ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರೆಗಣ್ಣು

Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಗುಲಬರ್ಗಾ ವಿ.ವಿ ಕುಲಸಚಿವ ಯಾರು?
ಕಲಬುರ್ಗಿ:
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ನೀಡಲು ವಿಶ್ವವಿದ್ಯಾಲಯದ ಕ್ಯಾಂಪಸ್‌ನ ವಿದ್ಯಾರ್ಥಿಗಳೇ ಗೊಂದಲಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ!

ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ರಾಜ್ಯೋತ್ಸವ ಸಮಾರಂಭ ನಡೆಯಿತು. ‘ಈಗ ಕುಲಸಚಿವರು ಯಾರಿದ್ದಾರೆ?’ ಎಂದು ಸಾರ್ವಜನಿಕರೊಬ್ಬರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ‘ಪ್ರೊ. ಎಸ್‌.ಸಿ.ಹಲ್ಸೆ ಕುಲಸಚಿವರಾಗಿದ್ದಾರೆ’ ಎಂದು ಉತ್ತರ ಬಂತು. ಆದರೂ ಸಂಶಯಗೊಂಡ ಎಲ್ಲರೂ, ಹೊರಗೆ ನೇತುಹಾಕಿದ್ದ ಫ್ಲೆಕ್ಸ್‌ನತ್ತ ದೃಷ್ಟಿ ಹರಿಸಿ ಆಶ್ಚರ್ಯಪಟ್ಟರು. ಕುಲಸಚಿವ ಪ್ರೊ. ದಯಾನಂದ ಅಗಸರ ಎಂದು ಫ್ಲೆಕ್ಸ್‌ನಲ್ಲಿ ಬರೆದಿತ್ತು.

2013ರಿಂದ ವಿಶ್ವವಿದ್ಯಾಲಯದ ಕುಲಸಚಿವರ ಹುದ್ದೆ ‘ಮ್ಯಾಜಿಕ್‌ ಚೇರ್‌’ ಆಗಿರುವುದು ವಿದ್ಯಾರ್ಥಿಗಳ ಈ ಗೊಂದಲದ ಉತ್ತರಕ್ಕೆ ಕಾರಣ. ಈ ಮೂರು ವರ್ಷಗಳ ಅವಧಿಯಲ್ಲಿ ಏಳು ಬಾರಿ ಕುಲಸಚಿವರು ಬದಲಾಗಿದ್ದಾರೆ.

ಕಳೆದ ನ. 23ರಂದು ಪ್ರೊ. ಎಸ್‌.ಸಿ.ಹಲಸೆ ಕುಲಸಚಿವರಾಗಿ ಹುದ್ದೆ ವಹಿಸಿಕೊಂಡ ಒಂದೇ ವಾರದಲ್ಲಿ, ಅಧಿಕಾರ ಹಸ್ತಾಂತರಿಸಿದ್ದ ಪ್ರೊ. ದಯಾನಂದ ಅಗಸರ ಮತ್ತೆ ಹುದ್ದೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

2016ರ ಜೂನ್‌ನಿಂದ ದಯಾನಂದ ಅಗಸರ ಕುಲಸಚಿವರಾಗಿದ್ದರು. ಇದಕ್ಕೂ ಮೊದಲು ಇದೇ ವಿಶ್ವವಿದ್ಯಾಲಯದಲ್ಲೇ ಮೌಲ್ಯಮಾಪನ ಕುಲಸಚಿವರಾಗಿದ್ದ ಹಲಸೆ 23ರಂದು ನೂತನ ಕುಲಸಚಿವ ಆದೇಶ ಪಡೆದು ಜವಾಬ್ದಾರಿ ವಹಿಸಿಕೊಂಡಿದ್ದರು. ಒಂದೇ ವಾರದಲ್ಲಿ ಮತ್ತೆ ಸ್ಥಾನ ಖಾಲಿ ಮಾಡಿದ್ದಾರೆ.  ಒಟ್ಟಾರೆ ವಿಶ್ವವಿದ್ಯಾಲಯದ ಕುಲಸಚಿವರ ಕುರ್ಚಿ ‘ಲಾಬಿ’ಗೆ ಕೊನೆಯಿಲ್ಲ ಎನ್ನುವಂತಾಗಿದೆ. 
-ನಾಗರಾಜ ಚಿನಗುಂಡಿ, ಮಲ್ಲೇಶ

***
ನೀರೋ, ಬಿಯರೋ...

ಯಾದಗಿರಿ: ಕೆರೆಗೆ ನೀರುಣಿಸುವ ಹೋರಾಟ ರಥಯಾತ್ರೆಗೆ ಚಾಲನೆ ನೀಡುವ ಸಂದರ್ಭಕ್ಕಾಗಿ ಯಾದಗಿರಿಯ ಅಚೋಲಾ ಗ್ರಾಮ ವೈಭವದಿಂದ ಸಿಂಗರಿಸಿಕೊಂಡಿತ್ತು.ರಸ್ತೆಯಲ್ಲಿನ ಎಲ್ಲಾ ಉಬ್ಬು–ತಗ್ಗುಗಳನ್ನು ದಾಟಿ ಪತ್ರಕರ್ತರ ವಾಹನ ಗ್ರಾಮ ತಲುಪಿದಾಗ ತಮಟೆ ಸದ್ದು ಜೋರಾಯಿತು. ಅತ್ತ ಕಡೆಯಿಂದ ‘ಲೇ ತಡಿರೋ ಇನ್ನೂ ಗುರುಗಳ ಕಾರ್ ಬಂದಿಲ್ಲ’ ಎಂಬ ದನಿ ಕೇಳಿಬಂತು. ತಮಟೆ ಸದ್ದು ಸ್ತಬ್ಧವಾಯಿತು.

ಬಿಸಿಲು ನೆತ್ತಿಗೇರುವ ಹೊತ್ತಿಗೆ ಗುರುಗಳ ಕಾರ್‌ ಬಂತು. ಗುರುಮಠಕಲ್‌ನ ಖಾಸಾಮಠದ ಶ್ರೀಗಳು, ಅರಕೇರಾ ಮಠದ ಶ್ರೀಗಳು ಕಾರಿನಿಂದ ಇಳಿಯುತ್ತಿದ್ದಂತೆ ಇಡೀ ಗ್ರಾಮವೇ ಗುರುಗಳ ಪಾದವನ್ನು ಹಣೆಗೆ ತಾಗಿಸಿ ಧನ್ಯತಾಭಾವ ಅನುಭವಿಸಿತು. ರಾಜಕೀಯ ಮುಖಂಡರ ಭಾಷಣದಲ್ಲಿ ಮುಂದಿನ ಚುನಾವಣಾ ಭವಿಷ್ಯ ಧ್ವನಿಸಿತು. ನಂತರ ಅರಕೇರಾ ಮಠದ ಶ್ರೀಗಳು ಭಾಷಣಕ್ಕೆ ನಿಂತರು.

ಥೇಟ್ ನಾಟಕದ ಶೈಲಿಯಲ್ಲಿ,‘ನಿಮಗ ಗೊತ್ತದಲ್ಲ... ನೀರು ಎಷ್ಟು ಮಹತ್ವದ್ದು ಅಂದ್ರೆ ಬಿಯರು ತಯಾರಿಸ್ಲಿಕ್ಕೂ ನೀರು ಬೇಕಾಗ್ತದ. ಅದಕ್ಕ ಹೇಳೋದು ಒಂದೊಂದು ಹನಿ ನೀರೂ ನಮಗ ಮುಖ್ಯ’ ಎಂದಾಗ ಆ ಗದ್ದಲದಲ್ಲಿ ಗುರುಗಳು ಹೇಳಿದ್ದು ‘ನೀರೋ, ಬಿಯರೋ’ ಎಂದು ಜನ ಗೊಂದಲಕ್ಕೆ ಸಿಲುಕಿದರು! 
-ಮಲ್ಲೇಶ್ ನಾಯಕನಹಟ್ಟಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT