ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ರಹಿತ ವಹಿವಾಟಿನತ್ತ...

Last Updated 6 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ನಗದು ರಹಿತ ವಹಿವಾಟಿನತ್ತ  ಭಾರತ ನಿಧಾನವಾಗಿ ದೃಢ ಹೆಜ್ಜೆಹಾಕುತ್ತಿದೆ. ಬೋಸ್ಟನ್‌ ಕನ್ಸಲ್ಟನ್ಸಿ ಗ್ರೂಪ್‌ನಂತಹ (ಬಿಸಿಜಿ) ಪ್ರಮುಖ ಕಂಪೆನಿಗಳು ನಡೆಸಿರುವ ಅಧ್ಯಯನದಿಂದಲೂ ಇದು ಸ್ಪಷ್ಟವಾಗುತ್ತದೆ. 
 
ಭಾರತದಲ್ಲಿ ಅಂತರ್ಜಾಲ, ಸ್ಮಾರ್ಟ್‌ಫೋನ್‌ಬಳಕೆದಾರರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಿದೆ. ಇದು ನಗದು ರಹಿತ ವಹಿವಾಟಿಗೆ ವ್ಯಾಪಕ ಉತ್ತೇಜನ ನೀಡುತ್ತಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.
 
ಗರಿಷ್ಠ ಮುಖಬೆಲೆಯ ನೋಟುಗಳು ರದ್ದಾಗಿರುವ ಬಳಿಕ ದೇಶದಾದ್ಯಂತ ತೀವ್ರ ಸ್ವರೂಪದ ನಗದು ಅಭಾವ ಎದುರಾಗಿದೆ. ಇದರಿಂದ ಡಿಜಿಟಲ್‌ ಪಾವತಿ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. 
 
ಇಂದು ನಗದು ರಹಿತ ವಹಿವಾಟು ನಡೆಸಲು ಹಲವಾರು ಆಯ್ಕೆಗಳಿವೆ. ಅನ್‌ಸ್ಟ್ರಕ್ಚರ್ಡ್‌ ಸಪ್ಲಿಮೆಂಟ್ರಿ ಸರ್ವೀಸ್‌ ಡೇಟಾ (ಯುಎಸ್‌ಎಸ್‌ಡಿ). ಅಂದರೆ ಬೇಸಿಕ್‌  ಫೋನ್‌ ಬಳಸಿ ಹಣ ವರ್ಗಾವಣೆ,  ಕ್ರೆಡಿಟ್‌/ಡೆಬಿಟ್‌ ಕಾರ್ಡ್‌, ಆನ್‌ಲೈನ್‌ ಬ್ಯಾಂಕಿಂಗ್‌ನಂತಹ ವ್ಯವಸ್ಥೆಗಳಲ್ಲದೆ  ಸ್ಮಾರ್ಟ್‌ಫೋನ್‌ ಆಧಾರಿತ ಮೊಬೈಲ್‌ ಬ್ಯಾಂಕಿಂಗ್‌, ಮೊಬೈಲ್‌ ವಾಲೆಟ್‌ ಮತ್ತು ಯುಪಿಐ ಸೇವೆಗಳು ನಗದು ಇಲ್ಲದೆಯೇ ಸುಲಭವಾಗಿ ಹಣ ವರ್ಗಾವಣೆ, ಖರೀದಿ, ಬಿಲ್‌ ಪಾವತಿ ಅನುಕೂಲತೆ ಹೆಚ್ಚಿಸಿವೆ.
 
ಡಿಜಿಟಲ್‌ ಪಾವತಿ ವಿಧಗಳು
* ಯುಎಸ್‌ಎಸ್‌ಡಿ (ಅನ್‌ಸ್ಟ್ರಕ್ಚರ್ಡ್‌ ಸಪ್ಲಿಮೆಂಟ್ರಿ ಸರ್ವೀಸ್‌ ಡೇಟಾ)
* ಕಾರ್ಡ್‌ ಪಾವತಿ ವ್ಯವಸ್ಥೆ
* ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್ (ಯುಪಿಐ)
* ಮೊಬೈಲ್‌ ವಾಲೆಟ್‌
* ಆಧಾರ್‌ ಆಧಾರಿತ ಪಾವತಿ ವ್ಯವಸ್ಥೆ
* ಪಿಒಎಸ್‌ ಮಷಿನ್‌
* ಪ್ರೀ ಪೇಯ್ಡ್‌ ಕಾರ್ಡ್ಸ್
* ಪೇಮೆಂಟ್ಸ್‌ ಬ್ಯಾಂಕ್‌
 
ಸಮಸ್ಯೆಗಳೇನು? 
ಕಾರ್ಡ್‌ ಸುರಕ್ಷತೆ : 
ಈಚೆಗಷ್ಟೇ  ಕುತಂತ್ರಾಂಶ ಅಳವಡಿಸಿ 32 ಲಕ್ಷ ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕದ್ದಿರುವ ಪ್ರಕರಣ ನಡೆದಿದೆ. ಇದಲ್ಲದೆ ಸ್ಕಿಮ್ಮಿಂಗ್‌ ಸಾಧನೆ ಸೇರಿದಂತೆ ಇನ್ನೂ ಹಲವು ರೀತಿಯಲ್ಲಿ ಡೆಬಿಟ್‌ ಕಾರ್ಡ್‌ಗಳ ಮಾಹಿತಿ ದೋಚುವುದು ನಡೆಯುತ್ತಿದೆ. ನಗದು ರಹಿತ ವಹಿವಾಟಿಗೆ ಡೆಬಿಟ್‌ ಕಾರ್ಡ್ ಬಳಕೆ ಸಹ ಒಂದು ಮಾರ್ಗವಾಗಿರುವುದಿಂದ ಕಾರ್ಡ್‌ಗಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ.
 
ಪರಿಹಾರ: ಸದ್ಯ ದೇಶದಲ್ಲಿ ಮ್ಯಾಗ್ನೆಟಿಕ್‌ ಸ್ಟ್ರಿಪ್‌  (ಮ್ಯಾಗ್‌ಸ್ಟ್ರಿಪ್‌ ಎಂದೂ ಕರೆಯಲಾಗುತ್ತದೆ) ಇರುವ ಡೆಬಿಟ್‌ ಕಾರ್ಡ್‌ಗಳ ಸಂಖ್ಯೆಯೇ ಹೆಚ್ಚಿದೆ. ನಮ್ಮ ಖಾತೆಯ ಮಾಹಿತಿಯು ಮ್ಯಾಗ್ನೆಟಿಕ್‌ ಸ್ಟ್ರಿಪ್‌ನಲ್ಲಿ ಇರುತ್ತದೆ. ಕಾರ್ಡ್‌ ಸ್ವೈಪ್‌ ಮಾಡಿದಾಗ ಮ್ಯಾಗ್ನೆಟಿಕ್‌ ಸ್ಟ್ರಿಪ್‌ನಲ್ಲಿರುವ ಮಾಹಿತಿಯು ಬ್ಯಾಂಕ್‌ನಲ್ಲಿರುವ ಸರ್ವರ್‌  ಜತೆ ಸಂಪರ್ಕ ಹೊಂದಿ, ಹಣ ವರ್ಗಾವಣೆ ನಡೆಯುತ್ತದೆ.  ವಂಚಕರು ಮ್ಯಾಗ್ನೆಟಿಕ್‌ ಸ್ಟ್ರಿಪ್‌ನಲ್ಲಿರುವ ಮಾಹಿತಿ ಕದಿಯಲು ಸ್ಕಿಮ್ಮಿಂಗ್‌ ಸಾಧನೆ ಬಳಸುತ್ತಾರೆ.
 
ಚಿಪ್‌ ಆಧಾರಿತ ಕಾರ್ಡ್‌
ಬಳಕೆದಾರನ ಖಾತೆಯ ಮಾಹಿತಿಯನ್ನು ಚಿಪ್‌ನಲ್ಲಿ ಸಂಗ್ರಹಿಸಿ ಇಡಲಾಗಿರುತ್ತದೆ. ಈ ಮಾಹಿತಿಯು ಗೂಢಲಿಪಿಯಲ್ಲಿ (ಎನ್‌ಕ್ರಿಪ್ಟ್‌) ಇರುತ್ತದೆ. ‘ಪಿನ್‌’ ನೀಡಿದರೆ ಮಾತ್ರವೇ ಹಣ ವರ್ಗಾವಣೆ ಸಾಧ್ಯ. ಹೀಗಾಗಿ ಕಾರ್ಡ್‌ ನಕಲು ಮಾಡಲು ಆಗುವುದಿಲ್ಲ. 
 
ಅಂತರ್ಜಾಲ ಲಭ್ಯತೆ
ದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ ಶೇ 27ರಷ್ಟಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನೀಡಿರುವ ಮಾಹಿತಿಯಂತೆ 34 ಕೋಟಿ ಜನರು ಅಂತರ್ಜಾಲ ಬಳಕೆ ಮಾಡುತ್ತಿದ್ದಾರೆ. ನಗರ ಮತ್ತು ಗ್ರಾಮೀಣ ಭಾಗಕ್ಕೆ ಹೋಲಿಕೆ ಮಾಡಿ ನೋಡಿದರೆ ಗ್ರಾಮೀಣ ಭಾಗದಲ್ಲಿ ಅಂತರ್ಜಾಲ ಸಂಪರ್ಕ ಮತ್ತು ಬಳಕೆ ಪ್ರಮಾಣ ಬಹಳಷ್ಟು ಕಡಿಮೆ ಇದೆ.
 
ಸ್ಮಾರ್ಟ್‌ಫೋನ್‌
ಮೊಬೈಲ್‌ ಬ್ಯಾಂಕಿಂಗ್‌, ಮೊಬೈಲ್‌ ವಾಲೆಟ್‌ಗಳನ್ನು ಬಳಸಲು ಸ್ಮಾರ್ಟ್‌ಫೋನ್ ಹೆಚ್ಚು ಸೂಕ್ತ. ಆದರೆ ದೇಶದಲ್ಲಿ ಶೇ 17 ರಷ್ಟು ಜನರು ಮಾತ್ರವೇ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದಾರೆ. 
 
ಮೊಬೈಲ್‌ ಡೇಟಾ
ದೇಶದಲ್ಲಿ ಮೊಬೈಲ್‌ ಸಂಪರ್ಕ ಹೊಂದಿರುವವರ ಸಂಖ್ಯೆ ನೂರು ಕೋಟಿಗೂ ಹೆಚ್ಚಿದೆ. ಆದರೆ ಅಂತರ್ಜಾಲ (ಡೇಟಾ) ಬಳಸುತ್ತಿರುವವರ ಸಂಖ್ಯೆ ತೀರಾ ಕಡಿಮೆ ಇದೆ. 3ಜಿ ಮತ್ತು 4ಜಿ ಹೊಂದಿರುವವರ ಪ್ರಮಾಣ ಶೇ 15 ರಷ್ಟು ಮಾತ್ರ.
 
**
ಯುಪಿಐ
ಭಾರತದ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಹಣದ ಚಲಾವಣೆ ಕಡಿಮೆ ಮಾಡುವ ನಗದುರಹಿತ   ವ್ಯವಸ್ಥೆಗೆ ಪೂರಕವಾದ  ಎರಡು ಹೊಸ ಸೇವೆಗಳನ್ನು ಪರಿಚಯಿಸಿದೆ.
 
ಸ್ಮಾರ್ಟ್‌ಫೋನ್‌ ಮೂಲಕ ಅತ್ಯಂತ  ಸುಲಭವಾಗಿ ಹಣ ಪಾವತಿಸುವ ಮತ್ತು ಸ್ವೀಕರಿಸುವ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌  (Unified Payments Interface – UPI)  ಸೌಲಭ್ಯ ಅಭಿವೃದ್ಧಿಪಡಿಸಿದೆ.   
 
ಇದರ ಜತೆಗೆ,  ನಾಗರಿಕ ಸೇವೆಗಳಾದ  ವಿದ್ಯುತ್‌, ನೀರು, ಅಡುಗೆ ಅನಿಲ, ದೂರವಾಣಿ ಮತ್ತು ಮನೆಗೆ ನೇರ ಪ್ರಸಾರದ (ಡಿಟಿಎಚ್‌) ಮಾಸಿಕ ಸೇವಾ ಶುಲ್ಕ ಪಾವತಿಸಲು ನೆರವಾಗುವ ಭಾರತ್‌ ಬಿಲ್‌ ಪೇಮೆಂಟ್‌ ಆಪರೇಟಿಂಗ್‌ ಯೂನಿಟ್ಸ್‌ (Bharat Bi* * Payment Operating Units –BBPOUs)  ಸೇವೆಯ ಪ್ರಾಯೋಗಿಕ ಬಳಕೆಗೆ ಚಾಲನೆ ನೀಡಿದೆ.  
 
ಪ್ರಮುಖ ನಾಗರಿಕ ಸೇವೆಗಳನ್ನು ಒದಗಿಸುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತು ಅವುಗಳ ಬಳಕೆದಾರರ  ಮಧ್ಯೆ ಸಂಪರ್ಕ ಏರ್ಪಡಿಸಿ ಬಿಲ್‌ ಪಾವತಿಯನ್ನು ಸುಲಭಗೊಳಿಸುವುದು ಇದರ ಉದ್ದೇಶವಾಗಿದೆ. 
 
**
ಸರ್ಕಾರದ ಕ್ರಮಗಳು
* ಡಿಜಿಟಲ್‌ ಪಾವತಿ ಸೌಲಭ್ಯ  ಹೆಚ್ಚಿಸಲು ನೀತಿ ಆಯೋಗದ 10 ತಂಡ 
* ಮೊಬೈಲ್‌ನಲ್ಲಿ ಹೆಬ್ಬೆರಳು ಅಥವಾ ಕಣ್ಣಿನ ಪಾಪೆ ಗುರುತಿಸಬಲ್ಲ ತಂತ್ರಜ್ಞಾನ ಅಳವಡಿಸುವಂತೆ ಮೊಬೈಲ್‌ ತಯಾರಕರಿಗೆ ಸೂಚನೆ
* ಡಿಜಿಟಲ್‌ ಪಾವತಿ ಬಗ್ಗೆ ಜಾಗೃತಿ ಮೂಡಿಸಲು ಐ.ಟಿ ಸಚಿವಾಲಯದಿಂದ ವ್ಯಾಪಕ ಪ್ರಚಾರ ಕಾರ್ಯ
* ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ 80 ಲಕ್ಷ ಗ್ರಾಮಗಳಿಗೆ ಮಾಹಿತಿ
* ಅತಿ ಹೆಚ್ಚಿನ ಪ್ರಮಾಣದಲ್ಲಿ ವರ್ತಕರ ನೋಂದಣಿ
* ಕಾರ್ಮಿಕ ಸಚಿವಾಲಯದಿಂದ ಅಸಂಘಟಿತ ಮತ್ತು ಗುತ್ತಿಗೆ ಕಾರ್ಮಿಕರಿಗೆ ಖಾತೆ ತೆರೆಯುವ ಕೆಲಸ
* ಅತಿ ಹೆಚ್ಚು ಕಾರ್ಮಿಕರಿರುವ ಕಡೆಗಳಲ್ಲಿ ಹಣ ವರ್ಗಾವಣೆ ಸರಳಗೊಳಿಸಲು ಮೈಕ್ರೊ ಎಟಿಎಂಗಳ ಬಳಕೆ
* ಜವಳಿ ವಲಯದ ಕಾರ್ಮಿಕರಿಗೆ ನಗದ ರಹಿತ ಪಾವತಿ ವ್ಯವಸ್ಥೆ ಉತ್ತೇಜಿಸಲಿರುವ ಸಚಿವಾಲಯ
 
ವೆಚ್ಚದ ಸಮಸ್ಯೆ
* ವರ್ತಕರಿಗೆ ಡಿಜಿಟಲ್‌ ಪಾವತಿ ವ್ಯವಸ್ಥೆ ಬಳಸಿಕೊಳ್ಳುವುದಕ್ಕೆ ವಿಧಿಸುವ ವರ್ಗಾವಣೆ ಶುಲ್ಕ 
* ಗ್ರಾಹಕರಿಗೆ ಕಾರ್ಡ್‌ ಬಳಸುವುದಕ್ಕೆ ವರ್ಷಕ್ಕೆ ವಿಧಿಸುವ ಶುಲ್ಕ
* ಬ್ಯಾಂಕ್‌ಗಳಿಗೆ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿ ನಿರ್ವಹಣೆ ಶುಲ್ಕ
* ವಂಚನೆ ಮತ್ತು ಗಂಡಾಂತರ ನಿರ್ವಹಣಾ ವ್ಯವಸ್ಥೆಗೆ ಆಗುವ ವೆಚ್ಚ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT