ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಹಿಡಿತದಲ್ಲಿ ಪಂಚಾಯಿತಿ ಆಡಳಿತ

Last Updated 5 ಡಿಸೆಂಬರ್ 2016, 9:40 IST
ಅಕ್ಷರ ಗಾತ್ರ

ಮಡಿಕೇರಿ: ‘ಇಡೀ ದೇಶದಲ್ಲಿ ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ರಾಜ್ಯಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ ಮತ್ತು ತ್ರಿಪುರ ನಂತರ ಸ್ಥಾನದಲ್ಲಿ ಗುರುತಿಸಿಕೊಂಡಿವೆ’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.

ನಗರದ ಬಾಲಭವನದಲ್ಲಿ ಭಾನುವಾರ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಆಶ್ರಯದಲ್ಲಿ ನಡೆದ ‘ಪಂಚಾಯತ್‌ರಾಜ್‌ ಆಶಯಗಳು ಮತ್ತು ಇಂದಿನ ಸ್ಥಿತಿಗತಿಗಳು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕೇರಳದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಸದಸ್ಯರೇ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಕರ್ನಾಟಕದಲ್ಲಿ ಶಾಸಕರೇ ಸುಪ್ರೀಂ; ವಿಶ್ವ ಬ್ಯಾಂಕ್‌ನಿಂದ ಪಂಚಾಯಿತಿಗಳಿಗೆ ಬರುವ ಅನುದಾನ ಖರ್ಚು ಮಾಡಲೂ ಶಾಸಕರ ಅಪ್ಪಣೆ ಬೇಕಿದೆ. ಶಾಸಕರ ಹಿಡಿತದಿಂದ ಗ್ರಾಮಗಳು ನಲುಗುತ್ತಿವೆ’ ಎಂದು ವಿಷಾದಿಸಿದರು.

ಬಜೆಟ್‌ನ ಶೇ 60ರಷ್ಟು ಅನುದಾನವು ಪಂಚಾಯತ್‌ರಾಜ್‌ ವ್ಯವಸ್ಥೆಯ ಮೂಲಕ ಖರ್ಚಾದರೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಲಿವೆ. ಆದರೆ, ಇದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುತ್ತಿಲ್ಲ. 14ನೇ ಹಣಕಾಸು ಅಡಿ ಕೇಂದ್ರ ಸರ್ಕಾರ ಪಂಚಾಯಿತಿಗಳಿಗೆ ಬಿಡಿಗಾಸು ನೀಡುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ₹1 ಕೋಟಿ ಅನುದಾನ ನೀಡಿದರೆ ಮಾತ್ರ ಹಳ್ಳಿಗಳು ಉದ್ಧಾರಗೊಳ್ಳಲು ಸಾಧ್ಯ ಎಂದು ಹೇಳಿದರು.

ರಾಜ್ಯ ಸರ್ಕಾರವು ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಪರಿಕಲ್ಪನೆ ಎಂದು ಹೇಳುತ್ತದೆ. ಆದರೆ, ಶೌಚಾಲಯ ನಿರ್ಮಾಣಕ್ಕೆ ₹ 12 ಸಾವಿರ ಅನುದಾನ ಬಿಡುಗಡೆ ಮಾಡುತ್ತದೆ. ಹಂದಿಗೂಡಿನಂತಹ ಮನೆ ಮಂಜೂರು ಮಾಡಿಕೊಡುತ್ತಿದೆ. ಈ ವಿಚಾರದಲ್ಲಿ ಬಿಜೆಪಿ– ಕಾಂಗ್ರೆಸ್‌ ಎರಡೂ ಒಂದೆ ಎಂದು ಆಪಾದಿಸಿದರು.

ಯಾವುದೇ ಸೌಲಭ್ಯ ಕೊಡದೇ 28 ಸಾವಿರ ಪಂಚಾಯಿತಿ ನೌಕರರನ್ನು ಸರ್ಕಾರ ಕಾಯಂ ಮಾಡಿದೆ. ಅವರಿಗೆ ಸೌಲಭ್ಯ ಕಲ್ಪಿಸಲು ₹580 ಕೋಟಿ, ನಿವೃತ್ತಿ ವೇತನಕ್ಕೆ ₹ 300 ಕೋಟಿ ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂಬುದು ಸರ್ಕಾರದ ವಾದ. ಇದೇ 13ರಂದು 4ನೇ ರಾಜ್ಯ ಹಣಕಾಸು ಆಯೋಗದ ಸದಸ್ಯರನ್ನು ಭೇಟಿ ಮಾಡಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು. ಜತೆಗೆ, 12, 13ರಂದು ಕಾರ್ಯಾಗಾರ ಸಹ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್‌ ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲೇ ಅಂದರೆ, 1929ರಲ್ಲಿ ಪಂಚಾಯತ್‌ ರಾಜ್‌್ ವ್ಯವಸ್ಥೆ ಜಾರಿಗೆ ಬಂತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪಂಚಾಯಾತ್‌ರಾಜ್‌ ವ್ಯವಸ್ಥೆಯನ್ನು ಬಲಪಡಿಸಲು ಪ್ರಯತ್ನಿಸಿದರು. ಗ್ರಾಮೀಣ ಪ್ರದೇಶದ ಜನರು ಹಂಗಿನ ಜೀವನಕ್ಕಿಂತ ಹಕ್ಕಿನ ಜೀವನ ಸಾಗಿಸಬೇಕು ಎಂಬುದು ಪಂಚಾಯತ್‌ ರಾಜ್‌ ವ್ಯವಸ್ಥೆಯ ಆಶಯ. ಸಾಮಾಜಿಕ, ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಬಂದಿದೆ ಎಂದು ಹೇಳಿದರು.

‘ಸ್ವಾವಲಂಬನೆ, ಸಾಂಸ್ಕೃತಿಕ ಬದುಕು, ನೀರಿನ ಸಂಪನ್ಮೂಲ ಕಾಪಾಡುವುದು, ಗ್ರಾಮೀಣ ಪ್ರದೇಶದ ಶ್ರೇಣೀಕೃತ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ನಿವಾರಣೆ ಮಾಡುವ ಮೂಲಕ ಗ್ರಾಮೀಣ ಬದುಕನ್ನು ಹಸನು ಮಾಡ ಬೇಕಿದೆ. ಆದರೆ, ಕೆಲವು ಜನಪ್ರತಿನಿಧಿ ಗಳ ಅಸಡ್ಡೆಯಿಂದ ಆಶಯಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಉಂಟಾಗಿದೆ. ಆದರೆ, ರಾಜ್ಯ ಸರ್ಕಾರ 29 ಇಲಾಖೆಗಳನ್ನು ಪಂಚಾಯತ್‌ರಾಜ್‌ ವ್ಯವಸ್ಥೆಗೆ ತರುವ ಮೂಲಕ ಸುಧಾರಣೆಯ ಹೆಜ್ಜೆಯಿಟ್ಟಿದೆ’ ಎಂದು ರಮೇಶ್‌ ಹೇಳಿದರು.

ಕುಶಾಲನಗರ ಸಮೀಪದ ಕಣಿವೆಯ ಸಾಹಿತಿ ಭಾರದ್ವಾಜ್‌ ಮಾತನಾಡಿ, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳನ್ನು ಕಂಡರೆ ಭ್ರಮನಿರಸ ಉಂಟಾಗುತ್ತಿದೆ. ಅವುಗಳ ಮೂಲ ಆಶಯ ಈಡೇರುತ್ತಿಲ್ಲ. ಮರದ ಕಳ್ಳಸಾಗಣೆ ಮಾಡುವವರು, ಮರಳು ದಂದೆಕೋರರರು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ. ಮತದಾರರನ್ನು ಭ್ರಷ್ಟರನ್ನಾಗಿಸುವ ಹುನ್ನಾರ ನಡೆಯುತ್ತಿದೆ ಎಂದು ವಿಷಾದಿಸಿದರು.

ವಿಚಾರ ಸಂಕಿರಣದಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ಆರ್‌. ಭರತ್‌, ಪಿ.ಕೆ. ಲತೀಫ್‌, ಬಿ.ಜಿ. ಲೀಲಾವತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT