ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ: ಅಭಿವೃದ್ಧಿ ಯೋಜನೆಗೆ ಆಗ್ರಹ

ಸಕಲೇಶಪುರ: ಮಳೆಕಾಡಿಗೆ ಪ್ರವಾಸಿಗರ ಸೆಳೆಯಲು ಕ್ರಮ; ಸಿಎಂ ಬಳಿಗೆ ನಿಯೋಗ
Last Updated 5 ಡಿಸೆಂಬರ್ 2016, 9:20 IST
ಅಕ್ಷರ ಗಾತ್ರ

ಸಕಲೇಶಪುರ:  ಅಮೋಘ ಪ್ರಕೃತಿ ಸೌಂದರ್ಯವನ್ನು ತನ್ನ ಸೆರಗಿನಲ್ಲಿ ಇಟ್ಟುಕೊಂಡಿರುವ ಪಶ್ಚಿಮಘಟ್ಟದ ಗಿರಿ ಶಿಖರ, ದಟ್ಟ ಮಳೆಕಾಡಿನ ಸೊಬಗನ್ನು ಜಗತ್ತಿಗೆ ಬಿಂಬಿಸಲು ಪ್ರವಾಸೋದ್ಯಮಕ್ಕೆ ಹೊಸ ಯೋಜನೆ ರೂಪುಗೊಳ್ಳಬೇಕು ಎಂಬ ಬೇಡಿಕೆ ಮೊಳಕೆಯೊಡೆಯುತ್ತಿದೆ.

ಪ್ರವಾಸೋಧ್ಯಮ ಇಲಾಖೆಯಿಂದ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷಾತೀತವಾಗಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಬೆಳೆಗಾರರ ಸಂಘಟನೆಗಳು ಹಾಗೂ ಇತರ ಸಂಘ ಸಂಸ್ಥೆಯವರು ಮುಖ್ಯಮಂತ್ರಿ ಬಳಿ ನಿಯೋಗ ಹೋಗಲು ಚಿಂತನೆ ನಡೆಸಿವೆ.

ಕೇರಳ ರಾಜ್ಯದ ಮಾದರಿಯಲ್ಲಿಯೇ  ಪರಿಸರ ಪ್ರವಾಸೋದ್ಯಮವನ್ನು ಅಭಿ ವೃದ್ಧಿ ಮಾಡಬೇಕು. ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮಘಟ್ಟದ ದಟ್ಟ ಮಳೆಕಾಡು, ಹಳ್ಳ, ಕೊಳ್ಳ, ಜಲಪಾತಗಳನ್ನು ಬಂಜರು ಮಾಡುವ ಕೆಲಸ ನಿಲ್ಲಬೇಕು.

ಪಶ್ಚಿಮ ಘಟ್ಟದ ಸಸ್ಯ ಸಂಕುಲ ಹಾಗೂ ಜೀವ ಸಂಕುಲಕ್ಕೆ ತೊಡಕಾಗದಂತೆ ಪ್ರವಾಸೋ ದ್ಯಮವನ್ನು ಅಭಿವೃದ್ಧಿಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಪ್ರವಾಸಿಗರು ಪ್ರಕೃತಿ ಸೌಂದರ್ಯ ವೀಕ್ಷಿಸಲು ಸೂಕ್ತವಾದ ಸ್ಥಳಗಳಲ್ಲಿ ‘ಬಿಸಿಲೆ ಬ್ಯೂಟಿ ಸ್ಪಾಟ್‌’ನಲ್ಲಿರುವ ಮಾದರಿ ಯಲ್ಲಿಯೇ ವೀಕ್ಷಣಾ ಗೋಪುರಗಳನ್ನು ನರ್ಮಿಸಬೇಕು. ಆ ಸ್ಥಳಗಳಲ್ಲಿ ಮೂಲಸೌಕರ್ಯ ಒದಗಿಸಬೇಕು. ಇವುಗಳ ನಿರ್ವಹಣೆಗೆ ಇಲಾಖೆಯಿಂದ ಸಿಬ್ಬಂದಿಯನ್ನೂ ನೇಮಕ ಮಾಡಬೇಕು. ಇಂಥ ಅಭಿವೃದ್ಧಿ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸುಪ್ರದೀಪ್ತ ಯಜಮಾನ್‌ ಒತ್ತಾಯಿಸುತ್ತಾರೆ.

ಪಶ್ಚಿಮಘಟ್ಟದ ಅಂಚಿನಲ್ಲಿರುವ ಕಾಗಿನಹರೆ ಗ್ರಾಮದ ಗುಡ್ಡದ ಮೇಲೆ ನಿಂತರೆ ಆಕಾಶಕ್ಕೆ ಮುಖ ಒಡ್ಡಿ ನಿಂತ ಬೆಟ್ಟಗಳು ಹಾಗೂ ಕಣಿವೆಗಳು ನಯನ ಮನೋಹರವಾಗಿರುತ್ತವೆ. ದಟ್ಟ ಕಾಡುಗಳು, ಕಾಫಿ ತೋಟಗಳು ಎರಡೂ ಕಡೆ ಮನ ತಣಿಸುತ್ತವೆ.

ಸಕಲೇಶಪುರ–ಕಾಗಿನಹರೆ, ಸಕಲೇಶ ಪುರ–ಹಾನುಬಾಳು–ಮರಗುಂದ, ಸಕಲೇಶಪುರ–ಕಾಡುಮನೆ, ಸಕಲೇಶ ಪುರ–ಬಿಸಿಲೆ ಈ ನಡುವೆ ಚತುಷ್ಪಥ ರಸ್ತೆಗಳು ನಿರ್ಮಾಣಗೊಳ್ಳಬೇಕು. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಜತೆಗೆ ಈ ಭಾಗದಲ್ಲಿ ರಸ್ತೆ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ.
ಪಶ್ಚಿಮಘಟ್ಟದ ಅಂಚಿನಲ್ಲಿ ಇರುವ ಗ್ರಾಮಗಳ ಜನರು ಹವಾಮಾನ ವೈಪರೀತ್ಯ, ಕಾಡು ಪ್ರಾಣಿಗಳಿಂದ ಆಗುವ ಹಾನಿಯಿಂದಾಗಿ ಬದುಕು ನಡೆಸುವುದೇ ಕಷ್ಟವಾಗಿದೆ.

ಜಮೀನು ಇದ್ದರೂ ಬೆಳೆ ಬೆಳೆಯುವುದಕ್ಕೆ ಸಾಧ್ಯವಾಗದೆ, ಯುವ ಕರು ಕೆಲಸ ಉದ್ಯೋಗ ಹುಡುಕಿ ಕೊಂಡು ನಗರಗಳತ್ತ ಮುಖಮಾಡುತ್ತಿ ದ್ದಾರೆ. ಈ ಪ್ರದೇಶದಲ್ಲಿ ಪ್ರವಾಸೊದ್ಯಮ ಅಭಿವೃದ್ಧಿಗೊಂಡರೆ ಗ್ರಾಮೀಣ ಜನರು ಹೋಂಸ್ಟೇಗಳ ಮೂಲಕ ಉದ್ಯೋಗ ಕಂಡುಕೊಳ್ಳಬಹುದು. ಇತರರಿಗೂ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹಿರಿಯ ವಕೀಲ ಆರ್‌.ಎನ್‌. ಕೃಷ್ಣಮೂರ್ತಿ ಹೇಳುತ್ತಾರೆ.
– ಜಾನೇಕೆರೆ ಆರ್‌. ಪರಮೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT