ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೋದಯ ಸಿದ್ಧಾಂತವೆಂಬ ಮಧ್ಯಮ ಮಾರ್ಗ

Last Updated 6 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಕ್ಸಲ್‌ವಾದಿಗಳಲ್ಲಿ ಹಲವರು ತಮ್ಮ ದೀರ್ಘಕಾಲದ ಅಜ್ಞಾತವಾಸ ಮತ್ತು ಅರಣ್ಯವಾಸವನ್ನು ಮುಗಿಸಿ ಇತ್ತೀಚೆಗೆ ಸಮಾಜದ ಮುಖ್ಯವಾಹಿನಿಯನ್ನು  ಸೇರಿಕೊಂಡಿದ್ದಾರೆ.ಅವರ ಆ ಶರಣಾಗತಿ ತೀವ್ರತಮ ಎಡಪಂಥೀಯ ವಿಚಾರದ ಹತಾಶೆಯ ಸಂಕೇತವಾಗಿದೆ.

ಅವರು ಯಾವ ತಾತ್ವಿಕ ವಿಚಾರಗಳಿಂದ ಪ್ರೇರಿತರಾಗಿ ಕ್ರಾಂತಿ ಮಾಡುವ ಉದ್ದೇಶದಿಂದ ಕಾಡು ಸೇರಿದ್ದರೋ ಆ ಉದ್ದೇಶವು ಕಾಲ ಕಳೆದರೂ ನೆರವೇರದೇ ಹೋದುದರಿಂದ  ನಿರಾಶರಾಗಿದ್ದಾರೆ. ಬಯಲಿಗೆ ಬಂದು ಸಾರ್ವಜನಿಕ ಕೆಲಸದಲ್ಲಿ ತೊಡಗಿದ್ದಾರೆ. ಸರ್ವೋದಯ ಕಾರ್ಯಕರ್ತರ ಸಹಾಯ ಪಡೆಯುತ್ತಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ.

ಇನ್ನು ಲೋಕವಿಖ್ಯಾತ ತೀವ್ರತರ ಎಡಪಂಥೀಯ ವಿಚಾರವಾಗಿರುವ ಸಾಮ್ಯವಾದ ಜಾಗತಿಕ ಮಟ್ಟಕ್ಕೆ ಏರಿ, ಒಂದು ಕಾಲಕ್ಕೆ ರಷ್ಯಾ ಮತ್ತು ಯುರೋಪಿನ ಕೆಲ ದೇಶಗಳಲ್ಲಿ ಜಯಭೇರಿಯ ಜಾಗಟೆಯನ್ನು ಬಾರಿಸುತ್ತಿತ್ತು. ಸಾಮ್ಯವಾದಿ ಪಕ್ಷದ ಪ್ರಬಲ ಸರ್ಕಾರವುಳ್ಳ ದೇಶ ರಷ್ಯಾ ಆಗಿತ್ತು. ದಶಕಗಳ ಹಿಂದೆ ಸೋವಿಯತ್ ಒಕ್ಕೂಟ ಕುಸಿಯಿತು.

ಆಗ ಇಡೀ ಸಾಮ್ಯವಾದ ಸಿದ್ಧಾಂತದ ಬೆನ್ನೆಲುಬು ಮುರಿದಂತಾಯಿತು. ಈಗ ಸಾಮ್ಯವಾದ ಸಿದ್ಧಾಂತದಿಂದ ರಷ್ಯಾ ಮತ್ತು ಚೀನಾ ಬಹುದೂರ ಸರಿದಿವೆ. ಆ ದೇಶಗಳಲ್ಲಿಯೂ ಬಂಡವಾಳವಾದದ ಛಾಯೆ ದಟ್ಟವಾಗಿದೆ. ಅವು ನಿರಂಕುಶ ವಿಚಾರದಿಂದ ತಮ್ಮ ದೇಶಗಳಲ್ಲಿ ಸೈನ್ಯ ಬಲವನ್ನು ಕಟ್ಟುತ್ತಿವೆ ಮತ್ತು ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿವೆ.

ಈಗ ಅವುಗಳಿಗೆ ಸಾಮ್ಯವಾದದ ಮೂಲ ವಿಚಾರವನ್ನಾಗಲಿ, ಆದರ್ಶವನ್ನಾಗಲಿ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗುವಂತೆ ಮಾಡುವುದರ ಬದಲು, ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ, ಪೌರ್ವಾತ್ಯ ದೇಶಗಳನ್ನು ಹೇಗೆ ಮಣಿಸಬಹುದೆಂಬುದೇ ಮುಖ್ಯವಾಗಿದೆ. ಸಾಮ್ಯವಾದಿ ವಿಚಾರದ ಚೀನಾಕ್ಕಂತೂ ಭಾರತವನ್ನು ಹೇಗಾದರೂ ಮಾಡಿ ಹಿಂದಕ್ಕೆ ಹಾಕಿ ತಾನು ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ದೇಶವಾಗಬೇಕೆಂಬುದೇ ಗುರಿಯಾಗಿದೆ.

ತೀವ್ರತಮ ಸಾಮ್ಯವಾದಿ ವಿಚಾರದಿಂದ ದೂರವಾದರೂ ಸಾಮ್ಯವಾದದ ಚೈತನ್ಯವನ್ನು ತನ್ನಲ್ಲಿ ಇರಿಸಿಕೊಂಡು ಜನಪರ ಸಂಘಟನೆಯ ವಿಚಾರದ ಪ್ರತಿರೂಪವಾಗಿ ಸಮಾಜವಾದ ಹುಟ್ಟಿಕೊಂಡಿತು. ಅದನ್ನು ಪ್ರಭುತ್ವಾಧಾರಿತ ಸಮಾಜವಾದ ಎಂದು ಕರೆಯಲಾಗುತ್ತದೆ. ಆದರೆ ಜಗತ್ತಿನ ಯಾವುದೇ ದೇಶದಲ್ಲಿ ಅದು ಪರಿಪೂರ್ಣವಾಗಿ ಪ್ರಭುತ್ವ ಪಡೆದಂತೆ ಕಾಣುತ್ತಿಲ್ಲ.

ದೇಶದ ಕೆಲ ರಾಜ್ಯಗಳಲ್ಲಿಯ ಸಮಾಜವಾದಿ ಪಕ್ಷ ಕೂಡ ತನ್ನ ವಿಚಾರಕ್ಕೆ ತಕ್ಕ ನೀತಿಅನುಸರಿಸಲು ಸಾಧ್ಯವಾಗುವಂಥ ಸರ್ಕಾರ ರಚಿಸಲು ವಿಫಲವಾಗಿದೆ. ಅಲ್ಲದೆ, ಪಕ್ಷದಲ್ಲಿಯ ಮುಖಂಡರ ಅಧಿಕಾರ ಲಾಲಸೆಯ ಕಾರಣದಿಂದ ಸಮಾಜವಾದಿ ಪಕ್ಷ ಒಡೆದು ಹೋಗಿದೆ, ದುರ್ಬಲವಾಗಿದೆ. ಭವಿಷ್ಯದಲ್ಲಿ ದೇಶದಲ್ಲೊಂದು ಬಲವಾದ ಸಮಾಜವಾದಿ ಸರ್ಕಾರ ಅಧಿಕಾರಕ್ಕೆ ಬರುತ್ತದೆಂದು ಹೇಳಲು ಆಗುವುದಿಲ್ಲ.

ಇನ್ನು ಹಿಂಸೆಯಲ್ಲಿಯೇ ನಂಬಿಕೆ ಇಟ್ಟಿರುವ ಮಾವೊವಾದಕ್ಕೆ ಸಮಾಜದಲ್ಲಿ ಹೆಚ್ಚಿನ ಅವಕಾಶ ಸಿಗುವುದಿಲ್ಲ. ಸಾಮಾನ್ಯ ಜನರನ್ನು ಆಕರ್ಷಿಸುತ್ತಿರುವ ಬಂಡವಾಳವಾದದ ಅನಿಷ್ಟಗಳನ್ನಂತೂ ಎಷ್ಟು ಹೇಳಿದರೂ ಸಾಲದು. ಬಂಡವಾಳವಾದವೆಂಬ ನದಿಗೆ ಯಾವುದೇ ಕಟ್ಟುಪಾಡು ಇಲ್ಲ.

ಪ್ರವಾಹ ಬಂದ ನದಿ ಯಾವ ರೀತಿ ಸುತ್ತಮುತ್ತಲಿನ ಸ್ಥಾವರ ಮತ್ತು ಜಂಗಮವನ್ನು ನಾಶ ಮಾಡುವುದೋ ಅದೇ ರೀತಿ ಯಾವ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಅದು ಪ್ರವಹಿಸುವುದೋ ಅಲ್ಲೆಲ್ಲಾ ವಿನಾಶವನ್ನು ಪ್ರವಹಿಸಿ ಹೋಗುತ್ತದೆ. ವ್ಯಕ್ತಿಗಳನ್ನು, ಸಮಾಜವನ್ನು, ಕುಟುಂಬವನ್ನು ಕೂಡಿಸುವ ಬದಲು ಒಡೆದುಹಾಕುತ್ತದೆ. ದೇಶಗಳ ಮಧ್ಯೆ ಯುದ್ಧವನ್ನು ಉಂಟುಮಾಡುತ್ತದೆ. ಶ್ರಮಜೀವಿಗಳನ್ನು ಕಾಲಕಸ ಮಾಡುತ್ತದೆ. ದುಡಿಯುವ ಕೈಗಳನ್ನು ಸೋಮಾರಿ ಮಾಡಿ ಅವುಗಳ ಕೈಗೆ ಯಂತ್ರವನ್ನು ಕೊಡುತ್ತದೆ.

ಬಂಡವಾಳ ಹೂಡಿಕೆಗೆ ತಕ್ಕಂತೆ ಉದ್ಯೋಗಗಳು ಸೃಷ್ಟಿಯಾಗದೆ ನಿರುದ್ಯೋಗ ಹೆಚ್ಚಾಗಿ ಇಡೀ ಸಮಾಜಕ್ಕೆ ಗೆದ್ದಲು ಹತ್ತಿದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮನುಷ್ಯನಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿವೆ. ಇಪ್ಪತ್ತೊಂದನೇ ಶತಮಾನ ಅಶಾಂತಿ, ಹಿಂಸೆ ಮತ್ತು ಲೂಟಿತನದ ಯುಗವಾಗಿದೆ. ಇಡೀ ಜಗತ್ತನ್ನು ಮತ್ತು ಅಲ್ಲಿರುವ ಜೀವಕೋಟಿಯನ್ನು ಕ್ಷಣಾರ್ಧದಲ್ಲಿ ನಾಶ ಮಾಡುವಂಥ ಭಯಾನಕ ಶಸ್ತ್ರಾಸ್ತ್ರಗಳು, ಸಾಧನ ಸಾಮಗ್ರಿಗಳು ಜಗತ್ತಿನ ಪ್ರತಿ ದೇಶದಲ್ಲೂ ಇವೆ.

ಇಂದು ಅತ್ಯಂತ ಜ್ವಲಂತ ಸಮಸ್ಯೆ ಪರಿಸರ ವಿನಾಶದ್ದು. ಭೂಮಿ ಮೇಲಿನ ತಾಪಮಾನ ಹೆಚ್ಚಾಗುತ್ತಿದೆ. ನೀರಿನ ವಲಯ ಕಡಿಮೆಯಾಗುತ್ತಿದೆ. ಅತಿವೃಷ್ಟಿ, ಸುನಾಮಿ, ಭೂಕಂಪ ಮುಂತಾದವು ಹೆಚ್ಚಾಗುತ್ತಿವೆ. ಅರಣ್ಯ ಪ್ರದೇಶ ದಿನೇ ದಿನೇ ಕಡಿಮೆಯಾಗುತ್ತಿದೆ. ಗಾಳಿ, ನೀರು, ಮಣ್ಣು ವಿಷಯುಕ್ತವಾಗಿವೆ. ಸಾಮ್ಯವಾದ, ಸಮಾಜವಾದ, ಮಾರ್ಕ್ಸ್‌ವಾದ, ಮಾವೊವಾದ, ನಕ್ಸಲ್‌ವಾದ, ಬಂಡವಾಳವಾದ ಇತ್ಯಾದಿ ಎಲ್ಲ ವಾದಗಳು ಪರಿಸರವನ್ನು ರಕ್ಷಿಸಲು ಸೋತಿವೆ.

ಬಲಪಂಥೀಯ ಮತ್ತು ಎಡಪಂಥೀಯ ವಿಚಾರಧಾರೆಗಳ ಅತಿರೇಕದಿಂದ ಬೇಸತ್ತಿರುವ ವಿಚಾರವಂತರು ಈ ಎರಡರ ಅತಿವಾದಗಳಿಂದ ಭಿನ್ನವಾದ ಮಧ್ಯಮ ಮಾರ್ಗದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಮಧ್ಯಮ ಮಾರ್ಗವೆಂದರೆ ಮೌನ ಮಾರ್ಗವಲ್ಲ. ಸರ್ವೋದಯ ಸಿದ್ಧಾಂತ ಮಧ್ಯಮ ಮಾರ್ಗವಾಗಬಲ್ಲದು. ಸತ್ಯಾಗ್ರಹ, ಅಸಹಕಾರ, ಸವಿನಯ ಪ್ರತಿರೋಧ ಮುಂತಾದ ಅಹಿಂಸಾತ್ಮಕ ಮಾರ್ಗಗಳ ಮೂಲಕ ಅದು ತನ್ನ ಮೌನವನ್ನು ಮುರಿಯುತ್ತದೆ. ಸತ್ಯ ಮತ್ತು ಅಹಿಂಸೆಯಲ್ಲಿ ಪೂರ್ಣವಾಗಿ ನಂಬಿಕೆ ಇಟ್ಟಿರುವವರು ಸರ್ವೋದಯ ಸಿದ್ಧಾಂತದ ಮಧ್ಯಮ ಮಾರ್ಗವನ್ನು ಅನುಸರಿಸಬಹುದು.

ಇಂದಿನ ಬಹುತೇಕ ಸಮಸ್ಯೆಗಳು ಮಾನವ ನಿರ್ಮಿತವೇ ಆಗಿರುವುದರಿಂದ ಪರಿಹಾರವೂ ಮಾನವ ಪ್ರಯತ್ನದಿಂದಲೇ ಆಗಬೇಕಿದೆ. ಆ ಪರಿಹಾರ ಜಗತ್ತಿನ ಎಲ್ಲ ರಾಜಕೀಯ ಸಿದ್ಧಾಂತಗಳನ್ನು ಮೀರಿ ಇರುವ ಸರ್ವೋದಯ ಸಿದ್ಧಾಂತ. ಅದು ಧ್ರುವತಾರೆಯಂತಿದೆ; ಅದನ್ನು ನಂಬಿಕೊಂಡವರಿಗೆ ಆಗಾಗ್ಗೆ ತತ್ವಾಂತರಿಯಾಗುವ ಭಯವಿಲ್ಲ.

ಸುಮಾರು 2000 ವರ್ಷಗಳಷ್ಟು ಹಿಂದಿನಿಂದ ಜೀವನದ ಎಲ್ಲಾ ಪ್ರಕಾರದ ಅನುಭವಗಳ ಮೂಸೆಯಿಂದ ಹೊರಬಂದಿರುವಂಥದ್ದು ಅದು. ಜಗತ್ತಿನ ಎಲ್ಲ ಶ್ರೇಷ್ಠ ಗ್ರಂಥಗಳಾದ ಬೈಬಲ್, ಕುರ್‌ಆನ್, ಸೂಫಿ ಸಾಹಿತ್ಯ, ವಚನ ಸಾಹಿತ್ಯ, ಗೀತೆ, ಉಪನಿಷತ್‌ಗಳು ಪ್ರತಿಪಾದಿಸಿರುವುದು. ಯಾವುದೇ ಭೇದವಿಲ್ಲದೆ ಎಲ್ಲರ ಏಳ್ಗೆಯನ್ನೂ ಬಯಸುವ ಸಿದ್ಧಾಂತ.

ಪ್ರಜಾಪ್ರಭುತ್ವವಾದಿ ದೇಶದಲ್ಲಿ ಪ್ರಜೆಗಳೇ ಸಾರ್ವಭೌಮರಾಗಿರುವುದರಿಂದ ಅವರು  ತಮ್ಮ ಸಾಮಾಜಿಕ ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ಸುಯೋಗ್ಯವಾಗಿ ನಿರ್ವಹಿಸಬೇಕಾದುದು ಅಗತ್ಯ.  ಅದಕ್ಕಾಗಿ ಪ್ರಜೆಗಳನ್ನು ಸಿದ್ಧಪಡಿಸಲು ನಡೆಯಬೇಕಾದ ಪ್ರಯತ್ನಗಳಲ್ಲಿ ರಾಜಕೀಯ ಪಕ್ಷಗಳ ಸಮಾವೇಶಗಳು ಉಪಯೋಗಕ್ಕೆ ಬರಲಾರವು. ಏಕೆಂದರೆ ಅವುಗಳ ದೃಷ್ಟಿಕೋನ ಏಕಮುಖವಾಗಿರುತ್ತದೆಯೇ ಹೊರತು ಸಮಗ್ರವಾಗಿರುವುದಿಲ್ಲ.

ಆದ್ದರಿಂದ ಪ್ರಜೆಗಳಲ್ಲಿ ಪ್ರಜಾಪ್ರಭುತ್ವಕ್ಕೆ ಅನುಗುಣವಾದ ಗುಣಗಳನ್ನು ಅರಳಿಸುವ ಕೆಲಸವನ್ನು ಯಾವುದೇ ರಾಜಕೀಯ ಅಧಿಕಾರದ ಅಭಿಲಾಷೆಯಿಲ್ಲದೆ, ಕೇವಲ ಸಮಸ್ತ ಸಮಾಜದ ಹಿತಚಿಂತನೆ ಮಾಡುವ ರಾಜಕೀಯೇತರ ಮತ್ತು ಗಾಂಧಿ ಸಿದ್ಧಾಂತ ಪ್ರಣೀತ ಸರ್ವೋದಯ ಸಮಾಜ ಸಮ್ಮೇಳನಗಳು ಮಾತ್ರ ಮಾಡಲು ಸಾಧ್ಯ.

ಅಲ್ಲಿ ಯಾವುದೇ ಸಂಘಟನೆಯ, ಸದಸ್ಯತ್ವದ ಹಂಗಿಲ್ಲದೆ ಮುಕ್ತ ಮನಸ್ಸಿನ ಜನರು ಸೇರಿ ಸಾರ್ವಜನಿಕ ಹಿತಾಸಕ್ತಿಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾಗಿದೆ.ಇಂಥ ಸಮ್ಮೇಳನಗಳು ಜನಶಕ್ತಿಯನ್ನು ಬಲಪಡಿಸಿ ರಾಜ್ಯಶಕ್ತಿ ಮತ್ತು ದಂಡಶಕ್ತಿಗಳ ಮೇಲೆ ನಿಯಂತ್ರಣ ಇರಿಸಿಕೊಳ್ಳುವ ನೈತಿಕ ಲೋಕಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ.

ಇದೇ 9 ಮತ್ತು 10ರಂದು ಮೇಲುಕೋಟೆಯಲ್ಲಿ ಕರ್ನಾಟಕ ರಾಜ್ಯ ಸರ್ವೋದಯ ಸಮಾಜ ಸಮ್ಮೇಳನ ನಡೆಯಲಿದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಅಖಿಲ ಭಾರತ ಸರ್ವೋದಯ ಸಮಾಜ ಸಮ್ಮೇಳನಗಳು ಪ್ರತಿವರ್ಷ 1948ರಿಂದಲೂ ನಡೆಯುತ್ತಿವೆ. ಇದುವರೆಗೆ 63 ಸಮ್ಮೇಳನಗಳು ನಡೆದಿವೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಈ ಸಮ್ಮೇಳನ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT