ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಕೆರವಿಂಗೆ ಯನ್ನ ಶಿರ ಸರಿಯೆ

ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ 2016
Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
-ಮಹಾಂತ ಮಯೂರಶಿಲೆ
 
**
 
‘‘ನಾನು ಹಿಂದಿನ ಜನ್ಮದಲ್ಲಿ ತಮಿಳುನಾಡಿನ ಪ್ರಖ್ಯಾತ ದೊರೆ ಕರಿಕಾಲ ಚೋಳನಾಗಿದ್ದೆ’’ ಎಂದು ಹೇಳಿದಾಗ ಎದುರಿಗೆ ಕುಳಿತ ಡಾಕ್ಟರ್ ಪ್ರಶಾಂತ ಹಾಗೆಯೇ ತಣ್ಣಗೆ ಆಲಿಸುತ್ತಿದ್ದರು. ಅವರ ಮುಖದಲ್ಲಿ ಕುತೂಹಲದ ನೋಟ ಬಿಟ್ಟು ಏನೂ ಇರಲಿಲ್ಲ. ಅವರು ನುರಿತ ಪ್ರಾಧ್ಯಾಪಕನ ಮಾತು ಆಲಿಸುವ ಒಬ್ಬ ವಿದ್ಯಾರ್ಥಿಯಂತೆ ಕುಳಿತಿದ್ದರು.
 
ಮತ್ತೆ ನಾನು ಆರಂಭ ಮಾಡಿದೆ.  
 
‘‘ಸರ್... 11ನೇ ಶತಮಾನದ ಕೊನೆಯ ಭಾಗದಲ್ಲಿ, ಕಲ್ಲಾನೈ ಎಂಬಲ್ಲಿ ನಾನು ಕಾವೇರಿ ನದಿಗೆ ಅಣೆಕಟ್ಟು ಕಟ್ಟಿದ್ದೆ, ಈಗಲೂ ಅಣೆಕಟ್ಟು  ತಮಿಳುನಾಡಿನ ಜೀವನವೇ ಆಗಿದೆ. ಇನ್ನೊಂದು ವಿಷಯ ಹೇಳಲೇಬೇಕು, ಏಕಾಂಬರೇಶ್ವರ ಎಂಬ ಸ್ಥಳದಲ್ಲಿ ಎರಡು ದೊಡ್ಡ ಬೃಹದಾಕಾರದ ಶಿವನ ದೇವಾಲಯ ನಿರ್ಮಾಣ ಮಾಡಿದ್ದೆ. ಅದರ ಆರಂಭೋತ್ಸವಕ್ಕೆ ಸಾಕ್ಷಾತ್ ಶಿವನನ್ನೇ ಆಹ್ವಾನಿಸಿದ್ದೆ. ನಿಮಗೆ ಆಶ್ಚರ್ಯವಾಗಬಹುದು. ಶಿವ ‘ಬರುವುದಿಲ್ಲ’ ಎಂದು ಪಟ್ಟುಹಿಡಿದ. ನಾನು ಕೇಳಲಿಲ್ಲ. ನನ್ನ ಶಿರಚ್ಛೇದನಕ್ಕೆ ಮುಂದಾದೆ. ಕೊನೆಗೆ ಶಿವನೇ ಪ್ರತ್ಯಕ್ಷನಾಗಿ ಗುಡಿಯಲ್ಲಿ ಬಂದು ನೆಲೆಸಿದ’’. ಡಾಕ್ಟರ್ ಅವರ ಕೇಳುವ ಉತ್ಸಾಹ ಕಂಡು ಮುಂದುವರೆಸಿದೆ. ‘‘ನನ್ನ ಕಾಲವನ್ನು ತಮಿಳುನಾಡಿನ ಸುವರ್ಣಯುಗವೆನ್ನುತ್ತಾರೆ...’’. 
 
ನನ್ನ ಗತ ಇತಿಹಾಸವನ್ನು ಡಾ. ಪ್ರಶಾಂತ್ ಗಂಭೀರವಾಗಿಯೇ ಆಲಿಸುತ್ತಿದ್ದರು. ಅವರ ಮುಖದಲ್ಲಿ ಉಡಾಫೆಯಾಗಲಿ, ತಿರಸ್ಕರಿಸುವ  ಪೂರ್ವಗ್ರಹವಾಗಲೀ ಕಾಣಲಿಲ್ಲ. ಅವರ ಈ ವರ್ತನೆಯಿಂದ ನಾನು ಕರಿಕಾಲ ಚೋಳನಾಗಿದ್ದೆ ಎಂಬ ಸತ್ಯ ನನ್ನ ಹೃನ್ಮನಗಳಲ್ಲಿ  ಪ್ರತಿಧ್ವನಿಸಿ ಏಕಮುಡಿಯಾಗಿ ದ್ವಿಮುಡಿಯಾಗಿ ನೂರ್ಮಡಿಯಾಗಿ ಗಟ್ಟಿಗೊಂಡು ಸ್ಥಾಯಿಯಾಗುತ್ತಲೇ ಹೋಗುತ್ತಿತ್ತು.  
 
‘‘ಸರ್, ಈ ಮೂರ್ಖ ಜಗತ್ತು ನನ್ನನ್ನು ನಂಬುತ್ತಿಲ್ಲ’’ ಎಂದೆ. 
 
ಡಾ. ಪ್ರಶಾಂತ್ ದೀರ್ಘ ನಿಟ್ಟುಸಿರು ಬಿಟ್ಟು – ‘‘ನಾನು ನಂಬುತ್ತೇನೆ. ನೀವು ಹಿಂದಿನ ಜನ್ಮದಲ್ಲಿ ಕರಿಕಾಲಚೋಳನೇ ಆಗಿದ್ದಿರಿ’’  ಎಂದಾಗ ಮತ್ತೆ ನನ್ನ ಮನದಲ್ಲಿ ಅದಮ್ಯ ಆತ್ಮವಿಶ್ವಾಸದ ಜಲಪಾತವೇ ಧುಮ್ಮಿಕ್ಕಿದಂತೆ ಭಾಸವಾಯಿತು.
 
‘‘ನನಗೆ ಎಲ್ಲ ನೆನಪಿದೆ, ಕಾವೇರಿಯ ಮಡಿಲು ನನಗೆ ಬರೀ ಜಲದೊಂದಿಗಿನ ಸಂಬಂಧವಾಗಿರಲಿಲ್ಲ. ಅದು ನನ್ನ ಜೀವವಾಗಿತ್ತು, ನನ್ನ  ಕರ್ಮವಾಗಿತ್ತು, ನನ್ನ ಬಾಲ್ಯ ಮೀನು ಹಿಡಿಯುವುದರಲ್ಲಿ, ತಳದಿಂದ ಕಪ್ಪೆ ಚಿಪ್ಪೆ ತರುವುದರಲ್ಲಿ, ಆ ತಟದಿಂದ ಈ ತಟಕ್ಕೆ ಒಂದೇ ನೆಗೆತದಿಂದ ಹಾರುವುದರಲ್ಲಿ, ಮತ್ತೆ ಹೂವಿನ ಪಲ್ಲಕ್ಕಿಯ ದೋಣಿಯಲ್ಲಿ ಹೊಳೆ ದಾಟುತ್ತಿದ್ದಳಲ್ಲ ಪಲ್ಲವ ರಾಜಕುಮಾರಿ? ಅವಳನ್ನು ಹಿಂಬಾಲಿಸುವುದರಲ್ಲಿ, ಮಿಂಚಿನಂತೆ ಕಳೆದೇಹೋಯಿತೆನೋ? ಪ್ರಶಾಂತ್ ಸರ್, ಈ ಜಗತ್ತಿನಲ್ಲಿ  ನನಗೆ ಸಂಪೂರ್ಣವಾಗಿ  ಬೆಂಬಲಿಸಿದವರು ನೀವೊಬ್ಬರೇ. ಕ್ಷಮಿಸಿ, ನನ್ನ ಮನದ ಅಣೆಕಟ್ಟು ಒಡೆದಿದ್ದೇನೆ. ಇಲ್ಲಿಯವರೆಗೆ ನಾನು ಹುಚ್ಚನಾಗಿದ್ದೆ. ನನ್ನ ಮಡದಿಯೊಳಗೊಂಡು ಎಲ್ಲರೂ ನನ್ನನ್ನು ಹಂಗಿಸುವವರೆ. ನೀವು ನನ್ನನ್ನ ಒಪ್ಪಿಕೊಂಡು ಒಬ್ಬ ಮನುಷ್ಯನನ್ನಾಗಿಸಿದ್ದೀರಿ’’ ಎಂದಾಗ  ಅವರು ನನ್ನನ್ನು ಗಕ್ಕನೆ ತಡೆದರು.
 
‘‘ನಿಮ್ಮ ಈಗಿನ ಹೆಸರು ರಮೇಶ ಎಂದಿರಲ್ಲ’’.
 
‘‘ಹೌದು’’
 
‘‘ಬಹಳ ಸಾಮಾನ್ಯ ಹೆಸರು ಮತ್ತು ಮುದ್ದಾದ ಹೆಸರು. ರಮಾ+ಈಶ=ರಮೇಶ, ರಮೆಯ ಗಂಡ ಈಶ’’ – ಡಾಕ್ಟರ್  ವಿಜ್ಞಾನದ ಹಾದಿ ಬಿಟ್ಟು ವ್ಯಾಕರಣದ ಹಾದಿ ಹಿಡಿದಿದ್ದರು. ನನ್ನನ್ನು ಕರಿಕಾಲಚೋಳನ ಆಸ್ಥಾನಕ್ಕೆ ಕರೆದೊಯ್ಯುವ ಒಬ್ಬ ಆಪದ್ಭಾಂದವ ಎಲ್ಲೋ ಮರಳೋಣಿಯಲ್ಲಿ ಮಾಯವಾಗುವುದು ಇಷ್ಟವಾಗಲಿಲ್ಲ. ನನಗೆ ವ್ಯಾಕರಣವೆಂದರೆ ಪ್ರೀತಿ, ಕನ್ನಡ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳು. ವ್ಯಾಕರಣದಿಂದಲೇ ನಾನು ಅಂಕಗಳನ್ನು ಕವರ್ ಮಾಡುತ್ತಿದ್ದೆ ಎಂದು ಹೇಳಿದರು
‘‘ನೀವು ಗ್ರೇಟ್ ಸರ್’’ ಎಂದು ತಲೆ ಅಲ್ಲಾಡಿಸಿದೆ. ಅವರು ಮತ್ತೆ ‘‘ಕ್ಷಮಿಸಿ. ನಾನು ನನ್ನ ಹಾಳು ಸಾಧನೆಯ ಬಗ್ಗೆ ಹೇಳಿದೆ’’ ಎಂದರು. ‘‘ಇರಲಿ ಸರ್, ನೀವು ದೊಡ್ಡ ಸಾಧಕರೆಂದು  ಕೇಳಿದ್ದೇನೆ. ನಿಮ್ಮ ಸಾಧನೆಯನ್ನು ತಿಳಿದುಕೊಳ್ಳುವುದು ನಮ್ಮ ಆದ್ಯತೆಯಾಗಬೇಕು’’  ಎಂದು ಅವರು ನನ್ನ ಬಗ್ಗೆ ತೋರಿಸಿದ ಅನುಭೂತಿಗೆ ಕೃತಜ್ಞತೆ ಅರ್ಪಿಸಿದೆ.
 
‘‘ನಿಮ್ಮ ಈಗಿನ ಹೆಸರು ಕೇಳಿದ್ದಕ್ಕೆ ಕಾರಣವಿದೆ. ರಮೇಶ ಮತ್ತು ಕರಿಕಾಲಚೋಳನೆಂಬ ಹೆಸರುಗಳಲ್ಲಿ ಎಲ್ಲಿಯಾದರೂ ಸಾಮ್ಯತೆಯಿದೆಯೇ ಎಂದು ತಾಳೆ ನೋಡಿದೆ’’. ನಿರ್ಜನ ಆ ಹಿಂದುಗಡೆ ಬಯಲಿನಲ್ಲಿ ಅವರ ಕಪ್ಪಾದ ಮುಖ ಸ್ಫಟಿಕದ ಕಂತೆಯಂತೆ  ಹೊಳೆಯುತ್ತಿತ್ತು. ಅವರೇ ಮತ್ತೆ, ‘‘ಅವೆರಡು ಹೆಸರುಗಳಿಗೆ ಅಂತಹ ಸಾಮ್ಯತೆ ಇಲ್ಲ’’ ಎಂದು ಮೌನವಾದರು. ನನಗೆ ದಿಗಿಲಾಯಿತು. ಅವರೇ ತಮ್ಮ ಮನದಿಂದ ಸೃಷ್ಟಿಸಿದ ಕರಿಕಾಲನನ್ನು ನನಗನ್ವಯಿಸಿಕೊಳ್ಳುವ ಮೂಲವನ್ನು ಈ ಒಂದು ಕಾರಣಕ್ಕೆ ತಿರಸ್ಕರಿಸಬಹುದು ಎಂದು. ಮತ್ತೆ ಹೇಳಿದರು. ‘‘ಈಗಿನ ಹೆಸರು ಆಗಿನ ಹೆಸರು ಎಂದೂ ಟ್ಯಾಲಿ ಆಗಲ್ಲ. ಅದು ಯಾಕೆ ಟ್ಯಾಲಿ ಆಗಬೇಕು? ಸುಮ್ಮನೆ ಕುತೂಹಲಕ್ಕೆ ಕೇಳಿದೆ’’ ಎಂದರು.
 
‘‘ಈಗ ನಿಮ್ಮ ಹಿಂದಿನ ಜನ್ಮಕ್ಕೆ ಹೋಗೋಣ. ನಿಮ್ಮ ಹಿಂದಿನ ಜನ್ಮ ಏನೇನು ನೆನಪಿದೆ? ಹೇಳಿ. ಕರಿಕಾಲ ಚೋಳ ಎಂದರೆ ಅದರ ಅರ್ಥ? ನಿಮಗೆ ಗೊತ್ತಿರಬಹುದಲ್ಲ, ನಿಮ್ಮಪ್ಪ ಇಟ್ಟ  ಹೆಸರು ಇದು. ಕೊಂಚ ನಿಮ್ಮ ಹೆಸರಿನ ಹಿನ್ನೆಲೆ ವಿವರಿಸಿ’’ ಎಂದರು.
 
ನನಗೆ ಪ್ರಚಂಡತಮವಾದ ಎರಡು ಹಿನ್ನೆಲೆಗಳು ನೆನಪಿಗೆ ಬಂದವು.
 
‘‘ನಾನು ಇಡೀ ದ್ರಾವಿಡ ನಾಡನ್ನು ಬಿರುಗಾಳಿಯಂತೆ ಆಕ್ರಮಿಸಿಕೊಂಡಾಗ ನನ್ನ ವಿರೋಧಿಗಳಾದ ಪಾಂಡ್ಯರು, ಚೇರರು ನನ್ನನ್ನು  ಮೋಸದಿಂದ ಸೆರೆಹಿಡಿದು ಸೆರೆಮನೆಯಲ್ಲಿ ಹಾಕಿದರು. ನನ್ನ ಕಾಲುಗಳನ್ನು ಗಾಯಗೊಳಿಸಲಾಯಿತು. ನನಗೆ ಹಿಂಸೆಕೊಡಲಾಯಿತು.  ನಾನು ಸೆರೆಯಿಂದ ತಪ್ಪಿಸಿಕೊಂಡು ಮಲಯಾಚಲ ಪರ್ವತದಲ್ಲಿ ಆಶ್ರಯಪಡೆದೆ. ಹಣ್ಣುಹಂಪಲ ತಿಂದುಕೊಂಡು ಬಹುದಿನಗಳ ಕಾಲ ಕಾಲಕಳೆದೆ. ಅಲ್ಲಿಯ ಶಿವದೇಶಿಕಮ್ ಎನ್ನುವ ಗುರು ನನ್ನನ್ನು ತಮ್ಮ  ಆಶ್ರಮಕ್ಕೆ ಕರೆದುಕೊಂಡು ಹೋಗಿ ಉಪಚರಿಸಿದರು’’. 
 
‘‘ದೀರ್ಘ ವಿವರಣೆಯ ಅವಶ್ಯಕತೆ ಇಲ್ಲ ಅನ್ನಿಸುತ್ತದೆ’’ ಎಂದರು ಡಾಕ್ಟರ್.
 
‘‘ಗಾಯಗಳು ವಾಸಿಯಾದವು. ಆದರೆ ಗಾಯಗಳು ಕಾಲುಗಳ ಮೇಲೆ ಕಪ್ಪುಕಲೆಗಳನ್ನು ಬಿಟ್ಟುಹೋಗಿದ್ದವು. ಕಾಲಿನ ತುಂಬಾ ಕಪ್ಪುಚುಕ್ಕೆಯಂತಹ ಕಲೆಗಳು. ಆ ದಿನದಿಂದ ಶಿವದೇಶಿಕಮ್ ಅವರೇ ನನಗೆ ಕರಿಕಾಲ ಚೋಳ ಎಂದು ಹೆಸರಿಸಿದರು’’. 
 
‘‘ನನಗೆ ಸಂಬಂದಪಟ್ಟ ಇನ್ನೊಂದು ಕತೆಯೂ ಇದೆ’’.
 
‘‘ಓಹೋ, ನಿಮ್ಮ ಹೆಸರಿನ ಹಿನ್ನೆಲೆಯ ಎರೆಡೆರೆಡು ಕತೆಗಳು...?’’
 
‘‘ಒಂದು ದಿನ ಮದವೇರಿದ ಆನೆಯೊಂದು ಆಸ್ಥಾನಕ್ಕೆ ನುಗ್ಗಿ ಗಲಾಟೆ ಮಾಡುವಾಗ ನಾನು ಅದರ ತಲೆಯ ಮೇಲೆ ಕುಳಿತು ಕಠಾರಿಯಿಂದ ತಲೆಗೆ ಹೊಡೆದೆ. ಅದರ ಮದವನ್ನು ಮಣಿಸಿದೆನೆಂಬ ಕಾರಣಕ್ಕೆ ಕರಿಕಾಲಚೋಳನೆಂಬ ಹೆಸರು ಬಂದಿದೆ’’. ಡಾಕ್ಟರ್ ಮುಖದಲ್ಲಿ ಕೊಂಚ ಗಲಿಬಿಲಿ ಕಾಣಿಸಿಕೊಂಡಿತು, ನೀರು ಕುಡಿದರು. 
‘‘ಕ್ಷಮಿಸಿ. ನೀವು ಕರಿಕಾಲಚೋಳನಾಗಿದ್ದ ಕಾಲದಲ್ಲಿ ನಿಮ್ಮ ತಂದೆಯವರು ನಿಮಗೆ ಇಟ್ಟ ಹೆಸರು ಒಂದು ಇರಬಹುದಲ್ಲ? ಅದು ನೆನಪಿದೆಯೇ?’’ – ಪ್ರಶಾಂತ ತಣ್ಣಗೆ ಬೆಳದಿಂಗಳಂತೆ ಕೇಳಿದರು. 
 
ನನಗೆ ಅವು ಸ್ಮೃತಿಪಟಲದಲ್ಲಿ ಉಳಿದಿಲ್ಲ ಎನ್ನಲು ಭಯವಾಯಿತು. ನಿಜವಾಗಿಯೂ ಅವು ನನಗೆ ಯಾಕೆ ತಿಳಿದಿಲ್ಲ ಅನ್ನುವುದೇ ಪ್ರಶ್ನೆಯಾಯಿತು. ಬಿರುದಾವಳಿಯಿಂದ, ಕಾಲಿನ ಗಾಯದಿಂದ ಬಂದುದು ನನ್ನ  ಹೆಸರಾದರೆ ನನ್ನ ನಿಜವಾದ ಹೆಸರು ಯಾವುದು?   ನಾನು ಯೋಚಿಸಹತ್ತಿದೆ. ಡಾಕ್ಟರ್ ಕೇಳಿದರು, ‘‘ಏನು ಯೋಚಿಸುತ್ತೀರಿ. ನೆನಪಿಲ್ಲದಿದ್ದರೆ ನೆನಪಿಲ್ಲ ಎಂದು ಹೇಳಬಹುದು, ಕೆಲವು ವಿಷಯಗಳು ವಿಸ್ಮೃತಿಗೆ ಒಳಗಾಗಿರಬಹುದು. ಅದರ ಬಗ್ಗೆ ನೀವು ತಲೆಕೆಡಿಸಿಕೊಳ್ಳುವದು ಬೇಡ ಎನ್ನಿಸುತ್ತದೆ’’.
 
‘‘ಹೌದು ಡಾಕ್ಟರ್, ನನಗೆ ನೆನಪಿಲ್ಲ. ಯಾಕೆ ಹೀಗೆ ಆಯಿತೋ ಗೊತ್ತಿಲ್ಲ. ನನಗೆ ನನ್ನ ಹೆಸರು ಕರಿಕಾಲ ಚೋಳನೆಂಬುವದು  ಮಾತ್ರ ಗೊತ್ತು’’.
‘‘ಇರಲಿ ಬಿಡಿ. ನೀವು ಕರಿಕಾಲ ಚೋಳನೇ ಇದ್ದೀರಿ, ಎರಡು ಮಾತಿಲ್ಲ ಅದರ ಬಗ್ಗೆ. ಭಯ ಬೇಡ’’ ಎಂದರು. 
 
ನಾನು ಕೊಂಚ ತಣ್ಣಗಾಗಿದ್ದೂ ನಿಜ. ಇಲ್ಲಿಯವರೆಗೆ ಕಟ್ಟಿಕೊಂಡು ಬಂದಿದ್ದ ಸತ್ಯದ ನೊಗಕ್ಕೆ ಡಾಕ್ಟರ್ ತಾರ್ಕಿಕ ಪ್ರಶ್ನೆಗಳ ಮುಖಾಂತರ  ಕವಣೆಯ ಏಟು ಹಾಕಿದ್ದರು. ‘‘ನನಗೆ ಎಲ್ಲವೂ ನೆನಪಿದೆ... ಎಲ್ಲವೂ ಹೇಳು ಎಂದರೆ ಹೇಳುತ್ತೇನೆ... ಹೆಸರು ನನಗೆ ನೆನಪಾಗ್ತ ಇಲ್ಲ ಅಷ್ಟೆ... ಆದರೆ ನಾನು ಕರಿಕಾಲನೇ ಆಗಿದ್ದೆನೆನ್ನುವುದು ಸೂರ್ಯನಷ್ಟೆ ಸತ್ಯ’’.
 
‘‘ಇರಲಿ ಬಿಡಿ ಟೆನ್ಷನ್ ಬೇಡ. ಅಸತ್ಯದ ಆಳ ಮತ್ತು ಸತ್ಯದ ಆಳ ವಿಚಿತ್ರವಾದುದ್ದು. ಇದಕ್ಕೆ ಪ್ಯೂಗ್ ಎನ್ನುತ್ತಾರೆ. ಇದು ಮನಶ್ಯಾಸ್ತ್ರದ ಒಂದು ಟರ್ಮಿನಾಲಾಜಿ’’. ಡಾಕ್ಟರ್ ಅವರು ಡಾಕ್ಟರ್ ಎನ್ನಿಸಲಿಲ್ಲ. ಅವರು ತತ್ವಜ್ಞಾನಿಯಂತೆ ಗೋಚರಿಸಿದರು. ಎರಡನೇ ಬುದ್ಧನೆಂದು ಹೆಸರು ಪಡೆದುಕೊಂಡಿದ್ದ ನಾಗಾರ್ಜುನನ ಬಗ್ಗೆ ಹೇಳಿದರು, ಈ ಘಟನೆಗೂ ಇದಕ್ಕೂ ಸಂಬಂದವಿತ್ತೋ ಇಲ್ಲವೋ ಆದರೂ ಹೇಳಿದರು. ಅದು ಹೀಗಿತ್ತು.
 
‘‘ಸತ್ಯದ ಆಳ ಅಸತ್ಯದ ಆಳ ವಿಚಿತ್ರವಾದುದ್ದು ಎಂದು ಹೇಳಿದೆನಲ್ಲ. ಸತ್ಯದ ಆಳ ಎಂದು ತೀರ್ಮಾನಿಸಿದಾಗಲೇ ಅಸತ್ಯದ ಬಗ್ಗೆ ಗುಮಾನಿ ಹುಟ್ಟುತ್ತದೆ, ಅಸತ್ಯವೇ ಅಂತಿಮ ಎಂದು ತೀರ್ಮಾನಿಸಿದಾಗಲೇ ಸತ್ಯದ ಬಗ್ಗೆ ಸಂದೇಹ ಹುಟ್ಟುತ್ತದೆ, ಇದಕ್ಕೆ  ನಾಗಾರ್ಜುನ ಮೀಮಾಂಸೆ ಎನ್ನುತ್ತಾರೆ’’.
 
‘‘ಸರ್, ನಾನು ಕರಿಕಾಲ ಚೋಳನೋ ಅಲ್ಲವೋ ಎನ್ನುವ ತೀರ್ಮಾನವಾಗಬೇಕಷ್ಟೆ. ಇಲ್ಲಿಯವರೆಗೂ ನೀವು ಹೇಳಿದ್ದು ಈ ಸಂದರ್ಭದಲ್ಲಿ ಅವಶ್ಯಕತೆ ಇದೆಯೋ ಇಲ್ಲವೋ’’ ಎಂದೆ. ಡಾಕ್ಟರ್ ಕೊಂಚ ಸಿಟ್ಟಿನಿಂದಲೇ ಉತ್ತರಿಸಿದರು, ‘‘ನೀವು ಇಲ್ಲಿ ಒಬ್ಬ ಪೇಷಂಟ್ ಮಾತ್ರ. ಇದರ ಹೊರತಾಗಿ ಏನೂ ಇಲ್ಲ’’ ಎಂದವರೇ ಅವರ ಎಂದಿನ ಸೌಜನ್ಯಕ್ಕೆ ಮರಳಿದರು.
 
‘‘ಇದೆಲ್ಲದರ ನಡುವೆಯೂ ನೀವು ಕರಿಕಾಲಚೋಳನೆ’’ ಎಂಬ ಅಭಯವಿತ್ತರು. ‘‘ಹಿಂದಿನ ಜನ್ಮದಲ್ಲಿ ನೀವು ಹುಟ್ಟಿದ ಸ್ಥಳ, ರಾಜ್ಯಭಾರ ಮಾಡಿದ ಊರು, ಕಟ್ಟಿಸಿದ ಅಣೆಕಟ್ಟುಗಳ ಮುಖಾಮುಖಿಯಾದರೆ ಒಳ್ಳೆಯದು. ದಯವಿಟ್ಟು ಒಂದು ತಿಂಗಳು ನೀವು ತಮಿಳುನಾಡಿನ ಕರಿಕಾಲನಿಗೆ ಸಂಬಂಧಪಟ್ಟ ಬೇರೆ ಬೇರೆ ಊರುಗಳಿಗೆ ಪ್ರಯಾಣ ಬೆಳೆಸಿ’’ ಎಂದರು. 
 
2
ಮಧುರೆಯ ತುಂಬಾ ತಿರುಗಿದೆ. ಆ ಊರು ಇಂದು ನನಗೆ ಬೇರೆಯದೇ ಆಗಿ ಕಂಡಿತ್ತು. ಅಲ್ಲಿ ಕುದುರೆಯ ಲಾಳಗಳು, ದೊಡ್ಡ ದೊಡ್ಡ  ಭೋಜನಶಾಲೆಗಳು ನೃತ್ಯಶಾಲೆಗಳು. ಮಧುರೆಯ ಒಡೆಯ ಸುಂದರೇಶನೆಂಬ ಶಿವ, ಆತನ ಹೆಂಡತಿ ಮೀನಾಕ್ಷಿ. ನಾನು ಎಲ್ಲಿದ್ದೆ? ಹೇಗಿದ್ದೆ? ಹುಡುಕಿದೆ. ಎಷ್ಟು ಹುಡುಕಿದರೂ ಬರೀ ಯುದ್ಧದ ಚಿತ್ರಗಳೇ. ಪಾಂಡ್ಯರು ನನ್ನನ್ನು ಹೆಡೆಮುರಿ ಕಟ್ಟಿ ಆನೆಗಳ ಮನೆಯಲ್ಲಿ ಹಾಕಿದ ಭಯಾನಕ ನಗರ ಇದು. ಅಂದು ನಾನು ಇದರ ಮಧ್ಯೆಯೇ ಆನೆಗಳ ಕೊಂದು ತಪ್ಪಿಸಿಕೊಂಡು ಕಾವೇರಿಯಲ್ಲಿ ಈಜಿ ನನ್ನ  ಊರು ಕಾಂಚೀಪುರಮ್ ಸೇರಿದ್ದೆ. ಅದನ್ನು ನೆನೆದು ಮನದಲ್ಲಿ ದುಗುಡ ತುಂಬಿಕೊಂಡು ಬೀದಿಗಳಲ್ಲಿ ಅಡ್ಡಾಡಿದೆ. ಮಧುರೈನ ಸೆರೆಮನೆ ಕರಿಕಾಲನಿಗೆ ಅಂದರೆ ಹಿಂದಿನ ಜನ್ಮದ ನನಗೆ ಇನ್ನೊಂದು ಮನೆಯೇ ಆಗಿತ್ತು. ಅಲ್ಲಿಂದ ನಾನಾಳಿದ ರಾಜಧಾನಿಗೆ ಅತಿ  ಭಾವುಕತೆಯಿಂದಲೇ ತೆರಳಿದೆ.
 
ಕಾಂಚಿಪುರಮ್ ಇಂದು ಅಂದು ನಾನಾಳಿದ ಕಾಂಚಿಪುರಮ್ ಆಗಿರಲಿಲ್ಲ. ಅಂದು ಸುಂದರ ಬೀದಿಗಳು, ಸುಂದರ ದೇವಸ್ಥಾನಗಳು, ತುಂಬು ಹಸಿರಿನಿಂದ ಆವೃತ್ತವಾದ ಊರು ಅದು. ಈಗ ನಗರವಾಗಿ ಯದ್ವಾತದ್ವಾ ಬೆಳೆದಿತ್ತು. ಪೆರಿಯಾರ್ ಮಾದಾರ ಚನ್ನಯ್ಯಂಗಳು  ಕೆಲಸ ಮಾಡುತ್ತಿದ್ದ ರಾಜಧಾನಿಯ ಪೂರ್ವಕ್ಕಿರುವ ಲಾಳಕ್ಕೆ ಭೇಟಿಕೊಟ್ಟೆ. ಅಲ್ಲಿ  ಹಿಂದೆ ಯಾವುದೇ ಕುದುರೆಲಾಳವಿದ್ದ ಕುರುಹುಗಳು ಗೋಚರಿಸಲಿಲ್ಲ. ಕಾಂಚಿಪುರಮ್ ಮಧ್ಯಭಾಗದಲ್ಲಿದ್ದ ಸುಂದರ ಅರಮನೆಯ ಜಾಗದಲ್ಲಿ ಬಂದುನಿಂತೆ. ಅದು ಅದು ಸ್ಟಾರ್ ಹೋಟೆಲ್ ಆಗಿತ್ತು.
 
ಕಾಂಚಿಪುರಮ್‌ನಿಂದ ಶಿವಪುರಮ್ ಎನ್ನುವ ಮಾದಿಗ ಜನಾಂಗಗಳು ಹೆಚ್ಚಿರುವ ಇಲ್ಲಿಂದ 15 ಕಿ.ಮೀ. ದೂರ ಇರುವ ಸ್ಥಳಕ್ಕೆ ಹೋದೆ. ಅದು ಪೆರಿಯಾರ್ ಚನ್ನಯ್ಯಂಗಳು ಹನ್ನೊಂದನೇ ಶತಮಾನದ ಆದಿಯಲ್ಲಿ ವಾಸಮಡುತ್ತಿದ್ದ ಊರು. ಅಲ್ಲಿಯ  ಮಾದರಕೇರಿಗಳು ಹಾಗೆಯೇ ನರಕದಂತೆ ಹೊಳೆಯುತ್ತಿದ್ದವು. ಬಡತನ ತಾಂಡವವಾಡುತ್ತಿತ್ತು. ಹೋದ ತಕ್ಷಣವೇ ಕುರುಚಲು ಗಡ್ಡಬಿಟ್ಟುಕೊಂಡ ಮುದುಕರು, ಯುವಕರು, ಹರಕು ಸೀರೆಯ ಹೆಣ್ಣುಮಕ್ಕಳು ನನ್ನನ್ನು ಸುತ್ತುವರೆದರು. ನಾನು ಅವರಿಗೆ ಮನದಲ್ಲಿದ್ದ ಭಾವೋದ್ವೇಗವನ್ನು ಒಮ್ಮೆಲೇ ಹೊರಹಾಕಿದೆ. ಯಾಕೆಂದರೆ ನನ್ನ ಹಿಂದಿನ ಜನ್ಮದ ಅಸ್ಮಿತೆಯ ಹುಡುಕಾಟಕ್ಕೆ ಒಂದು ಗತಿ ಕಾಣಿಸಲೇಬೇಕಾಗಿತ್ತು.     
 
‘‘ನಿಮಗೆ ಕರಿಕಾಲಚೋಳಗೊತ್ತಾ?’’ 
 
‘‘ಯಾರವನು? ನಮಗವನು ಗೊತ್ತಿಲ್ಲ’’ ಎಂದರವರು. 
 
ಅಂದರೆ ಅವರು ಆತನನ್ನು ಸಾಮಾನ್ಯ ತಾಲ್ಲೂಕು ಪಂಚಾಯಿತಿ ಮಟ್ಟದ ರಾಜಕೀಯ ನಾಯಕ ಮಾತ್ರ; ಆತ ಜಯಲಲಿತಾ ಕರುಣಾನಿಧಿಯಷ್ಟು ವರ್ಚಸ್ವಿಯಲ್ಲದ ವ್ಯಕ್ತಿ ಎಂದು ತಿಳಿದುಕೊಂಡಂತೆ ಕಾಣುತಿತ್ತು. ‘‘ನಿಮಗೆ ಮಾದರ ಚನ್ನಯ್ಯ ಗೊತ್ತಾ?’’ ಎಂದೆ. ಅವರಿಗೆ ಅವರು ಗೊತ್ತಿರಲಾರದ ವ್ಯಕ್ತಿಯಾಗಿದ್ದ. ನನ್ನನ್ನು ಮೊನ್ನೆ ಮೇಲ್ವರ್ಗದ ನಾಡರ್ ಹುಡಗಿಯನ್ನು ಪ್ರೀತಿಸಿದ್ದಕ್ಕಾಗಿ ಕೊಲೆಯಾಗಿ ಸತ್ತ ತಮ್ಮ ಮಗನ ಸಲುವಾಗಿ ಸಾಂತ್ವನ ಹೇಳಲು ಬಂದವರು ಎಂದು ಕೆಲವರು  ತಿಳಿದುಕೊಂಡಿದ್ದರು. ‘‘ಆತ ಎಂ.ಡ. ಓದಿದ ಹುಡುಗನಾಗಿದ್ದ. ಅವನನ್ನು ಆ ನೀಲಗಿರಿ ಬೆಟ್ಟದಿಂದ ತಳ್ಳಿ ಕೊಂದುಹಾಕಿದ್ದರು’’ ಎಂದು ಹೇಳುತ್ತ ಕಡು ಕಪ್ಪುಬಣ್ಣದ ಆ ಮುದುಕಿ ರೋದಿಸಹತ್ತಿತು. ನನಗೆ ಕರಳು ಕಿತ್ತುಬಂದಂತೆ ಆಯಿತು. ನನ್ನ ಸಂಶೋಧನೆ ಬದಿಗಿಟ್ಟು ಅವರನ್ನು ಸಾಂತ್ವನ ಮಾಡುವುದರಲ್ಲೆ ನನ್ನ ಸಮಯಹೋಯಿತು. ನೀಲಗಿರಿ ಬೆಟ್ಟಗಳ ಕಣಿವೆಗಳು ನಮ್ಮ ದಲಿತ ಮಕ್ಕಳನ್ನು ಬಲಿತೆಗೆದುಕೊಳ್ಳುವ ಬಲಿಪೀಠಗಳಾಗಿವೆ ಎಂದು ಒಬ್ಬ ಹೇಳುತ್ತಿದ್ದ. ವರ್ಷಕ್ಕೆ ಏನಿಲ್ಲವೆಂದರೂ ನಾಲ್ಕು ಜನರು ಅಲ್ಲಿ ಇಂತಹ ಕಾರಣಗಳಿಗಾಗಿ ಸಾಯುತ್ತಾರೆ. ಇವರಿಗೆ ಬುದ್ಧಿ ಇಲ್ಲ. ನಮ್ಮಲ್ಲಿಯೇ ಚಂದದ ಹುಡುಗಿಯರನ್ನು ಬಿಟ್ಟು ಸಾಯಲು ನಾಡರ್ ಗೌಂಡರ್ ಹುಡುಗಿಯರ ಹಿಂದೆ ಬೀಳುತ್ತಾರೆ ಎಂದು ಒಬ್ಬ ಹಿರಿಯ ಹೇಳುತ್ತಿದ್ದ. ಸೂರ್ಯ ಪ್ರಖರವಾಗಿದ್ದನೋ ಅಥವಾ ನನ್ನ ಮನಸ್ಸು ಪ್ರಖರವಾಗಿದೆಯೋ ತಿಳಿಯದಾಗಿತ್ತು. ನಾವು ಮೇಲಿಂದ ಇಷ್ಟೇ ಪಡೆದುಕೊಂಡು ಬಂದಿದ್ದೇವೆ. ಈ ಜನ್ಮದಲ್ಲಿ ನಾವು ಇಂತಹ ಸಹಾಸಕ್ಕೆ ಕೈ ಹಾಕಬಾರದು. ಈ ಜನ್ಮದಲ್ಲಿ ನಾವು ಇದ್ದುದು ಅನುಭೋಗಿಸಿ ಹೋಗಿಬಿಡಬೇಕು ಅಷ್ಟೆ ಎಂದು ದೈನ್ಯತೆಯಿಂದ ಹೇಳಿದ.
 
‘‘ನನ್ನ ಆದೇಶ ಏನಾಯಿತು’’ ಎಂದು ಕೇಳಿದೆ?
 
ಸತ್ತಮಗನಿಗೆ ಏನಾದರೂ ಪರಿಹಾರದ ಆದೇಶದ ಬಗ್ಗೆ ಮಾತಾಡುತ್ತೇನೆ ಅಥವಾ ಕೊಲ್ಲಿಸಿದವರ ಬಗ್ಗೆ ಶಿಕ್ಷಿಸುವ ಆದೇಶ ಹೊರಡಿಸಿದ್ದೇನೆ ಎಂದು ತಿಳಿದ ಅವರು ‘‘ಇಲ್ಲ, ಯಾವ ಆದೇಶವೂ ತಲುಪಿಲ್ಲ’’ ಎಂದರು. ‘‘ಕೊಲೆಗಡುಕರು ರಾಜಾರೋಷವಾಗಿ ಅಡ್ಡಾಡುತ್ತಿದ್ದಾರೆ. ನೀವು ನಮಗೆ ನ್ಯಾಯ ಒದಗಿಸಿಕೊಡಿ’’ ಎಂದರು.
11ನೇ ಶತಮಾನದ ಅಂತ್ಯಭಾಗದಲ್ಲಿ ತಯಾರಾದ ನನ್ನ ಪ್ರಖರ ಆದೇಶ ಇನ್ನೂ ದಲಿತರ ಕೇರಿಗಳಿಗೆ ತಲುಪಿರಲಿಲ್ಲ.
 
ಮಾದರ ಚನ್ನ ನಿನ್ನ ಹಾಗೆಯೇ ನಿನ್ನ ಜನಾಂಗಗಳು ಪ್ರಕಟವಾಗದೆ ಗುಪ್ತವಾಗೇ ಉಳಿದವಲ್ಲ. ನಾನು ಪಾಪಿ, ನಾನು ಪಾಪಿ. ಒಂದು ಯುದ್ಧದ ಅವಸರದಿಂದ ಒಂದು ಜನಾಂಗದ ಕುಲವನ್ನೇ ಎಂಟುನೂರು ವರ್ಷಗಳ ಕಾಲ ಹೀಗೆ ಭಯಾನಕ ಕೂಪಕ್ಕೆ ತಳ್ಳಿದೆನಲ್ಲ? ಎಂದು ಕೆಂಪು ಓಕಳಿಯ ಗಿಡದ ಬುಡಕ್ಕೆ ಹೋಗಿ ಕಣ್ಣೀರು ಹಾಕಿದೆ. ದುಃಖತಪ್ತನಾಗಿದ್ದ ನನ್ನನ್ನು ನೋಡಿ ಅಲ್ಲಿಯ ಜನರು ಈ ಅಧಿಕಾರಿ ನಮ್ಮವ ನಮ್ಮವ ಎಂದು ತಿಳಿದು ಇನ್ನೂ ಮೈ ಚಳಿಬಿಟ್ಟು ಎಲ್ಲವನ್ನೂ ಹೇಳಹತ್ತಿದರು. ರಾತ್ರಿಯಾಗಿ ಬಹುಸಮಯವಾಗಿತ್ತು. ಅವರ ಕಷ್ಟ ಕಾರ್ಪಣ್ಯಗಳ ವಿಷಯಗಳು ಇನ್ನೂ ಆರಂಭವಾಗಿಲ್ಲ ಎನ್ನುವಷ್ಟು ಹೇಳಹತ್ತಿದ್ದರು. ಅವು ಸಹಸ್ರಾರು ವರುಷದ ಕಷ್ಟ ಕಾರ್ಪಣ್ಯಗಳು. ಒಂದು ರಾತ್ರಿ ಮುಗಿಯುವಂತಹವಲ್ಲ. ಅಂತೆಯೇ ಅವರು ಹೇಳಲು ಆರಂಭ ಮಾಡಿದೊಡನೆಯೇ ಸೂರ್ಯ ನಾಗಾಲೋಟದಿಂದ ಮುಗಿಲಿನ ಪೂರ್ವಬಾನಾಡಿಯಲ್ಲಿ ಪ್ರತ್ಯಕ್ಷನಾಗಿದ್ದ.
 
3
ಮತ್ತೆ ಮಧ್ಯರಾತ್ರಿ ಕಾಂಚೀಪುರಮ್ ಎಂಬ ಊರಿಗೆ ಕಾಲಿಟ್ಟೊಡನೆಯೇ ನನಗೆ ನೆನಪಾದದ್ದು, ನನ್ನ ಮನಸ್ಸಿನಲ್ಲಿ ಉದ್ಭವಿಸಿದ್ದು ರಣಭೂಮಿಯಲ್ಲ – ಭೂಕೈಲಾಸ. ಈ ರಣಭೂಮಿಗೆ ಪರ್ಯಾಯವಾಗಿ ಅಲ್ಲಿ ನಾನು ಕೈಲಾಸಕಟ್ಟಲು ನೋಡಿದೆನಲ್ಲ. ಶಿವ ಬರುವುದು, ಮೃಷ್ಟಾನ್ನ ಸೇವಿಸುವುದು, ನಿತ್ಯ ಕರ್ಮವಾಗಿತ್ತು. ಆತ ಯಾವ ಶಿವನು ಎನ್ನುವುದು ನನ್ನ ವಿವೇಚನೆಗೆ ನಿಲುಕದ ವಿಷಯ. ಶಿವನೇ ಅವನೋ ಅಥವಾ ಶಿವನ ರೂಪದಲ್ಲಿ ಇರುವ ಜಂಗಮನೋ? ಅದೇ ಸಮಯದಲ್ಲಿ ನನ್ನ ಕುದುರೆ ಲಾಳದಲ್ಲಿ ಕೆಲಸಮಾಡುತ್ತಿದ್ದ ಚನ್ನನೆಂಬ ಸಾಮಾನ್ಯ ಮನುಷ್ಯ ಶಿವನಿಗೆ ದಿನವೂ ಅಂಬಲಿ ಕುಡಿಸುತ್ತಿದ್ದ. ನನ್ನ ಹೋಳಿಗೆ ಮತ್ತು ಅಮೃತಕ್ಕೆ ಸಮಾನವಾದ ಪಾಯಸ, ಸಂಡಿಗೆ, ಮೃಷ್ಟಾನ್ನಗಳಿಗೆ ಪರ್ಯಾಯವಾಗಿ ಆತ ಕೊಡುವ ಅಂಬಲಿಯನ್ನೇ ಶ್ರೇಷ್ಟವೆಂದು ಸವಿದು ಶಿವ ಆತನಿಗಿಂತಲೂ ನೀನು ಉತ್ತಮನಲ್ಲ ಎಂಬ ಸಂದೇಶ ನನಗೆ ರವಾನಿಸಿದ್ದ. ಆಗಲೇ ನನ್ನ ಗರ್ವ ತಣ್ಣಗಾಗಿದ್ದು. ಅಂದಿನಿಂದ ಮಾದಾರಚನ್ನಯ್ಯ ನನ್ನ ಅಯ್ಯನಾದ, ನನ್ನ ತಂದೆಯಾದ, ನನ್ನ ಬಂಧುವಾದ.ಆಗಲೇ ನನ್ನ ಮನ ಉದ್ಘೋಷಿಸಿದ್ದು – ತಂದೆ ಮಾದರ ಚನ್ನಯ್ಯಂಗಳೇ ನಿಮ್ಮ ಕೆರವಿಗೆ ನನ್ನ ಶಿರ ಸರಿ. ಹೌದು, ನೀನು ಶಿವನಿಗೆ ಹತ್ತಿರವಾದವನು, ಶಿವನು ನಿನಗೆ ಹತ್ತಿರವಾದವನು, ತಾನು ದಿನಾಲೂ ಶಿವನಿಗೆ ಊಟಮಾಡಿಸುವವ. ತಾನು ಸರ್ವಶ್ರೇಷ್ಟ ಎನ್ನುವಾಗಲೇ ಶಿವನು ಪೆರಿಯಾರ ಮಾದಾರ ಚನ್ನಯ್ಯಂಗಳ, ಜೋಳದ ಅಂಬಲಿ ಕುಡಿದು ನನ್ನ ಗರ್ವಭಂಗ ಮಾಡಿದ್ದ. 
 
ರಾಜಾಜ್ಞೆ ಅಂದೇ ಹೊರಬಿದ್ದಿತ್ತು. ‘‘ಕುಲತಿಲಕ ಮಾದಾರ ಚನ್ನಯ್ಯಗಳ ಕುಲ ಬ್ರಾಹ್ಮಣರಿಗಿಂತಲೂ ಮಿಗಿಲಾದದ್ದು ಕುಲಾತೀತವಾದುದ್ದು, ಕುಲತಿಲಕದಂತೆ ಇರುವಂತಹದು, ಅಂತಹ ಕುಲಗಳನ್ನು ಇಲ್ಲಿಯವರೆಗೆ ಅವಮಾನಿಸಿ ಚಾತುರ್ವರ್ಣದಾಚೆ  ನೂಕಿದ್ದಕ್ಕಾಗಿ ಮತ್ತು ಅಂತಹ ಚಾತುರ್ವರ್ಣವನ್ನು ನಮ್ಮಂತಹ ರಾಜರು ರಕ್ಷಿಸಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. ಶಿವನೊಲಿದ ಜಾತಿಗಿಂತಲೂ ಮಿಗಿಲಾದುದ್ದು ಯಾವುದಿದೆ? ಇಂದಿನಿಂದ ಎಲ್ಲ ನೂರ ಹದಿನೈದು ಅಸ್ಪೃಶ್ಯಕುಲಗಳು ಪೂಜನೀಯ ಮತ್ತು ಪೂಜಿಸುವ ಕುಲಗಳಾಗಲಿ. ಇಂದಿನಿಂದ ಉಚ್ಛ ಜಾತಿಗಳಾಗಿ ಹೋಗಲಿ. ನಾನು ಹೇಳುತ್ತೇನೆ – ಮಾದರು ಹೊಲೆಯರು ಡಕ್ಕರು ಡೋಹರು ಕುಲ ನೂರ ಹದಿನೈದು ಅಸ್ಪೃಶ್ಯ ಜನಾಂಗಗಳಿಗೆ ನನ್ನ ರಾಜಭವನ, ದೇವಸ್ಥಾನ, ಭೋಜನಗೃಹ ಮತ್ತು ನಾನು ನಡೆದಾಡುವ ಎಲ್ಲ ಕಡೆಯೂ ಪ್ರವೇಶ ದೊರಕಲಿ. ಅವರ ಜೊತೆ ವೈವಾಹಿಕ, ರಕ್ತಸಂಬಂಧಗಳು ಕಡ್ಡಾಯವಾಗಲಿ. ಅವರು ನನ್ನ ಬಂಧುಗಳು, ನಿಮ್ಮ ಬಂಧುಗಳು ಕೂಡ’’ ಎಂದು ನಾನು ರಾಜಾಜ್ಞೆ ಹೊರಡಿಸಿದ್ದೆ. ನನಗೆ ಎಲ್ಲವೂ ನೆನಪಾದವು. ವರ್ತಮಾನವು ಹಿಂಸೆಯ ಖಡ್ಗದಿಂದ ಝಳಪಿಸುತ್ತದೆ ಎನ್ನಿಸಿತು. ನನ್ನ ಕನಸು ಮಾತ್ರ ಅಲ್ಲ, ನನ್ಮ ಆಶಯವೂ ಅದೇ ಆಗಿತ್ತು. ಆಶಯವಷ್ಟೇ ಅಲ್ಲ, ನನ್ನ ಆದೇಶವೂ ಅದೇ ಆಗಿತ್ತು. ಸಾವಿರ ಶಾಸನಗಳು, 100 ವೀರಗಲ್ಲುಗಳು, 50 ಬರಹಗಳು, ಸಾವಿರಾರು ತಾಳೆಗರಿಗಳ ಮೇಲೆ ಶಾಸನ–ಪ್ರಶಾಸನ ಹೊರಟಿದ್ದವಲ್ಲ? 
 
ಆದೇಶ ಹೊರಡಿಸಿ ತಕ್ಷಣವೇ ನಾನು ಹೋದದ್ದು ಯುದ್ಧಭೂಮಿಗೆ. ನನಗೂ ಪಾಂಡ್ಯರಿಗೂ ಯುದ್ಧನೆಡೆದು ತಲೆಗೆ ಪೆಟ್ಟುಬಿದ್ದು ನಾನು ಸ್ಮೃತಿಯನ್ನೇ ಕಳೆದುಕೊಂಡೆ. ಮುಂದೆ ನನ್ನ ಆದೇಶವೇನಾಯಿತೋ? ಮಾದರಚನ್ನನ ಬಂಧುಗಳನ್ನು ನನ್ನ ಯುದ್ಧದಾಹವೇ  ನಡುನೀರಿನಲ್ಲಿ ಬಿಡುವಂತೆ ಮಾಡಿತೋ ತಿಳಿಯದಾಯಿತು.
 
ನಿನ್ನೆ ಊರಿನಿಂದ ನಿರ್ಮಲಾ ಪೋನು ಮಾಡಿದ್ದಾಳೆ. ಅವಳಿಗೆ ನನ್ನ ಜನ್ಮಾಂತರದ ವಿಷಯವೇ ಮೋಜಿನದಾಗಿದೆ. ‘‘ಅಲ್ಲೇ ಇದ್ದು ಬಿಡು ಮಾರಾಯ, ರಾಜ್ಯಭಾರ ಮಾಡುತ್ತ. ನಿನಗೆ ಹುಚ್ಚು ಹಿಡಿದಿದೆ. ಪುಸ್ತಕ ಓದಿ ಓದಿ ತಲೆಕೆಟ್ಟು ಈ ರೀತಿಯಾಗಿದೆ’’ ಎಂದರೂ, ‘‘ಬೇಗ ಬಂದು ಬಿಡು ಮರಿ, ಏನಿದೆಯೋ ಎಲ್ಲವನ್ನು  ಅಲ್ಲಿಯೇ ಮುಗಿಸಿ ಬಾ. ಇನ್ನು ಮುಂದೆ ಇಲ್ಲಿ ಬಂದು ನಾನು ಕರಿಕಾಳ ಚೋಳನೆಂದು ಬಿಳಿಕಾಲಚೋಳನೆಂಬ ರಾಗಹಾಡುತ್ತ ಕೂಡಬೇಡ’’ ಎಂದಿದ್ದಳು.
 
ಅಂದು ಮುಂಜಾನೆ ಹೋಟೆಲ್ ಚೋಳದಲ್ಲಿ ತಂಗಿದ್ದ ನನಗೆ ಒಮ್ಮಿಂದೊಮ್ಮೆಲೆ ವಿಚಿತ್ರವಾದ ಅನುಭವವಾಗಹತ್ತಿತು. ಕಾಲುಗಳು ಮರ್ಮರವಾದಂತೆ, ತಲೆಭಾರವಾದಂತೆ, ಕಂಗಳು ತಿರುಗಿದಂತೆ, ನಡೆದಾಡಲು ಆಗದಂತಹ ಅಸಹನೀಯ ಭಾರ ದೇಹವನ್ನು ವ್ಯಾಪಿಸಿತ್ತು. ನಾನು ಕೆಳಗಿಳಿದು ಹೋಗಲೂ ಆಗದಂತಹ ಸ್ಥಿತಿ. ಕಂಚಿಯ ಇಂದಿನ ಬೀದಿಗಳು ನನ್ನದಲ್ಲ, ನಾನು ಯಾಕೆ ಇಲ್ಲಿ ಉಳಿದೆ ಎಂಬ ಜಿಜ್ಞಾಸೆ ನನ್ನ ಕಾಡುತ್ತಿತ್ತು. ಆ ನನ್ನ ಪೂರ್ವಜನ್ಮದ ನನ್ನಪ್ಪ ಚನ್ನನ ಬಂಧುಗಳು ಶಿವಂಪುರ ಎನ್ನುವ ಆ ಊರಿನಲ್ಲಿ ನನಗಾಗಿ ಕಾಯುತ್ತಾ ಕುಳಿತಿದ್ದಾರೆ. ಅವರಿಗೆ ಮತ್ತೆ ನಾಳೆ ಬರುವೆನೆಂಬ ಆಶ್ವಾಸನೆಯನ್ನು ಕೊಟ್ಟು ಬಂದಿದ್ದೇನೆ. ನನ್ನನ್ನು ತಮ್ಮ ಬಂಧುವೋ ಅಥವಾ ತಮ್ಮ ಕುಲದ ಜಿಲ್ಲಾಧಿಕಾರಿಯೋ ಎಂದು ತಿಳಿದಿರುವ ಅವರಿಗೆ ಯಾವ ನ್ಯಾಯಕೊಡಲಿ ಎನ್ನಿಸಿತು. ಮಾತುಗಳು–ಆಶ್ವಾಸನೆಗಳು ಅವರನ್ನು ಇನ್ನೂ ಯಾವ ಮರಳುಗಾಡಿಗೆ ಹೊಯ್ಯುತ್ತವೆ ಎಂದು ಮನಸ್ಸು ಘಾಸಿಗೊಳಗಾಯಿತು. ಈಗಿನ ಪ್ರಸ್ತುತ ಸನ್ನಿವೇಶಗಳಂತೆಯೇ ನಾನು ಇನ್ನೂ ಅವರನ್ನ ಭೀಕರ ಪ್ರಪಾತಕ್ಕೆ ನೂಕುತ್ತೇನೆ ಎಂದುಕೊಂಡೆ. 
 
ರಾಜಾಜ್ಞೆಯ ನಂತರದ ಕಾಲಘಟ್ಟಗಳು ಏನಾಯ್ತು? ನಾನು ಚೇರರ ಪಲ್ಲವರ ಸೆರೆಯಾಳಾದೆನೋ ಅಥವಾ ಸತ್ತುಹೋದೆನೋ? ಎಲ್ಲವೂ ಅಯೋಮಯ.
ಮತ್ತೆ ಶಿವಪುರವೆಂಬ ನತದೃಷ್ಟ ಊರಿಗೆ ಭೇಟಿಕೊಟ್ಟೆ. ನನ್ನ ಡಸ್ಟರ್ ಕಾರಿನಲ್ಲಿ ತುಂಬಿಕೊಂಡುಬಂದಿದ್ದ ಬಾಳೆಹಣ್ಣು, ಸೇಬುಹಣ್ಣು, ಮಾವಿನಹಣ್ಣುಗಳನ್ನು ಅವರಿಗೆ ಹಂಚಿದೆ. ಮೂಲೆಯಲ್ಲಿ ಹಣೆಗೆ ಭಸಿತ ಹಚ್ಚಿಕೊಂಡು ಕುಳಿತಿದ್ದ ಮುದುಕನೊಬ್ಬ, ಸಾಕ್ಷಾತ್ ಪೆರಿಯಾರ್ ಚನ್ನಯ್ಯನಂತೆ ನನಗೆ ಕಂಡ. ಆತನಿಗೆ ಪಾದಮುಟ್ಟಿ ನಮಸ್ಕರಿಸಿದೆ. ಆತನ ಮುಖವೆಲ್ಲವೂ ಆ ನನ್ನ ತಂದೆ ಶರಣನ ಮುಖದಂತೆ ನನಗೆ ಗೋಚರಿಸಿತು. ನಾನು ಹೊರಡಿಸಿದ ರಾಜಾಜ್ಞೆ ನೀರಿನಲ್ಲಿ ಹೋಯಿತು ಎಂದು ಗುನುಗಿಕೊಂಡೆ. ಆ ಮುದುಕ, ‘‘ಹೌದು, ಇದು ನೀರಿಲ್ಲದ ಊರು’’ ಎಂದ. ಆತನಿಗೆ ನನ್ನ ಅಸಂಗತ ಶಬ್ದಗಳು ಅರ್ಥವಾಗಲಿಲ್ಲ ಅನ್ನಿಸುತ್ತದೆ. ಆತ ಜಾತಿಯ ವಿರುದ್ಧದ ಹೋರಾಟದಲ್ಲಿ ಪೆರಿಯಾರ್ ರಾಮಸ್ವಾಮಿ ಅವರ ಸಂಗಡ ಭಾಗವಹಿಸದವನಾಗಿದ್ದ ಎಂದು ಎಲ್ಲರೂ ಹೇಳಿದರು. ಆತ ಅದರ ಬಗ್ಗೆ ಹೆಚ್ಚೇನೂ ಮಾತಾಡಲಿಲ್ಲ. ಅದೇ ಊರಿನಲ್ಲಿ ಒಬ್ಬ ಕಲೆಯಲ್ಲಿ ಮಾಸ್ಟರ್ ಡಿಗ್ರಿ ಪಡೆದ ಮಾದಿಗ ಜನಾಂಗದ ವಿದ್ಯಾರ್ಥಿಯೊಬ್ಬ, ನಿನ್ನೆದಿನ ನಾನು ಬಂದಿದ್ದು ತಿಳಿದುಕೊಂಡಿದ್ದ. ಅವನು ನನ್ನ ಜೊತೆ ಮಾತಾಡಲು ಕಾಯುತ್ತಿದ್ದ. ಅವನೇ ಮರುದಿನ ಮಧುರೈನ ವಿಶ್ವವಿದ್ಯಾಲಯದಲ್ಲಿ ತಮಿಳು ಪಾಠಮಾಡುವ ತನ್ನ ಪ್ರೋಫೆಸರ್ ಹತ್ತಿರ ಕರೆದುಕೊಂಡುಹೋದ. ಪ್ರೊಫೆಸರ್ ಗುಡಿಮಾರ ಎಂದು ಅವರ ಹೆಸರು. ಪ್ರೊಫೆಸರ್ ಅವರು ಕರಿಕಾಲಚೋಳ ಮತ್ತು ಮಾದಾರಚನ್ನಯ್ಯ ಅವರ ಸಂಶೋಧನೆಗೆ ತಮ್ಮ ಜೀವನವನ್ನೇ ಮೀಸಲಾಗಿಟ್ಟಿದ್ದರು. ಅವರು ನಾನು ಕರಿಕಾಲಚೋಳನ ಅವತಾರ ಎಂದಾಗ ಆಶ್ಚರ್ಯಪಟ್ಟರು. ನಾನು ಖಚಿತವಾಗಿ, ನಿಸ್ಸಂದೇಹವಾಗಿ ಕರಿಕಾಲ ಚೋಳ  ಎಂದು ಅವರಿಗೆ ಹೇಳಿದೆ. ನಾನೇ ಕರಿಕಾಲಚೋಳನಾಗಿದ್ದೆ ಎನ್ನುವುದಕ್ಕೆ ಸಾಕ್ಷಿಗಳನ್ನು, ಘಟನೆಗಳನ್ನು ಹೇಳಿದೆ. ಅವರು ‘‘ಇರಲಿಕ್ಕಿಲ್ಲ ನೋಡಿ’’ ಎಂದರು. ನನಗೆ ಆಶ್ಚರ್ಯವಾಯಿತು. ‘‘ಯಾಕೆ ಪ್ರೊಫೆಸರ್’’ ಎಂದೆ. ‘‘ಕರಿಕಾಲ ಮತ್ತೆ ಹುಟ್ಟಿಬರುವಾಗ ಈ ಜಗದಲ್ಲಿ ಜಾತಿಯಿರುವುದಿಲ್ಲ ಎಂದು ಶಿವದೇಸಿಕರು ಕಾಲಜ್ಞಾನ ಬರೆದಿದ್ದಾರೆ’’ ಅಂದರು.  
 
ನನ್ನ ಮನ ಕ್ಷಣ ಹೌದೆನ್ನಿಸಿತು. ಕ್ಷಣ ಇಲ್ಲ ಎನ್ನಿಸಿತು. ಕ್ಷಣ ಯಾವುದನ್ನೂ ಯೋಚಿಸದೆ ವಿಭ್ರಮೆಗೆ ಒಳಗಾದಂತಾಯಿತು. ಚನ್ನನ ಈಗಿನ ಸಂತತಿಯನ್ನು ಮುಖ್ಯವಾಹಿನಿಗೆ ತರುವುದು ಹೇಗೆ ಎನ್ನುವ ಪ್ರಶ್ನೆ ಉಂಟಾಯಿತು. ನಿರ್ಮಲಾ ಹೇಳಿದಂತೆ ನಾನು ಕರಿಕಾಲನೇ ಆಗಿರಲಿ, ಬಿಳಿಕಾಲನೇ ಆಗಿರಲಿ – ನೀಲಗಿರಿಯ ಬಲಿಪೀಠದಿಂದ ಬಂಧುಗಳನ್ನು ಪಾರು ಮಾಡುವುದು ಹೇಗೆ ಎಂದು ಚಿಂತಿಸಹತ್ತಿತು. ಮತ್ತೆ ಹೊಸ ಕರಿಕಾಲನ ವೇಷ ತೊಟ್ಟುಕೊಳ್ಳಲು ಮನ ಸಜ್ಜಾಯಿತು. ಯಾಕೋ ಗುಡಿಮಾರ ಅವರನ್ನು ಬಿಟ್ಟು ಬೋಧಿವೃಕ್ಷದ ಕೆಳಗೆ ಬಂದು ಕುಳಿತೆ.
 
(ನಿಮ್ಮ ಕೆರವಿಂಗೆ ಯನ್ನ  ಶಿರ ಸರಿಯೆ = ನಿಮ್ಮ ಪಾದರಕ್ಷೆಗೆ ನನ್ನ ಶಿರ ಸಮಾನವಾದುದ್ದು. ಇದು ಹರಿಹರನ ರಗಳೆಯ ಒಂದು ಸಾಲು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT