ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರಿ ನೀನಲ್ಲ, ವಿಧಿ ಬೆಪ್ಪನಲ್ಲ’

Last Updated 7 ಡಿಸೆಂಬರ್ 2016, 16:42 IST
ಅಕ್ಷರ ಗಾತ್ರ
ಪ್ರತಿಯೊಂದು ಯುಗಕ್ಕೂ ತನ್ನದೇ ಆದ ಧರ್ಮವಿದೆಯಂತೆ; ಹಾಗೇ ನಾವಿರುವ ಈ ಕಲಿಯುಗದಲ್ಲಿ ವೇಗಕ್ಕೆ ಪ್ರಾಧಾನ್ಯ ಎಂದು ಭಾಸವಾಗುತ್ತದೆ. ಹೌದು, ಇದು ವೇಗಯುಗ. ರಸ್ತೆಯ ಬದಿಯ ಸಿಗ್ನಲ್‌ನ ಕೆಂಪುದೀಪ ಆರಿ ಹಸಿರು ಹೊತ್ತಿಕೊಳ್ಳುತ್ತಿದ್ದಂತೆ ಚೀರಿ, ಚಿಮ್ಮಿ ನಿಮ್ಮನ್ನು ಹಿಂದೆ ಹಾಕಿ ಬಳಸಿಕೊಂಡು ಮುಂದೆ ನುಗ್ಗುವ ಆತುರದ ಯುಗ.
 
ಪ್ರಮೋಷನ್‌ಗಳನ್ನು ಡಬಲ್‌–ಪ್ರಮೋಷನ್‌ಗಳನ್ನೂ ಸದಾ ಬಯಸುವ ಬೇಡಿಕೆಯ ಯುಗ. ಮುಂದಿರುವ ಯಾರನ್ನೇ ಕಂಡರೂ ಹಿಂದಿಕ್ಕುವ ಆತುರದ ಜನಾಂಗವಿರುವ ಕಾಲವಿದು. ಆಲಿಸ್ ಇನ್ ವಂಡರ್‌ಲ್ಯಾಂಡ್ (‘ಪಾತಾಳದಲ್ಲಿ ಪಾಪಚ್ಚಿ’) ಓದುವಾಗ ನಮ್ಮ ಮನಸ್ಸಿಗೆ ಪದೇ ಪದೇ ಎದುರಾಗುವ ದೃಶ್ಯ ಒಂದಿದೆ. ಅದು ಕಥೆಯಲ್ಲಿ ಆಗಾಗ ಹಾದು ಹೋಗುವ ಮೊಲ. ಆಲಿಸ್ ಎದುರಿಗೆ ಬಂದಾಗಲೆಲ್ಲ ಅದು ತನ್ನ ಜೇಬಿನಿಂದ ಗಡಿಯಾರ ತೆಗೆದು ‘ಓಹ್, ಹೊತ್ತಾಯಿತು... ಹೋಗಬೇಕು...’ ಎಂದುಕೊಂಡು ದಡಬಡನೆ ಹೋಗಿಬಿಡುತ್ತದೆ. ಕಥೆ ಮುಗಿದರೂ ಅದು ಎಲ್ಲಿಗೆ ಹೊರಟಿತ್ತು, ಯಾವುದಕ್ಕೆ ಹೊತ್ತಾಯಿತು – ಎಂಬುದು ಆಲಿಸಳಿಗೂ ತಿಳಿಯುವುದಿಲ್ಲ, ಓದುಗರಿಗೂ ತಿಳಿಯುವುದಿಲ್ಲ. ಇಂದಿನ ಜನಮಾನಸದ ಕನ್ನಡಿಯಂತಿದೆ ಈ ಮೊಲದ ವರ್ತನೆ. ಎಲ್ಲದಕ್ಕೂ ಆತಂಕ, ವೇಗ, ಉದ್ವೇಗ. ಅತಿವೇಗದಿಂದ ಅಪಾಯ ಹೌದಾದರೂ ನಿಮ್ಮ ವೇದಾಂತ ಕೇಳುವ ತಾಳ್ಮೆಯಾಗಲೀ ವ್ಯವಧಾನವಾಗಲೀ ಇಲ್ಲವೆಂದು ನಿರ್ದಾಕ್ಷಿಣ್ಯವಾಗಿ ಹೇಳಿಬಿಡುತ್ತದೆ ಇಂದಿನ ಸಮಾಜ. 
 
ಗೋಲಿಯಾಟ, ಚೆಂಡಾಟಗಳಿಗೆ ಜೊತೆಯಾದ ಗೆಳೆಯರು ಮುಂದೆ ಬದುಕಿನ ಪ್ರವಾಹದಲ್ಲಿ ಕಳೆದುಹೋಗುತ್ತಾರೆ. ಅಕಸ್ಮಾತ್ ಸಿಕ್ಕರೂ ಮಾತಿಗೂ ಬೈಟು–ಕಾಫಿಗೂ ವಿರಾಮವಿರದಷ್ಟು ಆತುರ. ಇಂತಹವರನ್ನು ಕಂಡಾಗ, ‘ಎಲ್ಲಿ ಓಡುವಿರಿ, ನಿಲ್ಲಿ ಗೆಳೆಯರೆ ನಾಲ್ಕು ನುಡಿಯ ಚೆಲ್ಲಿ’ – ಅನ್ನಬೇಕೆನಿಸುವುದಿಲ್ಲವೆ? ಬದುಕಿನಲ್ಲಿ ಎಲ್ಲವೂ ಮರೀಚಿಕೆ ಎಂದರಿತ ಬಳಿಕ, ಐವತ್ತು ವರ್ಷ ಆಯುಸ್ಸು ಕಳೆದ ಬಳಿಕ, ಇನ್ನು ಓಡುವುದರಲ್ಲಿ ಅರ್ಥವಿಲ್ಲವೆನಿಸಿದಾಗ ಇವರೇ ಫೋನು ಮಾಡುತ್ತಾರೆ: ‘ಗೆಳೆಯಾ, ನಮ್ಮ ತರಗತಿಯ ಮಿತ್ರರೆಲ್ಲ ಸೇರಿ ಹರಟಲು ಒಂದು ದಿನ, ಸ್ಥಳ ಗೊತ್ತುಪಡಿಸಲು ಸಾಧ್ಯವೆ?’ ಮೂವತ್ತರ ಅಂಚಿಗೇ ಆವರಿಸಿಕೊಳ್ಳುವ ಬಹುತೇಕ ಕಾಯಿಲೆಗಳು - ಮಧುಮೇಹ, ರಕ್ತದೊತ್ತಡ, ಮಾನಸಿಕ ಕ್ಷೋಭೆ - ಇವುಗಳಿಗೆಲ್ಲ ಕಾರಣ ಈ ವೇಗದ ಆವೇಗ ಎಂದು ತಿಳಿದಾದರೂ ವೇಗಾವೇಗಗಳನ್ನು ತಿದ್ದಿಕೊಳ್ಳುವ ವ್ಯವಧಾನ ಮತ್ತು ವಿಧಾನಗಳನ್ನು ಕಲಿಯಬೇಕು. ಈ ಜಗತ್ತು, ಇದರ ಚಲನೆ, ಇದರ ಪಾಲನೆ, ಇದರ ಭೂತ–ಭವಿಷ್ಯ–ವರ್ತಮಾನ– ಎಲ್ಲವೂ ನಾವಿಲ್ಲಿಗೆ ಬರುವ ಮುಂಚೆಯೂ, ನಾವಿದ್ದ ಕಾಲದಲ್ಲಿಯೂ ಮತ್ತು ನಮ್ಮ ನಂತರವೂ ಇರುತ್ತದೆ ಎಂಬ ಅಂಶವನ್ನು ನಮ್ಮ ಮನಸ್ಸಿಗೆ ನಾವೇ ಮನದಟ್ಟು ಮಾಡಿಸಬೇಕು. ಆದರೆ ನಮ್ಮ ಇಲ್ಲಿಯ ‘ಪಾತ್ರ’ವನ್ನು ಹದಗೆಡದಂತೆ ನಿರ್ವಹಿಸಬೇಕು.
 
ಅನವಶ್ಯಕ ಆತಂಕ, ಆವೇಗ ಸಲ್ಲದು ಎಂಬುದೇ ಇದರ ಸಾರಾಂಶ. ಅನವಶ್ಯಕ ಆವೇಗ ಆತಂಕಗಳಿಗೆ ಕಾರಣವಾಗುತ್ತದೆ; ನಾವೇ, ನಮ್ಮಿಂದಲೇ ಎಂಬ ಸ್ವಾರ್ಥಮೂಲ ಇಂಥ ಉದ್ವೇಗವನ್ನು ಸೃಷ್ಟಿಸುತ್ತದೆ. ಕಗ್ಗದ ತಿಮ್ಮಗುರು ಈ ಆತಂಕಕ್ಕೆ ಒಂದೇ ಸಾಲಿನ ನುಡಿಯೌಷಧಿ ಸೂಚಿಸಿದ್ದಾರೆ: ‘ಅಧಿಕಾರಿ ನೀನಲ್ಲ, ವಿಧಿ ಬೆಪ್ಪನಲ್ಲ’.
 
ಅವೇಗ ಅಪಾಯ ಎಂದಮಾತ್ರಕ್ಕೆ ನಿಧಾನವೇ ಪ್ರಧಾನ – ಎಂದೇನೂ ಭಾವಿಸಬಾರದು. ಅತಿ ನಿಧಾನವೂ ಅಪಾಯವೇ. ಶೇಕ್ಸ್‌ಪಿಯರನ ನಾಟಕದ ನಾಯಕ ಹ್ಯಾಮ್ಲೆಟ್ ಇಂತಹ ನಿಧಾನಗತಿಯ, ಕಾರ್ಯವನ್ನು ಮುಂದೂಡುವಂತಹವರ ಪ್ರತಿನಿಧಿ. ತನ್ನ ಚಿಕ್ಕಪ್ಪನೇ ತಂದೆಯ ಕೊಲೆಗಾರನೆಂದು ತಿಳಿದಿದ್ದರೂ, ಆ ಕೊಲೆಯ ಸೇಡು ತೀರಿಸಿಕೊಳ್ಳುವುದಾಗಿ ತಂದೆಯ ಪ್ರೇತಕ್ಕೆ ಮಾತು ಕೊಟ್ಟಿದ್ದರೂ, ಕೊಲ್ಲಲು ಅವಕಾಶಗಳು ದೊರೆತರೂ ಅತಿ ಆದರ್ಶ, ತರ್ಕ, ವಿಚಾರಗಳಿಂದ ತನಗೆ ಒದಗಿಬಂದಿರುವ ಅವಕಾಶಗಳನ್ನು ಕೈಚೆಲ್ಲಿ, ನಿಧಾನಗತಿಯಲ್ಲಿ ಸಾಗಿ ಕೊನೆಗೆ ಸೇಡು ತೀರಿಸಿಕೊಂಡರೂ, ಸಂಚಿಗೆ ತಾನೂ ಬಲಿಯಾಗುತ್ತಾನೆ. ಇದಕ್ಕೆ ಪ್ರತಿಯಾಗಿ ಇದೇ ಶೇಕ್ಸ್‌ಪಿಯರ್‌ನ ಮತ್ತೊಂದು ನಾಟಕದ ದುರಂತನಾಯಕ ಮ್ಯಾಕ್‌ಬೆತ್. ಇವನು ತನ್ನ ಬಯಕೆಗಳಿಗೆ ಅನುಗುಣವಾಗಿ ಆತುರಾತುರದಿಂದ ಸಂದರ್ಭಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿ ವೀರಸೇನಾನಿಯಾಗಿದ್ದವನು ಕೊಲೆಗಡುಕನಾಗಿಬಿಡುತ್ತಾನೆ. ಅತಿ ಆತುರ ಆಕಾಂಕ್ಷೆಗಳ ಚಂಡಮಾರುತಕ್ಕೆ ಸಿಲುಕಿ ಕೊನೆಗೆ ಸಾವನ್ನಪ್ಪುತ್ತಾನೆ. ಹಾಗಾದರೆ ಮಧ್ಯಮಮಾರ್ಗ ಯಾವುದು? ಜಾಣ್ಮೆಯಿರುವುದು ವೇಗನಿಯಂತ್ರಣದಲ್ಲಿ, ಹದವರಿತು ಒಗ್ಗಿಸಿಕೊಂಡ ವೇಗವು ಪ್ರಗತಿಗೆ ಪೂರಕ. ನಾವು ಟೈಪ್‌ರೈಟಿಂಗ್ ಕಲಿತ ದಿನಗಳನ್ನು ನೆನಪಿಸಿಕೊಳ್ಳಬೇಕು. ಒಂದೊಂದೇ ಸಾಲು, ಸರಳ ಪದಗಳು, ಕ್ಲಿಷ್ಟಪದಗಳು, ಆನಂತರ ಸಾಮಾನ್ಯ ಸಾಲುಗಳು. ಮೊದಲಿಗೆ ಅಲ್ಲಿ ವೇಗಕ್ಕೆ ಮನ್ನಣೆಯಿಲ್ಲ. ನಿಧಾನವಾಗಿ ಶುದ್ಧವಾಗಿ ಟೈಪು ಮಾಡುವುದನ್ನು ಕಲಿತಮೇಲೆ ವೇಗ ಸಾಧಿಸುವತ್ತ ಗಮನ. ಯಾವುದೇ ಕ್ಷೇತ್ರದಲ್ಲಿ ಪರಿಣತಿ ಸಾಧಿಸುತ್ತಿದ್ದಂತೆ ಸಹಜವಾಗಿಯೇ ವೇಗ ಉಂಟಾಗುತ್ತದೆ. ಕನ್ನಡ ಲಿಪಿಯ ತಂತ್ರಾಂಶದ ಪ್ರವೇಶವಾದಾಗ ಬರಹಗಾರರಲ್ಲಿ ಕಲಮಲ, ಹಸ್ತಪ್ರತಿಗಳನ್ನು ತಂತ್ರಾಂಶದಲ್ಲಿ ಸಿದ್ಧಪಡಿಸಿ ಕಳಿಸಬೇಕೆನ್ನುವ ಅನಿವಾರ್ಯ ಸಂಕಟ ಎದುರಾದಾಗ ಕೀಲಿಮಣೆ ಹಿಡಿದು ಕಲಿಯುವ ಪ್ರಯತ್ನ. ಆದರೆ ಕೆಲವೇ ದಿನಗಳಲ್ಲಿ ಅದನ್ನು ಲೀಲಾಜಾಲವಾಗಿ ಬಳಸುವ ಆನಂದ. ಕಲಿಕೆಯಲ್ಲಿ ನಿಧಾನವಾಗಿ ಕಲಿತವರು ಚೆನ್ನಾಗಿ ಪಳಗಿದ ಮೇಲೆ, ಕಾರ್ಯಕ್ಷೇತ್ರಗಳ ಒಳಸುಳಿಗಳನ್ನು ತಿಳಿದಮೇಲೆ ಅನಾಯಾಸದಿಂದ ಮುನ್ನಡೆಯುವುದನ್ನು ಕಾಣುತ್ತೇವೆ. ದಿಢೀರನೆ ಮುಂದೆ ನುಗ್ಗುವವರು ಅಷ್ಟೇ ಬೇಗ ಸೋಲುವುದನ್ನು ಕಾಣುತ್ತೇವೆ. ‘ಆತುರಗಾರನಿಗೆ ಬುದ್ಧಿ ಮಟ್ಟ’ ಎನ್ನುವ ಗಾದೆ ಅನ್ವಯಿಸುವುದು ಇಂತಹವರಿಗೆ. 
 
ಅಣುವಿನ ಕಣಗಳ ನಡುವೆ, ಸೌರವ್ಯೂಹದ ನಡುವೆ ಇಡೀ ವ್ಯವಸ್ಥೆಯನ್ನು ಹಿಡಿದಿಡುವ ಸರಳ ಸೂತ್ರಗಳಿವೆ, ವೇಗದ ಗತಿನಿಯಮಗಳಿವೆ. ಮಾನವನೂ ಸೃಷ್ಟಿಯ ಅಂಗ. ಆದರೆ ಮಂಗನಾಗೇ ಉಳಿಯಲಾರ ಮಾನವ. ಭೂಮಿ ತಿರುಗುತ್ತಿರುವುದು ನಿರ್ದಿಷ್ಟ ವೇಗದಲ್ಲಿ. ಹೀಗೆ ತಿರುಗುತ್ತಿರುವುದರಿಂದಲೇ ಇಲ್ಲೊಂದು ಗುರುತ್ವಶಕ್ತಿ ಸೃಷ್ಟಿಯಾಗಿದೆ. ಗುರುತ್ವಶಕ್ತಿ ಒಳಿತೇ. ಆದರೆ ನೆಲಕಚ್ಚಿ ಬದುಕಲು ಹೊರಟಿಲ್ಲ ಮಾನವ. ಮಂಗನಂತೆ ನಾಲ್ಕು ಕಾಲಿನಲ್ಲಿ ನಡೆಯುತ್ತಿದ್ದವನು ಇಂದು ಎದೆ ಎತ್ತಿ ನಡೆಯುತ್ತಿದ್ದಾನೆ. ಆ ಬಳಿಕ ಕತ್ತೆತ್ತಿ ನೋಡಿದರೆ ಅನಂತಪಥದ ಆಹ್ವಾನವೀಯುತ್ತದೆ ಆಕಾಶ. ರೆಂಬೆಯಿಂದ ಜಿಗಿದವನು ಭೂಮಿಯಿಂದಲೂ ಜಿಗಿಯಬಯಸಿದ ಅವನು. ಆದರೆ ಗುರುತ್ವಾಕರ್ಷಕಶಕ್ತಿಯ ನಿಯಮವಿದೆ. ಅದನ್ನು ಅವನು ಮೀರಬೇಕು. ಭೂಕಕ್ಷೆಯಿಂದ ಹಾರಿಹೋಗಲೂ ಅಪೇಕ್ಷಿತ, ಆವಶ್ಯಕ ವೇಗ ಬೇಕಾಗುತ್ತದೆ. ಆದುದರಿಂದ ಅವನು ಅದರ ಆಳವಾದ ಅಧ್ಯಯನ ಮಾಡಿದ. ಬಹುವರ್ಷಗಳ ಅಧ್ಯಯನ ಪ್ರಯತ್ನಗಳ ಫಲವಾಗಿ ಭೂಮಿಯಿಂದಾಚೆಗೆ ಹೋಗಬಲ್ಲ ವೇಗದ, ವಿಧಿವಿಧಾನಗಳನ್ನು ಅರಿತ. ಹಾಗೆ ಪ್ರಕೃತಿನಿಯಮಗಳನ್ನು ಬುದ್ಧಿವಂತಿಕೆಯಿಂದ ಮೀರುವುದನ್ನು ಅರಿತನಾದರೂ ಆದರ ಬಳಕೆಯ ಇತಿಮಿತಿ ಅರಿತನೆ? ಅಣುವಿನಲ್ಲಿ ಅಪರಿಮಿತ ಶಕ್ತಿಯಿದೆ ಎಂಬುದನ್ನರಿತ. ಇದು ಶಕ್ತಿಯ ಅನ್ವೇಷಣೆಯ ದಿಸೆಯಲ್ಲಿ ಮಹತ್ವದ ಹೆಜ್ಜೆ. ಮನುಕುಲದ ಗತಿಯನ್ನೇ ಬದಲಿಸಿದ ನಡೆ. ಆದರೆ ಅದರೊಂದಿಗೆ ಪರಮಾಣು ಬಾಂಬನ್ನೂ ಕಂಡುಹಿಡಿದ. ರಾಷ್ಟ್ರಕವಿ ಕುವೆಂಪು ಅವರು ತಮ್ಮ ‘ಶತಮಾನದ ಸಂಧ್ಯೆ’ ಕವನದಲ್ಲಿ ಇದನ್ನು ಸೊಗಸಾಗಿ ಚಿತ್ರಿಸುತ್ತಾರೆ: ‘ನೊಣಮೀಸೆಯ ಹುಳುಹೆಜ್ಜೆಯ ಎಣಿಸುವ ಬಿಜ್ಜೆಯ ಬಲ್ಲ; ತನ್ನಾತ್ಮವ ತಾನರಸುವ ಬಗೆಯೊಂದನು ಒಲ್ಲ! ಅನ್ವೇಷಣೆ ಅನ್ವೇಷಣೆ ಸುಖಿಸಲು ಪುರಸೊತ್ತಿಲ್ಲ! ತಿಳಿದೂ ತಿಳಿದೂ ತಿಳಿದೂ ಕೊನೆಗೇನೂ ಗೊತ್ತಿಲ್ಲ!.. ಜನಕಂಡರೆ ಜನ ಹೆದರಿದೆ; ಎಲ್ಲೆಲ್ಲಿಯು ಸಂದೇಹ! ಶಾಂತಿಯ ಪರದೆಯ ಹಿಂಗಡೆ ಕ್ರಾಂತಿಯ ಸನ್ನಾಹ!... ಉನ್ಮಾದದ ರಣಮೋದದ ಮದ್ದಿನ ಗುಂಡಿನ ಲೀಲೆ....’ ಈ ಕವಿವಾಣಿಯಲ್ಲೊಂದು ಹೊಸ ಹೊಳಹು ಇದೆ. ಎಲ್ಲ ಅನ್ವೇಷಣೆಯ ಹಿಂದೆ, ಪಯಣದ ಹಿಂದೆ ಸುಖದ ಆಶಯವಿದೆ. ಆದರೆ ಅದನ್ನೇ ನುಂಗಿ ನೊಣೆಯುವ ವೇಗ ಸಲ್ಲದು ಎಂಬ ಸಂದೇಶವಿದೆ.  
 
ಭೌತಿಕ ಮತ್ತು ಆಧಿಭೌತಿಕ ಕ್ಷೇತ್ರಗಳಲ್ಲಿ, ಪ್ರಗತಿಯ ಆತುರದಲ್ಲಿ ಸಾಮಾನ್ಯ ನಿಯಮಗಳ ಪರಿಧಿಯನ್ನು ದಾಟುವ ಆತುರದಲ್ಲಿ ಮನುಷ್ಯ ಎಡವುತ್ತಲೇ ಇದ್ದಾನೆ. ಪ್ರಗತಿಯನ್ನು ವೇಗಕ್ಕೆ ತಳುಕು ಹಾಕುವುದು ಅಪಾಯಕಾರಿ. ಮಗುವಿನ ಕಲಿಕೆಯಾಗಲೀ, ಮನುಷ್ಯನ ಬೆಳವಣಿಗೆಯಾಗಲೀ ಒಂದು ನಿರ್ದಿಷ್ಟ ವೇಗ, ಕ್ರಮದಲ್ಲಿ ಸಾಗಬೇಕು. ಎಷ್ಟೇ ನೀರು ಗೊಬ್ಬರ ಸುರಿದರೂ ಗಿಡವೊಂದು ಮರವಾಗಲು ಕಾಲಾವಕಾಶ ಬೇಕು. ಹಾಗೆಯೇ ಮನುಷ್ಯನ ಮತ್ತು ಮನುಕುಲದ ಪ್ರಗತಿಗೂ ಕಾಲಾವಕಾಶ ಬೇಕು. ಪ್ರಕೃತಿಯಲ್ಲಿ ನಿಯಮವಿದೆ, ಕಾಲ-ದೇಶ-ಧರ್ಮಗಳ ಚೌಕಟ್ಟಿನಲ್ಲಿ ಈ ಅದ್ಭುತ ಪ್ರಪಂಚ ಸೃಷ್ಟಿಯಾಗಿದೆ. ತಂಗಾಳಿ, ಬಿರುಗಾಳಿ, ಚಂಡಮಾರುತ - ಇವೆಲ್ಲವೂ ಗಾಳಿಯೇ. ಆದರೆ ಒಂದೊಂದಕ್ಕೆ ಒಂದೊಂದು ವೇಗ. ಆಹ್ಲಾದಕ್ಕೂ ಅಪಾಯಕ್ಕೂ ಇರುವ ಅಂತರವೂ ಇಷ್ಟೇ. ಕೆಲವೊಮ್ಮೆ ಜಾಲಿ ರೈಡ್‌ಗಳು ಗೋಳಿನ ಪರೇಡ್ ಆಗಲು ಕಾರಣ ಆ ರೈಡರ್‌ಗಳು ಮನಸ್ಸಿನ ಆವೇಗಕ್ಕೆ ವಶವಾದದ್ದು, ವೇಗನಿಯಂತ್ರಣಕ್ಕೆ ಒಳಗಾಗದಿದ್ದುದು. ಲಗುಬಗೆಯಲ್ಲಿ ಮಾಡಹೊರಟ ಕೆಲಸ ಬಗೆಬಗೆಯಾಗಿ ಕೆಟ್ಟುಹೋಗುವುದುಂಟು. ಲಘುಬಿಗಿಯಲ್ಲಿ ನಡೆದ ಕೆಲಸಗಳು ಮಾತ್ರ ಯಶಸ್ವಿಯಾಗಬಲ್ಲವು. ಈ ಹದವರಿತು ಬಾಳನ್ನು ಸಾಗಿಸುವ ಕಲೆ ನಮ್ಮದಾಗಲಿ.
(ಲೇಖಕರು ಶಿಕ್ಷಣತಜ್ಞರು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT