ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಸಾಂಗತ್ಯ

ಹೊಸ ಹೆಜ್ಜೆ
Last Updated 5 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಸುತ್ತ ಹೊಲಗಳು. ಅವುಗಳಲ್ಲಿ ಜೋಳದ ಬೆಳೆ. ನಡುವಿನ ತೋಟದಲ್ಲಿ ನಳನಳಿಸುವ ಮಾವು; ಅದರ ಮಧ್ಯೆ ಬೆಳೆದ ಪಪ್ಪಾಯಿ, ಚಿಕ್ಕು, ನಿಂಬೆ, ನುಗ್ಗೆ, ಪೇರಲೆ. ಅಲ್ಲಲ್ಲಿ ಸಮೃದ್ಧ ಕರಿಬೇವು. ಬದಿಯಲ್ಲಿ ತೆಂಗು, ಸಾಗವಾನಿ ಮರಗಳ ನೆರಳು. ಇದೆಲ್ಲವೂ ಬೆಳೆದಿರುವುದು ಸಾವಯವ/ಕೊಟ್ಟಿಗೆ ಗೊಬ್ಬರದಲ್ಲಿ.
 
ಹುಬ್ಬಳ್ಳಿ ತಾಲ್ಲೂಕಿನ ಶೆರೆವಾಡ ಗ್ರಾಮದ ಬರಡು ನೆಲದಲ್ಲಿ ಇಂಥ ಕೃಷಿ ವೈವಿಧ್ಯ ಮೆರೆದಿರುವವರು ರಾಮಣ್ಣ ತಡಹಾಳ ಮತ್ತು ಶಂಕರಮ್ಮ ದಂಪತಿ. ರಾಮಣ್ಣ ರಷ್ಯನ್ ಭಾಷೆಯಲ್ಲಿ ಡಿಪ್ಲೊಮಾ ಪಡೆದವರು. ಕಾನೂನು ಓದಿದರೂ ಕೆಲವು ಸಮಸ್ಯೆಯಿಂದಾಗಿ ಅಂತಿಮ ಪರೀಕ್ಷೆ ಬರೆಯಲಾರದೆ ಕೈಚೆಲ್ಲಿದವರು. ಶಂಕರಮ್ಮ ಅವರು ನವಲಗುಂದದ ಕಾಲೇಜಿನಲ್ಲಿ ವಾಣಿಜ್ಯ ವಿಷಯದ ಪ್ರಾಧ್ಯಾಪಕಿ. ಹುಬ್ಬಳ್ಳಿ ನಗರದಲ್ಲಿ ವಾಸ, ನಗರವಾಸಿಗಳ ಒಡನಾಟ. ಆದರೂ ಇಬ್ಬರ ತುಡಿತ ಇರುವುದು ಹಳ್ಳಿಯ ಕಡೆಗೆ, ಒಲವು ಇರುವುದು ಕೃಷಿ ಬಗ್ಗೆ. ಇದರ ಪರಿಣಾಮವೇ ಈ ವೈವಿಧ್ಯಮಯ ತೋಟ. 
 
ಮನೆತನದಿಂದ ಸಿಕ್ಕಿದ ಪಾಲು ಮೂರು ಎಕರೆ ಜಾಗ. ಇದರಲ್ಲಿ ಯಾವುದಾದರೂ ಕೃಷಿ ಮಾಡಿ ಅಥವಾ ಹೊಲವನ್ನು ಲಾವಣಿಗೆ ನೀಡಲು ಮನಸ್ಸಾಗಲಿಲ್ಲ. ಸಾರಿಗೆ ಸಂಸ್ಥೆಯ ಕಚೇರಿಯಲ್ಲಿ ಉದ್ಯೋಗ ಸಿಕ್ಕರೂ ನೇಮಕಾತಿ ಪತ್ರವನ್ನು ಮನೆಯೊಳಗೆ ಸುರುಟಿ ಇಟ್ಟು, ರಾಮಣ್ಣ ಹೊಲದತ್ತ ಮುಖಮಾಡಿದರು. ಇಷ್ಟದ ಸಾವಯವಕೃಷಿಯತ್ತ ಹೊರಳಿದರು. ಹುಬ್ಬಳ್ಳಿಯಿಂದ 15 ಕಿ.ಮೀ. ದೂರದಲ್ಲಿರುವ ತೋಟಕ್ಕೆ ನಿತ್ಯವೂ ಹೋಗಿ ಗಿಡಗಳ ಆರೈಕೆ ಮಾಡುವ ರಾಮಣ್ಣ ಅವರ ಜೊತೆ ರಜೆ ದಿನಗಳಲ್ಲಿ ಪತ್ನಿಯೂ ಇರುತ್ತಾರೆ. 
 
ಕೊಟ್ಟಿಗೆಗೊಬ್ಬರದ ಸಾರ: ಕಾಲೇಜುದಿನಗಳಲ್ಲೇ ಒಂದು ಬದಿಯಲ್ಲಿ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದ ರಾಮಣ್ಣ, ಹಿಟ್ಟಿನ ಗಿರಣಿಯನ್ನೂ ಹೊಂದಿದ್ದರು. ಕೃಷಿಯ ಬಗ್ಗೆ ಒಲವು ಇದ್ದ ಅವರು ಶಿಕ್ಷಣ ಮುಗಿಸಿದ ನಂತರ ಕೃಷಿ ಇಲಾಖೆಯ ಭೂಸಾರ ಸಂರಕ್ಷಣೆ ಸಮಿತಿಯಲ್ಲಿದ್ದರು. ಕಟ್ನೂರ ಜಲಾನಯನ ಸಂಘದ ಕಾರ್ಯದರ್ಶಿಯೂ ಆಗಿದ್ದರು. ಸಮಪಾತಳಿ ಬದುನಿರ್ಮಾಣ, ಕೃಷಿಹೊಂಡ ಮುಂತಾದವುಗಳನ್ನು ಮಾಡಿ ತೋಟಗಾರಿಕಾ ಬೆಳೆಗೂ ಪ್ರೋತ್ಸಾಹ ನೀಡಿದರು.
 
ಕೊಟ್ಟಿಗೆಗೊಬ್ಬರ ಬಳಸಿ, ಸಾವಯವಪದ್ಧತಿಯಲ್ಲಿ ಕೃಷಿ ಮಾಡಲು ಆರಂಭಿಸಿದರು. ‘ರಾಸಾಯನಿಕ ಗೊಬ್ಬರದ ಫಲ ತಾತ್ಪೂರ್ತಿಕ. ಕೊಟ್ಟಿಗೆ ಗೊಬ್ಬರ ಹಾಗಲ್ಲ; ಒಂದು ಬಾರಿ ಹಾಕಿದರೆ ಮೂರು ವರ್ಷ ಭೂಮಿಯ ಸಾರವನ್ನು ಉಳಿಸುತ್ತದೆ. ಹಳ್ಳಿಗಳಿಂದ ಗೊಬ್ಬರ ಖರೀದಿಸಿ ತಂದು ಗಿಡಗಳಿಗೆ ಹಾಕುತ್ತೇನೆ. ಕೀಟಬಾಧೆಯನ್ನು ನೀಗಿಸಲು ಬೇವಿನ ಹಿಂಡಿ ಹಾಕುತ್ತೇನೆ. ಬೇವಿನ ತಪ್ಪಲು ಮತ್ತು ಹುಲಗಲದ ಸೊಪ್ಪು ಬೆರೆಸಿ ಗಿಡಗಳ ಬುಡಕ್ಕೆ ಸುರಿಯುತ್ತೇನೆ. ಇಳುವರಿ ಸ್ವಲ್ಪ ಕಡಿಮೆಯಾದರೂ ಪ್ರಕೃತಿಗೆ ತೊಂದರೆಯಾಗದಂತೆ ಮತ್ತು ಸೇವನೆ ಮಾಡುವ ಜನರಿಗೆ ಹಾನಿಯಾಗದಂತೆ ಬೆಳೆ ತೆಗೆಯುತ್ತೇನೆ. ಇದರಲ್ಲೇ ನಮಗೆ ನೆಮ್ಮದಿ ಇದೆ’ ಎನ್ನುತ್ತಾರೆ ರಾಮಣ್ಣ.
 
‘ಮಾವು ಸಮೃದ್ಧವಾಗಿ ಬೆಳೆದು ಆದಾಯ ತಂದುಕೊಡುತ್ತದೆ. ಪಪ್ಪಾಯವನ್ನು ವರ್ಷದಲ್ಲಿ ಐದರಿಂದ ಆರು ಬಾರಿ ಮಾರಾಟ ಮಾಡಲಾಗುತ್ತದೆ. ಕರಿಬೇವು ವರ್ಷದಲ್ಲಿ ಒಂದು ಬಾರಿ ಮಾರಾಟವಾಗುತ್ತದೆ’ ಎಂದು ವಿವರಿಸುತ್ತಾರೆ ರಾಮಣ್ಣ.
 
‘ಅಧ್ಯಾಪಕ ವೃತ್ತಿಯಲ್ಲಿದ್ದರೂ ಬಿಡುವಿನ ವೇಳೆ ತೋಟದತ್ತ ಹೋಗಲು ಮನಸ್ಸು ತುಡಿಯುತ್ತಿರುತ್ತದೆ. ಹಸಿರಿನ ನಡುವೆ ಗಿಡಗಳ ಆರೈಕೆ ಮಾಡುತ್ತ ನೆಲದ ಒಡನಾಟದಲ್ಲಿ ಇದ್ದಾಗ ಎಲ್ಲವನ್ನೂ ಮರೆಯಲು ಸಾಧ್ಯವಾಗುತ್ತದೆ. ಕೃಷಿಯು ಜೀವಂತಿಕೆಯ ಸಂಕೇತ. ಆದ್ದರಿಂದ ಅದನ್ನು ಹೆಚ್ಚು ಪ್ರೀತಿಸುತ್ತೇನೆ’ ಎನ್ನುತ್ತಾರೆ ಶಂಕರಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT