ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿ ಹೋದ ಕೊಳವೆಬಾವಿಗೆ ಪುನರ್ಜನ್ಮ ಕೊಟ್ಟು...

Last Updated 5 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
–ಬಿ.ಎಲ್. ವೇಣು
 
*
ಸಕಲ ಜೀವರಾಶಿಗಳಿಗೂ ಅಗತ್ಯವಾಗಿರುವ ಜೀವಜಲದ ಉತ್ಪಾದನೆಗಾಗಿ ತನ್ನದೇ ಮಾರ್ಗದಲ್ಲಿ ಹಗಲಿರಳು ಶ್ರಮಿಸುತ್ತಿರುವ ಎನ್.ಜೆ. ದೇವರಾಜರೆಡ್ಡಿ ಅವರ ಜೀವನವೇ ಒಂದು ಸಾಹಸಗಾಥೆ. ಅವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಆರನೇ ರ್‍ಯಾಂಕ್‌ ಪಡೆದರೂ ನೌಕರಿ ಹಿಂದೆ ಬೀಳದೆ 30 ವರ್ಷಗಳಿಂದ ಮಳೆ ನೀರು ಸಂಗ್ರಹ ಹಾಗೂ ಅಂತರ್ಜಲ ಪುನಶ್ಚೇತನ ತಜ್ಞರಾಗಿ ರಾಜ್ಯ ಹಾಗೂ ಇತರೆ ರಾಜ್ಯಗಳಲ್ಲೂ ಸೇವೆ ಸಲ್ಲಿಸುತ್ತಾ ಈವರೆಗೂ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬತ್ತಿದ ಕೊಳವೆಬಾವಿಗಳಿಗೆ ಪುನರ್‌ಜನ್ಮ ನೀಡಿದ್ದು, ಐದು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ಸಂಗ್ರಹಣಾ ವಿಧಾನವನ್ನು ಅಳವಡಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ. 
 
2002–03 ಬರದ ನಾಡು ಚಿತ್ರದುರ್ಗದಲ್ಲಿ ದೇವರಾಜರೆಡ್ಡಿ ಅವರ ಸಲಹೆಯನ್ನು ಬಳಸಿಕೊಂಡ ಜಿಲ್ಲಾಡಳಿತ ‘ಕೂಲಿಗಾಗಿ ಕಾಳು’ ಯೋಜನೆ ಅಡಿಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಜಲಮರುಪೂರಣ ಮಾಡಿಸಿ ಅಂತರ್ಜಲ ಸಂರಕ್ಷಿಸಿದ್ದಾರೆ. 
 
ಐಮಂಗಳ ಹೋಬಳಿಯಲ್ಲಿ ಅನೇಕ ವರ್ಷಗಳಿಂದ ಎಷ್ಟೇ ಕೊಳವೆಬಾವಿಗಳನ್ನು ಕೊರೆಸಿದರೂ ನೀರು ಕಾಣದೆ ಕಂಗಾಲಾಗಿದ್ದ ಜನರೂ ಜಿಲ್ಲಾಡಳಿತ 
2013–2015ನೇ ಸಾಲಿನಲ್ಲಿ ದೇವರಾಜ ರೆಡ್ಡಿ ಅವರ ಸಲಹೆ ಮೇರೆಗೆ ಮರಳಿಯತ್ನವನ್ನು ಮಾಡಿತು. ಅಂಜುತ್ತಲೇ ಸರ್ಕಾರಿ ಸಿಬ್ಬಂದಿಯೊಡನೆ ಬರದ ನಾಡಿನಲ್ಲಿ ಸುತ್ತಾಟ ನಡೆಸಿದರು. ಸುಮಾರು ಐದು ಕಿ.ಮೀ. ದೂರದಲ್ಲಿ ಅವರಿಗೆ ನೀರಿರುವ ತಾಣ ಇದಾಗಿರಬಹುದೆನ್ನಿಸಿ ಗ್ರಾಮಸ್ಥರನ್ನು ವಿಚಾರಿಸಿದಾಗ ಅಲ್ಲಿ ಹಿಂದೆ ‘ಹಿರೆಕೆರೆ’ ಎಂಬ ಕೆರೆಯಿದ್ದಿತೆಂದು ತಿಳಿದ ರೆಡ್ಡಿ, ಜಿಲ್ಲಾಡಳಿತವನ್ನು ಒಪ್ಪಿಸಿ ಕೊಳವೆ ಬಾವಿ ಕೊರೆಸಿದರು. ಅಲ್ಲಿ ಮೂರು ಇಂಚು ನೀರು ಬೀಳಲಾಗಿ ಉತ್ಸಾಹಗೊಂಡ ಜಿಲ್ಲಾಧಿಕಾರಿಗಳು ರೆಡ್ಡಿ ಸಲಹೆ ಮೇರೆಗೆ ಇನ್ನೂರು ಮೀಟರು ದೂರದ ಲೆಕ್ಕಾಚಾರದಲ್ಲಿ ಹತ್ತು ಕೊಳವೆಬಾವಿಗಳನ್ನು ಕೊರೆಸಿ ಅಲ್ಲಿಂದ ಹೋಬಳಿಗೆ ಪೈಪ್‌ಲೈನ್ ಎಳೆಸಿ ಐಮಂಗಲದ ಜನರ ದಾಹವನ್ನು ತಣಿಸಿದರು.  
 
ಕೆಲವು ವರ್ಷಗಳ ಸತತ ಪ್ರಯತ್ನದಿಂದ ಹಲವೆಡೆ ಮಳೆ ನೀರಿನ ಸಂಗ್ರಹಣಾ ತಂತ್ರಜ್ಞಾನ ಅಳವಡಿಸಿದ್ದೇ ಅಲ್ಲದೆ ಹೊಲಗದ್ದೆಗಳಲ್ಲಿ ಇಂಗು ಗುಂಡಿಗಳನ್ನು ಅಡ್ಡಗಟ್ಟೆಗಳನ್ನು ನಿರ್ಮಿಸಿ ಬಿದ್ದ ಮಳೆ ನೀರನ್ನು ಅಲ್ಲಿಯೇ ಇಂಗಿಸಿ ಕೊಳವೆಬಾವಿಗಳಲ್ಲಿ ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಮಟ್ಟ ಏರಿರುವ ಸಾವಿರಾರು ಉದಾಹರಣೆಗಳೂ ಇವೆ.  
 
ಕೊಳವೆ ಬಾವಿಗಳ ನೀರಿನ ಮಟ್ಟ ಇಳಿಮುಖವಾಗುತ್ತಿರುವುದು, ಆಳವಾಗಿ ಕೊರೆದಾಗ ಅವುಗಳಲ್ಲಿನ ಖನಿಜ ಪ್ರಮಾಣ ಹೆಚ್ಚುವುದು ಫ್ಲೋರೈಡ್ ನೀರಿನ ಆತಂಕ ತಪ್ಪಿಸಲು ತಮ್ಮದೇ ಆದ ‘ಜಿಯೋ ಮಳೆ ನೀರು ಮಂಡಳಿ’ ಆರಂಭಿಸಿದ ರೆಡ್ಡಿ ಕಡಿಮೆ ಖರ್ಚಿನಲ್ಲಿ ಜಲಮರುಪೂರಣ ಮಾಡುವ ಕಾರ್ಯದಲ್ಲಿ ‘ರೈತಬಂಧು’ ಎನಿಸಿದ್ದಾರೆ.
 
‘ಅರ್ಘ್ಯಂ’ ಸಂಸ್ಥಾಪಕರ ನೆರವಿನಿಂದ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಐದು ಸರ್ಕಾರಿ ಶಾಲೆಗಳನ್ನು ಮಾದರಿ ಹಸಿರು ಶಾಲೆಗಳನ್ನಾಗಿ ಮಾಡಲಾಗಿದೆ. ಮಳೆ ನೀರಿಗೆ ಬೊಗಸೆಯೊಡ್ಡಿದ ಮಠಗಳೂ ಇವೆ. ಮನಗುಂಡಿ, ದೇವರಹುಬ್ಬಳ್ಳಿ, ಮುಳ್ಳಳಿಮಠ, ಬಾಲ್ಕಿ ಹಿರೇಮಠ ಸಾಣೇಹಳ್ಳಿ ಮಠಗಳೂ ಈ ಸಾಲಿನಲ್ಲಿ ಬರುತ್ತವೆ.  ತೆಲಂಗಾಣದ ಮೇಡಕ್ ಜಿಲ್ಲೆಯ ರಾಮಯಂಪೇಟೆ, ಮಹಾರಾಷ್ಟ್ರ ರಾಜ್ಯದ ಬಂಡಾರಿ ಜಿಲ್ಲೆ, ಗುಜರಾತ್ ರೈತರೂ ರೆಡ್ಡಿ ಅವರ ಅಂತರ್ಜಲ ಕ್ರಾಂತಿಯಿಂದಾಗಿ ಸಾವಿರಾರು ಟನ್ ತರಕಾರಿ ಬೆಳೆಯುತ್ತಿದ್ದಾರೆ. 
 
ದಾವಣಗೆರೆ ಜಿಲ್ಲೆ ಹುಣಸೆಕಟ್ಟೆ ಮಲ್ಲೇಶಪ್ಪ ತಮ್ಮ ಮೂರು ಎಕರೆ ಒಣ ಭೂಮಿಯಲ್ಲಿ ಹತ್ತು ಲಕ್ಷ ಸಾಲ ಮಾಡಿ ಏಳು ಕೊಳವೆಬಾವಿಗಳನ್ನು ಕೊರೆಸಿ ವಿಫಲರಾಗಿ ಕೋಟಿ ರೂಪಾಯಿ ಜೀವ ವಿಮೆ ಮಾಡಿಸಿ ಸಾಯಲು ಹೊರಟಿದ್ದರು’ ಆತ್ಮಹತ್ಯೆ ಮಾಡಿಕೊಂಡವರಿಗೆ ಹಣ ಸಿಗದೆಂದು ಅರಿತ ಆತ ಈಗಾಗಲೇ ಮೂರು ಕಂತು ಕಟ್ಟಲು 14ಸಾವಿರ ರೂಪಾಯಿ ಸಾಲ ಬೇರೆ ಮಾಡಿಬಿಟ್ಟಿದ್ದರು. ಇದೀಗ ಸಾಯುವಂತಿಲ್ಲ  ಬದುಕುವಂತಿಲ್ಲ. ಇಂತಹ ಸಮಯದಲ್ಲಿ ಅವರ ಬತ್ತಿದ ಕೊಳವೆಬಾವಿಗಳಿಗೆ ಜಲಮರುಪೂರಣ ಮಾಡಿಸಿದರು ದೇವರಾಜರೆಡ್ಡಿ. ಅದಾದ ವರ್ಷದಲ್ಲೇ ಒಂದೇ ಮಳೆಗೆ ಕೊಳವೆ ಬಾವಿಗಳಲ್ಲಿ ಉಕ್ಕಿದ ಗಂಗೆ ಅವರ ಭೂಮಿಯನ್ನು ಸಮೃದ್ಧಿಗೊಳಿಸಿತು. 15 ವರ್ಷಗಳಿಂದ ಆಧುನಿಕ ಕೃಷಿ ಮಾಡಿ ಸಂಪಾದಿಸಿದ ಮಲ್ಲೇಶಪ್ಪ, ಸರ್ಕಾರದಿಂದ ‘ಕೃಷಿ ಪಂಡಿತ ಪ್ರಶಸ್ತಿ’ಗೂ ಭಾಜನರಾದರು. ಹೀಗೆ ಅದೆಷ್ಟೋ ರೈತರ ಬಾಳನ್ನು ಹಸಿರಾಗಿಸಿದ್ದಾರೆ ರೆಡ್ಡಿ.
 
ಚರ್ಚ್‌ನ ಪಾದ್ರಿಗಳೂ ಈಗ ಜಲಮರುಪೂರಣ ಕೆಲಸಕ್ಕೆ ಕೈಜೋಡಿಸುತ್ತಿದ್ದಾರೆ. ಉಡುಪಿಯ ಕಲ್ಯಾಣಮಠದ ಚರ್ಚ್ ಇದೀಗ ಇದರ ಸದುಪಯೋಗ ಪಡೆಯುತ್ತಿದೆ. ‘ರಾಷ್ಟ್ರೀಯ ಪುರಸ್ಕಾರ ಚಿತ್ರದುರ್ಗ ಜಿಲ್ಲಾ ಪಂಚಾಯಿತಿಗೆ ಈ ವರ್ಷ 3,500ಕ್ಕೂ ಹೆಚ್ಚು ಬತ್ತಿದ ಕೊಳವೆ ಬಾವಿಗಳ ಜಲಮರುಪೂರಣ ಕೆಲಸಕ್ಕೆ ತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ರೆಡ್ಡಿ ಅವರು, ಗ್ರಾಮೀಣಾಭಿವೃದ್ಧಿ ಮಂತ್ರಿಗಳಾದ ಎಚ್.ಕೆ. ಪಾಟೀಲರ ಇಲಾಖೆಗೆ ಜಲಸಂರಕ್ಷಣೆ, ಜಲಸಾಕ್ಷರತೆ ಕೆಲಸಗಳಿಗೂ ತಾಂತ್ರಿಕ ನೆರವು ನೀಡಲು ಮುಂದಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಇಂದಿರಾ ಜಲಪ್ರಭಾ ಯೋಜನೆಯಡಿಯಲ್ಲಿ ಒಂದು ಲಕ್ಷ ಜಲಮರುಪೂರಣಾ ಕಾರ್ಯಕ್ಕೆ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಲಿದ್ದಾರೆ. 
 
ರೆಡ್ಡಿಯವರು ಹಲವು ಪುಸ್ತಕಗಳನ್ನೂ ಬರೆದಿದ್ದಾರೆ. ಕೊಳವೆಬಾವಿಗೆ ಜಲಮರುಪೂರಣ, ಬತ್ತಿದ ಕೊಳವೆ ಬಾವಿಯಲ್ಲಿ ಉಕ್ಕಿದ ಗಂಗೆ, ತೆಲುಗಿನಲ್ಲಿ ಬೋರು ಬಾವುಲಕು ರಿಚಾರ್ಜ್ ಇತ್ಯಾದಿ ಅನೇಕ ವಿದ್ಯಾವಂತ ರೈತಯುವಕರಿಗೆ ಮಾರ್ಗದರ್ಶಿಗಳಾಗಿವೆ. ವಾರ್ತಾ ಮತ್ತು ಪ್ರಚಾರ ಇಲಾಖೆ ಬೆಂಗಳೂರು ಇವರು ಮಳೆನೀರು ಕೊಯ್ಲು ತಾಂತ್ರಿಕತೆಯ 20 ನಿಮಿಷಗಳ ಕಿರುಚಿತ್ರ ನಿರ್ಮಿಸಿ ರಾಜ್ಯಾದ್ಯಂತ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಸಾರ ಮಾಡುತ್ತಿದೆ.  
 
ಇವರ ಕಾರ್ಯಕ್ಕೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಕೃಷಿ ಪಂಡಿತ ಪ್ರಶಸ್ತಿ, ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಮಠಮಾನ್ಯಗಳ ಸಂಘಸಂಸ್ಥೆಗಳ ಪ್ರಶಸ್ತಿಗಂತೂ ಲೆಕ್ಕವಿಲ್ಲ. ಸಂಪರ್ಕಕ್ಕೆ: 9448125498
 
(ನೀರು ಸಂಗ್ರಹಣೆಗೆ ಇಂಗುಗುಂಡಿ ನಿರ್ಮಾಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT