ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬವಣೆಯಾಗದಿರಲಿ ಬದಲಾವಣೆ

ಜಾಗೃತಿ
Last Updated 8 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
-ಗಣಪತಿ ಶರ್ಮಾ
 
*
ಮಹಾನಗರಗಳಲ್ಲಿ, ಪರ ಊರುಗಳಲ್ಲಿ ವಾಸಿಸುವಾಗ ಮನೆ ಬದಲಿಸುವ ಪರಿಸ್ಥಿತಿ ಉದ್ಭವಿಸುವುದು ಸಹಜ. ಉದ್ಯೋಗ ನಿಮಿತ್ತವೋ, ಸೌಕರ್ಯಗಳ ಸಲುವಾಗಿಯೋ ವಾಸ್ತವ್ಯ ಬದಲಾಯಿಸಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ವಿಳಾಸ ಬದಲಾವಣೆ  ಅನಿವಾರ್ಯ.
 
ಬೇರೆ ಬಾಡಿಗೆ ಮನೆ ಆಯ್ದುಕೊಳ್ಳಲು ಅಥವಾ ಸ್ವಂತ ಮನೆ ಕೊಳ್ಳಲು ಸಾಕಷ್ಟು ವಿವೇಚನೆ ನಡೆಸುವ ನಾವು ನಂತರ ವಿಳಾಸ ಬದಲಾವಣೆಗೆ ಸಂಬಂಧಿಸಿ ದಾಖಲೆಗಳಲ್ಲಿ ಮಾರ್ಪಾಡು ಮಾಡಿಕೊಳ್ಳಲು ಅಷ್ಟೇ ಉತ್ಸಾಹ ತೋರುವುದಿಲ್ಲ. ಇದರಿಂದ ಬ್ಯಾಂಕಿಂಗ್‌ನಂಥ ಹಲವು ವಹಿವಾಟುಗಳಿಗೆ ತೊಂದರೆಯಾಗುತ್ತದೆ. ನಮ್ಮ ವಿಳಾಸ ಬದಲಾದ ಕೂಡಲೇ ಅದಕ್ಕನುಗುಣವಾಗಿ ಸಂಬಂಧಪಟ್ಟ ದಾಖಲೆಗಳನ್ನೂ ನವೀಕರಿಸಿಕೊಳ್ಳಲು ನಾವು ಮುಂದಾಗಬೇಕು.
 
ಸಾಮಾನ್ಯವಾಗಿ ನಿವಾಸ ಬದಲಾಯಿಸಿದ ತಕ್ಷಣ ಎಲ್ಲರೂ ರೆಂಟಲ್ ಅಗ್ರಿಮೆಂಟ್ ಅಥವಾ ಬಾಡಿಗೆ ಕರಾರು ಮಾಡಿಸಿಕೊಳ್ಳುತ್ತಾರೆ. ಸಣ್ಣಪುಟ್ಟ ಕೆಲಸಗಳಲ್ಲಿ ವಿಳಾಸ ದೃಢೀಕರಣಕ್ಕೆ ಇದನ್ನು ಬಳಸಬಹುದಾದರೂ ಬ್ಯಾಂಕ್ ಖಾತೆ ತೆರೆಯುವುದು ಮೊದಲಾದ ಪ್ರಮುಖ ಕೆಲಸಗಳಿಗೆ ಇದಷ್ಟೇ ಸಾಕಾಗುವುದಿಲ್ಲ. 
 
ಇದಕ್ಕಿಂತಲೂ ಹೆಚ್ಚಿನ ವಿಳಾಸದ ದೃಢೀಕರಣವನ್ನು ಸಂಬಂಧಪಟ್ಟ ಅಧಿಕಾರಿಗಳು ಅಥವಾ ಇಲಾಖೆಗಳು ಬಯಸುತ್ತವೆ. ಆಧಾರ್, ಚುನಾವಣಾ ಗುರುತುಚೀಟಿ, ಚಾಲನಾ ಪರವಾನಗಿ... ಹೀಗೆ ಪ್ರತಿಯೊಂದೂ ಒಂದಲ್ಲ ಒಂದು ಹಂತದಲ್ಲಿ ನಮ್ಮ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮನೆ ಬದಲಿಸಿದ ಬಳಿಕವೂ ದಾಖಲೆಗಳಲ್ಲಿ ಹಳೆಯ ವಿಳಾಸವೇ ಇದ್ದರೆ ಅವು ಉಪಯೋಗಕ್ಕೆ ಬಾರವು.
 
ಪಡಿತರ ಚೀಟಿಯಲ್ಲಿ ವಿಳಾಸ ಬದಲಾವಣೆ
ಮನೆ ಬದಲಾಯಿಸಿದಾಗ ಪಡಿತರ ಚೀಟಿಯಲ್ಲಿ ವಿಳಾಸವನ್ನು ಬದಲಾಯಿಸಿಕೊಳ್ಳುವುದು ಉಳಿದೆಲ್ಲ ವ್ಯವಹಾರಗಳ ದೃಷ್ಟಿಯಿಂದ ಪ್ರಯೋಜನಕಾರಿಯಾಗಬಲ್ಲದು. ಪಡಿತರವನ್ನು ವಿಳಾಸದ ದೃಢೀಕರಣಕ್ಕೆ ಮಾನದಂಡವಾಗಿ ಮಾನ್ಯ ಮಾಡಿರುವುದರಿಂದ ಇತರ ದಾಖಲೆಗಳ ವಿಳಾಸ ಬದಲಾಯಿಸುವಲ್ಲಿ ಇದು ಮುಖ್ಯ ಪಾತ್ರ ವಹಿಸಲಿದೆ. ನಗರಾಡಳಿತಕ್ಕೆ  ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ವಿಳಾಸ ಬದಲಾಗಿರುವುದಕ್ಕೆ ಸೂಕ್ತ ದಾಖಲೆಗಳನ್ನೊದಗಿಸಿ ವಿಳಾಸ ಬದಲಾವಣೆಗಾಗಿ ಮನವಿ ಸಲ್ಲಿಸಬಹುದು. 
 
ವಿದ್ಯುತ್ ನಿಗಮದ ರಶೀದಿ, ದೂರಸಂಚಾರ ನಿಗಮದ ರಶೀದಿ ಇತ್ಯಾದಿಗಳನ್ನು ಬಾಡಿಗೆ ಕರಾರಿನ ಜೊತೆ ದಾಖಲೆಯಾಗಿ ನೀಡಬಹುದು. ಮನೆ ಖರೀದಿಸಿದ್ದಾದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಬಹುದು. ಒಮ್ಮೆ ಪಡಿತರದಲ್ಲಿ ವಿಳಾಸ ಬದಲಾಯಿತೆಂದರೆ ಇತರ ದಾಖಲೆಗಳಲ್ಲಿನ ವಿಳಾಸ ಬದಲಾವಣೆ, ಬ್ಯಾಂಕಿಂಗ್‌ನಂಥ ವ್ಯವಹಾರಗಳು ಸುಗಮವಾಗಲಿವೆ.
 
ಆಧಾರ್‌ಗಿದೆ ಆನ್‌ಲೈನ್ ಆಧಾರ
ವಿಶಿಷ್ಟ ಗುರುತಿನಚೀಟಿ ಪ್ರಾಧಿಕಾರ ಒದಗಿಸುವ ಆಧಾರ್ ಕಾರ್ಡ್ ಸದ್ಯ ಎಲ್ಲರ ಅತ್ಯಾವಶ್ಯಕ ದಾಖಲೆಗಳಲ್ಲೊಂದು. ಅಡುಗೆ ಅನಿಲದ ಸಬ್ಸಿಡಿ, ನೇರ ನಗದು ವರ್ಗಾವಣೆ, ಬ್ಯಾಂಕ್ ಖಾತೆ ತೆರೆಯುವುದು... ಹೀಗೆ ಪ್ರತಿಯೊಂದಕ್ಕೂ ಸರ್ಕಾರ ಆಧಾರ್ ಜೊತೆ ಸಂಪರ್ಕ ಕಲ್ಪಿಸಿದೆ. ವಾಸ್ತವ್ಯ ಬದಲಾಯಿಸಿದಂತೆಯೇ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಬದಲಾಯಿಸುವುದು ಒಳಿತು. ಪ್ರಸ್ತುತ, ಆನ್‌ಲೈನ್ ಮೂಲಕ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಾಯಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. 
 
ವಿಶಿಷ್ಟ ಗುರುತಿನಚೀಟಿ ಪ್ರಾಧಿಕಾರದ ವೆಬ್‌ಸೈಟ್ ಮೂಲಕ ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಧಾರ್ ಸಂಖ್ಯೆ, ಕಾರ್ಡ್‌ದಾರರ ಹೆಸರು ಮತ್ತು ಬದಲಾದ ವಿಳಾಸ ಹಾಗೂ ಸಂಬಂಧಿಸಿದ ದಾಖಲೆಗಳ ಪ್ರತಿಯನ್ನು ಅಪ್‌ಲೋಡ್‌ ಮಾಡುವ ಮೂಲಕ ವಿಳಾಸ ಬದಲಾಯಿಸಿಕೊಳ್ಳಬಹುದು.
 
ಚುನಾವಣಾ ಗುರುತುಚೀಟಿ 
ವಿಳಾಸ ದೃಢೀಕರಿಸುವಲ್ಲಿ ಚುನಾವಣಾ ಗುರುತುಚೀಟಿ ಪ್ರಮುಖ ಪಾತ್ರವಹಿಸುವುದರಿಂದ ಅದರಲ್ಲೂ ನಮ್ಮ ಹಾಲಿ ವಿಳಾಸವನ್ನು ನಮೂದಿಸುವುದು ಮುಖ್ಯ. ಈ ಬಗ್ಗೆ ನಾವು ಚುನಾವಣಾ ಆಯೋಗದ ಸ್ಥಳೀಯ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಬಹುದು. ಪಡಿತರ, ಆಧಾರ್ ಮತ್ತಿತರ ದಾಖಲೆಗಳ ಪೈಕಿ ಯಾವುದಾದರೊಂದರ ಪ್ರತಿಯ ಸಹಿತ ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸಬಹುದು.
 
ಚಾಲನಾ ಪರವಾನಗಿ
ದೈನಂದಿನ ವ್ಯವಹಾರಗಳಲ್ಲಿ ಬಲು ಮುಖ್ಯ ಪಾತ್ರ ವಹಿಸುವ ಮತ್ತೊಂದು ದಾಖಲೆಯೇ ಚಾಲನಾ ಪರವಾನಗಿ. ವಾಸವಿರುವ ಪ್ರದೇಶ ಬದಲಾದಂತೆಯೇ ಚಾಲನಾ ಪರವಾನಗಿಯಲ್ಲೂ ವಿಳಾಸ ಬದಲಾಯಿಸಬೇಕು. ಇದಕ್ಕಾಗಿ ನಾವು ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ (ಆರ್‌ಟಿಒ) ಅರ್ಜಿ ಸಲ್ಲಿಸಬೇಕು. ಪಡಿತರ, ಪಾಸ್‌ಪೋರ್ಟ್, ಜೀವ ವಿಮಾ ನಿಗಮದ ರಶೀದಿ, ವಿದ್ಯುತ್ ಅಥವಾ ಜಲಮಂಡಳಿಯ ರಶೀದಿ, ದೂರವಾಣಿ ರಶೀದಿ ಇತ್ಯಾದಿಗಳ ಪೈಕಿ ಯಾವುದಾದರೂ ಒಂದನ್ನು ವಿಳಾಸದ ದಾಖಲೆಯಾಗಿ ಒದಗಿಸಬೇಕು. ಅರ್ಜಿ ಸಲ್ಲಿಸಿದ ಒಂದು ದಿನದ ಒಳಗಾಗಿ ಬದಲಾದ ವಿಳಾಸವುಳ್ಳ ಚಾಲನಾ ಪರವಾನಗಿ ದೊರೆಯುತ್ತದೆ.
 
ಬ್ಯಾಂಕ್ ಖಾತೆಯಲ್ಲೂ ಬದಲಾಗಲಿ ವಿಳಾಸ
ಪಡಿತರ, ಆಧಾರ್, ಚಾಲನಾ ಪರವಾನಗಿ ಮತ್ತಿತರ ದಾಖಲೆಗಳಲ್ಲಿ ವಿಳಾಸ ಬದಲಾಯಿಸುವುದು ಎಷ್ಟು ಮುಖ್ಯವೋ ಬ್ಯಾಂಕ್ ಖಾತೆಯಲ್ಲಿ ನಮೂದಿಸಿರುವ ವಿಳಾಸವನ್ನು ಬದಲಿಸಬೇಕಾದ್ದೂ ಅಷ್ಟೇ ಮುಖ್ಯ. ಯಾಕೆಂದರೆ, ಆಧುನಿಕ ಜಗತ್ತಿನಲ್ಲಿ ಹಣಕಾಸಿಗೆ ಸಂಬಂಧಿಸಿದ ಹೆಚ್ಚಿನ ವ್ಯವಹಾರಗಳು ನಡೆಯುವುದು ಬ್ಯಾಂಕ್ ಖಾತೆಯ ಮೂಲಕವೇ. 
 
ಒಂದು ವೇಳೆ ನಾವು ವಿಳಾಸ ಬದಲಾದ ಬಗ್ಗೆ ನಮ್ಮ ಖಾತೆ ಇರುವ ಶಾಖೆಗೆ ಮಾಹಿತಿ ನೀಡದೇ ಇದ್ದಲ್ಲಿ ಸಂವಹನಕ್ಕೆ ತೊಡಕಾಗಬಹುದು. ಸಾಲದ ಖಾತೆಯ ವಿಚಾರದಲ್ಲಂತೂ ವಿಳಾಸ ಬದಲಾವಣೆ ಅತ್ಯಗತ್ಯ. ಸಾಲದ ಕಂತಿನ ನೋಟಿಸ್, ಜಪ್ತಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ನೋಟಿಸ್ ಅನ್ನು ಬ್ಯಾಂಕ್‌ಗಳು ಮೊದಲಿನ ವಿಳಾಸಕ್ಕೇ ಕಳುಹಿಸಿ ಸಮಸ್ಯೆಯಾಗಬಹುದು. 
 
ಅಂದಹಾಗೆ ವಿಳಾಸ ಬದಲಾವಣೆಯ ಮಾಹಿತಿ ನೀಡದೇ ಇರುವುದಕ್ಕೆ ನಮ್ಮ ವಿರುದ್ಧ ಬ್ಯಾಂಕ್ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ (ಸಾಲದ ಖಾತೆಯ ವಿಷಯದಲ್ಲಿ ಮಾತ್ರ). ಎಲ್ಲದಕ್ಕಿಂದ ಹೆಚ್ಚಾಗಿ, ಬ್ಯಾಂಕ್ ಖಾತೆಯನ್ನೂ ವಿಳಾಸ ದೃಢೀಕರಣದ ದಾಖಲೆಯಾಗಿ ಬಳಸುವುದರಿಂದ ಆ ನಿಟ್ಟಿನಲ್ಲಿಯೂ ಅದು ನಮ್ಮ ಉಪಯೋಗಕ್ಕೆ ಬರದೇ ಹೋಗಬಹುದು.
 
ಸಂಪರ್ಕದಲ್ಲಿರುವವರಿಗೆಲ್ಲ ಸಂದೇಶ ಕಳುಹಿಸಿ
ದಾಖಲೆಗಳಲ್ಲಿ ಮಾತ್ರ ವಿಳಾಸ ಬದಲಾಯಿಸಿದರೆ ಸಾಕೇ? ತೀರಾ ಹತ್ತಿರದ ಸ್ನೇಹಿತರಿಗೆ, ಬಂಧುಗಳಿಗೆ ನಾವು ಮನೆ ಬದಲಾಯಿಸಿದ ವಿಷಯ ತಿಳಿದಿರಬಹುದು. ಆದರೆ, ನಾವು ವ್ಯಾವಹಾರಿಕ ಸಂಪರ್ಕದಲ್ಲಿರುವ ಎಲ್ಲ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಅದು ಗೊತ್ತಾಗುತ್ತದೆಯೇ? ಇಲ್ಲ. ಆದ್ದರಿಂದ ವ್ಯಾವಹಾರಿಕವಾಗಿ ನಮ್ಮ ಸಂಪರ್ಕದಲ್ಲಿರುವ ಎಲ್ಲ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ವಿಳಾಸ ಬದಲಾಯಿಸಿರುವುದಕ್ಕೆ ಸಂಬಂಧಿಸಿ ಮಾಹಿತಿ ಸಂದೇಶ ಕಳುಹಿಸುವುದು ಉತ್ತಮ. ಇದರಿಂದ ನಮ್ಮ ದೈನಂದಿನ ವ್ಯವಹಾರಗಳು ಸುಗಮಗೊಳ್ಳಲಿವೆ. ಇಲ್ಲವಾದಲ್ಲಿ ಮನೆ ಅಥವಾ ವಿಳಾಸ ಬದಲಾವಣೆ ಒಂದು ಬವಣೆಯಾಗಿ ಕಾಡಿದರೂ ಅಚ್ಚರಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT