ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲಕ್ಕೆ ಶೋರ್ಬಾ ಸವಿ...

ನಳಪಾಕ
Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಚಳಿಗಾಲ. ಗಂಟಲು ಮತ್ತೆ ಮತ್ತೆ ಕಿರಿಕಿರಿಕೊಡುವ ಸಮಯವಿದು. ಸಂಜೆಯ ಸ್ನ್ಯಾಕ್ಸ್‌ ಜೊತೆಗೊ, ರಾತ್ರಿಯ ಊಟದ ಜೊತೆಗೊ ಒಂದಷ್ಟು ಬಿಸಿ ಬಿಸಯಾದ, ಹುಳಿ, ಸಿಹಿ, ಖಾರದ ಸಕಲ ಗುಣಗಳನ್ನೂ ಒಳಗೊಂಡ ಸೂಪ್‌ ಹೀರಲು ಇದು ಅತ್ಯುತ್ತಮ ಸಮಯ. ಅಂತೆಯೇ ಚಳಿಗಾಲ ಅಡಿ ಇಡುತ್ತಿದ್ದಂತೆ ಅನೇಕರು ಹೊಸ ಪ್ರಕಾರದ ಸೂಪ್‌ಗಾಗಿ ಹುಡುಕುತ್ತಾರೆ. ಅಂಥವರಿಗಾಗಿ ‘ದಿ ಯೆಲೊ ಚಿಲ್ಲಿ’  ಹೊಟೇಲ್‌ನ ಮುಖ್ಯ ಬಾಣಸಿಗ ಸಂಜೀವ್‌ ಕಪೂರ್‌  ಇಲ್ಲಿ ಬಿಸಿ ಬಿಸಿ ಶೋರ್ಬಾ ವಿಧಗಳನ್ನು ಪರಿಚಯಿಸಿದ್ದಾರೆ.
 
**
ದೂದಿಯಾ ಬಾದಾಮಿ ಶೋರ್ಬಾ
ತಯಾರಿ ಸಮಯ: 11–15 ನಿಮಿಷ
ಅಡುಗೆ ತಯಾರಿ ಸಮಯ: 11–15 ನಿಮಿಷ
ಅಳತೆ: 4 ಜನರಿಗೆ 
 
ಬೇಕಾಗುವ ಸಾಮಗ್ರಿಗಳು: ಬಾದಾಮಿ 12ರಿಂದ 15. ಕ್ಯಾರೆಟ್‌ 4, ಆಲಿವ್‌ ಎಣ್ಣೆ 2 ಸಣ್ಣ ಚಮಚ, ಒಂದು ದೊಡ್ಡ ಈರುಳ್ಳಿ, ಸ್ವಲ್ಪ ಈರುಳ್ಳಿ ಎಲೆ, ಒಂದು ಬ್ರೆಡ್‌ನ ತುಣುಕುಗಳು, ಶುಂಠಿ ಸ್ವಲ್ಪ, ಒಂದು ಹಸಿಮೆಣಸು, ಒಂದು ಏಲಕ್ಕಿ, ದಾಲ್ಚಿನ್ನಿ, ಲವಂಗ, ಕರಿಮೆಣಸು, ಬಿಳಿಮೆಣಸು, ರುಚಿಗೆ ಉಪ್ಪು, ಸ್ವಲ್ಪ ರಾಕ್ಸ್‌ (ಕೊಬ್ಬು ಮತ್ತು ಹಿಟ್ಟನ್ನು ಸೇರಿಸಿ ಮಾಡುವ ಪೇಸ್ಟ್) ಸ್ವಲ್ಪ ಕ್ರೀಂ. 
ತಯಾರಿಸುವ ವಿಧಾನ: ಸಾಧಾರಣ ಉರಿಯಲ್ಲಿ ಆಲಿವ್‌ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ಕತ್ತರಿಸಿದ ಈರುಳ್ಳಿ, ಈರುಳ್ಳಿ ಎಲೆ, ಕ್ಯಾರೆಟ್‌ ಹಾಗೂ 10ರಿಂದ 12 ಬಾದಾಮಿಗಳನ್ನು ಸೇರಿಸಿ ಕುದಿಸಿ. ಶುಂಠಿ, ಹಸಿಮೆಣಸು, ಏಲಕ್ಕಿ, ದಾಲ್ಚಿನ್ನಿ, ಲವಂಗ ಹಾಗೂ ಕರಿಮೆಣಸಿನ ಪುಡಿ ಹಾಕಿ,  ಅದಕ್ಕೆ ಬ್ರೆಡ್‌ ತುಂಡು ಸೇರಿಸಿ ನಾಲ್ಕು ಕಪ್‌ ನೀರಿನಲ್ಲಿ ಚೆನ್ನಾಗಿ ಕುದಿಸಿ. ಇದಕ್ಕೆ ಸಣ್ಣಗೆ ಹೆಚ್ಚಿದ ತರಕಾರಿ ಸೇರಿಸಿ ಮತ್ತೆ ಸ್ವಲ್ಪ ಹೊತ್ತು ಕುದಿಸಿ. 
 
ಉಳಿದ ಬಾದಾಮಿ ಚೂರುಗಳನ್ನೂ ಸೇರಿಸಿ ನೀರು ಹಾಕಿ ಮಿಕ್ಸಿ ಮಾಡಿಕೊಳ್ಳಿ. ಅದನ್ನೂ ಕುದಿಯುವ ನೀರಿಗೆ ಸೇರಿಸಿ ಕೊನೆಯಲ್ಲಿ ಬಿಳಿಮೆಣಸು, ಉಪ್ಪು ಸೇರಿಸಿ ಕೆಳಗೆ ಇಳಿಸಿ. ಬಿಸಿ ಇರುವಾಗಲೇ ಬಡಿಸಿ.
 
**
ವೆಜ್‌ ಸ್ಟಾಕ್‌ ತಯಾರಿಸಿಕೊಳ್ಳುವ ಬಗೆ
 ಈಗ ವೆಜ್‌ ಸ್ಟಾಕ್‌ ತಯಾರಿಸಿಕೊಳ್ಳುವ ಬಗೆಯನ್ನು ತಿಳಿದುಕೊಳ್ಳೋಣ. ನಾಲ್ಕು ಕಪ್‌ ವೆಜ್‌ ಸ್ಟಾಕ್‌ ತಯಾರಿಸಿಕೊಳ್ಳಲು 2 ದೊಡ್ಡ ಈರುಳ್ಳಿ, 2 ಮಧ್ಯಮ ಗಾತ್ರದ ಕ್ಯಾರೆಟ್,  ನಾಲ್ಕಾರು ಬೀನ್ಸ್‌, ಸೆಲರಿ ಎಲೆಗಳು, ಒಂದು ಬೆಳ್ಳುಳ್ಳಿ ಗಡ್ಡೆ, ಮೆಣಸು 10, ಒಂದು ಲವಂಗದ ಎಲೆಯನ್ನು ತೆಗೆದುಕೊಳ್ಳಬೇಕು.
 
ತರಕಾರಿ ಹಾಗೂ ಈರುಳ್ಳಿಯನ್ನು ದೊಡ್ಡದಾಗಿ ಕತ್ತರಿಸಿ. ಸೆಲರಿ ಎಲೆಗಳನ್ನು ಬಿಡಿಸಿಕೊಂಡು ಕತ್ತರಿಸಿಕೊಳ್ಳಿ. ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಎಲ್ಲವನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿಕೊಂಡು ಅದರಲ್ಲಿ ನೀರು ಹಾಕಿ ಕುದಿಸಿ. ನಂತರ ತರಕಾರಿ ಹಾಗೂ ಅದರ ನೀರನ್ನು ಬೇರ್ಪಡಿಸಿದರೆ ವೆಜ್‌ ಸ್ಟಾಕ್‌ ಸಿದ್ಧ. 
 
**
ನಿಂಬೆ–ಧನಿಯಾ ಶೋರ್ಬಾ
ತಯಾರಿ ಸಮಯ: 21ರಿಂದ 25 ನಿಮಿಷ
ಅಡುಗೆ ತಯಾರಿ ಸಮಯ: 16ರಿಂದ 20 ನಿಮಿಷ
ಅಳತೆ: 4 ಜನರಿಗೆ
 
ಬೇಕಾಗುವ ಸಾಮಗ್ರಿಗಳು: ಕತ್ತರಿಸಿದ ಎಲೆಕೋಸು ಒಂದು ಕಪ್‌, ಒಂದು ಕ್ಯಾರೆಟ್, ವೆಜ್‌ ಸ್ಟಾಕ್‌ 4 ಕಪ್‌, ಮಶ್ರೂಮ್‌, ಫ್ರೆಂಚ್ ಬೀನ್ಸ್‌, ಸ್ಪ್ರಿಂಗ್‌ ಆನಿಯನ್‌, ಸಾಧಾರಣ ಗಾತ್ರದ ಒಂದು ಈರುಳ್ಳಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ನಿಂಬೆ, ಉಪ್ಪು, ಬಿಳಿ ಕಾಳುಮೆಣಸಿನ ಪುಡಿ, ಕೊತ್ತಂಬರಿ, ಎಣ್ಣೆ.
 
ತಯಾರಿಸುವ ವಿಧಾನ: ಒಂದು ಪ್ಯಾನ್‌ನಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಈರುಳ್ಳಿ, ಸ್ಪ್ರಿಂಗ್‌ ಆನಿಯನ್‌, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ಸಮಯ ಹುರಿಯಿರಿ.
ತರಕಾರಿ ಸ್ಟಾಕ್, ಕೊತ್ತಂಬರಿ, ಎಲೆಕೋಸು, ಫ್ರೆಂಚ್ ಬೀನ್ಸ್ ಮತ್ತು ಕ್ಯಾರೆಟ್ ತುಂಡುಗಳನ್ನು ಸೇರಿಸಿ ಕುದಿಸಿ. ಅದಕ್ಕೆ ಪುಡಿಮಾಡಿದ ಮೆಣಸು ಸೇರಿಸಿ ಮತ್ತೆ ಕುದಿಸಿ. ನಂತರ ಉಪ್ಪು, ನಿಂಬೆರಸ ಸೇರಿಸಿ ಮತ್ತೆ ಅರ್ಧ ನಿಮಿಷ ಕುದಿಸಿ. ಮೇಲೆ ಕೊತ್ತಂಬರಿ ಉದುರಿಸಿ ಬಿಸಿಯಾಗಿರುವಾಗಲೇ ಕುಡಿಯಲು ಕೊಡಿ.
 
**
ಟೊಮೆಟೊ ತುಳಸಿ ಶೋರ್ಬಾ 
ತಯಾರಿ ಸಮಯ: 6ರಿಂದ 10 ನಿಮಿಷ
ಅಡುಗೆ ತಯಾರಿ ಸಮಯ: 26ರಿಂದ 30 ನಿಮಿಷ
ಅಳತೆ: 4 ಜನರಿಗೆ
 
ಬೇಕಾಗುವ ಸಾಮಗ್ರಿಗಳು:  ಟೊಮೆಟೊ 20ರಿಂದ 20 (ಗಾತ್ರವನ್ನು ಆಧರಿಸಿ), ತಾಜಾ ತುಳಸಿ ಎಲೆಗಳು 25, ಎರಡು ಈರುಳ್ಳಿ, ಸ್ವಲ್ಪ ಕೊತ್ತಂಬರಿ, ಶುಂಠಿ ಮೂರು ಎಸಳು ಬೆಳ್ಳುಳ್ಳಿ (ಸಿಪ್ಪೆ ಸುಲಿದ), ಎರಡು ಹಸಿಮೆಣಸು, ಸ್ವಲ್ಪ ಕೆಂಪುಮೆಣಸಿನ ಪುಡಿ, ಒಂದು ಬಟ್ಟಲು ಸಂಸ್ಕರಿಸಿದ ಹಿಟ್ಟು, ಸ್ವಲ್ಪ ಬೆಣ್ಣೆ, ಜೀರಿಗೆ, ಲವಂಗ, ದಾಲ್ಚಿನ್ನಿ ತುಂಡುಗಳು, ಉಪ್ಪು, ಆಲಿವ್ ಎಣ್ಣೆ , ಮೆಣಸಿನ ಕಾಳು. 
 
ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.  ಬಿಸಿಯಾದ ನಂತರ ಅದಕ್ಕೆ ಎಲ್ಲ ಗರಂ ಮಸಾಲೆ ಹಾಕಿ ಸ್ವಲ್ಪ ಹೊತ್ತು ಕೈಯಾಡಿಸಿ. ಇನ್ನೊಂದು ನಾನ್‌ಸ್ಟಿಕ್‌ ಪಾತ್ರೆಯಲ್ಲಿ ಹಿಟ್ಟು ಮತ್ತು ಬೆಣ್ಣೆಯನ್ನು ಹಾಕಿ ಪೇಸ್ಟ್‌ ಮಾಡಿಕೊಂಡು ಪಕ್ಕಕ್ಕಿಡಿ.
 
ಈಗ ಕತ್ತರಿಸಿದ ಈರುಳ್ಳಿಯನ್ನು ಹಾಕಿ  ಸ್ವಲ್ಪ ಹೊತ್ತು ಹುರಿಯಿರಿ. ನಂತರ ಅದಕ್ಕೆ  ಶುಂಠಿ ಹಾಗೂ ಹಸಿಮೆಣಸು ಹಾಕಿ ಕಲಕಿ. ಉರಿ ಕಡಿಮೆ ಮಾಡಿ ಕತ್ತರಿಸಿದ ಟೊಮೆಟೊ ಸೇರಿಸಿ  15 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಬೆಣ್ಣೆ ಮತ್ತು ಹಿಟ್ಟಿನ ಪೇಸ್ಟ್‌ ಸೇರಿಸಿ ಮತ್ತಷ್ಟು ಬೇಯಿಸಿ. 
**
ತೆಂಗಿನಕಾಯಿ ಝಫ್ರಾನಿ ಶೋರ್ಬಾ
ತಯಾರಿ ಸಮಯ: 16ರಿಂದ 20 ನಿಮಿಷ
ಅಡುಗೆ ತಯಾರಿ ಸಮಯ: 26ರಿಂದ 30 ನಿಮಿಷ
ಅಳತೆ: 4 ಜನರಿಗೆ
 
ಬೇಕಾಗುವ ಸಾಮಗ್ರಿಗಳು: ತೆಂಗಿನಕಾಯಿ ಪುಡಿ 4 ಚಮಚ, ತೆಂಗಿನಕಾಯಿ ಹಾಲು 2 ಕಪ್‌. 3–4 ಕತ್ತರಿಸಿದ ಕ್ಯಾರೆಟ್‌, ಎಣ್ಣೆ ಒಂದು ಚಮಚ, ಒಂದೆರಡು ಕಪ್ಪು ಮೆಣಸಿನಕಾಳು, ಒಂದು ಫೆನ್ನೆಲ್, ಒಂದೆರಡು ದಾಲ್ಚಿನ್ನಿ ತುಂಡುಗಳು, ಸ್ವಲ್ಪ ಶುಂಠಿ, ಸ್ವಲ್ಪ ಕೊತ್ತಂಬರಿ,  ಎರಡು ಹಸಿಮೆಣಸಿನಕಾಯಿ, ಸ್ವಲ್ಪ ಬೆಣ್ಣೆ, ಸಂಸ್ಕರಿಸಿದ ಹಿಟ್ಟು, ಉಪ್ಪು, ಕೇಸರಿ, ನಿಂಬೆ ಎಲೆಯ ರಸ.
 
ತಯಾರಿಸುವ ವಿಧಾನ: ಐದು ಕಪ್‌ ಬಿಸಿ ನೀರಿನಲ್ಲಿ ಕತ್ತರಿಸಿದ ತೆಂಗಿನಕಾಯಿ ತುಂಡುಗಳನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಿ.   ತುಪ್ಪದ ಒಗ್ಗರಣೆ ಕೊಟ್ಟುಕೊಳ್ಳಿ. ಈಗ ಅದಕ್ಕೆ ತೆಂಗಿನ ಹಾಲಿನ ಮಿಶ್ರಣವನ್ನು ಸೇರಿಸಿ ಕುದಿಸಿ. 3ರಿಂದ 4 ನಿಮಿಷ ಕುದಿಸಿ. 
 
ಒಂದು ಪಾತ್ರೆಯಲ್ಲಿ ಹಿಟ್ಟು ಮತ್ತು ಬೆಣ್ಣೆಯನ್ನು ಹಾಕಿ ಪೇಸ್ಟ್‌ ಮಾಡಿಕೊಳ್ಳಿ. ನಂತರ ಅದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ. ತೆಂಗಿನಕಾಯಿ ಪುಡಿ ಮತ್ತು ಅರ್ಧ ಕಪ್‌ ನೀರು ಸೇರಿಸಿ ಅದನ್ನೂ ಮಿಕ್ಸ್‌ಗೆ ಸೇರಿಸಿ. ನಂತರ ನಿಂಬೆ ಎಲೆ, ತಾಜಾ ಕೊತ್ತುಂಬರಿ ಮತ್ತು ಕೇಸರಿಯನ್ನೂ ಸೇರಿಸಿ ಚೆನ್ನಾಗಿ ಕುದಿಸಿ. ಸ್ವಲ್ಪ ಬೆಂದ ಮೇಲೆ ಅದರಿಂದ ದಾಲ್ಚಿನ್ನಿಯನ್ನು ತೆಗೆದುಹಾಕಿ, ಮಿಕ್ಕಿದ್ದನ್ನು ಮತ್ತೆ ಕುದಿಸಿ. ಬಿಸಿ ಇರುವಾಗಲೇ ಬಡಿಸಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT