ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿನ ವಿಶ್ವಾಸಾರ್ಹತೆಗೆ ಕುಂದು...

Last Updated 7 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನೋಟುಗಳ ರದ್ದತಿ ಕುರಿತಂತೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ; ಇನ್ನೂ ನಡೆಯುತ್ತಿದೆ. ಅಭಿಪ್ರಾಯಗಳು ರಾಜಕೀಯ ಪಕ್ಷಗಳ ಧೋರಣೆಗೆ ಅನುಸಾರವಾಗಿ ಧ್ರುವೀಕರಣಗೊಂಡಿವೆ. ಈ ಚರ್ಚೆಗಳಲ್ಲಿ ಮುನ್ನೆಲೆಗೆ ಬಾರದೇ ಇರುವ ಬ್ಯಾಂಕಿಂಗ್ ವ್ಯವಸ್ಥೆ ಕುರಿತಾದ ಪ್ರಮುಖ ವಿಷಯವೊಂದಿದೆ.

ದೇಶದ ಅರ್ಥವ್ಯವಸ್ಥೆಯ ನಾಡಿಯೆನ್ನಬಹುದಾದ ಬ್ಯಾಂಕಿಂಗ್ ಉದ್ದಿಮೆ, 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಲ್ಲಿ (Banking Regulation Act, 1949) ಅಡಕವಾಗಿರುವ ವಿಭಿನ್ನ ನಿಬಂಧನೆಗಳಿಗೆ ಬದ್ಧವಾಗಿ ವ್ಯವಹಾರ ನಡೆಸಬೇಕಾಗಿದೆ. ಈ ಅಧಿನಿಯಮದ ಒಂದು ಉದ್ದೇಶ, ಬ್ಯಾಂಕುಗಳ ಮೇಲೆ ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿದೆ.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕಲಂ 5ರ ಪ್ರಕಾರ, ಬ್ಯಾಂಕಿಂಗ್ ಅಂದರೆ ‘ಠೇವಣಿಗಳನ್ನು ಸ್ವೀಕರಿಸುವ ಮತ್ತು ಆ ಠೇವಣಿಗಳಿಂದ ಸಾಲ ನೀಡುವ ಅಥವಾ ಹೂಡಿಕೆ ಮಾಡುವ ಉದ್ದಿಮೆ’. ಈ  ನಿಬಂಧನೆಯಂತೆ, ಬ್ಯಾಂಕು ತಾನು ಸ್ವೀಕರಿಸಿದ ಠೇವಣಿಯನ್ನು ಠೇವಣಿದಾರನಿಗೆ, ಆತನಿಗೆ ಬೇಕೆಂದಾಗ ಚೆಕ್‌, ಡಿ.ಡಿ. ಅಥವಾ  ಇನ್ನಿತರ ನಿರ್ದೇಶಪತ್ರಗಳ ಮುಖಾಂತರ ಮರಳಿಸಬೇಕು.

ಈ ನಿಯಮವನ್ನು ವಿಶ್ಲೇಷಿಸಿದಾಗ ಸ್ಪಷ್ಟವಾಗುವ ಅಂಶವೆಂದರೆ, ಗ್ರಾಹಕನು ಬ್ಯಾಂಕಿನಲ್ಲಿಟ್ಟ ಹಣವನ್ನು ಅವನು ಕೇಳಿದಾಗ ಬ್ಯಾಂಕು ಮರುಪಾವತಿ ಮಾಡಬೇಕು; ಠೇವಣಿ ನಿಶ್ಚಿತ ಅವಧಿಯದ್ದಾಗಿದ್ದಲ್ಲಿ (fixed deposit) ಅವಧಿ ಮುಗಿದಾಗ ಗ್ರಾಹಕನಿಗೆ ಬಡ್ಡಿಸಹಿತ ಹಿಂತಿರುಗಿಸಬೇಕು. ಅವಧಿಗೆ ಮೊದಲೇ ಒಬ್ಬ ಗ್ರಾಹಕ ಬ್ಯಾಂಕಿನಿಂದ ಕೆಲವು ನಿರ್ದಿಷ್ಟ ನಿಬಂಧನೆಗಳಿಗೆ ಅನುಗುಣವಾಗಿ ತನ್ನ ನಿಶ್ಚಿತ ಅವಧಿ ಠೇವಣಿಯನ್ನು ಹಿಂಪಡೆಯಲೂಬಹುದು.

ಸ್ವಾತಂತ್ರ್ಯಪೂರ್ವದಲ್ಲಿ ಅನೇಕ ಬ್ಯಾಂಕಿಂಗ್ ಕಂಪೆನಿಗಳು ಮುಳುಗಡೆಯಾಗಿ ಠೇವಣಿ ಮರಳಿಸಲು ವಿಫಲವಾದ ಕಹಿ ಅನುಭವದ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು ಎಂಬುದೂ ಇಲ್ಲಿ ಪ್ರಸ್ತುತವಾಗುತ್ತದೆ. ಈ ಕಾಯ್ದೆಯ ಅತಿ ಗಹನವಾದ ಒಂದು ಉದ್ದೇಶವೂ ಉಲ್ಲೇಖಾರ್ಹ. ಬ್ಯಾಂಕುಗಳು ಹಣಕಾಸಿನ ವ್ಯವಹಾರದಲ್ಲಿ ತೊಡಗಿರುವ ಸಂಸ್ಥೆಗಳು. ಅವು ಗ್ರಾಹಕರ ವಿಶ್ವಾಸ ಮತ್ತು ನಂಬಿಕೆಯ ತಳಹದಿಯಲ್ಲಿ ವ್ಯವಹಾರವನ್ನು ನಡೆಸುತ್ತವೆ. ಈ ನಂಬಿಕೆ ಭದ್ರವಾಗಿರಬೇಕಿದ್ದರೆ ವ್ಯವಹಾರದ ನಿಯಮ ಮತ್ತು ನೀತಿಗೆ ಬದ್ಧತೆ ಬೇಕಾಗುತ್ತದೆ. ಮಾತ್ರವಲ್ಲ, ಆ ನಿಯಮಗಳೂ ಸ್ಥಿರವಾಗಿರಬೇಕು.

ಇನ್ನೂ ಒಂದು ಪ್ರಶ್ನೆ ಇಲ್ಲಿ ಏಳುತ್ತದೆ. ಸಾಮಾನ್ಯ ಗ್ರಾಹಕ ತನ್ನ ಉಳಿತಾಯವನ್ನು ಬ್ಯಾಂಕುಗಳಲ್ಲಿ ಯಾಕೆ ಠೇವಣಿಯ ರೂಪದಲ್ಲಿ ಇಟ್ಟಿರುತ್ತಾನೆ? ಅವನ ನಿರ್ಧಾರಕ್ಕೆ ಇರುವ ಅನೇಕ ಕಾರಣಗಳಲ್ಲಿ ಎರಡು ಇಲ್ಲಿ ಗಮನಾರ್ಹ. ಬ್ಯಾಂಕುಗಳು ಕಾನೂನಿನ ಚೌಕಟ್ಟಿನೊಳಗೆ ವ್ಯವಹಾರ ನಡೆಸುವುದರಿಂದ ಅವನ ಠೇವಣಿಗೆ ಭದ್ರತೆ ಇದೆ.

ಅಗತ್ಯ ಬಿದ್ದಾಗ ಅಡೆತಡೆ ಇಲ್ಲದೆ ಠೇವಣಿಯನ್ನು ಹಿಂಪಡೆಯುವ ಸೌಕರ್ಯ ಬ್ಯಾಂಕುಗಳಲ್ಲಿದೆ. ಬ್ಯಾಂಕುಗಳಲ್ಲಿ ಇಟ್ಟಿರುವ ಹಣ ಒಂದು ರೀತಿಯ ಆಪದ್ಧನದ ರೂಪವನ್ನೇ ಹೊಂದಿರುತ್ತದೆ ಎಂದರೂ ತಪ್ಪಲ್ಲ. ಈ ನಂಬಿಕೆಗಳಿಗೆ ಆಧಾರವೇ ಇದಕ್ಕೆ ಸಂಬಂಧಿಸಿದ ನೀತಿಗಳಲ್ಲಿರುವ ನಿಖರತೆ. ಈ ಎಲ್ಲಾ ಕಾರಣಗಳಿಂದಾಗಿ ಬ್ಯಾಂಕಿಂಗ್ ಉದ್ದಿಮೆಯ ಮೇಲೆ ಜನಸಾಮಾನ್ಯರಿಗೆ ಅತೀವ ನಂಬಿಕೆಯೂ ಇದೆ.

ನೋಟು ರದ್ದತಿ ಘೋಷಣೆ ನಂತರದ ಬೆಳವಣಿಗೆಗಳಿಂದಾಗಿ ಬ್ಯಾಂಕುಗಳಲ್ಲಿ ಇಡುವ ಠೇವಣಿಯ ಬಗ್ಗೆ ಬ್ಯಾಂಕಿನ ಗ್ರಾಹಕನಾಗಿ ಕೆಲವು ಮೂಲಭೂತ ಪ್ರಶ್ನೆಗಳು ನನ್ನಲ್ಲಿ ಹುಟ್ಟುತ್ತವೆ.

ಬ್ಯಾಂಕಿನಲ್ಲಿ ನಾನು ಉಳಿತಾಯ ಮಾಡಿದ ಹಣ ನನಗೆ ಬೇಕಾದಾಗ ಸಿಗುವುದೇ? ನನ್ನ ಖಾತೆಯಿಂದ ನನ್ನದೇ ಉಳಿತಾಯದ ಹಣವನ್ನು ಹಿಂಪಡೆಯಲು ಖಾತೆ ತೆರೆಯುವಾಗ ಇಲ್ಲದ ನಿರ್ಬಂಧಗಳನ್ನು ಸರ್ಕಾರವಾಗಲಿ, ಭಾರತೀಯ ರಿಸರ್ವ್ ಬ್ಯಾಂಕ್ ಆಗಲಿ ಅಥವಾ ನನ್ನ ಖಾತೆ ಹೊಂದಿರುವ ಬ್ಯಾಂಕ್ ಆಗಲಿ ಈಗ ಹೇರುವುದು ಎಷ್ಟು ಕಾನೂನುಬದ್ಧ? ಅದು ರಾಷ್ಟ್ರದ ಹಿತಕ್ಕೋಸ್ಕರವೆಂಬ ವಾದವನ್ನು ಒಪ್ಪಿಕೊಂಡರೆ, ನಾನು ದುಡಿದು ಸಂಪಾದಿಸಿ ಉಳಿಸಿದ ದುಡ್ಡು ನನ್ನ ಆಪತ್ತಿನ ಸಂದರ್ಭದಲ್ಲಿ ನನಗೆ ದೊರಕಬೇಡವೇ?

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ  ತಿದ್ದುಪಡಿ ಮಾಡದೆ ಹಾಗೂ ಸಂಸತ್ತಿನ ಅನುಮತಿಯಿಲ್ಲದೆ ಗ್ರಾಹಕ ಮತ್ತು ಬ್ಯಾಂಕಿನ ಕೊಡು–ಪಡೆಯುವ ಸಂಬಂಧದ ಮೇಲೆ ಹೊಸ ನಿರ್ಬಂಧಗಳನ್ನು ಹೇರುವುದು ಕಾನೂನುಬದ್ಧವೇ? ಒಂದು ವೇಳೆ ಈ ಹೊಸ ನಿರ್ಬಂಧಗಳು ಕಾನೂನಿನ ಚೌಕಟ್ಟಿನೊಳಗೆ ಇವೆ ಎಂದಾದರೆ, ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಖಾತೆ ತೆರೆಯಲು ಅಥವಾ ಇರುವ ಖಾತೆಯನ್ನು ಮುಂದುವರಿಸುವ ವಿಚಾರದಲ್ಲಿ  ಶಂಕೆಗಳು ಏಳುತ್ತವೆ. ಈ ಶಂಕೆಗಳಿಂದಾಗಿ ಬ್ಯಾಂಕಿಂಗ್ ಸಂಸ್ಥೆಗಳ ಮೇಲಿನ ವಿಶ್ವಾಸಕ್ಕೆ ಬಲವಾದ ಹೊಡೆತ ಬೀಳುತ್ತದೆ.

ಕಾನೂನು ರೀತಿ ಭಾರತೀಯ ರಿಸರ್ವ್ ಬ್ಯಾಂಕು ಕಾಲಕಾಲಕ್ಕೆ ಬ್ಯಾಂಕುಗಳ ವ್ಯವಹಾರ ಕುರಿತಂತೆ ನೀತಿಯನ್ನು ರೂಪಿಸುವ ಅಧಿಕಾರವನ್ನು ಹೊಂದಿದೆ. ವಿಶೇಷ ಸಂದರ್ಭಗಳಲ್ಲಿ, ಉದಾಹರಣೆಗೆ ಬ್ಯಾಂಕೊಂದು ದಿವಾಳಿಯ ಅಂಚಿಗೆ ಬಂದಾಗ, ಠೇವಣಿಯ ಮರುಪಾವತಿಯ ಮೇಲೆ ಮಿತಿಯನ್ನು ಹೇರಬಹುದು. ಸಾಮಾನ್ಯ ಸಂದರ್ಭಗಳಲ್ಲಿ ತಮ್ಮ ಖಾತೆಗಳಿಂದ ಹಣ ವಾಪಸ್‌ ಪಡೆಯುವುದರ ಮೇಲೆ ನಿರ್ಬಂಧ ಹೇರುವಂತಿಲ್ಲ.

ದಿನಕ್ಕೊಂದರಂತೆ ಸರ್ಕಾರದಿಂದ ಬರುತ್ತಿರುವ ಹೊಸ ನಿಬಂಧನೆಗಳ ಹೊರತಾಗಿಯೂ, ರಿಸರ್ವ್ ಬ್ಯಾಂಕಿನಿಂದ ಸಾಕಷ್ಟು ಪ್ರಮಾಣದಲ್ಲಿ ಪರ್ಯಾಯ ನೋಟುಗಳ ಪೂರೈಕೆಯಾಗದಿದ್ದರೂ, ಲಕ್ಷಗಟ್ಟಲೆ ಎಟಿಎಂಗಳಲ್ಲಿ ದುಡ್ಡಿಲ್ಲದಿದ್ದಾಗಲೂ, ತಾಳ್ಮೆಯಿಂದ ಉಳಿದೆಲ್ಲ ಕೆಲಸವನ್ನು ಬದಿಗಿರಿಸಿ ಗ್ರಾಹಕರ ಕನಿಷ್ಠ ಬೇಡಿಕೆಗಳಿಗೆ ತಮ್ಮ ಕೈಲಾದಷ್ಟು ಮಟ್ಟಿಗೆ ಬ್ಯಾಂಕ್‌ ಸಿಬ್ಬಂದಿ ಸ್ಪಂದಿಸಿದ್ದಾರೆ. ಆದರೆ ಬ್ಯಾಂಕುಗಳ ಮೂಲ ಉದ್ದೇಶಕ್ಕೆ ಮತ್ತು ಪ್ರಚಲಿತ ಬ್ಯಾಂಕಿಂಗ್ ಕಾಯ್ದೆಗೆ ಧಕ್ಕೆಯಾಗುವಂತೆ ಹೊಸ ನಿರ್ಧಾರವನ್ನು ಸರ್ಕಾರವೇ ಕೈಗೊಂಡಾಗ ವ್ಯವಸ್ಥೆಯ ಮೇಲೆ ಇರುವ ನಂಬಿಕೆ ಕುಸಿಯುವ ಭೀತಿ ಉಂಟಾಗುತ್ತದೆ.

ಈ ಶತಮಾನದ ಆರಂಭದಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕು ಮುಳುಗಡೆಯ ಅಂಚಿನಲ್ಲಿದ್ದಾಗ  ಅದರ ಠೇವಣಿ ವಾಪಸಾತಿಯ ಮೇಲೆ ರಿಸರ್ವ್ ಬ್ಯಾಂಕು ನಿಯಂತ್ರಣ ಹೇರಿತ್ತು. ಅದರ ಉದ್ದೇಶ ಗ್ರಾಹಕರ ಉಳಿತಾಯದ ರಕ್ಷಣೆ ಮತ್ತು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕಾಪಾಡಿಕೊಳ್ಳುವುದಾಗಿತ್ತು.

ನೋಟು ರದ್ದತಿ ಬಗ್ಗೆ ಪರ, ವಿರುದ್ಧದ ಅಭಿಪ್ರಾಯಗಳು ಸಾಕಷ್ಟು ಬಂದಿವೆ. ಅದರ ಉದ್ದೇಶ ಮತ್ತು ಗುರಿ ಏನೇ ಆಗಿರಲಿ, ಸರ್ಕಾರದ ನಿರ್ಧಾರದ ಬೆನ್ನಲ್ಲೇ ಬ್ಯಾಂಕಿನಲ್ಲಿಟ್ಟ ಠೇವಣಿಗಳನ್ನು ಬೇಕಾದಾಗ ಬೇಕಾದಷ್ಟನ್ನು ಮರಳಿಸಲು ನಿರ್ಬಂಧ ಹೇರಿದರೆ, ಅದರಿಂದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೆ ಕೊಡಲಿಯೇಟು ಹಾಕಿದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT