ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ‘ನೈತಿಕ’ ಪೊಲೀಸ್‌ಗಿರಿ!

ಇದು ವಿಷದ ಬಳ್ಳಿ
Last Updated 5 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಅನೈತಿಕ ಪೊಲೀಸ್‌ಗಿರಿ’ ಯಿಂದಾಗಿ ಕರ್ನಾಟಕದ ಕರಾವಳಿ ರಾಷ್ಟ್ರೀಯ ಮಟ್ಟದಲ್ಲಿ ಆಗಾಗ ಸುದ್ದಿಯಾಗುತ್ತದೆ. ಆದರೆ, ನೈತಿಕತೆಯ ಹೆಸರಿನಲ್ಲಿ ಇಲ್ಲಿ ನಡೆಯುವ ಬಹಳಷ್ಟು ಘಟನೆಗಳು ನೈತಿಕತೆಯನ್ನೇ ಕುಗ್ಗಿಸುವಂತಿರುತ್ತವೆ. ಯಾವುದು ನೈತಿಕತೆ, ಯಾವುದು ಸಂಸ್ಕೃತಿ ಎನ್ನುವ ಪ್ರಶ್ನೆಗಳನ್ನೂ ಈ ಘಟನೆಗಳು ಹುಟ್ಟುಹಾಕುತ್ತವೆ. ‘ಮಾರಲ್ ಪೊಲೀಸಿಂಗ್‌’ ಘಟನೆಗಳು ಹಾಗೂ ವ್ಯಕ್ತಿಗಳ ಬೆನ್ನು ಹತ್ತಿಹೋದರೆ ಅಲ್ಲಿ ಕೋಮು–ಧರ್ಮಕ್ಕೂ ಮಿಗಿಲಾಗಿ ಹೆಣ್ಣನ್ನು ಹತ್ತಿಕ್ಕುವ ಒಂದು ‘ಮನಃಸ್ಥಿತಿ’ ಜಾತಿ ಮತ ಸಮುದಾಯ ಮೀರಿ ಕೆಲಸ ಮಾಡುತ್ತಿರುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ.

**‌

‘ಯಾವುದು ಎಲ್ಲರ ಗಮನಕ್ಕೆ ಬರಬೇಕಿತ್ತೋ ಅದು ಪ್ರಮುಖ ಸುದ್ದಿ ಆಗಲಿಲ್ಲ. ಯಾವುದು ಸಮಾಜಕ್ಕೆ ಅಹಿತವೋ ಅದು ಹೆಚ್ಚು ಪ್ರಚಾರ ಪಡೆದುಕೊಂಡಿತು’. ಹೀಗೆಂದು ಹೇಳುವಾಗ ವಿ.ಟಿ. ಪ್ರಸಾದ್‌ ಅವರ ಧ್ವನಿಯಲ್ಲಿ ದುಃಖ ಉಮ್ಮಳಿಸುತ್ತಿತ್ತು. 

 
ಮಂಗಳೂರಿನ ಹೊರವಲಯದ ವಿಟ್ಲದ ವಿ.ಟಿ. ಪ್ರಸಾದ್‌ ವೃತ್ತಿಯಿಂದ ಪತ್ರಕರ್ತ. ಅವರು ಹೇಳುತ್ತಿದ್ದುದು ತಮ್ಮದೇ ಸುದ್ದಿಯೊಂದು ಸೃಷ್ಟಿಸಿದ ಮಾನವೀಯತೆಯ ಹಾಗೂ ಕ್ರೌರ್ಯದ ನಿಜಕಥನಗಳನ್ನು. 
 
ಆದುದಿಷ್ಟು. ವಿಟ್ಲದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಕಡುಬಡತನದಲ್ಲಿ ಜೀವನ ಮಾಡುತ್ತಿದ್ದರು. ಆ ಹೆಣ್ಣುಮಗಳ ಬದುಕಿನ ದಾರುಣತೆಯ ಕುರಿತು ಪ್ರಸಾದ್‌, ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದರು. ಅವರ ಲೇಖನಕ್ಕೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್‌. ಮಹಮ್ಮದ್‌ ನೆರವು ನೀಡಲು ಮುಂದಾದರು. ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ, ಮಹಿಳೆಗೆ ಮನೆ ಕಟ್ಟಿಕೊಡಲು ನಿರ್ಧರಿಸಲಾಯಿತು. ದೇರಳಕಟ್ಟೆಯ ಮರದ ಮಿಲ್‌ನ ಮಾಲೀಕರೊಬ್ಬರು ಪ್ರಸಾದ್‌ ಅವರನ್ನು ಸಂಪರ್ಕಿಸಿ – ‘ಹಿಂದೂ ಆದ ನೀವು ನಮ್ಮ ಸಮುದಾಯದ ಮಹಿಳೆಗೆ ಇಷ್ಟು ನೆರವಾಗುವಾಗ ನಾವೂ ನೆರವಾಗುವುದು ಧರ್ಮ ಅಲ್ಲವೇ’ ಎಂದು ಹೇಳಿ, ಸುಮಾರು ಒಂದೂಕಾಲು ಲಕ್ಷ ರೂಪಾಯಿ  ಮೌಲ್ಯದ ಮರಮಟ್ಟಿನ ನೆರವು ನೀಡಿದರು. ಊರಿನ ಹಲವರು ವಿವಿಧ ರೀತಿಯ ವಸ್ತುಗಳನ್ನು ನೀಡಿ ಸಹಾಯ ಮಾಡಿದರು. ಇದೆಲ್ಲ ನಡೆದುದು 2013ರಲ್ಲಿ. ಅದೇ ವರ್ಷ ನವೆಂಬರ್‌ 29ರಂದು ಮನೆಯ ಮುಕ್ತಾಯದ ಹಂತದ ಕೆಲಸಗಳು ನಡೆಯಬೇಕಿತ್ತು. ಆದರೆ ಆದುದೇ ಬೇರೆ. 
 
ನ. 27ರಂದು ಪ್ರಸಾದ್‌ ಅವರು ಒಂದು ಶಾಲೆಯಲ್ಲಿದ್ದಾಗ 50ಕ್ಕೂ ಹೆಚ್ಚು ಮುಸ್ಲಿಂ ಯುವಕರ ದಂಡೊಂದು ಅವರ ಮೇಲೆ ದಾಳಿ ಮಾಡಿತು. 
 
‘ಆ ಹುಡುಗರೆಲ್ಲ ಹಿಂದಿನ ದಿನವಷ್ಟೇ ರಸ್ತೆ ರಿಪೇರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಅವರ ಸಾಮಾಜಿಕ ಕಳಕಳಿ ಕುರಿತು ವರದಿಯನ್ನೂ ನಾನು ಮಾಡಿದ್ದೆ. ಆದರೆ ಮರುದಿನವೇ ನನ್ನ ಚಾರಿತ್ರ್ಯ ಪ್ರಶ್ನಿಸಿ ಅವರು ಹೊಡೆದಿದ್ದರು’ ಎನ್ನುತ್ತಾರೆ ಪ್ರಸಾದ್‌. 
 
‘ಬಡ ಮಹಿಳೆಯೊಬ್ಬರಿಗೆ ನೆರವಿನ ಅಗತ್ಯವಿದೆ ಎಂದು ನಾನು ಲೇಖನ ಬರೆದಿದ್ದೆ. ಆ ಮಹಿಳೆ ಮುಸ್ಲಿಂ ಅಥವಾ ಹಿಂದೂ ಎಂದು ಗಮನಿಸದೇ ಮಾನವೀಯತೆಯಿಂದ ನೆರವಾಗಲು ಜಿಲ್ಲೆಯ ಎಷ್ಟೊಂದು ಜನರು ಮುಂದೆ ಬಂದಿದ್ದರು! ಅದು ಸುದ್ದಿಯೇ ಆಗಲಿಲ್ಲ. ನನ್ನ ಮೇಲೆ ನಡೆದ ಹಲ್ಲೆ ಸುದ್ದಿಯಾಗಿ ಎಲ್ಲರ ಮನಸ್ಸಿನಲ್ಲಿ ಕಹಿ–ವಿಷ ತುಂಬುವಂತಾಯಿತು’. ಪ್ರಸಾದ್‌ ಮಾತು ನಿಲ್ಲಿಸಿದರು.
 
‘ಮುಸ್ಲಿಂ ಮಹಿಳೆಗೆ ಸಹಾಯ ಮಾಡಲು ನೀನ್ಯಾರು’ ಎಂದು ದಾಳಿಕೋರರು ಪ್ರಸಾದ್‌ ಮೇಲೆ ಹಲ್ಲೆ ನಡೆಸಿದ್ದರು. ಪ್ರಜ್ಞೆ ತಪ್ಪಿದ ಅವರನ್ನು ರಿಕ್ಷಾವೊಂದರಲ್ಲಿ ಹಾಕಿಕೊಂಡು ಮಹಿಳೆಯ ಮನೆಗೆ ಕರೆತರಲಾಗಿತ್ತು. ಅಷ್ಟರಲ್ಲಿ ಪೊಲೀಸರು ಬಂದಿದ್ದರು. ಪ್ರಸಾದ್‌ಗೆ ಮಿದುಳಿನಲ್ಲಿ ತೀವ್ರಸ್ರಾವವಾಗಿ ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ, ಆಂಬುಲೆನ್ಸ್‌ ಅನ್ನೂ ತಡೆಯಲಾಯಿತು. ಕೊನೆಗೆ ಬೇರೊಂದು ವಾಹನದಲ್ಲಿ ಪ್ರಸಾದ್‌ರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. 14 ದಿನಗಳವರೆಗೆ ಅವರಿಗೆ ಪ್ರಜ್ಞೆ ಬಂದಿರಲಿಲ್ಲ. ಅತ್ತ ಮಹಿಳೆ ಮತ್ತು ಆಕೆಯ ಮಗಳ ಮೇಲೂ ಹಲ್ಲೆ ನಡೆಯಿತು. 
 
ಈಗಲೂ ಪ್ರಸಾದ್‌ ಆರೋಗ್ಯ ಸರಿಯಾಗಿಲ್ಲ. ಅವರ ಬೆನ್ನುಮೂಳೆಯಲ್ಲಿ ಮೂರು ಡಿಸ್ಕ್‌ಗಳು ತುಂಡಾಗಿವೆ. ಮಿದುಳಿನಲ್ಲಿ ಸ್ರಾವವಾಗಿ ಹೆಪ್ಪುಗಟ್ಟಿದೆ. ಕಾಲುಗಳಿಗೂ ತೊಂದರೆ ಆಗಿದೆ. 
 
‘ಮಹಿಳೆಯ ಮಗಳೊಂದಿಗೆ ನನಗೆ ಅನೈತಿಕ ಸಂಬಂಧವಿದೆ ಎಂದು ಬಿಂಬಿಸುವುದು ನನ್ನ ಮೇಲೆ ದಾಳಿ ಮಾಡಿದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ಸದಸ್ಯರ ಉದ್ದೇಶವಾಗಿತ್ತು. ಅಷ್ಟರಲ್ಲಿ ಪೊಲೀಸರು ಬಂದಿದ್ದರಿಂದ ನಾನು ಸುಳ್ಳಿನ ಕಂತೆಯಿಂದ ಪಾರಾದೆ’ ಎನ್ನುತ್ತಾರೆ ಪ್ರಸಾದ್‌. 
 
ಹೆಣ್ಣುಮಕ್ಕಳೆಂದರೆ ಮನೆಯೊಳಗೆ ಇರಬೇಕು ಎಂಬುದು ನಮ್ಮ ಸಮಾಜದಲ್ಲಿ ಈಗಲೂ ಚಾಲ್ತಿಯಲ್ಲಿರುವ ಜನಪ್ರಿಯ ಪರಿಕಲ್ಪನೆ. ಇದು ಜಾತಿ, ಧರ್ಮ, ದೇಶ–ಕಾಲವನ್ನು ಮೀರಿ ಸಾವಿರಾರು ವರ್ಷಗಳಿಂದ ಜೀವಂತವಾಗಿದೆ. ಸಂಸ್ಕೃತಿ ಉಳಿಯಬೇಕಾದರೆ, ಮನೆತನದ ಮರ್ಯಾದೆ ಉಳಿಯಬೇಕಾದರೆ ಹೆಣ್ಣುಮಕ್ಕಳು ಮನೆಯೊಳಗಿರಬೇಕು ಎಂಬ ಪುರುಷ ಪ್ರಧಾನ ಧೋರಣೆ ಈ ಪರಿಕಲ್ಪನೆಯಲ್ಲಿದೆ. ಇದೇ ಕಾರಣಕ್ಕೆ ‘ಸುಧಾರಣಾವಾದಿ’ಗಳು ‘ಜಗತ್ತಿನಲ್ಲಿ ಹೆಣ್ಣು ದಲಿತೆ’ ಎಂದು ಹೇಳುತ್ತಾರೆ. ಪ್ರಸಾದ್‌ ಅವರ ಸಂದರ್ಭದಲ್ಲಿ ಆದ ದಾಳಿಯ ಹಿಂದೆ ಇರುವುದು ಕೂಡ ಇದೇ ಮನಃಸ್ಥಿತಿ.
 
2012ರಲ್ಲಿ ಮಂಗಳೂರಿನಲ್ಲಿ ನಡೆದ ‘ಹೋಮ್‌ಸ್ಟೇ ಗಲಾಟೆ’ಯನ್ನು ಗಮನಿಸಿದರೆ ಇದು ಮತ್ತಷ್ಟು ಸತ್ಯವೆನಿಸುತ್ತದೆ. ಅಲ್ಲಿ ಹಿಂದೂ ಮುಸ್ಲಿಂ ಎಂಬ ದ್ವೇಷಕ್ಕೆ ಕಾರಣವಿರಲಿಲ್ಲ. ಅಲ್ಲಿದ್ದುದು ‘ಹೆಣ್ಣುಮಕ್ಕಳು ಹೀಗಿರಬಾರದು’ ಎಂಬ ಆಕ್ಷೇಪ.
 
ದಾಳಿಕೋರರ ಕ್ರೌರ್ಯ–ಅತಿರೇಕ
ಒಂದಷ್ಟು ಹುಡುಗ–ಹುಡುಗಿಯರು ಹೋಮ್‌ಸ್ಟೇಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದರು. ಸಂಜೆ ವೇಳೆಗೆ ಕೇಕ್‌, ಹೂವು, ಉಡುಗೊರೆಗಳೊಂದಿಗೆ ಹೋಮ್‌ಸ್ಟೇಗೆ ಬಂದ ಯುವಕ–ಯುವತಿಯರ ಗುಂಪಿನ ಮೇಲೆ ಒಮ್ಮಿಂದೊಮ್ಮೆಗೇ ಸಂಸ್ಕೃತಿಯ ರಕ್ಷಕರು ಅಸಹ್ಯ ರೀತಿಯಲ್ಲಿ ದಾಳಿ ಮಾಡಿದ್ದರು. ಸುದ್ದಿ ತಿಳಿದು ಅಲ್ಲಿಗೆ ತೆರಳಿದ್ದ ಟಿ.ವಿ ವಾಹಿನಿಯ ಕ್ಯಾಮೆರಾದಲ್ಲಿ ದಾಳಿಕೋರರ ಹೀನ ಮನಸ್ಥಿತಿ ಅನಾವರಣವಾಗಿತ್ತು.
 
ಹೆಣ್ಣುಮಕ್ಕಳನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದ ದಾಳಿಕೋರರು ‘ನಾವೇ ದಾಳಿ ಮಾಡಿದ್ದು’ ಎಂದು ಹೆಮ್ಮೆಯಿಂದ–ಕ್ರೌರ್ಯದಿಂದ ಹೇಳಿಕೊಂಡಿದ್ದರು. 
ಹುಡುಗಿಯರ ಕೆನ್ನೆಗೆ ಬಾರಿಸುವ ವಿಡಿಯೊ ತುಣುಕುಗಳು ಟಿ.ವಿಗಳಲ್ಲಿ ಪದೇಪದೇ ಪ್ರಸಾರವಾದವು. ಕರಾವಳಿಯ ದುಃಸ್ಥಿತಿಯನ್ನು ಕಂಡು ದೇಶವೇ ಬೆಚ್ಚಿಬೀಳುವಂತಾಯಿತು. 2009ರಲ್ಲಿ ಮಂಗಳೂರಿನ ‘ವುಡ್‌ಸೈಡ್‌ ಹೋಟೆಲ್‌’ನ ‘ಅಮ್ನೇಶಿಯಾ ಪಬ್‌’ನಲ್ಲಿ ಹುಡುಗಿಯರ ಮೇಲೆ ಇಂತಹುದೇ ದಾಳಿ ನಡೆದಿತ್ತು. ಭಾರತೀಯ ಮೌಲ್ಯಗಳನ್ನು ಮೀರಿ ಹುಡುಗಿಯರು ಪಬ್‌ಗೆ ಬಂದಿದ್ದಾರೆ ಎಂದು ಆಕ್ಷೇಪಿಸಿ ಶ್ರೀರಾಮಸೇನೆ ಸಂಘಟನೆಯ ಸದಸ್ಯರು ಹುಡುಗಿಯರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದರು. ಇಬ್ಬರು ಹುಡುಗಿಯರನ್ನು ಆಸ್ಪತ್ರೆಗೂ ದಾಖಲು ಮಾಡುವಷ್ಟು ಕ್ರೂರವಾಗಿ ಹಲ್ಲೆ ನಡೆದಿತ್ತು. 
ಹೋಮ್‌ಸ್ಟೇ ದಾಳಿಯಲ್ಲಿಯೂ ದಾಳಿಕೋರರ ಕ್ರೌರ್ಯ ಮಿತಿಮೀರಿತ್ತು. ‘ನಾವು ಬರ್ತ್‌ಡೇ ಆಚರಣೆಗೆಂದು ಸೇರಿದ್ದೆವು. ಹಠಾತ್ ಆಗಿ ಒಂದಷ್ಟು ರೌಡಿಗಳು ಬಂದು ನಮ್ಮನ್ನು ಅವಾಚ್ಯವಾಗಿ ನಿಂದಿಸಿದರು. ಹೊಡೆಯಲು ಶುರು ಮಾಡಿದಾಗ ದಿಕ್ಕೇ ತೋಚಲಿಲ್ಲ. ಹೊಡೆತದಿಂದ ಪಾರಾಗಲು ಓಡುವಾಗ ಕ್ಯಾಮೆರಾ ನೋಡಿ ಮತ್ತಷ್ಟು ಕಂಗಾಲಾದೆವು. ಆ ದಿನದ ಅಸಹ್ಯ ಘಟನೆಯ ಬಳಿಕವೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವುದಾಗಲೀ, ಪೊಲೀಸರಿಗೆ ದೂರು ಕೊಡಲು ಹೋಗುವುದಾಗಲೀ ಎಷ್ಟು ಕಷ್ಟವೆನಿಸಿತ್ತು ಎಂದರೆ ಅವುಗಳನ್ನು ವಿವರಿಸಲು ಪದಗಳೇ ಇಲ್ಲ...’ ಎನ್ನುತ್ತಾರೆ ಒಬ್ಬರು ಸಂತ್ರಸ್ತೆ.
 
ಹೋಮ್‌ಸ್ಟೇ ಘಟನೆಯ ಬಳಿಕ ಅದನ್ನು ವಿರೋಧಿಸಿ ಸಾಲು ಸಾಲು ಪ್ರತಿಭಟನೆಗಳು ಕರಾವಳಿಯಲ್ಲಿ ನಡೆದವು. ವಿದ್ಯಾರ್ಥಿಗಳು, ಮಾನವ ಹಕ್ಕು ಕಾರ್ಯಕರ್ತರು, ಕೋಮುವಾದವನ್ನು ವಿರೋಧಿಸುವ ಎಲ್ಲರೂ ಒಕ್ಕೊರಲ ಧ್ವನಿಯಲ್ಲಿ ‘ಅನೈತಿಕ ಪೊಲೀಸ್‌ಗಿರಿ’ ವಿರೋಧಿಸಿದರು. ಸುಮಾರು 40 ಮಂದಿಯ ವಿರುದ್ಧ ಪ್ರಕರಣಗಳು ದಾಖಲಾದವು. ಆ ಪ್ರಕರಣವಿನ್ನೂ ಮಂಗಳೂರಿನ ನ್ಯಾಯಾಲಯದಲ್ಲಿದೆ. ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. 
 
ಭಯದ ಕಹಿನೆರಳು
ಮಾದಕದ್ರವ್ಯಕ್ಕೆ ಈಡಾಗುವ ಭಯ ಮತ್ತು ಮತಾಂತರದ ಭಯದ ಹೆಸರಿನಲ್ಲಿ ಕರಾವಳಿಯಲ್ಲಿ ಅಸಂಬದ್ಧ ಘಟನೆಗಳು ನಡೆಯುತ್ತಿವೆ. ಮುಸ್ಲಿಂ ಸ್ನೇಹಿತೆಯ ಹೆರಿಗೆಯಾದಾಗ ಆಕೆಯನ್ನು ನೋಡಲು ಬಂದ ಹಿಂದೂ ಸ್ನೇಹಿತೆಯನ್ನು ದಬಾಯಿಸಲಾಗಿತ್ತು. ತರುಣಿಯೊಬ್ಬಳು ಅಣ್ಣನೊಡನೆ ಕಾರಿನಲ್ಲಿ ತೆರಳುವಾಗ, ಆತ ಭಿನ್ನಕೋಮಿನವನೇ ಇರಬಹುದೇನೋ ಎಂದು ಊಹಿಸಿ ಅವರಿಬ್ಬರನ್ನು ಸುತ್ತುವರಿದು ಗಲಭೆ ಸೃಷ್ಟಿಸಲಾಗಿತ್ತು. ಭಿನ್ನ ಕೋಮಿನ ಹುಡುಗಿಯರೊಡನೆ ಸ್ನೇಹ ಬೇಡ ಎಂದು ನಿಷೇಧಿಸಿದ ಘಟನೆಗಳು, ಪ್ರಾಥಮಿಕ ಶಾಲೆಯ ಮುಸ್ಲಿಂ ಹೆಣ್ಣುಮಕ್ಕಳು ಸ್ಕೂಲ್‌ಡೇಯಲ್ಲಿ ನೃತ್ಯ ಮಾಡಬಾರದು ಎಂಬ ಹೇರಿಕೆ, ಭಿನ್ನಕೋಮಿನ ಸ್ನೇಹಿತರೊಡನೆ ಕಾಲೇಜಿನಿಂದ ಪಿಕ್‌ನಿಕ್‌ ಹೋಗಬಾರದು ಎಂಬ ಆಕ್ಷೇಪ, ಎರಡನೇ ತರಗತಿಯ ವಿದ್ಯಾರ್ಥಿನಿಯರಿಗೂ ಬುರ್ಖಾ ಕಡ್ಡಾಯಗೊಳಿಸುವ ಘಟನೆಗಳು – ಹೀಗೆ, ಕರಾವಳಿಯಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ನಡೆದಿರುವ ಘಟನೆಗಳು ಒಂದೆರಡಲ್ಲ.
 
ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಕರಾವಳಿ ಜನರ ಮುನ್ನಡೆ ಹಾಗೂ ಕೊಲ್ಲಿರಾಷ್ಟ್ರಗಳಿಗೆ ತೆರಳಿ ಉದ್ಯೋಗ ಸಂಪಾದಿಸಿ ಹಣಕಾಸಿನ ಸುಸ್ಥಿತಿಯನ್ನು ಪಡೆದುಕೊಂಡ ಕುಟುಂಬಗಳು ತಮ್ಮ ಧರ್ಮಗಳ ಬಗ್ಗೆಯೂ ಅತಿಯಾದ ವಿಪರೀತ ಧೋರಣೆಯ ಕಾಳಜಿ ಹೊಂದಿವೆ. ಎಲ್ಲೋ ಮೂಡುವ ಅಭದ್ರತೆ, ಮತ್ತೆಲ್ಲೋ ಅದನ್ನು ಮೀರುವ ಪ್ರಯತ್ನವಾಗಿ ತೋರುವ ಧಾರ್ಮಿಕ ವೈಭವ, ನಮ್ಮ ಧರ್ಮವಲಯದ ಸದಸ್ಯರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಆತಂಕ, ಅದಕ್ಕಾಗಿ ಮೂಗಿನ ನೇರಕ್ಕೆ ತೋಚಿದ್ದನ್ನೆಲ್ಲ ಮಾಡುವ ಧರ್ಮ ಸಂರಕ್ಷಕರು, ಮತಾಂತರದ ಪ್ರಕರಣಗಳು ಕಂಡಾಗ ಉರಿದುಬೀಳುವವರು, ಮತಾಂತರ ಆದೀತೇನೋ ಎಂದು ಕಲ್ಪಿಸಿಕೊಂಡು ತೀವ್ರವಾದ ಮುನ್ನೆಚ್ಚರಿಕೆ ತೆಗೆದುಕೊಳ್ಳುವವರು ಕರಾವಳಿಯಲ್ಲಿ ಪರಿಸ್ಥಿತಿಯನ್ನೇ ಕಕ್ಕಾಬಿಕ್ಕಿ ಮಾಡಿಬಿಡುವುದುಂಟು. ಅದರ ಪರಿಣಾಮಗಳು ಹಲವು ರೀತಿ ಅನಾವರಣಗೊಂಡಿವೆ. ಅನೈತಿಕ ಪೊಲೀಸ್‌ಗಿರಿ, ಗೋ ಸಂರಕ್ಷಣೆ, ನಮ್ಮ ಧರ್ಮ ಮೇಲು ಎಂದು ಸಾರುವುದನ್ನೇ ಉದ್ದೇಶವಾಗಿರಿಸಿಕೊಂಡ ಬೃಹತ್‌ ಧಾರ್ಮಿಕ ಸಮಾವೇಶಗಳು – ಈ ಎಲ್ಲ ಪ್ರಕ್ರಿಯೆಯಲ್ಲಿ ಆಗುವ ಚಿಕ್ಕಪುಟ್ಟ ಏರುಪೇರುಗಳೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತವೆ.
 
ಬೃಹತ್‌ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಉದ್ಯೋಗಿ ಬಳಿ ಸಹೋದ್ಯೋಗಿಯೊಬ್ಬಳು ಹಣದ ಸಹಾಯ ಕೇಳುತ್ತಾಳೆ. ಅವಳು ಹಿಂದೂ ಹುಡುಗಿ. ಕೆಲಸಕ್ಕೆ ರಜೆ ಹಾಕಿದ್ದ ಅಹ್ಮದ್‌, ತನ್ನ ಸಹೋದ್ಯೋಗಿಯ ಕೋರಿಕೆ ಕೇಳಿ ಹಣ ಕೊಡಲು ಕಾರಿನಲ್ಲಿ ತೆರಳುತ್ತಾನೆ. ಆಕೆ ರಸ್ತೆ ದಾಟಿ ಆತನ ಕಾರಿನ ಬಳಿ ಬಂದು ಹಣ ತೆಗೆದುಕೊಳ್ಳುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಗುಂಪೊಂದು ಪ್ರತ್ಯಕ್ಷವಾಗುತ್ತದೆ. ಅಹ್ಮದ್‌ನನ್ನು ಕಾರಿನಿಂದ ಕೆಳಗೆಳೆದು, ಸಮೀಪದ ವಿದ್ಯುತ್‌ ಕಂಬಕ್ಕೆ ಕಟ್ಟಿ, ಬಟ್ಟೆಯನ್ನು ಕಿತ್ತು ಥಳಿಸಲಾಗುತ್ತದೆ. ಹೀಗೆ ನಾಲ್ಕು ಸಾಲುಗಳಲ್ಲಿ ಬರೆದುಬಿಡಬಹುದಾದ ಈ ಘಟನೆಯ ಪರಿಣಾಮ ಚಿಕ್ಕದಲ್ಲ. ‘ಘಟನೆಯ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರೂ ತುಂಬ ಖಿನ್ನನಾಗಿದ್ದ ಹುಡುಗನನ್ನು ಸುಧಾರಿಸುವುದು ಸುಲಭವಿರಲಿಲ್ಲ’ ಎನ್ನುತ್ತಾರೆ ಆತನ ಪೋಷಕರು. ‘ಪ್ರೇಮ ಪ್ರಕರಣವೆಂದೋ ಮತಾಂತರದ ಪ್ರಯತ್ನವೆಂದೋ ಈ ಘಟನೆಯನ್ನು ಬಿಂಬಿಸಿ ಅತಿರೇಕಕ್ಕೆ ಕೊಂಡೊಯ್ದುದರ ಹಿಂದೆ ಇರುವ ನೈಜ ಕಾರಣವೇ ಬೇರೆ. ಇದು ಹಿಂದೂ ಮುಸ್ಲಿಂ ವಿಚಾರ ಅಲ್ಲವೇ ಅಲ್ಲ. ಸಗಟು ಮಾರಾಟ ವಿಭಾಗದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಹುಡುಗ ಯಾವುದೇ ಅವ್ಯವಹಾರಕ್ಕೆ ಅವಕಾಶ ಕೊಟ್ಟಿರಲಿಲ್ಲ. ಆದ್ದರಿಂದ ಇತರ ಉದ್ಯೋಗಿಗಳು ತಮ್ಮ ಅವ್ಯವಹಾರವನ್ನು ಮುಚ್ಚಿಡಲು ಈ ರೀತಿ ಸಮಯ ಕಾದು ಆತನಿಗೆ ಹೊಡೆದಿದ್ದಾರೆ. ಅವನನ್ನು ಅಲ್ಲಿಂದ ಕೆಲಸ ಬಿಟ್ಟು ಹೋಗುವಂತೆ ಮಾಡುವುದು ಅವರ ಉದ್ದೇಶವಾಗಿತ್ತೇ ಹೊರತು, ಧರ್ಮರಕ್ಷಣೆಯೂ ಅಲ್ಲ, ಹುಡುಗಿಯ ರಕ್ಷಣೆಯೂ ಅಲ್ಲ’ ಎನ್ನುತ್ತಾರೆ ಆತನ ಸಂಬಂಧಿಕರು. ಹೀಗೆ ಯಾವುದೋ ಕೆಟ್ಟ ಉದ್ದೇಶ, ಹಣ ಗಳಿಕೆಯ ಉದ್ದೇಶಗಳಿಗೂ ಅನೈತಿಕ ಪೊಲೀಸ್‌ಗಿರಿಯನ್ನೇ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಇದೆ. 
 
ಇತ್ತೀಚೆಗಷ್ಟೇ ನಗರದ ಹೊರವಲಯದ ಮಿಜಾರು ಬಳಿಯ ಹಳ್ಳಿಯೊಂದರಲ್ಲಿ ಮಾರಾಮಾರಿಯ ಘಟನೆ ನಡೆಯಿತು. ಕಟ್ಟಡ ಕಾರ್ಮಿಕರ ಮನೆಯಲ್ಲಿ ಒಡಿಶಾ ಮೂಲದ ದೇವು ಯಾನೆ ಮುನೀರ್‌ ಎನ್ನುವವರು ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು. ಪತ್ನಿ ಮುಸ್ಲಿಂ ಹೆಂಗಸು. ಅಕ್ಕಪಕ್ಕದವರೊಂದಿಗೆ ಸಲುಗೆಯಿಂದ ಇರುವುದನ್ನು ಆಕ್ಷೇಪಿಸಿರುವ ಮುಸ್ಲಿಂ ಯುವಕರ ದಂಡು ಒಂದು ರಾತ್ರಿ ಆ ಕುಟುಂಬದ ಮೇಲೆ ದಾಳಿ ನಡೆಸಿದೆ. ‘ಮುಸ್ಲಿಮರ ಮನೆಗೆ ಹಿಂದೂಗಳು ಏಕೆ ಬರಬೇಕು’ ಎನ್ನುವುದು ದಾಳಿ ನಡೆಸಿದವರ ಆಕ್ಷೇಪ. ‘ಇಂತಹ ಘಟನೆಗಳು ನಡೆದಾಗ ಪೊಲೀಸರು ಅಪರಾಧಿಗಳಿಗೆ ಶಿಕ್ಷೆ ಕೊಡಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ನಾಗರಿಕರು ಕೂಡ ಇದನ್ನು ವಿರೋಧಿಸಬೇಕು. ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಧ್ವನಿ ಜೋರಾದಾಗ ಅಂತಹ ಕೆಲಸವನ್ನು ಮತ್ತೊಮ್ಮೆ ಮಾಡಲು ಅಪರಾಧಿ ಅಳುಕುತ್ತಾನೆ’ ಎನ್ನುತ್ತಾರೆ ಪೊಲೀಸ್‌ ಕಮಿಷನರ್‌ ಚಂದ್ರಶೇಖರ್‌. 
 
**
ಬಗೆಹರಿಯದ ಪ್ರಶ್ನೆಗಳು
ಎಷ್ಟೋ ಸಂದರ್ಭಗಳಲ್ಲಿ ಪೊಲೀಸ್‌ ಠಾಣೆಯ ಮೆಟ್ಟಿಲೇರದೇ ಮುಕ್ತಾಯಗೊಳ್ಳುವ ಪ್ರಕರಣಗಳೂ ನಡೆಯುತ್ತವೆ. ಕೆ.ಜೆ. ಜಾರ್ಜ್‌ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ, ಜಿಲ್ಲೆಯಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಸುವ ಆರೋಪಿಗಳನ್ನು ಗಡೀಪಾರು ಮಾಡುವಂತೆ ಇಲ್ಲಿನ ಪೊಲೀಸರು ಮತ್ತು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಮರುದಿನವೇ ಮಂಗಳೂರಿನ ‘ಸಿಟಿ ಸೆಂಟರ್ ಮಾಲ್‌’ಗೆ ಇಬ್ಬರು ಯುವತಿಯರೊಂದಿಗೆ ತೆರಳಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ವರದಿಯಾಗಿತ್ತು. ಕಾಲೇಜು ವಿದ್ಯಾರ್ಥಿ ಅರ್ಜುನ್ ಎಂಬಾತ ನಗರದ ಕೆ.ಎಸ್.ರಾವ್ ರಸ್ತೆಯ ‘ಸಿಟಿ ಸೆಂಟರ್ ಮಾಲ್‌’ಗೆ ಇಬ್ಬರು ಯುವತಿಯರೊಂದಿಗೆ ತೆರಳಿದ್ದ. ಇವರಲ್ಲಿ ಒಬ್ಬಳು ಯುವತಿ ಭಿನ್ನ ಕೋಮಿನವಳಾಗಿದ್ದಳು. ಇದನ್ನು ಗಮನಿಸಿದ ಕೆಲವರು ಯುವಕನನ್ನು ತಡೆದು ಪ್ರಶ್ನಿಸಿ, ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದಾರೆ ಎಂಬುದು ವರದಿ. ಆದರೆ ಸಮರ್ಪಕ ಉತ್ತರ ಎಂದರೇನು... ಎನ್ನುವುದು ಬಗೆಹರಿಯದ ಪ್ರಶ್ನೆ.  
 
ಅನೈತಿಕತೆ ಹೆಸರಿನಲ್ಲಿ ಕರಾವಳಿಯಲ್ಲಿ ನಡೆಯುತ್ತಿರುವ ದುಂಡಾವರ್ತಿಯ ಸಮಸ್ಯೆಗೆ ಆಳುವ ಸರ್ಕಾರದ ದ್ವಿಮುಖ ಧೋರಣೆಯೇ ಕಾರಣ ಎನ್ನುವುದು ಪಾಪ್ಯುಲರ್‌ ಫ್ರಂಟ್ ಆಫ್‌ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಅಬ್ದುಲ್‌ ಖಾದರ್‌ ಅನಿಸಿಕೆ. ‘ಜಿಲ್ಲೆಯಲ್ಲಿ ಯಾವುದೇ ಬಲವಂತದ ಮತಾಂತರ ಆಗಿಲ್ಲ. ಕಟ್ಟುಕತೆಗಳನ್ನು ಸೃಷ್ಟಿಸಿ ಅವನ್ನು ಮತಾಂತರದ ಪ್ರಕರಣಗಳು ಎಂದು ಉಲ್ಲೇಖಿಸಲಾಗುತ್ತದೆ. ಪೊಲೀಸರು ಸರಿಯಾಗಿ ತನಿಖೆ ಮಾಡಿದರೆ ನಿಜ ವಿಷಯ ಆಚೆ ಬರುತ್ತದೆ. ಮತಗಳಿಸಲು, ಜಿಲ್ಲೆಯ ಜನತೆ ಮನಸ್ಸು ಕೆಡಿಸಲು ಮುಂದಾಗುವ ಪ್ರಯತ್ನಗಳನ್ನು ಪೊಲೀಸರು ತಡೆಯಬೇಕು’ ಎನ್ನುವುದು ಅವರ ಆಗ್ರಹ. 
 
ಆಳುವ ಸರ್ಕಾರ ದಿಟ್ಟ ಧೋರಣೆ ತಳೆಯದಿದ್ದರೆ ಸಮಸ್ಯೆ ಬಗೆಹರಿಯದು ಎನ್ನುವುದನ್ನು ‘ವಕೀಲರ ಸಂಘ’ದ ಅಧ್ಯಕ್ಷ ಎಸ್‌.ಪಿ. ಚಂಗಪ್ಪ ಅವರೂ ಒಪ್ಪಿಕೊಳ್ಳುತ್ತಾರೆ. ಕಾಣೆಯಾದ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಅದಕ್ಕಾಗಿ ಪ್ರತ್ಯೇಕ ದಳ ರೂಪಿಸಬೇಕು. ಆಗ ಮತಾಂತರದ ಆರೋಪದ ಸತ್ಯಾಸತ್ಯತೆ ಬಯಲಾಗುತ್ತದೆ ಎಂದು ಹೇಳುತ್ತಾರೆ. 
 
‘ಜಿಲ್ಲೆಯ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆದಿವೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ, ಮಂಗಳೂರಿನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರು, ಉದ್ಯಮಿಗಳು, ಆಡಳಿತ ಕ್ಷೇತ್ರದ ಪ್ರಮುಖ ಅಧಿಕಾರಿಗಳು, ಧಾರ್ಮಿಕ ಮುಖಂಡರ ಸಭೆ ಕರೆಯಲಾಗಿತ್ತು. ಎರಡೂ ಕೋಮಿನವರು ‘ಇನ್ನು ಮುಂದೆ ಪರಸ್ಪರ ದ್ವೇಷದ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಏನೇ ಸಮಸ್ಯೆ ಬಂದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು’ ಎನ್ನುವ ನಿರ್ಣಯ ತೆಗೆದುಕೊಂಡಿದ್ದರು. ಆದರೆ ಈ ನಿರ್ಣಯದ ಪಾಲನೆಯೇ ಆಗಲಿಲ್ಲ ಎನ್ನುವುದು ಬೇಸರದ ಸಂಗತಿ’ ಎನ್ನುತ್ತಾರೆ ಬಜರಂಗ ದಳದ ಮುಖಂಡ ಶರಣ್‌ ಪಂಪ್‌ವೆಲ್‌. 
 
ಧಾರ್ಮಿಕ ಮುಖಂಡರ ಮಟ್ಟದಲ್ಲಿ ನಡೆಯುವ ಮಾತುಕತೆಗಳು ವಿಫಲವಾಗುವುದೇಕೆ ಎಂಬ ವಿಚಾರಕ್ಕೆ ವಿಶ್ವಹಿಂದೂ ಪರಿಷತ್‌ನ ಮುಖಂಡ ಪ್ರೊ. ಎಂ.ಬಿ. ಪುರಾಣಿಕ್‌ ಉತ್ತರಿಸುವುದು ಹೀಗೆ. 
 
‘ದಕ್ಷಿಣ ಕನ್ನಡದಲ್ಲಿ ಗಲಭೆಯ ಆರೋಪಿಗಳನ್ನು ಬಂಧಿಸಿದ ಕೂಡಲೇ ಅಧಿಕಾರಿಗಳು ವರ್ಗವಾಗಿಬಿಡುತ್ತಾರೆ. ಇದನ್ನೆಲ್ಲ ಪರಿಶೀಲನಾ ದೃಷ್ಟಿಯಿಂದ ನೋಡುವವರಲ್ಲಿ ಆಕ್ರೋಶ ಮೂಡುವುದು ಸಹಜ. ರಾಜಕೀಯ ವಲಯದ ಮತ್ತು ಮಾಧ್ಯಮದ ಇಬ್ಬಗೆ ನೀತಿಯಿಂದ ಈ ಆಕ್ರೋಶ ಮತ್ತಷ್ಟು ಹೆಪ್ಪುಗಟ್ಟಿ ಕಾನೂನು ಕೈಗೆ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ಕಾನೂನನ್ನು ಕೈಗೆತ್ತಿಕೊಳ್ಳುವುದು ಯಾವ ಕಾರಣಕ್ಕೂ ಸರಿಯಲ್ಲ’. 
 
‘ರಾಜಕೀಯವನ್ನು ಹೊರಗಿಟ್ಟು, ಓಲೈಸುವಿಕೆಯನ್ನು ಕೈಬಿಟ್ಟು ಎಲ್ಲರೂ ನೆಮ್ಮದಿಯಿಂದ ಬಾಳುವೆ ಮಾಡುವಂತಹ ಪರಿಸ್ಥಿತಿ ಸೃಷ್ಟಿಸಲು ಎಲ್ಲ ಧರ್ಮದ ಮುಖಂಡರ ಸಭೆಯನ್ನು ಆಗಾಗ ಕರೆಯಬೇಕು. ಹಿಂದೂ ಧರ್ಮದಲ್ಲಿರುವ ಸಾವಿರಾರು ಸಮಸ್ಯೆಗಳು ಪರಿಹಾರ ಕಂಡುಕೊಂಡಿವೆ. ಇನ್ನೂ ಸಮಸ್ಯೆಗಳು ಹಲವಾರಿವೆ. ಅವುಗಳನ್ನು ಪರಿಹರಿಸುವತ್ತ ಮುಖ ಮಾಡಬೇಕೇ ಹೊರತು ಮತಾಂತರದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇತರ ಧರ್ಮಗಳಲ್ಲಿರುವ ಕೆಡುಕುಗಳ ಬಗ್ಗೆ ಮೌನವಾಗಿದ್ದುಕೊಂಡು ಕೇವಲ ಹಿಂದೂ ಧರ್ಮವನ್ನೇ ಗುರಿಯಾಗಿಸಿ ದಾಳಿ ಮಾಡುವುದು ಕೂಡ ಸರಿಯಲ್ಲ. ಅಲ್ಲದೆ, ಧರ್ಮಸೂಕ್ಷ್ಮವಾದ ಪ್ರದೇಶ ಎಂದ ಮೇಲೆ ಅಲ್ಲಿ ಮುಂಜಾಗ್ರತೆಯನ್ನೂ ತೆಗೆದುಕೊಳ್ಳುವುದು ಅನಿವಾರ್ಯ’ ಎನ್ನುವುದು ಪ್ರೊ. ಪುರಾಣಿಕ್‌ ಅನಿಸಿಕೆ. 
 
ಆದರೆ, ಸೌಹಾರ್ದತೆಯ ನೆಪದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿಯೂ ಪರಸ್ಪರ ನಿಂದನೆ ದೂಷಣೆಗಳೇ ಇರುತ್ತವೆ. ಆದ್ದರಿಂದ ಯುವಜನತೆ ಒಂದಲ್ಲ ಒಂದು ದಿಕ್ಕಿಗೆ ತಳ್ಳಲ್ಪಟ್ಟು ವಿಷದ ಕಾವು ಏರುತ್ತಲೇ ಸಾಗುತ್ತಿರುವುದನ್ನು ಮರೆಯುವಂತಿಲ್ಲ. ‘ಇಲ್ಲಿ ಕೋಮು ಸಂಘಟನೆಗಳು ಬಲಗೊಳ್ಳುವ ಬದಲು ಜಾತ್ಯತೀತ ಸಂಘಟನೆಗಳು ಬಲವಾಗಬೇಕು. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸಾಮೂಹಿಕ ಮದುವೆಯನ್ನೂ ಒಂದೇ ವೇದಿಕೆಯಲ್ಲಿ ನಡೆಸಬೇಕು ಎಂಬ ಕನಸು ನನ್ನದು’ ಎಂದು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಉಮರ್‌ ಯು.ಎಚ್‌. ಸುಂದರ ಕನಸೊಂದನ್ನು ಹಂಚಿಕೊಳ್ಳುತ್ತಾರೆ. ಅವರ ಕನಸು ನನಸಾಗಬೇಕಾದರೆ ಕೇವಲ ಅನೈತಿಕ ಪೊಲೀಸ್‌ಗಿರಿಯನ್ನು ವಿರೋಧಿಸಿದರೆ ಸಾಲದು. ಅನೈತಿಕ ಪೊಲೀಸ್‌ಗಿರಿ ಪರಿಕಲ್ಪನೆ ಹಿಂದೆ ಇರುವ ‘ಹೆಣ್ಣಿನ ದೇಹ ಮತ್ತು ಮಾನ ಕಾಪಾಡುವ’ ಪುರುಷ ಪ್ರಾಧಾನ್ಯ ಮತ್ತು ಯಜಮಾನಿಕೆಯನ್ನು ವಿರೋಧಿಸಬೇಕು ಎಂದು ಸಲಹೆ ಕೊಡುತ್ತಾರೆ ಚಿಂತಕ ಜಿ. ರಾಜಶೇಖರ್‌. 
 
ರಾಜಶೇಖರ್‌ ಅವರ ಮಾತಿಗೆ ಪೂರಕವಾಗಿ– ‘ಬಾಲ್ಯದಲ್ಲಿ ಹೆಣ್ಣುಮಕ್ಕಳಿಗೆ ಹೀಗಿರು ಹಾಗಿರು ಎಂದು ಹೇಳುವ ಬದಲು, ಗಂಡುಮಕ್ಕಳಿಗೆ ಹೇಗಿರಬೇಕು ಎಂಬ ತಿಳಿವಳಿಕೆ ನೀಡಬೇಕು. ಅವರ ಮನಸ್ಸಿನಲ್ಲಿ ಸೌಜನ್ಯ, ಮಾನವೀಯತೆಯ ಬೀಜ ಬಿತ್ತಿದರೆ, ಅವರು ಬೆಳೆದ ನಂತರ ಯಾವ ಧರ್ಮದ ಅಫೀಮೂ ಅವರನ್ನು ತೀರಾ ಕೆಳಮಟ್ಟಕ್ಕೆ ದೂಡದು’ ಎಂದು ಹಿರಿಯ ಲೇಖಕಿ ವೈದೇಹಿ ಹೇಳುತ್ತಾರೆ.  
 
**
ಹೆಣ್ಣಿನ ರಕ್ಷಣೆಯ ಹುಸಿ ಪರಿಕಲ್ಪನೆ
‘ಹೆಣ್ಣಿಗೆ ರಕ್ಷಣೆಯ ಅಗತ್ಯವಿದೆ ಎಂಬ ನಂಬಿಕೆಯನ್ನು ಪೋಷಿಸುತ್ತ ಧರ್ಮಗಳು ತಮ್ಮ ಅಸ್ತಿತ್ವವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತವೆ. ಗಂಡು ಮಕ್ಕಳೆಲ್ಲರೂ ಮಾನವೀಯತೆಯ ಪರಿಧಿಯೊಳಗೆ ಬಂದಾಗ ಹೆಣ್ಣುಮಕ್ಕಳನ್ನು ರಕ್ಷಿಸಬೇಕು ಎಂಬ ಪರಿಕಲ್ಪನೆಯೇ ಹುಸಿ ಅನಿಸುವುದಿಲ್ಲವೇ? ಪ್ರತಿಯೊಬ್ಬ ಮನುಷ್ಯನೂ ಒಳ್ಳೆಯ ಮತ್ತು ಕೆಟ್ಟ ಗುಣಗಳಿರುವ ಒಬ್ಬ ಜೀವಿಯಾಗಿ ಹೇಗೆ ಬಾಳುತ್ತಾನೋ, ಹೆಣ್ಣು ಕೂಡ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನೊಳಗೊಂಡ ವ್ಯಕ್ತಿಯಾಗಿ ಬಾಳುವುದು ಸಾಧ್ಯ. ಅಂತಿಮವಾಗಿ ಎಲ್ಲರೂ ಪರಿಪೂರ್ಣತೆಯತ್ತ, ಹೆಚ್ಚು ಮಾನವೀಯ ನಿಲುವಿನತ್ತ ಸಾಗುವುದೇ ಗುರಿ ಆದರೆ ಚೆನ್ನಾಗಿರುತ್ತದೆ’ ಎಂದು ಹಿರಿಯ ಲೇಖಕಿ ಸಾರಾ ಅಬೂಬಕ್ಕರ್‌ ಹೇಳುತ್ತಾರೆ. 
 
ಆದರೆ ಈ ಆದರ್ಶಮಯ ವಾತಾವರಣ ಸದ್ಯಕ್ಕೆ ನಮ್ಮ ಮುಂದಿಲ್ಲ. ಕರ್ನಾಟಕದ ಕರಾವಳಿ ಜಿಲ್ಲೆಗಳ ಮಟ್ಟಿಗಂತೂ ಇದು ಕನಸು. ಕರಾವಳಿ ಬಹುಧರ್ಮಗಳ, ಬಹುಭಾಷೆಯ ಮತ್ತು ಬಹುಸಂಸ್ಕೃತಿಯ ಸುಂದರ ಊರುಗಳ ಗುಚ್ಛ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಈ ಊರುಗಳಲ್ಲಿ ಬಹುತೇಕ ಒಂದೇ ರೀತಿಯ ಆಚಾರ ವಿಚಾರಗಳಿವೆ. ‘ಸೌರಮಾನ ಪದ್ಧತಿ’ಯ ಆಚರಣೆಯೇ ಪ್ರಧಾನವಾಗಿ ಕಾಣುವ, ವ್ಯಾಪಾರ ವಹಿವಾಟಿನಲ್ಲಿ ಕ್ರೈಸ್ತರೂ ಮುಸ್ಲಿಮರೂ ಜಿಎಸ್‌ಬಿ ಸಮುದಾಯವೂ ಸಕ್ರಿಯರಾಗಿರುವ, ವಿದೇಶಕ್ಕೆ ಹೋಗುವ ಗಂಡುಮಕ್ಕಳು ಮತ್ತು  ಊರ್ಮಿಳೆಯಂತೆ ಪತಿಯನ್ನು ಕಾಯುತ್ತಾ ಕೊರಗುವ ಸಾಲು ಸಾಲು ಹೆಣ್ಣುಮಕ್ಕಳು ಕರಾವಳಿಯಲ್ಲಿದ್ದಾರೆ. ಧಾರ್ಮಿಕ ಆಚರಣೆಗಳಲ್ಲಿಯೂ ವೈವಿಧ್ಯ ಇರುವ ಕರಾವಳಿಯ ಸೊಗಡು ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪ್ರಧಾನವಾಗಿ ಒಂದೇ ರೀತಿ ಗೋಚರಿಸುತ್ತದೆ.  
 
ಯಾವುದೇ ಧರ್ಮವಿರಲಿ, ಜಾತಿ ಇರಲಿ, ಪ್ರತಿ ಮನೆಯಲ್ಲಿನ ತುಡಿತ ಒಂದೇ ಆಗಿದೆ – ಮಕ್ಕಳಿಗೆ ನಮ್ಮ ಸಾಮರ್ಥ್ಯಕ್ಕೆ ಮೀರಿದ ಅತ್ಯುತ್ತಮ ಶಿಕ್ಷಣ ಕೊಡಬೇಕು ಎಂಬುದು. ಎಲ್ಲ ಸಮುದಾಯಗಳು ಪರಸ್ಪರ ಆರೋಗ್ಯಕರ ಸ್ಪರ್ಧಾತ್ಮಕ ರೀತಿಯಲ್ಲಿ ಶಿಕ್ಷಣದತ್ತ ಮುಖ ಮಾಡಿರುವುದು ಎದ್ದು ಕಾಣುತ್ತದೆ. ಹಾಗಾಗಿಯೇ ಶಿಕ್ಷಣದ ಮಟ್ಟಿಗೂ ಈ ಜಿಲ್ಲೆಗಳು ಒಂದು ಹೆಜ್ಜೆ ಮುಂದೆಯೇ. ಆದರೆ, ಹೀಗೆ ಶಿಕ್ಷಣ–ಉದ್ಯೋಗಕ್ಕಾಗಿ ಮನೆಯಿಂದ ಹೊರಬರುವವರನ್ನು ಮಾದಕದ್ರವ್ಯದ ಜಾಲದಲ್ಲಿ ಸಿಲುಕಿಸುವ, ಮತಾಂತರಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪ ಬಜರಂಗ ದಳ ಮತ್ತು ಹಿಂದೂ ಜಾಗರಣ ವೇದಿಕೆಯ ಮುಖಂಡರದ್ದು. 
 
‘ಹದಿಹರೆಯದ ಎಳೆ ಹುಡುಗಿಯರು ಪ್ರೀತಿಯ ಗುಂಗಿಗೆ ಬೀಳುವುದು ಸಹಜ. ಅಂತಹ ಸಂದರ್ಭದಲ್ಲಿ ಅವರಿಗೆ ಮಾದಕ ವಸ್ತುಗಳನ್ನು ನೀಡಿ, ಅಶ್ಲೀಲವಾದ ಚಿತ್ರೀಕರಣ ಮಾಡುವ ತಂತ್ರ ಬಳಸಲಾಗುತ್ತಿದೆ. ಮತಾಂತರವಾಗದೇ ಬೇರೆ ದಾರಿ ಇಲ್ಲ ಎಂಬ ಪರಿಸ್ಥಿತಿಯನ್ನು ಹುಡುಗಿಯ ಮುಂದೆ ಸೃಷ್ಟಿಸಲಾಗುತ್ತದೆ. ಇದನ್ನು ಸ್ವ–ಇಚ್ಛೆಯ ಮತಾಂತರ ಎನ್ನುವುದು ಹೇಗೆ’ ಎಂದು ಪ್ರಶ್ನಿಸುತ್ತಾರೆ ಹೋಮ್‌ಸ್ಟೇ ಪ್ರಕರಣದ ಆರೋಪಿ ಸುಭಾಷ್‌ ಪಡೀಲ್‌.  
 
ಈ ಮಾತನ್ನು ಕಾಸರಗೋಡಿನ ರವೀಶ್‌ ತಂತ್ರಿ ಕುಂಟಾರು ಮತ್ತು ಹಿಂದೂ ಜಾಗರಣಾ ವೇದಿಕೆಯ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ್‌ ಬೆಂಬಲಿಸುತ್ತಾರೆ. ಇಬ್ಬರಿಬ್ಬರ ಪ್ರಕಾರ ಕಾಸರಗೋಡು, ಮಂಜೇಶ್ವರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ 42 ಮಂದಿ ಹುಡುಗಿಯರನ್ನು ಮತಾಂತರಗೊಳಿಸಲು ಗುರುವಾಯೂರು ಬಳಿಯ ಪೊನ್ನಾಣಿಗೆ ಕರೆದೊಯ್ಯಲಾಗಿತ್ತು.  ‘ಮುಜುಗರಕ್ಕೀಡಾದ ಸನ್ನಿವೇಶವನ್ನು ಯಾರೊಂದಿಗೂ ಹಂಚಿಕೊಳ್ಳಲು ಹೆಣ್ಣುಮಕ್ಕಳು ಮುಂದೆ ಬರುವುದಿಲ್ಲ. ಆದ್ದರಿಂದ ಬಲವಂತದ ಮತಾಂತರ ಎಂದು ಸಾಬೀತುಮಾಡಲು ಸಾಕ್ಷ್ಯಗಳು ಇರುವುದಿಲ್ಲ. ಹೆಣ್ಣುಮಕ್ಕಳನ್ನು ಅಸಹಾಯಕತೆಗೆ ದೂಡಿ ಮತಾಂತರ ಮಾಡುವುದು ಎಷ್ಟು ಸರಿ’ಎಂಬುದು ಅವರ ಪ್ರಶ್ನೆ. 
 
ಪೋಷಕರ ಬೆಂಬಲದೊಂದಿಗೆ ಮಾತುಕತೆ ನಡೆಸಿ 38 ಮಂದಿಯನ್ನು ವಾಪಸ್‌ ಕರೆತರಲಾಗಿದೆ ಎನ್ನುತ್ತಾರೆ ರವೀಶ್‌. ‘ಉಡುಪಿ ಜಿಲ್ಲೆಯಲ್ಲಿಯೂ ಇಂತಹ ಪ್ರಕರಣಗಳು ನಡೆದಿವೆ. 2015–16ರಲ್ಲಿ 14 ಹುಡುಗಿಯರು ಬ್ಲಾಕ್‌ಮೇಲ್‌ ಮತಾಂತರ ಜಾಲಕ್ಕೆ ಸಿಲುಕಿದ್ದರು. ಅವರಲ್ಲಿ ಕೆಲವರನ್ನು ವಾಪಸ್‌ ಕರೆತರಲಾಗಿದೆ. ಮಾದಕದ್ರವ್ಯದ ಜಾಲಕ್ಕೆ ಬಲಿಬೀಳಬೇಡಿ ಎಂದು ಬುದ್ಧಿವಾದ ಹೇಳುವುದು ತಪ್ಪೇ’ ಎಂದು ಕೇಳುತ್ತಾರೆ ಪ್ರಕಾಶ್‌. 
 
‘ಮತಾಂತರವನ್ನು ಸಮಸ್ಯೆಯಾಗಿ ಬಿಂಬಿಸುವುದರಲ್ಲೇ ಅರ್ಥವಿಲ್ಲ’ ಎಂದು ವಾದಿಸುತ್ತಾರೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಮಜೀದ್‌ ಜೋಕಟ್ಟೆ. 
 
‘ಅನೈತಿಕ ಪೊಲೀಸ್‌ಗಿರಿ ಎಲ್ಲಿಯೇ ಆದರೂ ಅದನ್ನು ಖಂಡಿಸಲೇಬೇಕು. ಎಲ್ಲಿಯೇ ಅಹಿತಕರ ಘಟನೆ ಆದರೂ ಅದನ್ನು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಜೊತೆಗೆ ತಳಕು ಹಾಕುವುದು ಶೋಕಿ ಆಗಿದೆ. ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಅನೈತಿಕ ಪೊಲೀಸ್‌ಗಿರಿ ಸಮಸ್ಯೆಯೇ ಇರುವುದಿಲ್ಲ. ಸ್ವಇಚ್ಛೆಯ ಮತಾಂತರ ಸಂವಿಧಾನಬದ್ಧವಾದುದು. ಯಾವುದೇ ಅಕ್ರಮ ಚಟುವಟಿಕೆಯನ್ನು ನಿಯಂತ್ರಿಸುವುದು ಪೊಲೀಸರ ಕರ್ತವ್ಯ. ಅದಕ್ಕೆ ಅನೈತಿಕ ಪೊಲೀಸ್‌ಗಿರಿ ಬೇಕಾಗಿಲ್ಲ’ ಎನ್ನುತ್ತಾರೆ. 
 
**
ಧ್ರುವೀಕೃತ ಶಿಕ್ಷಣ ಬೇಡ 
ವ್ಯಕ್ತಿತ್ವ ನಿರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಮಹತ್ತರ ಪಾತ್ರ ವಹಿಸುತ್ತವೆ. ಆದರೆ ಶಿಕ್ಷಣ ಸಂಸ್ಥೆಗಳು ಕೇವಲ ಒಂದೇ ಧರ್ಮಕ್ಕೆ ಸೀಮಿತವಾದಾಗ ಮಕ್ಕಳು ಇನ್ನೊಂದು ಧರ್ಮದ ಆಚಾರ ವಿಚಾರವನ್ನು ಅರಿಯುವುದಾದರೂ ಹೇಗೆ... ಕೇವಲ ಹಿಂದೂ ಪದ್ಧತಿಯನ್ನೋ, ಕೇವಲ ಮುಸ್ಲಿಂ ಪದ್ಧತಿಯನ್ನೋ ಅನುಸರಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ದೃಷ್ಟಿಕೋನ ವಿಸ್ತಾರವಾಗಿ ಬೆಳೆಯಲು ಸಾಧ್ಯವಿಲ್ಲ ಎನ್ನುವುದನ್ನು ಶಿಕ್ಷಣತಜ್ಞ ಉಮರ್‌ ಹೇಳುತ್ತಾರೆ. 
 
ಬಹುಧರ್ಮ, ಮತಗಳು ಇರುವ ಸಮಾಜದಲ್ಲಿ ಎಲ್ಲ ಆಚರಣೆ, ಪದ್ಧತಿ ನಂಬಿಕೆಗಳನ್ನು ಗೌರವಿಸುವ ಭಾರತೀಯನಾದವನು ಜೀವನ ಮಾಡಬೇಕಲ್ಲವೆ. ಆದ್ದರಿಂದ ಅಂತಹ ಮನಸ್ಥಿತಿಯನ್ನು ರೂಪಿಸುವ ಶಿಕ್ಷಣ ಇಂದಿನ ಅಗತ್ಯ. ವಿಜ್ಞಾನ, ಗಣಿತದ ಕಲಿಕೆಗಿಂತಲೂ ಮುಖ್ಯವಾಗಿ ಪರಸ್ಪರರ ನಂಬಿಕೆಯನ್ನು ಗೌರವಿಸುವ ಶಿಕ್ಷಣ ಪ್ರತಿ ವ್ಯಕ್ತಿಗೂ ಅಗತ್ಯವಿದೆ. ತೀವ್ರತರವಾದ ಟೀಕೆ, ನಿಷೇಧಗಳ ನಡುವೆ ಮಕ್ಕಳ ಮನಸ್ಸೂ ಋಣಾತ್ಮಕವಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಗೆ ನಮ್ಮ ಮಕ್ಕಳನ್ನು ದೂಡದೇ ಸುಂದರವಾದ ಆಶಯವನ್ನು ಅವರ ಮನಸ್ಸಿನಲ್ಲಿ ಬಿತ್ತಬೇಕಾಗಿದೆ. 
 
‘ಮನೆಯಲ್ಲಿಯೂ ಮಕ್ಕಳನ್ನು ಬೆಳೆಸುವ ಬಗೆಯಲ್ಲಿ ಪೋಷಕರು ಪ್ರಜ್ಞಾಪೂರ್ವಕ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಹೆಣ್ಮಕ್ಕಳಿಗೆ ನೂರಾರು ಸೂಚನೆಗಳನ್ನು ನೀಡುವ ಪೋಷಕರು ಅವೆಲ್ಲವನ್ನೂ ಗಂಡುಮಕ್ಕಳಿಗೆ ನೀಡಬೇಕಾಗಿದೆ. ಯಾವುದೇ ಹುಡುಗಿಯೊಡನೆ ಹೇಗೆ ವರ್ತಿಸಬೇಕು ಎನ್ನುವ ಪಾಠವನ್ನು ಹುಡುಗರಿಗೆ ಹೇಳುವುದು ಇಂದಿನ ತುರ್ತು. ಹೆಣ್ಮಕ್ಕಳನ್ನು ಗೌರವಿಸುವ ಸಂಸ್ಕಾರವನ್ನು ಪಡೆದ ವ್ಯಕ್ತಿ ಎಂಥಾ ಸಂದರ್ಭದಲ್ಲಿಯೂ ಆಕೆಗೆ ಹಿಂಸೆ ನೀಡುವ ಗುಂಪನ್ನು ಬೆಂಬಲಿಸಲಾರ’ ಎಂದು ವಿವರಿಸುತ್ತಾರೆ ಲೇಖಕಿ ವೈದೇಹಿ. ಹೆಣ್ಮಕ್ಕಳನ್ನು ಗೌರವಿಸುವುದನ್ನು ಕಲಿಯುವುದು ಎಂದರೆ ಮಾನವೀಯತೆ ರೂಢಿಸಿಕೊಳ್ಳುವುದಷ್ಟೆ.   
 
**
ಗೌರವಿಸುವುದು ಸಂಸ್ಕೃತಿ, ಹೊಡೆಯುವುದಲ್ಲ...
ಪ್ರತಿಯೊಬ್ಬರಿಗೂ ತೊಂದರೆಯಾಗದಂತೆ ಬದುಕುವ ಹಕ್ಕಿದೆ. ನಮಗೆ ಇಷ್ಟವಾಗದಂತೆ ಯಾರೋ ವರ್ತಿಸುತ್ತಿದ್ದಾರೆ ಎಂದು ಅವರನ್ನು ಹೊಡೆಯುವುದು ಸರಿಯಲ್ಲ. ಯಾರಾದರೂ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದರೆ ಅವರ ವಿರುದ್ಧ ದೂರು ದಾಖಲಿಸಬಹುದೇ ವಿನಾ ಹಿಂಸೆ ಸರಿಯಲ್ಲ. ಅನೈತಿಕ ಪೊಲೀಸ್‌ಗಿರಿ ಪ್ರಕರಣ ಕಳೆದೆರಡು ವರ್ಷಗಳಿಗಿಂತ ಈ ವರ್ಷ ಕಡಿಮೆ. ಇಂತಹ ಪ್ರಕರಣ ಬಂದಾಗ ತನಿಖೆ ನಡೆಸಿ ಚಾರ್ಜ್‌ಶೀಟ್‌ ಹಾಕುತ್ತಿದ್ದೇವೆ. ಜನರೂ ಇಂತಹ ಗುಂಪುಗಳ ನಿರಂಕುಶತೆಯನ್ನು ಖಂಡಿಸಬೇಕು. ಇಂದು ಬೇರೆಯವರಿಗೆ ತೊಂದರೆಯಾಗಬಹುದು. ನಾಳೆ ನಮ್ಮ ಮನೆಯ ಮಕ್ಕಳಿಗೇ ತೊಂದರೆ ಆಗಬಹುದು. ಆದ್ದರಿಂದ ಇವುಗಳನ್ನು ವಿರೋಧಿಸಬೇಕು. ಆಗ ಇಂತಹ ಗುಂಪುಗಳ ಆತ್ಮಸ್ಥೈರ್ಯ ಕಡಿಮೆಯಾಗುತ್ತದೆ. 
 
ಧರ್ಮದ ಹೆಸರು ಹೇಳಿಯೇ ಎಷ್ಟೊಂದು ಅಹಿತಕರ ಘಟನೆಗಳು ನಡೆಯುತ್ತವೆ! ಹೆಣ್ಣುಮಕ್ಕಳನ್ನು ಹೊಡೆಯುವುದು ಹಿಂದೂ ಸಂಪ್ರದಾಯ ಅಲ್ಲವೇ ಅಲ್ಲ. ಅವರನ್ನು ಗೌರವಿಸಿದ ಕಡೆಗಳಲ್ಲಿ ದೇವರಿರುತ್ತಾರೆ ಎಂದು ಹೇಳುವ ಹಿಂದೂ ಸಂಸ್ಕೃತಿಯನ್ನಷ್ಟೇ ನಾನು ಬಲ್ಲೆ. ಅಂತಹ ಸಂಸ್ಕೃತಿಯ ಬಗ್ಗೆ ಹೆಮ್ಮೆ ಗೌರವ ಇದೆ. ಹೆಣ್ಣುಮಕ್ಕಳನ್ನು ಹೊಡೆದು ಹೀರೊ ಆಗುವುದು ಅವರ ಕೆಟ್ಟ ಸಂಸ್ಕಾರವನ್ನಷ್ಟೇ ತೋರಿಸುತ್ತದೆ. 
–ಎಂ. ಚಂದ್ರಶೇಖರ್‌ 
ಪೊಲೀಸ್‌ ಆಯುಕ್ತ, ಮಂಗಳೂರು    
 
**
ಸಸ್ನೇಹ ವಾತಾವರಣ 
ನಾನು ಇಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ನಾಟಕಗಳನ್ನು ಹೇಳಿಕೊಡುತ್ತೇನೆ. ತಮಿಳಿನ ಪುಸ್ತಕವೊಂದರ ಮುನ್ನುಡಿ ಇಟ್ಟುಕೊಂಡು ‘ಐಷಾ’ ಎಂಬ ನಾಟಕ ಮಾಡಿಸಿದೆ. ಅದನ್ನು ಎಲ್ಲ ಸಮುದಾಯದವರು ಸೇರಿ ಪ್ರದರ್ಶಿಸಿದರು. ಚಿಕ್ಕ ಮಕ್ಕಳಲ್ಲಿ ಧರ್ಮಾತೀತವಾಗಿ ಮುಟ್ಟಿ ಮಾತನಾಡುವಷ್ಟು ಸೌಹಾರ್ದತೆ ಉಳಿದಿದೆ.
 
ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹಿಂದೂ ಮುಸ್ಲಿಂ ಹುಡುಗ–ಹುಡುಗಿಯರ ನಡುವೆ ಆತ್ಮೀಯತೆ ಇದ್ದರೆ ಅಂಥ ಸಂಬಂಧಗಳನ್ನೂ ಕೋಮುಸಂಘಟನೆಗಳೇ ನಿಯಂತ್ರಿಸಲು ಬಂದುಬಿಡುತ್ತವೆ. ಗ್ರಾಮೀಣ ಭಾಗಗಳಲ್ಲಿ ಅಂಥ ಘಟನೆಗಳು ನಡೆದರೆ ಅಲ್ಲಿಗೆ ಧಾವಿಸುವವರೂ ನಗರ ಕೇಂದ್ರಿತ ವ್ಯಕ್ತಿಗಳೇ. 
–ಐ.ಕೆ. ಬೊಳುವಾರು, ರಂಗ ನಿರ್ದೇಶಕ
 
**
ಪೊಲೀಸ್‌ ವ್ಯವಸ್ಥೆ ಸಮರ್ಥವಾಗಿ ಕೆಲಸ ಮಾಡಿದರೆ ಈ ನೈತಿಕ ಅಥವಾ ಅನೈತಿಕ ಪೊಲೀಸ್‌ಗಿರಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.  ಪೊಲೀಸ್‌ ವ್ಯವಸ್ಥೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೂರ್ತಿ ಸ್ವಾತಂತ್ರ್ಯ ಕೊಟ್ಟಲ್ಲಿ ಜನರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. 
–ಕಲ್ಲಡ್ಕ ಪ್ರಭಾಕರ ಭಟ್‌ ಆರೆಸ್ಸೆಸ್‌ ಮುಖಂಡ

**
–ಪೂರಕ ಮಾಹಿತಿ: ವಿಶಾಖ ಎನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT