ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ವಿರುದ್ಧ ಸಮರಕ್ಕೆ ಹೊಸ ಬಲ

Last Updated 5 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಪಾಕಿಸ್ತಾನದಲ್ಲಿ ನೆಲೆಯಾಗಿರುವ ಭಾರತ ವಿರೋಧಿ ಉಗ್ರಗಾಮಿ  ಸಂಘಟನೆಗಳು ಇಡೀ ಪ್ರದೇಶಕ್ಕೆ ಬೆದರಿಕೆಯಾಗಿ ರೂಪುಗೊಂಡಿವೆ ಎಂಬುದನ್ನು ‘ಹಾರ್ಟ್ ಆಫ್ ಏಷ್ಯಾ’ ಸಮಾವೇಶ  ಗುರುತಿಸಿದೆ. ಭ

ಯೋತ್ಪಾದನೆಯನ್ನು  ಪ್ರಾಯೋಜಿಸುವುದಲ್ಲದೆ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ ಎಂಬ ವಿಚಾರಕ್ಕೆ   ಈಗಾಗಲೇ ಏಕಾಂಗಿಯಾಗಿರುವ ಪಾಕಿಸ್ತಾನದ  ವಿರುದ್ಧ ಭಾರತ ಹಾಗೂ ಆಪ್ಘಾನಿಸ್ತಾನ  ಈ ಸಮಾವೇಶದಲ್ಲಿ ವಾಗ್ದಾಳಿ  ನಡೆಸಿರುವುದು ವಿಶೇಷ.

  ‘ಹಾರ್ಟ್ ಆಫ್ ಏಷ್ಯಾ’  ಸಮಾವೇಶದಲ್ಲಿ ಭಯೋತ್ಪಾದನೆ ವಿಚಾರ ಚರ್ಚೆಯ ಕೇಂದ್ರಬಿಂದುವಾಗಿದ್ದುದು ಸಹಜವೇ ಆಗಿತ್ತು. ಏಕೆಂದರೆ, 2011ರಲ್ಲಿ  ಟರ್ಕಿಯಲ್ಲಿ ಆರಂಭವಾದ ಈ ಸಮಾವೇಶದ ಉದ್ದೇಶವೇ ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ. ಈ ಪ್ರಕ್ರಿಯೆಯಲ್ಲಿ  ನೆರೆಹೊರೆ ರಾಷ್ಟ್ರಗಳನ್ನು ಒಳಗೊಂಡಂತೆ ಪ್ರಾದೇಶಿಕ ಸಹಕಾರ  ಬಲಪಡಿಸುವ ಆಶಯ ಈ ಸಚಿವ ಮಟ್ಟದ ಸಮಾವೇಶದ್ದಾಗಿದೆ. ಅಮೃತಸರದಲ್ಲಿ ನಡೆದದ್ದು ಆರನೇ ಸಮಾವೇಶ. 

ಇದರಲ್ಲಿ  40ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಮೃತಸರದಲ್ಲಿ  ಕೈಗೊಳ್ಳಲಾದ ನಿರ್ಣಯಗಳಲ್ಲಿ  ಇದೇ ಮೊದಲ ಬಾರಿಗೆ ಹಖ್ಖಾನಿ ಜಾಲ, ಜೈಷ್- ಎ- ಮೊಹಮ್ಮದ್, ಲಷ್ಕರ್ -ಎ- ತಯಬಾ, ಐಎಸ್ ಮುಂತಾದ ಉಗ್ರಗಾಮಿ ಸಂಘಟನೆಗಳ ಕೃತ್ಯಗಳನ್ನು ಖಂಡಿಸಲಾಗಿದೆ. ಈ ಕೃತ್ಯಗಳ ವಿರುದ್ಧ  ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಗ್ರಹವನ್ನೂ  ತೀವ್ರ ದನಿಯಲ್ಲಿ ಮಾಡಲಾಗಿದೆ. 

ಲಷ್ಕರ್-ಎ- ತಯಬಾ  (ಎಲ್‌ಇಟಿ) ಹಾಗೂ ಜೈಷ್- ಎ- ಮೊಹಮ್ಮದ್  (ಜೆಇಎಂ) ಪಾಕಿಸ್ತಾನ ಸೇನೆಯ ಸೃಷ್ಟಿ ಎಂಬುದು ಇಡೀ ವಿಶ್ವಕ್ಕೆ ಗೊತ್ತಿರುವ ಸಂಗತಿ. ಅಮೃತಸರದ ಈ ಘೋಷಣೆಯಲ್ಲಿ ಎಲ್‍ಇಟಿ ಹಾಗೂ ಜೆಇಎಂ ಹೆಸರು ಪ್ರಸ್ತಾಪವಾದದ್ದು ಭಾರತಕ್ಕೆ ಹೆಚ್ಚಿನ ಬಲ ನೀಡಿದಂತಾಗಿದೆ.

ಏಕೆಂದರೆ ಇತ್ತೀಚಿನ ಬ್ರಿಕ್ಸ್ ಗೋವಾ ಘೋಷಣೆಯಲ್ಲಿ ಈ ಉಗ್ರ ಗುಂಪುಗಳ ಹೆಸರು ಪ್ರಸ್ತಾಪವಾಗಿರಲಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್, ಅಲ್ ಕೈದಾ ಹಾಗೂ ಸಿರಿಯಾದ ಜುಭತ್ ಅಲ್- ನುಸ್ರಾ ಗುಂಪುಗಳ ಹೆಸರುಗಳ ಪ್ರಸ್ತಾಪವಾಗಿದ್ದವು. ಇದಕ್ಕೆ ಪಾಕಿಸ್ತಾನ ಹೇಗೆ ಸ್ಪಂದಿಸುತ್ತದೆ ಎನ್ನುವುದೂ ಮುಖ್ಯ. ಭಯೋತ್ಪಾದನೆಯ ಪಿಡುಗು ತನ್ನನ್ನೂ ಬಾಧಿಸುತ್ತಿದೆ ಎಂಬುದನ್ನು ಪಾಕಿಸ್ತಾನ ಮರೆಯಬಾರದು.

ತಮ್ಮ ದೇಶದ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಅಘೋಷಿತ ಯುದ್ಧ ಹಾಗೂ ಭಯೋತ್ಪಾದನೆ ಪ್ರಾಯೋಜಿಸುತ್ತಿರುವ ಬಗ್ಗೆ ಅಂತರರಾಷ್ಟ್ರೀಯ ತನಿಖೆ ನಡೆಯಬೇಕು ಎಂದು ಆಫ್ಘಾನಿಸ್ತಾನ ಅಧ್ಯಕ್ಷ ಮೊಹಮ್ಮದ್ ಘನಿ ಒತ್ತಾಯಿಸಿದ್ದಾರೆ. ‘ಹೆಚ್ಚುತ್ತಿರುವ ಭಯೋತ್ಪಾದನಾ ಹಿಂಸೆ ನಮ್ಮ  ಇಡೀ ಪ್ರಾಂತ್ಯವನ್ನು ಅಪಾಯಕ್ಕೆ ಒಡ್ಡಿದೆ.ಆಫ್ಘಾನಿಸ್ತಾನದಲ್ಲಿ ಶಾಂತಿಗೆ ಬೆಂಬಲ ಎಂದು ಬಾಯಲ್ಲಷ್ಟೇ ಹೇಳುವುದರಿಂದ  ಏನೂ ಪ್ರಯೋಜನವಾಗದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರೂ ಹೇಳಿದ್ದಾರೆ.

ಭಯೋತ್ಪಾದನೆ ಶಕ್ತಿಗಳ ವಿರುದ್ಧ ಮಾತ್ರವಲ್ಲ ಆ ಶಕ್ತಿಗಳಿಗೆ ಬೆಂಬಲ, ಆಶ್ರಯ, ತರಬೇತಿ ಹಾಗೂ ಹಣಕಾಸು ನೆರವು ನೀಡುವವರ ವಿರುದ್ಧ  ಉಗ್ರ ಕ್ರಮ ಅಗತ್ಯ  ಎಂಬುದು ಭಾರತದ ಪ್ರತಿಪಾದನೆ. ಹಾಗೆಯೇ ಮಾದಕ ವಸ್ತು ಹಾವಳಿ ಹಾಗೂ ಆಫ್ಘಾನಿಸ್ತಾನದಲ್ಲಿ ಭಯೋತ್ಪಾದನಾ ಶಕ್ತಿಗಳಿಗೆ ಅದರಿಂದ ದೊರಕುವ ಹಣಕಾಸು ಬೆಂಬಲ ವಿಚಾರವೂ ಈ ಸಮಾವೇಶದಲ್ಲಿ ಗಮನ ಸೆಳೆದುಕೊಂಡಿದ್ದು ಮುಖ್ಯವಾದದ್ದು.

ಈ ಕೊಂಡಿಯನ್ನು ಛಿದ್ರಗೊಳಿಸಲು ‘ಹಾರ್ಟ್ ಆಫ್ ಏಷ್ಯಾ’ ರಾಷ್ಟ್ರಗಳು ಒಗ್ಗೂಡಬೇಕು. ಭಯೋತ್ಪಾದನೆಯ ಸುರಕ್ಷಿತ ನೆಲೆಗಳನ್ನು ಬುಡಸಹಿತ ಕಿತ್ತುಹಾಕಲು ಕ್ರಮಗಳನ್ನು ಕೈಗೊಳ್ಳಲು ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಸಹಕಾರ ಹೆಚ್ಚಾಗಬೇಕು. ಜೊತೆಗೆ  ಭಯೋತ್ಪಾದನೆ ಸಮಸ್ಯೆ ನಿವಾರಣೆಗೆ ರಾಜಕೀಯ ನೆಲೆಗಳಲ್ಲಿ  ಪರಿಹಾರ ಸೂತ್ರಗಳನ್ನು ರೂಪಿಸುವುದೂ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT