ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನೈಡ್‌ ಚುಚ್ಚಿ ವ್ಯಕ್ತಿ ಕೊಲೆ: ನಾಲ್ವರ ಬಂಧನ

ಪ್ರಿಯಕರನ ಜೊತೆಗೂಡಿ ಪತಿ ಹತ್ಯೆ ಮಾಡಿದ ಮಹಿಳೆ ಜೈಲಿನಲ್ಲಿ ಬಂಧಿ
Last Updated 7 ಡಿಸೆಂಬರ್ 2016, 6:48 IST
ಅಕ್ಷರ ಗಾತ್ರ

ರಾಮನಗರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಗೆ ಸೈನೈಡ್‌ ನೀಡಿ ಹತ್ಯೆ ಮಾಡಿದ ಘಟನೆ ಕುಂಬಳಗೂಡು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ನಡೆದಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿಯ ರೈಲ್ವೆ ಪ್ಯಾರಲಲ್‌ ರಸ್ತೆ ನಿವಾಸಿ ರವಿಕುಮಾರ್‌ (40) ಮೃತರು. ಅವರ ಪತ್ನಿ ನಾಗಜ್ಯೋತಿ (35), ತಮಿಳುನಾಡಿನ ಧರ್ಮಪುರಂ ಜಿಲ್ಲೆಯ ಕಾರಿಮಂಗಲಂ ನಿವಾಸಿಗಳಾದ ರಾಮಕುಮಾರ್‌ (35), ಭಾಸ್ಕರ್‌ (37) ಹಾಗೂ ಟಿ.ರಾಮಕುಮಾರ್ (27) ಬಂಧಿತರು.

ಪ್ರಕರಣದ ಹಿನ್ನೆಲೆ: ‘ಅಕ್ಟೋಬರ್‌ 21ರಂದು ಸಂಜೆ ರವಿಕುಮಾರ್‌ ಅವರು ಪತ್ನಿಯೊಡನೆ ಚಳ್ಳೇಘಟ್ಟದ ಹುಣಸೇಮರದ ಪಾಳ್ಯದಲ್ಲಿರುವ ಸಾಯಿಬಾಬಾ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ  ಹಿಂತಿರುಗುವಾಗ ಮಾರ್ಗಮಧ್ಯದಲ್ಲಿದ್ದ ಮರ ಕಂಡ ನಾಗಜ್ಯೋತಿ, ಪೂಜೆಗೆ ಬಿಲ್ವಪತ್ರೆ ಬೇಕು ಎಂದು ಕಾರು ನಿಲ್ಲಿಸಿ ಪತಿಯನ್ನು ಕೆಳಗೆ ಇಳಿಸಿದ್ದರು. ಈ ಸಂದರ್ಭ ಅವರನ್ನೇ ಮತ್ತೊಂದು ಕಾರಿನಲ್ಲಿ ಹಿಂಬಾಲಿಸುತ್ತಿದ್ದ ಇಬ್ಬರು ಆರೋಪಿಗಳು ಹತ್ತಿರಕ್ಕೆ ಧಾವಿಸಿ ಹಿಂದಿನಿಂದ ರವಿಕುಮಾರ್‌ ಅವರಿಗೆ ಸೈನೈಡ್‌ ಚುಚ್ಚಿ ಪರಾರಿಯಾಗಿದ್ದರು.

ತನಗೆ ಏನಾಯಿತೆಂದು ತಿಳಿಯದ ರವಿಕುಮಾರ್‌ ನೋವಿನಲ್ಲಿಯೇ ಕಾರು ಚಲಾಯಿಸಿಕೊಂಡು ಮನೆಗೆ ಬಂದು ಅಲ್ಲಿ ಕುಸಿದುಬಿದ್ದಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಅಂದು ಮಧ್ಯರಾತ್ರಿಯೇ ಮೃತಪಟ್ಟಿದ್ದರು. ಅವರ ತಾಯಿ ನೀಡಿದ ದೂರಿನ ಅನ್ವಯ ಕುಂಬಳಗೂಡು ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 302 ಅನ್ವಯ ಪ್ರಕರಣ ದಾಖಲಾಗಿತ್ತು’ ಎಂದು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಗುಪ್ತ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಕುರಿತು ವಿವರ ನೀಡಿದರು.

‘ರವಿಕುಮಾರ್ ಹಾಗೂ ನಾಗಜ್ಯೋತಿಗೆ 13 ವರ್ಷದ ಹಿಂದೆಯೇ ಮದುವೆ ಆಗಿದ್ದು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ನಾಗಜ್ಯೋತಿಗೆ ತನ್ನ ಹಳೆಯ ಗೆಳೆಯ ರಾಮಕುಮಾರ್ ಜೊತೆ ಸಖ್ಯ ಬೆಳೆದಿದ್ದು, ಅದಕ್ಕೆ ಅಡ್ಡಿಯಾದ ಗಂಡನನ್ನು ಮುಗಿಸುವ ಸಲುವಾಗಿ ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ. ಮೃತರ ದೇಹದಲ್ಲಿ ನಾಲ್ಕಾರು ಚುಚ್ಚಿದ ಗುರುತುಗಳಿದ್ದವು. ಪೊಟ್ಯಾಶಿಯಂ ಸೈನೈಡ್‌ ಚುಚ್ಚಿ ಕೊಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.

‘ವೃತ್ತಿಯಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರಿಯಾದ ರವಿಕುಮಾರ್ ಹತ್ಯೆಗೆ ಆರೋಪಿಗಳು ಈ ಹಿಂದೆಯೂ ವಿಫಲ ಯತ್ನ ನಡೆಸಿದ್ದರು. ಅಪಘಾತ ಮಾಡಿ ಎದುರಾಳಿಯನ್ನು ಕೊಲ್ಲುವ ಅವರ ಯತ್ನ ವಿಫಲವಾಗಿತ್ತು. ಹೀಗಾಗಿ ಈ ಬಾರಿ ವ್ಯವಸ್ಥಿತವಾಗಿ ಸಂಚು ನಡೆದಿತ್ತು. ಅಂತರ್ಜಾಲ ಮೂಲಕ ಸೈನೈಡ್‌ ಬಗ್ಗೆ ಮಾಹಿತಿ ಹುಡುಕಾಡಿದ ಆರೋಪಿ ರಾಮಕುಮಾರ್ ಅದರ ಬಳಕೆ ಬಗ್ಗೆ ಅರಿತಿದ್ದರು. ನಂತರ ಶ್ರೀಧರ್ ಎಂಬುವರಿಂದ ಸೈನೈಡ್‌ ಖರೀದಿಸಿ ಇಟ್ಟುಕೊಂಡಿದ್ದರು’ ಎಂದು ಚಂದ್ರಗುಪ್ತ ಮಾಹಿತಿ ನೀಡಿದರು.

ಆರೋಪಿಗಳು ಕೃತ್ಯಕ್ಕೆ ಬಳಸಿದ ಸ್ಕೋಡಾ ಕಾರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿರುವುದಾಗಿ ತಿಳಿಸಿದರು.

ಡಿವೈಎಸ್ಪಿ ಲಕ್ಷ್ಮಿಗಣೇಶ್‌ ಮಾರ್ಗದರ್ಶನದಲ್ಲಿ  ಕುಂಬಳಗೂಡು ಠಾಣೆ ಇನ್‌ಸ್ಪೆಕ್ಟರ್‌ ಎಸ್‌. ಶ್ರೀಧರ್‌, ತಾಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್ ಶಿವಶಂಕರ್, ಹಾರೋಹಳ್ಳಿ ಸಿಪಿಐ ಶ್ರೀನಿವಾಸ್‌, ರಾಮನಗರ ಗ್ರಾಮಾಂತರ ಸಿಪಿಐ ಕೆ.ಎಂ. ರಮೇಶ, ಪಿಎಸ್‌ಐ ಬಿ.ಕೆ. ಪಾಟೀಲ, ಕೆ, ಮುರಳೀಧರ್‌ ಹಾಗೂ ಸಿಬ್ಬಂದಿ ಶಿವಕೀರ್ತಿ, ಅಣ್ಣಯ್ಯ, ಜವರೇಗೌಡ, ಶ್ರೀನಿವಾಸ, ಎಚ್‌.ಎಲ್‌. ಮಂಜುನಾಥ್, ಏಕಾಂಬರೇಶ್ವರ ಅವರನ್ನು ಒಳಗೊಂಡ ತಂಡವು ಪ್ರಕರಣ ಪತ್ತೆ ಮಾಡಿದ್ದು, ಅವರನ್ನು ಅಭಿನಂದಿಸಿದರು.

ಕಾಲೇಜು ದಿನದ ಗೆಳೆತನ!
ಪ್ರಕರಣದ ಮೊದಲ ಆರೋಪಿ ರಾಮಕುಮಾರ್ ಹಾಗೂ ಮೂರನೇ ಆರೋಪಿ ನಾಗಜ್ಯೋತಿ ಇಬ್ಬರು ತಮಿಳುನಾಡಿನ ಕಾರಿಮಂಗಳಂ ಸರ್ಕಾರಿ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದವರು.

ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದು, ಇದನ್ನು ಅರಿತ ಆಕೆಯ ತಂದೆ ನಾಗಜ್ಯೋತಿಯನ್ನು ಕೆಂಗೇರಿಯ ರವಿಕುಮಾರ್ ಅವರಿಗೆ ಮದುವೆ ಮಾಡಿಕೊಟ್ಟು ಕಳುಹಿಸಿದ್ದರು.

ಅಲ್ಲಿಂದ ತನ್ನ ಪ್ರೇಯಸಿಯ ಸಂಪರ್ಕಕ್ಕೆ ಪ್ರಯತ್ನ ನಡೆಸಿದ್ದ ರಾಮಕುಮಾರ್  ಫೇಸ್‌ಬುಕ್‌ ಮೂಲಕ ಆಕೆಯ ಮೊಬೈಲ್‌ ಸಂಖ್ಯೆ ಪತ್ತೆ ಮಾಡಿದ್ದರು. ಬಳಿಕ ಇಬ್ಬರು ನಿರಂತರ ಸಂಪರ್ಕ ಇಟ್ಟುಕೊಂಡಿದ್ದು, ಬೆಂಗಳೂರಿನಲ್ಲಿ ಆಗಾಗ್ಗೆ ಭೇಟಿಯಾಗುತ್ತಿದ್ದರು. ಈ ವಿಚಾರದಲ್ಲಿ ಗಂಡನಿಗೆ ಅನುಮಾನ ಬಂದಿದ್ದು, ಏನಾದರೂ ಮಾಡುವಂತೆ ಮಹಿಳೆಯು ತನ್ನ ಪ್ರಿಯಕರನಿಗೆ ದುಂಬಾಲು ಬಿದ್ದಿದ್ದರು ಎಂದು ಪೊಲೀಸರು ವಿವರ ನೀಡಿದರು.

*
ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆಗೂಡಿ ಪತಿಗೆ ಸೈನೈಡ್‌ ನೀಡಿ ಕೊಂದಿದ್ದು, ವಿಚಾರಣೆ ವೇಳೆ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಬಳಸಲಾದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
-ಚಂದ್ರಗುಪ್ತ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT