ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಳಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರೇ ಇಲ್ಲ

ಕಳೆದ ಒಂದು ವರ್ಷದಿಂದ ಸಮಸ್ಯೆ: ಪದೇ ಪದೇ ಅಧಿಕಾರಿಗಳ ಬದಲಾವಣೆ
Last Updated 4 ಡಿಸೆಂಬರ್ 2016, 20:54 IST
ಅಕ್ಷರ ಗಾತ್ರ

ಬೆಂಗಳೂರು:  ನಗರದ ಒಂದು ಕೋಟಿ ಜನರಿಗೆ ಕುಡಿಯುವ ನೀರು ಪೂರೈಸುವ ಹೊಣೆ ಹೊತ್ತಿರುವ ಜಲಮಂಡಳಿಗೆ ಕಳೆದ ಒಂದು ವರ್ಷದಿಂದ ಪೂರ್ಣಪ್ರಮಾಣದ ಅಧ್ಯಕ್ಷರೇ ಇಲ್ಲ.

ಕಾವೇರಿಯ ಐದು ಹಂತದ ಯೋಜನೆಗಳ ಮೂಲಕ ನಗರಕ್ಕೆ ನಿತ್ಯ 135 ಕೋಟಿ ಲೀಟರ್‌ ನೀರು ಸರಬರಾಜು ಮಾಡಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ನಗರಕ್ಕೆ ಈಗಲೇ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ. ನಗರ ನಿತ್ಯ 5 ಕೋಟಿ ಲೀಟರ್‌ ನೀರಿನ ಕೊರತೆ ಅನುಭವಿಸುತ್ತಿದೆ. ಜನವರಿಯಿಂದ ಮೇ ತಿಂಗಳವರೆಗೆ ಕೊರತೆ ಇನ್ನಷ್ಟು ತೀವ್ರವಾಗಲಿದೆ ಎಂಬುದನ್ನು ಜಲಮಂಡಳಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ನಾವಿಕ ಇಲ್ಲದಿದ್ದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ ಎಂಬುದು ಅವರ ಅಭಿಮತ.

ಒಂದು ವರ್ಷದಿಂದ ಸಮಸ್ಯೆ: 2014ರಿಂದ 2015ರ ಆಗಸ್ಟ್‌ ತಿಂಗಳವರೆಗೆ ಅಂಜುಮ್‌ ಪರ್ವೇಜ್‌ ಅವರು ಮಂಡಳಿಯ ಅಧ್ಯಕ್ಷರಾಗಿದ್ದರು.  ಏಪ್ರಿಲ್‌ ನಂತರ ಅವರಿಗೆ ಹೆಚ್ಚುವರಿಯಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೊಣೆಯನ್ನು ವಹಿಸಲಾಗಿತ್ತು. ಬಿಬಿಎಂಪಿಯ ಆಡಳಿತಾಧಿಕಾರಿಯಾಗಿದ್ದ ಟಿ.ಎಂ. ವಿಜಯಭಾಸ್ಕರ್‌ ಅವರನ್ನು ಜಲಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್‌ನಲ್ಲಿ ನೇಮಿಸಲಾಗಿತ್ತು.

ಕಿರು ಅವಧಿಯಲ್ಲೇ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು, 80 ಸಾವಿರಕ್ಕೂ ಅಧಿಕ ಅನಧಿಕೃತ ಸಂಪರ್ಕಗಳ ಪತ್ತೆ, ವಸತಿ ಸಮುಚ್ಚಯಗಳಿಗೆ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ಕಡ್ಡಾಯ, ಮಂಡಳಿಯ ಸ್ವಚ್ಛತಾ ಕಾರ್ಮಿಕರೊಂದಿಗೆ ಕಾಫಿ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದರು.

ಬೆಳಿಗ್ಗೆ 6 ಗಂಟೆಯಿಂದಲೇ ಕಚೇರಿಗಳಿಗೆ ಹಠಾತ್‌ ಭೇಟಿ ನೀಡುವ ಮೂಲಕ ಅಧಿಕಾರಿಗಳಲ್ಲಿ ಚುರುಕು ಮುಟ್ಟಿಸಿದ್ದರು. ಮೂರು ತಿಂಗಳ ಅವಧಿಯಲ್ಲಿ ₹50 ಕೋಟಿಗೂ ಅಧಿಕ ಬಾಕಿ ವಸೂಲಿ ಮಾಡಿಸಿದ್ದರು. ಮಂಡಳಿಯ ತಿಂಗಳ ಆದಾಯ ₹78 ಕೋಟಿಯಿಂದ ₹95 ಕೋಟಿಗೆ ಏರಿಕೆಯಾಗಿತ್ತು.ಈ ನಡುವೆ, ಅವರಿಗೆ ನಗರಾಭಿವೃದ್ಧಿಯ ಇಲಾಖೆಯ  ಹೊಣೆಯನ್ನು ವಹಿಸಲಾಗಿತ್ತು.

ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರ ಜತೆಗೆ ‘ಹೊಂದಾಣಿಕೆ’ ಕೊರತೆ ಕಾರಣಕ್ಕೆ  ಏಪ್ರಿಲ್‌ 28ರಂದು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿತ್ತು. ನಂತರ ಮಹೇಂದ್ರ ಜೈನ್‌ ಅವರಿಗೆ ಜಲಮಂಡಳಿ  ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿತ್ತು. ಜೂನ್‌ ತಿಂಗಳಲ್ಲಿ ಅವರನ್ನು ಈ ಹೊಣೆಯಿಂದ ಮುಕ್ತರನ್ನಾಗಿ ಮಾಡಲಾಗಿತ್ತು.

ಪ್ರಸ್ತುತ ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್ ಅವರಿಗೆ ಹೆಚ್ಚುವರಿಯಾಗಿ ಅಧ್ಯಕ್ಷ ಹುದ್ದೆಯ ಹೊಣೆ ನೀಡಲಾಗಿದೆ. ಅವರು ವಾರಕ್ಕೆ ಮೂರು ದಿನ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ತುಷಾರ್‌ ಅವರು ಲೆಕ್ಕಕ್ಕೆ ಸಿಗದ ನೀರಿನ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಆ ಪ್ರಮಾಣ ಶೇ 47ರಿಂದ 43ಕ್ಕೆ ಇಳಿದಿದೆ. ಅವರಿಗೂ ಎರಡು ಕಡೆ ಕಾರ್ಯಭಾರ ನಿಭಾಯಿಸುವುದು ಕಷ್ಟವಾಗುತ್ತಿದೆ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಅನನುಭವಿಗಳ ಸಾಮ್ರಾಜ್ಯ:  ‘ಜಲಮಂಡಳಿ ಕೇಂದ್ರ ಕಚೇರಿ ಹಾಗೂ ವಿಭಾಗೀಯ ಕಚೇರಿಗಳಲ್ಲಿ     30ಕ್ಕೂ ಅಧಿಕ ಮುಖ್ಯ ಎಂಜಿನಿಯರ್‌, ಹೆಚ್ಚುವರಿ ಮುಖ್ಯ ಎಂಜಿನಿಯರ್‌ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಇದ್ದಾರೆ. ಕಳೆದ ಐದಾರು ತಿಂಗಳಲ್ಲಿ ಈ ಹುದ್ದೆಯಲ್ಲಿದ್ದ 10ಕ್ಕೂ ಅಧಿಕ ಮಂದಿ ನಿವೃತ್ತರಾಗಿದ್ದಾರೆ. ಈಗಿನ ಪ್ರಧಾನ ಮುಖ್ಯ ಎಂಜಿನಿಯರ್‌ ಅವರು ದಶಕಗಳಿಂದ ನಿರ್ವಹಣಾ ವಿಭಾಗದಲ್ಲಿ ಇದ್ದವರು. ಅವರಿಗೆ ಕಾವೇರಿ ನೀರಿನ ಸಮಗ್ರ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಅರಿವಿಲ್ಲ. ಅದನ್ನು ಅರಿತುಕೊಳ್ಳಲು ಇನ್ನಷ್ಟು ಸಮಯ ಬೇಕು. ಒಂದು ರೀತಿಯಲ್ಲಿ ಮಂಡಳಿ ಅನನುಭವಿಗಳ ಸಾಮ್ರಾಜ್ಯವಾಗಿದೆ’ ಎಂದು ಅವರು ಹೇಳುತ್ತಾರೆ.

‘ನಗರಕ್ಕೆ ಸೇರ್ಪಡೆಯಾದ ನಗರಸಭೆ ಹಾಗೂ ಪುರಸಭೆಗಳ ಜನರಿಗೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಕಾವೇರಿ ನೀರು ಸಿಗುತ್ತಿಲ್ಲ. 110 ಹಳ್ಳಿಗಳ ಜನರೂ ಕಾವೇರಿ ನಿರೀಕ್ಷೆಯಲ್ಲಿದ್ದಾರೆ. ಮಳೆ ಅಭಾವದಿಂದ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಇಂತಹ ಸಂದರ್ಭದಲ್ಲೇ ಪೂರ್ಣಕಾಲಿಕ ಅಧ್ಯಕ್ಷರು ಇಲ್ಲದಿದ್ದರೆ ಹೇಗೆ? ಇದು ನಗರದ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ’ ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್‌ ಅಭಿಪ್ರಾಯಪಡುತ್ತಾರೆ.

ಜಲಮಂಡಳಿ ಮುಂದಿರುವ ಸವಾಲುಗಳು
* ಬೇಸಿಗೆಯಲ್ಲಿ ಕೊರತೆಯಾಗದಂತೆ ನಗರಕ್ಕೆ ನೀರು ಪೂರೈಕೆ

* ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ‌ವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು

* 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ

* ಮಳೆ ನೀರು ಸಂಗ್ರಹ ವ್ಯವಸ್ಥೆ ಕಡ್ಡಾಯಗೊಳಿಸುವುದು

* ಕೆರೆಗಳಿಗೆ ಕೊಳಚೆ ನೀರು ಸೇರದಂತೆ ತಡೆಯುವುದು. ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ

* ನೀರಿನ ಅನಧಿಕೃತ ಸಂಪರ್ಕಗಳ ಪತ್ತೆ ಹಚ್ಚುವುದು

* ಹಲವು ವರ್ಷಗಳಿಂದ ಬೇರೂರಿ ಪ್ರಭಾವಿಗಳಾಗಿರುವ ಮೀಟರ್‌ರೀಡರ್‌ ಹಾಗೂ ವಾಲ್ವ್‌ಮನ್‌ಗಳಿಗೆ ಮೂಗುದಾರ ತೊಡಿಸುವುದು

* ಅಕ್ರಮ ಕೊಳವೆಬಾವಿಗಳಿಗೆ ಕಡಿವಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT