ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಲಲಿತಾಗೆ ಹೃದಯಾಘಾತ: ಆರೋಗ್ಯ ಸ್ಥಿತಿ ಗಂಭೀರ

Last Updated 4 ಡಿಸೆಂಬರ್ 2016, 20:56 IST
ಅಕ್ಷರ ಗಾತ್ರ

ಚೆನ್ನೈ: ತೀವ್ರ ಹೃದಯಾಘಾತಕ್ಕೆ ಒಳಗಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸ್ಥಿತಿ ತೀರಾ ಗಂಭೀರವಾಗಿದೆ.
ಅವರಿಗೆ  ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಲಂಡನ್‌ನ ತಜ್ಞ ಡಾ. ರಿಚರ್ಡ್‌ ಬೀಲೆ ಮತ್ತು ಎಐಐಎಂಎಸ್‌ನ ವೈದ್ಯರ ತಂಡ ಅವರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಅಪೋಲೊ ಆಸ್ಪತ್ರೆ ತಿಳಿಸಿದೆ.

‘ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಮಂತ್ರಿ ಜಯಲಲಿತಾ ಅವರು ಸಂಜೆ ವೇಳೆಗೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹೃದ್ರೋಗ ಮತ್ತು ಉಸಿರಾಟ ವಿಭಾಗಗಳ ಪರಿಣತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ’ ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ರಾಜನಾಥ್‌ ಸಿಂಗ್‌ ಅವರು, ರಾಜ್ಯಪಾಲ ವಿದ್ಯಾಸಾಗರ್‌ ರಾವ್ ಅವರಿಂದ ಜಯಾ ಅವರ ಆರೋಗ್ಯದ ಮಾಹಿತಿ ಪಡೆದರು. ತಡರಾತ್ರಿ ಒಂದು ಗಂಟೆ ಸುಮಾರಿಗೆ ಆಸ್ಪತ್ರೆಗೆ ತೆರಳಿದ ವಿದ್ಯಾಸಾಗರ್‌ ರಾವ್‌, ವೈದ್ಯರಿಂದ ಮಾಹಿತಿ ಪಡೆದರು. ರಾಜಭವನದಲ್ಲಿ ಪೊಲೀಸ್‌ ಮಹಾನಿರ್ದೇಶಕರನ್ನು ಭೇಟಿ ಮಾಡಿ ಸಮಾಲೋಚಿಸಿದರು. ಬಳಿಕ ಸಚಿವರ ಜತೆ ಸಮಾಲೋಚನೆ ನಡೆಸಿದರು.

ಆಸ್ಪತ್ರೆ ಎದುರು ನೆರೆದ ಅಭಿಮಾನಿಗಳ ದಂಡು: ಹಲವು ದಿನಗಳ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೃದಯಾಘಾತವಾದ ಸುದ್ದಿ ಹರಡಿದ ಬೆನ್ನಲ್ಲೇ ಅಪೋಲೊ ಆಸ್ಪತ್ರೆಯ ಹೊರಭಾಗದಲ್ಲಿ ಭಾನುವಾರ ರಾತ್ರಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದರು. ಗುಂಪು ಗುಂಪಾಗಿ ಆಸ್ಪತ್ರೆ ಮುಂಭಾಗಕ್ಕೆ ಧಾವಿಸಿದ ಜನಸಾಗರದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಸ್ಪತ್ರೆಯ ಸುತ್ತಮುತ್ತ  ನಿಷೇಧಾಜ್ಞೆ ಹೊರಡಿಸಲಾಗಿದೆ. 

ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಸಶಸ್ತ್ರ ಸೇನಾ ಪಡೆಯ ತುಕಡಿಗಳನ್ನು ಸಹ ನಿಯೋಜಿಸಲಾಗಿದೆ. ಆಸ್ಪತ್ರೆಯ ಮುಖ್ಯರಸ್ತೆಗೆ ತಡೆಯೊಡ್ಡಿದ್ದ ಪೊಲೀಸರು ಆವರಣದ ಒಳಗೆ ಯಾರೂ ಪ್ರವೇಶಿಸದಂತೆ ತಡೆಯಲು ಹರಸಾಹಸಪಟ್ಟರು. ಆಸ್ಪತ್ರೆಯ ಸುತ್ತಮುತ್ತಲಿನ ಎಲ್ಲ ರಸ್ತೆಗಳಿಗೂ ಬ್ಯಾರಿಕೇಡ್‌ ಹಾಕಲಾಗಿತ್ತು.

ಸುದ್ದಿ ಕೇಳಿ ದಿಗ್ಭ್ರಾಂತರಾಗಿದ್ದ ಅನೇಕ ಮಹಿಳೆಯರು ಆಸ್ಪತ್ರೆಯ ದ್ವಾರದ ಮುಂಭಾಗದಲ್ಲಿ ‘ಅಮ್ಮಾ’ ಎಂದು ಕಣ್ಣೀರಿಡುತ್ತಾ, ಜಯಲಲಿತಾ ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದ ದೃಶ್ಯ ಕಂಡುಬಂತು. ಜಯಲಲಿಯಾ ಅವರ ಚಿತ್ರಗಳನ್ನು ಹಿಡಿದುಕೊಂಡ ಕೆಲವರು ‘ಅಮ್ಮಾ ದೀರ್ಘ ಕಾಲ ಬದುಕಲಿ, ಕ್ರಾಂತಿಕಾರಿ ನಾಯಕಿ ದೀರ್ಘಕಾಲ ಬದುಕಲಿ’ ಎಂಬ ಘೋಷಣೆಗಳನ್ನು ಕೂಗಿದರು.

ನೆಚ್ಚಿನ ನಾಯಕಿಯನ್ನು ನೋಡಲು ನೆರೆದಿದ್ದ ಜನರು ಪೊಲೀಸರ ವಿರುದ್ಧ ಆಕ್ರೋಶಗೊಂಡು ಬ್ಯಾರಿಕೇಡ್‌ಗಳನ್ನು ಕೀಳಲು ಪ್ರಯತ್ನಿಸಿ ಒಳನುಗ್ಗಲು ಪ್ರಯತ್ನಿಸಿದ ಘಟನೆಗಳು ನಡೆದವು. ಜಯಾ ಅವರ ಆರೋಗ್ಯದ ಕುರಿತು ವ್ಯಾಪಕವಾಗಿ ಸುದ್ದಿ ಹರಡುತ್ತಿದ್ದರಿಂದ ಮುನ್ನೆಚ್ಚರಿಕೆಯಿಂದ ಪ್ರಮುಖ ನಗರಗಳಲ್ಲಿ ಕೇಬಲ್‌ ಟೀವಿ ಸಂಪರ್ಕಗ ಳನ್ನು ಕಡಿತಗೊಳಿಸಲಾಗಿತ್ತು. ಪೆಟ್ರೋಲ್ ಬಂಕ್‌, ಹೋಟೆಲ್‌ಗಳು, ಮಾಲ್‌ಗಳನ್ನು ಸಂಜೆಯಿಂದಲೇ ಬಂದ್‌ ಮಾಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರ ಪತಿ ಪ್ರಣವ್ ಮುಖರ್ಜಿ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ಗಣ್ಯರು ಜಯಾ ಅವರ ಶೀಘ್ರ ಚೇತರಿಕೆಗಾಗಿ ಹಾರೈಸಿ ದ್ದಾರೆ. ತೀವ್ರ ಜ್ವರ ಮತ್ತು ನಿರ್ಜಲೀಕರಣ ದಿಂದ ಬಳಲುತ್ತಿದ್ದ ಜಯಲಲಿತಾ ಅವರನ್ನು ಸೆಪ್ಟೆಂಬರ್‌ 22ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಶ್ವಾಸಕೋಶದ ಸಮಸ್ಯೆ ಕಾರಣಕ್ಕೆ ಅವರನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಜಯಲಲಿತಾ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಶೀಘ್ರ ಮನೆಗೆ ಮರಳಲಿದ್ದಾರೆ ಎಂದು ಎಐಎಡಿಎಂಕೆ ಭಾನುವಾರ ಮಧ್ಯಾಹ್ನವಷ್ಟೇ ಪ್ರಕಟಿಸಿತ್ತು.  ಆದರೆ ಸಂಜೆ ಅವರಿಗೆ ಹೃದಯಾಘಾತವಾದ ಸುದ್ದಿ ಬಂದಿದೆ.

ಜಯಾ ಅವರ ಆರೋಗ್ಯದ ಸ್ಥಿತಿ ಬಗ್ಗೆ ರಾಜ್ಯಪಾಲರು ಮಾಧ್ಯಮಕ್ಕೆ ವಿವರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಯಾವುದೇ ಹೇಳಿಕೆ ನೀಡಲಿಲ್ಲ. ಜಯಾ ಅವರ ಆರೋಗ್ಯದ ಕುರಿತು ಕಳವಳಗೊಂಡಿರುವ ತಮಿಳುನಾಡು ಸರ್ಕಾರದ ಎಲ್ಲ ಸಚಿವರೂ ಅಪೋಲೊ ಆಸ್ಪತ್ರೆಯಲ್ಲಿ ಬೀಡುಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT