ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಾ ಎಂಬ ಮಾತಿಗಿಂತ...

Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಸುಮಾರು 20 ವರ್ಷಗಳ ಹಿಂದಿನ ಮಾತು. ನನ್ನ ನಾಲ್ಕು ವರ್ಷದ ಪುಟಾಣಿ ತಮ್ಮ ಪಕ್ಕದ ಮನೆಯ ಅಂಗಳದಲ್ಲಿ ಬಿಸಿಲಿನಲ್ಲಿ ಒಣಗಿಸಿಟ್ಟ ಶುಂಠಿ ತೆಗೆದುಕೊಂಡು ಬಂದಿದ್ದ. ಅಮ್ಮನಿಗೆ ತೋರಿಸಿ ‘ಇದನ್ನು ತಂಬುಳಿ ಮಾಡು’ ಎಂದ. ಅಮ್ಮ ಕೇಳಿದರು. ‘ನಿನಗೆ ಇದನ್ನು ಯಾರು ಕೊಟ್ಟರು?’.‘ಪಕ್ಕದ ಮನೆಯ ಅಂಗಳದಲ್ಲಿ ಒಣಹಾಕಿದ್ದರು, ತಂದೆ’ ತಮ್ಮನ ಉತ್ತರ ಸಿದ್ಧವಾಗಿತ್ತು. ತಕ್ಷಣ ಅಮ್ಮನ ಕಣ್ಣು ಕೆಂಪಾಯಿತು, ನೋಡನೋಡುತ್ತಿದ್ದಂತೆಯೇ ತಮ್ಮನಿಗೆ ಎರಡೇಟು ಬಿತ್ತು. ಜೋರಾಗಿ ಅಳುತ್ತಿದ್ದ ತಮ್ಮನಿಗೆ ಹೇಳಿದರು: ‘ನೋಡು ಇದು ನಮ್ಮ ಮನೆದಲ್ಲ, ನಮ್ಮದಲ್ಲದ ವಸ್ತುವನ್ನು ಮುಟ್ಟುಲಾಗ, ಹೋಗು ಮೊದ್ಲು ಇದನ್ನು ಕೊಟ್ಟು ಬಾ, ಪಕ್ಕದ ಮನೆ ಅತ್ತೆ ಹತ್ರ ತಪ್ಪಾತು ಹೇಳಿ ಕೇಳು’. ತಮ್ಮ ಮತ್ತೂ ಅಳುತ್ತ ಹೇಳಿದ, ‘ನಾನು ತಂದದ್ದು ಅಕೊಕ್ಕೆ ಗುತ್ತಿಲ್ಲೆ, ಅಕೊಕ್ಕೆ ಕಾಣದಂತೆ ತಕ ಬಂದೆ’. ಅಮ್ಮನ ಕೋಪ ಮತ್ತೂ ಜಾಸ್ತಿಯಾಯಿತು, ‘ಗುತ್ತಿಲ್ಲಿಗಿದ್ದೆ ಎತ್ಕ ಬಂದ್ಯಾ? ಭಡವಾ.. ಹೋಗು ತಪ್ಪಾತು ಹೇಳಿ ಕೊಟ್ಟಿಕಿ ಬಾ’. ಅಕ್ಷರಶಃ ಅಮ್ಮ ಚೀರಿದ್ದರು. ತಮ್ಮ ಹೊಡೆತದ ಭಯಕ್ಕೆ ಅವರ ಮನೆಯ ಅಂಗಳಕ್ಕೆ ಹೋಗಿ ಶುಂಠಿ ಇಟ್ಟು ಜೋರಾಗಿ ‘ತಪ್ಪಾತೋ’ ಎಂದು ಕೂಗಿ ಹೇಳುತ್ತಾ ಮನೆಗೆ ಓಡಿ ಬಂದಿದ್ದ. ವಿಷಯ ಏನೆಂದು ತಿಳಿಯದ ಪಕ್ಕದ ಮನೆಯ ಅತ್ತೆ ಅಮ್ಮನನ್ನು ಕೇಳಿದ್ದರು. ‘ಅವನು ಎಂತಕ್ಕೆ ಅಳುತ್ತಾ ಒಡಿಹೋದದ್ದು?’. ಅಮ್ಮ ಅವನು ಮಾಡಿದ್ದೆಲ್ಲವನ್ನೂ ಹೇಳಿದ್ದರು. ‘ಪಾಪ ಸಣ್ಣ ಮಾಣಿ, ನೀ ಎಂತಕ್ಕೆ ಹಾಂಗೆ ಹೇಳದ್ದು? ತಂಬಳಿ ಮಾಡಿಕೊಟ್ರೆ ಅಗ್ತಿತ್ತಿಲ್ಯಾ?’. ‘ಅವ ತಪ್ಪು ಮಾಡಿದ್ದ, ಅದ್ಕೆ ಹೇಳ್ದೆ, ಅವ ಇನ್ನೊಂದು ಸಲ ಹಾಂಗೆ ಮಾಡುಲಾಗ’. ಅಮ್ಮನ ಉತ್ತರ ಸಿದ್ಧವಾಗಿತ್ತು.
 
ಇನ್ನೊಂದು ಅಂಥದ್ದೇ ಪ್ರಸಂಗ, ತಮ್ಮ ಬಹುಶಃ 7ನೇ ಕ್ಲಾಸು ಓದುತ್ತಿದ್ದ ಸಮಯ. ಕೈಗೆ ಕಟ್ಟಿಕೊಂಡು ಬಂದಿದ್ದ ಯಾರದ್ದೋ ವಾಚು ಹಾಳಾಗಿತ್ತು. ಅದನ್ನು ತಮ್ಮನೇ ಮಾಡಿದ್ದಾನೆಂದು ಆರೋಪ ಹೊರಿಸಿ ನೀನೇ ಅದನ್ನು ರಿಪೇರಿ ಮಾಡಿಸಿಕೊಂಡು ಬಾ ಎಂದು ಕೈಯ್ಯಲ್ಲಿ ಕೊಟ್ಟು ಕಳುಹಿಸಿದ್ದರು. ತಮ್ಮ ತಾನು ಆ ವಾಚನ್ನು ಹಾಳು ಮಾಡಿಲ್ಲವೆಂದರೂ ಯಾರೂ ಕೇಳಿರಲಿಲ್ಲ. ತಮ್ಮ ಅಳುತ್ತಾ ವಾಚನ್ನು  ಕೈಯ್ಯಲ್ಲಿ ಹಿಡಿದುಕೊಂಡು ಮನೆಗೆ ಬಂದಿದ್ದ. ಅಮ್ಮ ಕೇಳಿದ್ದರು, ವಾಚು ಯಾರದ್ದು? ಯಾಕೆ ತಂದೆ? ಯಾಕೆ ಅಳುತ್ತಿದ್ದೀಯಾ?... ತಮ್ಮ ನಡೆದ ವಿಷಯ ಹೇಳಿದ್ದ. ಅಮ್ಮ ಹೇಳಿದ್ದರು, ನಿಜಕ್ಕೂ ನೀನು ತಪ್ಪು ಮಾಡಿಲ್ಲವೇ? ಅಮ್ಮನೂ ತನ್ನನ್ನು ನಂಬುತ್ತಿಲ್ಲವೆಂದೆನಿಸಿ ತಮ್ಮನ ಅಳು ಜೋರಾಯಿತು. ಅವತ್ತೂ ಅವನನ್ನು ಅಮ್ಮ ಚೆನ್ನಾಗಿ ಬೈದಿದ್ದರು.  ‘ನಿನಗೆ ನಾಚಿಕೆಯಾಗುವುದಿಲ್ಲವೇ? ನಿನ್ನದಲ್ಲದ ತಪ್ಪನ್ನು ಯಾಕೆ ಒಪ್ಪಿಕೊಂಡೆ? ವಾಚನ್ನು ಮೊದಲು ಯಾರದ್ದೋ ಅವರಿಗೆ ಕೊಟ್ಟುಬಿಡು ಮತ್ತೆ ಈ ತಪ್ಪು ನಾನು ಮಾಡಿಲ್ಲ ಅಂತ ಹೇಳು’ ಅಂತ. ತಮ್ಮ ಅಳುತ್ತಾ ನೀನು ಅಥವಾ ಅಪ್ಪ ಬಂದು ಹೇಳಿ, ನಾನು ಹೇಳಿದರೆ ಅವರು ಕೇಳುವುದಿಲ್ಲ ಎಂದ. ‘ನೋಡು ಇದು ನಿನ್ನ ಸಮಸ್ಯೆ, ನೀನೇ ಪರಿಹರಿಸಿಕೊಳ್ಳಬೇಕು, ಹಾಗೊಂದು ವೇಳೆ ನೀನು ಮತ್ತೆ ತಪ್ಪು ಒಪ್ಪಿಕೊಂಡು ಬರುವುದಾದರೆ ಮನೆಗೆ ಬರಬೇಡ’ – ಅಂತ ಅಮ್ಮ ಹೇಳಿದರು. ಮರುದಿನ ತಮ್ಮ ಸಮಸ್ಯೆ ಪರಿಹರಿಸಿಕೊಂಡು ಬಂದ. ಅಮ್ಮನ ಮುಖದಲ್ಲಿ ಗೆಲುವಿತ್ತು.  
 
ಆದರೆ ಈಗ ಕಾಲ ಬದಲಾಗಿದೆ; ನನ್ನ ಅಮ್ಮ ಅಜ್ಜಿಯಾಗಿದ್ದಾರೆ. ಪುಟ್ಟ ಪ್ರಣವನ ಸ್ಕೂಲ್ ಬ್ಯಾಗಿನಲ್ಲಿ ಯಾರದ್ದೋ ಪೆನ್ಸಿಲ್ ನೋಡಿ ನಾನೂ ಇದೇ ರೀತಿ ಕೂಗಾಡಿದ್ದೇನೆ. ಅಮ್ಮ ಹಾಕಿಕೊಟ್ಟ ಗೆರೆಯಲ್ಲೇ ಮಗುವನ್ನು ಬೆಳೆಸಬೇಕೆಂಬ ಸದಾಶಯವೂ ಇದೆ.
 
ಇವತ್ತಿಗೂ ಮೇಲಿನ ಎರಡು ಘಟನೆಗಳು ಆವಗಾವಾಗ ನೆನಪಾಗುತ್ತವೆ, ಅಮ್ಮ ಈ ಎರಡೂ ಘಟನೆಯನ್ನು ಎಷ್ಟು ಚೆನ್ನಾಗಿ ನಿಭಾಯಿಸಿದ್ದರು! ಇದು ಒಬ್ಬ ಸಮರ್ಥ ತಾಯಿಯ ಜವಾಬ್ದಾರಿಯುತ ನಡವಳಿಕೆ. ಇದು ನಿಜವಾದ ತಾಯ್ತನ ಅಂತ ನನಗನಿಸುತ್ತದೆ.                                                                                                                        
ಒಮ್ಮೆ ಅಮ್ಮ ನಮ್ಮನ್ನು ತೋಟಕ್ಕೆ ಕರೆದುಕೊಂಡು ಹೋಗಿದ್ದರು. ಮುಳ್ಳೆಹಣ್ಣಿಗಾಗಿ ಬೇಣ ಅಲೆದಾಡಿದ್ದೆವು. ಅಲ್ಲೊಂದು ಪುಟ್ಟ ಹಕ್ಕಿ ಗೂಡಿತ್ತು. ತಾಯಿಹಕ್ಕಿ ಮೊಟ್ಟೆಗೆ ಕಾವು ಕೊಡುತ್ತಿತ್ತು, ಅಮ್ಮ ನಮ್ಮನ್ನು ಆ ಕಡೆ ಹೋಗಲು ಬಿಡಲಿಲ್ಲ. ಅಮ್ಮನ ಮೇಲೆ ಕೆಟ್ಟ ಕೋಪ ಬಂದಿತ್ತು. ಅಮ್ಮನ ಕಣ್ಣು ತಪ್ಪಿಸಿ ವಿನು ತುಂಬ ದೂರ ಹೋಗಿದ್ದ, ನಾವೆಲ್ಲ ಮನೆಗೆ ಬಂದರೂ ಅವನ ಸುಳಿವಿಲ್ಲ. ಅರ್ಧಗಂಟೆ ಕಳೆದ ಮೇಲೆ ಬಂದ. ಕೈಯ್ಯಲ್ಲಿ ಮೂರು ಪುಟ್ಟ ಪುಟ್ಟ ನವಿಲುಮರಿ, ಇನ್ನೂ ಸರಿಯಾಗಿ ಕಣ್ಣು ಕೂಡಾ ಬಿಡದವು.  ‘ಅಮ್ಮಾ ನಾನಿದನ್ನು ಸಾಕುತ್ತೇನೆ’ ವಿನು ಆಸೆಯಿಂದ ಹೇಳಿದ. ಅಮ್ಮ ಒಮ್ಮೆಗೇ ಕಠಿಣಳಾದಳು. ‘ಎಲ್ಲಿಂದ ತಂದ್ಯೋ ಇದ್ನ? ಇಷ್ಟು ಪುಟ್ಟ ಮರಿ, ಇನ್ನೂ ಕಣ್ಣು ಕೂಡ ಬಿಟ್ಟಿಲ್ಲ, ತಾಯಿಯಿಂದ ಮಕ್ಕಳನ್ನು ಅಗಲಿಸಬಾರದು, ಹೋಗು ಅದರ ಅಮ್ಮನ ಹತ್ತಿರ ಬಿಟ್ಟು ಬಾ’. ವಿನು ಹಾಗೇ ಮಾಡಿದ. ಮಕ್ಕಳನ್ನು ಅಮ್ಮನಿಂದ ಅಗಲಿಸಬಾರದೆಂಬ ಪಾಠವನ್ನು ಅಮ್ಮ ಅವತ್ತು ಮಾಡಿದ್ದರು. ಪುಟ್ಟ ಮಗನಿಗೂ ಅದೇ ಪಾಠ ಮಾಡಬೇಕೆನಿಸುತ್ತದೆ. ಬೆಂಗಳೂರಿನ ಕಾಡಿನಲ್ಲಿ ಹಕ್ಕಿಗಳನ್ನು ಎಲ್ಲಿಂದ ತರೋಣ? ಡೇ–ಕೇರ್‌ನಲ್ಲಿ ನಾನೇ ಅವನನ್ನು ಬಿಟ್ಟು ಹೋಗುವಾಗಲೆಲ್ಲ ಅಮ್ಮನ ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ತಪ್ಪಿದ್ದೆಲ್ಲಿ? 
 
ಮತ್ತೆ ಬಾಲ್ಯದ ದಿನಗಳು ನೆನಪಾಗುತ್ತವೆ. ಮೊಟ್ಟಮೊದಲು ಅಕ್ಷರ ತಿದ್ದಿಸಿದ್ದು, ತಮ್ಮನಿಗೆ ‘ಇ’ ಬರೆಯಲಿಕ್ಕೆ ಬರುವುದಿಲ್ಲವೆಂದು ಸಿಟ್ಟುಮಾಡಿಕೊಂಡು ಗೋಡೆಗೆ ತಲೆ ಜಪ್ಪುತ್ತೇನೆ ಎಂದು ಹೆದರಿಸಿ ‘ಇ’ ಬರೆಯಲು ಕಲಿಸಿದ್ದು, ಮೊಟ್ಟಮೊದಲ ಹಾಡು ಕಲಿಸಿದ್ದು, ಮೊದಲ ಡಾನ್ಸ್ ಕಲಿಸಿದ್ದು, ಮೊದಲ ಭಾಷಣ ಬರೆದುಕೊಟ್ಟಿದ್ದು... ಮನೆಯಲ್ಲಿ, ಹೊರಗಡೆ ಹೆಣ್ಣುಮಕ್ಕಳು ಹೇಗೆ ಇರಬೇಕು ಎಂಬ ಸೂಕ್ಷ್ಮವನ್ನು ಹೇಳಿಕೊಟ್ಟಿದ್ದು... ಕ್ಲಾಸಲ್ಲಿ ಫಸ್ಟ್ ಬಂದಾಗ ಕಣ್ಣಂಚಲ್ಲಿ ನೀರು ತುಂಬಿ ದೇವರಿಗೆ ದೀಪ ಹಚ್ಚಿದ್ದು... ಮಕ್ಕಳು ಊಟ ಮಾಡಲಿಲ್ಲ ಎಂದು ತಾನು ಕೂತು ಕಾದಿದ್ದು... ಮದುವೆಯಾದ ಮೇಲೆ ಕೆಲಸ ಮಾಡುವುದು ಇದ್ದೇ ಇದೆ... ಈಗ ನನ್ನ ಮಗಳು ಆರಾಮಾಗಿ ಓದಿಕೊಳ್ಳಲಿ ಎಂದು ವಿದ್ಯೆ ಕಲಿಯಲು ಸಪೋರ್ಟ್‌ ಮಾಡಿದ್ದು, ಆಸ್ಪತ್ರೆಯಲ್ಲಿ ನನ್ನ ಮಗುವನ್ನು ನನಗಿಂತ ಮೊದಲು ಕೈಗೆತ್ತಿಕೊಂಡಿದ್ದು... ಎಲ್ಲ ಅಮ್ಮನೊಟ್ಟಿಗಿನ ನೆನಪುಗಳು... ಇವತ್ತಿಗೂ ನನಗಿಂತಲೂ ನನ್ನ ಬಗ್ಗೆ ಯೋಚಿಸುವವಳು ನನ್ನ ಅಮ್ಮ. ತಾಯ್ತನವನ್ನು ಸಂಪೂರ್ಣವಾಗಿ ಜವಾಬ್ದಾರಿ ಎಂದು ತಿಳಿದು ನಿಭಾಯಿಸುತ್ತಿರುವವಳು.
 
ಬದಲಾಯಿತೇ ತಾಯ್ತನ?
ಆದರೆ ಬದಲಾದ ಪರಿಸ್ಥಿತಿಯಲ್ಲಿ ಅಮ್ಮ ಎಂಬ ಪದದ ಅರ್ಥವೂ ಬದಲಾಗಿದೆ. ತಾಯ್ತನ ಎಂಬ ಪದ ತೀರಾ ಸಂಕುಚಿತ ಅರ್ಥವನ್ನು ಪಡೆದುಕೊಂಡು ಮೂರು ತಿಂಗಳೋ, ಆರು ತಿಂಗಳೋ ಹೊರುವುದೂ, ಹೆರುವುದೂ ಉಳಿದಂತೆ ನಾವು ಮಾಡುವ ಒಂದು ಕೆಲಸ ಎಂಬ ತೀರ್ಮಾನಕ್ಕೆ ಬಂದು ಮುಟ್ಟಿ ದಶಕಗಳೇ ಕಳೆದಿವೆ. ಇವತ್ತು ತಾಯಿಯಾದವಳು ಮಗುವನ್ನು ಹೊರಬೇಕಿಲ್ಲ, ಹೆರಬೇಕಿಲ್ಲ, ಎತ್ತಿ ಆಡಿಸಬೇಕಿಲ್ಲ, ಅಪ್ಪಿ ಮುದ್ದಾಡಬೇಕಿಲ್ಲ, ಲಾಲಿ ಹಾಡಬೇಕಿಲ್ಲ, ಸ್ನಾನ ಮಾಡಿಸಬೇಕಿಲ್ಲ, ಊಟದ ಡಬ್ಬಿ ಕಟ್ಟಬೇಕಿಲ್ಲ, ಅಕ್ಷರ ತಿದ್ದಿಸಬೇಕಿಲ್ಲ... ಇವಕ್ಕೆಲ್ಲ ಬೇರೆ ಬೇರೆ ಪರ್ಯಾಯಗಳಿವೆ. ಆದರೆ 20 ವರ್ಷ ಹಿಂದಿನ ನೀತಿ ಹೇಳುವ ತಾಯಿ ಬೇಕಾಗಿದ್ದಾಳೆ, ಎಲ್ಲಿ ಹುಡುಕೋಣ? 
ಕೆಲಸಕ್ಕೆ ಹೋಗುವ ಧಾವಂತದಲ್ಲಿ ಮಕ್ಕಳ ಸೂಕ್ಷ್ಮ ಬೆಳವಣಿಗೆಯನ್ನೇ ಗಮನಿಸದ ಅಸಹಾಯಕತೆಯಲ್ಲಿ ನಾವಿದ್ದೇವೆ. ಶೈಶವದ ಹಂತದಲ್ಲಿ ಯಾವ ಬಗೆಯ ಭಾವನಾತ್ಮಕ ಬೆಸುಗೆಯನ್ನೂ ಪಡೆಯದ ಮಗು ಮುಂದೆ ಹೇಗೆ ಬೆಳೆಯಬಹುದು? ತಾಯಿ ಅನ್ನುವುದಕ್ಕೆ ಅದರ ಮನಸ್ಸಿನಲ್ಲಿ ಯಾವ ತರದ ಭಾವನೆಗಳು ಬರಬಹುದು? ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ತೀರಾ ಅಪಾಯಕಾರಿಯಾದ ಆತಂಕಗಳನ್ನು ನಾವು ಎದುರಿಸಬೇಕಾದ ದಿನ ದೂರವಿಲ್ಲ ಎನಿಸುತ್ತದೆ. ಪ್ರಾಣಿಪ್ರಪಂಚದಲ್ಲಾದರೂ ಮೇಲಿನ ಹಂತಕ್ಕೆ ಬರುತ್ತಹೋದಂತೆ ಉತ್ತಮ ಕುಟುಂಬವ್ಯವಸ್ಥೆಯನ್ನು ಕಾಣುತ್ತೇವೆ. ಮನುಷ್ಯನ ಬದುಕೇಗೆ ಹೀಗೆ ಭಾವನಾತ್ಮಕ ಸಂಬಂಧವೆ ಇಲ್ಲದ ಕವಲು ದಾರಿಯ ಕಡೆ ಹೊರಳುತ್ತಿದೆ! 
 
ಎರಡು ವರ್ಷದ ಹಿಂದೆ ಮನಸ್ಸಿನಲ್ಲಿ ಉಳಿದುಬಿಡಿವ ಘಟನೆಯೊಂದು ತರಗತಿಯಲ್ಲಿ ನಡೆಯಿತು. ಬಿ.ಬಿ.ಎಂ. ಓದುತ್ತಿದ್ದ ವಿದ್ಯಾರ್ಥಿಯಿಂದ ಪ್ರಶ್ನೆಯೊಂದು ತೂರಿ ಬಂದಿತ್ತು, ‘ಮೇಡಂ, ಮಾತೃಭೂಮಿ ಎಂದರೇನು? ಯಾಕೆ ಮಾತೃಭೂಮಿ ಎಂದು ಕರೆಯುತ್ತಾರೆ?’ ಪ್ರಶ್ನೆಗೆ ತಕ್ಕ ಸಮಾಧಾನಕರ ಉತ್ತರವನ್ನೇನೋ ಕೊಟ್ಟಿದ್ದೆ, ಆದರೆ ನಿಜಕ್ಕೂ ಪ್ರಶ್ನೆಯಿಂದ ಆಘಾತ ಹೊಂದಿದ್ದೆ. ಬಿ.ಬಿ.ಎಂ. ಓದುವ ಹಂತಕ್ಕೆ ಒಂದು ಮಗು ಬರುವವರೆಗೂ ‘ಮಾತೃಭೂಮಿ’ ಅನ್ನುವ ಪದದ ಪರಿಕಲ್ಪನೆಯನ್ನೇ ಬೆಳೆಸಲು ಸಾಧ್ಯವಾಗಲಿಲ್ಲವೆಂದ ಮೇಲೆ ಶಿಕ್ಷಣ ಕೊಡುವುದರಿಂದ ಏನು ಪ್ರಯೋಜನ ಎಂದು ಕೊರಗಿದ್ದೆ, ಕೊನೆಗೆ ಗೊತ್ತಾಗಿದ್ದು ಆ ವಿದ್ಯಾರ್ಥಿಗೆ ತಾಯ್ನಾಡು, ತಾಯ್ನುಡಿ, ಜನ್ಮಭೂಮಿ ಎಂಬ ಪದದ ಅರ್ಥಗಳೂ ಗೊತ್ತಿರಲಿಲ್ಲ, ಯಾಕೆಂದರೆ ಅವನಿಗೆ ಅವನ ತಾಯಿಯ ಜೊತೆ ಭಾವನಾತ್ಮಕ ಸಂಬಂಧವೇ ಇರಲಿಲ್ಲ. 
 
ಸಾಮಾನ್ಯವಾಗಿ ತಾಯಿಯ ಜೊತೆ ಬೆಸುಗೆ ಇದ್ದ ಮಗು ತಾಯಿಯನ್ನು ಕೇಂದ್ರವನ್ನಾಗಿಟ್ಟುಕೊಂಡ ಇಂತಹ ಸಾಂಸ್ಕೃತಿಕ ಅರ್ಥಗಳನ್ನೆಲ್ಲ ಬೇಗ ಗ್ರಹಿಸುತ್ತದೆ; ಅದಕ್ಕೆ ವೇಗವಾಗಿ ಪ್ರತಿಕ್ರಯಿಸುತ್ತದೆ. ಒಂದು ಎರಡನೆಯ ತರಗತಿಯ ಹಂತದಲ್ಲಿಯೇ ಮಗು ಅದನ್ನು ಗ್ರಹಿಸುವ ಸಾಮರ್ಥ್ಯ ಪಡೆಯುತ್ತದೆ. ಆದರೆ ಆ ವಿದ್ಯಾರ್ಥಿಯ ವಿಷಯದಲ್ಲಿ ಹಾಗಾಗಿರಲಿಲ್ಲ. ಆ ವಿದ್ಯಾರ್ಥಿಯ ಪರಿಸ್ಥಿತಿಗೆ ಮರುಕ ಪಡುವ ಸ್ಥಿತಿ ನನ್ನದಾಯಿತು. 
 
 
ತಾಯ್ತನ ಎನ್ನುವುದು ಕೇವಲ ಒಂದು ವರ್ಷದ ಅಥವಾ ಕೇವಲ ಮಗುವಿನ ಬಾಲ್ಯದ ಜವಾಬ್ದಾರಿಯಲ್ಲ, ಹೊಟ್ಟೆಯಲ್ಲಿ ಹೊರುವ ತಾಯಿ ತನ್ನ ಜೀವನದುದ್ದಕ್ಕೂ ತನ್ನ ಮಗುವನ್ನು ಮನಸ್ಸಿನಲ್ಲಿ ಹೊರುತ್ತಾಳೆ. ಸಂದರ್ಭಕ್ಕೆ ತಕ್ಕ ಹಾಗೆ ತಾಯಿ ತನ್ನ ಮಗುವಿನ ಬಗ್ಗೆ ಸಂತೋಷಿಸುತ್ತಾಳೆ, ದುಃಖಿಸುತ್ತಾಳೆ, ಆತಂಕಗೊಳ್ಳುತ್ತಾಳೆ, ಹಾರೈಸುತ್ತಾಳೆ, ತಿದ್ದುತ್ತಾಳೆ, ಸಹಾಯ ಮಾಡುತ್ತಾಳೆ. ಒಂದು ಸಲ ತಾಯಿಯ ಹೊಟ್ಟೆಗೆ ಬಿದ್ದ ಮಗು ಒಂಬತ್ತು ತಿಂಗಳ ನಂತರ ದೈಹಿಕವಾಗಿ ತಾಯಿಯ ಉಡಿಯಿಂದ ದೂರವಾದರೂ ತಾಯಿಯ ಮಟ್ಟಿಗೆ ಮಾನಸಿಕವಾಗಿ ಅವಳ ಉಡಿಯಲ್ಲೇ ಇರುತ್ತದೆ. ಅದು ತಾಯಿ ಹೊರುವ ಜವಾಬ್ದಾರಿ. ಅದಕ್ಕೇ ಅದನ್ನು ‘ತಾಯ್ತನ’ ಅನ್ನುವುದು. ವ್ಯಾಪಕ ಅರ್ಥದಲ್ಲಿ ತಾಯ್ತನ ಇಡೀ ತಾಯಿ ಜೀವನದ ಪ್ರಕ್ರಿಯೆ. ನಿರಂತರತೆ ಅದರ ಗುಣ.

ಆದರೆ ಆಧುನಿಕ ಸಂಸ್ಕೃತಿ ‘ತಾಯ್ತನ’ವನ್ನೂ ಎರವಲು ಪಡೆಯುವ ಅವಕಾಶ ಕಲ್ಪಿಸಿದೆ. ಹೊರುವ, ಹೆರುವ ಕೆಲಸವನ್ನೂ ಬೇರೆಯವರಿಗೆ ಒಪ್ಪಿಸಿ, ಸಾಕುವ ಜವಾಬ್ದಾರಿಯನ್ನೂ ಹೆರವರ ಪಾಲಿಗೆ ಹಾಕಿ ‘ತಾಯಿ’ ಎನ್ನಿಸಿಕೊಳ್ಳಬಹುದು. ಆದರೆ ಆಮೇಲೆ ಮಗು ಕೇಳುವ ನೈತಿಕತೆಯ ಪ್ರಶ್ನೆಗೆ ಇಂತಹ ಸಂಸ್ಕೃತಿಯಲ್ಲಿ ಉತ್ತರ ಉಳಿಯಲಿಕ್ಕಿಲ್ಲ. ಅಸಲು ನೈತಿಕತೆ ಎಂಬ ಪ್ರಶ್ನೆಯೇ ಅಪ್ರಸ್ತುತ ಎನ್ನಿಸಲೂಬಹುದು. ಜನನಿ, ಜನ್ಮಭೂಮಿ, ತಾಯ್ನಾಡು, ಮಾತೃಭಾಷೆ ಎಂಬ ಪದಗಳೆಲ್ಲ ಅರ್ಥ ಕಳೆದುಕೊಂಡಾವು. ತಲೆತಲಾಂತರದಿಂದ ಆರೋಗ್ಯವಂತ ಸಮಾಜದ ಹೊಣೆಯನ್ನು ಹೊತ್ತಿರುವ ತಾಯಿಯನ್ನು ಕೊಡುಕೊಳ್ಳುವ ವ್ಯಾಪಾರೀ ಪರಿಸ್ಥಿತಿಯ ಮಟ್ಟಕ್ಕೆ ಇಳಿಸಿರುವುದು ಒಂದು ಸಂಸ್ಕೃತಿಯ ದೃಷ್ಟಿಯಿಂದ ತೀರಾ ಅಪಾಯಕಾರಿ. ಲಿವಿಂಗ್ ಟುಗೆದರ್, ಬಾಡಿಗೆ ತಾಯಂದಿರ ಕಾಲಕ್ಕಿಂತ, ಕೆಲಸ ಮಾಡಿ ದಣಿದು ಬಂದ ಮಗನ ತಲೆಗೆ ಬೇಡವೆಂದು ಜಗಳ ಮಾಡಿದರೂ ಎಣ್ಣೆ ತಿಕ್ಕುವ, ಮಗಳು ಬರುತ್ತಾಳೆಂದು ಒಬ್ಬಟ್ಟು ಮಾಡಿ ಕಾಯುವ, ಪುಟ್ಟ ಮಗುವಾಗಿದ್ದಾಗಿನ ಮಗುವಿನ ಬೂಟನ್ನೋ, ಕಾಲುಚೀಲವನ್ನೋ, ಮೊದಲು ಬಿಡಿಸಿದ ಚಿತ್ರವನ್ನೋ, ಸೊಟ್ಟುಸೊಟ್ಟಾಗಿ ಮಗು ಬರೆದ ಮೊದಲ ಅಕ್ಷರವನ್ನೋ ಕಾಪಿಟ್ಟು ಆಮೇಲೆ ತೋರಿಸಿ ಖುಷಿ ಪಡುವ ತಾಯಿಯೇ ಹೆಚ್ಚು ಅಪ್ಯಾಯಮಾನವಾಗುತ್ತಾಳೆ.

ಕೊನೆಯಲ್ಲಿ... ತಾಯಿ ಹೃದಯವುಳ್ಳ ಎಲ್ಲ ಸುಸಂಸ್ಕೃತ ಮನಸ್ಸುಗಳಿಗೆ ಒಂದು ಸಲಾಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT