ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ನಲ್ಲಿ ಚರ್ಚೆ ನಡೆಯಲಿ ಕೋಲಾಹಲವೇ ಕಲಾಪವಾಗದಿರಲಿ

Last Updated 8 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಜನಪ್ರತಿನಿಧಿಗಳನ್ನು ಒಳಗೊಂಡ ಸಂಸತ್ತು ಮತ್ತು ವಿಧಾನ ಮಂಡಲಗಳು ಪ್ರಜಾಸತ್ತೆಯ ಆಧಾರ ಸ್ತಂಭಗಳಿದ್ದಂತೆ. ಅವು ಪ್ರಜೆಗಳನ್ನು ಪ್ರತಿನಿಧಿಸುತ್ತವೆ.  ಅಲ್ಲಿ ನಡೆಯುವ ಚರ್ಚೆ, ಮಾತುಕತೆಗಳು ಸಂಸದೀಯ ಜನತಂತ್ರದ ಜೀವಾಳ.  ಆದರೆ ಅನೇಕ ವರ್ಷಗಳಿಂದ ಚರ್ಚೆಯ ಸ್ಥಾನವನ್ನು ‘ಗಲಾಟೆ, ಗದ್ದಲ, ಕೋಲಾಹಲ’ಗಳು ಆಕ್ರಮಿಸಿಕೊಂಡಿವೆ.  

‘ಸದನ’ ಎನ್ನುವುದಕ್ಕೆ ‘ಕದನ’  ಪರ್ಯಾಯ ಶಬ್ದವೇನೋ ಎನ್ನುವಂತಾಗಿದೆ.  ಚರ್ಚೆ ನಡೆಯುವುದು, ಕಲಾಪ ಮುಂದುವರಿಯುವುದು ಯಾರಿಗೂ ಬೇಕೇ ಇಲ್ಲ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿದೆ. ಕಳೆದ ತಿಂಗಳು 16ರಿಂದ ಆರಂಭವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇದುವರೆಗೂ ಒಂದೇ ಒಂದು ದಿನ ಹೋಗಲಿ, ಒಂದೇ ಒಂದು ತಾಸು ಕೂಡ ಉಪಯುಕ್ತ ಚರ್ಚೆ ನಡೆದಿಲ್ಲ. ಆದರೂ ನಮ್ಮ ಜನಪ್ರತಿನಿಧಿಗಳಿಗೆ ಅದರ ಬಗ್ಗೆ ಪಾಪಪ್ರಜ್ಞೆಯೂ ಇದ್ದಂತಿಲ್ಲ.

ಕಳೆದ ಅಧಿವೇಶನದ ನಂತರ ನಿಧನರಾದ ಹಾಲಿ, ಮಾಜಿ ಸದಸ್ಯರಿಗೆ ಮತ್ತು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರಿಗೆ ಶ್ರದ್ಧಾಂಜಲಿ  ಸಲ್ಲಿಸಲು ನಡೆದ ಕಲಾಪ ಬಿಟ್ಟರೆ   ಗಲಾಟೆ, ಧರಣಿ, ಸಭಾತ್ಯಾಗ, ಆರೋಪ– ಪ್ರತ್ಯಾರೋಪಗಳೇ ವಿಜೃಂಭಿಸಿವೆ.

ಅಧಿಕ ಮುಖಬೆಲೆಯ ನೋಟುಗಳ ರದ್ದತಿ ಮತ್ತು ನಂತರದ ಬೆಳವಣಿಗೆಗಳಿಗೆ ಸಂಬಂಧಪಟ್ಟಂತೆ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆ ನಡೆಯಬೇಕಾಗಿತ್ತು. ಸರ್ಕಾರ ಅದಕ್ಕೆ ಉತ್ತರಿಸಬೇಕಾಗಿತ್ತು. ಆದರೆ ಈ ವಿಚಾರದಲ್ಲಿ ಎರಡೂ ಕಡೆಯವರು ಮೊಂಡಾಟ ಮಾಡುತ್ತಿದ್ದಾರೆ.

ವಿಷಯವನ್ನು ಚರ್ಚಿಸುವುದಕ್ಕಿಂತ ಯಾವ ನಿಯಮದ ಅಡಿ ಚರ್ಚೆ ನಡೆಯಬೇಕು ಎನ್ನುವ ಹಗ್ಗಜಗ್ಗಾಟವೇ ಸದನದ ಇಡೀ ಸಮಯವನ್ನು ನುಂಗಿ ಹಾಕುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಖುದ್ದಾಗಿ ಹಾಜರಿದ್ದು ಇಡೀ ಚರ್ಚೆಯನ್ನು ಕೇಳಿಸಿಕೊಳ್ಳಬೇಕು, ಉತ್ತರಿಸಬೇಕು ಎಂಬುದು ಕಾಂಗ್ರೆಸ್‌ ಸೇರಿದಂತೆ ಅನೇಕ ಪ್ರತಿಪಕ್ಷಗಳ ಪಟ್ಟು. ಆದರೆ ಆಡಳಿತ ಪಕ್ಷವಾದ ಬಿಜೆಪಿ ಇದನ್ನು ಒಪ್ಪಿಕೊಳ್ಳುತ್ತಿಲ್ಲ.

ವಿಚಿತ್ರ ಎಂದರೆ ಪ್ರಧಾನಿ ಸದನದಲ್ಲಿ ಇದ್ದಾಗಲೂ ಚರ್ಚೆ ನಡೆದಿಲ್ಲ. ಪ್ರಧಾನಿ ಸದನದ ಒಳಗೆ ಉತ್ತರಿಸುವ ಬದಲು ಹೊರಗೆ ಸಾರ್ವಜನಿಕ ವೇದಿಕೆ ಬಳಸಿಕೊಂಡು ತಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎನ್ನುವುದು ಪ್ರತಿಪಕ್ಷಗಳ ಕೋಪ. ವಿರೋಧ ಪಕ್ಷಗಳು ಪದೇ ಪದೇ  ಹೊಸ ಬೇಡಿಕೆ ಇಡುತ್ತ ಸದನ ನಡೆಯುವುದಕ್ಕೇ ಬಿಡುತ್ತಿಲ್ಲ ಎಂಬುದು ಸರ್ಕಾರದ ಆರೋಪ. ಇವೆರಡೂ ಸುಳ್ಳು ಎಂದು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ಆದರೆ ಒಂದಂತೂ ಸ್ಪಷ್ಟ. ಎರಡೂ ಕಡೆಯವರು ತಪ್ಪು ಹಾದಿ ತುಳಿಯುತ್ತಿದ್ದಾರೆ.

ಅದರ ಕಹಿಫಲವನ್ನು ಪ್ರಜೆಗಳು ಅನುಭವಿಸಬೇಕು. ಕಲಾಪ ನಡೆಯದ ಕಾರಣ ಅನೇಕ ಪ್ರಮುಖ ಮಸೂದೆಗಳು ನನೆಗುದಿಗೆ ಬಿದ್ದಿವೆ. ಸದನದ ಪ್ರತಿ ನಿಮಿಷಕ್ಕೂ ಪ್ರಜೆಗಳ ತೆರಿಗೆಯ ಲಕ್ಷಾಂತರ ಹಣ ಖರ್ಚಾಗುತ್ತದೆ. ಈ ವಿದ್ಯಮಾನಗಳು ಸ್ವತಃ ಹಿರಿಯ ಸಂಸದೀಯ ಪಟುವಾದ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೂ ಬೇಸರ ಉಂಟುಮಾಡಿವೆ ಎನ್ನುವುದಕ್ಕೆ ಅವರು ವ್ಯಕ್ತಪಡಿಸಿದ ಆಕ್ರೋಶವೇ ಸಾಕ್ಷಿ. ಸ್ಪೀಕರ್‌ ಮತ್ತು ಸಂಸದೀಯ ವ್ಯವಹಾರಗಳ ಸಚಿವರತ್ತ ಅಡ್ವಾಣಿ ಬೊಟ್ಟು ಮಾಡಿದ್ದಾರೆ. ‘ಸಂಸತ್ತು ಧರಣಿ ಮಾಡುವ ಸ್ಥಳವಲ್ಲ. ನಿಮ್ಮ ಕೆಲಸ ನೀವು ಮಾಡಿ’ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ನೇರವಾಗಿಯೇ ಕಿವಿ ಹಿಂಡಿದ್ದಾರೆ.

ಈ ಹಿರಿಯರ ಕಳಕಳಿ, ಹಿತವಚನಗಳನ್ನು ಸಂಬಂಧಪಟ್ಟವರೆಲ್ಲ  ಗಂಭೀರವಾಗಿ ಪರಿಗಣಿಸಬೇಕು, ಗೌರವಿಸಬೇಕು. ಅದರಲ್ಲಿಯೂ ವಿಶೇಷವಾಗಿ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಇನ್ನಷ್ಟು ಹೊಣೆಗಾರಿಕೆ ಪ್ರದರ್ಶಿಸಬೇಕು.

ಒಬ್ಬರು ಅಧಿಕಾರದಲ್ಲಿ ಇದ್ದಾಗ ಇನ್ನೊಬ್ಬರು ಹೀಗೆಯೇ ವರ್ತಿಸಿದ್ದರು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸೇಡು ತೀರಿಸಿಕೊಳ್ಳುವ ಮನಸ್ಥಿತಿಯಿಂದ ಎರಡೂ ಕಡೆಯವರು ಹೊರಬರಬೇಕು. ಏಕೆಂದರೆ ಶಾಸನಸಭೆಗಳ ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಹೊಣೆ ಆಡಳಿತ ಮತ್ತು ಪ್ರತಿಪಕ್ಷ ಈ ಎರಡರ ಮೇಲೂ ಇದೆ. ಅದರಲ್ಲೂ ಸರ್ಕಾರದ ಜವಾಬ್ದಾರಿ ಹೆಚ್ಚು. ಅದನ್ನು ಸರಿಯಾಗಿ ನಿಭಾಯಿಸದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈಗಿನ ವಿದ್ಯಮಾನಗಳೇ ಸಾಕ್ಷಿ. ಜನರ ತಾಳ್ಮೆಯನ್ನು ಇನ್ನಷ್ಟು ಪರೀಕ್ಷಿಸುವುದು ಜನರಿಂದಲೇ ಆಯ್ಕೆಯಾದ ಪ್ರಜಾಪ್ರತಿನಿಧಿಗಳಿಗೆ ಶೋಭಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT