ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 6 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಎಚ್‌. ಹನುಮಂತಯ್ಯ, ಕ್ಯಾತಸಂದ್ರ
* ನಾನು ನನ್ನ ಹೆಂಡತಿ ಈರ್ವರೂ ನಿವೃತ್ತ ಸರ್ಕಾರಿ ಅಧಿಕಾರಿಗಳು. ನಮಗೆ ಕ್ರಮವಾಗಿ ₹ 19,000 ಹಾಗೂ 16,000 ಪಿಂಚಣಿ ಬರುತ್ತದೆ. ನನಗೆ ಈರ್ವರೂ ಮಕ್ಕಳು (ಗಂಡು–ಹೆಣ್ಣು) ವಯಸ್ಸು 30–35 ಮಗನಿಗೆ ಕೆಲಸವಿಲ್ಲ. ಮಗಳು ಕುಟುಂಬದ ವಿರಸದಿಂದ ನಮ್ಮೊಡನಿದ್ದಾಳೆ. ನನ್ನ ಪತ್ನಿಯ ಹೆಸರಿನಲ್ಲಿ ತುಮಕೂರಿನಲ್ಲಿ 30X40 ನಿವೇಶನವಿದೆ. ಈ ನಿವೇಶನ ಮಾರಾಟ ಮಾಡಿದಲ್ಲಿ ₹ 25 ಲಕ್ಷಗಳ ತನಕ ಬರಬಹುದು. ಈ ಹಣಕ್ಕೆ ತೆರಿಗೆ ಬರುತ್ತದೆಯೇ ಹಾಗೂ ಹೀಗೆ ಬಂದ ಹಣ ಮಕ್ಕಳಿಗೆ ಸಮಾನವಾಗಿ ಹಂಚಿ, ಠೇವಣಿ ಇರಿಸಿದರೆ ತೆರಿಗೆ ಬರುತ್ತದೆಯೇ, ತಿಳಿಸಿರಿ. ಎಲ್ಲಿ ಭದ್ರವಾಗಿ ಇರಿಸಬಹುದು ತಿಳಿಸಿರಿ.
ಉತ್ತರ: ನಿವೇಶನ ಮಾರಾಟ ಮಾಡಿ ಬಂದಿರುವ ಲಾಭದ ಮೊತ್ತಕ್ಕೆ  ಕ್ಯಾಪಿಟಲ್‌ ಗೇನ್‌ ಟ್ಯಾಕ್‌್ಸ ಶೇ 20 ಕೊಡಬೇಕಾಗುತ್ತದೆ. ಇದೇ ವೇಳೆ ಸಂಪೂರ್ಣ ತೆರಿಗೆ ವಿನಾಯತಿ ಪಡೆಯಲು ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾ ಅಥವಾ ರೂರಲ್‌ ಇಲೆಕ್ಟೆಫಿಕೇಷನ್‌ ಇವುಗಳಲ್ಲಿ ಮೂರು ವರ್ಷಗಳ ಅವಧಿಗೆ ಠೇವಣಿ ಇಡಬಹುದು. ಹೀಗೆ ಬಂದಿರುವ ಹಣ ನೀವು ಮಕ್ಕಳಿಗೆ ಇಮಾಮಾಗಿ (ಗಿಫ್‌್ಟ) ಕೊಡಿರಿ. ಇದರಿಂದ ನಿಮಗೆ ಹಾಗೂ ಮಕ್ಕಳಿಗೆ ಯಾವ ತೆರಿಗೆಯೂ ಬರುವುದಿಲ್ಲ. ಹಣವನ್ನು ನೀವು ಬಯಸಿದಂತೆ ಸರಿಯಾಗಿ ವಿಂಗಡಿಸಿ ಇಬ್ಬರ ಹೆಸರಿನಲ್ಲಿಯೂ ಇಡಿರಿ, ಮುಂದೆ ಬ್ಯಾಂಕು ಹೊರತುಪಡಿಸಿ ಬೇರೆ ಎಲ್ಲೂ ಹೆಚ್ಚಿನ ಬಡ್ಡಿ ಆಸೆಯಿಂದ ಹಣ ಹೂಡಬೇಡಿರಿ.
 
*
ದಿವ್ಯ, ಊರು ಬೇಡ
* ನಾನು ಎಂಜಿನಿಯರಿಂಗ್‌ ವಿದ್ಯಾರ್ಥಿ. 2012 ಕೆನರಾ ಬ್ಯಾಂಕಿನಿಂದ ವಿದ್ಯಾ ಸಾಗರ ಯೋಜನೆಯ ಅಡಿಯಲ್ಲಿ ಶಿಕ್ಷಣ ಸಾಲ ಪಡೆದಿದ್ದೆ. ನನ್ನ ಓದು ಮುಗಿದಿದೆ. ನಾನು ತೆಗೆದುಕೊಂಡ ₹ 2.97 ಲಕ್ಷಕ್ಕೆ ₹ 91,501 ಬಡ್ಡಿ ಬಂದಿದೆ. ನಿಮ್ಮ ಪ್ರಶ್ನೋತ್ತರದಲ್ಲಿ ಶಿಕ್ಷಣ ಸಾಲಕ್ಕೆ ಬಡ್ಡಿ ಇಲ್ಲ ಎಂಬುದಾಗಿ ಬರೆದಿದ್ದೀರಿ. ನನಗೆ ಬಡ್ಡಿ ಮನ್ನಾ ಆಗಬಹುದೇ ತಿಳಿಸಿ.
ಉತ್ತರ: ವೃತ್ತಿಪರ ಶಿಕ್ಷಣ ಸಾಲ, ₹ 10 ಲಕ್ಷಗಳ ತನಕ, ಯಾವುದೇ ವಿದ್ಯಾರ್ಥಿ ಆತನ/ ಅವಳ ಕುಟುಂಬದ ವಾರ್ಷಿಕ ಆದಾಯ ₹ 4.50 ಲಕ್ಷಗಳ ಒಳಗಿರುವಲ್ಲಿ ಅನುದಾನಿತ (Interest Subsidy) ಪಡೆಯಬಹುದು. ಕುಟುಂಬದ ವಾರ್ಷಿಕ ಆದಾಯ ₹ 4.50 ಲಕ್ಷ ದೊಳಗಿದ್ದಲ್ಲಿ ತಹಸೀಲ್ದಾರರಿಂದ ಪ್ರಮಾಣಪತ್ರ ಪಡೆದು ಬ್ಯಾಂಕಿಗೆ ಸಾಲ ಪಡೆಯುವಾಗಲೇ ಸಲ್ಲಿಸಬೇಕು. ನಿಮ್ಮ ವಿಚಾರದಲ್ಲಿ ನೀವು ನಾನು ವಿವರಿಸಿದ ಪುರಾವೆ ಬ್ಯಾಂಕಿಗೆ ಕೊಟ್ಟಂತೆ ಕಾಣುತ್ತಿಲ್ಲ. ಕೆನರಾ ಬ್ಯಾಂಕ್‌ ಭಾರತದ ಒಂದು ಉತ್ಕೃಷ್ಟ ರಾಷ್ಟ್ರೀಕೃತ ಬ್ಯಾಂಕ್‌. ಇಲ್ಲಿ ನಿಮ್ಮ ಮನವಿ ಪತ್ರ ಕೊಟ್ಟು ಪ್ರಯತ್ನಿಸಿರಿ. ನಿಮ್ಮ ಆಸೆ ಸಫಲವಾಗಲಿ ಎಂದು ಆಶಿಸುತ್ತೇನೆ.. 
 
*
ರಾಮಣ್ಣ, ರಾಣೇಬೆನ್ನೂರು
* ನನ್ನ ಮಗ ಎಂ.ಬಿ.ಎ. ಓದಿ ಕಂಪೆನಿಯೊಂದರಲ್ಲಿ ನೌಕರಿಗೆ ಸೇರಿದ. ನಾವು ಆತನ ಓದುವಿಕೆಗೆ ₹ 5 ಲಕ್ಷ ಬ್ಯಾಂಕ್‌ ಸಾಲ ಪಡೆದಿದ್ದೆವು. ನಮ್ಮ ದುರಾದೃಷ್ಟದಿಂದ ಈತ ಅಪಘಾತದಲ್ಲಿ ತೀರಿಕೊಂಡ. ನಮಗೆ ಏನೂ ಆದಾಯವಿಲ್ಲ. ಬ್ಯಾಂಕಿನವರು ಸಾಲ ತೀರಿಸುವಂತೆ ವಕೀಲರ ನೋಟೀಸ್‌ ಕಳಿಸಿರುತ್ತಾರೆ.  ಈ ಸಾಲ ಮನ್ನಾವಾಗಲು ಯಾರನ್ನು ಸಂಪರ್ಕಿಸಲಿ, ತಿಳಿಸಿ.
ಉತ್ತರ: ಪ್ರಪ್ರಥಮವಾಗಿ ನಿಮ್ಮ ಮಗನ ಅಕಾಲ ಮರಣಕ್ಕೆ ನಾನು ವಿಷಾದಿಸುತ್ತೇನೆ. ಇಂತಹ ಸಂದರ್ಭದಲ್ಲಿ ವಿಷಯ ತಿಳಿಸಿ ಬಡ್ಡಿ ಹಾಗೂ ಅಸಲಿನಲ್ಲಿ ಏನಾದರೂ ಮನ್ನಾ ಮಾಡಲು ಬ್ಯಾಂಕಿಗೆ ಅರ್ಜಿ ಹಾಕಿರಿ. ಬ್ಯಾಂಕುಗಳು ನೀಡುವ ಸಾಲ, ಜನರಿಂದ ಪಡೆದ ಠೇವಣಿ ಎಂಬುದು ಇಲ್ಲಿ ಮರೆಯುವಂತಿಲ್ಲ. ನಿಮ್ಮ ಕಷ್ಟ ಎಲ್ಲರಿಗೂ ಅರ್ಥವಾಗುತ್ತದೆ. ಆದರೆ ಬ್ಯಾಂಕುಗಳು ಸಹಾ ಅವರ ರೂಲ್‌್ಸ–ರೆಗ್ಯುಲೇಷನ್‌ ಪಾಲಿಸಬೇಕಾಗುತ್ತದೆ. ಪ್ರಾಯಶಃ ಬಡ್ಡಿ ಮನ್ನಾ ಆಗಬಹುದು. ಓದುಗರಿಗೊಂದು ಕಿವಿ ಮಾತು. ಮಕ್ಕಳ ಉನ್ನತ ಶಿಕ್ಷಣ ಸಾಲ ಅಥವಾ ಮಕ್ಕಳು ಶಿಕ್ಷಣ ಪಡೆದು ಮುಂದೆ ಗೃಹಸಾಲ ಪಡೆದು ಮನೆ ಕಟ್ಟಿಸುವ ಸಂದರ್ಭದಲ್ಲಿ, ಇಂತಹ ವ್ಯಕ್ತಿಗಳು ಮರೆಯದೆ ಕಡ್ಡಾಯವಾಗಿ ‘ಟರ್ಮ್‌ ಇನ್ಯುರೆನ್ಸ್‌’ ಸಾಲದ ಮೊತ್ತಕ್ಕೆ ಕಡಿಮೆಯಾಗದಷ್ಟು ಮಾಡಲೇ ಬೇಕು. ಟರ್ಮ್‌ ಇನ್ಶೂರೆನ್‌್ಸ ಉಳಿದ ವಿಮೆಯಂತಲ್ಲ. ಇಲ್ಲಿ ಕಟ್ಟಿದ ಹಣ ವಾಪಸು ಬರುವುದಿಲ್ಲ. ಆದರೆ ಸಾಲ ಪಡೆದ ವ್ಯಕ್ತಿ ಅಕಾಲ ಮರಣಕ್ಕೀಡಾದಾಗ, ಸಾಲ ತಾನಾಗಿ ವಿಮೆ ಹಣದಿಂದ ತೀರಿ ಹೋಗುತ್ತದೆ. ಈ ವಿಮಗೆ ಕಂತು ತುಂಬಾ ಕಡಿಮೆ ಇರುತ್ತದೆ.
 
*
ಕೆ.ಎಂ. ತಾರಾ, ತರೀಕೆರೆ
* ನಾನು ಲಕ್ಕವಳ್ಳಿಯಲ್ಲಿ ಕೆನರಾ ಬ್ಯಾಂಕಿಗೆ ನಮ್ಮ ಮನೆ ₹ 11,800 ತಿಂಗಳ ಬಾಡಿಗೆಗೆ ಕೊಟ್ಟಿದ್ದೇನೆ. ಬ್ಯಾಂಕಿನವರು ಇದರಲ್ಲಿ ತೆರಿಗೆ ಮುರಿದು ನನಗೆ ಹಣ ಕೊಡುತ್ತಾರೆ. ಎಷ್ಟು ಬಾಡಿಗೆ ಬಂದರೆ ತೆರಿಗೆ ಮುರಿಯುವುದಿಲ್ಲ ಹಾಗೂ ತೆರಿಗೆ, ವಾಪಸು ಪಡೆಯಬಹುದೇ?.
ಉತ್ತರ: ಸೆಕ್ಷನ್‌ 194 ಪ್ರಕಾರ ಬಾಡಿಗೆ ಪಡೆದ ವ್ಯಕ್ತಿ ಬಾಡಿಗೆಯಲ್ಲಿ ಶೇ 10 ಮುರಿದು ಆದಾಯ ತೆರಿಗೆ ಕಚೇರಿಗೆ ರವಾನಿಸಬೇಕಾಗುತ್ತದೆ. ನಿಮ್ಮ ವಾರ್ಷಿಕ ಬಾಡಿಗೆ ಆದಾಯ ₹ 1,41,600. ಇದರಲ್ಲಿ ಸೆಕ್ಷನ್‌ 24(ಎ) ಆಧಾರದ ಮೇಲೆ ಶೇ 30 ಕಡಿತ ಮಾಡಿ ತೆರಿಗೆ ಸಲ್ಲಿಸಬಹುದು. ಅಂದರೆ ಬಾಡಿಗೆ ಆದಾಯ ₹ 99,120. ನಿಮ್ಮ ಉಳಿದ ಆದಾಯ ಹಾಗೂ ಬಾಡಿಗೆ ಆದಾಯ ವಾರ್ಷಿಕವಾಗಿ ₹ 2.50 ಲಕ್ಷ ದೊಳಗಿದ್ದರೆ, ಬ್ಯಾಂಕಿನಲ್ಲಿ ಕಡಿತವಾದ ತೆರಿಗೆ, ಆದಾಯ ರಿಟರ್ನ್‌ ತುಂಬಿ ವಾಪಸು ಪಡೆಯಬಹುದು. ನೀವು ನಿಮ್ಮ ಜಿಲ್ಲಾ ಕೇಂದ್ರದಲ್ಲಿ ಇರುವ ಆದಾಯ ತೆರಿಗೆ ಕಚೇರಿಗೆ ಭೇಟಿ ನೀಡಿ, ವಾರ್ಷಿಕ ಆದಾಯದ ವಿಚಾರದಲ್ಲಿ ಪುರಾವೆ ಸಲ್ಲಿಸಿ, ಸೆಕ್ಷನ್‌ 194 ರಂತೆ ಬಾಡಿಗೆಯಲ್ಲಿ ತೆರಿಗೆ ಮುರಿಯದಂತೆ ಮಾಡಿಕೊಳ್ಳಬಹುದು. 
 
*
ಪ್ರವೀಣ್‌, ಊರು ಬೇಡ
* ನನ್ನ ಅಣ್ಣನ ಮಗಳ ವಯಸ್ಸು 3, ಅವಳ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ₹ 50,000, ಅವಳು 18 ವರ್ಷ ತುಂಬುವಾಗ ಪಡೆಯಲು, ಉತ್ತಮ ಯೋಜನೆ ತಿಳಿಸಿ.
ಉತ್ತರ: ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ 15 ವರ್ಷ ಅವಧಿ ಠೇವಣಿ ಇರುವುದಿಲ್ಲ. ಬ್ಯಾಂಕುಗಳಲ್ಲಿ ಗರಿಷ್ಠ 10 ವರ್ಷಗಳ ಅವಧಿಗೆ ಠೇವಣಿ ಇರಿಸಬಹುದು. ನೀವು ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ₹ 50,000 ಒಮ್ಮೇಲೆ ಬಡ್ಡಿ ಬರುವ ‘Re-Investment’ ಠೇವಣಿಯಲ್ಲಿ ತೊಡಗಿಸಿ. ಹೀಗೆ ಹೂಡಿರುವ ಹಣ 10 ವರ್ಷಗಳಲ್ಲಿ ದೊಡ್ಡ ಮೊತ್ತವಾಗಿ ನಿಮ್ಮ ಕೈ ಸೇರುತ್ತಲೇ, ಸಂಪೂರ್ಣ ಮೊತ್ತ ಮುಂದೆ 5 ವರ್ಷಗಳ ಅವಧಿಗೆ ಇದೇ ರೀತಿ ಮುಂದುವರಿಸಿರಿ. ಇದರಿಂದ ನಿಮ್ಮ ಗುರಿ ಸಾಧಿಸಿದಂತಾಗುತ್ತದೆ, ಜೊತೆಗೆ ಆ ಮಗುವಿನ ಭವಿಷ್ಯ ಸೃಷ್ಟಿಸಿದಂತಾಗುತ್ತದೆ.
 
*
ನಿರ್ಮಲಾ, ಮೈಸೂರು
* 16 ವರ್ಷಗಳ ಹಿಂದೆ ಒಂದು ಖಾಸಗಿ ಲೇಔಟ್‌ನಿಂದ 30X40 ನಿವೇಶನ ಕೊಂಡಿದ್ದೆ. ಈ ಲೇಔಟ್‌ನವರ ಪ್ರಕಾರ ಎರಡುಬಾರಿ ಡೆವಲಪ್‌ಮೆಂಟ್‌ ಚಾರ್ಜ್‌ ಕಟ್ಟಿದ್ದೇನೆ. ಒಂದು ವರ್ಷದ ಹಿಂದೆ ನನ್ನ ಹೆಸರಿಗೆ ನಿವೇಶನ ರಿಜಿಸ್ಟರ್ಡ್‌ ಮಾಡಿ ಖಾತೆ ಮಾಡಿಕೊಟ್ಟಿದ್ದಾರೆ. ಈಗ ಮತ್ತೆ ಒಂದು ಅಡಿಗೆ ₹ 300 ರಂತೆ ಕಟ್ಟಲು ಹೇಳುತ್ತಾರೆ. ನಾನು ಹಣ ಕಟ್ಟಬೇಕೇ ಬೇಡವೇ ತಿಳಿಸಿ.
ಉತ್ತರ: ಯಾವುದಾದರೂ ಸ್ಥಿರ ಆಸ್ತಿ ಖರೀದಿಸಿ, ಕ್ರಯಪತ್ರ ನೋಂದಾಯಿಸಿ, ಖಾತೆ ಕಂದಾಯ ಎಲ್ಲವೂ ಆದ ನಂತರ, ಆ ಆಸ್ತಿಗೆ ಬೇರೆ ಹಣ ತುಂಬುವ ಅವಕಾಶವಿಲ್ಲ. ಕೆಲವೊಮ್ಮೆ ‘ಬಿ’ ಖಾತೆಯಾದಲ್ಲಿ ಡೆವಲಪ್‌ಮೆಂಟ್‌ ಚಾರ್ಜ್‌ ಕಟ್ಟಿ ‘ಎ’ ಖಾತಾ ಮಾಡಿಸಿಕೊಳ್ಳಬೇಕಾಗುತ್ತದೆ. ನೀವು ಈ ಹಿಂದೆ ಡೆವಲಪ್‌ಮೆಂಟ್‌ ಚಾರ್ಜು ಕಟ್ಟಿರುವುದಾಗಿ ತಿಳಿಸಿದ್ದೀರಿ. ಎಲ್ಲಕ್ಕೂ ಮುಖ್ಯವಾಗಿ ಡೆವಲಪ್‌ಮೆಂಟ್‌ ಚಾರ್ಜು ಒಂದು ಅಡಿಗೆ ₹ 300 ಬರಲು ಸಾಧ್ಯವಿಲ್ಲ. ನಿಮ್ಮ ಲೇಔಟ್‌ನಲ್ಲಿ ಇತರರು ಕೂಡಾ ನಿಮ್ಮಂತೆ ನಿವೇಶನ ಕೊಂಡಿರುವುದರಿಂದ, ಹೀಗೆ ಕೊಂಡವರನ್ನು ವಿಚಾರಿಸಿ.
 
*
ಅನಂತ ಕುಲಕರ್ಣಿ
* ನಾನು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ನನ್ನ ಸಂಬಳ ₹ 17,300. ತಿಂಗಳ ಖರ್ಚು ₹ 6000. ಈಗಾಗಲೇ ನಾನು ಎಚ್‌.ಡಿ.ಎಫ್‌.ಸಿ. ಮ್ಯೂಚುವಲ್‌ ಫಂಡ್‌ ಗ್ರೋತ್‌ ಪ್ಲ್ಯಾನ್‌ನಲ್ಲಿ ಹಣ ಹೂಡಿದ್ದೇನೆ. ಸಿಪ್‌ (ಎಸ್‌ಐಪಿ) ಮಾಡಬಹುದೇ, ಇದು ಬ್ಯಾಂಕ್‌ ಠೇವಣಿಗಿಂತ ಲಾಭದಾಯಕವೇ ತಿಳಿಸಿ.
ಉತ್ತರ: ಎಚ್.ಡಿ.ಎಫ್.ಸಿ. ಮ್ಯೂಚುವಲ್‌ ಫಂಡ್‌ ಒಂದು ಉತ್ತಮವಾದ ಸಂಸ್ಥೆ. ಅವರು ನೀವು ಹೂಡಿದ ಹಣ ಷೇರು ಮಾರುಕಟ್ಟೆ ಹಾಗೂ ಸರ್ಕಾರಿ ಬ್ಯಾಂಕುಗಳಲ್ಲಿ ತೊಡಗಿಸುತ್ತಾರೆ. ಷೇರು ಮಾರುಕಟ್ಟೆ ಏರಿಳಿತದ ಮೇಲೆ ಲಾಭ–ನಷ್ಟ ಬರುತ್ತದೆ. ‘ಸಿಪ್‌’ನಲ್ಲಿ ಪ್ರತೀ ತಿಂಗಳೂ ತುಂಬಬಹುದು. ಇದು ಬ್ಯಾಂಕ್‌ ಠೇವಣಿಗಿಂತ ಲಾಭದಾಯಕವಾಗಲೂಬಹುದು ಹಾಗೂ ನಷ್ಟ ಕೂಡಾ ಅನುಭವಿಸಬೇಕಾಗಬಹುದು. ಬ್ಯಾಂಕ್‌ ಠೇವಣಿಯಲ್ಲಿ ಹೆಚ್ಚಿನ ವರಮಾನ ಬರುವುದಿಲ್ಲ ಆದರೆ ನಷ್ಟ ಅನುಭವಿಸುವ ಸಾಧ್ಯತೆ ಇಲ್ಲ.
 
*
ಪ್ರದೀಪ್‌ ಗೌಡ, ರಾಮನಗರ
* ನನ್ನ ತಂದೆ ಹೆಸರಿನಲ್ಲಿರುವ ಒಂದು ಎಕರೆ ಜಮೀನು ಮಾರಾಟದಿಂದ ಈಗ ₹ 45 ಲಕ್ಷ ಬಂದಿದೆ. ಇದರಲ್ಲಿ ಮನೆ ಕಟ್ಟಲು ಹಾಗೂ ಇತರೆ  ಖರ್ಚು ₹ 30 ಲಕ್ಷ ಖರ್ಚಾಗಿದೆ. ಉಳಿದ ₹ 15 ಲಕ್ಷ ನಿವೇಶನ ಕೊಳ್ಳಲು ತೆಗೆದಿಟ್ಟಿದ್ದೇವೆ. ನಿವೇಶನ ಕೊಳ್ಳುವ ತನಕ ಈ ಹಣ ಬ್ಯಾಂಕಿನಲ್ಲಿ ಇರಿಸಬೇಕೆಂದಿದ್ದೇವೆ. ಠೇವಣಿಗೆ ಆದಾಯ ತೆರಿಗೆ ಬರುತ್ತದೆಯೇ ಹಾಗೂ ತಿಂಗಳಿಗೆ ಎಷ್ಟು ಬಡ್ಡಿ ಬರಬಹುದು. ದಯಮಾಡಿ ತಿಳಿಸಿ.
ಉತ್ತರ: ನಿವೇಶನ ಕೊಂಡುಕೊಳ್ಳುವ ತನಕ ₹ 15 ಲಕ್ಷ ಬ್ಯಾಂಕಿನಲ್ಲಿ ಠೇವಣಿಯಾಗಿಡಿ. ಸದ್ಯಕ್ಕೆ ಒಂದು ವರ್ಷದ ಅವಧಿಗೆ ಇರಿಸಿರಿ. ಅಷ್ಟರಲ್ಲಿ ನಿವೇಶನ ದೊರೆತರೆ ಕೊಂಡುಕೊಳ್ಳಿ. ಒಂದು ವೇಳೆ ಸಿಗದಿರುವಲ್ಲಿ ಠೇವಣಿ ಎಷ್ಟು ವರ್ಷಗಳಿಗೂ ಮುಂದುವರಿಸಬಹುದು. ಈ ಅವಧಿ ಮಧ್ಯ ನಿವೇಶನ ಕೊಂಡುಕೊಳ್ಳುವ ಸಂದರ್ಭ ಬಂದಲ್ಲಿ ಠೇವಣಿಯನ್ನು ಅವಧಿಗೆ ಮುನ್ನ ಕೂಡಾ ವಾಪಸು ಪಡೆಯುವ ಹಕ್ಕು ನಿಮಗಿರುತ್ತದೆ. ₹ 15 ಲಕ್ಷಕ್ಕೆ ಶೇ  8 ಬಡ್ಡಿದರದಲ್ಲಿ ವಾರ್ಷಿಕವಾಗಿ ₹ 1.20 ಲಕ್ಷ ಬಡ್ಡಿ ಬರುತ್ತದೆ ಹಾಗೂ ತಿಂಗಳಿಗೆ ₹ 10,000 ಪಡೆಯಬಹುದು. ಕೃಷಿ ಹೊರತುಪಡಿಸಿ ನಿಮ್ಮ ಒಟ್ಟು ಬಡ್ಡಿ ಹಾಗೂ ಇತರೆ ವಾರ್ಷಿಕ ಆದಾಯ ₹ 2.50 ಲಕ್ಷ ದೊಳಗಿರುವಲ್ಲಿ, ಆದಾಯ ತೆರಿಗೆ ಬರುವುದಿಲ್ಲ. ಬಡ್ಡಿಯಲ್ಲಿ ತೆರಿಗೆ ಮುರಿಯದಂತೆ, ಹಣವಿರಿಸುವಾಗ ಹಾಗೂ ಪ್ರತೀ ವರ್ಷ ಏಪ್ರಿಲ್‌ ಒಂದನೇ ವಾರ 15–ಜಿ ನಮೂನೆ ಫಾರಂ ಪ್ರತಿಯಲ್ಲಿ ಬ್ಯಾಂಕಿಗೆ ಸಲ್ಲಿಸಿ. 15–ಜಿ ಫಾರಂ ಬ್ಯಾಂಕಿನವರೇ ಶುಲ್ಕ ರಹಿತವಾಗಿ ವಿತರಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT