ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರನ್ನು ಪ್ರೋತ್ಸಾಹಿಸುವ ನಿರ್ದೇಶಕ ಬೇಕು

Last Updated 5 ಡಿಸೆಂಬರ್ 2016, 9:56 IST
ಅಕ್ಷರ ಗಾತ್ರ

ಮೈಸೂರು: ಉತ್ತಮ ಕಲಾವಿದರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಉತ್ತಮ ಚಿತ್ರಗಳನ್ನು ನಿರ್ಮಿಸುವ ಮೂಲಕ ಅವರ ಪ್ರತಿಭೆಯನ್ನು ಬೆಳೆಸುವ ಕೆಲಸವನ್ನು ಹೊಸ ತಲೆಮಾರಿನ ನಿರ್ದೇಶಕರು ಮಾಡಬೇಕಿದೆ ಎಂದು ಪುಟ್ಟಣ್ಣ ಕಣಗಾಲ್ ಸಹೋದರ ಎಸ್.ಆರ್.ನರಸಿಂಹಯ್ಯ ಕಣಗಾಲ್ ಸಲಹೆ ನೀಡಿದರು.

ಪುಟ್ಟಣ್ಣ ಕಣಗಾಲ್ ವೇದಿಕೆಯ ವತಿಯಿಂದ ಭಾನುವಾರ ಆಯೋಜಿಸಿದ್ದ ಪುಟ್ಟಣ್ಣ ಕಣಗಾಲ್‌ ಅವರ 83ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುಟ್ಟಣ್ಣ ಕಣಗಾಲ್ ಅವರು ಪ್ರತಿಭೆಯನ್ನು ಹೆಕ್ಕಿ ತೆಗೆಯುವುದರಲ್ಲಿ ಸಿದ್ಧಹಸ್ತರಾಗಿದ್ದರು.  ಅವರ ನಿರ್ದೇಶನದಲ್ಲಿ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಅನೇಕ ಕಲಾವಿದರನ್ನು ನಾವು ಗುರುತಿಸಬಹುದು. ಕಣಗಾಲ್‌ ಚಿತ್ರರಂಗ ಕಂಡ ವಿಸ್ಮಯ. ನಿರ್ದೇಶಕರು ಪೋಷಕರಂತೆ ತಮ್ಮ ಪಾತ್ರವನ್ನು ನಿರ್ವಹಿಸಬೇಕು.

ಅವರ ನೆರಳಿನಲ್ಲಿ ಅನೇಕ ಕಲಾವಿದರು ಜೀವನ ಕಂಡುಕೊಳ್ಳಬೇಕು. ಹಾಗಾಗಿ, ಯುವ ನಿರ್ದೇಶಕರು ತಮ್ಮ ಗಾಂಭೀರ್ಯತೆ­ಯನ್ನು ಅರ್ಥಮಾಡಿಕೊಂಡು ಸಾಮಾಜಿಕವಾಗಿ ಘನತೆಯುಳ್ಳ ಚಿತ್ರಗಳನ್ನು ನಿರ್ಮಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಣಗಾಲ್‌ ಅವರು 26 ಚಿತ್ರಗಳನ್ನು ನಿರ್ಮಿಸಿದ್ದರು. ಒಂದೊಂದು ಚಿತ್ರವೂ ಕನ್ನಡ ಚಿತ್ರರಂಗದ ಅನರ್ಘ್ಯ ರತ್ನ ಎನ್ನುವುದು ಖಚಿತ. ಅವರ ಚಿತ್ರಗಳ ಒಂದೊಂದು ದೃಶ್ಯವೂ ಸ್ಮರಣೀಯ. ಅಂತೆಯೇ, ಅವುಗಳಲ್ಲಿರುವ ಗೀತೆಗಳು ಪ್ರಸಿದ್ಧಿಯ ಉತ್ತುಂಗಕ್ಕೆ ಏರಿವೆ. ಹಾಗಾಗಿಯೇ, ಸಹೃದಯ ಪ್ರೇಕ್ಷಕರು ಆ ಚಿತ್ರಗಳನ್ನು ಪ್ರಶಂಸಿಸಿ ಯಶಸ್ಸು ಕಾಣುವಂತೆ ಮಾಡಿದ್ದರು. ಕನ್ನಡಿಗರು ಒಳ್ಳೆಯ ಚಿತ್ರಗಳನ್ನು ನೋಡಿ ಬೆಂಬಲಿಸುತ್ತಾರೆ. ಕಳಪೆ ಅಭಿರುಚಿಯ ಚಿತ್ರಗಳನ್ನು ಸೋಲಿಸುತ್ತಾರೆ. ಇಲ್ಲಿನ ಜನರ ಕನ್ನಡ ಪ್ರೇಮ ಮತ್ತು ಸಿನಿಮಾ ನೋಡಿ ಪ್ರೋತ್ಸಾಹಿಸುವ ಗುಣ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

‘ಸ್ವಚ್ಛ ಭಾರತ’ ಎಂಬ ಪರಿಕಲ್ಪನೆಯು ಚಿತ್ರರಂಗಕ್ಕೂ ಅಳವಡಿಸಬೇಕು. ಕನ್ನಡ ಸಿನಿಮಾ ರಂಗದಲ್ಲಿ ಬದಲಾವಣೆಯನ್ನು ತಂದು, ಕನ್ನಡ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವಂತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಣಗಾಲ್ ನಿರ್ದೇಶನದ ಕನ್ನಡ ಚಿತ್ರಗಳ ಚಿತ್ರಗೀತೆ ಸ್ಪರ್ಧೆ ನಡೆಯಿತು. ಕಲಾವಿದರು ಮಾನಸ ಸರೋವರ, ನಾಗರಹಾವು ಸೇರಿದಂತೆ ಅನೇಕ ಚಿತ್ರಗೀತೆ ಹಾಡಿದರು.

ಕಣಗಾಲ್ ವೇದಿಕೆಯ ಅಧ್ಯಕ್ಷರಾದ ಕಂಪಲಾಪುರ ಮೋಹನ್, ಅನುಪಮಾ, ಗಾಯಕಿ ಡಾ.ಸ್ನೇಹಶ್ರೀ ನಿರ್ಮಲ­ಕುಮಾರ್, ಚಲನಚಿತ್ರ ವಿಮರ್ಶಕ ಡಾ.ದ.ಸತೀಶ್‌ಚಂದ್ರ, ರವಿ ಮೆಲೋಡಿಸ್ ವಾದ್ಯವೃಂದದ ಮುಖ್ಯಸ್ಥ ರವಿಕುಮಾರ್, ರಾಮು ಕಣಗಾಲ್, ಗುರುರಾಜ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT