ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗೆ ಬೇಕಾದ ಪ್ರೇರಣೆ ನಿಮ್ಮಲ್ಲಿಯೇ ಇದೆ!

Last Updated 6 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
-ಪ್ರಕಾಶ ನಡಹಳ್ಳಿ 
 
***
ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ನಾವು ಯಾವುದಾದರೊಂದು ಕೆಲಸದಲ್ಲಿ ತೊಡಗಿಕೊಂಡಿರುತ್ತೇವೆ.  ಕೆಲಸ ಮಾಡುವ ಮುನ್ನ ಯಾವ್ಯಾವ ಕೆಲಸವನ್ನು ಎಷ್ಟು–ಹೇಗೆ ಪೂರ್ತಿಗೊಳಿಸಬೇಕೆಂದು ಸಾಮಾನ್ಯವಾಗಿ ಪೂರ್ವ ನಿರ್ಧಾರವನ್ನು  ಮಾಡಿಕೊಂಡಿರುತ್ತೇವೆ. ಇವು ನಮ್ಮ ದಿನದ ಗುರಿಯೆನ್ನಬಹುದು. ಅಂತೆಯೇ ಮುಂದಿನ ತಿಂಗಳೊಳಗೆ ಅಥವಾ ವರ್ಷದೊಳಗೆ ಕೆಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕೆಂದು ಇಚ್ಛಿಸುತ್ತೇವೆ. ಇವು ನಮ್ಮ ದೀರ್ಘಾವಧಿ ಗುರಿಗಳು. ಈ ಗುರಿಗಳನ್ನು ತಲುಪಬೇಕೆನ್ನುವುದೇ ನಮ್ಮ ಗುರಿಯಲ್ಲವೇ!   
 
ಕೆಲವರು ಗುರಿಯನ್ನು ಸಾಧಿಸುವಲ್ಲಿ ಹೆಚ್ಚು ಸಫಲರಾಗುತ್ತಾರೆ;  ಕೆಲವರು ಪ್ರಯತ್ನಿಸಿ, ವಿಫಲರಾಗುತ್ತಾರೆ; ಇನ್ನುಳಿದವರು  ಪ್ರಯತ್ನವನ್ನೇ  ಮಾಡುವುದಿಲ್ಲ. ಇದರ ರಹಸ್ಯವೇನೆಂದು ನೋಡೋಣವೇ?
 
ಈಗ ತಾನೆ ಚದುರಂಗದಾಟ (Chess) ಕಲಿಯುತ್ತಿರುವ ಹುಡುಗನೊಡನೆ ನೀವು ಆಟ ಆಡಲಿಕ್ಕೆ ಶುರು ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಆಟದಲ್ಲಿ ನೀವೇ ಗೆಲ್ಲುತ್ತೀರಿ. ಆದರೆ ಆಟದಲ್ಲಿ ಮಜಾ ಇರುವುದಿಲ್ಲ ಅಲ್ಲವೆ? ನಿಮಗೆ ಚೆಸ್ ಪಂದ್ಯಾವಳಿಗಳಲ್ಲಿ (Tournament) ಆಟವಾಡಿದವರ ಜೊತೆ ಆಡಲಿಕ್ಕೆ ಹೋದಾಗಲೂ ನಿಮಗೆ ಸಾಕೆನಿಸುತ್ತದೆ ಅಥವಾ ಆಸಕ್ತಿಯೇ ಮಾಯವಾಗುತ್ತದೆ. ಕಾರಣ ಚಾಂಪಿಯನ್ ಜೊತೆ ಆಡುವಾಗ, ನೀವು ಗೆಲ್ಲುವ ಸಂಭವವಿರುವುದಿಲ್ಲ. ನಿಮ್ಮ ಗುರಿ ತಲುಪುವ ಸಾಧ್ಯತೆಯಿಲ್ಲವೆಂಬುದು ನಿಮಗೆ ಗೊತ್ತಾಗುತ್ತದೆ. ಆದ್ದರಿಂದ ಆಸಕ್ತಿ ಮಾಯವಾಗುತ್ತದೆ.
 
ಸ್ವಲ್ಪ ಹೆಚ್ಚು ಅಥವಾ ಕಡಿಮೆ ಅಥವಾ ನಿಮ್ಮಷ್ಟೇ ಆಟಬಲ್ಲವರೊಡನೆ ಆಟಕ್ಕಿಳಿದರೆ ನಿಮ್ಮ ಆಟಕ್ಕೆ ಹುರುಪು ಅಥವಾ ಉತ್ಸಾಹ ಬರುತ್ತದೆ. ಇಲ್ಲಿ ಎದುರಾಳಿಯೊಡನೆ ಆಡಿ ಗೆಲ್ಲುವ ಸಂಭವವಿರುತ್ತದೆ ಅಥವಾ ಸೋಲಲೂಬಹುದು. ಒಮ್ಮೆ ಗೆಲುವು ನಿಮ್ಮದು, ಒಮ್ಮೆ ಎದುರಾಳಿಯದು ಆಗುತ್ತಿರುತ್ತದೆ. ಆಟ ಆಸಕ್ತಿದಾಯಕವಾಗುತ್ತದೆ. ಗೆಲುವು ನಿಶ್ಚಿತವಾಗಿಲ್ಲ; ಅಂದರೆ ನಿಮ್ಮ ಗುರಿ ಕೈಗೆಟುಕುವ ಸಾಧ್ಯತೆಯಿದೆ ಅಥವಾ ಸ್ವಲ್ಪ ಮೇಲಿರಬಹುದು. ಗೆಲುವಿನ ಸಾಧ್ಯತೆಯಿದೆ.  ಆಗ ಗುರಿ ನಿಮ್ಮ ಕೈದೂರದಲ್ಲಿ (reach) ಇದೆಯೆಂದು ನಿಮಗೆ ಗೊತ್ತಾಗಿ ನಿಮ್ಮ ಪ್ರಯತ್ನವನ್ನು ಮುಂದುವರಿಸುತ್ತೀರಿ. ಗುರಿಯನ್ನು ತಲುಪುವ ಸಾಧ್ಯತೆ ನಿಮ್ಮ ಪ್ರೇರಣೆಯಾಗಿ ಕೆಲಸ ಮಾಡುತ್ತದೆ. ನಿಮ್ಮ ಗಮನ ಆಟದ ಹೆಚ್ಚು ಕೇಂದ್ರೀಕೃತವಾಗುತ್ತದೆ. ಮನಸ್ಸಿನಲ್ಲಿ ಗೊಂದಲ, ಚಂಚಲತೆ ಮಾಯವಾಗುತ್ತವೆ. 
 
ಯಾವುದೇ ಕೆಲಸ ನಿಮ್ಮ ಸಾಮರ್ಥ್ಯಕ್ಕಿಂತ ಕಡಿಮೆಯಿದ್ದರೆ, ಆ ಕೆಲಸದಿಂದ ನಿಮಗೆ ಖುಷಿ ಸಿಗುವುದಿಲ್ಲ, ನಿಮ್ಮ ಸಾಮರ್ಥ್ಯವನ್ನು ಮೀರಿದ್ದಾದರೆ, ನೀವು ಆ ಕೆಲಸದ ಗೊಡವೆಗೆ ಹೋಗುವದಿಲ್ಲ. ಯಾವ ಕೆಲಸದಲ್ಲಿ ಗೆಲುವಿನ ಸಂಭವವಿದೆಯ, ಆ ಅಂಶವೇ ನಿಮ್ಮ ಕೆಲಸವನ್ನು ಪೂರ್ತಿಗೊಳಿಸಲು ಸ್ಫೂರ್ತಿಯಾಗುತ್ತದೆ. ನಮ್ಮಲ್ಲಿರುವ ಸಾಮರ್ಥ್ಯಕ್ಕಿಂತ ಸ್ವಲ್ಪ ಹೆಚ್ಚು ಶ್ರಮವಹಿಸಬೇಕಾದ  ಕೆಲಸವು ನಮ್ಮಲ್ಲಿ ಪ್ರೇರಣೆಯನ್ನು ಉಂಟುಮಾಡುತ್ತದೆ. ಕಾರಣ ನಮ್ಮಲ್ಲಿರುವ ಸಾಮರ್ಥ್ಯವನ್ನು  ಅಥವಾ ಕೌಶಲವನ್ನು  ಸ್ವಲ್ಪ ಹೆಚ್ಚಿಸಿಕೊಳ್ಳಲು ನಾವು ತಯಾರಿರುತ್ತೇವೆ. ಕೆಲಸ ತುಂಬ ಕಷ್ಟಕರವಾದದ್ದೂ ಆಗಿರಬಾರದು; ಬಹಳ ಸುಲಭದ್ದೂ ಆಗಿರದೇ, ಸ್ವಲ್ಪ ಹೆಚ್ಚಿನ ಪ್ರಯತ್ನದಿಂದ ಯಶಸ್ಸನ್ನು ಗಳಿಸುವ ಹಾಗಿರಬೇಕು.
 
ಯಾವುದು ಮನುಷ್ಯನಿಗೆ ಸ್ಫೂರ್ತಿ ನೀಡುತ್ತದೆಯೆಂಬುದರ ಬಗ್ಗೆ ದಶಕಗಳಿಂದ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ.  ಮನುಷ್ಯನಿಗೆ ಅವನ ಕೆಲಸದಲ್ಲಿ  ಸಹಿಸಲಾಗುವಷ್ಟು ಕಷ್ಟವಿದ್ದರೆ, ಆ ಕೆಲಸ ಮಾಡಲು ಅತನಿಗೆ ಪ್ರೇರಣೆ ಸಿಗುತ್ತದೆಯಂಬ ಅಂಶ ಸಂಶೋಧನೆಯಿಂದ ಧೃಡಪಟ್ಟಿದೆ. ಇನ್ನು ಅರಿವಿಲ್ಲದ ಹಲವು ಅಂಶಗಳೂ ಕೂಡ ಇವೆ.
 
ನಿಮ್ಮ ಕೆಲಸದಲ್ಲಾಗುತ್ತಿರುವ ಬೆಳವಣಿಗೆ
ಸಂಗೀತಕಾರರಿಗೆ, ಕ್ರೀಡಾಪಟುಗಳಿಗೆ, ವಿದ್ಯಾಭ್ಯಾಸದಲ್ಲಿ ಯಶಸ್ಸು ಗಳಿಸಿದವರಿಗೆ ಪ್ರೇರಣೆ ಹೇಗೆ ಸಿಕ್ಕಿರಬಹುದು?  ಅವರೂ ಸಹ ಕಷ್ಟಪಟ್ಟಿರುತ್ತಾರೆ. ಅವರ ಪ್ರಗತಿಯಲ್ಲಿಯೂ ಹಿನ್ನಡೆಯಾಗಿರಬಹುದಲ್ಲವೇ? ಇದೊಂದು ಒಗಟಾಗಿ ಕಾಣುತ್ತಿದೆಯೆ? ಕೆಲಸದಲ್ಲಿರುವ ಕಷ್ಟ ಮತ್ತು ಅಲ್ಲಿ ಸಿಗಬಹುದಾದ ಆನಂದ – ಈ ಮಿಶ್ರಭಾವದಲ್ಲಿ  ಕಗ್ಗಂಟಿಗೆ ಉತ್ತರ ಅಡಗಿದೆ.
 
ಸವಾಲಾಗಿರುವ ಕೆಲಸದಲ್ಲಿ ಅನುಕೂಲಕರ ಅಥವಾ ಸಹಿಸಲಾಗುವಷ್ಟು  ಶ್ರಮವು ಮನುಷ್ಯನಿಗೆ ಪ್ರೇರಣೆಯನ್ನು ಒದಗಿಸುವುದಲ್ಲದೆ,  ಆನಂದವನ್ನೂ ಉಂಟುಮಾಡುತ್ತದೆ.   ಮನಃಶಾಸ್ತ್ರಜ್ಞ ಗಿಲ್ಬರ್ಟ್ ಬ್ರಿಮ್‌ರ ಪ್ರಕಾರ ‘ಅತಿ ಪ್ರಯಾಸದಾಯಕವಲ್ಲದ, ತುಂಬಾ ಸುಲಭವೂ ಅಲ್ಲದ, ಸುಧಾರಿಸಬಹುದಾದಷ್ಟು  ಶ್ರಮದ ಕೆಲಸದಿಂದ ಮನುಷ್ಯನಿಗೆ ಆನಂದವಾಗುತ್ತದೆ.’  ಎಂದರೆ ವ್ಯಕ್ತಿಯ ಸಾಮರ್ಥ್ಯದ ಮಟ್ಟಕ್ಕಿಂತ ತುಂಬಾ ಹೆಚ್ಚು ಅಲ್ಲದ, ಅತಿ ಸುಲಭವೂ ಅಲ್ಲದ ಕೆಲಸದ ಒತ್ತಡವನ್ನು ಸಹಿಸಿಕೊಳ್ಳುವ ಸನ್ನಿವೇಶವು ತುಂಬ ಉತ್ತೇಜನಕಾರಿಯೆನ್ನಬಹುದು.
 
ಕೆಲಸದಲ್ಲಿರುವ ಒತ್ತಡ, ಸಾಧನೆ ಹಾಗೂ ಸಿಗುವ ಆನಂದಗಳ ಮಿಶ್ರಣವನ್ನು ನೀರಿನ ಹರಿವಿಗೆ ಹೋಲಿಸೋಣ. ಕ್ರೀಡಾಪಟುಗಳು ಹಾಗೂ ಸಾಧಕರು ಅವರ ಕೆಲಸದಲ್ಲಿ ಈ ಒಂದು ಹರಿವನ್ನು ಅನುಭವಿಸುತ್ತಾರೆ. ಹರಿವೆಂದರೆ, ಪ್ರಪಂಚದ ಆಗುಹೋಗುಗಳನ್ನು ಮರೆತು, ಆನಂದಿಂದ ಮೈ ಮರೆತು ಕೆಲಸ ಮಾಡುತ್ತಿರುವ ಒಂದು ಮನಸ್ಸಿನ ಸ್ಥಿತಿಯೆಂದು ಹೇಳಬಹುದು.
 
ಕ್ರೀಡಾಪಟುಗಳು ಒಂದು ಉನ್ನತ ಮಟ್ಟದ  ಗುರಿಯನ್ನು ತಲುಪಬೇಕಾದರೆ, ಒಂದೇ ಮಟ್ಟದ ಕಾರ್ಯದ ಒತ್ತಡವನ್ನು ಸವಾಲಾಗಿ ಸ್ವೀಕರಿಸುವದರ ಜೊತೆಗೆ, ಆ ಸಂದರ್ಭದ ಕಾರ್ಯದ ಪ್ರಗತಿಯನ್ನು ಗುರುತಿಸಿಕೊಳ್ಳುತ್ತಾರೆ. ಮನಃಶಾಸ್ತ್ರಜ್ಞ ಜೋನಾಥನ್ ಹೇಳುವಂತೆ, ‘ನಿಮ್ಮ ಗುರಿಯೆಡೆ ಸಾಗುವಾಗ, ಪ್ರತಿ ಹೆಜ್ಜೆಯ  ಪ್ರಗತಿಯ ಪ್ರತಿಕ್ರಿಯೆ  (Feedback) ಸಿಗುತ್ತಿದ್ದರೆ, ಗುರಿ ತಲುಪಲು ಅಗತ್ಯವಾದ ಉತ್ತಮ ಮಟ್ಟದ ಸ್ಫೂರ್ತಿ ಸಿಗುತ್ತದೆ.’
 
ನಿಮ್ಮ ಕೆಲಸದಲ್ಲಾಗುವ ಪ್ರಗತಿಯ ಪ್ರತಿಕ್ರಿಯೆ ನಿಮ್ಮ ಪ್ರೇರಣೆಗೆ ಕಾರಣವಾಗುತ್ತದೆ. ಉದಾಹರಣೆಗೆ, ಹಾಸ್ಯಕಾರ್ಯಕ್ರಮದಲ್ಲಿ ಒಂದೆರಡು ಪುಟ್ಟ ಹಾಸ್ಯ ಪ್ರಸಂಗಗಳನ್ನು ಹೇಳಿದಾಗ, ಸಭಿಕರ ನಗು ಅಥವಾ ಕರತಾಡನದಿಂದ ಹಾಸ್ಯಗಾರನಿಗೆ ತಾನು ಹೇಳಿದ ತಮಾಷೆ ಜನರಿಗೆ ಖುಷಿಮಾಡಿದೆಯೆಂದು ಗೊತ್ತಾಗುತ್ತಿದ್ದಂತೆಯೇ, ಇನ್ನಷ್ಟು ಹಾಸ್ಯಚಟಾಕಿಗಳನ್ನು ಹಾರಿಸುತ್ತಾನೆ. ಸಂಗೀತ ಕಛೇರಿಯಲ್ಲಿ ಸಭಿಕರ ತಲೆದೂಗುವಿಕೆ ಅಥವಾ ಚಪ್ಪಾಳೆಯ ಮೂಲಕ ಪ್ರತಿಕ್ರಿಯೆ ಸಿಗುತ್ತಿದ್ದಂತೆಯೇ, ಗಾಯಕರು ಹಾಡುಗಾರಿಕೆ ಯನ್ನು ಮುಂದುವರೆಸುತ್ತಾರೆ; ಹೊಸ ಪ್ರಯೋಗಕ್ಕೂ ಮುಂದಾಗುತ್ತಾರೆ.
 
ಕ್ರೀಡೆಗಳ ಅಥವಾ ಸಂಗೀತದ ಹೊರತಾದ ಚಟುವಟಿಕೆಗಳಲ್ಲಿ  ಕಾರ್ಯಶೀಲತೆ ಮತ್ತು ಯಶಸ್ಸುಗಳ ಅಳತೆಗೋಲು ಭಿನ್ನವಾಗಿರುತ್ತದೆ. ಆದರೆ ಸಂತೋಷ ಹಾಗೂ ಸ್ಫೂರ್ತಿ – ಇವುಗಳ ಸಮ್ಮಿಶ್ರಣ ಮುಖ್ಯ. ಆಟದಲ್ಲಿ ಹಾಗೂ ಸಭಾಕಾರ್ಯಕ್ರಮಗಳಲಲ್ಲಿ, ಪ್ರತಿಕ್ಷಣದಲ್ಲಿಯೂ ನಮಗೆ ಪ್ರತಿಕ್ರಿಯೆ ಸಿಗುತ್ತದೆ. ಅಳತೆಗೋಲು ಯಾವ ರೀತಿಯದೇ ಆಗಿದ್ದರೂ, ನಮ್ಮ ಪ್ರಗತಿ ನಮಗೆ ಗೊತ್ತಾಗುವಂತಿದ್ದಾಗ, ನಮ್ಮ ಮೆದುಳು ಪ್ರೇರಣೆಯನ್ನು ಪಡೆಯುತ್ತಿರುತ್ತದೆ. ನೀವು ಮಾಡುತ್ತಿರುವ ಒಂದು ಕೆಲಸ ಮುಕ್ತಾಯದ ಹಂತದಲ್ಲಿದೆ ಎಂದುಕೊಳ್ಳೋಣ. ನೀವು ಮಾಡುತ್ತಿರುವ ಕೆಲಸ ಮುಗಿಯುತ್ತಿದೆ – ಎನ್ನುವುದೇ ನಿಮ್ಮ  ಖುಷಿಗೆ ಕಾರಣವಾಗಿರುತ್ತದೆ. ಆ ಸಂದರ್ಭದಲ್ಲಿ ಕೆಲಸ ಮುಗಿಸಲು ಇನ್ನೂ ಸ್ವಲ್ಪ ಶ್ರಮದ ಅಗತ್ಯವಿದ್ದರೂ ನೀವು ಅದನ್ನು ಮಾಡಲು ತಯಾರಿರುತ್ತೀರಿ. ಕಾರಣ ಏನೆಂದರೆ ನೀವು ಮಾಡುತ್ತಿರುವ ಕೆಲಸ ಅದು ನಿಮಗೆ ಸಂತೋಷವನ್ನು ಕೊಡುತ್ತಿರುತ್ತದೆ; ಆ ಸಂತೋಷ ನಿಮಗೆ ಹೆಚ್ಚಿನ ಪ್ರೇರಣೆಯನ್ನು ಒದಗುಸುತ್ತಿರುತ್ತದೆ.  
 
ನಿಮ್ಮ ಕೆಲಸಕ್ಕೋ ಅಥವಾ ಗುರಿಯನ್ನು ಮುಟ್ಟಲು ಅಗತ್ಯವಿರುವ ಸ್ಫೂರ್ತಿ ನಿಮ್ಮ ಬಳಿಯೇ ಇದೆ ಎನ್ನುವುದು ಗೊತ್ತಾಯಿತಲ್ಲವೇ? ಹಾಗಿದ್ದರೆ ತಡವೇಕೆ? ನಿಮ್ಮ ಗುರಿಯತ್ತ ದಾಪುಗಾಲು ಹಾಕಿರಿ.
 
ನಮ್ಮಲ್ಲಿರುವ ಸಾಮರ್ಥ್ಯಕ್ಕಿಂತ
ಸ್ವಲ್ಪ ಹೆಚ್ಚು ಶ್ರಮವಹಿಸಬೇಕಾದ
ಕೆಲಸವು ನಮ್ಮಲ್ಲಿ ಪ್ರೇರಣೆಯನ್ನು ಉಂಟುಮಾಡುತ್ತದೆ.
(ಲೇಖಕರು ಆಪ್ತಸಲಹೆಗಾರರು)
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT