ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಗಳ ಆರ್ಭಟದಲ್ಲಿ ಕರ್ತವ್ಯ ಮರೆತೆವೇ?

ನಮ್ಮ ಸಮಾಜವನ್ನು ಹಕ್ಕಿನಿಂದ ಕರ್ತವ್ಯದೆಡೆಗೆ ಕೊಂಡೊಯ್ಯಬೇಕಾದ ಅನಿವಾರ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ
Last Updated 7 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮಾನವ ಹಕ್ಕುಗಳು ಪ್ರತಿ ಮನುಷ್ಯ ಜನ್ಮತಃ ಪಡೆದಿರುವ ಹಕ್ಕುಗಳಾಗಿದ್ದು, ಇವನ್ನು ರಕ್ಷಿಸುವ, ಇವುಗಳ ಉಲ್ಲಂಘನೆಯನ್ನು ತಡೆಯುವ ಮಹತ್ತರವಾದ ಜವಾಬ್ದಾರಿಯನ್ನು ಪ್ರಭುತ್ವಗಳು (ಸರ್ಕಾರಗಳು) ಹೊಂದಿವೆ. ‘ಕಲ್ಯಾಣ ರಾಜ್ಯ’ ಎಂದು ಕರೆಯಲಾಗುವ ಪ್ರಭುತ್ವಗಳು ಪ್ರಜೆಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಲೋಪ ಎಸಗಿದರೆ ಅದನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

ಇದನ್ನು ತಡೆಯಲು ಮಾನವ ಹಕ್ಕುಗಳ ಆಯೋಗ, ನ್ಯಾಯಾಲಯ ಅಲ್ಲದೆ ಹಲವು ಪ್ರಾಧಿಕಾರಗಳಿದ್ದು, ಅಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು. ಬಹುತೇಕ ಮಾನವ ಹಕ್ಕುಗಳು ಭಾರತದ ಸಂವಿಧಾನದಲ್ಲಿನ ಮೂರನೇ ಅಧ್ಯಾಯದಲ್ಲಿ ನಮೂದಿತವಾಗಿರುವ ಮೂಲಭೂತ ಹಕ್ಕುಗಳಲ್ಲೇ ಒಳಗೊಂಡಿವೆ. ನ್ಯಾಯಾಲಯಗಳು ಸಹ ಬಹುತೇಕ ಮಾನವ ಹಕ್ಕುಗಳನ್ನು ಮೂಲಭೂತ ಹಕ್ಕುಗಳ ಪರಿಧಿಯಲ್ಲಿ ತಂದು, ಅವುಗಳ ರಕ್ಷಣೆಯಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸಿವೆ.

ಪ್ರತಿ ವರ್ಷವೂ ಡಿಸೆಂಬರ್ 10ನ್ನು ‘ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ, 1948ರ ಈ ದಿನ, ವಿಶ್ವದ 48 ರಾಷ್ಟ್ರಗಳ ಸಹಕಾರದಿಂದ ವಿಶ್ವಸಂಸ್ಥೆಯು ಈ ಹಕ್ಕುಗಳನ್ನು ಅಂಗೀಕರಿಸಿತು. ಮೂಲಭೂತವಾಗಿ ಮನುಷ್ಯನಿಗೆ ಬದುಕಲು ಅನಿವಾರ್ಯವಾದ ಎಲ್ಲ ಹಕ್ಕುಗಳೂ ಇದರಲ್ಲಿ ಸೇರಿರುವುದು ವಿಶೇಷ.

ಈ ಹಕ್ಕುಗಳನ್ನು ‘ಉಲ್ಲಂಘಿಸ ಲಾರದಂತಹ ಹಕ್ಕು’ಗಳೆಂದೂ ಕರೆಯಲಾಗುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರಗಳು ಬಹುತೇಕ ಈ ಎಲ್ಲ ಮಾನವ ಹಕ್ಕುಗಳನ್ನು ತನ್ನ ಪ್ರಜೆಗಳು ಅನುಭವಿಸಲು ಅನುವು ಮಾಡಿಕೊಟ್ಟಿದ್ದರೂ, ಕಮ್ಯುನಿಸ್ಟ್, ರಾಜಶಾಹಿ ಹಾಗೂ ಇನ್ನಿತರ ಪ್ರಭುತ್ವಗಳು ಈ ಹಕ್ಕುಗಳನ್ನು ಜಾರಿಗೆ ತರುವಲ್ಲಿ ಇನ್ನೂ ಹಿಂದೆ ಬಿದ್ದಿರುವುದು ದುರದೃಷ್ಟಕರ.

ಈ ಮಾನವ ಹಕ್ಕುಗಳ ಘೋಷಣೆ ಕೇವಲ ಹಕ್ಕುಗಳ ಪಟ್ಟಿಯಾಗಿದ್ದು, ಇವನ್ನು ಉಲ್ಲಂಘಿಸದಂತೆ ರಾಷ್ಟ್ರಗಳನ್ನು ನಿರ್ಬಂಧಿಸುವ ಕಾನೂನಿನ ಶಕ್ತಿಯನ್ನು ಪಡೆದಿಲ್ಲ. ಏಕೆಂದರೆ, ಇದು ಯಾವುದೇ ಒಪ್ಪಂದ ಅಥವಾ ಒಡಂಬಡಿಕೆ ಅಲ್ಲ. ಆದರೂ, ಕೆಲವು ಅಂತರರಾಷ್ಟ್ರೀಯ ಕಾನೂನು ತಜ್ಞರ ಪ್ರಕಾರ, ಈ ಘೋಷಣೆಯು ಆರು  ದಶಕಗಳ ಕಾಲದಿಂದ ಜಾರಿಯಲ್ಲಿರುವ ಕಾರಣ ‘ಸಾಂಪ್ರದಾಯಿಕ ಕಾನೂನಿನ’ ಮಾನ್ಯತೆ ಪಡೆದಿದ್ದು, ಇವನ್ನು ಉಲ್ಲಂಘಿಸದಿರುವ ಹೊಣೆಗಾರಿಕೆ ರಾಷ್ಟ್ರಗಳ ಮೇಲಿದೆ.

ನಮ್ಮ ಸುತ್ತಮುತ್ತ ಗಮನಿಸಿದರೆ, ಮಾನವ ಹಕ್ಕುಗಳ ಕುರಿತಾದ ಚರ್ಚೆ ಮತ್ತು ಜಾಗೃತಿ ಇಂದಿನ ಯುಗದಲ್ಲಿ ತುಸು ಅತಿ ಎನಿಸುವಷ್ಟೇ ಆಗುತ್ತಿದೆ. ನಮ್ಮ ದೇಶದ ಪರಿಸ್ಥಿತಿ ಹೇಗಿದೆಯೆಂದರೆ, ನಾವೆಲ್ಲರೂ ನಮ್ಮ ಹಕ್ಕುಗಳ ಬಗೆಗೆ ಅಪಾರ ಕಾಳಜಿ ಹೊಂದಿದ ನಾಗರಿಕರು; ಆದರೆ ಕರ್ತವ್ಯವನ್ನು ಮರೆತ ಹೊಣೆಗೇಡಿಗಳು! ಹಕ್ಕಿನ ಉಲ್ಲಂಘನೆ ಕುರಿತಾದ ವರದಿಗಳನ್ನು ನಿತ್ಯವೂ ಓದುತ್ತಾ, ಕೇಳುತ್ತಾ, ಗಮನಿಸುತ್ತಿರುತ್ತೇವೆ; ದುರದೃಷ್ಟವಶಾತ್, ಕರ್ತವ್ಯದೆಡೆ ಚಿತ್ತ ಹರಿಸುವುದರಲ್ಲಿ ನಮಗೆ ಅಷ್ಟೊಂದು ಅಭಿರುಚಿ ಇಲ್ಲ.

ಕರ್ತವ್ಯಕ್ಕೆ ಸಮಾನಾರ್ಥಕ ಪದ ‘ಜವಾಬ್ದಾರಿ’ ಅಥವಾ ‘ಹೊಣೆಗಾರಿಕೆ’. ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಬ್ಬರ ಹಕ್ಕು ಇನ್ನೊಬ್ಬರ ಕರ್ತವ್ಯವಾಗಿರಬಹುದು. ಉದಾಹರಣೆಗೆ ಒಬ್ಬನಿಗೆ ಬದುಕುವ ಹಕ್ಕಿದ್ದರೆ, ಬೇರೆ ಎಲ್ಲರೂ ಆತನ ಹಕ್ಕಿಗೆ ಚ್ಯುತಿ ತರದೇ ಇರುವ ಕರ್ತವ್ಯವನ್ನು ಹೊಂದಿರುತ್ತಾರೆ.

ಒಬ್ಬನಿಗೆ ಒಂದು ಮನೆಯಲ್ಲಿ ವಾಸಿಸುವ ಹಕ್ಕಿದ್ದರೆ, ಉಳಿದ ಎಲ್ಲರೂ ಆತನ ವಾಸಕ್ಕೆ ಅಡ್ಡಿಪಡಿಸದೇ ಇರುವ ಕರ್ತವ್ಯವನ್ನು ಹೊಂದಿರುತ್ತಾರೆ. ಹೀಗೆ ನಮಗರಿಯದೆ ನಾವೆಲ್ಲರೂ ಕರ್ತವ್ಯದ ಹೊರೆಯನ್ನು ಹೊತ್ತಿದ್ದೇವೆ.

ಪ್ರತಿಯೊಬ್ಬರೂ ಹಕ್ಕಿನ ಜೊತೆಗೇ ಅದಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನೂ ಹೊಂದಿರುತ್ತಾರೆ. ಉದಾಹರಣೆಗೆ, ನಮಗೆ ರಸ್ತೆಯ ಮೇಲೆ ವಾಹನ ಚಲಾಯಿಸುವ ‘ಹಕ್ಕು’ ಹೇಗೆ ಇದೆಯೋ, ಅದೇ ಸಮಯದಲ್ಲಿ ರಸ್ತೆಯ ನಿಯಮಗಳನ್ನು ಪಾಲಿಸುವ ‘ಕರ್ತವ್ಯ’ವೂ ಇದೆ. ತಂದೆ ತಾಯಿಯರಿಂದ ಪೋಷಣೆ, ಪಾಲನೆಗೆ ಒಳಗಾಗುವ ‘ಹಕ್ಕು’ ಮಕ್ಕಳಿಗೆ ಇರುವಂತೆ, ತಂದೆ, ತಾಯಿಯನ್ನು ನೋಡಿಕೊಳ್ಳಬೇಕಾದ ‘ಕರ್ತವ್ಯ’ವೂ ಅವರಿಗೆ ಇದೆ.

ಇತ್ತೀಚೆಗೆ ನಮ್ಮಲ್ಲಿ ಬಹುತೇಕರು ಕರ್ತವ್ಯವನ್ನು ಮರೆತು, ಕೇವಲ ಹಕ್ಕುಗಳಿಗಾಗಿ ಮೊರೆಹೋಗುತ್ತಿರುವುದನ್ನು ಕಾಣುತ್ತೇವೆ. ಏಕೆ ಹೀಗೆ? ಒಬ್ಬ ನೌಕರ ತನಗೆ ತಕ್ಕ ವೇತನ, ಸಾರಿಗೆ ಸಿಕ್ಕಿಲ್ಲವೆಂದು, ತನ್ನ ಹಕ್ಕು ಉಲ್ಲಂಘನೆಯಾಗಿದೆಯೆಂದು ತನ್ನ ಹಕ್ಕುಗಳಿಗೆ ಬೇಡಿಕೆ ಸಲ್ಲಿಸುವುದನ್ನು ಕಾಣುತ್ತೇವೆ. ಆದರೆ ಆತನಿಗೆ ಪ್ರಾಮಾಣಿಕವಾಗಿ, ಸರಿಯಾಗಿ ಕೆಲಸ ಮಾಡಬೇಕಾದ ತನ್ನ ಕರ್ತವ್ಯವನ್ನು ನಿಭಾಯಿಸಬೇಕೆಂದು ಅನ್ನಿಸುವುದಿಲ್ಲ.

ಹಾಗೆಯೇ, ಸರ್ಕಾರ ಹಲವಾರು ಸಹಾಯಗಳನ್ನು (ಉದಾ: ರಸ್ತೆ, ಶಾಲೆ, ನೀರು ಇತ್ಯಾದಿ) ಮಾಡಬೇಕೆಂದು, ಅದು ನಮ್ಮ ಹಕ್ಕೆಂದು ಭಾವಿಸುತ್ತೇವೆ. ಆದರೆ, ನಮ್ಮ ಕರ್ತವ್ಯಗಳಾದ– ತೆರಿಗೆ ಕಟ್ಟುವುದು, ಸರ್ಕಾರಿ ಆಸ್ತಿಪಾಸ್ತಿಗೆ ನಷ್ಟ ಉಂಟುಮಾಡದೇ ಇರುವುದು, ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ನಿಯಮಗಳನ್ನು ಸ್ವಇಚ್ಛೆಯಿಂದ ಪಾಲಿಸುವುದು, ನೆರೆಹೊರೆಯವರಿಗೆ ತೊಂದರೆ ಕೊಡದೆ ಇರುವುದು, ಪರಿಸರ ಮಾಲಿನ್ಯ ಉಂಟುಮಾಡದೆ ಇರುವುದು ಇತ್ಯಾದಿ ಅನೇಕ ಕರ್ತವ್ಯಗಳ ಪಾಲನೆಯನ್ನು ಕಡೆಗಣಿಸಿದ್ದೇವೆ.

ಮಹಾತ್ಮ ಗಾಂಧಿ ಕರ್ತವ್ಯಗಳ ಪ್ರಬಲ ಪ್ರತಿಪಾದಕರಾಗಿದ್ದರು. ‘ಹಕ್ಕನ್ನು ಚಲಾಯಿಸುವ ಮೊದಲು ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು’ ಎಂದು ಅವರು ಹೇಳಿದ್ದಾರೆ. ಎಲ್ಲ ಮಹಾನ್ ವ್ಯಕ್ತಿಗಳೂ ತಮ್ಮ ಕರ್ತವ್ಯಗಳ ಬಗ್ಗೆ ಜಾಗರೂಕರಾಗಿದ್ದು, ಕರ್ತವ್ಯಪಾಲನೆಯಿಂದಲೇ ಉನ್ನತ ಸ್ಥಾನವನ್ನು ತಲುಪಿರುತ್ತಾರೆ. ಕರ್ತವ್ಯಗಳನ್ನು ವಿಶಾಲವಾದ ಅರ್ಥದಲ್ಲಿ ಎರಡು ವಿಧಗಳಾಗಿ ವಿಂಗಡಿಸಬಹುದು.

ಅವು, ನೈತಿಕ ಕರ್ತವ್ಯಗಳು ಹಾಗೂ ಶಾಸನಾತ್ಮಕ (legal) ಕರ್ತವ್ಯಗಳು. ಬಡವರಿಗೆ ಸಹಾಯ ಮಾಡುವುದು, ಗುರು-ಹಿರಿಯರಿಗೆ ಗೌರವ ತೋರಿಸುವುದು, ತಂದೆ ತಾಯಿಯ ಇಚ್ಛೆಯನ್ನು ಪಾಲಿಸುವುದು ಇತ್ಯಾದಿಗಳು ನೈತಿಕ ಕರ್ತವ್ಯಗಳು. ನೈತಿಕ ಕರ್ತವ್ಯಗಳನ್ನು ಪಾಲಿಸದೇ ಇದ್ದಲ್ಲಿ ಯಾವುದೇ ಶಿಕ್ಷೆ ಇಲ್ಲ; ಅದೇ ಶಾಸನಾತ್ಮಕ ಕರ್ತವ್ಯಗಳನ್ನು ಪಾಲಿಸದೇ ಇದ್ದರೆ ಅದು ಕಾನೂನುಗಳ ಉಲ್ಲಂಘನೆ ಎನಿಸಿಕೊಳ್ಳುತ್ತದೆ.

ಉದಾಹರಣೆಗೆ, ಎಡ ಭಾಗದಲ್ಲೇ ವಾಹನ ಚಲಾಯಿಸುವುದು, ಲಂಚ ಸ್ವೀಕರಿಸದೆ ಇರುವುದು, ನ್ಯಾಯಾಲಯದ ಆದೇಶವನ್ನು ಪಾಲಿಸುವುದು ಇತ್ಯಾದಿ. ಇವುಗಳ ಉಲ್ಲಂಘನೆಗೆ ಶಿಕ್ಷೆಯೂ ಇದೆ. ನಮ್ಮಲ್ಲಿರುವ ಹಲವು ಕಾನೂನುಗಳು ಕರ್ತವ್ಯಗಳ ಕ್ರೋಡೀಕರಣವೇ ಅಂದರೆ ತಪ್ಪಿಲ್ಲ. ಉದಾಹರಣೆಗೆ, ಬೇರೆಯವರಿಗೆ ಹಿಂಸೆ, ತೊಂದರೆ ಮಾಡಬಾರದೆಂಬ ಕರ್ತವ್ಯವನ್ನು ನಾವು ಉಲ್ಲಂಘಿಸಿದರೆ, ಅದಕ್ಕೆ ತಕ್ಕ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ.

ಹಾಗೆಯೇ, ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೊಡುವ ಕರ್ತವ್ಯವನ್ನು ಪಾಲಿಸದೇ ಇದ್ದರೆ, ವೈವಾಹಿಕ ಜೀವನದ ಕರ್ತವ್ಯಗಳನ್ನು ಪಾಲಿಸದೇ ಇದ್ದರೆ ನ್ಯಾಯಾಲಯದ ಮೂಲಕ ಕರ್ತವ್ಯವನ್ನು ಪಾಲಿಸುವಂತೆ ಒತ್ತಡ ಹೇರಬಹುದು.

ಎಲ್ಲಕ್ಕಿಂತ ಮುಖ್ಯವಾಗಿ, ಭಾರತದ ಸಂವಿಧಾನ ತನ್ನ ನಾಗರಿಕರು ಪಾಲಿಸಬೇಕಾದ 11 ಕರ್ತವ್ಯಗಳನ್ನು ಪಟ್ಟಿ ಮಾಡಿದೆ. ವಿಧಿ 51ಎ ಪ್ರಕಾರ, ಪ್ರತಿ ನಾಗರಿಕನೂ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಒಳಗೊಂಡಂತೆ ಸಂವಿಧಾನದ ಆದರ್ಶ ಮತ್ತು ಸಂಸ್ಥೆಗಳನ್ನು ಗೌರವಿಸುವ ಕರ್ತವ್ಯ; ನಮ್ಮ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿದ ಶ್ರೇಷ್ಠ ಆದರ್ಶಗಳನ್ನು ನೆನಪಿರಿಸಿಕೊಳ್ಳುವ ಹಾಗೂ ಅನುಸರಿಸುವ ಕರ್ತವ್ಯ;

ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವ ಕರ್ತವ್ಯ; ದೇಶದ ರಕ್ಷಣೆಗೆ ಸದಾ ಸಿದ್ಧವಾಗಿರುವಿಕೆ; ವಿವಿಧ ಧರ್ಮಗಳಿಗೆ ಸೇರಿದ, ವಿವಿಧ ಭಾಷೆಗಳನ್ನು ಮಾತನಾಡುವ ಜನರಲ್ಲಿ ಸೌಹಾರ್ದ ಮತ್ತು ಭ್ರಾತೃತ್ವವನ್ನು ವೃದ್ಧಿಸುವುದು; ಸ್ತ್ರೀಯರ ಗೌರವಕ್ಕೆ ಚ್ಯುತಿಯುಂಟುಮಾಡುವ ಪದ್ಧತಿಗಳನ್ನು ತ್ಯಜಿಸುವುದು; ನಮ್ಮ ಭವ್ಯ, ವೈವಿಧ್ಯಮಯ ಸಂಸ್ಕೃತಿಯ ಬಗ್ಗೆ ಹೆಮ್ಮೆಪಟ್ಟು ರಕ್ಷಿಸುವುದು;

ಕಾಡು, ವನ್ಯಜೀವಿಗಳನ್ನು ಒಳಗೊಂಡ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಮತ್ತು ವೃದ್ಧಿಸುವುದು, ಜೀವಿಗಳ ಬಗ್ಗೆ ದಯೆ ತೋರುವುದು; ವೈಜ್ಞಾನಿಕ ಮನೋಭಾವ, ಮಾನವೀಯತೆ, ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಹಾಗೂ ಸುಧಾರಣೆಗೆ ಪ್ರಯತ್ನಿಸುವುದು; ಸಾರ್ವಜನಿಕ ಆಸ್ತಿಪಾಸ್ತಿಯನ್ನು ರಕ್ಷಿಸುವುದು ಹಾಗೂ ಹಿಂಸೆಯನ್ನು ತ್ಯಜಿಸುವುದು; ವ್ಯಕ್ತಿಯ ಸರ್ವಾಂಗೀಣ ಉನ್ನತೀಕರಣಕ್ಕೆ ಪ್ರಯತ್ನಿಸುವ ಮೂಲಕ ರಾಷ್ಟ್ರವು ಉನ್ನತಿಯೆಡೆಗೆ ಸಾಗುವಂತೆ ಮಾಡುವುದು; ಪ್ರತಿ ಪೋಷಕರೂ ಆರರಿಂದ ಹದಿನಾಲ್ಕನೇ ವಯಸ್ಸಿನ ತಮ್ಮ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶವನ್ನು ಒದಗಿಸುವುದು.

ಭಾರತದ ಸಂವಿಧಾನದಲ್ಲಿ ನಮೂದಾಗಿರುವ ಕರ್ತವ್ಯಗಳು ಕೇವಲ ನಿರ್ದೇಶಕಗಳಾಗಿದ್ದು, ಇವುಗಳ ಉಲ್ಲಂಘನೆಗಾಗಿ ಶಿಕ್ಷೆಯನ್ನು ನಿಗದಿಗೊಳಿಸಿಲ್ಲ. ಆದರೆ, ಹಲವು ಕಾನೂನುಗಳನ್ನು ಜಾರಿಗೆ ತಂದು, ಆ ಮೂಲಕ ಬಹುತೇಕ ಕರ್ತವ್ಯಗಳನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ.

ಭಾರತದ ಸಂವಿಧಾನದಲ್ಲಿ ಹೇಳಿರುವ ಕರ್ತವ್ಯಗಳು ಬೆರಳೆಣಿಕೆಯಷ್ಟೇ ಇದ್ದು ಇದರಲ್ಲಿ ಇನ್ನೂ ಹಲವು ಮಹತ್ವದ ಕರ್ತವ್ಯಗಳನ್ನು ಸೇರಿಸಬೇಕೆಂಬ ಬೇಡಿಕೆ ವ್ಯಕ್ತವಾಗುತ್ತಿದೆ. ಉದಾಹರಣೆಗೆ, ಮತದಾನ, ತೆರಿಗೆ ಪಾವತಿಸುವುದು, ಅಪಘಾತದಲ್ಲಿ  ತೊಂದರೆಗೊಳಗಾದ ವ್ಯಕ್ತಿಗಳಿಗೆ ನೆರವು ನೀಡುವುದು, ತಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು, ಬೇರೊಬ್ಬರ ಒಳಿತಿಗಾಗಿ ಕೆಲಸ ಮಾಡುವವರನ್ನು ರಕ್ಷಿಸುವುದು ಇತ್ಯಾದಿ ಸೇರಿವೆ.

ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭಕ್ಕೆ ಮುನ್ನ ರಾಷ್ಟ್ರಗೀತೆ ಹಾಡಬೇಕೆಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನಿರ್ದೇಶನ ನೀಡಿರುವುದು ನಮ್ಮ ಮೂಲಭೂತ ಕರ್ತವ್ಯವನ್ನು ಪಾಲಿಸುವ ಸಲುವಾಗಿ. ಈ ಮೂಲಕ ದೇಶಪ್ರೇಮವನ್ನು ಉದ್ದೀಪನಗೊಳಿಸಿ, ರಾಷ್ಟ್ರೀಯ ಏಕತೆಯನ್ನು ಮೂಡಿಸುವ ಪ್ರಯತ್ನ ಮಾಡಲಾಗಿದೆ. ಹಾಗೆಯೇ, ಕರ್ನಾಟಕ ಹೈಕೋರ್ಟ್‌ ಇತ್ತೀಚಿನ ಒಂದು ಪ್ರಕರಣದಲ್ಲಿ, ನಾಗರಿಕರು ತಮ್ಮ ಕರ್ತವ್ಯಗಳಿಂದ ವಿಮುಖರಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನಾಗರಿಕರ ಮೂಲಭೂತ ಕರ್ತವ್ಯಗಳನ್ನು ಪ್ರಚುರಪಡಿಸಲು ತೆಗೆದುಕೊಂಡ ಕ್ರಮಗಳನ್ನು ತಿಳಿಸುವಂತೆ ಸರ್ಕಾರಕ್ಕೆ ಅದೇಶಿಸಿದೆ.

ಆದರೆ, ಕರ್ತವ್ಯಗಳನ್ನು ಪಟ್ಟಿ ಮಾಡುವುದು ಹಾಗೂ ಅವನ್ನು ಪಾಲಿಸುವಂತೆ ಜನರಿಗೆ ಬೋಧಿಸುವುದು ಸುಲಭವಲ್ಲ. ಏಕೆಂದರೆ, ಕರ್ತವ್ಯಗಳು ಅಗಣಿತವಾಗಿವೆ. ನಮ್ಮ ಸಮಾಜವನ್ನು ಹಕ್ಕಿನಿಂದ ಕರ್ತವ್ಯದೆಡೆಗೆ ಕೊಂಡೊಯ್ಯಬೇಕಾದ ತುರ್ತು ಅನಿವಾರ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಪ್ರತಿಯೊಬ್ಬರೂ ತಾವು ಕರ್ತವ್ಯ ಪರಿಪಾಲಕರೆ೦ಬುದನ್ನು ಅರಿತು, ತಮ್ಮ ಕರ್ತವ್ಯಗಳನ್ನು ತಮ್ಮಷ್ಟಕ್ಕೇ ಪಾಲಿಸಿದಲ್ಲಿ ಭುವಿ ಸ್ವರ್ಗವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ!

ಇದಕ್ಕೆ ನಾವೆಲ್ಲರೂ ಮಾಡಬೇಕಾದದ್ದು ಇಷ್ಟೆ; ಯಾವಾಗ ಹಕ್ಕುಗಳ ಯೋಚನೆ ಬರುವುದೋ ಆಗ, ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆಯೇ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ಕರ್ತವ್ಯಗಳಿಲ್ಲದೆ ಹಕ್ಕುಗಳಿಲ್ಲ; ಕರ್ತವ್ಯವನ್ನರಿತ ಸಮಾಜ ಸುಖೀ- ಸಭ್ಯ ಸಮಾಜ. ಅಲ್ಲಿ ಯಾವುದೇ ಸಂಘರ್ಷ, ಭೇದ ಭಾವಗಳಿಲ್ಲ.

ಬದಲಿಗೆ, ಪರಸ್ಪರ ಪ್ರೀತಿ– ವಿಶ್ವಾಸಗಳಿರುತ್ತವೆ. ಸಮಾಜ, ದೇಶಗಳು ಮುಂದುವರಿಯಲು ಸಹ   ಇದರಿಂದ ಸಾಧ್ಯ. ಹಾಗಾಗಿ, ನಾವೆಲ್ಲರೂ ಹಕ್ಕಿಗಾಗಿನ ಹೋರಾಟದ ಜೊತೆ ಜೊತೆಗೇ, ನಮ್ಮ ಕರ್ತವ್ಯಗಳನ್ನು ಸಹ ನಿರ್ವಹಿಸಲು ಹೆಚ್ಚು ಒತ್ತು ನೀಡಬೇಕಾಗಿದೆ. ಲೇಖಕ ವಿದೇಶಾಂಗ ಇಲಾಖೆಯಲ್ಲಿ ಕಾನೂನು ಅಧಿಕಾರಿ ಲೇಖನದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ವೈಯಕ್ತಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT