ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾದ ಹಿಂಗಾರು: ಸದುಪಯೋಗ ಹೇಗೆ?

Last Updated 5 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಕಳೆದ ನಾಲ್ಕು ತಿಂಗಳಿನಿಂದ, ಅದರಲ್ಲೂ ಆಗಸ್ಟ್ ತಿಂಗಳಿನಿಂದ ಇದುವರೆಗೆ ಮಳೆ ಆಗದೇ ದಕ್ಷಿಣ ಕರ್ನಾಟಕದ ಜಿಲ್ಲೆಗಳು ತೀವ್ರ ಬರಗಾಲಕ್ಕೆ ಸಿಕ್ಕಿ ತತ್ತರಿಸಿವೆ. ಜುಲೈನಲ್ಲಿ ಶೇ.160ರಷ್ಟು ಮಳೆಯಾಗಿದೆ. ಅನಂತರ ಅಗತ್ಯ ಪ್ರಮಾಣದ ಮಳೆಯಾಗದೇ ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ. ಆಗ ನಿಜವಾಗಿ ಆಗಬೇಕಿದ್ದ ಮಳೆಯ ಪ್ರಮಾಣ 130.4 ಮಿ.ಮೀ. ಆದರೆ ಆಗಸ್ಟ್ ತಿಂಗಳಲ್ಲಿ 28 ಮಿ.ಮೀ ಗಳಷ್ಟು ಮಾತ್ರ ಮಳೆಯಾಯಿತು. 
 
ಸೆಪ್ಟೆಂಬರ್ ತಿಂಗಳ ವಾಡಿಕೆ ಮಳೆ 197.4 ಮಿ.ಮೀ. ಇರಬೇಕಾದುದು 51.4 ಮಿ.ಮೀ. ಸುರಿಯಿತು. ಅದು ಸಾಕಾಗದ ಮಳೆ! ಅಕ್ಟೋಬರ್‌ನಲ್ಲಿ ವಾಡಿಕೆ ಮಳೆ 165.5 ಮಿ.ಮೀ. ಗಳಷ್ಟು ಆಗಬೇಕಾಗಿತ್ತು. ಆದರೆ ಸುರಿದದ್ದು 31 ಮಿ.ಮೀ. ಮಾತ್ರ. ಸಹಜವಾಗಿ ಆಗಬೇಕಾದ ವಾಡಿಕೆ ಮಳೆ 58.5 ಮಿ.ಮೀ. ನವೆಂಬರ್‌ನಲ್ಲಿ ಬರಲಿಲ್ಲ. ಒಂದೂವರೆ ತಿಂಗಳ ನಂತರ ಹಿಂಗಾರು ಪ್ರಾರಂಭಗೊಂಡು ಬತ್ತಿದ ಮನಸ್ಸಿಗೆ ಆಸೆಯನ್ನು ತರಬಹುದೆಂದು ಎಲ್ಲರ ಹಾರೈಕೆ. ಡಿಸೆಂಬರ್ ಪ್ರಾರಂಭದ ಹದಿನೈದು ದಿನಗಳಲ್ಲಿ ಮೂರನೇ ಮಳೆದಿನಗಳಲ್ಲಿ ಒಟ್ಟಾರೆ 15ಮಿ.ಮೀ. ಮಳೆ ಆಗುವ ನಿರೀಕ್ಷೆಯಿದೆ.
 
ಹವಾಗುಣ ಬದಲಾವಣೆ ವೈಪರೀತ್ಯದಿಂದಾಗಿ ಬೆಂಗಳೂರು ಮತ್ತು ಸುತ್ತಮುತ್ತ 56 ಮಳೆದಿನಗಳ ಜಾಗದಲ್ಲಿ ಈ ವರ್ಷ 41 ಮಳೆದಿನಗಳಿಗೆ ಕುಸಿದಿದ್ದು ಸಂಕಟದ ಪರಿಸ್ಥಿತಿ ಎದುರಾಗಿದೆ. ಮುಂಗಾರು ಋತುಮಾನದ ಮಳೆಗಳು (ಜೂನ್-ಸೆಪ್ಟೆಂಬರ್) ಕಡಿಮೆಯಾಗಿರುವುದು ಆತಂಕದ ವಿಷಯವಾಗಿದೆ. ಪ್ರಸಕ್ತ ಕಾಲದಲ್ಲಿ ರೈತರು ಮಳೆಯನ್ನು ಅನುಸರಿಸಿ ಬೆಳೆಗಳನ್ನು ಆರಿಸಿಕೊಳ್ಳುವ ಹಾಗೂ ಬೆಳೆಯುವ ವಿನ್ಯಾಸಗಳನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ.
 
ದಕ್ಷಿಣ ಕರ್ನಾಟಕದ ಒಳಜಿಲ್ಲೆಗಳಲ್ಲಿ ಮಳೆಯಾಶ್ರಿತ ಬೆಳೆಗಳಾದ ರಾಗಿ, ಮುಸುಕಿನ ಜೋಳ, ತೊಗರಿ, ಅವರೆ, ನೆಲಗಡಲೆ, ಹುರುಳಿ, ಹರಳು ಮತ್ತು ಇತರ ಕಡಿಮೆ ಅವಧಿಯ ಬೇಳೆ (ದ್ವಿದಳ) ಕಾಳುಗಳು ಹಾಗೂ ಇತರೆ ಬೆಳೆಗಳು ಅದರಲ್ಲೂ ಕೆಂಪುಮಣ್ಣಿನಲ್ಲಿ ಕಟಾವು ಹಾಗೂ ಇನ್ನೂ ಕೆಲವು ಬೆಳೆಗಳು ಹೂವಾಡುವ ಹಂತದಲ್ಲಿದ್ದು, ತೇವಾಂಶದ ಕೊರತೆಯಿಂದ ಬಾಡಿ, ಬತ್ತಿ ಕೈತಪ್ಪಿ ಹೋಗುವ ಹಂತಕ್ಕೆ ತಲುಪಿವೆ. ಅವು ಪುನಶ್ಚೇತನಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ, ಅವು ಪುನಶ್ಚೇತನಗೊಂಡು ಮರುಜೀವ ತಳೆದು ಕೈಗೆ ಸಿಗುವಂತೆ ಮಾಡಲು ಅನುಸರಿಸಬಹುದಾದ ಕೆಲ ಬೇಸಾಯಕ್ರಮಗಳು ಹೀಗಿವೆ:
 
* ತೇವಾಂಶ ಸಂರಕ್ಷಣಾ ಪದ್ಧತಿಗಳಾದ ಕಳೆ ಕೀಳುವ, ಮುಚ್ಚಿಗೆ ಹರಡುವ ಮತ್ತು ಇತರ ಅಂತರಬೇಸಾಯ ಕ್ರಮಗಳನ್ನು ಕೈಗೊಳ್ಳಬೇಕು.
 
* ಕೃಷಿಹೊಂಡಗಳಲ್ಲಿ, ತಡೆಅಣೆಕಟ್ಟುಗಳಲ್ಲಿ, ನಾಲಾಬದು ಅಥವಾ ಕೊಳವೆಬಾವಿಗಳಲ್ಲಿನ ನೀರನ್ನು ಒಂದೆರಡು ಸಾರಿ ಒದಗಿಸಿ ಜೀವ ಉಳಿಯುವಂತೆ ಮಾಡುವುದು.
 
ಕಪ್ಪುಮಣ್ಣಿನ ಭೂಮಿಗೆ ಸೂಕ್ತವಿರುವ ಬೆಳೆ: ಕಪ್ಪುಮಣ್ಣಿನ ಭೂಮಿಯಲ್ಲಿ ಹಿಂಗಾರುಬೆಳೆಗಳಾಗಿ ಕಡಲೆ, ಸೂರ್ಯಕಾಂತಿ, ಕುಸುಬೆ, ಜೋಳ ಮತ್ತು ಗೋಧಿ ಬೆಳೆಗಳ ಬಿತ್ತನೆಯಾಗಿದೆ. ಡಿಸೆಂಬರ್‌ನಲ್ಲಿ ಬೀಳುವ ಮಳೆಯು ಜೀವ ಉಳಿಸುವ ನೀರಾವರಿಯಂತಿದೆ. ತೊಗರಿ, ಹರಳು, ಹತ್ತಿ ಮುಂತಾದ ದೀರ್ಘಾವಧಿ ಬೆಳೆಗಳ ಪೀಡೆಗಳನ್ನು ಮತ್ತು ಹಿಂಗಾರುಬೆಳೆಗಳಾದ ಕಡಲೆಯ ಕಾಯಿಕೊರಕಗಳನ್ನು ನಿರ್ವಹಿಸುವುದು ಸೂಕ್ತ. ಬತ್ತದ ಬೆಳೆ ಕಟಾವಾಗಿ ಶೇಷ ತೇವಾಂಶದಲ್ಲಿ ಇದೇ ಬೆಳೆಯನ್ನು ಮತ್ತೆ ಬಿತ್ತಬಹುದು. 
 
ಸಮಗ್ರ ಪೀಡಾ ನಿರ್ವಹಣಾ ಕ್ರಮಗಳೆಂದರೆ ಪಕ್ಷಿಗಳು ಕೂರಲು ಟೊಂಗೆ ಕವಲುಗಳಿರುವ ಗೂಟಗಳನ್ನು ಅಲ್ಲಲ್ಲಿ ನೆಡುವುದು, ಎನ್‌ಪಿವಿ ಬಳಕೆ, ಸಮ್ಮೋಹನ ಬಲೆ (ಆಕರ್ಷಕ ಬಲೆ) ಗಳನ್ನು ಸಿಕ್ಕಿಸಿ ಕಟ್ಟುವುದು ಲಾಭದಾಯಕ. ಕಡೇ ಅಸ್ತ್ರವಾಗಿ ರಾಸಾಯನಿಕಗಳನ್ನು ಬಳಸಬಹುದು.
 
ಹಣ್ಣಿನ ಬೆಳೆಗಾರರಿಗೆ ಸಲಹೆ: ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ದ್ರಾಕ್ಷಿ ಮುಖ್ಯಬೆಳೆ. ದ್ರಾಕ್ಷಿಬಳ್ಳಿಗಳ ಸವರುವಿಕೆಯನ್ನು ಸ್ವಲ್ವ ಮುಂದೂಡುವುದು ಉತ್ತಮ. ಮಳೆ ನಿಂತ ನಂತರ ಅದನ್ನು ಕೈಗೊಳ್ಳಬಹುದು. ಸವರಿದ ಕೂಡಲೇ ತಾಮ್ರಯುಕ್ತ ಶಿಲೀಂಧ್ರನಾಶಕದ ದ್ರಾವಣವನ್ನು ಸಿಂಪಡಿಸಬೇಕು. ಮಳೆ ಸುರಿಯುವ ಸಮಯದಲ್ಲಿ ಬಳ್ಳಿ ಹಂಬುಗಳನ್ನು ಸವರಿದ್ದೇ ಆದರೆ ಪರಾಗ ಮತ್ತು ಶಲಾಕಾಗ್ರದ ದ್ರವ ತೊಳೆದು ಹೋಗುವುದಲ್ಲದೆ ರೋಗ ಮತ್ತು ಕೀಟಗಳ ಹಾವಳಿ ಹೆಚ್ಚಾಗಿ ಫಸಲು ಕುಸಿಯುವ ಸಾಧ್ಯತೆಯಿದೆ. ಚಿಗುರು ಜಾಸ್ತಿಯಾದರೂ ಫಲಕಚ್ಚುವ ಚಿಗುರು ಕಡಿಮೆಯಾಗುತ್ತದೆ.
 
ದ್ರಾಕ್ಷಿಯಲ್ಲಿ ಬೂದಿರೋಗದ ಹಾವಳಿ ಉಂಟಾಗುವ ಸಾಧ್ಯತೆ ಇರುವುದರಿಂದ ಅದರ ಹತೋಟಿಗೆ ನೀರಿನಲ್ಲಿ ಕರಗುವ ಗಂಧಕವನ್ನು ಸಿಂಪಡಿಸುವುದು ಸೂಕ್ತ. ಮಾವಿನಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಒಣಹವೆ ಇದ್ದು ಶೇ.30ರಷ್ಟು ಅಕಾಲಿಕ ಹೂವು ಬಿಟ್ಟು ಕಾಯಿ ಕಚ್ಚಿ ಹೀಚು ಕಾಣುತ್ತವೆ. ಅವು ಹಣ್ಣಾದರೂ ರುಚಿ ಇರುವುದಿಲ್ಲ. ಆದ್ದರಿಂದ ಅವುಗಳನ್ನು ಉಪ್ಪಿನಕಾಯಿ ಮಾಡಲು ಬಳಸಬಹುದು. ಇನ್ನು ಮುಂದೆ ಮೂಡುವ ಹೂ ಗೊಂಚಲುಗಳಿಗೆ ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಿ ಕಾಪಾಡಬೇಕು. ಮರಗಳ ಬುಡದ ಪಾತಿಗಳನ್ನು ಸ್ವಚ್ಛಗೊಳಿಸಿ ಲಂಟಾನ ಮುಂತಾದ ಕಳೆ ಸಸ್ಯಗಳಿದ್ದರೆ ಬೇರುಸಮೇತ ಕಿತ್ತು ತೆಗೆಯಬೇಕು. ಅದರ ಜೊತೆಗೆ ಮರಗಳಲ್ಲಿ ಕಣ್ಣಾಡಿಸಿ ಪರಾವಲಂಬಿಸಸ್ಯಗಳಾದ ಬದನಿಕೆ (ಕಸ್ಕ್ಯುಟ, ಲೊರಾಂಥಸ್) ಮುಂತಾದುವುಗಳನ್ನು ಸವರಿ ತೆಗೆಯಬೇಕು. ಅಧಿಕ ಸಾಂದ್ರತೆ ನೆಡುವಿಕೆಯಲ್ಲಿ ಕಾಂಡ ಪರಾವಲಂಬಿಸಸ್ಯಗಳ ಹಾವಳಿ ಜಾಸ್ತಿಯಿರುತ್ತದೆ.
 
**
–ಡಾ.ಎಚ್.ಎಸ್.ಶಿವರಾಮು, ಮುನಿರತ್ನ
ಕೃಷಿ ವಿಶ್ವವಿದ್ಯಾಲಯ (ಹವಾಮಾನ ವಿಭಾಗ), ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT