ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಜಾರಿಗೆ ಅಡಚಣೆ ಸೌಹಾರ್ದ ಪರಿಹಾರ ಅಗತ್ಯ

Last Updated 7 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕಳೆದ ವಾರಾಂತ್ಯದಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 5ನೇ ಸಭೆಯು ಕೆಲವು ಮಹತ್ವದ ನಿರ್ಧಾರಗಳಿಗೆ ಬರಲು ವಿಫಲವಾಗಿದೆ. ಹೀಗಾಗಿ 2017–18ರ ಹಣಕಾಸು ವರ್ಷದ ಆರಂಭದಿಂದಲೇ  ಮಹತ್ವಾಕಾಂಕ್ಷೆಯ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬರುವುದರ ಬಗ್ಗೆ ಮತ್ತೆ ಅನುಮಾನ ಉಂಟಾಗಿದೆ.   

ಒಂದು ತಿಂಗಳಲ್ಲಿ ಮೂರನೇ ಬಾರಿ ವಿಫಲವಾಗಿರುವ ಸಭೆ ಇದು. ಹೀಗಾಗಿ ಹೊಸ ಪರೋಕ್ಷ ತೆರಿಗೆ ವ್ಯವಸ್ಥೆ ಜಾರಿಗೆ ಎದುರಾಗಿರುವ ಅಡಚಣೆಗಳ  ತೀವ್ರತೆಗೂ ಇದು ನಿದರ್ಶನ. ತೆರಿಗೆದಾರರ ಮೌಲ್ಯಮಾಪನ ಮಾಡುವ ಅಧಿಕಾರ ಮತ್ತು ಉಭಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಮತಕ್ಕೆ ಬರಲು ಸಾಧ್ಯವಾಗದಿರುವುದು ನಿರಾಶಾದಾಯಕ ವಿದ್ಯಮಾನವಾಗಿದೆ.

ವಾರ್ಷಿಕ ₹ 1.5 ಕೋಟಿಯಷ್ಟು ವಹಿವಾಟು ನಡೆಸುವ ವರ್ತಕರ ಮೇಲಿನ ಆಡಳಿತಾತ್ಮಕ ನಿಯಂತ್ರಣದ ಅಧಿಕಾರ ಸಂಪೂರ್ಣವಾಗಿ ತಮ್ಮಲ್ಲೇ ಇರಬೇಕು. ಈ ವಹಿವಾಟುದಾರರು ಯಾವುದೇ ಕಾರಣಕ್ಕೂ ಕೇಂದ್ರ ಮತ್ತು ರಾಜ್ಯಗಳ (ಉಭಯ) ನಿಯಂತ್ರಣಕ್ಕೆ  ಒಳಪಡಬಾರದು  ಎನ್ನುವುದು ರಾಜ್ಯಗಳ ಹಕ್ಕೊತ್ತಾಯವಾಗಿದೆ. 

ಇದರಲ್ಲಿ ಬಡವರ ಹಿತರಕ್ಷಣೆಯೂ ಒಳಗೊಂಡಿರುವುದರಿಂದ ಯಾವುದೇ ಕಾರಣಕ್ಕೂ ಈ ನಿಯಂತ್ರಣವು ತಮ್ಮ ಕೈಜಾರಲು ಬಿಡುವುದಿಲ್ಲ ಎಂದೂ ರಾಜ್ಯಗಳು ಪಟ್ಟು ಹಿಡಿದಿವೆ.  ರಾಜ್ಯಗಳ ಅಹವಾಲನ್ನು ಕೇಳದ ಕೇಂದ್ರ ಸರ್ಕಾರ, ಈ ತೆರಿಗೆಯಲ್ಲಿ ತನಗೂ ಪಾಲು ಇರಬೇಕು, ತನ್ನ ನಿಯಂತ್ರಣವೂ ಇರಬೇಕು ಎಂದು ಪ್ರತಿಪಾದಿಸುತ್ತಿದೆ.

ಜಿಎಸ್‌ಟಿ ಅನುಷ್ಠಾನದಿಂದ ಆಗುವ ನಷ್ಟಕ್ಕೆ ನೀಡುವ ಪರಿಹಾರದ ಜತೆಗೆ, ನೋಟು ರದ್ದತಿಯಿಂದ ರಾಜ್ಯಗಳಿಗೆ ಆಗಬಹುದಾದ  ವರಮಾನ  ನಷ್ಟವನ್ನೂ ತುಂಬಿಕೊಡಬೇಕು ಎಂಬುದು ರಾಜ್ಯಗಳ ಹೊಸ ಒತ್ತಾಯವಾಗಿದೆ. ಹೀಗಾಗಿ   ಪರಿಹಾರ ನೀಡಿಕೆ ಕಾನೂನಿನ ಬಗ್ಗೆ  ಸಭೆಯಲ್ಲಿ ಚರ್ಚೆ ನಡೆಸಲೂ  ಸಾಧ್ಯವಾಗದಿರುವುದು ಇನ್ನೊಂದು ಹಿನ್ನಡೆಯಾಗಿದೆ.

ಕೇಂದ್ರ ಮತ್ತು ರಾಜ್ಯಗಳ ಅಸಹಕಾರದ ಕಾರಣಕ್ಕೆ ಸೆಪ್ಟೆಂಬರ್‌ 16ರ ಒಳಗೆ ಜಿಎಸ್‌ಟಿ ಜಾರಿಗೆ ಬರದಿದ್ದರೆ ದೇಶದಲ್ಲಿ ತೆರಿಗೆ ವ್ಯವಸ್ಥೆಯೇ ಇಲ್ಲದ ಅರಾಜಕತೆ ಸೃಷ್ಟಿಯಾಗಲಿದೆ. ಸರ್ಕಾರ ನಡೆಸುವುದೇ ಕಷ್ಟವಾಗಲಿದೆ. ಇದರಿಂದ ಜಿಎಸ್‌ಟಿ ಜಾರಿಗೆ ತರುವುದು  ಅನಿವಾರ್ಯ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕುರಿತ ಭಿನ್ನಾಭಿಪ್ರಾಯಗಳನ್ನು ತುರ್ತಾಗಿ ಬಗೆಹರಿಸಿಕೊಳ್ಳಬೇಕಾಗಿದೆ. ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ  ಜಿಎಸ್‌ಟಿ ಜಾರಿಗೆ ಈ ಅಂತಿಮ ಹಂತದಲ್ಲೂ  ಮತ್ತೆ ಕೆಲ ಅಡಚಣೆಗಳು ಎದುರಾಗಿರುವುದು ವಿಷಾದನೀಯ. ಈಗ ಚಾಲನೆಯಲ್ಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಇದಕ್ಕೆ ಸಂಬಂಧಿಸಿದ  ಪೂರಕ ಮಸೂದೆಗಳನ್ನು ಮಂಡಿಸಲೇಬೇಕಾದ ಅನಿವಾರ್ಯ ಎದುರಾಗಿದೆ.

ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಅಂತಹ ಸಾಧ್ಯತೆ ಕ್ಷೀಣಿಸುವ ಅಪಾಯ ಕಾಣಿಸುತ್ತಿದೆ. ಇದರ ಜತೆಗೆ ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಏಕಾಏಕಿ  ರದ್ದುಪಡಿಸಿರುವುದೂ ಜಿಎಸ್‌ಟಿಯ ಗೋಜಲು   ಮತ್ತು ರಾಜ್ಯಗಳ ಸಂಕಷ್ಟವನ್ನೂ ಹೆಚ್ಚಿಸಿದೆ. ನೋಟು ರದ್ದತಿಯು ರಾಜ್ಯಗಳ ಹಣಕಾಸು ಪರಿಸ್ಥಿತಿ ಮೇಲೆ ಬೀರುವ ಪರಿಣಾಮಗಳ ಕಾರಣಕ್ಕೆ ಕೆಲ ರಾಜ್ಯಗಳಿಂದ ಅಪಸ್ವರವೂ ಕೇಳಿಬಂದಿದೆ. 

ರಾಜ್ಯಗಳ ಪಾಲಿಗೆ ಜಿಎಸ್‌ಟಿ ಹೆಚ್ಚು ಸಂಕೀರ್ಣವಾಗಿ ಪರಿಣಮಿಸಲಿದೆ ಎಂಬ ಆತಂಕ ಕೆಲವು ವಲಯಗಳಲ್ಲಿ ಇದೆ. ಜೊತೆಗೆ  ವರಮಾನ ಖೋತಾಕ್ಕೂ ಇದು ಸಂಬಂಧಿಸಿರುವುದರಿಂದ  ತಮ್ಮೆಲ್ಲ ಅನುಮಾನ ಬಗೆಹರಿಸಿಕೊಂಡು, ನಷ್ಟ ಭರ್ತಿ ಸೂತ್ರ ಖಚಿತಪಡಿಸಿಕೊಂಡೇ ಮುಂದುವರೆಯಲು ರಾಜ್ಯಗಳು ನಿಶ್ಚಯಿಸಿರುವುದರಲ್ಲಿ ಯಾವುದೇ  ದುರುದ್ದೇಶ ಕಾಣಿಸದು.

ಕೇಂದ್ರ ಜಿಎಸ್‌ಟಿ, ಸಮಗ್ರ ಜಿಎಸ್‌ಟಿ  ಮತ್ತು ಪರಿಹಾರ ಕಾಯ್ದೆಗೆ ಸಂಬಂಧಿಸಿದ ಮಸೂದೆಗಳನ್ನು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದ್ಯತೆ ಮೇರೆಗೆ ಅಂತಿಮಗೊಳಿಸಬೇಕಾಗಿದೆ.

ಇದೇ 16ಕ್ಕೆ ಕೊನೆಗೊಳ್ಳಲಿರುವ  ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸಿ ಅಂಗೀಕಾರ ಪಡೆಯುವ ಅನಿವಾರ್ಯ ಇದೆ. ಕೇಂದ್ರ ಸರ್ಕಾರವೂ ಕೆಲ ವಿಷಯಗಳಲ್ಲಿನ ತನ್ನ ಬಿಗಿ ಪಟ್ಟು ಸಡಿಲಿಸಬೇಕಾಗಿದೆ. ಬಿಕ್ಕಟ್ಟು ಬಗೆಹರಿಸಲು ಕಾರ್ಯಸಾಧ್ಯವಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು  ಎರಡೂ ಬಣಗಳು ತಮ್ಮ ಹಟಮಾರಿತನ  ಸಡಿಲಿಸಿ ಒಮ್ಮತಾಭಿಪ್ರಾಯಕ್ಕೆ ಬರಲು ಮನಸ್ಸು ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT