ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮಿಗಳ ವೇದಿಕೆ ‘ಶಾಪ್‌ಮ್ಯಾಟಿಕ್‌ ಗೋ ಆ್ಯಪ್‌’

Last Updated 6 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಕೈಗೆಟುಕುವ ಬೆಲೆಗೆ ಸ್ಮಾರ್ಟ್‌ಫೋನ್‌ ಮತ್ತು ಅಂತರ್ಜಾಲ ಲಭ್ಯವಿರುವುದರಿಂದ ಉದ್ಯಮ ವಲಯ ಹೊಸ ಆಯಾಮಗಳಿಗೆ ತೆರೆದುಕೊಳ್ಳುತ್ತಿದೆ. ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳೂ ಹೊಸದಾಗಿ ಉದ್ಯಮ ಸ್ಥಾಪಿಸುವವರಿಗಾಗಿ ವೇದಿಕೆ ಕಲ್ಪಿಸಿಕೊಟ್ಟಿದೆ.
 
ಇನ್ನೊಂದೆಡೆ, ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಪ್ರಮುಖ ಇ–ಕಾಮರ್ಸ್‌ ಕಂಪೆನಿಗಳು ಸಹ ಹೊಸ ಉದ್ಯಮ ಸ್ಥಾಪಿಸುವವರಿಗೆ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಪ್ರತ್ಯೇಕ ವೇದಿಕೆ ಕಲ್ಪಿಸಿವೆ. 
 
ಇದೇ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಇ–ಕಾಮರ್ಸ್‌ ಕಂಪೆನಿ ಶಾಪ್‌ಮ್ಯಾಟಿಕ್‌ ಕೂಡಾ ‘ಶಾಪ್‌ಮ್ಯಾಟಿಕ್‌ ಗೊ’ ಎಂಬ ಆ್ಯಪ್‌ ಪರಿಚಯಿಸಿದೆ. ಈ ಬಗ್ಗೆ ಸಿಇಒ ಅನುರಾಗ್‌ ಔಲಾ ಅವರು ಮಾಹಿತಿ ನೀಡಿದ್ದಾರೆ.
 
‘ಶಾಪ್‌ಮ್ಯಾಟಿಕ್‌ ಗೊ’ ಆ್ಯಪ್‌ ಹೊಸದಾಗಿ ಉದ್ಯಮ ಆರಂಭಿಸುವ ಅಥವಾ ವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಅನುಕೂಲವಾಗಿದೆ. ಯಾವುದೇ ನೋಂದಣಿ ಶುಲ್ಕ, ದಾಖಲೆಪತ್ರಗಳು ಇಲ್ಲದೇ ಮಾರಾಟಗಾರ ತನ್ನಲ್ಲಿರುವ ವಸ್ತುಗಳನ್ನು ಮಾರಾಟ ಮಾಡಬಹುದು ಎಂದು ಅವರು ಹೇಳುತ್ತಾರೆ. 
 
ಅಮೆಜಾನ್‌, ಫ್ಲಿಪ್‌ಕಾರ್ಟ್‌ ನಂತಹ ವೇದಿಕೆ ಬಳಸಿಕೊಳ್ಳಲು ನೋಂದಣಿ ಅಗತ್ಯವಿದೆ. ವರ್ಗಾವಣೆ ಮೊತ್ತ ಶೇ 30ರವರೆಗೆ ಪಾವತಿಸಬೇಕಾಗುತ್ತದೆ. ಆದರೆ ನಮ್ಮ ಈ ಆ್ಯಪ್‌ನಲ್ಲಿ ಅಂತಹ ಯಾವುದೇ ನೋಂದಣಿ, ದಾಖಲೆಗಳ ಪರಿಶೀಲನೆ ಇರುವುದಿಲ್ಲ. ಕೇವಲ 2 ನಿಮಿಷದಲ್ಲಿ ಯಾರು ಬೇಕಾದರೂ ತಮ್ಮ ಆನ್‌ಲೈನ್‌ ಸ್ಟೋರ್‌  ಸೃಷ್ಟಿಸಿಕೊಂಡು, ವಸ್ತುಗಳನ್ನು ಮಾರಾಟ ಮಾಡಬಹುದು ಎನ್ನುತ್ತಾರೆ ಅವರು.
 
ಚಿತ್ರಕಲೆ, ಕರಕುಶಲ ವಸ್ತುಗಳು ಹೀಗೆ ಯಾವುದೇ ರೀತಿಯ ವಸ್ತುಗಳನ್ನಾದರೂ ಮಾರಾಟ ಮಾಡಬಹುದು. ಇದಕ್ಕೆ ಯಾವುದೇ ರೀತಿಯ ಶುಲ್ಕ, ನಿರ್ವಹಣಾ ವೆಚ್ಚ ಇರುವುದಿಲ್ಲ. ಸದ್ಯ, ಆಂಡ್ರಾಯ್ಡ್‌ ಫೋನ್‌ನಲ್ಲಿ ಮಾತ್ರವೇ ಈ ಆ್ಯಪ್‌ ಕಾರ್ಯನಿರ್ವಹಿಸುತ್ತದೆ. ಶೀಘ್ರವೇ ಐಫೋನ್‌ನಲ್ಲಿಯೇ ಕೆಲಸ ಮಾಡುವಂತೆ  ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು. 
 
ಶೇ 25, 30 ಗ್ರಾಹಕರು  ಮಾತ್ರ ಮಹಾನಗರಗಳಿಂದ ಬರುತ್ತಿದ್ದಾರೆ. ಹೀಗಾಗಿ ನಗರಗಳಿಗೂ ಈ ಸೇವೆ ವಿಸ್ತರಿಸುವುದು ಸಂಸ್ಥೆಯ ಉದ್ದೇಶವಾಗಿದೆ.
ಕಾರ್ಯವೈಖರಿ
 
ಉದಾಹರಣೆಗೆ: ‘ಮರದಿಂದ ತಯಾರಿಸಿದ ಒಂದು ಆಟಿಕೆಯನ್ನು ಮಾರಾಟ ಮಾಡಬೇಕು ಎಂದುಕೊಳ್ಳೋಣ. ಅದರ ಚಿತ್ರವನ್ನು ತೆಗೆದು ಆ್ಯಪ್‌ನಲ್ಲಿ ಪೋಸ್ಟ್‌ ಮಾಡಬೇಕು. ಅದರ ಮೊತ್ತವನ್ನು ನೀಡಬೇಕು. ನಂತರ ಇ–ಮೇಲ್‌ ವಿಳಾಸ, ಮೊಬೈಲ್‌ ನಂಬರ್‌ ಮತ್ತು ವಿಳಾಸ ನೀಡಬೇಕಾಗುತ್ತದೆ. ಇಷ್ಟು ವಿವರಗಳನ್ನು ತುಂಬಿದ ಬಳಿಕ ವಹಿವಾಟು ನಡೆಸುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು (ನೆಟ್‌/ ಮೊಬೈಲ್‌ ಬ್ಯಾಂಕಿಂಗ್‌)’ ಎಂದು ಅವರು ವಿವರಿಸುತ್ತಾರೆ. 
 
ಪೇಮೆಂಟ್‌ ಗೇಟ್‌ವೇಗಾಗಿ ಸಿಟ್ರಸ್‌ ಪೇ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಸ್ಥಳದಲ್ಲೇ ಪಾವತಿ (ಕ್ಯಾಷ್‌ ಆನ್‌ ಡೆಲಿವರಿ) ಒಳಗೊಂಡು ಯಾವುದೇ ವಿಧದಲ್ಲಾದರೂ ವಹಿವಾಟು ನಡೆಸಬಹುದು. ಖಾತೆಯಿಂದ ಹಣ ಪಡೆಯಬೇಕಾದರೆ ಮಾತ್ರವೇ ವೈಯಕ್ತಿಕ ಮಾಹಿತಿ  (ಕೆವೈಸಿ) ಅಗತ್ಯ.
 
ನಾವು ಜವಾಬ್ದಾರರಲ್ಲ
‘ಮಾರಾಟಗಾರರಿಗೆ ವೇದಿಕೆ ಕಲ್ಪಿಸುವುದಷ್ಟೇ ನಮ್ಮ ಉದ್ದೇಶ. ವಸ್ತುಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕಂಪೆನಿಗೆ ಯಾವುದೇ ಸಂಬಂಧ ಇಲ್ಲ. ಇದು ಮಾರಾಟಗಾರ ಮತ್ತು ಗ್ರಾಹಕರಿಗೆ ಸಂಬಂಧಪಟ್ಟಿದ್ದು. ವಿಶ್ವಾಸದ ಮೇಲೆ ಮಾರಾಟ–ಖರೀದಿ ನಡೆಯುತ್ತದೆ ಈ ಬಗ್ಗೆ ಕಂಪೆನಿ ಯಾವುದೇ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ’ ಎನ್ನುತ್ತಾರೆ ಅವರು.
 
ಒಂದೊಮ್ಮೆ ವಂಚನೆ ನಡೆದರೆ ಹೇಗೆ ಎನ್ನುವ ಪ್ರಶ್ನೆಗೆ, ‘ಗ್ರಾಹಕರಿಗೆ ಮೋಸ ಮಾಡಲಾಗಿದೆ ಎನ್ನುವುದು ಗಮನಕ್ಕೆ ಬಂದರೆ ಪೇಮೆಂಟ್‌ ಗೇಟ್‌ವೇನಲ್ಲಿ ಪರಿಶೀಲನೆ ನಡೆಸಿ, ಅಂತಹ ಮಾರಾಟಗಾರರನ್ನು ಬ್ಲಾಕ್‌ ಮಾಡುತ್ತೇವೆ’ ಎಂದು ಹೇಳುತ್ತಾರೆ. 
 
ಆದರೆ, ಮಾರಾಟಗಾರರು ನೋಂದಣಿ ಮಾಡಿಕೊಳ್ಳದೇ ಇರುವುದರಿಂದ ವಂಚನೆ ನಡೆಸಿ ಸುಲಭವಾಗಿ ಅಲ್ಲಿಂದ ಕಾಲ್ಕಿಳುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಈ ಬಗ್ಗೆ ಖರೀದಿದಾರರು ಎಚ್ಚರಿಕೆ ವಹಿಸುವ ಅಗತ್ಯವಿದೆ.
 
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT