭಾರತ ಮಹಿಳಾ ತಂಡ ತನ್ನ ಅಧಿಪತ್ಯ ಮುಂದುವರಿಸಿದೆ. ಹರ್ಮನ್‌ಪ್ರೀತ್‌ ಕೌರ್‌ ಪಡೆ ಏಷ್ಯಾ ಕಪ್‌ನಲ್ಲಿ ಸತತ ಆರನೇ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ.

ಏಷ್ಯಾ ತಾಂತ್ರಿಕ ಮಹಾವಿದ್ಯಾಲಯ ದ ಮೈದಾನದಲ್ಲಿ ಭಾನುವಾರ ಭಾರತದ ಪಾಳಯದಲ್ಲಿ ಸಂಭ್ರಮ ಮೇಳೈಸಲು ಕಾರಣರಾಗಿದ್ದು ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಹಾಗೂ ಬೌಲರ್‌ಗಳಾದ ಏಕ್ತಾ ಬಿಸ್ಟ್‌, ಜೂಲನ್‌ ಗೋಸ್ವಾಮಿ ಮತ್ತು ಅನುಜಾ ಪಾಟೀಲ್‌.

ಲೀಗ್‌ ಹಂತದಲ್ಲಿ  ಮಿಂಚು ಹರಿಸಿದ್ದ ಮಿಥಾಲಿ (ಔಟಾಗದೆ 73; 65ಎ, 7ಬೌಂ, 1ಸಿ) ಪ್ರಶಸ್ತಿ ಸುತ್ತಿನ ಹೋರಾಟ ದಲ್ಲೂ ಮನಮೋಹಕ ಬ್ಯಾಟಿಂಗ್‌ ನಡೆಸಿ ನೆರೆದಿದ್ದ ಪ್ರೇಕ್ಷಕರನ್ನು ಖುಷಿಯ ಕಡಲಲ್ಲಿ ತೇಲಿಸಿದರು. ಹೀಗಾಗಿ  ಪಾಕಿಸ್ತಾನ ತಂಡದ ಚೊಚ್ಚಲ ಪ್ರಶಸ್ತಿಯ ಕನಸು ಕಮರಿತು. ಬಿಷ್ಮಾ ಮರೂಫ್‌ ಪಡೆ 17 ರನ್‌ಗಳಿಂದ ಮಣಿಯಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ಪ್ರೀತ್‌ ಕೌರ್‌ ಪಡೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 121ರನ್‌ ಕಲೆಹಾಕಿತು. ಸವಾಲಿನ ಗುರಿ ಬೆನ್ನಟ್ಟುವ ಹಾದಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಪಾಕ್‌ 6 ವಿಕೆಟ್‌ಗೆ 104ರನ್‌ ಗಳಿಸಲಷ್ಟೇ ಶಕ್ತವಾಯಿತು.

ಮಿಂಚದ ಮಂದಾನ : ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡ ಸ್ಮೃತಿ ಮಂದಾನ (6) ಅವರ ವಿಕೆಟ್‌ ಅನ್ನು ಬೇಗನೆ ಕಳೆದುಕೊಂಡಿತು. ತಂಡದ ಮೊತ್ತ 24ರನ್‌ ಆಗಿದ್ದ ವೇಳೆ ಮಂದಾನ, ಅನಮ್‌ ಅಮಿನ್‌ ಬೌಲಿಂಗ್‌ನಲ್ಲಿ ಅಸ್ಮವಿಯಾ ಇಕ್ಬಾಲ್‌ಗೆ ಕ್ಯಾಚ್‌ ನೀಡಿದರು.  ಸಬ್ಬಿನೇನಿ ಮೇಘನಾ (9) ಮತ್ತು ಕರ್ನಾಟಕದ ವೇದಾ ಕೃಷ್ಣ ಮೂರ್ತಿ (2) ಕೂಡಾ ಬೇಗನೆ ಔಟಾಗಿ ದ್ದರಿಂದ ಭಾರತದ ಪಾಳಯದ ಮೇಲೆ ಆತಂಕದ ಕಾರ್ಮೋಡ ಕವಿದಿತ್ತು.  ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (5) ಕೂಡಾ ಪೆವಿಲಿಯನ್‌ ಸೇರಿದ್ದರಿಂದ ಸಂಕಷ್ಟ ಇನ್ನಷ್ಟು ಹೆಚ್ಚಿತ್ತು.

ಸುಂದರ ಆಟ: ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಮಿಥಾಲಿ ಮಾತ್ರ ಧೃತಿಗೆಡಲಿಲ್ಲ. ತುಂಬು ವಿಶ್ವಾಸದಿಂದ ಬ್ಯಾಟ್‌ ಬೀಸಿದ ಅವರು ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿ ದರು. ಅಸ್ಮವಿಯಾ ಇಕ್ಬಾಲ್‌ ಬೌಲ್‌ ಮಾಡಿದ 8ನೇ ಓವರ್‌ನ ಮೊದಲ ಎರಡು ಎಸೆತಗಳನ್ನು ಕ್ರಮವಾಗಿ ಮಿಡ್‌ ವಿಕೆಟ್‌ ಹಾಗೂ ಎಕ್ಸ್‌ಟ್ರಾ ಕವರ್‌ನತ್ತ ಬೌಂಡರಿ ಗೆರೆ ದಾಟಿಸಿದ ಅವರು ನಿದಾ ದಾರ್‌ ಎಸೆದ 10ನೇ ಓವರ್‌ನಲ್ಲಿ ತಲಾ ಒಂದು ಬೌಂಡರಿ ಹಾಗೂ  ಸಿಕ್ಸರ್‌ ಸಹಿತ 12 ರನ್‌ ಕಲೆಹಾಕಿ ಮೈದಾನದಲ್ಲಿ ಸೇರಿದ್ದ ಕ್ರಿಕೆಟ್‌ ಪ್ರಿಯರನ್ನು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿ ದರು.

ಸಾದಿಯಾ ಯೂಸುಫ್‌ ಬೌಲ್‌ ಮಾಡಿದ 13ನೇ ಓವರ್‌ನ ನಾಲ್ಕನೇ ಎಸೆತವನ್ನು ಲಾಂಗ್‌ ಆಫ್‌ನತ್ತ ಬಾರಿಸಿ ಒಂದು ರನ್‌ ಗಳಿಸಿದ ಮಿಥಾಲಿ ಅರ್ಧಶತಕದ ಸಂಭ್ರಮ ಆಚರಿಸಿದರು. 43 ಎಸೆತಗಳ ಅವರ ಆಟದಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿತ್ತು. ಅರ್ಧಶತಕದ ಬಳಿಕ ಮಿಥಾಲಿ ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ ಜೂಲನ್‌ ಗೋಸ್ವಾಮಿ ಅಬ್ಬರದ ಬ್ಯಾಟಿಂಗ್‌ ಮೂಲಕ ಅಂಗಳದಲ್ಲಿ ಮಿಂಚಿನ ಸಂಚಲನ ಹುಟ್ಟು ಹಾಕಿದರು.

15 ನಿಮಿಷ ಕ್ರೀಸ್‌ನಲ್ಲಿದ್ದ ಜೂಲನ್‌ 10 ಎಸೆತಗಳನ್ನು ಎದುರಿಸಿ ಎರಡು ಮನಮೋಹಕ ಸಿಕ್ಸರ್‌ ಸಹಿತ 17 ರನ್‌ ಕಲೆಹಾಕಿದರು. ಹೀಗಾಗಿ ತಂಡದ ಮೊತ್ತ 120ರ ಗಡಿ ಮುಟ್ಟಿತು. ಜೂಲನ್‌ ಔಟಾಗುವ ಮುನ್ನ ಮಿಥಾಲಿ ಜೊತೆ ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ 21 ಎಸೆತಗಳಲ್ಲಿ 31ರನ್‌ ಸೇರಿಸಿದರು.

ಆರಂಭಿಕ ಸಂಕಷ್ಟ: ಗುರಿ ಬೆನ್ನಟ್ಟುವ ಹಾದಿಯಲ್ಲಿ ಪಾಕಿಸ್ತಾನ ಕೂಡಾ ಆರಂಭಿಕ ಸಂಕಷ್ಟ ಎದುರಿಸಿತು.  5ನೇ ಓವರ್‌ ಬೌಲ್‌ ಮಾಡಿದ ವೇಗಿ ಜೂಲನ್‌ ಗೋಸ್ವಾಮಿ, ಎರಡನೇ ಎಸೆತದಲ್ಲಿ  ಆಯೇಶಾ ಜಾಫರ್‌ (15) ಅವರನ್ನು ಬೌಲ್ಡ್‌ ಮಾಡಿ ತಂಡದ ಗೆಲುವಿನ ಕನಸಿಗೆ ಬಲ ತುಂಬಿದರು.
ಜವೇರಿಯಾ ಖಾನ್‌ (22; 26ಎ, 2ಬೌಂ) ಕೆಲ ಹೊತ್ತು ಭಾರತದ ಬೌಲರ್‌ಗಳನ್ನು ಕಾಡಿದರು. ಆರನೇ ಓವರ್‌ ಬೌಲ್‌ ಮಾಡಿದ ಏಕ್ತಾ ಬಿಸ್ಟ್‌ ಮೂರನೇ ಎಸೆತದಲ್ಲಿ ಖಾನ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು.

13ನೇ ಓವರ್‌ ಮುಗಿದಾಗ ಪಾಕ್‌ ಗೆಲುವಿಗೆ 42 ಎಸೆತಗಳಲ್ಲಿ 52ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿ   ನಾಯಕಿ ಬಿಷ್ಮಾ ಮರೂಫ್‌ (25; 26ಎ, 2ಬೌಂ) ಇದ್ದಿದ್ದ ರಿಂದ ಜಯದ ಕನಸು ಚಿಗುರೊಡೆದಿತ್ತು. ಆದರೆ 14ನೇ ಓವರ್‌ ಬೌಲ್‌ ಮಾಡಿದ ಅನುಜಾ ಪಾಟೀಲ್‌, ಮೂರನೇ ಎಸೆತದಲ್ಲಿ ಮರೂಫ್‌ ವಿಕೆಟ್‌ ಕಬಳಿಸಿ ಪಂದ್ಯದ ಚಿತ್ರಣ ಬದಲಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ:20 ಓವರ್‌ಗಳಲ್ಲಿ 5 ವಿಕೆಟ್‌ಗೆ 121 (ಮಿಥಾಲಿ ರಾಜ್‌ ಔಟಾಗದೆ 73, ಜೂಲನ್‌ ಗೋಸ್ವಾಮಿ 17; ಅನಮ್‌ ಅಮಿನ್‌ 24ಕ್ಕೆ2, ಸನಾ ಮಿರ್‌ 23ಕ್ಕೆ1, ಸಾದಿಯಾ ಯೂಸುಫ್‌ 15ಕ್ಕೆ1).
ಪಾಕಿಸ್ತಾನ: 20 ಓವರ್‌ಗಳಲ್ಲಿ 6 ವಿಕೆಟ್‌ ಗೆ 104 (ಆಯೇಶಾ ಜಾಫರ್‌ 15, ಜವೇ ರಿಯಾ ಖಾನ್‌ 22, ಬಿಷ್ಮಾ ಮರೂಫ್‌ 25; ಏಕ್ತಾ ಬಿಸ್ಟ್‌ 22ಕ್ಕೆ2, ಅನುಜಾ ಪಾಟೀಲ್‌ 18ಕ್ಕೆ1, ಜೂಲನ್‌ ಗೋ ಸ್ವಾಮಿ 19ಕ್ಕೆ1, ಪ್ರೀತಿ ಬೋಸ್‌ 18ಕ್ಕೆ1).

ಫಲಿತಾಂಶ:  ಭಾರತಕ್ಕೆ 17 ರನ್‌ ಗೆಲುವು ಹಾಗೂ ಪ್ರಶಸ್ತಿ. ಪಂದ್ಯ ಮತ್ತು ಸರಣಿ ಶ್ರೇಷ್ಠ: ಮಿಥಾಲಿ ರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT