ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗಣ್ಣು ತೆರೆಯಲಿ

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ
Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕರ್ನಾಟಕದ ಅಸ್ಪೃಶ್ಯ ಜಾತಿಗಳಲ್ಲಿ ಒಂದಾದ ಮಾದಿಗ ಜಾತಿ ಸಂಘಟನೆಗಳು ಕರ್ನಾಟಕದಲ್ಲಿ ಮೀಸಲಾತಿ ವರ್ಗೀಕರಣದ ಹೋರಾಟ ಕೈಗೆತ್ತಿಕೊಂಡಿವೆ. ಮಾದಿಗ ಜಾತಿಯೇ ಮುಂಚೂಣಿಯಲ್ಲಿರುವುದಕ್ಕೆ ಕಾರಣವೇನೆಂಬುದು ಯಕ್ಷಪ್ರಶ್ನೆಯೇನಲ್ಲ. ಹಸಿದವನು ಅನ್ನಕ್ಕೆ, ಬಾಯಾರಿದವನು ನೀರಿಗೆ ಬೊಗಸೆಯೊಡ್ಡುವಂತೆ ಮಾದಿಗ ಜಾತಿ ಸಾಮಾಜಿಕ ನ್ಯಾಯಕ್ಕಾಗಿ ಎದ್ದುನಿಂತಿದೆ. ಮಾದಿಗ ಜಾತಿಯ ಸಾಮಾಜಿಕ ಬದುಕಿನ ಅಧ್ಯಯನದಿಂದ ಬೆಳಕಿಗೆ ಬಂದ ಚಾರಿತ್ರಿಕ ಅಂಶಗಳು ಒಳಮೀಸಲಾತಿ ಹೋರಾಟದ ಆಶಯವನ್ನು ವಿವರಿಸಿಕೊಳ್ಳಲು ನೆರವಾಗುತ್ತವೆ.

ಆದಿಯಿಂದಲೂ ಮಾದಿಗ ಜಾತಿ ಜನರು ಸತ್ತ ದನ ಹೊರುವುದು, ಅದರ ಚರ್ಮ ಸುಲಿಯುವುದು, ಮಾಂಸ ತಿನ್ನುವುದಲ್ಲದೆ ಪ್ರಮುಖವಾಗಿ ಚಮ್ಮಾರಿಕೆ ಕಾಯಕವನ್ನು ನಂಬಿ ಬದುಕುತ್ತಿದ್ದರು. ವೈದಿಕ ಚಹರೆಗಳ ಸೋಂಕಿಲ್ಲದ ಕಾಯಕ ಇದಾಗಿತ್ತು. ಇದು ಅತ್ಯಂತ ಕೀಳು ವೃತ್ತಿ ಎಂಬ ಸಾಮಾಜಿಕ ನಿಲುವು ಮಾದಿಗ ಜಾತಿಯನ್ನು ಮಾನವ ಘನತೆಯಿಂದ ವಂಚಿಸಿತ್ತು. ಇದು ಜಾತಿ ವ್ಯವಸ್ಥೆಯ ಚರಿತ್ರೆಯ ಭಾಗ. ವರ್ತಮಾನದಲ್ಲಿ ಮಾದಿಗ ಜಾತಿಯ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿನ ಬದುಕು ಮತ್ತು ಸ್ಥಾನಮಾನದಲ್ಲಿ ಅಂತಹ ಗಮನಾರ್ಹ ಬದಲಾವಣೆ ಏನೂ ಆಗಿಲ್ಲವೆಂಬುದು ಒಳಮೀಸಲಾತಿ ಹೋರಾಟಕ್ಕೆ ಹಿಡಿದ ಕನ್ನಡಿ (ಮೇಲಿನ ಎಲ್ಲ ವಿವರಗಳು ಮಾದಿಗ ಜಾತಿಯ ಕಾಯಕದ ಘನತೆಯನ್ನು ಹೇಳುತ್ತವಲ್ಲದೆ, ಕೀಳರಿಮೆಯನ್ನಲ್ಲ).

ಈಗ ಒಂದು ರೂಪಾಯಿ ನಮ್ಮ ಕೈಲಿದೆ ಎಂದು ತಿಳಿಯಿರಿ. ಒಂದು ರೂಪಾಯಿಯನ್ನು ಇಬ್ಬರಿಗೆ ಸಮಾನವಾಗಿ ಹಂಚಿದರೆ ತಲಾ ಎಂಟಾಣೆ ಬರುತ್ತದೆ. ಬದಲಿಗೆ ಒಬ್ಬನಿಗೆ ನಾಲ್ಕಾಣೆ, ಇನ್ನೊಬ್ಬನಿಗೆ ಹನ್ನೆರಡಾಣೆ ಎಂದಾದರೆ ಇದು ತಾರತಮ್ಯ ನೀತಿಯಲ್ಲವೆ? ಸಂವಿಧಾನದತ್ತವಾದ ಶೇ 15ರ ಪ್ರಮಾಣದ ಮೀಸಲಾತಿ ಹಂಚಿಕೆಯಲ್ಲಿ ಹೊಲೆಮಾದಿಗರ ನಡುವೆ ಈ ಬಗೆಯ ತಾರತಮ್ಯ ಇದೆ ಎಂಬ ಅತೃಪ್ತಿ ಒಳಮೀಸಲಾತಿ ಹುಟ್ಟಿಗೆ ಕಾರಣವಾಗಿದೆ. ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಅವಕಾಶ ಸಮನಾಗಿ ಹಂಚಿಕೆಯಾಗಬೇಕೆಂಬುದು  ಒಳಮೀಸಲಾತಿ ಹೋರಾಟದ ಹಿಂದಿನ ತರ್ಕ ಮತ್ತು ತತ್ವ.
ಕರ್ನಾಟಕದ ಅಸ್ಪೃಶ್ಯ ಜಾತಿಗಳ ಜನಸಂಖ್ಯೆಯಲ್ಲಿ ಮಾದಿಗ ಜಾತಿ ಸಂಖ್ಯಾಬಲ ಹೊಲೆಯ ಜಾತಿಗಿಂತಲೂ ಹೆಚ್ಚಿಗೆ ಇದೆ. ಆದರೆ ಶಿಕ್ಷಣ, ವಾಣಿಜ್ಯ, ರಾಜಕೀಯ ಅಧಿಕಾರ, ಭೂಒಡೆತನ ಮುಂತಾದ ಕ್ಷೇತ್ರಗಳಲ್ಲಿ ಮಾದಿಗ ಜಾತಿಗೆ ಜನಸಂಖ್ಯೆಗೆ ಅನುಗುಣವಾಗಿ ಅವಕಾಶಗಳು ಸಿಕ್ಕಿಲ್ಲ.

ಮಾದಿಗ ಜಾತಿಗಿಂತ ಕಡಿಮೆ ಇರುವ ಹೊಲೆಯ ಸಮುದಾಯಕ್ಕೆ ಮೇಲೆ ಹೇಳಿದ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚು ಅವಕಾಶಗಳು ಹೇಗೆ ದಕ್ಕಿದವು? ಇದು ನಾಲ್ಕಾಣೆ, ಹನ್ನೆರಡಾಣೆ ಹಂಚಿಕೆಯ ಕತೆಯಲ್ಲದೆ ಮತ್ತೇನು? ಆದ್ದರಿಂದ ಜಾತಿವಾರು ಜನಗಣತಿಯಾಗಬೇಕು.  ಶೇ15 ಪ್ರಮಾಣದ ಮೀಸಲಾತಿ ಎರಡು ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಬೇಕು ಮಾತ್ರವಲ್ಲದೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ನೂರೊಂದು ಜಾತಿಗಳಿಗೂ ಸಮಪಾಲು ಸಿಗಬೇಕೆಂದು ಎರಡು-ಮೂರು ದಶಕಗಳಿಂದಲೂ ಮಾದಿಗ ಜಾತಿ ಸಂಘಟನೆಗಳು ನಡೆಸಿದ ಒಳಮೀಸಲಾತಿ ಹೋರಾಟದ ಫಲ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ.

‘1976ರ ಎಲ್.ಜಿ.ಹಾವನೂರ್ ವರದಿಯಲ್ಲಿ ಉಲ್ಲೇಖವಾಗಿರುವಂತೆ, ಮಾದಿಗ ಜಾತಿ ಜನಸಂಖ್ಯೆ ರಾಜ್ಯದ ಒಟ್ಟಾರೆ ಪರಿಶಿಷ್ಟರಲ್ಲಿ ಶೇ 57.3ರಷ್ಟಿತ್ತು. ಶೇ  15ರಲ್ಲಿ ಇವರಿಗೆ ಸಿಗಬೇಕಾದ ಪಾಲು ಶೇ 8. ಆದರೆ ಸಿಕ್ಕಿರುವುದು ಶೇ 2ರಷ್ಟು ಮಾತ್ರ. ಇನ್ನುಳಿದ 6ರಷ್ಟನ್ನು ಯಾರು ದೋಚಿದರು? ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಾದರೆ ಕಳೆದುಕೊಂಡಿರುವ ಶೇ 6ರ ಅವಕಾಶಗಳನ್ನು ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ವಾಪಸ್ ಪಡೆಯಬಹುದೆಂಬ ಆಸೆಗಣ್ಣಿನಿಂದ ಮಾದಿಗ ಜಾತಿ ಸಮುದಾಯವು ಸದಾಶಿವ ವರದಿ ಜಾರಿಗೆ ಹಟ ಹಿಡಿದು ಕುಳಿತಿದೆ. ಇದಕ್ಕೆ ಪೂರಕವಾಗಿ ಧರಣಿ, ಜನಶಕ್ತಿ ಸಮಾವೇಶ, ವಿಚಾರ ಸಂಕಿರಣಗಳನ್ನು ಸಂಘಟಿಸುತ್ತಿದೆ. ಮಾತ್ರವಲ್ಲದೆ ಹಿಂದೆ ಬೆಳಗಾವಿ ಅಧಿವೇಶನದ ಸಮಯದಲ್ಲಿ ‘ವಿಧಾನಸೌಧ ಚಲೋ’ ನಡೆಸಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದ ಘಟನೆಗೆ, ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕ್ಷಿಯಾಗಿದ್ದಾರೆ. ಮೀಸಲಾತಿಯಲ್ಲಿ ಸಮಪಾಲು ಬೇಕೆಂದು ಹಟ ಹಿಡಿಯುವಂತೆ ಕಣ್ಣುತೆರೆಸಿದ ಮತ್ತಷ್ಟು ಸಂಗತಿಗಳನ್ನು ಗಮನಿಸಬೇಕಾಗಿದೆ.

ಈ ಮೀಸಲಾತಿ ನೀತಿಗೆ ಮೇಲ್ಜಾತಿಯ ವಿರೋಧ ಒಂದು ರೀತಿಯಾದರೆ, ಕೆಳಜಾತಿಯವರದು ಮತ್ತೊಂದು ರೀತಿಯದು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಅಸ್ಪೃಶ್ಯರ ಒಂದು ಜಾತಿಯಾದ ಹೊಲೆಯ ಮತ್ತು ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಗಳೆಂದು ಗುರುತಿಸಿರುವ ಇತರೆ ಜಾತಿಗಳು ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿರುವುದು ಅಲ್ಲಲ್ಲಿ ಕೇಳಿಬರುತ್ತಿದೆ. ಈ ನಿಲುವು ಸಂವಿಧಾನ ವಿರೋಧಿಯಾದುದು. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡುವ ಅಪಚಾರ.

ಪ್ರಮುಖವಾಗಿ ಒಳಮೀಸಲಾತಿ ವಿರೋಧಿ ನಿಲುವಿನ ಸಾರಾಂಶ ಇಲ್ಲಿದೆ: ಸದಾಶಿವ ಆಯೋಗದ ವರದಿ ಅವೈಜ್ಞಾನಿಕ, ಹೊಲೆಮಾದಿಗ ಜಾತಿಗಳ ನಡುವೆ ಒಳಜಗಳಕ್ಕೆ ಕಾರಣವಾಗುತ್ತದೆ, ಪರಿಶಿಷ್ಟರ ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗಿದೆ, ಒಳಮೀಸಲಾತಿ ಒತ್ತಾಯ ದಲಿತ ಏಕತೆಗೆ ಮಾರಕ, ಖಾಸಗೀಕರಣದ ಸಂದರ್ಭದಲ್ಲಿ ಒಳಮೀಸಲಾತಿ/ಮೀಸಲಾತಿ ಅಪ್ರಸ್ತುತ.

ಈ ಎಲ್ಲ ಕಾರಣಗಳೂ ಅವೈಜ್ಞಾನಿಕವಾದವು. ತಾತ್ವಿಕ ಆಧಾರ ಮತ್ತು ನೈತಿಕ ಹೊಣೆಗಾರಿಕೆಯಿಲ್ಲದವು. ಮೊದಲನೆಯದಾಗಿ, ಅವಿವೇಕ ಮತ್ತು ಸ್ವಹಿತಾಸಕ್ತಿಯಲ್ಲಿ ಹುಟ್ಟಿದ ಅಭಿಪ್ರಾಯಗಳಾಗಿವೆ. ‘ಆಯೋಗದ ವರದಿಯ ಪ್ರತಿ ಯಾರ ಕೈಗೂ ಸಿಕ್ಕಿಲ್ಲ. ವಿಧಾನಸಭೆಯಲ್ಲಿ ಮಂಡಿಸುವವರೆಗೆ, ಮುಕ್ತ ಚರ್ಚೆಗೆ ಒಳಗಾಗುವವರೆಗೆ ವರದಿಯ ಯಾವ ಅಂಶವೂ ಬೆಳಕಿಗೆ ಬರುವುದಿಲ್ಲ. ಪತ್ರಿಕೆಯಲ್ಲಿ ವರದಿಯಾದ ಮುಖ್ಯಾಂಶಗಳ ಆಧಾರದ ಮೇಲೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದ್ದರಿಂದ ವರದಿ ಅವೈಜ್ಞಾನಿಕ’ ಎನ್ನುವುದು ಒಳಮೀಸಲಾತಿ ವಿರೋಧಿಗಳ ಸ್ವ-ಕಲ್ಪನೆ.

ಒಳಜಗಳಕ್ಕೆ ಮದ್ದೆಲ್ಲಿದೆ?: ಹೊಲೆಮಾದಿಗ ಜಾತಿಗಳ ನಡುವಿನ ಜಗಳ ಸದಾಶಿವ ಆಯೋಗ ರಚನೆಯಾಗುವುದಕ್ಕಿಂತ ಮೊದಲಿನಿಂದಲೂ ಇದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಟ್ಟುವ ಕಾಲದಲ್ಲೂ ಇತ್ತು. ‘ದಲಿತ ಚಳವಳಿ’ ಎಂಬ ಮಹಾ ಆದರ್ಶ ಈ ವಾಸ್ತವವನ್ನು ಮರೆಮಾಚಿತ್ತು ಅಥವಾ ಮುಕ್ತವಾಗಿ ಚರ್ಚಿಸಿ ಸ್ವ-ವಿಮರ್ಶೆಯ ಮೂಲಕ ಇಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಸಂಘಟನೆ ವಿಫಲವಾಗಿತ್ತು. ಅಸ್ಪೃಶ್ಯತೆಯ ಸಂಕಟದ ಅನುಭವದಲ್ಲಿ ಹೊಲೆಮಾದಿಗ ಜಾತಿಗಳು ಸಮಾನ ದುಃಖಿಗಳು. ಆದರೂ, ಭಿನ್ನ ಸಾಂಸ್ಕೃತಿಕ ನೆಲೆಯವರು. ಬೂದಿಮುಚ್ಚಿದ ಕೆಂಡದಂತಿದ್ದ ಇವರ ಒಳಜಗಳ ಜ್ವಾಲೆಯಾಗಿದೆ. ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಈ ರೋಗಕ್ಕೆ ತಕ್ಕ ಮದ್ದು ಕಂಡುಹಿಡಿದು ರೋಗ ನಿರೋಧಿಸುವುದು ಹೊಲೆಮಾದಿಗ ಜಾತಿ ಸಂಘಟನೆಗಳಿಗಿರುವ ಪ್ರಸ್ತುತ ಕಠಿಣವಾದ ಸವಾಲು. ಸದ್ಯಕ್ಕೆ ಕೈಯಲ್ಲಿರುವ ಮದ್ದು ಎರಡು ರೀತಿಯದು. ಒಂದು, ಸದಾಶಿವ ಆಯೋಗದ ವರದಿ ಅನುಷ್ಠಾನ. ಎರಡನೆಯದು, ಜಾತಿವಾರು ಜನಗಣತಿಯನ್ನು ಕೂಡಲೇ ಬಹಿರಂಗಪಡಿಸುವಂತೆ ಸರ್ಕಾರವನ್ನು ಕೇಳುವುದು.

ಎಲ್ಲ ಕೆಳಜಾತಿಗಳು ತಮ್ಮೊಳಗಿನ ಕಚ್ಚಾಟ ಮರೆತು ಒಮ್ಮತದಿಂದ ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಒಳಮೀಸಲಾತಿಗೆ ತಾತ್ವಿಕ ಅಡಿಪಾಯ ರೂಪಿಸಬೇಕು. ಜಾತಿ ಹೆಸರಿನಲ್ಲಿ ಅವಮಾನಿತರಾದ ಎಲ್ಲಾ ಜಾತಿಗಳಿಗೂ ಸಮಾನತೆ, ಸೋದರತ್ವದ ಬದುಕು, ಸ್ವಾಭಿಮಾನ ತಂದುಕೊಡುವುದು ಮೀಸಲಾತಿ ಅಥವಾ ಒಳಮೀಸಲಾತಿಯ ಆಶಯ. ಕೆಳಜಾತಿಗಳನ್ನು ಸಾಮಾಜಿಕವಾಗಿ ಬೆಸೆಯಲು ಇರುವ ಅಹಿಂಸಾತ್ಮಕ ಸಮನ್ವಯ ಅಸ್ತ್ರ ಒಳಮೀಸಲಾತಿ. ಈ ಒಳಮೀಸಲಾತಿಯೇ ಕೆಳಜಾತಿಗಳನ್ನು ಒಡೆದಾಳುತ್ತದೆ, ಒಳಜಗಳಕ್ಕೆ ಕಾರಣವಾಗಿದೆ ಮುಂತಾಗಿ ವಾದ ಮಂಡಿಸುವುದು ಜಾತಿಗಳನ್ನು ಬೆಸೆಯುವ ಬದಲು, ಬೇರ್ಪಡಿಸುವ ರಾಜಕೀಯ ಪಿತೂರಿಯಾಗುತ್ತದೆ.

ಶೇ 15ರ ಪ್ರಮಾಣ ಮೀಸಲಾತಿಯನ್ನು ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಹಂಚುವುದರಿಂದ ಜಾತಿ ಜಾತಿಗಳ ನಡುವೆ ಒಂದು ಹಂತದ ಸಮಾನತೆ ಸಾಧಿಸಿದಂತಾಗುತ್ತದೆ. ಜಾತಿಗಳ ನಡುವಿನ ಸಮಾನತೆ ಸಾಧನೆಯು ಜಾತಿ ವಿನಾಶದ ಮೊದಲ ಹೆಜ್ಜೆ. ಆಯೋಗದ ವರದಿ ಜಾರಿಯಿಂದಾಗಬಹುದಾದ ಪರಿಣಾಮವೆಂದರೆ, ಪರಿಶಿಷ್ಟ ಜಾತಿಗಳ ಎದೆಯಲ್ಲಿ ಕನಿಷ್ಠ ಸ್ವಾಭಿಮಾನದ ಹಣತೆ ಹಚ್ಚಬಹುದು. ಇದು ಸಮಾನತೆಯ ಆಶಯದ ದಿಕ್ಕಿನತ್ತ ಚಲನೆ. ಜಡವಾಗಿ ಬಿದ್ದಿರುವ ಕೆಳಜಾತಿಗಳಿಗೆ ಚಲಿಸುವ ಶಕ್ತಿ ತುಂಬಿದರೆ ಜಾತಿಗೋಡೆಗಳು ತಾನಾಗಿ ಉದುರಿಬೀಳುತ್ತವೆ. ಇದೊಂದು ತಾತ್ವಿಕ ಹೋರಾಟ, ಅಂತಿಮವಾಗಿ ರಾಜಕೀಯ ಹೋರಾಟ. ಈ ಹೋರಾಟಕ್ಕೆ ಇಡೀ ಒಳಮೀಸಲಾತಿ ದಾರಿಯಾಗಬೇಕು. ಜಾತಿ ವಿನಾಶ ಗುರಿಯಾಗಬೇಕು.
*
ಒಡೆದಾಳುವ ಚಿಂತನೆ ಭಗ್ನಗೊಳಿಸಿ
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳಿಗೆ ಸದಾಶಿವ ಆಯೋಗದ ವರದಿಯಲ್ಲಿ ಅನ್ಯಾಯವಾಗಿದೆ ಎಂಬ ಕೂಗು ಎದ್ದಿದೆ. ಇವು ಸ್ಪೃಶ್ಯ ಜಾತಿಗಳಾಗಿದ್ದು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕೆಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚನೆ ನೀಡಿದೆ. ಅಗಸ ಮುಂತಾದ ಜಾತಿಗಳು ಪರಿಶಿಷ್ಟ ಪಟ್ಟಿಗೆ ಸೇರ್ಪಡೆಯಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಲು ಸರತಿಯಲ್ಲಿ ನಿಂತಿವೆ. ಆದ್ದರಿಂದ ಸದಾಶಿವ ಆಯೋಗದ ವರದಿ ಜಾರಿಯನ್ನು ವಿರೋಧಿಸುತ್ತಿರುವವರು ‘ಸ್ಪೃಶ್ಯ’ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬಾರದೆಂದು ಒತ್ತಾಯಿಸಬೇಕು. ಇವರನ್ನು ಪರಿಶಿಷ್ಟ ಪಟ್ಟಿಯಿಂದ ಕೈಬಿಟ್ಟರೆ ಮೀಸಲಾತಿ ಸೌಲಭ್ಯದಿಂದ ದೂರ ಉಳಿಯುತ್ತಾರೆ. ಹಾಗೆ ನೋಡಿದರೆ ತಲೆ ಮೇಲೆ ಮಲ ಹೊತ್ತ ಅಸ್ಪೃಶ್ಯರು, ಮುಟ್ಟಾದ ಬಟ್ಟೆ ಒಗೆಯುವ ಅಗಸರಿಗಿಂತ ಹೀನಾಯ ಜಾತಿ ಸಂಕಟ, ಅವಮಾನ ಬೋವಿ, ಲಮಾಣಿಗಳಿಗಿಲ್ಲ.

ವಿಶೇಷವಾಗಿ ಲಂಬಾಣಿ ಸಮುದಾಯ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆಗಳು ಭಿನ್ನರೀತಿಯಾದವು. ಉದಾಹರಣೆಗೆ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾರ್ಪಡಿಸುವುದು, ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿರುವ ಲಂಬಾಣಿ ತಾಂಡಾಗಳಿಂದ ಮಕ್ಕಳು, ಸ್ತ್ರೀಯರ ಮಾರಾಟ ನಡೆಯುವುದನ್ನು ತಡೆಯುವಂತಹ ಕಾರ್ಯಕ್ರಮಗಳು, ವಸತಿ ಶಾಲೆಗಳನ್ನು ಪ್ರಾರಂಭಿಸುವುದು, ಸಾಂಸ್ಕೃತಿಕ ರಾಜಕಾರಣದ ಮುಖ್ಯವಾಹಿನಿಗೆ ಲಂಬಾಣಿ, ಬೋವಿ, ಕೊರಮ, ಕೊರಚ ಜಾತಿಗಳನ್ನು ತರುವ ಕೆಲಸ ಮಾಡಬೇಕಲ್ಲದೆ, ವರದಿ ಜಾರಿ ವಿರೋಧ ಅನಗತ್ಯ, ರಾಜಕೀಯ ಪ್ರೇರಿತ. ಬಹುಸಂಖ್ಯೆಯಲ್ಲಿರುವ ಹೊಲೆಮಾದಿಗರೂ ಈ ಒತ್ತಾಯದ ಬೆಂಬಲಕ್ಕೆ ನಿಲ್ಲಬೇಕು. ಎಲ್ಲ 101  ಜಾತಿಗಳಿಗೂ ಸಮಪಾಲು ಸಿಗಬೇಕಾದದ್ದು ಸಂವಿಧಾನಾತ್ಮಕವೂ, ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರಗೊಳಿಸುವ ಕಾರ್ಯಕ್ರಮವೂ ಆಗುತ್ತದೆ. ಮಾತ್ರವಲ್ಲದೆ ಮತೀಯ ಶಕ್ತಿಗಳು ಕೆಳಜಾತಿಗಳನ್ನು ಒಡೆದಾಳುವ ಚಿಂತನೆ, ಕಾರ್ಯಕ್ರಮಗಳನ್ನು ಭಗ್ನಗೊಳಿಸಿದಂತಾಗುತ್ತದೆ.
*
* 3,000ಕ್ಕೂ ಹೆಚ್ಚು ಜಾತಿಗಳು ದೇಶದಲ್ಲಿವೆ

* 450 ಪರಿಶಿಷ್ಟ ಜಾತಿಗಳನ್ನು ಗುರುತಿಸಲಾಗಿದೆ

* 101 ಪರಿಶಿಷ್ಟ ಜಾತಿಗಳನ್ನು ಕರ್ನಾಟಕದಲ್ಲಿ ಗುರುತಿಸಲಾಗಿದೆ

* 7 ಜಾತಿಗಳು 5 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ ಅವುಗಳೆಂದರೆ: ಮಾದಿಗ, ಹೊಲೆಯ, ಬಂಜಾರ, ಆದಿ ಕರ್ನಾಟಕ, ಬೋವಿ,
ಭಾಂಬಿ, ಆದಿ ದ್ರಾವಿಡ.

* 78% ಪರಿಶಿಷ್ಟ ಜಾತಿಯವರು ಈ 7 ಜಾತಿಗಳಿಗೆ ಸೇರಿದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT